ಲಡಾಖ್
ಲಡಾಖ್ ಪ್ರದೇಶವು ಮಂಗೋಲಿಯನ್ ಬುಡಕಟ್ಟಿನವರ ಪಾಳೆಯ. ಚೀನಾ ಟಿಬೆಟ್ ಮತ್ತು ಪಾಕಿಸ್ತಾನದ ಗಡಿಗಳಿಂದ ಸುತ್ತುವರಿದಿರುವ ಹಿಮಾಲಯದ ಮೇಲಿನ ಪ್ರಸ್ಥಭೂಮಿ.
ಲಡಾಖ್ | |
---|---|
ಭಾರತ ದೇಶದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು | |
ರಂಗ್‌ಡಮ್ ಹಳ್ಳಿಯ ಹತ್ತಿರ(ಮೇಲಿನ ಚಿತ್ರ) ; ಶೋಕ ನದಿ, ಉತ್ತರ ಲಡಾಖ್(ಕೆಳಗಿನ ಚಿತ್ರ) | |
Coordinates: 34°00′N 77°30′E / 34.0°N 77.5°E | |
ದೇಶ | ಭಾರತ |
ಕೇಂದ್ರಾಡಳಿತ ಪ್ರದೇಶ | 31 ಅಕ್ಟೋಬರ್ 2019[೨] |
ರಾಜಧಾನಿ | ಲೇಹ್,[೩] ಕಾರ್ಗಿಲ್[೪] |
ಜಿಲ್ಲೆಗಳು | ೨ |
Government | |
• Type | ಕೇಂದ್ರಾಡಳಿತ |
• Body | ಲಡಾಖ್ ಕೇಂದ್ರಾಡಳಿತ ಪ್ರದೇಶ |
• ಲೆಫ್ಟಿನೆಂಟ್ ಗವರ್ನರ್ | ರಾಧಾಕೃಷ್ಣ ಮಾಥುರ್ |
• ಸಂಸದ(ಲಡಾಖ್ ಲೋಕಸಭಾ ಕ್ಷೇತ್ರ) | ಜಮ್ಯಂಗ್ ತ್ಸೆರಿಂಗ್ ನಾಮ್ಗ್ಯಾಲ್ (ಬಿಜೆಪಿ) |
• ಉಚ್ಚ ನ್ಯಾಯಾಲಯ | ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯ |
Area | |
• Total | ೫೯,೧೪೬ km೨ (೨೨,೮೩೬ sq mi) |
Highest elevation | ೭,೭೪೨ m (೨೫,೪೦೦ ft) |
Lowest elevation | ೨,೫೫೦ m (೮,೩೭೦ ft) |
Population (2011) | |
• Total | ೨,೭೪,೨೮೯[೧] |
Demonym | ಲಡಾಖಿ |
ಭಾಷೆ(ಗಳು) | |
• Official | ಹಿಂದಿ ಮತ್ತು ಇಂಗ್ಲಿಷ್ |
• Spoken | ಲಡಾಖಿ ಭಾಷೆ ಮತ್ತು ಪುರ್ಗಿ |
Time zone | UTC+05:30 (IST) |
ISO 3166 code | IN-LA |
Vehicle registration | LA[೭] |
Website | ladakh |
ಅಸಂಖ್ಯ ಕೊಳ್ಳಗಳಿಂದ ಕೂಡಿದ ಲಡಾಖನ್ನು ಚಂದ್ರ ಮುರಿದು ಬಿದ್ದ ತಾಣವೆಂದು ಬಣ್ಣಿಸುತ್ತಾರೆ. ಹಿಮಾಚ್ಛಾದಿತ ಗಿರಿಶಿಖರಗಳು ಬೆಳ್ಳನೆ ಹೊಳೆಯುವುದರಿಂದಲೂ ಈ ಹೋಲಿಕೆ ಅತ್ಯಂತ ಸಮಂಜಸವಾಗಿದೆ.
ಲಡಾಖಿನ ಇತಿಹಾಸ
ಬದಲಾಯಿಸಿಲಡಾಖ್ ಪ್ರಾಂತ್ಯದ ಭಾಷೆ ಲಡಾಖಿ. ಅದರ ಲಿಪಿ ಬ್ರಾಹ್ಮೀ ಲಿಪಿಯಿಂದ ವಿಕಾಸಗೊಂಡಿದ್ದು, ಬಾಲ್ಟಿಷೀನಾ, ಬ್ರೋಕ್ಶತ್, ಚಾಂಗ್ಶತ್ ಭಾಷೆಗಳೂ ಇಲ್ಲಿ ಬಳಕೆಯಲ್ಲಿವೆ. ಲಡಾಖಿನ ನಾಗರಿಕ ಇತಿಹಾಸ ಕೇವಲ ಒಂದೂವರೆ ಸಾವಿರ ವರ್ಷಗಳ ಈಚಿನದು. ಅದಕ್ಕೂ ಹಿಂದೆ ಇಲ್ಲಿ ಖಂಪಾ ಎಂಬ ಅಲೆಮಾರಿ ಜನಾಂಗದವರು ಯಾಕ್(ಹಿಮಾಲಯನ್ ಎಮ್ಮೆ)ಗಳ ಪಾಲನೆ ಮಾಡುತ್ತಿದ್ದರಂತೆ. ಕ್ರಿಸ್ತಶಕ ೭೫೫ ರಲ್ಲಿ ಟಿಬೆಟ್ಟಿನ ರಾಜ ತ್ರಿಸಂಗ್ ದೆತ್ಸೆನ್ ಭಾರತದ ತಾಂತ್ರಿಕಗುರು ಪದ್ಮಸಂಭವ ಹಾಗೂ ಬೌದ್ಧ ವಿದ್ವಾಂಸರಾದ ಸಂತರಕ್ಷಿತ ಹಾಗೂ ಕಮಲಶಿಲರನ್ನು ಆಹ್ವಾನಿಸಿ ಬೌದ್ಧ ಮತಪ್ರಚಾರಕ್ಕೆ ಪ್ರೋತ್ಸಾಹ ನೀಡಿದ. ಬಹುಶಃ ಈ ಸಂದರ್ಭದಲ್ಲೇ ಲಡಾಖಿನಲ್ಲೂ ಬೌದ್ಧ ಧರ್ಮಪ್ರಚಾರಕರ ಆಗಮನವಾಗಿ ಸಿಂಧೂ ನದಿಯ ಆಸುಪಾಸಿನಲ್ಲಿ ಹೊಸ ನಾಗರಿಕ ವಸಾಹತುಗಳು ತಲೆಯೆತ್ತಿರಬಹುದು.
ಲಡಾಖ್ ಪ್ರಾಂತ್ಯದ ಮೊದಲ ರಾಜ ಸ್ಕಿಯಿಲ್ ದೆ ನಿಮಗೊನ್ ಕ್ರಿಸ್ತಶಕ ೮೪೩ರಲ್ಲಿ ಲಾಚೆನ್ ರಾಜವಂಶಕ್ಕೆ ನಾಂದಿ ಹಾಡಿದ. ಅದೇ ಸಂತತಿಯ ಮತ್ತೊಬ್ಬ ನಿಮಗೊನ್ (ಕ್ರಿಸ್ತಶಕ ೯೭೫-೯೯೦) ಕಾಲದಲ್ಲಿ ಲಡಾಖ್ ಪ್ರಾಂತ್ಯವು ವಿಸ್ತಾರಗೊಂಡು ಅಭ್ಯುದಯ ಕಂಡಿತು. ಲೆಹ್‌ಗೆ ೧೫ ಕಿಲೋಮೀಟರು ದೂರದಲ್ಲಿರುವ ಶೆಯ್ ಎಂಬಲ್ಲಿ, ಆತ ಕಟ್ಟಿದ ಅರಮನೆ ಮತ್ತು ಕೋಟೆ ಇಂದಿಗೂ ಇದೆ. ಕ್ರಿಸ್ತಶಕ ೧೧೫೦ ರಿಂದ ೧೩೨೪ರ ಅವಧಿಯಲ್ಲಿ ಲಡಾಖ್ ಪ್ರಾಂತ್ಯದಲ್ಲಿ ಅನೇಕ ಅರಮನೆಗಳನ್ನೂ ಬೌದ್ಧ ಮಠಗಳನ್ನೂ ಕಟ್ಟಲಾಯಿತು. ಈ ಅವಧಿಯಲ್ಲೇ ಬೌದ್ಧ ಧರ್ಮಗ್ರಂಥದ ಲಡಾಖೀ ಆವೃತ್ತಿ ಖದ್ಷರ್ ಸಂಕಲಿತವಾಯಿತು.
