ಏಕತ್ವವಾದ+(ಮಾನಿಸಂ): ಪಾಶ್ಚಾತ್ಯ ಮತ್ತು ಪೌರಸ್ತ್ಯ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಮುಖ್ಯವಾದ ಮತ್ತು ಪ್ರಬಲವಾದ ಒಂದು ತತ್ತ್ವ ಪಂಥ, (ಮಾನಿಸಂ). ಸತ್ ಒಂದೇ ಎಂಬುದು ಈ ವಾದದ ತಿರುಳು. ಸತ್ ಒಂದಲ್ಲ ಎರಡು ಎಂಬ ದ್ವೈತವಾದಕ್ಕೂ ಅನೇಕ ಎಂಬ ಬಹುತ್ವವಾದಕ್ಕೂ ಪ್ರತಿಯಾದದ್ದು ಈ ಏಕತ್ವವಾದ.

ವಿಧಗಳು

ಬದಲಾಯಿಸಿ

ಇದು ಎರಡು ಬಗೆಯಾಗಿದೆ. ಸತ್ ಭೌತಸ್ವರೂಪ ಉಳ್ಳದ್ದು ಎಂಬುದು ಒಂದು ಬಗೆಯದು. ಅದು ಚೇತನ ಸ್ವರೂಪವಾದದ್ದು ಎಂಬುದು ಎರಡನೆಯ ಬಗೆಯದು. ಸತ್ ಜೀವಸ್ವರೂಪ ಉಳ್ಳದ್ದು ಎಂಬ ವಾದವನ್ನು ಎರಡನೆಯದರಲ್ಲೇ ಸೇರಿಸುವುದುಂಟು. ಭೌತಏಕತ್ವವಾದವಾಗಲಿ, ಚೈತನ್ಯಏಕತ್ವವಾದವಾಗಲಿ ಕೆಲವು ಒಳ ಭೇದಗಳನ್ನು ಪಡೆದೇ ಇರುತ್ತದೆ. ಏಕತ್ವವಾದಕ್ಕೆ ಬಹುಮುಖಗಳಿವೆ. ಕೆಲವರು ಈ ಒಂದಾದ ಸತ್ ಭಿನ್ನತೆ ಇಲ್ಲದ್ದು ಬೆಳೆವಣಿಗೆ ಇಲ್ಲದ್ದು ಎಂದು ವಾದಿಸುತ್ತಾರೆ. ಮತ್ತೆ ಕೆಲವರು ಅದು ಭೇದಸಹಿತವಾದ್ದು, ಬೆಳೆವಣಿಗೆಯುಳ್ಳದ್ದು ಎಂದು ವಾದಿಸುತ್ತಾರೆ. ಇನ್ನೂ ಕೆಲವರು ಸತ್ ರೂಪರಹಿತ, ಭೇದರಹಿತ ಒಂದೆಂದೂ ಪ್ರಪಂಚದಲ್ಲಿ ಕಾಣುವ ಎಲ್ಲ ಭೇದಗಳೂ ಬದಲಾವಣೆಗಳೂ ಮಿಥ್ಯಾ ರೂಪವಾದುವೆಂದೂ ವಾದಿಸುತ್ತಾರೆ.

ಪೌರಸ್ತ್ಯ ತತ್ವಶಾಸ್ತ್ರದಲ್ಲಿ

ಬದಲಾಯಿಸಿ
 
Adi Shankara with Disciples, by Raja Ravi Varma (1904)

ಪೌರಸ್ತ್ಯ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಏಕತ್ವವಾದ ಬಹಳ ಹಿಂದೆ ಋಗ್ವೇದ ಕಾಲದಲ್ಲೇ ಕಂಡುಬರುತ್ತದೆ. ಈ ವಾದ ಉಪನಿಷತ್ತುಗಳಲ್ಲಿ ವಿಸ್ತಾರವಾಗಿ, ಹಲವು ವಿಧವಾಗಿ ಪ್ರಕಟವಾಗಿದೆ. ಬುದ್ಧ ಅದ್ವಯವಾದಿ ಎಂದು ಅಮರದಲ್ಲಿ ಹೇಳಿದೆ. ಬೌದ್ಧ ತತ್ತ್ವದ ಒಂದು ಮುಖ್ಯ ಬೆಳೆವಣಿಗೆಯಾದ ಮಾಧ್ಯಮಿಕ ದರ್ಶನ ಅದ್ವೈತ ಪರವಾದದ್ದೆಂದು ಹೇಳಲು ಪ್ರಬಲ ಕಾರಣಗಳಿವೆ. ಬ್ರಹ್ಮಸೂತ್ರದಲ್ಲಿ ಹಲವು ಬಗೆಯ ಏಕತ್ವವಾದಗಳ ವಿವರಣೆ ಇದೆ. ಗೌಡಪಾದನ ಮಾಂಡೂಕ್ಯಕಾರಿಕೆ ನಿಸ್ಸಂದೇಹವಾಗಿ ಏಕತ್ವವಾದವನ್ನು ಘೋಷಿಸುತ್ತದೆ. ಶಂಕರಾಚಾರ್ಯರ ಅದ್ವೈತವಾದವಂತೂ ಪ್ರಖ್ಯಾತವಾದದ್ದು. ಅದು ಇಂದಿನವರೆಗೂ ಭಾರತದಲ್ಲೂ ಪಾಶ್ಚಾತ್ಯ ದೇಶಗಳಲ್ಲೂ ವಿರಾಜಿಸುತ್ತಿದೆ. ಭೌತ ಏಕತ್ವವಾದ ಭಾರತದಲ್ಲಿ ಅಷ್ಟು ಪ್ರಬಲವಾದ ವಾದವೆಂದು ಹೇಳಲಾಗುವುದಿಲ್ಲ. ಆ ವಾದ ಪಾಶ್ಚಾತ್ಯ ದೇಶಗಳಲ್ಲಿ ಬೆಳೆದಷ್ಟು ಹುಲುಸಾಗಿ ಬೆಳೆಯದಿದ್ದರೂ ಒಂದು ಕಾಲದಲ್ಲಿ ಚಾರ್ವಾಕ ದರ್ಶನದಲ್ಲದು ಸ್ಪಷ್ಟವಾಗಿ ಕಾಣುತ್ತದೆ.

ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿ

ಬದಲಾಯಿಸಿ
 
The circled dot was used by the Pythagoreans and later Greeks to represent the first metaphysical being, the Monad or The Absolute.

ಪಾಶ್ಚಾತ್ಯ ತತ್ತ್ವಶಾಸ್ತ್ರಚರಿತ್ರೆಯಲ್ಲಿ ಏಕತ್ವವಾದದ ಸ್ಪಷ್ಟವಾದ ಘೋಷಣೆ ಕಾಣಬರುವುದು ಗ್ರೀಕ್ ತತ್ತ್ವಜ್ಞನಾದ ಪಾರ್ಮನಡೀಸನ ಸೂತ್ರಪ್ರಾಯವಾದ ಹೇಳಿಕೆಗಳಲ್ಲಿ. ಇಲ್ಲಿ ಕಾಣುವುದು ಸತ್ ಒಂದೇ ಎಂಬ ಸಿದ್ಧಾಂತ. ಈ ಒಂದಾಗಿರುವ ಸತ್ ಚೇತನ ಸ್ವರೂಪವೇ ಭೌತಸ್ವರೂಪವೇ ಈ ಒಂದಾದ ಚಿರವಾದ ಸತ್ತಿಗೂ ಲೋಕದಲ್ಲಿ ಕಾಣುವ ಭಿನ್ನತೆಗೂ ಬದಲಾವಣೆಗಳಿಗೂ ಏನು ಸಂಬಂಧ-ಎಂಬ ಪ್ರಶ್ನೆಗಳಿಗೆ ಅವನ ವಚನಗಳಲ್ಲಿ ನೇರವಾದ ಉತ್ತರ ದೊರೆಯುವುದಿಲ್ಲ. ಈ ಪ್ರಶ್ನೆಗಳನ್ನು ಎತ್ತಿದವ ಪ್ಲೇಟೊ, ಭಿನ್ನತೆಯನ್ನು ಏಕತೆಯೊಡನೆ,ಚೇತನಸ್ವರೂಪವಾದದ್ದನ್ನು ಅಚೇತನದೊಡನೆ, ಚಿರವಾದದ್ದನ್ನು ಬದಲಾವಣೆಯೊಂದಿಗೆ ಸಮನ್ವಯ ಮಾಡಲು ಪ್ಲೇಟೊ ತನ್ನ ಸಂವಾದಗಳಲ್ಲಿ ಬಹು ಪ್ರಕಾರವಾಗಿ ಪ್ರಯತ್ನಿಸಿದ್ದಾನೆ. ಅಲ್ಲಿ ನಿರೂಪಿತವಾಗಿರುವ ನಿಗೂಢ (ಮಿಸ್ಟಿಕ್) ತತ್ತ್ವವೊಂದನ್ನು ತಾನು ಅವಲಂಬಿಸುತ್ತಿದ್ದರೂ ಬರೆವಣಿಗೆಯ ಮೂಲಕ ಎಂದೆಂದಿಗೂ ಅದನ್ನು ಪ್ರಕಟಿಸುವುದಿಲ್ಲವೆಂದು ಆತ ಹೇಳಿದ್ದಾನೆ. ಒಂದು ನಿಗೂಢ ತತ್ತ್ವಸಂಸ್ಥೆಯ ಮುಖ್ಯರಲ್ಲಿ ಆತ ಒಬ್ಬನೆಂದು ಇತರರ ಹೇಳಿಕೆಗಳಿಂದೂ ಸ್ಪಷ್ಟವಾಗುತ್ತದೆ. ಪ್ಲೇಟೊ ಭೌದ್ಧಿಕ ಏಕತ್ವ (ರ್ಯಾಷನಲ್ ಮಾನಿಸಂ) ತಾತ್ತ್ವಿಕನಲ್ಲದೆ, ನಿಗೂಢ ಏಕತ್ವತಾತ್ತ್ವಿಕ (ಮಿಸ್ಟಿಕಲ್ ಮಾನಿಸ್ಟ್‌) ಕೂಡ ಆಗಿದ್ದನೆಂದು ಹೇಳಲು ಸಾಕಾದಷ್ಟು ಕಾರಣಗಳಿವೆ. ಇವನ ಅನಂತರದ ಪ್ಲೋಟೈನಸ್ ತನ್ನ ನಿಗೂಢತತ್ತ್ವ ಪ್ರತಿಪಾದನೆಗಾಗಿ ಪ್ಲೇಟೋವನ್ನು ವಿಶೇಷವಾಗಿ ಆಶ್ರಯಿಸಿರುವುದು ಆ ಕಾರಣಗಳಲ್ಲಿ ಮುಖ್ಯವಾದುದ್ದು.

ಆಧುನಿಕ ಕಾಲದಲ್ಲಿ

ಬದಲಾಯಿಸಿ

ಆಧುನಿಕರಲ್ಲಿ ಏಕತ್ವವಾದದ ಮುಖ್ಯ ಪ್ರತಿಪಾದಕರು ಬೆನಿಡಿಕ್ಟ್‌ ಸ್ಪಿನೋಜ಼ ಮತ್ತು ತದನಂತರ ಜರ್ಮನ್ ತಾತ್ತ್ವಿಕ ಹೆಗೆಲ್. ಇವನ ಆಂಗ್ಲೇಯ ಅನುಯಾಯಿಗಳಲ್ಲಿ ಎಫ್.ಎಚ್.ಬ್ರಾಡ್ಲೆ ಪ್ರಸಿದ್ಧನಾದವ. ಪಾಶ್ಚಾತ್ಯ ಏಕತ್ವವಾದಿಗಳಲ್ಲಿ ಅರ್ನೆಸ್ಟ್‌ ಹೆಗಲ್, ಕಾರಲ್ ಮಾಕ್ರ್ಸ್‌ ಪ್ರಖ್ಯಾತರು. ಭೌತ ಏಕತ್ವವಾದದ ಒಂದು ಹೊಸ ರೂಪ ಈಗ ರಷ್ಯ ದೇಶದಲ್ಲಿ ವಿರಾಜಿಸುತ್ತಿದೆ.

ಏಕತ್ವವಾದದ ತಿರುಳು

ಬದಲಾಯಿಸಿ
 
A diagram with neutral monism compared to Cartesian dualism, physicalism and idealism.

