ಮೇಜರ್ ಶೈತಾನ ಸಿಂಗ್, ಭಾರತೀಯ ಸೇನೆಯ ಅಧಿಕಾರಿ. ಒಬ್ಬ ಸೈನಿಕನಿಗೆ ದೊರೆಯುವ ಅತ್ಯುಚ್ಚ ಪುರಸ್ಕಾರವಾದ ಪರಮ ವೀರ ಚಕ್ರ (ಮರಣೋತ್ತರ) ಪ್ರಶಸ್ತಿಯಿಂದ ಪುರಸ್ಕೃತರು. ಆಗಿನ ಬ್ರಿಟಿಷ್ ಭಾರತದಲ್ಲಿ, ಈಗಿನ ರಾಜಾಸ್ಥಾನ ರಾಜ್ಯದ ಜೋಧಪುರ್ ಸಂಸ್ಥಾನದಲ್ಲಿ ೧೯೨೪ರಲ್ಲಿ ಜನಿಸಿದರು. ತಮ್ಮ ಡಿಗ್ರಿ ಪದವಿಯ ನಂತರ ಜೋಧಪುರ ಸೈನ್ಯ ಸೇರಿದರು. ಸ್ವಾತಂತ್ರ್ಯ ನಂತರ ಭಾರತೀಯ ಸೇನೆಯ ಕುಮಾವೋ ರೆಜಿಮೆಂಟ್‍ಗೆ ಅವರನ್ನು ವರ್ಗಾಯಿಸಲಾಯಿತು. ಇವರು ನಾಗಾಲ್ಯಾಂಡಿನ ಕಾರ್ಯಾಚರಣೆ, ೧೯೬೧ರ ಗೋವಾ ಮುಕ್ತಿ ಕಾರ್ಯಾಚರಣೆ ಮತ್ತು ೧೯೬೨ರ ಭಾರತ-ಚೀನ ಯುದ್ಧದಲ್ಲಿ ಹೋರಾಡಿದರು.

ಮೇಜರ್

ಶೈತಾನ ಸಿಂಗ್ ಭಾಟಿ

ಶೈತಾನ ಸಿಂಗ್ ಭಾಟಿ
ಶೈತಾನ ಸಿಂಗ್
ಜನನ೦೧ ಡಿಸೆಂಬರ್ ೧೯೨೪
ಜೋಧಪುರ್, ಬ್ರಿಟಿಷ್ ಭಾರತ
ಮರಣ೧೮ ನವೆಂಬರ್ ೧೯೬೨, ೩೭ ವರ್ಷ
en:Rezang La, ಜಮ್ಮು ಮತ್ತು ಕಾಶ್ಮೀರ/ಲಡಾಖ್
ವ್ಯಾಪ್ತಿಪ್ರದೇಶಭಾರತ ಭಾರತ
ಶಾಖೆ ಭಾರತೀಯ ಭೂಸೇನೆ
ಸೇವಾವಧಿ೧೯೪೯–೧೯೬೨
ಶ್ರೇಣಿ(ದರ್ಜೆ) ಮೇಜರ್
ಸೇವಾ ಸಂಖ್ಯೆIC-6400
ಘಟಕಕುಮಾವೋ ರೆಗಿಮೆಂಟ್-೧೩ ಕುಮಾವೋ
ಭಾಗವಹಿಸಿದ ಯುದ್ಧ(ಗಳು)ನಾಗಾಗಳ ಜೊತೆಗೆ ಯುದ್ಧ
೧೯೬೧ರ ಗೋವಾ ವಿಮೋಚನೆ
ಭಾರತ-ಚೀನ ಯುದ್ಧ
ಪ್ರಶಸ್ತಿ(ಗಳು) ಪರಮ ವೀರ ಚಕ್ರ
ಸಂಗಾತಿಶಗುನ್ ಕನ್ವರ್[೧]

೧೯೬೨ರ ಭಾರತ-ಚೀನ ಯುದ್ಧದಲ್ಲಿ, ಇವರ ೧೩ ಕುಮಾವೋ ರೆಜಿಮೆಂಟ್, ಚುಸುಲ್ ಎಂಬ ಜಾಗದಲ್ಲಿತ್ತು. ಇವರ ಮುಂದಾಳತ್ವದ 'ಸಿ'(ಚಾರ್ಲಿ) ಕಂಪನಿ ರೆಜಾಂಗ್ ಲಾ ಎಂಬ ಜಾಗದಲ್ಲಿತ್ತು. ೧೮ ನವೆಂಬರ್ ೧೯೬೨ರಂದು ಚೀನಿಯರು ಈ ಪೋಸ್ಟಿನ ಮೇಲೆ ಆಕ್ರಮಣ ಮಾಡಿದರು. ಮೊದಲು ಮುಂದಿನಿಂದ ನಂತರ ಹಿಂದಿನಿಂದ. ಈ ಹೋರಾಟದಲ್ಲಿ ಭಾರತೀಯ ಸೈನಿಕರು ಅತ್ಯಂತ ಪರಾಕ್ರಮದಿಂದ ಕಡೆಯ ಗುಂಡಿನವರೆಗೂ ಹೋರಾಡಿದರು. ಶೈತಾನ್ ಸಿಂಗ್‍ರು ಇಡೀ ಕಂಪನಿಯನ್ನು ಹುರಿದುಂಬಿಸುತ್ತಾ ಹೋರಾಡಿ, ಗುಂಡುಗಳಿಂದ ಜರ್ಜರಿತವಾಗಿ ವೀರ ಮರಣವನ್ನು ಹೊಂದಿದರು. ಈ ಅಪ್ರತಿಮ ಹೋರಾಟಕ್ಕಾಗಿ ಮರಣೋತ್ತರವಾಗಿ ಪರಮ ವೀರ ಚಕ್ರ ಪಡೆದರು.