ಕ್ರಿಸ್ತಶಕ ೧೫೩೩ ರಲ್ಲಿ ಅರಸೊತ್ತಿಗೆ ಏರಿದ ತ್ಸೆವಾಂಗ್ ನಾಮ್ಗಯಾಲ್‌ನ ಕಾಲವು ಲಡಾಖಿನ ಸುವರ್ಣಯುಗ. ಆತ ಲೆಹ್‌ನಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ ಅರಮನೆ, ಕೋಟೆಗಳನ್ನು ಕಟ್ಟಿಸಿದ. ಈತನ ಮಗ ಜಮಯಂಗ್ ನಾಮ್ಗಯಾಲ್‌ನ ಕಾಲದಲ್ಲಿ ಸ್ಕರ್ಡು ಪ್ರಾಂತ್ಯದ ರಾಜ ಅಲಿ ಶೇರ್‌ಖಾನ್ ದಾಳಿಯಿಟ್ಟು ಲಡಾಖನ್ನು ತನ್ನ ವಶಕ್ಕೆ ತೆಗೆದುಕೊಂಡ. ಆದರೆ ಅಲಿ ಶೇರ್‌ಖಾನನ ಮಗಳು, ಜಮಯಂಗ್‌ನನ್ನು ಪ್ರೀತಿಸಿ ಮದುವೆಯಾದ್ದರಿಂದ ಲಡಾಖ್ ಮತ್ತೆ ನಾಮ್ಗಯಾಲ್ ಸಂತತಿಗೇ ವಾಪಸ್ ಬಂತು. ಇವರ ಪುತ್ರ ಸಿಂಗೇ ನಾಮ್ಗಯಾಲ್ ಕ್ರಿಸ್ತಶಕ ೧೬೧೦ರಲ್ಲಿ ಪಟ್ಟಕ್ಕೆ ಬಂದು, ಬಾಲ್ಟಿಸ್ತಾನ್ ದೊರೆಯನ್ನು ಸೋಲಿಸಿ ಲೆಹ್‌ನಲ್ಲಿ ಒಂಬತ್ತು ಅಂತಸ್ತಿನ ಅರಮನೆ ಕಟ್ಟಿಸಿದ. ಆ ಅರಮನೆಯನ್ನು ಇಂದಿಗೂ ಕಾಣಬಹುದು.
ಕ್ರಿಸ್ತಶಕ ೧೮೩೪ರ ವೇಳೆಗೆ ನಾಮ್ಗಯಾಲ್ ಸಂತತಿ ಕೊನೆಗೊಂಡು ಲಡಾಖ್ ಪ್ರಾಂತ್ಯವು ಡೊಗ್ರಾ ರಾಜ ಜೊರಾವರ್ ಸಿಂಗ್‌ನ ಸಾಮಂತ ಗುಲಾಬ್ ಸಿಂಗ್‌ನ ಅಧೀನಕ್ಕೆ ಬಂದಿತು. ಹತ್ತು ವರ್ಷಗಳ ಆಂತರಿಕ ತಿಕ್ಕಾಟ ಮತ್ತು ಅಭದ್ರತೆಗಳ ಅನಂತರ ಬ್ರಿಟಿಷ್ ಸರ್ಕಾರವು ಈ ಪ್ರಾಂತ್ಯದಲ್ಲಿ ಶಾಂತಿಸೌಹಾರ್ದತೆ ನೆಲೆಸುವಂತೆ ಮಾಡಿ ಲಡಾಖ್ ಪ್ರಾಂತ್ಯವನ್ನು ಆಡಳಿತಾತ್ಮಕ ಕಾರಣಗಳಿಗಾಗಿ ಕಾಶ್ಮೀರ ಪ್ರಾಂತ್ಯದೊಳಗೆ ವಿಲೀನಗೊಳಿಸಿತು. ವಿಲೀನಗೊಂಡ ಲಡಾಖ್ ಪ್ರಾಂತ್ಯದಲ್ಲಿ ಅಂದು ಲೆಹ್, ಕಾರ್ಗಿಲ್, ಸ್ಕರ್ಡು ಎಂಬ ಮೂರು ಜಿಲ್ಲೆಗಳಿದ್ದವು. ಭಾರತ ಪಾಕಿಸ್ತಾನ ನಡುವೆ ಮೊದಲ ಯುದ್ಧ ಸಂಭವಿಸಿ ಕದನವಿರಾಮ ಘೋಷಣೆ ಆದಾಗ, ಸ್ಕರ್ಡು ಮತ್ತು ಕಾರ್ಗಿಲ್‌ನ ಸ್ವಲ್ಪ ಭಾಗ ಪಾಕಿಸ್ತಾನಕ್ಕೆ ಸೇರಿತು. ೧೯೭೨ರ ಯುದ್ಧದಲ್ಲಿ ಲೆಹ್‌ನ ಅಕ್ಸಾಯ್ ಚಿನ್ ಭಾಗ ಚೀನಾದ ವಶವಾಯಿತು. ಪ್ರಸ್ತುತ, ಲಡಾಖಿನ ವಿಸ್ತಾರ ೯೭,೦೦೦ ಚದರ ಕಿಲೋಮೀಟರುಗಳು ಹಾಗೂ ೨೦೨೧ರಲ್ಲಿ ನಡೆದ ರಾಷ್ಟ್ರೀಯ ಜನಗಣತಿಯ ಪ್ರಕಾರ ಲಡಾಖಿನ ಜನಸಂಖ್ಯೆ ೨,೭೪,೨೮೯.[೧]
ಭೌಗೋಳಿಕ ಸ್ಥಿತಿ
ಬದಲಾಯಿಸಿಸಮುದ್ರಮಟ್ಟದಿಂದ ೮೦೦೦ ದಿಂದ ೧೩೦೦೦ ಅಡಿಗಳಷ್ಟು ಎತ್ತರದಲ್ಲಿರುವ ಲಡಾಖ್ ಉನ್ನತ ಶಿಖರಗಳಿಂದಾಗಿ ಕಾಶ್ಮೀರದಿಂದಲೂ, ಅಗಾಧ ಪ್ರಪಾತ ಹಾಗೂ ಲಾಹುಲ್, ಸ್ಪಿತಿ ಕಣಿವೆಗಳಿಂದಾಗಿ ಹಿಮಾಚಲ ಪ್ರದೇಶದಿಂದಲೂ ಸುಲಭವಾಗಿ ನಿಲುಕಲು ಅಸಾಧ್ಯವಾಗಿದೆ. ಹೀಗೆ ಅತ್ಯಂತ ದುರ್ಗಮ ಪ್ರದೇಶವಾಗಿರುವ ಲಡಾಖ್ಗೆ ಶ್ರೀನಗರದಿಂದ ಹೆದ್ದಾರಿ ನಿರ್ಮಿಸಿದ್ದೇ ಬಲುದೊಡ್ಡ ಸಾಧನೆ. ಇಂಡಿಯಾದೊಂದಿಗೆ ಲಡಾಖಿಗಳ ಸಂಪರ್ಕ ಈ ಹೆದ್ದಾರಿಯ ಮೂಲಕವೇ. ದುರದೃಷ್ಟವೆಂದರೆ ವರ್ಷದಲ್ಲಿ ಆರುತಿಂಗಳು ಕಾಲ ಹಿಮಪಾತದಿಂದ ಈ ಮಾರ್ಗ ಮುಚ್ಚಿಹೋಗುತ್ತದೆ. ಲೆಹ್ನಿಂದ ಮನಾಲಿಗೂ ಒಂದು ರಸ್ತೆಯಿದೆ. ಭೀಕರ ಪ್ರಪಾತಗಳೂ ಅಗಾಧ ಕಣಿವೆಗಳೂ ಇರುವ ಈ ರಸ್ತೆಯು ಚಳಿಗಾಲದಲ್ಲಿ ದುರ್ಗಮವೆನಿತ್ತದೆ.
ಲಡಾಖ್ ಪ್ರಾಂತ್ಯದ ರಾಜಧಾನಿ ಲೆಹ್ ನಲ್ಲಿರುವ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಎತ್ತರದ ವಿಮಾನನಿಲ್ದಾಣ, ಸುತ್ತಲೂ ಎತ್ತ ನೋಡಿದರತ್ತ ಹಿಮವನ್ನು ಹೊದ್ದ ಬೆಟ್ಟಗಳು. ನಡುವಿನ ಪುಟ್ಟ ಸಪಾಟು ಪ್ರದೇಶದಲ್ಲಿ ಈ ರನ್ವೇ ಇದೆ. ಯೋಧರಿಗೆ ಹಿಮಾಲಯದ ಈ ಪ್ರದೇಶಗಳಲ್ಲಿ ಆರು ತಿಂಗಳ ನಿಯುಕ್ತಿ ಕಡ್ಡಾಯ. ದಿನನಿತ್ಯದ ದಿನಸಿ, ತರಕಾರಿ, ಮಾಂಸ, ಹಾಲು, ಔಷಧಿ ಹಾಗೂ ಪತ್ರಗಳು ತಲಪುವುದು ದಿನಕ್ಕೆ ಮೂರು ನಾಲ್ಕು ಬಾರಿ ಚಂಡೀಗಡದಿಂದ ಬಂದು ಹೋಗುವ ಐಎಲ್೭೬ ಅಥವಾ ಎಎನ್ ೩೨ ವಿಮಾನದ ಮೂಲಕವೇ. ಹಿಮಪಾತವಿಲ್ಲದ ದಿನಗಳಲ್ಲಷ್ಟೇ ಲೆಹ್ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ಶ್ರೀನಗರ ದೆಹಲಿಗಳಿಂದ ನಾಗರಿಕ ವಿಮಾನಗಳು ಬಂದು ಹೋಗುತ್ತವೆ. ಕಡಮೆ ಉದ್ದದ ಓಡುರಸ್ತೆಯ ಮೇಲೆ ವಿಮಾನ ಇಳಿಸುವುದು ಹಾಗೂ ಏರಿಸುವುದು ವಿಮಾನ ಚಾಲಕನಿಗೆ ಒಂದು ಕಠಿಣ ಚಾಲೆಂಜ್.