ಏಕತ್ವ ತತ್ತ್ವದ ಮುಖ್ಯ ಅಂಶ ಇದು. ಇದರ ತಳಹದಿಯಾದ ಭಾವನೆ ಸತ್; ಸತ್ಯ ಸ್ವರೂಪವಾದದ್ದು. ಸತ್ಯ ಎಂದರೆ ಸ್ವತಃ ಅಸಂಗತವಲ್ಲದ್ದು, ಅವಿರೋಧವಲ್ಲದ್ದು, ಸ್ವಸಂಗತವಾದದ್ದು, ಸ್ವಸಂಪುರ್ಣವಾದುದ್ದು, ಅವಿಭಾಜ್ಯವಾದ ಒಗ್ಗಟ್ಟುಳ್ಳದ್ದು. ಸರ್ವವ್ಯಾಪಕವಾದದ್ದು, ಎಲ್ಲಕ್ಕೂ ಆಧಾರವಾದದ್ದು. ಈ ಭಾವನೆಯನ್ನು ಎಲ್ಲ ಏಕತ್ವವಾದಿಗಳೂ ಒಪ್ಪುತ್ತಾರೆ. ಆದರೆ ಇದರ ಸ್ವರೂಪವೇನು ? ಏಕೈಕವಾಗಿರುವ ಸತ್ ಭೌತವಾದುದೇ ಜೀವರೂಪವಾದುದೆ ? ಇದು ಭಿನ್ನತೆ ಇಲ್ಲದ. ಬದಲಾವಣೆ ಇಲ್ಲದ, ಬೆಳೆವಣಿಗೆ ಇಲ್ಲದ, ಕಾಲದೇಶಗಳಿಲ್ಲದ, ಸರಳ ಸಾಮಾನ್ಯವೇ ? ಅಥವಾ ವೈವಿಧ್ಯ ಸಹಿತವಾದ ಬೆಳೆವಣಿಗೆಯುಳ್ಳ ಒಂದೇ ? ಒಂದೇ ಆಗಿಯೂ ವೈವಿಧ್ಯದಿಂದ ಕೂಡಿದ್ದರೆ, ಬದಲಾವಣೆಗಳಿಂದ ಕೂಡಿದ್ದರೆ, ಸಾಮಾನ್ಯಕ್ಕೂ ವೈಶಿಷ್ಟ್ಯಕ್ಕೂ, ಸ್ಥಿರತೆಗೂ ಬದಲಾವಣೆಗೂ ಏನು ಸಂಬಂಧ ?-ಈ ಮುಂತಾದ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಏಕತ್ವವಾದಿಗಳು ವಿಧವಿಧವಾದ ಉತ್ತರಗಳನ್ನು ಕೊಟ್ಟಿರುತ್ತಾರೆ. ಈ ಉತ್ತರಗಳು ಭಿನ್ನ ಸಿದ್ಧಾಂತಗಳಾಗಿ ಪರಿಣಮಿಸಿವೆ. ಇವನ್ನು ಸಂಕ್ಷೇಪವಾಗಿ ಪರಿಶೀಲಿಸಬಹುದು.

ಭೌತ ಏಕತ್ವವಾದ

ಬದಲಾಯಿಸಿ

ಈ ವಾದವನ್ನು ಚರಿತ್ರೆಯ ದೃಷ್ಟಿಯಿಂದ ಮೂರು ಹಂತಗಳಲ್ಲಿ ವಿವೇಚಿಸಿದೆ. ಮೊದಲನೆಯದು ಪ್ರಾಕ್ತನರದು. ಥಾಲೀಸ್ ಎಂಬ ಗ್ರೀಕ್ ತಾತ್ತ್ವಿಕ ಎಲ್ಲಕ್ಕೂ ಮೂಲವಾದ ವಸ್ತು ಅಪ್, ಅಂದರೆ ನೀರು ಎಂದು ವಾದಿಸಿದ. ಅನ್ಯಾಕ್ಸಿಮೈನೀಸ್ ಎಲ್ಲಕ್ಕೂ ಮೂಲಭೂತವಾದದ್ದು ವಾಯು ಎಂದು ವಾದಿಸಿದ. ಅವನ ತರುವಾಯದ ಅನ್ಯಾಕ್ಸಿಮೆಂಡರ್ ಎಲ್ಲಕ್ಕೂ ಮೂಲಭೂತವಾದದ್ದು ಅಗ್ನಿ ಎಂದು ವಾದಿಸಿದ. ವೇದದ ಕಾಲದಲ್ಲೂ ಇದೇ ವಿಧವಾದ ವಾದಗಳು ಕಾಣಬರುತ್ತವೆ. ಕೆಲವರು ಎಲ್ಲಕ್ಕೂ ಮೂಲಭೂತವಾದದ್ದು ಆಕಾಶ ಎಂದು ವಾದಿಸಿದರು. ಹೀಗೆ ಕ್ರಮಕ್ರಮವಾಗಿ ಸ್ಥೂಲವಾದ ಭೌತವಸ್ತುವಿನಿಂದ ಹೆಚ್ಚು ಹೆಚ್ಚು ಸೂಕ್ಷ್ಮವಾದ ಭೌತವಸ್ತು ಎಲ್ಲಕ್ಕೂ ಮೂಲವೆಂಬ ತತ್ತ್ವವಿವೇಚನೆ ಬೆಳೆಯಿತು. ಹೀಗೆ ಒಬ್ಬೊಬ್ಬರೂ ಒಂದೇ ವಸ್ತುವಿನಿಂದ ಎಲ್ಲವೂ ಹುಟ್ಟಿದ್ದು ಎಂದು ವಾದಿಸಿದರೂ ಅವು ಭಿನ್ನಗುಣಗಳುಳ್ಳವಾದುದರಿಂದ ಅವುಗಳ ಭಿನ್ನತೆಯನ್ನು ಇಲ್ಲವೆನ್ನಲಾಗುವುದಿಲ್ಲ. ನೀರು ನೀರೆ, ಗಾಳಿ ಗಾಳಿಯೆ, ಬೆಂಕಿ ಬೆಂಕಿಯೆ, ದೊಡ್ಡದಾದರೂ ಸಣ್ಣದಾದರೂ ಅದು ತನ್ನ ಸ್ವಭಾವವನ್ನು ಬಿಟ್ಟು ಕೊಡುವುದಿಲ್ಲ.