ಬಾಲ್ಯ ಮತ್ತು ಪ್ರಾರಂಭದ ದಿನಗಳು ಬದಲಾಯಿಸಿ

ಶೈತಾನ ಸಿಂಗ್‍ರ ಜನನವು, ೧ ಡಿಸೆಂಬರ್ ೧೯೨೪ ರಂದು, ರಾಜಾಸ್ಥಾನದ, ಜೋಧಪುರ ಜಿಲ್ಲೆಯ ಬನಸಾರ್ ಎಂಬ ಹಳ್ಳಿಯಲ್ಲಿ ಒಂದು ರಾಜಪೂತ್ ಕುಟುಂಬದಲ್ಲಿ ಆಯಿತು[೨]. ಅವರ ತಂದೆ ಹೇಮ್ ಸಿಂಗ್ ಕೂಡ ಬ್ರಿಟಿಷರ ಕಾಲದಲ್ಲಿ ಭಾರತೀಯ ಸೈನ್ಯದಲ್ಲಿ ಲೆಫ್ಟೆನೆಂಟ್ ಕರ್ನಲ್ ಆಗಿದ್ದರು. ಎರಡನೇ ಮಹಾಯುದ್ಧದಲ್ಲಿ ಅವರಿಗೆ ಆರ್ಡರ್ ಆಫ ದಿ ಬ್ರಿಟಿಷ್ ಎಂಪೈರ್ (ಓ.ಬಿ.ಇ - OBE) ಕೊಟ್ಟು ಸನ್ಮಾನಿಸಲಾಯಿತು. ಶೈತಾನ ಸಿಂಗ್ ಜೋಧಪುರದಲ್ಲಿ ಜಸ್ವಂತ್ ಕಾಲೇಜಿನಿಂದ ತಮ್ಮ ಪದವಿಯನ್ನು ೧೯೪೭ರಲ್ಲಿ ಪಡೆದರು[೩].

ಸೈನ್ಯದಲ್ಲಿ ಬದಲಾಯಿಸಿ

೧೯೪೭ರಲ್ಲಿ ಅವರು ಜೋಧಪುರದ ಸೈನ್ಯ ಸೇರಿದರು. ಭಾರತದ ಸ್ವಾತಂತ್ರ್ಯದ ನಂತರ ಜೋಧಪುರ ರಾಜ್ಯವು ಭಾರತದೊಂದಿಗೆ ವಿಲೀನವಾಯಿತು. ಶೈತಾನ ಸಿಂಗ್‍ ಸೈನ್ಯ ಶಿಕ್ಷಣವನ್ನು ಪೂನಾದಲ್ಲಿ ಪಡೆದರು. ಶೈತಾನ ಸಿಂಗ್‍ರನ್ನು ಕುಮಾವೋ ರೆಜಿಮೆಂಟಿಗೆ ೧೯೫೪ರಲ್ಲಿ ವರ್ಗಾವಣೆ ಮಾಡಲಾಯಿತು [೩]. ನಾಗಾಲ್ಯಾಂಡಿನಲ್ಲಿ ನಡೆದ ಹೋರಾಟ ಮತ್ತು ಗೋವಾ ಮುಕ್ತಿ ಹೋರಾಟದಲ್ಲೂ ಅವರು ಪಾಲ್ಗೊಂಡರು.

ಭಾರತ-ಚೀನಾ ಯುದ್ಧ ಬದಲಾಯಿಸಿ

ಭಾರತ ಮತ್ತು ಚೀನಾದ ನಡುವೆ ಹಿಮಾಲಯದಲ್ಲಿ ಗಡಿರೇಖೆಯ ಬಗ್ಗೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯವಿತ್ತು. ೫೦ರ ದಶಕದ ಆರಂಭದಿಂದ ಚೀನಾ ಮೊದಲು ಟಿಬೆಟ್ ಸ್ವತಂತ್ರ ರಾಜ್ಯವನ್ನು ಆಕ್ರಮಿಸಿಕೊಂಡಿತು. ಅಲ್ಲಿಯ ಧಾರ್ಮಿಕ ಮತ್ತು ರಾಜಕೀಯ ಮುಖ್ಯಸ್ಥರಾದ ೧೪ನೇ ದಲಾಯಿ ಲಾಮಾರವರು ೧೯೫೯ರಲ್ಲಿ ಭಾರತಕ್ಕೆ ತಪ್ಪಿಸಿಕೊಂಡು ಬಂದು ನೆಲೆಸಿದರು. ಈ ನಡುವೆ ಚೀನಾ ತನ್ನ ವಿಸ್ತರಣಾ ನೀತಿಯನ್ನು ಮುಂದುವರೆಸಿತು. ಅದಾಗಲೆ ಚೀನಾ ವಿಚಾರದಲ್ಲಿ ಭಾರತದ ಜನತೆ ಸರ್ಕಾರದ ನಿಷ್ಕ್ರೀಯತೆ ವಿರುದ್ಧ ತಾಳ್ಮೆಕಳೆದುಕೊಳ್ಳಲು ಪ್ರಾರಂಭಿಸಿದ್ದರು. ಆಗ ತತ್ಕಾಲೀನ ಪ್ರಧಾನಿಗಳಾಗಿದ್ದ ಜವಾಹರ‌ಲಾಲ್ ನೆಹರು ಇದರ ಬಗ್ಗೆ ಚಿಂತಿತರಾದರು. ಹಿಂದೆ ಒಬ್ಬ ಗುಪ್ತಚರ ವಿಭಾಗದ ಅಧಿಕಾರಿ ಮಲಿಕ್ ಎಂಬವರು, ಸೈನ್ಯವು ಫಾರ್ವರ್ಡ ಪೋಸ್ಟ ಎಂಬ ನೀತಿ ಅನುಸರಿಸಲು ಸಲಹೆ ಕೊಟ್ಟಿದ್ದರು. ಈ ಯೋಜನೆಯನ್ನು ಮತ್ತೆ ಮುನ್ನಲೆಗೆ ತಂದರು. ಸರ್ಕಾರವು ಏನ್ನಾದರು ತೋರ್ಪಡಿಸಲು ಈ ಕಾರ್ಯಯೋಜನೆಗಯನ್ನು ಮಾಡಲು ಸೇನೆಗೆ ಆದೇಶಿಸಿತು. ಇದು ಸೈನ್ಯದ ಯೋಜನೆಗೆ ವಿರುದ್ಧವಾಗಿತ್ತು. ಈ ನವ ಯೋಜನೆಯ ಪ್ರಕಾರ ಚೀನಿಯರಿಗೆ ಎದರುಮುಖವಾಗಿ ಹಲವು ಸಣ್ಣ ಸಣ್ಣ ಪೋಸ್ಟಗಳ ಸ್ಥಾಪನೆ ಮಾಡಬೇಕೆಂದಿತ್ತು. ಸೇನೆಯು ಹಲವು ಸಣ್ಣ ಸಣ್ಣ ಪೋಸ್ಟಗಳನ್ನು ನಿಭಾಯಿಸುವುದು ಕಷ್ಟ ಮತ್ತು ಚೀನಾದ ಸೈನ್ಯ ಆಕ್ರಮಣ ಮಾಡಿದರೆ, ಭೌಗೋಳಿಕ ಕಾರಣಗಳಿಂದ, ಮತ್ತು ಅವರ ಉನ್ನತ ಮಟ್ಟದ ಯುದ್ಧ ಉಪಕರಣ ಮತ್ತು ದೂರಸಂಪರ್ಕ ವ್ಯವಸ್ಥೆಯ ಕಾರಣ ಅವರನ್ನು ಎದುರಿಸುವುದು ಕಷ್ಟ ಎಂದು ಹೇಳಿತು. ಆದರೆ ನೆಹರೂರವರು ಚೀನಾ ಎಂದೂ ಭಾರತದ ಮೇಲೆ ಆಕ್ರಮಣ ಮಾಡದು ಎಂದು ವಾದಿಸಿ ಸೈನ್ಯದ ಅಭಿಪ್ರಾಯವನ್ನು ಸರಾಸಗಟಾಗಿ ತಿರಸ್ಕರಿಸುತ್ತಾರೆ[೪]. ಆದರೆ ಚೀನಾವು ಭಾರತದ ಮೇಲೆ ೧೯೬೨ರಲ್ಲಿ ಆಕ್ರಮಣ ಮಾಡುತ್ತದೆ, ಇದರಿಂದಾಗಿ ಭಾರತ-ಚೀನ ಯುದ್ಧವು ಪ್ರಾರಂಭವಾಗುತ್ತದೆ.