ಲಡಾಖಿನುದ್ದಕ್ಕೂ ಸಿಂಧೂ ನದಿ ಹರಿಯುತ್ತಾಳೆ ಆದರೂ ಆಕೆಗೆ ಅಲ್ಲಿ ಗಂಗೆಯ ಸ್ಥಾನ ಇಲ್ಲ. ಚೀನಾ ಮೂಲದಿಂದ ಇನ್ನೂರು ಕಿಲೋಮೀಟರು ಹರಿದುಬಂದರೂ ನೀರ ಪಾತಳಿಯಲ್ಲಿನ ನಾಣ್ಯವು ಮೇಲ್ಪದರದಿಂದ ಸ್ಪಷ್ಟವಾಗಿ ಕಾಣುವಂಥ ಶುಭ್ರತೆಗೆ ಮನಸೋತು ಆ ಪರಿಶುದ್ಧ ಜಲವನ್ನು ಕುಡಿಯುವಾಸೆಯಿಂದ ಕೈ ಅದ್ದಿದ್ದೇ ಆದರೆ ಅಬ್ಬಾ!! ಆ ಕೊರೆತಕ್ಕೆ ಬೆರಳುಗಳು ಸೆಟೆದುಕೊಂಡು ಕೈಗೆ ಚಳುಕು ಹತ್ತೀತು. ಲೆಹ್ನಲ್ಲಿ ಸಿಂಧೂ ನದಿಗೆ ಝನ್ಸ್ಕರ್, ಝೊಕ್ ಮತ್ತು ಪಿಂಗೊ ಎಂಬ ಉಪನದಿಗಳು ಸೇರುತ್ತವೆ. ಸಿಂಧೂನದಿಯ ವಿದ್ಯುದಾಗರ ಕೆಲಸ ಮಾಡುವುದು ನಾಲ್ಕೈದು ತಿಂಗಳ ಕಾಲ ಮಾತ್ರ. ವರ್ಷದಲ್ಲಿ ಎಂಟು ತಿಂಗಳು ವಾತಾವರಣದ ಉಷ್ಣತೆ ಶೂನ್ಯಕ್ಕಿಂತ ಕೆಳಗಿರುವ ಕಾರಣ ಈ ನದಿಯ ಮೇಲ್ಮೈ ಹೆಪ್ಪುಗಟ್ಟಿರುತ್ತದೆ. ಈ ಅವಧಿಯಲ್ಲಿ ನದಿಯ ಮೇಲೆ ಈ ದಡದಿಂದ ಆ ದಡಕ್ಕೆ ನಡೆದಾಡಬಹುದು. ಆದರೂ ಅಲ್ಲಲ್ಲಿ ಆ ಮಂಜಿನ ಫಲಕ ಧಸಕ್ಕೆಂದು ಒಡೆದು ತೇಲುವ ಹಿಮಬಂಡೆಗಳೊಂದಿಗೆ ಗುಟುರು ಹಾಕುತ್ತವೆ.
ಜಗತ್ತಿನ ಅತಿ ಎತ್ತರದ ಜನವಸತಿ ಪ್ರದೇಶವಾಗಿರುವ ಲಡಾಖ್ ತಾನೇ ಒಂದು ನೈಸರ್ಗಿಕ ರೆಫ್ರಿಜರೇಟರ್ ಆಗಿದೆ. ಅಂಗಡಿಗಳಲ್ಲಿ ಜೋಡಿಸಿಟ್ಟ ತರಕಾರಿ, ಹೋಟೆಲಿನಲ್ಲಿ ಪೇರಿಸಿಟ್ಟ ಆಹಾರ ಪದಾರ್ಥಗಳು ದಿನಗಟ್ಟಲೆ ಕೆಡದೆ ಹಾಗೇ ಇರುತ್ತವೆ. ಮಾರುಕಟ್ಟೆಯಲ್ಲಿ ಕೋಳಿಮಾಂಸದ ಅಂಗಡಿಯಲ್ಲಿ ನೇತುಹಾಕಿದ ಕೋಳಿಯನ್ನು ಈಗಷ್ಟೇ ಕೊಯ್ಯಲಾಗಿದೆ ಎಂದು ತಿಳಿಯಬಾರದು. ಸರಾಸರಿ ಸೊನ್ನೆ ಡಿಗ್ರಿಯ ಚಳಿಯಲ್ಲೂ ಜೀವನ ನಡೆಸುವ ಕ್ಷಮತೆ ಲಡಾಖಿಗಳಿಗಿದೆ. ಚಳಿಗಾಲದಲ್ಲಿ ಲಡಾಖಿಗಳ ನಿತ್ಯಕ್ರಮ ನಿಧಾನವಾಗಿ ಬೆಳಗ್ಗೆ ಎಂಟು ಗಂಟೆಯವೇಳೆಗೆ ಪ್ರಾರಂಭವಾಗಿ ಸಂಜೆ ನಾಲ್ಕು ಗಂಟೆಯ ವೇಳೆಗೆಲ್ಲಾ ಸ್ಥಗಿತಗೊಳ್ಳುತ್ತದೆ. ಸೂರ್ಯನು ನಾಲ್ಕೂವರೆ ಸುಮಾರಿಗೆ ಬೆಟ್ಟಗಳ ಹಿಂದೆ ಮರೆಯಾಗುವುದರಿಂದ ಸ್ವಲ್ಪ ಹೊತ್ತಿಗೆಲ್ಲ ಗಾಢಾಂಧಕಾರ ಕವಿಯುತ್ತದೆ. ಕ್ರಮೇಣ ಶೀತಲಗಾಳಿ ಬೀಸತೊಡಗಿ ಇಡೀ ಲಡಾಖ್ ಶೂನ್ಯದಲ್ಲಿ ಶೂನ್ಯವಾಗುತ್ತದೆ.
ಜನಜೀವನ
ಬದಲಾಯಿಸಿಸಂಜೆಯಾಗುತ್ತಿದ್ದಂತೆ ತಂತಮ್ಮ ಗೂಡು ಸೇರಿಕೊಂಡ ಲಡಾಖಿಗಳು ’ಬುಕಾರಿ’ಯೊಂದಿಗೆ ರಾತ್ರಿ ಕಳೆಯುತ್ತಾರೆ. ಬುಕಾರಿ ಎಂದರೆ ಮನೆಯನ್ನು ಬೆಚ್ಚಗಿಡುವ ಅಗ್ಗಿಷ್ಟಿಕೆ. ಒಲೆಯಂತಿರುವ ಅಗ್ಗಿಷ್ಟಿಕೆಯಲ್ಲಿ ಸಣ್ಣಗೆ ಹನಿಯುವ ಸೀಮೆಎಣ್ಣೆ ಉರಿದು ಲೋಹದ ಹೊಗೆ ಕೊಳವೆಯ ಮೂಲಕ ಹಾದು ಚಾವಣಿಯ ಮೂಲಕ ಹೊರಹೋಗುತ್ತದೆ. ಒಲೆ ಉರಿದಂತೆಲ್ಲ ಕೊಳವೆ ಬಿಸಿಯಾಗಿ ತನ್ನ ಕಾವನ್ನು ಮನೆಗೆಲ್ಲ ಹರಡುತ್ತದೆ. ಇದು ಮನೆಯೊಳಗಿನ ಕಥೆಯಾದರೆ ಹೊರಗೆ ಅಡ್ಡಾಡುವವರು ಪುಟ್ಟ ಬಿದಿರಿನ ಬುಟ್ಟಿಯಲ್ಲಿ ಮರದ ಹೊಟ್ಟನ್ನು ತುಂಬಿ ನಡುವೆ ಕೆಂಡ ಪೇರಿಸಿ ಆ ಬುಟ್ಟಿಯನ್ನು ತಮ್ಮ ಹೊಟ್ಟೆಯ ಮೇಲೆ ಕಟ್ಟಿಕೊಳ್ಳುತ್ತಾರೆ. ಮೇಲೆ ಕವುದಿ ಹೊದ್ದುಕೊಂಡರೆ ಯಾರಿಗೂ ತಿಳಿಯುವುದಿಲ್ಲ. ಇನ್ನು ಅಂಗಡಿಗಳಲ್ಲಿ ವ್ಯಾಪಾರಸ್ಥರು ತಮ್ಮ ಆಸನಗಳ ಕೆಳಗೆ ಸೀಮೆಎಣ್ಣೆ ಸ್ಟವ್ ಇಟ್ಟುಕೊಂಡಿರುತ್ತಾರೆ. ಈ ಚಳಿಗೆ ಲೆಹ್ ನಗರದ ನೀರಿನ ಕೊಳವೆಗಳು ಹಾಗೂ ಚರಂಡಿಗಳೆಲ್ಲಾ ಹೆಪ್ಪುಗಟ್ಟುವುದರಿಂದ ಇಲ್ಲಿನ ನಗರಸಭೆಯು ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡುತ್ತದೆ. ಅಲ್ಲಿ ಇಲ್ಲಿ ಚೆಲ್ಲಿದ ನೀರು ಕ್ಷಣಮಾತ್ರದಲ್ಲಿ ಹರಳುಗಟ್ಟಿ ಗಾಜಿನಂತೆ ನುಣುಪಾಗುವುದರಿಂದ ನಡೆದಾಡುವವರು ಜಾರುವುದು ಖಂಡಿತ.