ನೀರು, ಗಾಳಿ, ಅಗ್ನಿ, ಆಕಾಶ ಇವೆಲ್ಲವೂ ಭೌತವಾದವು. ಈ ಒಂದೊಂದು ಬೇರೆ ಬೇರೆ. ಒಂದರೊಡನೆ ಇನ್ನೊಂದು ಕಲೆಯುವ ಹಾಗಿಲ್ಲ. ಈ ಒಂದೊಂದು ಅನೇಕವಾಗಿ ವಿಭಾಜ್ಯವಾಗಬಲ್ಲಂಥವು. ಒಂದು ತೊಟ್ಟು ನೀರಿನಲ್ಲಿ ನೂರಾರು ನೀರಿನ ಕಣಗಳಿವೆ. ಒಂದು ಸೂಜಿಯ ಕಣ್ಣಿನಲ್ಲಿರುವ ಗಾಳಿಯಲ್ಲಿ ನೂರಾರು ಗಾಳಿಯ ಕಣಗಳಿವೆ. ಒಂದು ಬೆಂಕಿಕಡ್ಡಿಯ ಉರಿಯಲ್ಲಿ ನೂರಾರು ಬೆಂಕಿಯ ಕಿಡಿಗಳಿವೆ. ಒಂದು ಇರುವೆ ನಿಲ್ಲುವಷ್ಟು ಸ್ಥಳದಲ್ಲಿ ಅನೇಕಾನೇಕ ಚುಕ್ಕೆಗಳನ್ನು ಸೇರಿಸಬಹುದು. ಈ ವಿಶ್ವವನ್ನು ವಿಭಜಿಸುತ್ತ ಹೋದರೆ ಅಂತಿಮದಲ್ಲಿ ನಮಗೆ ದೊರೆಯುವುದು ಅಗಣಿತವಾದ ಬಗೆಬಗೆಯ ಕಣಗಳು. ಮನೆ ಇಟ್ಟಿಗೆಗಳಿಂದ ಆಗಿರುವಂತೆ ಈ ವಿಶ್ವವೂ ವಿವಿಧವಾದ ಅಣುಗಳು ಸೇರಿ ಆದದ್ದು. ಆದ್ದರಿಂದ ಈ ವಿಶ್ವಕ್ಕೆ ಅಂತಿಮ ತಳಹದಿ ಈ ಅಣುಗಳು. ಇವೇ ಸತ್ತಿನ ಅಂತಿಮ ವಸ್ತುಗಳು. ಆದ್ದರಿಂದ ಅಂತಿಮದಲ್ಲಿ ಈ ವಿಶ್ವ ಏಕಪ್ರಕಾರವಾದ ಒಂದೇ ಒಂದು ಪದಾರ್ಥವಲ್ಲ. ಅದು ಅನೇಕಾನೇಕ ಪ್ರತ್ಯೇಕವಾದ ಅಣುಗಳ ಸಮುದಾಯ. ಭಿನ್ನಗುಣಗಳುಳ್ಳ ಅನೇಕ ವಸ್ತುಗಳೇ ಈ ವಿಶ್ವಕ್ಕೆ ಮೂಲಕಾರಣಗಳು-ಎಂದು ಡಿಮಾಕ್ರಿಟಸ್ ಮೊದಲಾದ ಭೌತ ಬಹುತ್ವವಾದಿಗಳು ವಾದಿಸಿದರು. ಏಕತ್ವವಾದಿಗಳು ಈ ವಾದವನ್ನು ಎದುರಿಸಬೇಕಾಯಿತು. ಅದಕ್ಕೆ ಅವರು ಹೊಸದೊಂದು ತರ್ಕಸರಣಿಯನ್ನು ಹಿಡಿದರು. ಅದರ ಮುಖ್ಯಾಂಶ ಇದು: ನಾವು ತತ್ತ್ವಜ್ಞರಾಗಿ ಹುಡುಕುತ್ತಿರುವುದು ವಿಶ್ವದ ಅಂತಿಮ ಕಾರಣವನ್ನು. ಅಣುಗಳು ವಿಶ್ವಕ್ಕೆ ಅಂತಿಮ ಕಾರಣಗಳೆಂದು ನೀವು ಹೇಳುತ್ತೀರಿ. ಅಂತಿಮ ಎಂಬ ಪದವನ್ನು ಅರ್ಥಮಾಡಿಕೊಳ್ಳದೆ ಉಪಯೋಗಿಸುತ್ತಿದ್ದೀರಿ. ಅಂತಿಮ ವಸ್ತು ಎಂದರೆ ಕಾರಣ ಎಂದಲ್ಲಿ ಎಲ್ಲಕ್ಕೂ ಅದು ಕಾರಣವಾಗಿರಬೇಕು. ಅದಕ್ಕೆ ಬೇರೆ ಕಾರಣವಿಲ್ಲದಿರಬೇಕು. ಅದು ಎಲ್ಲವನ್ನು ಒಳಗೊಂಡಿರಬೇಕು. ಅದರ ಹೊರಗೆ ಬೇರೆ ಏನೂ ಇರಕೂಡದು. ಅದು ಅಮಿತವಾಗಿರಬೇಕು. ಅನಂತವಾಗಿರಬೇಕು. ಪರಮವಾಗಿರಬೇಕು. ನಾವು ನೋಡಿದ ನೀರು, ಗಾಳಿ, ಬೆಂಕಿ ಯಾವುದೇ ಆಗಲಿ ಮಿತಿಯುಳ್ಳವು. ಅಂಥ ಮಿತಿಯುಳ್ಳದ್ದು ಪರಮವಾಗಲಾರದು, ಸ್ವತಂತ್ರವಾಗಲಾರದು. ಗಾಳಿಯ ಹೊರಗೆ ಅದಕ್ಕೆ ತಡೆಯಾಗಿ ಘನ ಪದಾರ್ಥಗಳಿವೆ. ಬೆಂಕಿಯ ಹೊರಗೆ ನೀರಿದೆ. ಬೆಂಕಿಯ ಮೇಲೆ ನೀರು ಬಿದ್ದರೆ ಅದು ಆರಿಹೋಗುತ್ತದೆ. ನೀರನ್ನು ಬೆಂಕಿಯಿಂದ ಕಾಯಿಸಿದರೆ ಅದು ಅನಿಲ ರೂಪದ್ದಾಗುತ್ತದೆ. ಹೀಗೆ ಒಂದು ಇನ್ನೊಂದರ ಸ್ವಭಾವ ತಾನೇ ತಾನಾಗಿ ಉಳಿಯದಂತೆ ಮಾಡುತ್ತದೆ. ಆದ್ದರಿಂದ ಇವುಗಳಲ್ಲಿ ಯಾವುದೊಂದು ಅಂತಿಮದಲ್ಲಿ ತಾನೇತಾನಾಗಿ ಉಳಿಯಲಾರದು. ಭಿನ್ನತೆ ಇದ್ದೆಡೆ ಪರಸ್ಪರ ಘರ್ಷಣೆ, ಪರಸ್ಪರ ವಿನಾಶ ಅನಿವಾರ್ಯ. ಅಂತಿಮ ವಸ್ತು ಎಂದರೆ ಅದು ಅವಿರೋಧವುಳ್ಳದ್ದಾಗಿರಬೇಕು. ಅದಕ್ಕೆ ಹೊರಗೆ ಬೇರೆ ಯಾವುದೂ ಇಲ್ಲವಾಗಿರಬೇಕು. ಅದು ಎಲ್ಲವನ್ನೂ ಒಳಗೊಂಡ ವಸ್ತುವಾಗಿರಬೇಕು. ಅಂಥ ವಸ್ತು ಹುಟ್ಟು ಸಾವು ಇಲ್ಲದ ಸ್ಥಿರಚಿರವಸ್ತುವಾಗಿರಬೇಕು. ಅಂಥ ವಸ್ತು ಒಂದಲ್ಲದೆ ಹಲವಾಗಲಾರದು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಎಲ್ಲವೂ ಒಂದೇ ವಸ್ತುವಿನಿಂದ ಬಂದು, ಒಂದೇ ಒಂದೇ ವಸ್ತುವಿನಲ್ಲಿ ಲೀನವಾಗಬೇಕು. ಈ ಭೌತವಸ್ತುಗಳ ತಳಹದಿಯಾಗಿ ಒಂದೇ ಭೌತವಸ್ತು ಪರಮವಾಗಿರಬೇಕು. ಸ್ವಸಂಗತ್ವಾದದ್ದೆ ಸತ್. ಒಂದಲ್ಲದ್ದು ಸ್ವಸಂಗತವಾಗಲಾರದು. ಈ ಒಂದಾದ ಭೌತವಸ್ತುವೇ ಮೂಲಪ್ರಕೃತಿ. ಆ ಪ್ರಕೃತಿ ಒಂದೇ. ಅದು ಸರ್ವವ್ಯಾಪಕ ಸಮಸ್ತವನ್ನೂ ಒಳಗೊಂಡದ್ದು. ಚಿರವಾದದ್ದು ಅನಂತವಾದದ್ದು, ಅನಾದಿಯಾದದ್ದು. ಈ ವಾದ ಭೌತವಾದದ ಎರಡನೆಯ ರೂಪ, ಎಲ್ಲವೂ ಭೌತವಾದ ಪ್ರಕೃತಿಗೆ ಅಧೀನ ಎಂಬ ವಾದಕ್ಕೆ ಪ್ರತಿಯಾಗಿ ಒಂದು ಪ್ರಶ್ನೆ ತಲೆದೋರುತ್ತದೆ. ಪ್ರಕೃತಿ ಇಂಥದು ಎಂದು ನಾವು ಹೇಳಲು ನಮಗೆ ಸಾಧ್ಯವಾದದ್ದು ಅರಿವಿನ ಪ್ರಭಾವದಿಂದ. ಈ ಅರಿವು ಇರವಿನಿಂದ ಪ್ರತ್ಯೇಕ. ಅದು ಇದೆ ಎಂದು ಸಿದ್ಧವಾಗಬೇಕಾದರೆ ತಿಳಿಯುವ ಚೈತನ್ಯ ಅದಕ್ಕೆ ಆಧಾರ. ನಮಗೆ ಮೊದಲು, ನೇರವಾಗಿ, ಬೇರೆಯ ವಿಷಯದ ಸಹಾಯವಿಲ್ಲದೆ ತಿಳಿಯುವುದೆಂದರೆ ನಾನು ಅರಿಯುವವನು ಎಂಬ ಚೇತನ. ನಾನು ಇದ್ದೇನೆ ಎಂದು ಹೇಳಬೇಕಾದರೆ ನನ್ನ ತಿಳಿವು ಆ ಇರವಿಗೆ ಆಧಾರ. ನಾನು ಉಳಿದೆಲ್ಲದರ ಇರವಿನ ವಿಚಾರವಾಗಿ ಸಂಶಯಪಡಬಹುದು, ಇಲ್ಲವೆಂದು ಹೇಳಬಹುದು. ಆದರೆ ನನ್ನ ತಿಳಿವನ್ನೇ ನಾನು ಇಲ್ಲವೆನ್ನುವ ಹಾಗಿಲ್ಲ. ಆ ತಿಳಿವು ಸ್ವತಃಸಿದ್ದ. ಆ ತಿಳಿವು ಇರವಿಗೆ ಆಧಾರವಾದ್ದರಿಂದ ಜಡವಸ್ತುವಿನ ಇರವಿಗೆ ಚೇತನ ಅಗತ್ಯವಾಗುತ್ತದೆ. ತಿಳಿವಿಲ್ಲದೆ. ತಿಳಿಯಬಹುದಾದ ವಸ್ತುವಿರಲಾರದು. ಆದ್ದರಿಂದ ಭೌತವಸ್ತುವಿನ ಅಸ್ತಿತ್ವ ತಿಳಿವಿನಿಂದಲೇ ಏರ್ಪಡಬೇಕಾದುದರಿಂದ ಇರವು ಅರಿವಿಗೆ ಅಧೀನ. ಅರಿವೇ ಎಲ್ಲ ಇರವಿನ ಅಂತಿಮ, ಪರಮ-ಆಧಾರ-ಎಂಬ ಚೇತನಾದ್ವೈತವಾದ ಈ ಭೌತದ್ವೈತಕ್ಕೆ ಪ್ರತಿವಾದವಾಗಿ ನಿಲ್ಲುತ್ತದೆ. ಏಕತ್ವ ಭೌತವಾದ ಇನ್ನೊಂದು ಬಗೆಯ ಆಕ್ಷೇಪಕ್ಕೆ ಒಳಪಡುತ್ತದೆ. ಭೌತವಸ್ತು ಕೇವಲ ಜಡವಾದದ್ದು. ಪ್ರಪಂಚವಾದರೋ ಚಟುವಟಿಕೆಯಿಂದ ತುಂಬಿತುಳುಕಾಡುತ್ತಿದೆ. ಅದು ಕೇವಲ ಯಾಂತ್ರಿಕವಾದದ್ದಲ್ಲ, ಗೊತ್ತುಗುರಿ ಇಲ್ಲದ್ದಲ್ಲ. ಈ ವಿಶ್ವದಲ್ಲಿರುವ ಒಂದೊಂದು ವಸ್ತುವೂ ಒಂದು ಗುರಿಯ ಕಡೆಗೆ ಧಾವಿಸುತ್ತದೆ. ಅದರಲ್ಲಿ ಕ್ರಮವಿದೆ. ಉದಾಹರಣೆಗಾಗಿ ಉಪ್ಪಿನ ದ್ರವವನ್ನು ತೆಗೆದುಕೊಳ್ಳೋಣ. ಅದು ಆವಿಯಾದಂತೆಲ್ಲ ಚತುರಸ್ರವಾದ ಹರಳುಗಳು ಸ್ಫುಟಗೊಳ್ಳುತ್ತವೆ, ಪುಟಗೊಳ್ಳುತ್ತವೆ. ಒಂದು ಬೀಜ ಸಸಿಯಾಗಿ, ಕ್ರಮವಾಗಿ ಎಲೆಗಳಾಗಿ ಕೊಂಬೆಗಳಾಗಿ ಕವಲೊಡೆದು ಬೆಳೆಯುತ್ತದೆ. ಅನಂತರ ಹೂ ಬಿಡುತ್ತದೆ. ಹೂ ಕಾಯಾಗಿ ಹಣ್ಣಾಗುತ್ತದೆ. ಉಪ್ಪಿನ ದ್ರವದ ಗುರಿ ಚಚ್ಚೌಕವಾದ ಹರಳುಗಳಾಗುವುದು. ಬೀಜದ ಗುರಿ ಗಿಡವಾಗಿ ಬೆಳೆದು ಹಣ್ಣು ಬಿಡುವುದು. ಹೀಗೆ ಪ್ರಪಂಚದಲ್ಲಿ ವಸ್ತುಗಳು ಜಡವಾಗಿರದೆ, ಚಟುವಟಿಕೆಯಿಂದ ಒಂದು ಗುರಿ ಮುಟ್ಟುತ್ತವೆ. ಚಟುವಟಿಕೆಯಿಂದ ಗುರಿ ಮುಟ್ಟುವುದಕ್ಕೆ ಚೇತನದ ಪ್ರಭಾವದಿಂದ ಸಾಧ್ಯವೇ ಹೊರತು, ಕೇವಲ ಅಚೇತನ ವಸ್ತುವಿನಿಂದ ಸಾಧ್ಯವಿಲ್ಲ ಎಂಬುದು ಭೌತವಾದಕ್ಕೆ ಇನ್ನೊಂದು ಪ್ರಬಲ ಆಕ್ಷೇಪ.

ಆಧುನಿಕ ಭೌತವಾದ

ಬದಲಾಯಿಸಿ

ಈ ಆಕ್ಷೇಪಗಳನ್ನು ಭೌತವಾದದ ಮೂರನೆಯ ರೂಪವಾಗಿರುವ ಆಧುನಿಕ ಭೌತವಾದ ಪರಿಹರಿಸಲು ಪ್ರಯತ್ನಿಸಿದೆ. ಈ ಭೌತವಾದಕ್ಕೆ ಡಯಲೆಕ್ಟಿಕ್ ಮೆಟೀರಿಯಲಿಸಂ ಎಂದು ಹೆಸರು. ಇದನ್ನು ಪ್ರತಿಪಾದಿಸಿದವ ಕಾರ್ಲ್ ಮಾರ್ಕ್ಸ್. ಆಧುನಿಕ ಭೌತವಾದಕ್ಕೆ ವಿಜ್ಞಾನ ಆಧಾರ. ವ್ಶೆಜ್ಞಾನಿಕ ಭೌತವಾದ ಅರಿವು ಇಲ್ಲವೆಂದು ಹೇಳುವುದಿಲ್ಲ. ಅರಿವಿನ ಗುಣವನ್ನು ಅಲ್ಲಗಳೆಯುವುದಿಲ್ಲ. ಬುದ್ಧಿಯನ್ನು ತಿರಸ್ಕರಿಸುವುದಿಲ್ಲ. ಅದನ್ನು ಪುರಸ್ಕರಿಸುತ್ತದೆ. ಅದರ ವಾದ ಇಷ್ಟು. ತಿಳಿವು, ಇದ್ದದ್ದನ್ನು ತಿಳಿಯಬಲ್ಲದ್ದೇ ಹೊರತು, ಅದು ಇರವನ್ನು ಹುಟ್ಟಿ ಹಾಕಲಾರದು, ಹಾಗೆ ಅರಿವು ಇರವನ್ನು ಸೃಷ್ಟಿಸಬಹುದಾದರೆ, ಮಂತ್ರಿಸಿದರೆ ಮಾವಿನಕಾಯಿ ಆಗಬೇಕು. ನಾವು ಏನನ್ನಾದರೂ ತಿಳಿಯಬೇಕಾದರೆ ತಿಳಿಯಬೇಕಾದುದರ ಜಾಡನ್ನು ಹಿಡಿದುಹೋಗಬೇಕು. ಸತ್ತನ್ನು ತಿಳಿಸುವುದು ಸತ್ಯ; ಸತ್ಯ ಸತ್ತಿನ ಅನುಯಾಯಿ. ಸತ್ ಸತ್ಯದ ಅನುಯಾಯಿ ಅಲ್ಲ. ವಿಜ್ಞಾನ ಸತ್ತನ್ನು ಅನುಸರಿಸುವುದರಿಂದಲ್ಲವೆ ಅದು ಅಷ್ಟು ಪ್ರಬಲವಾಗಿ ಬೆಳೆದಿರುವುದು? ಸತ್ತಿನ ಮಾರ್ಗವನ್ನು ಅನುಸರಿಸದೆ ಕೇವಲ ಆಲೋಚನೆಯನ್ನೇ ನಂಬಿದರೆ, ಕೇವಲ ಭಾವನೆಗಳಿಂದಲೇ ಸತ್ತನ್ನು ಸ್ಥಾಪಿಸ ಹೊರಟರೆ, ಆ ನಂಬಿಕೆ ಮಿಥ್ಯವಾಗುತ್ತದೆ, ಬರಡಾಗುತ್ತದೆ. ಮಾನವ ತನ್ನ ಭಾವನೆಗಳೇ ಎಲ್ಲಕ್ಕೂ ಮೂಲ ಎಂಬ ಅಭಿಮಾನವನ್ನು ಹೊಂದಿದ್ದರಿಂದ ಅವನು ಪ್ರಗತಿ ಪಡೆಯಲಿಲ್ಲ; ಹಸಿವಿನಿಂದ, ದೌರ್ಬಲ್ಯದಿಂದ ನರಳುವಂತಾದ. ಪ್ರಕೃತಿಯನ್ನು ನಂಬಿ ಪ್ರಕೃತಿಯನ್ನು ಅನುಸರಿಸಿದ ವಿಜ್ಞಾನದ ಪರಿಣಾಮವಾಗಿ ಮಾನವ ಹೆಚ್ಚು ಸಂಪತ್ತನ್ನು ಗಳಿಸಿ, ಹಸಿವು, ಕಾಯಿಲೆ, ದೌರ್ಬಲ್ಯವನ್ನು ನೀಗಲು ಸಾಧ್ಯವಾಗಿದೆ, ಹೆಚ್ಚು ಕಾಲ ಬದುಕಲು ಸಾಧ್ಯವಾಗಿದೆ.