ರೆಜಾಂಗ್ ಲಾ ಕದನ ಬದಲಾಯಿಸಿ

ಯುದ್ಧದಲ್ಲಿ ಕುಮಾವೋ ರೆಜಿಮೆಂಟಿನ ೧೩ನೇ ಬೆಟಾಲಿಯನ್‍ನಿಗೆ ಚುಸಲ್ ಸೆಕ್ಟರ್ ರಕ್ಷಣೆಯ ಜವಾಬ್ದಾರಿಯಿತ್ತು. ಸಮುದ್ರದಿಂದ ಸುಮಾರು ೧೭,೦೦೦ ಅಡಿ ಎತ್ತರದಲ್ಲಿ 'ಸಿ' ಕಂಪನಿಯ (ಚಾರ್ಲೀ) ೧೨೩ ಸೈನಿಕರು ಮೇಜರ್ ಶೈತಾನ ಸಿಂಗ್ರವರ ನೇತೃತ್ವದಲ್ಲಿ ರೇಜಾಂಗ್ ಲಾದಲ್ಲಿದ್ದರು. ಈ ಬೆಟಾಲಿಯನನಿನ ಯೋಧರ ಬಗ್ಗೆ ಸ್ವಲ್ಪ ಮಾಹಿತಿ. ಬೆಟಾಲಿಯನಿನ ಯೋಧರು ಸಂಪೂರ್ಣ ಆಹಿರ್ (ಯಾದವರು- ಈಗಿನ ರಾಜಾಸ್ಥಾನ ಮತ್ತು ಹರಿಯಾಣ) ಜಾತಿಯವರಾಗಿದ್ದರು. ರಾಜಸ್ಥಾನ ಮತ್ತು ಹರಿಯಾಣದವರಾದ ಕಾರಣ ಅವರು ಜೀವನದಲ್ಲಿ ಎಂದೂ ಹಿಮ ನೋಡಿರಲಿಲ್ಲ. ಅವರ ಬಳಿ ಚಳಿ(೦ ಇಂದ -೩೦ ಡಿಗ್ರಿ) ತಾಪಮಾನದಲ್ಲಿ ಬದುಕಲು ಬೇಕಾಗುವ ಬಟ್ಟೆಗಳಿರಲಿಲ್ಲ. ಬೇರೆ ಉಪಕರಣಗಳೂ ಸಹ ಇರಲಿಲ್ಲ. ಎರಡನೆಯ ವಿಶ್ವ ಯುದ್ಧದ ಬ್ರಿಟಿಷ್ ಸೈನ್ಯದ ಪಳೆಯುಳಿಕೆಯಾಗಿ .೩೦೩ ರೈಫಲ್ ಮಾತ್ರ ಇತ್ತು ಮತ್ತು ಸುಮಾರು ೧,೦೦೦ ಬಾಂಬ್ ಇತ್ತು. ಆದರೂ ಹುಟ್ಟು ಹೋರಾಟಗಾರರಾದ ಆಹಿರರಲ್ಲಿ ಹೋರಾಡುವ ಛಲವಿತ್ತು. ಅವರು ಒಳ್ಳೆಯ ದೃಡ ಮೈಕಟ್ಟಿನ ಯುವಕರಾಗಿದ್ದರು. ಕೆಲವರು ಕುಸ್ತಿ ಪಟುಗಳಾಗಿದ್ದರು. ಅವರು ಇಲ್ಲಿಗೆ ಬಂದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದಾದರೆ, ಅಂಬಾಲಾದಿಂದ ಜೂನಿನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಈ ಬೆಟಾಲಿಯನ್ ಬರುತ್ತದೆ. ನಂತರ ರೇಜಾಂಗ್ ಲಾಗೆ ಅಕ್ಟೋಬರಿನಲ್ಲಿ ಬಂದು ಇಲ್ಲಿ ಕದನಕ್ಕೆ ಬೇಕಾದ ಶಿಬಿರ, ಕಂದಕ ಇತ್ಯಾದಿಗಳನ್ನು ಮಾಡಿಕೊಳ್ಳುತ್ತಾರೆ. ಭಾರತದ ಜಾಗದಲ್ಲಿ ಆರ್ಟಿಲರಿ ತೆಗೆದುಕೊಂಡು ಹೋಗಲು ಕಷ್ಟವಿದ್ದರೆ, ಚೀನಿಯರು ಟಿಬೆಟಿನ ಮೂಲಕ ಸಮತಟ್ಟಾದ ರಸ್ತೆಯನ್ನು ಮಾಡಿದ್ದರು. ಆ ಮೂಲಕ ಅವರ ಸೈನಿಕ ಉಪಕರಣ ಇತ್ಯಾದಿಗಳನ್ನು ತರಲು ಸುಲಭವಾಗಿತ್ತು. ಆ ಕಾರಣಕ್ಕೆ ಛಲವಿದ್ದರೂ ಬೇರೆ ಎಲ್ಲಾ ವಿಚಾರಗಳಲ್ಲಿ ಈ ಬೆಟಾಲಿಯನಿಗೆ ಅಡೆ-ತಡೆಗಳು ಹೆಚ್ಚಿದ್ದವು.[೫].