ಕಾಶ್ಮೀರ ಎಂದೊಡನೆ ಕಣ್ಣಿಗೆ ಕಟ್ಟುವ ಸೇಬು ಲೆಹ್ ನಗರದ ಒಂದೆರಡು ಅಂಗಡಿಗಳಲ್ಲಷ್ಟೇ ಕಾಣ ಸಿಗುತ್ತದೆ. ಲಡಾಖಿನಲ್ಲಿ ಸೇಬಿನ ಮರಗಳೂ ಇಲ್ಲ, ಪೈನ್ ವೃಕ್ಷಗಳೂ ಇಲ್ಲ. ಒಂದು ರೀತಿಯ ಜಾಲಿಯ ಮರಗಳಷ್ಟೇ ಇಲ್ಲಿ ಬೆಳೆಯುವುದು. ಪೊದೆಗಳಂತೆ ಎಲ್ಲೆಂದರಲ್ಲಿ ಯಥೇಚ್ಛವಾಗಿ ಬೆಳೆಯುವ ಇದನ್ನು ಕತ್ತರಿಸಿ ತಂದು ಮನೆಯ ಬಳಿ ಬಣಿವೆಯಂತೆ ಒಟ್ಟಿಕೊಳ್ಳುತ್ತಾರೆ. ಮನೆಯನ್ನು ಬೆಚ್ಚಗಿಡುವ ಅಗ್ಗಿಷ್ಟಿಕೆಗೆ ಇದೇ ಉರುವಲು. ಕಿಟಕಿ ಬಾಗಿಲು ಮಂಚ ಕುರ್ಚಿಗಳಿಗೂ ಚೆನ್ನಾಗಿ ಬೆಳೆದ ಈ ಮರವೇ ಬಳಕೆಯಾಗುತ್ತದೆ. ನಮ್ಮಲ್ಲಿ ಶಾನುಭೋಗರ ಮೇಜು ಇದೆಯಲ್ಲ! ಅದೇ ರೀತಿಯ, ಅಷ್ಟೇ ಎತ್ತರದ ಆದರೆ ಇಳಿಜಾರಿಲ್ಲದ ಮೇಜು ಇಲ್ಲಿ ಊಟದ ಮೇಜಾಗಿ ಬಳಕೆಯಾಗುತ್ತದೆ.
ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಎಂಬ ಹೇಳಿಕೆ ಇದೆಯಲ್ಲವೇ? ಲಡಾಖಿನಲ್ಲಿ ದಿನಕ್ಕೊಂದು ಅಕ್ರೂಟ್ ತಿನ್ನಿ, ಚಳಿಯನ್ನು ದೂರವಿಡಿ ಎಂಬ ಮಾತು ಸಾಮಾನ್ಯ. ಲಡಾಖಿಗಳ ಕಿಸೆಯಲ್ಲಿ ಅಕ್ರೂಟ್ ಹಾಗೂ ಅಂಥದೇ ವಸ್ತುಗಳ ಪುಡಿ ಇರುತ್ತದೆ. ಚಹಾ ಅಥವಾ ಚಾಂಗ್ ಜೊತೆಗೆ ಅದನ್ನು ಸೇವಿಸುತ್ತಾರೆ.
ಲಡಾಖಿಗಳಲ್ಲಿ ’ಚಾಂಗ್’ ಬಳಕೆ ಹೆಚ್ಚು. ನಮ್ಮ ಅಳತೆಯ ಸೇರಿನಷ್ಟೇ ವ್ಯಾಸದ ಆದರೆ ಅದರ ಎರಡರಷ್ಟು ಉದ್ದದ ಪಾತ್ರೆಯಲ್ಲಿ ಬಾರ್ಲಿಹಿಟ್ಟು, ಸೋಡಾ, ಅಕ್ರೂಟ್ ಪುಡಿ ಹಾಕಿ ಅದಕ್ಕೆ ಕುದಿನೀರನ್ನು ಸೇರಿಸಿ ಉದ್ದನೆ ಕೋಲಿನಿಂದ ಕಲಸುತ್ತಾರೆ. ಚೆನ್ನಾಗಿ ಕಲಕಿದ ಅನಂತರ ತಾಮ್ರದ ಹೂಜಿಗಳಲ್ಲಿ ಹಾಕಿಟ್ಟು ಪಿಂಗಾಣಿ ಬಟ್ಟಲುಗಳಿಗೆ ಬಸಿದು ಕೊಡುತ್ತಾರೆ. ವಿಶೇಷವೆಂದರೆ ಈ ಬಟ್ಟಲುಗಳಿಗೆ ಹಿಡಿಕೆ ಇರುವುದಿಲ್ಲ. ಪ್ರತಿಯೊಬ್ಬ ಲಡಾಖಿಯೂ ದಿನಕ್ಕೆ ಇಂಥ ಹತ್ತಿಪ್ಪತ್ತು ಬಟ್ಟಲುಗಳ ಚಾಂಗ್ ಸಮಾರಾಧನೆ ನಡೆಸುತ್ತಾನೆ.
ಅತಿಥಿಸತ್ಕಾರದಲ್ಲಿ ಲಡಾಖಿಗಳು ಸದಾ ಮುಂದು. ಅತಿಥಿಯೊಂದಿಗೆ ಚಾಂಗ್ ಸೇವನೆ ಅತಿ ವಿಶಿಷ್ಟವಾಗಿ ನಡೆಯುತ್ತದೆ. ಅತಿಥಿ ಆತಿಥೇಯರಿಬ್ಬರೂ ನೆಲಕ್ಕೆ ಹಾಸಿದ ರತ್ನಗಂಬಳಿಯ ಮೇಲೆ ಎದುರುಬದುರಾಗಿ ಕೂರುತ್ತಾರೆ. ಅವರ ನಡುವೆ ಆಯತಾಕಾರದ ಪುಟ್ಟ ನಾಲ್ಕುಕಾಲಿನ ಅಲಂಕೃತ ಮೇಜು ಇರುತ್ತದೆ. ಸುತ್ತಲೂ ಮನೆಯ ಸದಸ್ಯರು ಕುಳಿತಿರುತ್ತಾರೆ. ಮನೆಯಾತ ಬಟ್ಟಲಿಗೆ ಚಾಂಗ್ ಬಸಿದು ಅತಿಥಿಯ ಕೈಗೆ ಆದರದಿಂದ ಕೊಡುತ್ತಾನೆ. ಅತಿಥಿ ಮಂದಹಾಸದಿಂದ ಅದನ್ನು ಸ್ವೀಕರಿಸಿ ತನ್ನ ಬಲ ತೋರುಬೆರಳನ್ನು ತುಸುವೇ ಅದರಲ್ಲಿ ಅದ್ದಿ ತೆಗೆದು ಚಿಟಿಕೆ ಹಾರಿಸುತ್ತಾನೆ. ಅದೇ ವೇಳೆಗೆ ಮನೆಯಾತನೂ ತನ್ನ ಬಟ್ಟಲಲ್ಲಿ ಬೆರಳು ಅದ್ದಿ, ಚಿಟಿಕೆ ಹಾರಿಸುತ್ತಾನೆ. ಇಬ್ಬರೂ ನಿಧಾನವಾಗಿ ಚಾಂಗ್ ಸೇವಿಸುತ್ತಾ ಅಕ್ರೂಟ್ ಪುಡಿ ಮೆಲ್ಲುತ್ತಾ ಮಾತುಕತೆಗೆ ತೊಡಗುತ್ತಾರೆ. ಸಂತಸದ ನಗೆಚಟಾಕಿಗಳು ಯಥೇಚ್ಛವಾಗಿ ಹೊರಹೊಮ್ಮುತ್ತವೆ. ಇಂಥ ಹರಟೆಗಳೇ ಲಡಾಖಿ ಜನಜೀವನದ ಜೀವಾಳ.
ಚಳಿಗಾಲದ ಗೃಹಬಂಧನದಲ್ಲಿ ಮನೆಯ ಎಲ್ಲರೂ ಒಟ್ಟುಗೂಡಿ ಹರಟೆ ಹೊಡೆಯುತ್ತಾರೆ. ಮನೆಯ ಎಲ್ಲರೂ ಎಂದರೆ ಎಷ್ಟು ಜನರಿರಬಹುದೆಂದು ಊಹಿಸಿ. ಮನೆಯಾತ, ಅವನ ಪತ್ನಿ, ಅವನ ತಮ್ಮಂದಿರು, ಮಕ್ಕಳು, ತಂದೆತಾಯಿ, ಅಜ್ಜಅಜ್ಜಿ, ಮುತ್ತಜ್ಜ ಮುತ್ತಜ್ಜಿಯರು ಅಂದರೆ ತೊಟ್ಟಿಲಕೂಸು ಬಾಣಂತಿಯರೊಂದಿಗೆ ನಾಲ್ಕೈದು ಪೀಳಿಗೆಯ ಹದಿನೈದಕ್ಕೂ ಹೆಚ್ಚಿನ ಜನ ಅಲ್ಲಿರುತ್ತಾರೆ. ಇಲ್ಲಿನ ಜನಕ್ಕೆ ಆಯುಷ್ಯ ಹೆಚ್ಚು. ಎಲ್ಲರೂ ಮೂರಂಕಿಯ ವಸಂತಗಳನ್ನು ಕಾಣುತ್ತಾರೆ. ಇನ್ನೊಂದು ವಿಚಿತ್ರವೆಂದರೆ ಇಲ್ಲಿ ಬಹುಪತಿತ್ವ ಅಸ್ತಿತ್ವದಲ್ಲಿದೆ. ಎಲ್ಲ ಮನೆಯೂ ಪಾಂಡವ ಸಾಮ್ರಾಜ್ಯವೇ. ಕಾರಣವೇನೋ ತಿಳಿಯದು.