ವಿಜ್ಞಾನ ಮತ್ತೊಂದು ವಿಧದಲ್ಲಿ ಮಾನವನ ಮಿಥ್ಯಾ ಅಥವಾ ಅಂಧಾಭಿಮಾನವನ್ನು ಕರಗಿಸಿದೆ. ಆಧುನಿಕ ಪರಿಣಾಮವಾದದ ಪ್ರಕಾರ, ಮಾನವ ಹುಟ್ಟಿದ್ದು ಈಚೆಗೆ. ಪುರಾತನವಾದ ಸೂರ್ಯ ಚಂದ್ರಾದಿಗಳೊಡನೆ ಹೋಲಿಸಿದರೆ ಮಾನವ ನಿನ್ನೆ ಹುಟ್ಟಿದ ಶಿಶು. ಅರಿವು, ಬುದ್ಧಿ ಹುಟ್ಟುವುದಕ್ಕೆ ಭೌತವಾದ ದೇಹರಚನೆ ಮತ್ತು ಅದರ ಕ್ರಿಯೆಗಳು ಆಧಾರ. ಅರಿವು ಪ್ರಕೃತಿಯ ಮೂಲಕ್ರಿಯೆಯ ಒಂದು ಉಪವ್ಯಾಪಾರ (ಬೈಪ್ರಾಡಕ್ಟ್‌) ಅಥವಾ ಉಪವಿಕಾರ (ಎಪಿಫಿನಾಮೆನನ್) ಎಂದು ಹಕ್ಸ್‌ಲಿ, ಹರ್ಬರ್ಟ್ ಸ್ಪೆನ್ಸರ್ ಮುಂತಾದ ವ್ಶೆಜ್ಞಾನಿಕ ತಾತ್ತ್ವಿಕರು ವಾದಿಸಿರುತ್ತಾರೆ. ವೈದ್ಯರು ಜ್ಞಾನಪಲ್ಲಟವಾಗುವುದಕ್ಕೆ, ಜ್ಞಾನ ತಪ್ಪುವುದಕ್ಕೆ ಶರೀರದಲ್ಲಾಗುವ ಕೆಲವು ಬದಲಾವಣೆಗಳು ಕಾರಣವೆಂದೂ ಮಿದುಳಿಗೆ ಅಗತ್ಯವಾದ ಆಮ್ಲಜನಕದ ಸರಬರಾಯಿ ನಿಂತರೆ ಅರಿವು ನಿಂತು ಹೋಗುವುದೆಂದೂ ಪ್ರಾಯೋಗಿಕವಾಗಿ ಸ್ಥಾಪಿಸಿದ್ದಾರೆ. ಅಲ್ಲದೆ ಪ್ರಪಂಚದ ವಸ್ತುಗಳಲ್ಲಿ ಹೊಸ ಹೊಸ ರಚನೆಗೆ ಈ ಅರಿವು ಕಾರಣವಲ್ಲ. ಅರಿವೇನಿದ್ದರೂ ಹಿಂದೆ ಈ ರೀತಿ ಇದ್ದದ್ದು ಅನಂತರ ಈ ರೀತಿಯಾಗಿ ಪರಿವರ್ತನೆಯಾಗಿದೆ ಎಂದು ತಿಳಿಸುತ್ತದೆಯೇ ಹೊರತು ಆ ಪರಿವರ್ತನೆಗೆ ಕಾರಣವಾಗುವುದಿಲ್ಲ. ವಸ್ತುಗಳನ್ನು ಅರಿತ ಮಾತ್ರದಿಂದ ಅವುಗಳಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಕಾರ್ಯವೇನಿದ್ದರೂ ಭೌತ ಸತ್ತಿನ ಕಾರ್ಯ, ಸತ್ತಿನಲ್ಲಿ ಇಲ್ಲದ ಕಾರ್ಯ ಬೇರೆ ಎಲ್ಲಿಂದಲೂ ಬರಲು ಸಾಧ್ಯವಿಲ್ಲ. ಇಲ್ಲದ್ದರಿಂದ, ಅಸತ್ತಿನಿಂದ ಇರವು ಬಂದಿದೆ ಎಂದು ಹೇಳುವುದು ಅಸಂಗತ ಪ್ರಲಾಪವಾಗುತ್ತದೆ.