ನವೆಂಬರ್ ೧೭ರಂದು ಚೀನಿಯರು ಇಲ್ಲಿಗೆ ಬರುತ್ತಿರುವರೆಂಬ ಮಾಹಿತಿ ದೊರೆಯುತ್ತದೆ. ಕಮಾಂಡ್ಮೇ ಆಫೀಸ್ ಇವರಿಗೆ ಹಿಂದಿರುಗಲು ಸೂಚಿಸುತ್ತದೆ. ಆಗ ಮೇಜರ್ ಶೈತಾನ್ ಸಿಂಗ್‍ರು ತಮ್ಮ ಸೈನ್ವನ್ನು ಉದ್ದೇಶಿಸಿ ಯಾರಿಗಾದರು ಹಿಂದಿರುಗುವುದಿದ್ದರೆ ಹೊರಡಬಹುದು. ಆದರೆ ತಾನು ಮಾತ್ರ ಪೋಸ್ಟನ್ನು ಬಿಟ್ಟು ಹೋಗುವುದಿಲ್ಲವೆಂದರು. ಅವರೊಂದಿಗಿದ್ದ ೧೨೩ ಜನ ಸೈನಿಕರೂ ಕೂಡ ಅವರೊಂದಿಗೆ ಇರುವುದಾಗಿ ಮತ್ತೂ ಕಡೆಯವರೆಗೂ ಹೋರಾಡುವುದಾಗಿ ಮಾತು ಕೊಟ್ಟರು[೬]. [೭].