ಧರ್ಮ ಮತ್ತು ಸಂಸ್ಕೃತಿ
ಬದಲಾಯಿಸಿಟಿಬೆಟ್ ಇಂದು ಚೀನಾದ ವಶದಲ್ಲಿದೆಯಾದರೂ ಲಡಾಖ್ ಮೂಲನಿವಾಸಿಗಳಿಗೆ ಟಿಬೆಟ್ಟಿನೊಂದಿಗೆ ಹೊಕ್ಕು ಬಳಕೆ ಸಲೀಸು. ಅದೇ ವೇಳೆಯಲ್ಲಿ ಲಡಾಖ್ ಇಂಡಿಯಾದ ನೆಲದ ಮೇಲಿದ್ದರೂ ರಾಮಾಯಣ ಮಹಾಭಾರತಗಳು ಇಲ್ಲಿ ಅಪ್ರಸ್ತುತ. ಲಡಾಖಿಗಳ ಎಲ್ಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಬಿಂದು ಗೌತಮಬುದ್ಧ. ಇಲ್ಲಿನ ಬಹುಸಂಖ್ಯಾತ ಜನ ಬೌದ್ಧಧರ್ಮೀಯರು. ಕ್ರೈಸ್ತ, ಮುಸಲ್ಮಾನರನ್ನೂ ಇಲ್ಲಿ ಕಾಣಬಹುದು. ಹಾಗಾಗಿ ಇಲ್ಲಿನ ರೀತಿರಿವಾಜು ಉಡುಗೆತೊಡುಗೆಗಳು ನಮ್ಮದಕ್ಕಿಂತ ಭಿನ್ನವಾಗಿವೆ. ಇಲ್ಲಿನ ಪ್ರತಿ ಕುಟುಂಬದ ಒಬ್ಬ ಸದಸ್ಯ ಬೌದ್ಧ ಭಿಕ್ಷುವಾಗಿರುತ್ತಾನೆ. ಭಾರೀ ಧರ್ಮಭೀರುಗಳಾದ ಲಡಾಖಿಗಳು ಯಾವನೇ ಒಬ್ಬ ಭಿಕ್ಷು, ಆತ ನಾಲ್ಕೈದು ವರ್ಷದವನಾಗಿರಲಿ ಅಥವಾ ಹಣ್ಣುಹಣ್ಣು ಮುದುಕನಾಗಿರಲಿ ಸಮಾನ ಗೌರವ ಕೊಡುತ್ತಾರೆ. ಭಿಕ್ಷುಗಳು ನೆಲೆಸಿರುವ ಹಾಗೂ ಅಧ್ಯಯನ ಮಾಡುವ ಸ್ಥಳಕ್ಕೆ ’ಗೊಂಪ’ (ಮಠ) ಎನ್ನುತ್ತಾರೆ. ಅಲ್ಲಿ ಬಿಕ್ಕುಗಳು ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳುತ್ತಾರೆ, ತಾವೇ ಅಡುಗೆ ಮಾಡಿಕೊಳ್ಳುತ್ತಾರೆ. ನಿತ್ಯವೂ ಬೌದ್ಧ ತತ್ವಗಳನ್ನು ಲಯಬದ್ದವಾಗಿ ಪಠಿಸುತ್ತಾರೆ, ಬುದ್ಧನ ಪೂಜೆ ಮಾಡುತ್ತಾರೆ ಹಾಗೂ ಭಕ್ತಾದಿಗಳಿಗೆ ಉಪದೇಶ ಮಾರ್ಗದರ್ಶನ ನೀಡುತ್ತಾರೆ. ಲಡಾಖಿನಲ್ಲಿರುವ ಹಲವಾರು ಗೊಂಪಗಳಲ್ಲಿ ತಿಕ್ಸೇ, ಹೆಮಿಸ್, ಶೆಯ್ ಹಾಗೂ ಸ್ಪಿತುಕ್ ಗೊಂಪಗಳು ಪ್ರಸಿದ್ಧ.
ಭಗವಂತನ ದರ್ಶನ, ಮಳೆಬೆಳೆಗೆ ಪ್ರಾರ್ಥನೆ, ಕೌಟುಂಬಿಕ ಸಮಸ್ಯೆಗಳಿಗೆ ಮಾರ್ಗದರ್ಶನ, ಹರಕೆ ತೀರಿಸುವ ಉದ್ದೇಶಗಳಿಗಾಗಿ ಭಕ್ತರು ಗೊಂಪಗಳಿಗೆ ಭೇಟಿ ಕೊಡುತ್ತಾರೆ. ಈ ಗೊಂಪಗಳು ಬುದ್ಧನ ಮಂದಿರ ಮಾತ್ರವಲ್ಲ ಬೌದ್ಧ ಸಂನ್ಯಾಸಿಗಳನ್ನು ತಯಾರು ಮಾಡುವ ವಿದ್ಯಾಮಂದಿರ ಕೂಡಾ. ಯಾವುದೇ ಕಾರಣಕ್ಕೂ ಇಲ್ಲಿ ಹೆಂಗಸರು ತಂಗುವಂತಿಲ್ಲ. ಭಕ್ತರು ಭಗವಾನ್ ಬುದ್ಧನಿಗೂ ಭಗವತೀ ದೇವಿಗೂ ನಮಸ್ಕರಿಸಬಹುದೇ ಹೊರತು ಪೂಜಾ ಕೈಂಕರ್ಯಗಳನ್ನೆಲ್ಲ ಬಿಕ್ಕುಗಳೇ ನೆರವೇರಿಸುತ್ತಾರೆ.
ಈ ಪೂಜೆಯಂತೂ ನಾಲ್ಕೈದು ಗಂಟೆಗಳ ಕಾಲ ನಡೆಯುವ ದೀರ್ಘ ಧಾರ್ಮಿಕ ಕ್ರಿಯೆ. ಬುದ್ಧ ಪ್ರತಿಮೆಯ ಮುಂದೆ ಲಂಬರೇಖೆಯಲ್ಲಿ ಎದುರುಬದುರು ಎರಡುಸಾಲಾಗಿ ಕುಳಿತ ಐವತ್ತಕ್ಕೂ ಹೆಚ್ಚು ಬಿಕ್ಕುಗಳು ರಾಗಬದ್ಧವಾಗಿ ಧಾರ್ಮಿಕ ಗ್ರಂಥಗಳ ಪಠಣ ನಡೆಸುತ್ತಾರೆ. ವೃದ್ಧ ಬಿಕ್ಕುಗಳಿಗೆ ಬೌದ್ಧ ಧಾರ್ಮಿಕ ಗ್ರಂಥಗಳು ಕಂಠಪಾಠವಾಗಿರುತ್ತವೆ. ನಡುನಡುವೆ ಕೆಲ ಬಿಕ್ಕುಗಳು ’ಡಂಕ’ (ಏಳು ಅಡಿ ಉದ್ದದ ನಾದಸ್ವರವನ್ನು ಹೋಲುವ ತುತ್ತೂರಿ) ಊದುತ್ತಾರೆ. ಕೆಲವರು ಧೂಪ ಹಾಕುತ್ತಾರೆ. ಕೆಲವರು ಪುಷ್ಪಾರ್ಚನೆ ಮಾಡುತ್ತಾರೆ. ಇನ್ನು ಕೆಲವರು ತಮಟೆ ಬಾರಿಸುತ್ತಾರೆ.
ಬಿಕ್ಕುಗಳ ನಡುವಿನಿಂದ ಭಕ್ತಾದಿಗಳು ಸಾಲಾಗಿ ಬುದ್ಧ ಪ್ರತಿಮೆಯೆಡೆಗೆ ತೆರಳಿ ನಮಸ್ಕರಿಸಿ ಹುಂಡಿಯಲ್ಲಿ ಧಾರಾಳವಾಗಿ ಹಣ ಹಾಕಿ ಬಿಕ್ಕುಗಳ ಹಿಂದಿನಿಂದ ನಡೆದು ಬರುತ್ತಾರೆ. ಪೂಜೆ ಮುಕ್ತಾಯದ ಹಂತ ತಲಪಿದಂತೆ ಹಿರಿಯ ಬಿಕ್ಕುಗಳು ತಲೆಗೆ ಬಟ್ಟೆಯ ಕಿರೀಟ ತೊಟ್ಟುಕೊಳ್ಳುತ್ತಾರೆ. ಮಠದ ಮುಖ್ಯ ಬಿಕ್ಕು ಪೂಜಾ ಕೈಂಕರ್ಯದಲ್ಲಿ ತೊಡಗಿದ ಎಲ್ಲ ಬಿಕ್ಕುಗಳಿಗೂ ಹಿರಿಕಿರಿಯರೆಂಬ ಭೇದವಿಲ್ಲದೆ ಶುಭ್ರ ಬಿಳಿಯ ತುಂಡುವಸ್ತ್ರವನ್ನೂ ಹಣವನ್ನೂ ಹಂಚುತ್ತಾನೆ. ಇಲ್ಲಿ ಬಿಕ್ಕುಗಳಿಗೆ ಇಷ್ಟೇ ಕೊಡಬೇಕೆಂಬ ನಿಯಮವಿಲ್ಲ, ಭಕ್ತರು ಇಷ್ಟೇ ತೆರಬೇಕೆಂಬ ಕಡ್ಡಾಯವಿಲ್ಲ. ಎಲ್ಲವೂ ಶಿಸ್ತುಬದ್ದವಾಗಿ ಆದರೆ ಭಕ್ತಿಪೂರ್ವಕವಾಗಿ ನೆರವೇರುತ್ತದೆ.