ಜಲಜನಕ, ಆಮ್ಲಜನಕ ಇವೆರಡೂ ಸೇರಿ ಎರಡರಿಂದಲೂ ಭಿನ್ನವಾದ ನೀರು ಹುಟ್ಟುವುದಿಲ್ಲವೆ, ಅವೆರಡರಲ್ಲೂ ಇಲ್ಲದ್ದು ಈಗ ನೀರಾಗಿ ಹೊಸದಾಗಿ ಹುಟ್ಟಿಲ್ಲವೆ - ಎಂದು ಕೇಳಬಹುದು. ಅದಕ್ಕೆ ಭೌತಪರಿಣಾಮವಾದಿಗಳ ಉತ್ತರ ಇದು. ದ್ರವರೂಪ ಆಮ್ಲಜನಕದಲ್ಲಾಗಲಿ, ಜಲಜನಕದಲ್ಲಾಗಲಿ ಇಲ್ಲ. ಅದು ನಿಜ. ಆದರೆ ನೀರಾಗುವ ಶಕ್ತಿ ಅವೆರಡೂ ಪ್ರತ್ಯೇಕವಾಗಿ ಇರುವಾಗ ಇರುವುದಿಲ್ಲ. ಅವುಗಳಲ್ಲಿ ರಜೋಗುಣ ಹೆಚ್ಚಾಗಿ ತಮೋಗುಣ ಕಡಿಮೆಯಾಗಿರುವವರೆಗೂ ಅವು ಹಾಗೆಯೇ ಇರಬೇಕಾಗುತ್ತದೆ. ಆದರೆ ಅವುಗಳಲ್ಲಿ ತಮೋಗುಣವಿಲ್ಲದಿಲ್ಲ. ಯಾವ ವಸ್ತುವನ್ನು ತೆಗೆದುಕೊಂಡರೂ ಅದರಲ್ಲಿ ತಮೋಗುಣ ಇರುತ್ತದೆ. ರಜೋಗುಣವೂ ಇರುತ್ತದೆ. ಜಡವಾಗಿ ಒಂದು ಕಡೆ ಬಿದ್ದಿರುವ ಕಲ್ಲುಬಂಡೆ ಕೇವಲ ತಮಸ್ಸಿನ ಮುದ್ದೆಯಾಗಿ ಕಾಣುತ್ತದೆ. ಆದರೂ ಅದರಲ್ಲಿ ಚಲನೆ ಇದೆ. ಹಾಗೆಯೆ ತುಂಬ ಚಟುವಟಿಕೆಯಾಗಿರುವ ಗಾಳಿಯಲ್ಲಿರುವ ಒಂದು ಆಮ್ಲಜನಕದ ಅಣುವಿನಲ್ಲೂ ಸಾಂದ್ರತೆ ಇದೆ. ಆ ಸಾಂದ್ರತೆ ಇಲ್ಲದಿದ್ದರೆ ಆ ಅಣು ಪ್ರತ್ಯೇಕವಾದ ಅಣುವಾಗಿ ಇರಲು ಸಾಧ್ಯವೇ ಇಲ್ಲ. ಕಲ್ಲು ಬಂಡೆ ಹೇಗೆ ಇತರ ವಸ್ತುಗಳು ತನ್ನೊಳಕ್ಕೆ ಪ್ರವೇಶಮಾಡದಂತೆ ತಡೆದಿರುತ್ತದೆಯೊ ಹಾಗೆ ಆಮ್ಲಜನಕದ ಕಣವೂ ಇತರ ಕಣಗಳು ಅದರೊಳಗೆ ಪ್ರವೇಶ ಮಾಡದಂತೆ ತಡೆದು ನಿಲ್ಲಿಸುವ ಸಾಂದ್ರ ಸ್ವಭಾವವನ್ನೂ ಪಡೆದಿರುತ್ತದೆ. ಯಾವ ವಸ್ತುವೇ ಆಗಲಿ ತಾನು ತಾನಾಗಿ ಇರುವವರೆಗೂ ಇಂಥ ಸಾಂದ್ರತೆಯನ್ನು ಪಡೆದೇ ಇರುತ್ತದೆ. ಒಂದು ವಸ್ತುವಿಗೂ ಇನ್ನೊಂದು ವಸ್ತುವಿಗೂ ಇರುವ ಭೇದಕ್ಕೆ ಅದರ ಸಾಂದ್ರತೆ ಅಂದರೆ ತಮೋಗುಣದ ಮತ್ತು ರಜೋಗುಣದ ಪ್ರಮಾಣಭೇದಗಳು ಕಾರಣಗಳು. ಪ್ರತಿಯೊಂದು ವಸ್ತುವೂ ಈ ಎರಡು ದ್ವಂದ್ವಗಳ ಮಿಶ್ರಣ. ಒಂದೊಂದು ವಸ್ತುವೂ ಈ ಎರಡು ಗುಣಗಳನ್ನೂ ಬೇರೆ ಬೇರೆ ಪ್ರಮಾಣಗಳಲ್ಲಿ ಪಡೆದಿರುವುದಲ್ಲದೆ, ಅವೆರಡನ್ನೂ ಒಂದು ಸಮಸ್ಥಿತಿಗೆ ತರಬಲ್ಲ ಸತ್ತ್ವಗುಣವನ್ನೂ ಪಡೆದಿರುತ್ತದೆ. ಈ ಸಮಸ್ಥಿತಿ ವಸ್ತುಗಳ ಸಾಮಾನ್ಯ ಸ್ಥಿತಿ. ಈ ಮೂರು ಗುಣಗಳು ಎಲ್ಲದರಲ್ಲೂ ಇರುತ್ತವೆ. ಇದು ಇಡೀ ಪ್ರಕೃತಿಯ ಮೂಲತತ್ತ್ವ. ಭಿನ್ನತೆಯನ್ನು ಒಳಗೊಂಡ ಏಕತೆ ಪ್ರಕೃತಿಯ ಸ್ವರೂಪ. ಭೂಮಿಯಂತೆ ದೊಡ್ಡದಾಗಲಿ ಒಂದು ಗುಲಗಂಜಿಯಂತೆ ಚಿಕ್ಕದಾಗಲಿ, ಅದು ಈ ತತ್ತ್ವಕ್ಕೆ ಒಳಪಟ್ಟೇ ಇರುತ್ತದೆ. ಈ ಮೂರು ಗುಣಗಳಿಲ್ಲದ ವಸ್ತುವೇ ಇಲ್ಲ. ಅವು ಕಾರಣ ದೆಶೆಯಲ್ಲಾಗಲಿ, ಕಾರ್ಯ ದೆಶೆಯಲ್ಲಾಗಲಿ, ಈ ಗುಣಗಳನ್ನು ಪಡೆದೇ ಇರುತ್ತವೆ. ಅಲ್ಲದೆ ಕಾರ್ಯವಲ್ಲದ ಕಾರಣವೂ ಕಾರಣವಲ್ಲದ ಕಾರ್ಯವೂ ಇರುವುದಿಲ್ಲ. ಸದಾ ಬದಲಾಯಿಸುತ್ತಿರುವುದು ಪ್ರಕೃತಿಯ ಸ್ವಭಾವವಾದುದರಿಂದ, ಯಾವುದೊಂದೂ ಕಾರ್ಯವಿಲ್ಲದ ಕಾರಣವಾಗಿ ಇರಲಾರದು. ಈ ವಿಶ್ವದ ಒಂದೊಂದೂ ಪರಿಣಾಮ ಹೊಂದುತ್ತಲೇ ಇರುತ್ತದೆ. ಸತ್ ಯಾವಾಗಲೂ ಕಾರ್ಯರೂಪವೇ ಪರಿಣಾಮಕಾರಿಯೇ. ಆದರೆ ಯಾವ ಪರಿಣಾಮವೂ ಕೇವಲ ಪುನಃಶ್ಚರಣೆಯಲ್ಲ. ಯಾವುದೊಂದೂ ಆ ಸ್ಥಿತಿಯಲ್ಲಿ ಎಲ್ಲ ಕಾಲಕ್ಕೂ ಹಾಗೆಯೇ ಉಳಿದಿರುವುದಿಲ್ಲ. ಪ್ರತಿಯೊಂದು ವಸ್ತುವೂ ಸದಾ ಪರಿಣಾಮಗೊಳ್ಳುತ್ತಾದ್ದರಿಂದ ಅದರ ಮುಖದ ಮೇಲೆ ನವತ್ವದ ಮೆರುಗು ಅಚ್ಚಳಿಯದೆ ಇರುತ್ತದೆ. ಒಂದು ಕಲ್ಲಿನ ಹರಳಾಗಲಿ, ಸ್ಫಟಿಕವಾಗಲಿ, ಗಿಡವಾಗಲಿ, ಕ್ರಿಮಿಯಾಗಲಿ ಯಾವುದೊಂದೂ ಎರಡು ಕ್ಷಣಕಾಲ ಒಂದೇ ಸಮನಾಗಿ ನಿಂತಿರುವುದಿಲ್ಲ; ತಾನೇ ತಾನಾಗಿ ಪ್ರತ್ಯೇಕವಾಗಿಯೂ ಇರುವುದಿಲ್ಲ. ಇತರ ಪದಾರ್ಥಗಳ ಕೇವಲ ಬಹಿರಂಗ ಸಂಸರ್ಗದಿಂದಲೊ ಅವುಗಳ ಅಂತರಂಗರೂಪವಾದ ಸಮವಾಯೀಕರಣದಿಂದ ತನ್ನೊಳಕ್ಕೆ ಹೀರಿಕೊಳ್ಳುವುದರ ಮೂಲಕವೂ ಅವನ್ನು ಅದು ತನ್ನ ಹೊರಗೂ ಒಳಗೂ ಪ್ರತಿಫಲಿಸುತ್ತದೆ. ಆದ್ದರಿಂದ ಪ್ರತಿಯೊಂದೂ ತನ್ನದೇ ಆದ ನವತ್ವವನ್ನೂ ವೈಶಿಷ್ಟ್ಯವನ್ನೂ ಪಡೆದಿರುತ್ತದೆ. ಆದರೆ ಈ ವೈಶಿಷ್ಟ್ಯಕ್ಕೆ ತಾನಲ್ಲದೆ ಇತರ ಕಾರಣಗಳೂ ಉಂಟು. ಆ ವೈಶಿಷ್ಟ್ಯ ಎರಡರ ಅಭಿವ್ಯಕ್ತಿ. ಅಭಿವ್ಯಕ್ತವಾದ ಆ ಪರಿಣಾಮದಲ್ಲಿ ಎರಡೂ ಭಾಗಿಗಳು. ಎರಡರ ತಾದಾತ್ಮ್ಯವೇ ಆ ಅಭಿವ್ಯಕ್ತಿ. ಆದ್ದರಿಂದ ಅವೆರಡರ ಸೇರಿಕೆಯಾದ ಕಾರ್ಯರೂಪದಲ್ಲಿ ಅವೆರಡೂ ಅಂತರ್ಗತವಾಗಿವೆ. ಈ ದೃಷ್ಟಿಯಿಂದ ಕಾರ್ಯದಲ್ಲಿ ಕಾರಣವೂ ಕಾರಣದಲ್ಲಿ ಕಾರ್ಯವೂ ಅಂತರ್ಗತ. ಈ ಕಾರ್ಯಕಾರಣ ಸಂಬಂಧ, ಕಾರಣವೂ ಕಾರ್ಯವೂ ಒಂದೇ ಎಂಬ ಸತ್ಕಾರ್ಯವಾದವೂ ಅಲ್ಲ, ಕಾರಣದಲ್ಲಿ ಕಾರ್ಯವಿಲ್ಲ ಎಂಬ ಅಸತ್ ಕಾರ್ಯವಾದವೂ ಅಲ್ಲ. ಇದು ಸದಸದ್ ಕಾರ್ಯವಾದ. ಕಾರ್ಯ ಕಾರಣದಿಂದ ಏಕತೆಯಿಲ್ಲದ ಅತ್ಯಂತ ಭಿನ್ನತೆಯೂ ಅಲ್ಲ, ಭಿನ್ನತೆ ಇಲ್ಲದ ಏಕೈಕತೆಯೂ ಅಲ್ಲ. ಅದು ಭಿನ್ನಾಭಿನ್ನ. ಎಲ್ಲ ಸತ್ತಿನ ಸ್ವಭಾವವೇ ಈ ಭಿನ್ನಾಭಿನ್ನತೆಯಾದ್ದರಿಂದ, ಈ ಹೊಸ ಭೌತತತ್ತ್ವ ಸತ್ತಾದ್ವೈತದ ಸತ್ಕಾರ್ಯವಲ್ಲ. ಆ ಸತ್ತಾದ್ವೈತದಲ್ಲಿ ಕಾರ್ಯ ಕಾರಣ ಒಂದೇ ಎಂಬ ಭಾವನೆ ಇರುತ್ತದೆ. ಬದಲಾವಣೆ ಕೇವಲ ಮಿಥ್ಯೆ ಎಂದು ಆ ವಾದ ಎಣಿಸುತ್ತದೆ. ಈ ಹೊಸ ಭೌತ ಏಕತ್ವವಾದದ ಪ್ರಕಾರ, ಸತ್ ಎಲ್ಲ ಕಾಲದಲ್ಲೂ ಭಿನ್ನತೆಯಿಂದ ಕೂಡಿದ ಏಕತೆಯ ರೂಪದಿಂದಲೇ ಇರುತ್ತದೆ. ಭಿನ್ನತೆ, ಬದಲಾವಣೆಗಳಿಲ್ಲದ ಏಕತೆ ಎಂದಿಗೂ ಇಲ್ಲ, ಯಾವುದರಲ್ಲಿಯೂ ಇಲ್ಲ. ಎಲ್ಲ ಕಾರ್ಯ ರೂಪಗಳಿಗೂ ಕಾರಣರೂಪಗಳಿಗೂ ಸಮಾನವಾದ ಸ್ವಭಾವ ಇದು. ಅಲ್ಲದೆ ಈ ತತ್ತ್ವ ಯಾವುದೂ ಕೇವಲ ಕಾರಣರೂಪವಾಗಿಯೇ ಅಥವಾ ಕೇವಲ ಕಾರ್ಯ ರೂಪವಾಗಿಯೇ ಇರಬಹುದೆಂಬುದನ್ನು ನಿರಾಕರಿಸುತ್ತದೆ. ಸತ್ ಸದಾ ಕಾರ್ಯಕಾರಣ ರೂಪವೇ. ಈಗ ಕಾರ್ಯವೆಂದು ನಾವು ಎಣಿಸುವುದು ಅದಕ್ಕಿಂತ ಹಿಂದೆ ಕಾರಣ ರೂಪದಲ್ಲಿತ್ತು. ಈಗ ಕಾರಣರೂಪದಲ್ಲಿರುವುದು ಮುಂದಿನ ಕಾರ್ಯರೂಪಕ್ಕೆ ಕಾರಣವಾಗುತ್ತದೆ.