೧೮ನೇ ನವೆಂಬರ್ ೧೯೬೨ರ ಬೆಳಗಿನ ಜಾವ, ಚೀನೀ ಸೈನ್ಯವು ಭಾರತೀಯ ಸೈನ್ಯದ ಮೇಲೆ ಆಕ್ರಮಣ ಮಾಡಿತು. ಭಾರತೀಯ ಸೈನ್ಯ ಇದಕ್ಕಾಗಿ ತಯಾರಾಗಿ ಕಾಯುತ್ತಲಿತ್ತು. ಮದ್ದು ಗುಂಡುಗಳು ಕಡಿಮೆಯಿದ್ದ ಕಾರಣ ಒಂದು ಗುಂಡೂ ವ್ಯರ್ಥವಾಗಬಾರದೆಂದು, ಚೀನೀ ಸೈನಿಕರು ಹತ್ತಿರ ಬರುವವರೆಗೂ ಕಾಯಲು ಶೈತಾನ ಸಿಂಗ್ ಸೈನಿಕರಿಗೆ ನಿರ್ದೇಶಿಸಿದ್ಧರು. ಜೊತೆಗೆ ಚೀನೀ ಸೈನಿಕರನ್ನು ಕೊಂದ ಬಳಿಕ ಅವರ ಬಂದೂಕುಗಳನ್ನು ಕಿತ್ತುಕೊಳ್ಳಲು ನಿರ್ದೇಶಿಸಿದರು. ಚೀನೀ ಸೈನಿಕರು ಸಣ್ಣ ತೊರೆಯಲ್ಲಿ ಬರುವುದನ್ನು ಮುಂಜಾನೆ ಬೆಳಕು ಮೂಡುವ ಸಮಯದಲ್ಲಿ ಕಂಡ ಭಾರತೀಯ ಸೈನಿಕರು, ಅವರ ಮೇಲೆ ಹಗುರ ಮೆಶೀನ ಗನ್, ಮಾರ್ಟರ್, ಗ್ರೆನೇಡ್‍ಗಳ ಮೂಲಕ ಪ್ರತಿ ದಾಳಿ ನಡೆಸಿ ಹಲವರನ್ನು ಬಲಿತೆಗೆದುಕೊಂಡರು. ಆಗ ಎಚ್ಚೆತ್ತ ಚೀನೀ ಸೇನೆ ತಮ್ಮ ಬಳಿಯಿದ್ದ ಆಗಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಅಣಿಯಾಯಿತು. ಅತ್ಯಾಧುನಿಕ ತೋಪುಗಳ ಮೂಲಕ ದಾಳಿ ಮಾಡಿತು. ಮೇಜರ್ ಶೈತಾನ್ ಸಿಂಗ್ ತಮ್ಮ ಸೈನಿಕರನ್ನು ನಿರ್ದೇಶಿಸುತ್ತಾ, ಪ್ರೋತ್ಸಾಹಿಸುತ್ತಾ ಅತ್ತಲಿಂದಿತ್ತ ಓಡಾಡುತ್ತಿದ್ದರು. ಆಗ ಅವರ ಕೈಗೆ ಗುಂಡು ತಗುಲಿತು. ಅದನ್ನು ಲೆಕ್ಕಿಸದೆ ಅವರ ತಮ್ಮ ಹೋರಾಟ ಮುಂದುವರೆಸಿದರು. ಸ್ವಲ್ಪ ಹೊತ್ತಿನಲ್ಲಿ ಅವರ ಹೊಟ್ಟೆಗೆ ಹಲವು ಗುಂಡುಗಳು ಬಡಿದು ತುಂಬಾ ರಕ್ತಸ್ರಾವವಾಯಿತು. ಆಗ ಅವರನ್ನು ರಕ್ಷಿಸಲು ಅವರ ಸೈನಿಕರು ಪ್ರಯತ್ನಿಸಿದರು [೮]. ಆದರೆ ಚೀನಿಯರ ಕಡೆಯಂದ ದಾಳಿ ಜೋರಾದಾಗ ತಮ್ಮನ್ನು ಅಲ್ಲೆ ತಮ್ಮ ವಿಧಿಗೆ ಬಿಡಲು ನಿರ್ದೇಶಿಸಿದರು. ಆದರೆ ಸಮಯಪ್ರಜ್ಞೆ ಮೆರೆದು, ಈ ಭೀಕರ ಕದನದ ಸುದ್ದಿಯನ್ನು ತಮ್ಮ ಕಮಾಂಡಿಂಗ್ ಆಫೀಸರ್ ರಿಗೆ ತಿಳಿಸಲು ತಮ್ಮ ಬಳಿಯಿದ್ದ ಒಬ್ಬ ಸೈನಿಕ, ಸುಬೇದಾರ ರಾಮಚಂದ್ರ ಯಾದವರಿಗೆ ತಿಳಿಸಿದರು. ರಾಮಚಂದ್ರ ಯಾದವರು ತಪ್ಪಿಸಿಕೊಳ್ಳುತ್ತಾ ಹೋಗಿ ಈ ಸುದ್ದಿಯನ್ನು ತಿಳಿಸಿದರು. ಈ ಕದನದಲ್ಲಿ ಚೀನಿಯರಿಗೆ ತುಂಬಾ ಪ್ರಾಣ ಹಾನಿಯಾಯಿತು. ರಾಮಚಂದ್ರ ಯಾದವರು ೧,೩೦೦ ಜನ ಚೀನೀ ಸೈನಿಕರು ಭಾರತೀಯ ಸೈನಿಕರಿಂದ ಹತರಾದರೆಂದರು. ಆದರೆ ಅವರನ್ನು ನಂಬುವ ಸ್ಥಿತಿಯಲ್ಲಿ ಸೈನ್ಯವಿರಲಿಲ್ಲ. ನಂತರ ಸೈನ್ಯದ ಅಧಿಕಾರಿಗಳು ಹೋಗಿ ನೋಡಿದಾಗ ಕದನದ ಭೀಕರತೆ ಅವರಿಗೆ ಅರಿವಾಯಿತು. ಈಗ ಕಾ| ಅಮರೀಂದರ್ ಸಿಂಗ್‍ರು ವಿವಿಧ ಮಾಹಿತಿಗಳನ್ನು ಕಲೆ ಹಾಕಿ, ೫೦೦-೧೦೦೦ ಚೀನೀ ಸೈನಿಕರನ್ನು ಈ ಒಂದೇ ಕಂಪನಿ ಕದನದಲ್ಲಿ ಕೊಂದು ವೀರಗತಿ ಹೊಂದಿತು ಎಂಬ ಅಂದಾಜು ಮಾಡಿದ್ದಾರೆ[೯].

ಯುದ್ಧ ಮುಗಿದು ೩ ತಿಂಗಳ ತರುವಾಯ, ಹಿಮ ಕರಗಲು ಶುರುವಾಯಿತು. ಆಗ ಒಬ್ಬ ಸ್ಥಳೀಯರು ಅಲ್ಲಿ ಕೆಲವು ಶವಗಳನ್ನು ನೋಡಿದರು. ನಂತರ ಸೈನ್ಯದ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಯಿತು ಮತ್ತು ಹಲವು ಹಿರಿಯ ಅಧಿಕಾರಿಗಳು ಮತ್ತು ರೆಡ್ ಕ್ರಾಸ್ ಸಂಸ್ಥೆಯವರು ಬಂದು ಈ ಪೋಸ್ಟನ್ನು ನೋಡಿದರು. ಅಲ್ಲಿ ಮೇಜರ್ ಶೈತಾನ ಸಿಂಗ್ರವರ ಪಾರ್ಥೀವ ಶರೀರವು ತನ್ನ ಕೈಯಲ್ಲಿ ಬಂದೂಕು ಹಿಡಿದು ಕಾಯುವ ಸ್ಥಿತಿಯಲ್ಲಿ ಸಿಕ್ಕಿತು[೭]. ಇತರ ೧೧೩ ಸೈನಿಕರ ಪಾರ್ಥೀವ ಶರೀರಗಳು ತಮ್ಮ ಪೋಸ್ಟಿನಲ್ಲಿ ಸಿಕ್ಕಿದವು. ಅವುಗಳ ಬಂದೂಕಗಳನ್ನು ನೋಡಿದರೆ ಎಲ್ಲಾ ಗುಂಡುಗಳು ಖಾಲಿಯಾಗಿದ್ದವು, ಕೆಲವರ ಕೈಯಲ್ಲಿ ಗ್ರನೇಡ ಇತ್ತು[೯]. ಎಲ್ಲರ ಗುಂಡಿಗೆಗೆ ಗುಂಡು ತಗುಲಿತ್ತು, ಯಾರ ಬೆನ್ನಿಗೂ ಅಲ್ಲ. ಆ ವೀರ ಸೈನಿಕರ ಪಾರ್ಥೀವ ಶರೀರಗಳಿಗೆ ಅಲ್ಲಿಯೇ ದಹನ ಸಂಸ್ಕಾರ ಮಾಡಲಾಯಿತು. ಮೇಜರ್ ಶೈತಾನ ಸಿಂಗ್ರವರ ಪಾರ್ಥೀವ ಶರೀರವನ್ನು ಅವರ ಸ್ವಂತ ಊರಿಗೆ ತಲುಪಿಸಲಾಯಿತು ಮತ್ತು ಅಂತಿಮ ಸಂಸ್ಕಾರವು ಸಕಲ ಸರ್ಕಾರಿ ಮರ್ಯಾದೆ ಮತ್ತು ಸೇನಾ ಗೌರವಗಳೊಂದಿಗೆ ಜೋಧಪುರದಲ್ಲಿ ನೆರವೇರಿಸಲಾಯಿತು[೮].