ಲಡಾಖಿಗಳ ಮದುವೆ ಸಮಾರಂಭಗಳು ನಡೆಯುವುದು ಈ ಗೊಂಪಗಳಲ್ಲೇ. ಮದುವೆಗೆ ಹೆಚ್ಚೆಂದರೆ ಒಂದು ನೂರು ಜನ ಸೇರುತ್ತಾರೆ. ಹುಡುಗನ ತಂದೆ ಬಹಳಷ್ಟು ಹೆಣ್ಣುಗಳ ಮನೆಗೆ ಅಲೆದು ತಮ್ಮ ಕುಟುಂಬಕ್ಕೆ ಸೂಕ್ತವಾದ ಕನ್ಯೆಯನ್ನು ನೋಡಿ ಶುಲ್ಕ ಕೊಟ್ಟು ಬರುತ್ತಾನೆ. ಗೊಂಪದಲ್ಲಿ ನಡೆಯುವುದು ಧರ್ಮಸಮ್ಮುಖ-ಧರ್ಮಸಮ್ಮತ ವಿವಾಹ. ಅಲ್ಲಿ ಬಿಕ್ಕುಗಳ ಧರ್ಮಗ್ರಂಥಗಳ ಪಠನದ ನಡುವೆ ಅಲಂಕೃತ ವಧುವರರು ಅಕ್ಕಪಕ್ಕ ನಿಲ್ಲುತ್ತಾರೆ. ಹುಡುಗನ ತಂದೆ ಹುಡುಗಿಯ ತಂದೆಗೆ ಚಾಂಗ್ ಕೊಡುತ್ತಾನೆ, ಆತ ಅದನ್ನು ಕುಡಿಯುತ್ತಾನೆ, ಅಷ್ಟೇ. ಅಲ್ಲಿಗೆ ಮದುವೆ ನಡೆದುಹೋಯಿತು. ಇನ್ನು ಆ ಹುಡುಗಿಯು ಹುಡುಗನ ಅಲ್ಲ..ಲ್ಲ... ಅವನ ಮತ್ತು ಅವನ ತಮ್ಮಂದಿರೆಲ್ಲರ ಸೊತ್ತು! ಬಂದ ಜನರೆಲ್ಲ ವಧುವರರಿಗೆ ಮುತ್ತಿಟ್ಟು ಶುಭ ಕೋರುತ್ತಾರೆ. ಅನಂತರ ಬೆಳ್ಳಿಯ ಹೂಜಿಗಳಲ್ಲಿ ತುಂಬಿದ ಮದ್ಯದ ಸೊಗಡಿನ ಚಾಂಗ್ ಅನ್ನು ಎಲ್ಲ ಅತಿಥಿಗಳಿಗೂ ನೀಡುತ್ತಾರೆ.
ಅನಂತರ ಬಿಕ್ಕುಗಳು ರಕ್ಷಕ ಶಕ್ತಿಗಳ ಮುಖವಾಡ ಧರಿಸಿ ನರ್ತಿಸತೊಡಗುತ್ತಾರೆ. ದುಷ್ಟಶಕ್ತಿಗಳನ್ನು ತೊಲಗಿಸಿ ನೂತನ ವಧುವರರಿಗೆ ಶುಭಹಾರೈಸುವುದೇ ಈ ನರ್ತನದ ಉದ್ದೇಶ. ಇತರ ಬಿಕ್ಕುಗಳು ತಮಟೆ, ಕಂಚಿನವಾದ್ಯ ಬಾರಿಸುತ್ತಾರೆ, ಡಂಕಗಳನ್ನು ನುಡಿಸುತ್ತಾರೆ. ನರ್ತನದ ಅನಂತರ ಈ ವಾದ್ಯಗಳ ಸಮೇತ ಮೆರವಣಿಗೆ ಸಾಗಿ ದಿಬ್ಬಣವನ್ನು ಕಳುಹಿಸಿ ಬರುತ್ತಾರೆ. ಇತರ ಉತ್ಸವ ಹಾಗೂ ಜಾತ್ರೆಗಳಲ್ಲೂ ಸಹ ಈ ವಿಶಿಷ್ಟ ರಕ್ಷಕಶಕ್ತಿಗಳ ಆರಾಧನೆ ಹಾಗೂ ವಾದ್ಯಸಹಿತದ ಮೆರವಣಿಗೆ ಇರುತ್ತದೆ. ಡಂಕಗಳು ಏಳು ಅಡಿಗಳ ಉದ್ದ ಹಾಗೂ ವಿಪರೀತ ಭಾರವಾಗಿರುವುದರಿಂದ ಪ್ರಾರ್ಥನಾ ಮಂದಿರದ ಒಳಗೆ ಕುಳಿತು ನುಡಿಸುವಾಗ ನೆಲದಮೇಲೆ ಒರಗಿಸಿ ಊದುತ್ತಾರೆ, ಆದರೆ ಮೆರವಣಿಗೆಯಲ್ಲಿ ಸಾಗುವಾಗ ಮುಂದಿನವರ ಹೆಗಲಿಗೆ ಕಟ್ಟಿ ಊದುತ್ತಾರೆ.
ಲಡಾಖಿನಲ್ಲಿ ಗೊಂಪಗಳಿಗಿರುವಷ್ಟೇ ಪ್ರಮುಖ ಸ್ಥಾನ ಬುದ್ಧನ ಧರ್ಮಚಕ್ರಗಳಿಗೂ ಸಲ್ಲುತ್ತದೆ. ಸುಂದರ ಚೌಕಾಕಾರದ ಮಂಟಪದೊಳಗೆ ಸುಮಾರು ಒಂದು ಮೀಟರು ವ್ಯಾಸ ಹಾಗೂ ಎರಡೂವರೆ ಮೀಟರು ಎತ್ತರದ ಕಂಬವನ್ನು ಸುಲಭವಾಗಿ ತಿರುಗಿಸಲು ಸಾಧ್ಯವಾಗುವಂತೆ ಅಚ್ಚುಗಳಲ್ಲಿ ಕೂರಿಸಿರುತ್ತಾರೆ. ಕಂಬದ ಹೊರಮೈ ಮೇಲೆ ಬುದ್ಧ ಸೂಕ್ತಿಗಳನ್ನೂ ಚಿತ್ರಗಳನ್ನೂ ಬಿಡಿಸಿರುತ್ತಾರೆ. ಸಾಮಾನ್ಯವಾಗಿ ಗೊಂಪಗಳು ನದಿ ತಟಾಕ, ಗುಡ್ಡ ಬೆಟ್ಟಗಳ ಮೇಲಿದ್ದರೆ ಈ ಧರ್ಮಚಕ್ರಗಳನ್ನು ಸಂತೆಯ ಬಳಿ ಇಲ್ಲವೇ ದಾರಿಗಳು ಕೂಡುವೆಡೆಯಲ್ಲಿ ಸ್ಥಾಪಿಸಿರುತ್ತಾರೆ. ದಾರಿಯಲ್ಲಿ ಸಾಗುವವರೆಲ್ಲ ಧರ್ಮಚಕ್ರದ ಬಳಿಬಂದು ಪ್ರಾರ್ಥಿಸಿ ಚಕ್ರವನ್ನು ತಿರುಗಿಸಿ ಹೋಗುತ್ತಾರೆ. ಹೀಗೆ ಚಕ್ರ ತಿರುಗುತ್ತಲೇ ಇರುತ್ತದೆ. ಓಡಾಡದ ವೃದ್ಧರು ತಾವು ಕುಳಿತೆಡೆಯಲ್ಲಿಯೇ ಕೈಯಲ್ಲಿ ಹಿಡಿಯಬಹುದಾದ ಪುಟ್ಟ ಧರ್ಮಚಕ್ರಗಳನ್ನು ತಿರುಗಿಸುತ್ತಾ ಮಣಮಣ ಮಂತ್ರ ಜಪಿಸುವುದನ್ನು ಕಾಣಬಹುದು.