ಯಾವ ವಸ್ತುವೇ ಆಗಲಿ ಅದು ಹಿಂದಿನದನ್ನು ತನ್ನೊಳಕ್ಕೆ ಎಳೆದುಕೊಂಡೇ ಸೆಳೆದುಕೊಂಡೇ ಸೇರಿಸಿಕೊಂಡೇ ಇಂದಿನದಾಗುವುದು. ಇಂದಿನದೆಂಬುದು ನಿನ್ನೆಯದರ ಭವಿಷ್ಯ. ಇಂದಿನದು ಭೂತಭವಿಷ್ಯಗಳು ಸಂಧಿಸುವ ಕೇಂದ್ರ. ಹಿಂದಿನದು ಮುಂದಿನದಕ್ಕೆ ನೂಕು ಕೊಡುತ್ತದೆ. ಮುಂದಿನದು ಹಿಂದಿನದನ್ನು ಎಳಕೊಳ್ಳುತ್ತದೆ. ಮುಂದಿನದರಲ್ಲಿ ಹಿಂದಿನದೂ ಇದೆ, ಹಿಂದಿನದರಲ್ಲಿ ಮುಂದಿನದೂ ಇದೆ. ಒಂದನ್ನೊಂದು ಬಿಟ್ಟರೆ ಎರಡೂ ಕುಸಿದು ಬೀಳುತ್ತವೆ. ಈ ತ್ರಿಕಾಲಸಾಮರಸ್ಯವನ್ನು ಬಿಟ್ಟು ಚಲನೆಯಾಗಲಿ, ಚಲನೆಯನ್ನು ಬಿಟ್ಟು ವಸ್ತುವಾಗಲಿ ಇರುವುದಿಲ್ಲ. ಹಿಂದಿನ ಭೌತವಾದಕ್ಕೂ ಈ ಹೊಸ ಭೌತವಾದಕ್ಕೂ ವ್ಯತ್ಯಾಸವಿರುವುದು ಇಲ್ಲಿ. ಚಲನೆ ಇಲ್ಲದ ಭೌತವಸ್ತುವಿದೆ, ಭೌತವಸ್ತುವಿನಿಂದ ಪ್ರತ್ಯೇಕವಾದ ಚಲನೆ ಇದೆ, ವಸ್ತುಚಲನೆಗಳಿಂದ ಪ್ರತ್ಯೇಕವಾಗಿ ದಿಕ್ ಮತ್ತು ಕಾಲಗಳು ಇವೆ, ಆಕಾಶವೆಂಬ ಖಾಲಿ ಜಾಗದಲ್ಲಿ ಅದಕ್ಕೆ ಬಾಹಿರವಾದ ವಸ್ತು ಇದೆ, ಕಾಲವೆಂಬ ಇನ್ನೊಂದು ವಸ್ತುವಿನಲ್ಲಿ ಅದರಿಂದ ಹೊರತಾದ ಚಲನೆ ಇದೆ. ಹೀಗೆ ಒಂದಕ್ಕೊಂದು ಆಂತರಿಕ ಸಂಬಂಧವಿಲ್ಲದ ಭೌತವಸ್ತು, ಚಲನೆ, ಆಕಾಶ, ಕಾಲ ಇವುಗಳ ಸಂಸರ್ಗವೇ ಈ ವಿಶ್ವವೆಂದು ಹಳೆಯ ಭೌತವಾದ ಎಣಿಸಿತ್ತು. ಈಗಿನ ಹೊಸ ಭೌತವಾದದ ಪ್ರಕಾರ ಅವು ಯಾವುದೊಂದೂ ಹೊರಚ್ಚಾಗಿ, ಪ್ರತ್ಯೇಕವಾಗಿ, ಒಂದಕ್ಕೊಂದು ಬಾಹಿರವಾಗಿ ಇರುವುದಿಲ್ಲ. ಚಲನೆಯನ್ನೊಳಗೊಳ್ಳದ ಭೌತವಸ್ತುವಿಲ್ಲ; ಆಕಾಶ ಮತ್ತು ಕಾಲವನ್ನೊಳಗೊಳ್ಳದ ವಸ್ತುವಾಗಲಿ ಚಲನೆಯಾಗಲಿ ಇಲ್ಲ; ಭಿನ್ನತೆ ಇಲ್ಲದ ಏಕಪ್ರಕಾರತೆಯೂ ಏಕತೆ ಇಲ್ಲದ ಭಿನ್ನತೆಯೂ ಇಲ್ಲ. ಈ ವಿಶ್ವ ಯಾವ ಕಾಲದಲ್ಲೂ ತಾನೇ ತಾನಾಗಿ ಇರಬಲ್ಲ, ಒಂದಕ್ಕೊಂದು ಬಾಹಿರವಾದ, ಏಕಾಕಿಯಾದ, ಅಂಟಿಲ್ಲದ ಸಂಬಂಧಗಳಿಲ್ಲದೆ ಸರಳರೂಪವಾಗಿ ಇರಲಿಲ್ಲ. ಹಾಗೆ ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ. ಈ ವಿಶ್ವ ಎಲ್ಲ ಕಾಲದಲ್ಲೂ ದೇಶ, ಕಾಲ, ಚಲನೆಗಳ ಆಂತರಿಕ ಸಂಬಂಧವನ್ನು ಒಳಗೊಂಡ ಭಿನ್ನಾಭಿನ್ನವಸ್ತು. ಈ ಹೊಸ ಭೌತವಾದವನ್ನು ಹಳೆಯದಾದ ಅವಿಚಾರ ರಮಣೀಯ ಭೌತವಾದದಿಂದ ಪ್ರತ್ಯೇಕಿಸಲು ಅದನ್ನು ವಿಚಾರರಮಣೀಯವಾದವೆಂದು ಮಾರ್ಕ್ಸ್, ಎಂಜೆಲ್,ಲೆನಿನ್ನರು ಕರೆದಿರುತ್ತಾರೆ. ಇದು ಹಳೆಯಕಾಲದ ಅಶಿಕ್ಷಿತ ಚಾರ್ವಾಕ ವಾದವಲ್ಲ, ಭಾರತೀಯರು ಹಿಂದೆ ಗುರುತಿಸಿದ್ದ ಸುಶಿಕ್ಷಿತ ಚಾರ್ವಾಕವಾದ. ಈ ವಾದವನ್ನು ಮಾರ್ಕ್ಸ್ ಮೊಟ್ಟ ಮೊದಲಿಗೆ ಸೂಚಿಸಿದನಾದರೂ ಅದು ಅಷ್ಟು ಮೈತುಂಬಿಕೊಂಡಿರಲಿಲ್ಲ. ಲೆನಿನ್ನಲ್ಲಿ ಅದು ಸ್ವಲ್ಪ ಮೈ ತುಂಬಿದೆ. ಲೆನಿನ್ನನಿಂದ ಈಚೆಗೆ ಬೆಳೆದ ವಿಜ್ಞಾನವನ್ನೂ ಮಾಕ್ರ್ಸ್‌ನ ವಾದಕ್ಕೆ ಇತರ ತಾತ್ತ್ವಿಕರು ಎತ್ತಿದ ಆಕ್ಷೇಪಗಳನ್ನೂ ಗಣನೆಗೆ ತೆಗೆದುಕೊಂಡು, ಹೊಸ ವಿಜ್ಞಾನಕ್ಕೆ ಹೊಂದುಕೊಳ್ಳುವಂತೆಯೂ ಮಾಕ್ರ್ಸ್‌ನ ತತ್ತ್ವದಲ್ಲಿ ಕಾಣುವ ಅಸ್ಪಷ್ಟತೆಯನ್ನು ಹೋಗಲಾಡಿಸುವಂತೆಯೂ ಇಂದಿನ ವೈಚಾರಿಕಭೌತವಾದ ರೂಪುಗೊಳ್ಳುತ್ತಿದೆ. ಆ ವಿಚಾರವಾದ ಚಾರಿತ್ರಿಕವಾದವಾದುದರಿಂದ ಭವಿಷ್ಯದೃಷ್ಟಿಯಷ್ಟೇ (ಫ್ಯೂಚರಿಸಂ) ಸಂಪ್ರದಾಯದ ದೃಷ್ಟಿಯೂ (ಟ್ರೆಡಿಷನಲಿಸಂ) ಮುಖ್ಯವೆಂದು ಎಣಿಸುತ್ತದೆ. ಈ ಹೊಸಭೌತವಾದ ಇಂದು ತಾನು ಪ್ರತಿಪಾದಿಸುತ್ತಿರುವ ತತ್ತ್ವವೇ ಕೊನೆಯ ಮಾತೆಂದು ಪರಿಗಣಿಸಿರುವುದಿಲ್ಲ. ಅದನ್ನು ಮೀರಿಸುವ, ಅದಕ್ಕಿಂತ ವಿಹಿತವಾದ ಮತ್ತು ಸುಂದರವಾದ ಭೌತವಾದಗಳು ಹುಟ್ಟಲೇಬೇಕು, ಹುಟ್ಟಿಯೇ ಹುಟ್ಟುತ್ತವೆ - ಎಂದು ಸಾರುತ್ತಿದೆ. ಆದ್ದರಿಂದ ಈಗಿರುವ ಭೌತವಾದ ಸದ್ಯದಲ್ಲಿ ಸಮರ್ಪಕವೆಂದು ತಿಳಿಯಬೇಕೇ ಹೊರತು ಹೊಸ ವಿವೇಚನೆ, ಹೊಸ ಜೀವನಕ್ಕೆ ಅವಕಾಶವೇ ಇಲ್ಲದಷ್ಟು ಪರಿಪುರ್ಣವೆಂದು ತಿಳಿಯಲಾಗದು. ಪ್ರತಿಯೊಂದು ಕಾಲದ ಜನರೂ ತಮ್ಮ ಸ್ಥಿತಿಗೆ ತಕ್ಕಂತೆ ವಿವೇಚನೆ ನಡೆಸುತ್ತಲೇ ಇರಬೇಕು. ಏಕೆಂದರೆ ಹಿಂದಿನವರು ಹಾಗೆ ವಿವೇಚನೆ ನಡೆಸಿದ್ದುದರಿಂದಲೇ ಅವರು ತಮ್ಮ ಬಾಳನ್ನು ರೂಪಿಸಿಕೊಂಡದ್ದು. ನಮ್ಮ ಬಾಳನ್ನು ರೂಪಿಸಿಕೊಳ್ಳುವುದು ನಮ್ಮ ಪಾಲಿಗೆ ಬಂದ ಜವಾಬ್ದಾರಿ. ಯಾವ ಕಾಲದವರೂ ಈ ಜವಾಬ್ದಾರಿಯನ್ನು ಬಿಟ್ಟುಕೊಡಲಾಗದು. ಈ ಜವಾಬ್ದಾರಿಯ ಅರಿವಿಲ್ಲದ ಜನರ ಜೀವನ ಹುರುಳಿಲ್ಲದ ಜಳ್ಳು ಜೀವನವಾಗಿ ಪರಿಣಮಿಸುತ್ತದೆ.

ಬಹುಮುಖ ವಿಮರ್ಶೆ

ಬದಲಾಯಿಸಿ

ಡಯಲೆಕ್ಟಿಕ್ ಎಂಬ ಪದದ ಅರ್ಥವನ್ನು ಸೂಚಿಸಿದಲ್ಲದೆ ಭೌತವಾದದ ವಿವೇಚನೆ ಪುರ್ಣವಾಗುವುದಿಲ್ಲ. ಈ ಪದ ಪಾಶ್ಚಾತ್ಯ ತತ್ತ್ವಶಾಸ್ತ್ರದಲ್ಲಿ ತುಂಬ ಪ್ರಭಾವಶಾಲಿಯಾದುದು. ಇದು ಹುಟ್ಟಿದ್ದು ಪ್ಲೇಟೊವಿನ ಚಿತ್ ಪ್ರಧಾನವಾದ ತತ್ತ್ವದಲ್ಲಿ. ಡಯಲೆಕ್ಟಿಕ್ ಎಂದರೆ ಬಹುಮುಖವಾದ ವಿಮರ್ಶೆ. ಏಕಪ್ರಕಾರ ಒಂದೇ ಸರಣಿಯಲ್ಲಿ ಆಲೋಚನೆಯನ್ನು ನಡೆಸಿದರೆ ಆಲೋಚನೆ ಗೊಡ್ಡುಬೀಳುತ್ತದೆ. ವಿಚಾರ ಹುಟ್ಟುವುದಕ್ಕೆ ಎರಡು ಪಕ್ಷಗಳಾದರೂ ಇರಬೇಕು. ಮನುಷ್ಯ ಏಕಾಕಿಯಲ್ಲ, ಸಮಾಜಜೀವಿ. ಇಬ್ಬರಿಲ್ಲದೇ ಮನುಷ್ಯಜನ್ಮವೇ ಅಸಾಧ್ಯ. ಹೆಣ್ಣೂ ಆಲೋಚಿಸಬೇಕು. ಗಂಡೂ ಆಲೋಚಿಸಬೇಕು. ತಮ್ಮ ಸ್ಥಿತಿಗತಿ, ದೇಹಧರ್ಮ, ಮನೋಧರ್ಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಲೋಚಿಸಬೇಕು. ತನ್ನತನವನ್ನು ಯಾರೂ ನಿರಾಕರಿಸಲಾಗುವುದೂ ಇಲ್ಲ, ನಿರಾಕರಿಸಬೇಕಾದ ಅಗತ್ಯವೂ ಇಲ್ಲ. ನಮ್ಮನ್ನು ನಾವು ಬಿಟ್ಟರೆ, ನಮ್ಮಿಂದ ನಾವು ದೂರಸರಿದುಬಿಟ್ಟರೆ, ನಮ್ಮನ್ನು ನಾವು ರಕ್ಷಿಸಿಕೊಳ್ಳದಿದ್ದರೆ, ನಮ್ಮಿಂದ ನಾವು ಸುಖ ದೊರಕಿಸಿಕೊಳ್ಳಲಾಗಿದಿದ್ದರೆ, ಬೇರೆ ಯಾರಿಂದಲೂ ಅವರು ಎಷ್ಟೇ ಸಮರ್ಥರಾದರೂ-ರಕ್ಷಣೆ ಇಲ್ಲ, ಬಿಡುಗಡೆ ಇಲ್ಲ, ಸೌಖ್ಯವಿಲ್ಲ. ನಮ್ಮನ್ನು ನಾವು ನಿರಾಕರಿಸಲಾಗದಿದ್ದರೆ ಇತರರೂ ತಮ್ಮನ್ನು ತಾವು ನಿರಾಕರಿಸಲಾಗುವುದಿಲ್ಲ. ಈ ಮುಖ್ಯ ಅಂಶವನ್ನು ಗ್ರಹಿಸಿದರೆ ಒಂದು ಸಾರ್ವತ್ರಿಕ ತತ್ತ್ವ ದೊರೆತಂತಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಕಾಲುಗಳ ಮೇಲೆ ನಿಲ್ಲಬೇಕು. ಇತರರನ್ನೂ ಹಾಗೆಯೆ ತಮ್ಮ ಕಾಲಿನ ಮೇಲೆ ನಿಲ್ಲಲು ಅವಕಾಶ ಕೊಡಬೇಕು. ಹಾಗಾದರೆ ಇಬ್ಬರಲ್ಲೂ ಸಾಮರಸ್ಯ ಕುದುರುತ್ತದೆ. ಮನುಷ್ಯಜೀವನಕ್ಕೆ ಹೊಂದುವ ಈ ತತ್ತ್ವ ಎಲ್ಲಕ್ಕೂ ಅನ್ವಯವಾಗುತ್ತದೆ. ಈ ವಿಶ್ವದಲ್ಲಿ ಪ್ರತಿಯೊಂದು ವಸ್ತುವೂ ತನ್ನತನವನ್ನು ಪಡೆದಿರುತ್ತದೆ. ಪ್ರತಿಯೊಂದು ವಸ್ತುವು ಅದೇ ವಿಧವಾದ ತನ್ನತನವನ್ನು ಪಡೆದ ಇತರ ವಸ್ತುಗಳೊಡನೆ ಸಂಬಂಧ ಪಡೆದಿರುತ್ತದೆ. ಪ್ರತಿಯೊಂದು ವಸ್ತುವೂ ಶಕ್ತಿಪುಂಜವಾಗಿದೆ. ಅದು ಬೆಳೆಯುವ ವಸ್ತು. ಆದರೆ ಈ ಒಂದೊಂದರ ಬೆಳೆವಣಿಗೆಯೂ ಇತರ ವಸ್ತುಗಳ ಬೆಳೆವಣಿಗೆಗೆ ಸಾಪೇಕ್ಷವಾಗಿರುತ್ತದೆ. ಒಂದನ್ನು ಬಿಟ್ಟು ಇನ್ನೊಂದು ಬೆಳೆಯುವಂತಿಲ್ಲ. ಆದ್ದರಿಂದ ಯಾವ ವಸ್ತುವು ಬೆಳೆಯಬೇಕಾದರೂ ತನ್ನತನವನ್ನು ಬಿಡುವಂತಿಲ್ಲ. ಇತರ ವಸ್ತುಗಳೊಡನೆ ಸಂಬಂಧವನ್ನೂ ಬಿಡುವಂತಿಲ್ಲ, ವಸ್ತು ವಸ್ತುವಿಗೆ ಇರುವ ಭೇದವನ್ನೂ ಸಂಬಂಧವನ್ನೂ ನಿರಾಕರಿಸಲಾಗುವುದಿಲ್ಲ. ವಸ್ತುಸ್ಥಿತಿ ಹೀಗಿರುವುದರಿಂದ ಒಂದಕ್ಕೊಂದು ಪ್ರತಿಯಾಗಿ ನಿಲ್ಲುವುದು, ಅನಿವಾರ್ಯ. ಇವುಗಳ ಘರ್ಷಣೆ ಅನಿವಾರ್ಯ. ಅಂತೆಯೆ ಘರ್ಷಣೆಯನ್ನು ಮೆಟ್ಟಿ ಸಮರಸ ಸಂಬಂಧವನ್ನು ಕುದುರಿಸುವುದೂ ಅಷ್ಟೇ ಅನಿವಾರ್ಯ. ವಿಶ್ವ ಬೆಳೆಯುತ್ತಿರುವುದಕ್ಕೆ ಈ ಘರ್ಷಣೆ ಒಂದು ರೆಕ್ಕೆಯಾದರೆ ಸಾಮರಸ್ಯ, ಹೊಂದಿಕೆ ಇನ್ನೊಂದು ರೆಕ್ಕೆ. ಈ ವಿಶ್ವಕ್ರಿಯೆಯ ಸಾರ್ವತ್ರಿಕ ಸ್ವರೂಪ ದ್ವಂದ್ವದಿಂದ ನಿದರ್ವ್‌ಂದ್ವವನ್ನು ಕುದುರಿಸುವುದು. ಈ ಬೆಳೆವಣಿಗೆಯ ರೀತಿಯನ್ನೇ ಮಾಕ್ರ್ಸ್‌ ಮತ್ತು ಲೆನಿನ್ ಡಯಲೆಕ್ಟಿಕಲ್ ಪ್ರೋಸೆಸ್ ಎಂದು ಕರೆದಿರುವುದು. ಈ ತತ್ತ್ವವೇ ವಿಶ್ವಕ್ರಿಯೆಯ ಭೌತವಸ್ತುಗಳ, ಸಸ್ಯಗಳ, ಪ್ರಾಣಿಗಳ-ಹೀಗೆ, ಎಲ್ಲದರ ಕ್ರಿಯೆಯ ಮರ್ಮವನ್ನೂ ತೆರೆದು ತೋರಿಸುವ ಬೀಗದ ಕೈ.