ಈ ಕದನವನ್ನು ವಿಶ್ವದ ಇತರ ಪ್ರಖ್ಯಾತ ಕದನಗಳೊಂದಿಗೆ ಹೋಲಿಸಲಾಗುತ್ತದೆ[೭]. ಜನರಲ್ ಕೆ ಎಸ್ ತಿಮ್ಮಯ್ಯ ಈ ಕದನದ ಬಗ್ಗೆ ಹೀಗೆ ಹೇಳಿದರು "ವಿಶ್ವದ ಯುದ್ಧ ಇತಿಹಾಸದಲ್ಲಿ ಎಲ್ಲಾ ತೊಂದರೆಗಳನ್ನು ಎದುರಿಸಿ ಸೈನಿಕರು ಕಡೆಯ ಗುಂಡು ಮತ್ತು ಕಡೆಯ ವ್ಯಕ್ತಿ(ಸೈನಿಕನ)ಯವರೆಗೂ ಹೋರಾಡಿದರು. ರೆಜಾಂಗ್ ಲಾ ಕದನವು ಅವಶ್ಯವಾಗಿ ಇದರ ಒಂದು ಅತ್ಯುತ್ತಮ ಉದಾಹರಣೆ"[೧೦][೧೧].

ಯುದ್ಧ ಪದಕಗಳು ಬದಲಾಯಿಸಿ

೫ ಗಂಟೆಗಳ ಈ ಕದನದ ಉಗ್ರ ಹೋರಾಟದ ಫಲಶೃತಿಯಾಗಿ, ೧೩ನೇ ಕುಮಾವೋ ರೆಜಿಮೆಂಟ್‍ನ 'ಸಿ' ಕಂಪನಿ ೧ ಪರಮ ವೀರ ಚಕ್ರ, ೮ ವೀರ ಚಕ್ರ, ೪ ಸೇನಾ ಮೆಡಲ್ ಪಡೆಯಿತು. ೧೨೩ ಸೈನಿಕರಲ್ಲಿ ೧೧೪ ಜನರು ಹೋರಾಡುತ್ತಾ ಮಡಿದರು. ಹೋರಾಟದಲ್ಲಿ ೧,೩೦೦ ಚೀನೀ ಸೈನಿಕರನ್ನು ಕೊಂದರು. ಗುಂಡು, ಗ್ರೆನೆಡ್, ಬಯೋನೆಟ್, ಚಾಕು, ಕಲ್ಲು, ಸೈನಿಕರನ್ನು ಬಂಡೆಗೆ ಎತ್ತೆಸೆದು ಕೊಂದು ಹಾಕಿ ಕೊಂದರು. ಅವರ ನೆನಪಿನಲ್ಲಿ ಈಗ ಒಂದು ಸ್ಮಾರಕ ನಿರ್ಮಿಸಲಾಗಿದೆ[೨]. ಅದನ್ನು ಅಹಿರ್ ಧಾಮ್ ಎಂದು ಈಗ ಕರೆಯಲಾಗುತ್ತದೆ.