ಲೆಹ್ ನಲ್ಲಿ ಅಲ್ಲೊಂದು ಇಲ್ಲೊಂದು ಸಮಾಧಿಸ್ಮಾರಕಗಳಂತೆ ತೋರುವ ಸ್ತಂಭಗೋಪುರವುಳ್ಳ ಕಟ್ಟಡಗಳು ಕಾಣಸಿಗುತ್ತವೆ. ಬಾಗಿಲಿಲ್ಲದ ಈ ಕಟ್ಟಡಗಳು ರಕ್ಷಕಶಕ್ತಿಗಳ ಆವಾಸ ಸ್ಥಾನಗಳಂತೆ. ಅವುಗಳಿಗೆ ಲಡಾಖಿಗಳು ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಹಾಕುತ್ತಾರೆ. ಗೊಂಪ, ಧರ್ಮಚಕ್ರ ಹಾಗೂ ಈ ಕಟ್ಟಡದ ಸ್ಥಳಗಳಲ್ಲಿ ಮಾತ್ರ ಜನರು ಪಾದರಕ್ಷೆಗಳನ್ನು ಬಿಚ್ಚುತ್ತಾರೆ. ಉಳಿದೆಲ್ಲ ಸ್ಥಳಗಳಲ್ಲಿ ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಬೂಟು ಧರಿಸಿಯೇ ಇರುತ್ತಾರೆ. ಲಡಾಖಿನ ಚಳಿಗೆ ಬರಿಗಾಲಲ್ಲಿರುವುದು ಅಸಾಧ್ಯವಾದ ಸಂಗತಿ. ಹೆಮಿಸ್ ಗೊಂಪದಲ್ಲಿರುವ ಹದಿನೈದು ಅಡಿ ಎತ್ತರದ ಪದ್ಮಸಂಭವ ಬುದ್ಧ ಕೂಡಾ ಬೂಟು ಧರಿಸಿಯೇ ಕುಳಿತಿದ್ದಾನೆ.
ಸುರಕ್ಷಿತ ನೆಲೆಯಾಗಿದ್ದು ಭಯೋತ್ಪಾದಕರಿಂದ ಎಂದೂ ಕ್ಷೋಭೆಗೊಳಗಾಗದ ಲಡಾಖ್ ನಮ್ಮ ದೇಶದ ಇತರ ಜನಾಂಗಗಳ ಅತಿಕ್ರಮಣದಿಂದ ತುಸು ಆತಂಕಕ್ಕೆ ಈಡಾಗಿದೆ. ಸಾಂಪ್ರದಾಯಿಕ ಕಂದು ನಿಲುವಂಗಿ (ಚುಬ್ಬಾ) ಗಳ ಬದಲು ಜೀನ್ಸ್ ಹಾಗು ಸಲ್ವಾರ್ ಕಮಿಝ್ಗಳು ಕಾಣತೊಡಗಿವೆ. ಕಾಶ್ಮೀರ ಸರ್ಕಾರವು ಲಡಾಖಿಗೆ ಯೋಜಿಸಿದ ತನ್ನ ಅಧಿಕಾರಿಗಳು ಹಾಗೂ ನೌಕರರು ಲಡಾಖೀ ಹೆಣ್ಣನ್ನು ಮದುವೆಯಾದರೆ ಅವರಿಗೆ ಬಡ್ತಿ ನೀಡುವ ಮೂಲಕ ಹಾಗೂ ಕಡ್ಡಾಯ ಶಿಕ್ಷಣವನ್ನು ಹೇರುವ ಮೂಲಕ ಲಡಾಖೀ ಸಂಸ್ಕೃತಿಯನ್ನು ಕೊಲ್ಲುತ್ತಿದೆ ಎಂಬ ಕಾರಣಕ್ಕೆ ಲಡಾಖಿಗಳಲ್ಲಿ ತೀವ್ರ ಅಸಮಾಧಾನವಿದೆ. ಸ್ವಾತಂತ್ರ್ಯಪ್ರಿಯರಾದ ಲಡಾಖಿಗಳು ಸ್ವಾಯತ್ತತೆ ಬೇಕೆಂದು ಒತ್ತಾಯಿಸುತ್ತಾ ಬಂದ ಪರಿಣಾಮವಾಗಿ ೧೯೯೫ರಿಂದೀಚೆಗೆ ಲಡಾಖಿಗೆ ಸ್ವಲ್ಪಮಟ್ಟಿಗಿನ ಆಡಳಿತ ಸ್ವಾಯುತ್ತತೆ ನೀಡಲಾಗಿದೆ.
ಆದರೂ ಲಡಾಖಿಗಳು ಪ್ರವಾಸಿಗಳನ್ನು ವಿಶೇಷವಾಗಿ ಆದರಿಸುತ್ತಾರೆ. ತಮ್ಮ ಊರು ಸಂಸ್ಕೃತಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಯಾರೂ ವಿದೇಶೀ ಪ್ರವಾಸಿಗರ ಮುಂದೆ ನಿಂತು ಹಲ್ಲುಕಿರಿದು ಬೇಡುವುದಿಲ್ಲ. ಯಾವೊಬ್ಬ ಲಡಾಖಿಯೂ ನಿಮ್ಮನ್ನು ಅಪರಿಚಿತನಂತೆ ಕಾಣದೆ ಮುಗುಳ್ನಗೆಯಿಂದ ’ಜುಲೇ’ (ನಮಸ್ಕಾರ) ಎಂದು ಸ್ವಾಗತಿಸುತ್ತಾನೆ.
ಸ್ವೀಡಿಷ್ ಪ್ರವಾಸಿ ಹೆಲೆನಾ ಎನ್ ಹೋಜ್ರವರ ನೇತೃತ್ವದಲ್ಲಿ ನವಕ್ರಾಂತಿ ಮೈದಳೆದು ಲಡಾಖಿಗಳ ಐತಿಹಾಸಿಕ ಸಾಂಸ್ಕೃತಿಕ ಮಾಹಿತಿಗಳ ಸಂರಕ್ಷಣೆ, ಕೃಷಿ ವಿಧಾನದ ರೂಪಾಂತರ, ಸೂಕ್ತ ತಂತ್ರಜ್ಞಾನದ ಅಳವಡಿಕೆಗಳಿಂದ ಅಲ್ಲಿನ ಬದುಕು ಹೊಸ ಆಯಾಮ ಪಡೆಯುತ್ತಿದೆ. ಓದಿದ ಲಡಾಖಿಗಳು ತಮ್ಮ ತಾಯ್ನೆಲೆಗೆ ಹಿಂದಿರುಗಿ ಅದರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕಣ್ಮನ ಸೆಳೆವ ತಾಣಗಳು
ಬದಲಾಯಿಸಿಶೆಯ್ ಅರಮನೆ: ಲಡಾಖಿನ ಮೊದಲ ರಾಜವಂಶದವರ ರಾಜಧಾನಿಯಾಗಿ ಮೆರೆದ ಒಂಬತ್ತನೇ ಶತಮಾನದ ಈ ಅರಮನೆಯಲ್ಲಿ ಡೆಲ್ಟನ್ ನಾಮ್ಗಯಾಲ್ ರಾಜ ತನ್ನ ತಂದೆಯ ಸ್ಮರಣೆಗಾಗಿ ಹನ್ನೆರಡು ಅಡಿ ಎತ್ತರದ ತಾಮ್ರದ ಹೊದಿಕೆಯಿರುವ ಶಾಕ್ಯಮುನಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ್ದಾನೆ. ಅದೇ ಆವರಣದಲ್ಲಿರುವ ದ್ರೆಸ್ತಂಗ್ ಗೊಂಪದಲ್ಲಿ ಮೂರು ಮಹಡಿಗಳಷ್ಟು ಅಂದರೆ ಸುಮಾರು ಇಪ್ಪತ್ತೈದು ಅಡಿಗಳೆತ್ತರದ ಬುದ್ಧ ಪ್ರತಿಮೆ ಇದೆ. ಇದೇ ಶೆಯ್ ಅರಮನೆಯಿಂದ ಸಿಂಧೂ ನದಿಯ ಹರಿವಿನ ದೃಶ್ಯ ಹಿಮಾಲಯದ ಹಿನ್ನೆಲೆಯಲ್ಲಿ ಮನೋಜ್ಞವಾಗಿ ಕಾಣುವುದು.
ಥಿಕ್ಸೇ ಗೊಂಪ : ಲೆಹ್ನಿಂದ ದಕ್ಷಿಣಕ್ಕೆ ಮನಾಲಿ ರಸ್ತೆಯಲ್ಲಿ ಸುಮಾರು ೨೨ ಕಿಲೋಮೀಟರು ದೂರದಲ್ಲಿನ ಗುಡ್ಡದ ಮೇಲಿರುವ ಬೌದ್ಧಮಠವು ಜೀವಂತಿಕೆಯಿಂದ ಕೂಡಿದ ವರ್ಣರಂಜಿತ ಸ್ಥಳ. ಸದಾ ಪ್ರವಾಸಿಗರಿಂದ ಭಕ್ತರಿಂದ ತುಂಬಿರುವ ಈ ಗೊಂಪದಲ್ಲಿ ನಡೆಯುವ ಪೂಜಾವಿಧಿಗಳನ್ನು ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಲಡಾಖಿನ ಆಚಾರ ವಿಚಾರಗಳನ್ನು ಅರಿಯಲು ಹಾಗೂ ಲಡಾಖಿ ಬೌದ್ಧಧರ್ಮವನ್ನು ಅಭ್ಯಸಿಸಲು ಥಿಕ್ಸೇ ಗೊಂಪ ಸೂಕ್ತ ಸ್ಥಳವಾಗಿದೆ. ಇಲ್ಲಿರುವ ಸುಮಾರು ಇಪ್ಪತ್ತು ಅಡಿ ಎತ್ತರದ ಮೈತ್ರೇಯ ಬುದ್ಧನ ಪ್ರತಿಮೆ ಸುಂದರವೂ ನಯನಮನೋಹರವೂ ಆಗಿದೆ.