ವಿಶ್ವವು ಬೆಳೆದು ನವನವೋನ್ಮೇಷಕವಾಗುತ್ತಿದೆ. ಹೊಸ ಬೆಲೆಗಳು ಹುಟ್ಟುತ್ತಿವೆ. ವಿಷಮ ಸ್ಥಿತಿಯಿಂದ ಸಮಸ್ಥಿತಿ ಹುಟ್ಟುತ್ತಿದೆ. ಕಾಲಾಂತರದಲ್ಲಿ ಅಸಮಸ್ಥಿತಿ ಉದ್ಭವಿಸಬಹುದು. ವಿಶ್ವದ ಬೆಳೆವಣಿಗೆ ಏಕಪ್ರಕಾರವಾದದ್ದಲ್ಲ, ಅನೇಕ ಪ್ರಕಾರವಾದದ್ದು. ಅದರದು ಎಂದೆಂದಿಗೂ ಮುಗಿಯದ ಚರಿತ್ರೆ. ಹೊಸಭೌತವಾದಿಗಳ ಈ ಡಯಲೆಕ್ಟಿಕ್ ಕ್ರಮಕ್ಕೆ ಹೆಗೆಲ್ಲನ ಡಯಲೆಕ್ಟಿಕ್ ಮುಖ್ಯವಾದ ಪ್ರಚೋದನೆ. ಹೊಸಭೌತವಾದಿಗಳು ಅದನ್ನು ಮಾರ್ಪಡಿಸಿ ಭೌತವಾದಕ್ಕೆ ಹೊಂದಿಸಿಕೊಂಡಿದ್ದಾರೆ. ಹೆಗೆಲ್ ಇರವು ಅರಿವು ಒಂದೇ, ಇರವು ಚಿದ್ರೂಪವಾದದ್ದು-ಎಂಬ ತತ್ತ್ವವನ್ನೂ ತನ್ನ ತತ್ತ್ವದ ಆಧಾರಪ್ರತಿಜ್ಞೆಯಾಗಿ ಅಂಗೀಕರಿಸಿದ. ಭೌತ ವಸ್ತು ಅಂತಿಮವಾಗಿ ಮಿಥ್ಯೆ ಎಂದು ಸಿದ್ಧಾಂತ ಮಾಡಿದ. ಪರಮಚೈತನ್ಯವೇ ಪರಮ ಸತ್. ಅದರಲ್ಲಿ ಎಲ್ಲವೂ ಸಮರಸವಾಗುತ್ತದೆ. ಉಳಿದೆಲ್ಲವೂ ಬದಲಾಯಿಸುತ್ತಿದ್ದರೂ ಅದು ಮಾತ್ರ ಬದಲಾಯಿಸುವುದಿಲ್ಲ. ಉಳಿದೆಲ್ಲವೂ ಅಪರಿಪುರ್ಣವಾದುದರಿಂದ ಅವುಗಳಲ್ಲಿ ಪರಸ್ಪರ ಗೊಂದಲ, ತಿಕ್ಕಾಟ, ಅನಿವಾರ್ಯ. ಚಿದ್ರೂಪವಾದ ಸತ್ ಪರಿಪುರ್ಣವಾದುದರಿಂದ. ಅದರಲ್ಲಿ ಗೊಂದಲವಿಲ್ಲ, ತಿಕ್ಕಾಟವಿಲ್ಲ, ಚರಿತ್ರೆ ಇರುವುದು ಲೋಕವಸ್ತುಗಳಿಗೇ ಹೊರತು ಈ ಅಲೌಕಿಕ ಚೈತನ್ಯಕ್ಕಲ್ಲ. ಇದಕ್ಕೆ ಹುಟ್ಟಿಲ್ಲ, ಸಾವಿಲ್ಲ, ಬೆಳೆವಣಿಗೆ ಇಲ್ಲ. ಸಾವಿರ ಚರಿತ್ರೆಗಳನ್ನು ಒಳಗೊಂಡಿದ್ದರೂ ಇದು ಮಾತ್ರ ಚರಿತ್ರೆಗೆ ಒಳಪಟ್ಟಿದ್ದಲ್ಲ. ದ್ವಂದ್ವ ವಿಶ್ವಕರ್ಮವೇ ಹೊರತು ವಿಶ್ವಾತೀತವಾದ ಪರಮ ಸತ್ ನಿರ್ ದ್ವಂದ್ವವಾದದ್ದು-ಎಂಬುದು ಹೆಗೆಲ್ಲನ ಅಂತಿಮ ಸಿದ್ಧಾಂತ.