ಪರಮ ವೀರ ಚಕ್ರ ಬದಲಾಯಿಸಿ

ಈ ಕೆಳಗೆ ಭಾರತ ಸರ್ಕಾರ ೧೯೬೨ರಲ್ಲಿ ಹೊರಡಿಸಿದ ಗಜೆಟ್ ಪ್ರಕಟಣೆಯಿಂದ ಉದೃತ.
"ಮೇಜರ್ ಶೈತಾನ್ ಸಿಂಗ್‍ರವರು ೧೭,೦೦೦ ಅಡಿ ಎತ್ತರದ ರೇಜಾಂಗ್ ಲಾದ ಚುಸುಲ್ ಸೆಕ್ಟರ್ ನಲ್ಲಿ ಸೈನ್ಯದ ಒಂದು ಬೆಟಾಲಿಯನಿನ ನೇತೃತ್ವ ವಹಿಸಿದ್ದರು. ಈ ಕ್ಷೇತ್ರವು ಉಳಿದ ಮುಖ್ಯ ಸೆಕ್ಟರ್ ನಿಂದ ಪ್ರತ್ಯೇಕಿಸಲ್ಪಟ್ಟಿತ್ತು ಮತ್ತು ೫ ಪ್ಲಟೂನಿನಿಂದ ರಕ್ಷಿಸಲ್ಪಟ್ಟಿತ್ತು. ೧೮ ನವೆಂಬರ್ ೧೯೬೨ರಂದು ಚೀನಾ ಸೈನ್ಯವು ಭಾರೀ ಫಿರಂಗಿ, ಮೊರ್ಟರ್, ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಹಲವಾರು ಸತತ ಅಲೆಗಳಲ್ಲಿ ಭಾರಿ ದಾಳಿ ಮಾಡಿತು. ಹಲವು ಅಡೆತಡೆಗಳ ನಡುವೆ, ನಮ್ಮ ಸೈನ್ಯವು ಈ ಎಲ್ಲಾ ದಾಳಿಗಳನ್ನು ಸಫಲವಾಗಿ ಎದುರಿಸಿತು. ಈ ನಡುವೆ, ಮೇಜರ್ ಶೈತಾನ್ ಸಿಂಗ್‍ರವರು, ಕಾರ್ಯಾಚರಣೆಯಲ್ಲಿ ಪ್ರಬಲ ಭೂಮಿಕೆ ನಿರ್ವಹಿಸಿ, ತಮ್ಮ ಜೀವನದ ಹಂಗು ತೊರೆದು ಒಂದು ಪ್ಲಟೂನಿನಿಂದ ಮತ್ತೊಂದು ಪ್ಲಟೂನಿಗೆ ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಲು ಬಿಡದೆ, ಹುರಿದುಂಬಿಸುತ್ತಾ ನಡೆದರು. ಹೀಗೆ ಮಾಡುವಾಗ, ಅವರಿಗೆ ಭಾರಿ ಗಾಯಗಳಾದರೂ ಲೆಕ್ಕಿಸದೆ, ತಮ್ಮ ಸೈನ್ಯವನ್ನು ಹುರಿದುಂಬಿಸುತ್ತಾ ಮುನ್ನಡೆಸುವುದನ್ನು ನೋಡಿ ಅವರ ಸೈನ್ಯವೂ ಕೂಡಾ ಪ್ರಬಲ ಹೋರಾಟ ತೋರಿ ವೈರಿ ಸೈನದ ಮೇಲೆ ಭಾರಿ ಸಾವುನೋವುಗಳನ್ನು ಉಂಟುಮಾಡಿತು. ನಮ್ಮ ಒಬ್ಬ ಸೈನಿಕನ ಪ್ರಾಣಕ್ಕೆ ಪ್ರತಿಯಾಗಿ ವೈರಿಯ ೪-೫ ಸೈನಿಕರನ್ನು ಆಹುತಿ ತೆಗೆದುಕೊಂಡೆವು. ಯಾವಾಗ ಮೇಜರ್ ಶೈತಾನ್ ಸಿಂಗ್‍ರವರು ಕೈ ಮತ್ತು ಹೊಟ್ಟೆಗೆ ಗುಂಡು ತಗುಲಿ ಬಿದ್ದರೊ, ಆಗ ಅವರ ಸೈನಿಕರು ಇವರನ್ನು ರಕ್ಷಿಸಲು ಹೋದಾಗ ವೈರಿಯಿಂದ ಭಾರೀ ಮೆಷಿನ್ ಗನ್ ದಾಳಿ ನಡೆಯಿತು. ಆಗ ಮೇಜರ್ ಶೈತಾನ್ ಸಿಂಗ್‍ರವರು, ತಮ್ಮನ್ನು ತಮ್ಮ ವಿಧಿಗೆ ಬಿಟ್ಟು, ತಮ್ಮ ತಮ್ಮ ಜೀವ ರಕ್ಷಿಸಿಕೊಳ್ಳಲು ತಮ್ಮ ಸೈನಿಕರಿಗೆ ಆಜ್ಞಾಪಿಸಿದರು.

ಮೇಜರ್ ಶೈತಾನ್ ಸಿಂಗ್‍ರ ಪರಮೋಚ್ಚ ಧೈರ್ಯದ ಅಪ್ರತಿಮ ನಾಯಕತ್ವ, ಮತ್ತು ಕರ್ತವ್ಯದ ಬಗ್ಗೆ ಆದರ್ಶಪ್ರಾಯವಾದ ಭಕ್ತಿಯು ಅವರ ಕಂಪನಿಗೆ ಬಹುತೇಕ ಕೊನೆಯ ಸೈನಿಕನವರೆಗೂ ಹೋರಾಡಲು ಪ್ರೇರಣೆ ನೀಡಿತು[೧೨]."

ಸ್ಮಾರಕಗಳು ಮತ್ತು ನೆನಪು ಬದಲಾಯಿಸಿ

  • ಪರಮ್ ಯೋಧಾ ಸ್ಥಲ್ ದೆಹಲಿ - ಇಲ್ಲಿ ಅವರ ಸ್ಮಾರಕ ನಿರ್ಮಿಸಲಾಗಿದೆ
  • ಸೈನ್ಯವು ಪ್ರತಿ ವರ್ಷದ ೧೮ನೇ ನವೆಂಬರ್ ದಿನವನ್ನು ರೇಜಾಂಗ್ ಲಾದ ಕದನದ ನೆನಪಿನಲ್ಲಿ ಆಚರಿಸುತ್ತದೆ[೧೩]
ಮೇಜರ್ ಶೈತಾನ್ ಸಿಂಗ್‍ರ ಪ್ರತಿಮೆ.
 
ಪರಮ್ ಯೋಧಾ ಸ್ಥಲ್
ಪರಮ್ ಯೋಧಾ ಸ್ಥಲ್ 
 
ಜೋಧಪುರದಲ್ಲಿ ಶೈತಾನ್ ಸಿಂಗ್‍ರ ಪ್ರತಿಮೆ
ಜೋಧಪುರದಲ್ಲಿ ಶೈತಾನ್ ಸಿಂಗ್‍ರ ಪ್ರತಿಮೆ 

ಆಧಾರ ಬದಲಾಯಿಸಿ

  1. "Major Shaitan Singh's widow dies". Business Standard. 18 April 2015. Retrieved 4 December 2017.
  2. ೨.೦ ೨.೧ ದಬಾಸ್, ಕರ್ನಲ್ (Col) ದಿಲ್ಬಾಗ್ (3 June 2020). "೧೯೬೨ರ ರೇಜಾಂಗ್ ಲಾ ಕದನದ ನಾಯಕರು Heroes of 1962 Rezang La battle". www.tribuneindia.com (in English). Archived from the original on 3 June 2020. Retrieved 20 June 2020.{{cite web}}: CS1 maint: unrecognized language (link)
  3. ೩.೦ ೩.೧ "ಮೇಜರ್ ಶೈತಾನ್ ಸಿಂಗ್, ಪರಮ್ ವೀರ್ ಚಕ್ರ Major Shaitan Singh, PVC". www.rajputcommunity.in (in English). Archived from the original (ಹತಮಲ) on 20 June 2020. Retrieved 20 June 2020.{{cite web}}: CS1 maint: unrecognized language (link)
  4. ಕಾರ್ಡೋಸೊ, ಮೇಜರ್ ಜೆನೆರಲ‍್ ಇಯಾನ್. "2 - ಚೈನಾ-ಭಾರತ ಯುದ್ಧ - Sino-Indian War". ಪರಮ್ ವೀರ PARAM VIR (in English) (೩ ed.). ರೋಲಿ ಬುಕ್ಸ್ ಪ್ರೈ.ಲಿ. p. ೬೬. ISBN 9788174362629. Retrieved 20 June 2020.{{cite book}}: CS1 maint: unrecognized language (link)
  5. ಕಾರ್ಡೋಸೊ, ಮೇಜರ್ ಜೆನರಲ್ ಇಯಾನ್. "2 - ಚೈನಾ-ಭಾರತ ಯುದ್ಧ - Sino-Indian War". ಪರಮ್ ವೀರ್ - Param Vir (in English). ರೋಲಿ ಬುಕ್ಸ್ ಪ್ರೈ.ಲಿ. p. ೭೩. ISBN 9789351940296. Retrieved 18 June 2020.{{cite book}}: CS1 maint: unrecognized language (link)
  6. "ಅಂದು ನಮ್ಮ ಸೈನಿಕರ ಹೋರಾಟದ ಫಲವೇ ಲಡಾಖ್ ಭಾರತದಲ್ಲೇ ಉಳಿಯುವಂತಾಯಿತು! ಶೈತಾನ್ ಸಿಂಗ್‍ ನ ಸಾಹಸಕ್ಕೊಂದು ಸೆಲ್ಯೂಟ್". panchayatkannada.com. 10 August 2019. Archived from the original on 18 June 2020. Retrieved 20 June 2020.
  7. ೭.೦ ೭.೧ ೭.೨ ಭಾಟಿಯಾ, ಕರ್ನಲ್ (Col) ಎನ್ ಎನ್. "ಮರೆಯಲಾಗದ ೧೯೬೨ರ ಕದನ-ರೇಜಾಂಗ್ ಲಾ ಕದನದಲ್ಲಿ ೧೩ ಕುಮಾವೋ - Unforgettable Battle of 1962 : 13 Kumaon at Rezang La". www.bharat-rakshak.com (in English). Archived from the original (html) on 25 December 2020. Retrieved 20 June 2020. {{cite web}}: |archive-date= / |archive-url= timestamp mismatch; 25 ಡಿಸೆಂಬರ್ 2019 suggested (help)CS1 maint: unrecognized language (link)
  8. ೮.೦ ೮.೧ ಕಾರ್ಡೋಸೊ, ಮೇಜರ್ ಜೆನರಲ್ ಇಯಾನ್. "2 - ಚೈನಾ-ಭಾರತ ಯುದ್ಧ - Sino-Indian War". ಪರಮ್ ವೀರ್ - Param Vir (in English). ರೋಲಿ ಬುಕ್ಸ್ ಪ್ರೈ.ಲಿ. pp. ೭೩-೭೪. ISBN 9789351940296. Retrieved 18 June 2020.{{cite book}}: CS1 maint: unrecognized language (link)
  9. ೯.೦ ೯.೧ ಗುಪ್ತಾ, ಶೇಖರ್ (18 November 2018). "ರೇಜಾಂಗ ಲಾದ ನೆನಪು - ಪಶ್ಚಿಮ ಗಡಿಯಲ್ಲಿ ತೋರಿದ ಸಾಹಸ - Remembering Rezang La, a poignant moment of military courage on the western front" (in English). ಪ್ರಿಂಟ್. Archived from the original (html) on 19 May 2020. Retrieved 20 June 2020.{{cite news}}: CS1 maint: unrecognized language (link)
  10. "ರೆಜಾಂಗ್ ಲಾ ದ ಕದನ - ಹೇಗೆ ಬೆರಳೆಣಿಕೆಯ ಭಾರತೀಯ ಸೈನಿಕರು ಹೇಗೆ ಚೀನಾ ಸೈನ್ಯವನ್ನು ಸರ್ವನಾಶ ಮಾಡಿದರು - Battle of Rezang La: When handful Indian soldiers annihilated Chinese" (in English). 17 September 2017. Archived from the original (html) on 29 May 2020. Retrieved 20 June 2020.{{cite web}}: CS1 maint: unrecognized language (link)
  11. ಗಾಂಧಿ, ಅನ್ಶುಲ್ (2 December 2020). "ರೆಜಾಂಗ್ ಲಾದ ಕದನದ ಮಹಾಕಾವ್ಯ - ೧೨೦ ಭಾರತೀಯ ವೀರ ಸೈನಿಕರು ೧೮೩೬ ಚೀನಾ ಸೈನಿಕರನ್ನು ಕೊಂದು ಹಾಕಿದ ಪರಿ - The Epic Battle Of Rezang La Where 120 Indian Brave Hearts Killed 1836 Chinese Soldiers In The Last Stand". www.mensxp.com (in English). Archived from the original on 30 May 2020. Retrieved 20 June 2020.{{cite web}}: CS1 maint: unrecognized language (link)
  12. ಕಾರ್ಡೋಸೊ, ಮೇಜರ್ ಜೆನರಲ್ ಇಯಾನ್. "2 - ಚೈನಾ-ಭಾರತ ಯುದ್ಧ - Sino-Indian War". ಪರಮ್ ವೀರ್ - Param Vir (in English). ರೋಲಿ ಬುಕ್ಸ್ ಪ್ರೈ.ಲಿ. p. ೬೯. ISBN 9789351940296. Retrieved 18 June 2020.{{cite book}}: CS1 maint: unrecognized language (link)
  13. "ಸೈನ್ಯವು ೫೪ನೇ ರೇಜಾಂಗ್ ಲಾ ದಿನವನ್ನು ಆಚರಿಸಿತು Army observes 54th anniversary of battle of Rezang La in Ladakh". punemirror.indiatimes.com. ಪಿ.ಟಿ.ಐ. Archived from the original (html) on 19 November 2019. Retrieved 20 June 2020.

ಹೊರಗಿನ ಕೊಂಡಿಗಳು ಬದಲಾಯಿಸಿ