ಹೆಮಿಸ್ ಗೊಂಪ : ಇಡೀ ಲಡಾಖ್ ಪ್ರಾಂತ್ಯದಲ್ಲಿ ಅತ್ಯಂತ ಪ್ರಸಿದ್ಧವೂ ವಿಸ್ತಾರವೂ ಆಗಿರುವ ಬೌದ್ಧ ಮಠವೆಂದರೆ ಈ ಹೆಮಿಸ್ ಗೊಂಪ. ಈ ಮಠದ ಹೆಸರು ಚಾಂಗ್ಚುಬ್ಲಿಂಗ್ ಗೊಂಪ ಎಂದಿದ್ದರೂ ಸ್ಥಳನಾಮ ಹೆಮಿಸ್ ಎಂಬ ಹೆಸರಿನಿಂದಲೇ ಪ್ರಚಲಿತವಾಗಿದೆ. ಇದು ಲೆಹ್ಗೆ ೪೫ ಕಿಮೀ ದಕ್ಷಿಣಕ್ಕೆ ಸುಮಾರು ೧೩೦೦೦ ಅಡಿಗಳ ಎತ್ತರದಲ್ಲಿದೆ. ಕ್ರಿಸ್ತಶಕ ೧೭ನೇ ಶತಮಾನದಲ್ಲಿ ಸಿಂಗೇ ನಾಮ್ಗಯಾಲ್ ರಾಜನಿಂದ ನಿರ್ಮಾಣಗೊಂಡ ಈ ಮಠದಲ್ಲಿ ಪ್ರಾಚೀನ ನಾಣ್ಯಗಳೂ, ಚಿನ್ನಬೆಳ್ಳಿಯ ಅಮೂಲ್ಯ ವಸ್ತುಗಳೂ ತಾಮ್ರದ ತಗಡು ಹೊದಿಸಿದ ಹದಿನೈದು ಅಡಿ ಎತ್ತರದ ಪದ್ಮಸಂಭವ ಬುದ್ಧ ಪ್ರತಿಮೆಯೂ ಇವೆ. ಟಿಬೆಟನ್ ಕ್ಯಾಲೆಂಡರಿನಂತೆ ಐದನೇ ತಿಂಗಳಲ್ಲಿ ಇಲ್ಲಿ ದೊಡ್ಡ ಉತ್ಸವ ಆಚರಿಸುತ್ತಾರೆ.
ಸ್ತೋಕ್ ಅರಮನೆ : ಲೆಹ್ನಿಂದ ೧೪ ಕಿಮೀ ದೂರದಲ್ಲಿರುವ ಈ ಅರಮನೆ ೧೮೨೫ರಲ್ಲಿ ಕಟ್ಟಲಾಗಿದ್ದು ಇಂದಿಗೂ ಲಡಾಖೀ ರಾಜವಂಶದವರ ವಾಸವಾಗಿದೆ. ಆದರೆ ಪ್ರಾಚೀನ ದಿರಿಸುಗಳು ಆಭರಣಗಳು ಹಾಗೂ ಧಾರ್ಮಿಕ ವಸ್ತುಗಳನ್ನು ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.
ಶಾಂತಿಸ್ತೂಪ : ಲೆಹ್ ನಗರದ ಅಂಚಿನಲ್ಲಿ ಎತ್ತರದ ಗುಡ್ಡದ ಮೇಲೆ ಇತ್ತೀಚೆಗೆ ನಿರ್ಮಿಸಿರುವ ಈ ಸ್ತೂಪದಲ್ಲಿ ಬೌದ್ಧ ಜಾತಕ ಕಥೆಗಳ ಸನ್ನಿವೇಶಗಳನ್ನು ವರ್ಣಚಿತ್ರಗಳಲ್ಲಿ ಬಿಡಿಸಲಾಗಿದೆ. ಈ ಸ್ತೂಪದ ಮೇಲಿಂದ ಲೆಹ್ ನಗರದ ಪಕ್ಷಿನೋಟವನ್ನು ಕಾಣಬಹುದು.
ಲೆಹ್ನ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಪೋಲೊ ಮೈದಾನವಿದೆ. ಹಿಮಕಣಗಳನ್ನು ಹೊದ್ದುಕೊಂಡು ಬೆಳ್ಳಗೆ ಮಿಂಚುವ ಮೈದಾನವು ಆಟ ಶುರುವಾದೊಡನೆ ನೆಲದಲ್ಲಿ ಚಿತ್ತಾರಗಳನ್ನು ಮೂಡಿಸಿ ರಂಗೇರುತ್ತದೆ. ಲೆಹ್ ನಗರದ ಇನ್ನೊಂದೆಡೆ ಮೈದಾನದಲ್ಲಿ ನೀರು ನಿಲ್ಲಿಸಿ ಅದು ಹೆಪ್ಪುಗಟ್ಟಿರುವಾಗ ಜಾರುತ್ತಾ ಪೋಲೋ ಆಡುತ್ತಾರೆ. ಹಾಗೆ ನೋಡಿದರೆ ಜಗತ್ತಿಗೆ ಪೋಲೋ ಕ್ರೀಡೆಯನ್ನು ಕೊಡುಗೆಯಾಗಿ ನೀಡಿದವರು ಲಡಾಖಿಗಳು. ವಿಶ್ವವಿಖ್ಯಾತವಾದ ಪಾಶ್ಮಿನಾ ಶಾಲುಗಳ ಉಗಮವಾದದ್ದೂ ಲಡಾಖಿನಲ್ಲಿಯೇ.
ಹೇಳಿಕೇಳಿ, ಲಡಾಖ್ ನಮ್ಮ ಜಗತ್ತಿನ ಅತಿ ಎತ್ತರದ ಪ್ರದೇಶ. ಇಲ್ಲಿ ನಿಂತು ನಕ್ಷತ್ರಗಳ ಸ್ಥಿತಿಯನ್ನೂ ಗ್ರಹಗಳ ಚಲನೆಯನ್ನೂ ದರ್ಶಿಸುವುದೇ ಅತ್ಯಂತ ಅಪ್ಯಾಯಮಾನ ಸಂಗತಿಯಲ್ಲವೇ? ಅದಕ್ಕೆಂದೇ ನಮ್ಮ ವಿಜ್ಞಾನಿಗಳು ೪೫೧೭ಮೀಟರು ಎತ್ತರದ ಸ್ಥಳದಲ್ಲಿ ಹ್ಯಾನ್ಲೆ (Hanley) ದೂರದರ್ಶಕವನ್ನು ಸ್ಥಾಪಿಸಿದ್ದಾರೆ.
ಲಡಾಖ್ ಇದೀಗ ಇಡೀ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ ಇದೆ. ವಿಭಿನ್ನ ಜನರ ವಿಶಿಷ್ಟ ಸಂಸ್ಕೃತಿಯ ಒಂದು ಗುಪ್ತ ಪ್ರಪಂಚವಾಗಿದ್ದ ಲಡಾಖಿಗೆ ಇಂದು ಪ್ರವಾಸಿಗರು ಹೆಚ್ಚುಹೆಚ್ಚಾಗಿ ಬರುತ್ತಿದ್ದಾರೆ. ನಿಸರ್ಗ ವೈಪರೀತ್ಯದ ಕಾರಣವೊಡ್ಡಿ ನಿರಾಶಾವಾದಿಗಳು ಲಡಾಖನ್ನು ’ಜೀವನದ ಕೊನೆ’ ಎನ್ನುತ್ತಾರೆ. ಆದರೆ ಜೀವನವನ್ನು ಸವಿಯಬಲ್ಲವರಿಗೆ ಅದು ಸುಲಭಸಾಧ್ಯವಲ್ಲದ ಅಪರೂಪದ ಅನುಭವ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ https://censusindia.gov.in/pca/DDW_PCA0000_2011_Indiastatedist.xlsx
- ↑ "The Gazette of India" (PDF). egazette.nic.in. Archived from the original (PDF) on 9 ಆಗಸ್ಟ್ 2019. Retrieved 3 ಜನವರಿ 2021.
- ↑ "Ladakh Gets Civil Secretariat". 17 ಅಕ್ಟೋಬರ್ 2019.
- ↑ "LG, UT Hqrs, Head of Police to have Sectts at both Leh, Kargil: Mathur". Daily Excelsior. 12 ನವೆಂಬರ್ 2019. Retrieved 17 ಡಿಸೆಂಬರ್ 2019.
- ↑ "MHA.nic.in". MHA.nic.in. Archived from the original on 8 ಡಿಸೆಂಬರ್ 2008. Retrieved 21 ಜೂನ್ 2012.
- ↑ "Saltoro Kangri, India/Pakistan". peakbagger.com. Retrieved 9 ಆಗಸ್ಟ್ 2019.
- ↑ "Part II—Section 3—Sub-section (ii)" (PDF), Gazette of India, Extraordinary, Controller of Publications, Delhi-110054, p. 2, 25 ನವೆಂಬರ್ 2019, archived from the original (PDF) on 30 ನವೆಂಬರ್ 2020, retrieved 20 ಜೂನ್ 2021
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found