ಡಯಲೆಕ್ಟಿಕ್ ಭೌತವಾದಿಗಳು ಚೈತನ್ಯ ಪರಮವೆಂಬುದನ್ನು ಒಪ್ಪುವುದಿಲ್ಲ. ಬದಲಾವಣೆ ಇಲ್ಲದ, ಘರ್ಷಣೆಯನ್ನು ಒಳಗೊಳ್ಳದ, ಭೌತರೂಪವಿಲ್ಲದ ಸ್ವಪರಿಪುರ್ಣವಾದ ಸತ್ ಇದೆ ಎಂದು ಹೇಳುವುದು ಅವಾಸ್ತವಿಕ, ಕೇವಲ ಕಟ್ಟು ಕಥೆ, ಮಿಥ್ಯಾ ಭಾವನೆ. ಇರುವುದೆಲ್ಲ ಅಪುರ್ಣವೇ. ಅದು ಅಪುರ್ಣವಾದ ಸದ್ಯಸ್ಥಿತಿಯಿಂದ, ಕಾಲಗತಿಯಿಂದ ಆ ಗತಿಯನ್ನು ಪುರೈಸುವ ಸದ್ಯದ ತಾತ್ಕಾಲಿಕವಾದ ಪುರ್ಣತೆಯನ್ನು ಮುಟ್ಟುತ್ತದೆಯೇ ಹೊರತು, ಸಾರ್ವಕಾಲಿಕ ಪುರ್ಣತೆ ಎಂದೆಂದಿಗೂ ಇಲ್ಲ, ಎಲ್ಲಿಯೂ ಇಲ್ಲ. ಇಲ್ಲಿಗೆ ಪುರ್ಣತೆ ಮುಟ್ಟಿದೆ. ಇನ್ನು ಮಾಡಬೇಕಾದ್ದೇನೂ ಇಲ್ಲವೆಂದು ಈ ಲೋಕದಲ್ಲಿರುವ ಯಾವ ವಸ್ತುವನ್ನು ಕುರಿತಾಗಲಿ, ಯಾವ ವ್ಯಕ್ತಿಯನ್ನು ಕುರಿತಾಗಲಿ ಹೇಳುವಂತಿಲ್ಲ. ಸಾರ್ವಕಾಲಿಕ ನಿವೃತ್ತಿ ಎಲ್ಲೂ ಇಲ್ಲ. ಸರ್ವಕಾಲಕ್ಕೂ ನಿವೃತ್ತಿ ಪಡೆದ ಪರಮ ಚಿತ್ ಇದೆ ಎಂಬುದು ಪೌರಾಣಿಕ ಕಥೆ, ವಾಸ್ತವಕ್ಕಿಂತ ಬಹುದೂರವಾದದ್ದು. ಈ ವಿಶ್ವಕ್ರಿಯೆ ಮುಗಿದ ಯುದ್ಧವೂ ಅಲ್ಲ. ಮುಗಿದ ಶಾಂತಿಯೂ ಅಲ್ಲ. ನಿವೃತ್ತಿ, ಶಾಂತಿ ಸೌಖ್ಯ ಮುಂತಾದ ಎಲ್ಲ ಬೆಲೆಗಳೂ ಸದ್ಯದ ನಿವೃತ್ತಿ, ಸದ್ಯದ ಶಾಂತಿ, ಸದ್ಯದ ಸೌಖ್ಯ. ಸದ್ಯಸ್ಥಿತಿಯಿಂದ ಸದ್ಯಸ್ಥಿತಿಗೆ ಹಾಯುವುದೇ ಇಲ್ಲಿ ಇರುವುದೆಲ್ಲದರ ಸಾರ್ವತ್ರಿಕ. ಸಾರ್ವಕಾಲಿಕ ಪಥ. ಈ ಪಥ ಕೊನೆಮೊದಲಿಲ್ಲದ್ದು. ಈ ವಿಶ್ವ ತೆರೆದ ವಿಶ್ವ. ಅದಕ್ಕೆ ಅನಂತ ಭೂತವಿದ್ದಂತೆಯೇ ಅನಂತ ಭವಿಷ್ಯವೂ ಇದೆ, ಅನಂತ ವರ್ತಮಾನವೂ ಇದೆ. ಇಲ್ಲಿಗೆ ಎಲ್ಲವೂ ಮುಗಿಯಿತು, ಬ್ರಹ್ಮಾಂಡ ಇಲ್ಲಿಗೆ ಕೊನೆ ಮುಟ್ಟಿತು, ಇನ್ನೇನನ್ನು ಮಾಡಬೇಕಾದ್ದಿಲ್ಲ ಎಂದು ಕೈಕಟ್ಟಿಕೊಂಡು ಕುಳಿತುಕೊಳ್ಳುವ ಮನೋಧರ್ಮವನ್ನು ಈ ಹೊಸ ಭೌತವಾದ ಖಂಡಿಸುತ್ತದೆ. ಈ ವಿಶ್ವ ಅನಂತವಾಗಿ ವಿಸ್ತರಿಸುತ್ತಿರುವ ವಿಶ್ವ, ಅನಂತವಾಗಿ ತೆರೆದ ವಿಶ್ವ-ಎಂಬುದು ಈ ತತ್ತ್ವದ ಮುಖ್ಯ ಅಂಶ. ಈ ಹೊಸ ತತ್ತ್ವ ಚಿದದ್ವೈತ ಮನೋಭಾವವನ್ನು ಅಕರ್ಮಭಾವವೆಂದೂ ಕರ್ಮದಿಂದ ದೂರಸರಿಯುವ ಮನೋಭಾವವೆಂದೂ ಆಲಸಿಕೆಯ ಮನೋಭಾವವೆಂದೂ ದುಡಿಮೆಯಿಂದ ಹಿಂಜರಿದು, ಹಗಲುಗನಸನ್ನು ಕಾಣುವ ಮನೋಭಾವವೆಂದೂ ಹಲವು ವಿಧವಾಗಿ ಹಳಿಯುತ್ತದೆ. ಈ ಭೌತವಾದ ಜಪಿಸುವ ಮಂತ್ರ ಇದು : ದೈವವನ್ನು ಒತ್ತಳ್ಳಿ ಆತ್ಮಪೌರುಷದಿಂದ ಬಾಳು; ನಮ್ಮೆಲ್ಲರ ಆಲಸಿಕೆಗೂ ಕ್ರಿಯೆ ಇಲ್ಲದ, ಕರ್ಮವಿಲ್ಲದ, ಪ್ರಪಂಚದಿಂದ ದೂರವಾಗಿ ಹೊರತಾಗಿ ತಾನೇ ತಾನಾಗಿ ಇರುವ ದೈವವಿದೆಯೆಂಬ ನಂಬಿಕೆ ಕಾರಣ. ನಿಜವಾದ ಕರ್ಮ ಯೋಗ ನಮ್ಮದಾಗಬೇಕು. ಸದಾ ಕರ್ಮ ಮಾಡುವುದರಿಂದಲೇ ಜೀವನ ಹಸನಾಗುವುದು. ಈ ಕರ್ಮಕ್ಕೆ ಕಾರಣ ಭೌತವಸ್ತು, ಆಹಾರ. ನಮ್ಮ ಶೀಲ ಸದ್ಗುಣಗಳನ್ನು ಒರೆ ಹಚ್ಚಿ ನೋಡಬೇಕಾದರೆ. ಯಾರನ್ನೂ ದಂಡಿಸದೆ ಯಾರ ಅನ್ನವನ್ನೂ ಕಿತ್ತುಕೊಳ್ಳದೆ ನಾವು ಹೇಗೆ ಬಾಳುತ್ತೇವೆ ಎಂಬುದನ್ನು ಪರೀಕ್ಷಿಸಬೇಕು. ಅನ್ನಕ್ಕಾಗಿ ದುಡಿಯುತ್ತೇವೆ. ಈ ಅನ್ನಪ್ರಾಯವಾದ ವಿಶ್ವದಲ್ಲಿರುವ ಸಮಸ್ತ ವಸ್ತುಗಳನ್ನೂ ಗೌರವಿಸಿ, ಅವು ಸಾರ್ವತ್ರಿಕವಾದುವು, ನಮ್ಮ ಖಾಸಗಿ ಸ್ವತ್ತಲ್ಲ ಎಂದು-ಭಾವಿಸಿ, ಅವನ್ನು ಪೋಲುಮಾಡದೆ, ಅವು ವರ್ಧಿಸುವಂತೆ ಮಾಡಿ. ಹೆಚ್ಚಿಸಿದ್ದನ್ನು ಎಲ್ಲರೂ ಹಂಚಿಕೊಂಡು, ಯಾರು ಯಾರನ್ನೂ ಆಳಾಗಿ, ತೊತ್ತಾಗಿ ಎಣಿಸದೆ ಭೋಗಿಸುವುದನ್ನು ಕಲಿಯುವುದೇ, ಕಲಿಸುವುದೇ ಈ ತತ್ತ್ವದ ಧರ್ಮ. ಈ ಹೊಸ ಭೌತಾದ್ವೈತ ತತ್ತ್ವಕ್ಕೆ ಇಂದಿನ ಹೊಸ ಚಿದದ್ವೈತದ ಉತ್ತರ ಇದು. ನಾವು ಯಾವುದನ್ನು ಚಿತ್ ಎಂದು ಕರೆಯುತ್ತೇವೆಯೊ ಅದನ್ನು ನೀವು ಭೌತವಸ್ತುವೆಂದು ಕರೆಯುತ್ತೀರಿ. ನಾವು ಹಿಂದಿನ ಭೌತವಾದವನ್ನು ಖಂಡಿಸಿದಂತೆಯೆ ನೀವೂ ಖಂಡಿಸುತ್ತೀರಿ. ಭೌತವಸ್ತು ಕೇವಲ ಜಡವಸ್ತುವಲ್ಲ, ಯಾಂತ್ರಿಕವಲ್ಲ. ಅದು ಸೃಷ್ಟ್ಯಾತ್ಮಕವಾದದ್ದು, ನವನವೋನ್ಮೇಷವಾದದ್ದು ಎಂದು ಹೇಳುತ್ತೀರಿ, ಅದು ಮಿತಿ ಇಲ್ಲದ್ದು ಅನಂತವಾದದ್ದು ಎಂದು ಹೇಳುತ್ತೀರಿ. ಈ ಸೃಷ್ಟ್ಯಾತ್ಮಕ ಲಕ್ಷಣವುಳ್ಳದ್ದು, ನಮೋನ್ಮೇಷವಾದದ್ದು ಚೇತನಕ್ಕೆ ಒಪ್ಪುವ ಲಕ್ಷಣಗಳೇ ಹೊರತು, ಭೌತವಸ್ತುವಿಗೆ ಒಪ್ಪತಕ್ಕವಲ್ಲ. ಅಲ್ಲದೆ ಚಿದದ್ವೈತಿಗಳು ಎಲ್ಲರೂ ಭೌತವಸ್ತುವೂ ಮಾನವ ಆತ್ಮವೂ ಅತ್ಯಂತ ಭಿನ್ನವೆಂಬ ದ್ವೈತವಾದಿಗಳಾಗಬೇಕಾಗಿಲ್ಲ. ಚೇತನವನ್ನು ಕೇವಲ ಮಾನವನ ಕ್ರಿಯೆಗೆ ಮಾತ್ರ ಕ್ಲುಪ್ತಗೊಳಿಸಬೇಕಾಗಿಲ್ಲ. ಮಾನವಲ್ಲಿರುವ ಚೇತನವೂ ಪ್ರಕೃತಿಯಲ್ಲಿರುವ ಚೇತನವೂ ಒಂದೇ ಚಿತ್ತಿನ ಭಿನ್ನರೂಪಗಳು. ಅವೆರಡಕ್ಕೂ ಭೇದವೂ ಇದೆ, ಅಭೇದವೂ ಇದೆ. ನೀವು ಪರಿಣಾಮವಾದವನ್ನು ಒಪ್ಪುತ್ತೀರಿ. ಭೇದಾಭೇದವಾದವನ್ನೊಪ್ಪದಿದ್ದರೆ ಪರಿಣಾಮವಾದ ಅರ್ಥಹೀನವಾಗುತ್ತದೆ. ಪ್ರಕೃತಿಯಲ್ಲಿ ಚಿದಂಶವಿಲ್ಲದೆ, ಇದ್ದಕ್ಕಿದ್ದಂತೆಯೇ ಚೇತನ ಸ್ವಭಾವ ಹುಟ್ಟುವುದು ಅಸಂಗತ, ಅಸಾಧ್ಯ. ಕೇವಲ ಸತ್ಕಾರ್ಯವಾದವನ್ನು ಒಪ್ಪಿದರೆ ಮಾನವ ಚೈತನೖವೂ ಪ್ರಕೃತಿಯಲ್ಲಿರುವ ಚೇತನವೂ ಭೇದರಹಿತವಾದ ಒಂದೇ ಎಂದು ಹೇಳಬೇಕಾಗುತ್ತದೆ. ಅದು ಅಸಂಗತ. ಮನುಷ್ಯ ವ್ಯಾಪಾರ ಮತ್ತು ಮೃಗಗಳ ವ್ಯಾಪಾರ, ಸಸ್ಯಗಳ ವ್ಯಾಪಾರ ಎಲ್ಲವೂ ಒಂದೇ ಆಗಲಾರವು. ಇದು ವಾಸ್ತವ ಅನುಭವಕ್ಕೆ ವಿರುದ್ಧ. ಹಾಗೆಯೇ ಅಸತ್ಕಾರ್ಯವಾದವೂ ಅಸಂಗತ. ಕಾರ್ಯ ಕೇವಲ ಇಲ್ಲದ್ದರಿಂದ ಹುಟ್ಟಿತೆಂದು ಹೇಳಬೇಕಾಗುತ್ತದೆ. ಮಾನವನ ಚೈತನ್ಯ ವಿಶ್ವದ ಎಲ್ಲದರಲ್ಲೂ ಇರುವ ಚೇತನದ ಒಂದು ಹೊಸರೂಪ, ಆ ಚೇತನದ ಒಂದು ಅಂಶ. ಮಾನವ ಹುಟ್ಟುವುದಕ್ಕೆ ಹಿಂದಿನ ಜೀವಿಯಲ್ಲಿ ಯಾವ ಬಗೆಯಾದ ಚೇತನವೂ ಇಲ್ಲದಿದ್ದ ಪಕ್ಷದಲ್ಲಿ, ಮಾನವನಲ್ಲಿ ಅದು ತೋರುವುದು ಕೇವಲ ಅಸಂಭವ.

ಡಯಲೆಕ್ಟಿಕಲ್ ಭೌತವಾದ ಕೇವಲ ಏಕರೂಪವಾದ ದ್ವೈತದಿಂದ ಭಿನ್ನವೆಂದು ಹೇಳಿಕೊಳ್ಳಬಹುದೇ ಹೊರತು ಭೇದಾಭೇದವನ್ನು ಒಳಗೊಂಡ ಪರಿಣಾಮ ರೂಪದ ಶಕ್ತಿವಿಶಿಷ್ಟಾದ್ವೈತಕ್ಕೂ ಅದಕ್ಕೂ ಭೇದ ತುಂಬ ಕಡಿಮೆ. ಡಯಲೆಕ್ಟಿಕಲ್ ಭೌತವಾದದ ಭೌತವಸ್ತು ಸೃಷ್ಟ್ಯಾತ್ಮಕವಾದದ್ದು, ಪ್ರಕೃತಿ ನವನವೋನ್ಮೇಷಶಾಲಿಯಾದದ್ದು. ಎಂದಮೇಲೆ ಅದಕ್ಕೂ ಭೇದ ಸಹಿತವಾದ, ಕಾಲದೇಶ ಸ್ವರೂಪಿಯಾದ ಶಕ್ತಿಯ ಪರಿಣಾಮವೇ ಈ ವಿಶ್ವ ಎಂದು ಹೇಳುವ ಶಕ್ತಿವಿಶಿಷ್ಟಾದ್ವೈತಕ್ಕೂ ತತ್ತ್ವದಲ್ಲಿ ಭೇದವಿಲ್ಲ. ರಷ್ಯದ ತಾತ್ತ್ವಿಕರು ಭಾರತೀಯ ಶಕ್ತಿತತ್ತ್ವವನ್ನು ಪರಿಚಯ ಮಾಡಿಕೊಂಡರೆ ಆಗ ತಮ್ಮ ತತ್ತ್ವಕ್ಕೆ ಆಧಾರವಾದ ತತ್ತ್ವವನ್ನು ಭೌತವಸ್ತುವೆಂದು ಕರೆಯುವುದಕ್ಕಿಂತ ಶಕ್ತಿ ಎಂದು ಕರೆಯುವುದು ಹೆಚ್ಚು ಸಮಂಜಸವೆಂದು ಮನಗಾಣಬಹುದು. ಅನ್ನದಿಂದ ಪ್ರಾಣ, ಪ್ರಾಣದಿಂದ ಮನಸ್, ಮನಸ್ಸಿನಿಂದ ವಿಜ್ಞಾನ, ವಿಜ್ಞಾನದಿಂದ ಆನಂದ, ಇವೆಲ್ಲವೂ ಭೇದಾಭೇದವುಳ್ಳ ಚೇತನಾತ್ಮಕವಾದ ಶಕ್ತಿಯ ಕ್ರಮವಾದ ಅಂತಸ್ತುಗಳು. ಭಾರತೀಯ ಏಕತ್ತ್ವವಾದ ವಿಷಯದ ವಿವರಗಳಿಗೆ ಅದ್ವೈತ.ಲೇಖನವನ್ನು ನೋಡಿ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: