ಜನರಲ್ ಕೆ ಎಸ್ ತಿಮ್ಮಯ್ಯ

ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ, PB, DSO,ಅವರು ೧೯೫೭ರಿಂದ ೧೯೬೧ರವರೆಗೆ ಭಾರತದ ಭೂಸೇನೆಯ ದಂಡನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾದ್ದು ಯುದ್ಧ ಖೈದಿಗಳ ಸ್ವದೇಶದಲ್ಲಿ ಪುನರ್ವಸತಿಯನ್ನು ಸ್ಥಾಪಿಸುವದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೈಪ್ರಸ್‌ನಲ್ಲಿದ್ದರು. ಅಲ್ಲಿದ್ದಗಲೇ ಹೃದಯಸ್ಥಂಭನದಿಂದ ೧೯೬೫ರಲ್ಲಿ ನಿಧನರಾದರು.


ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ೩೦ ಮಾರ್ಚ್ ೧೯೦೬ರಲ್ಲಿ ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಅವರ ತಂದೆಯ ಹೆಸರು ತಿಮ್ಮಯ್ಯ ಹಾಗೂ ತಾಯಿಯ ಹೆಸರು ಸೀತವ್ವ. ಅವರ ನಾಮಕರಣದ ಮುಹೂರ್ತದಲ್ಲಿಟ್ಟ ಹೆಸರು ಸುಬ್ಬಯ್ಯ. ಆದರೆ ಆಂಗ್ಲರ ಕಾಲದ ಆಂಗ್ಲೀಯ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಕೆ ಎಸ್ ತಿಮ್ಮಯ್ಯ ಎಂದು ಪ್ರಸಿದ್ಧರಾದರು. ಕೊಡಂದೆರ ಎನ್ನುವದು ಅವರ ಮನೆತನದ ಹೆಸರು.ಅವರ ತಂದೆ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದರು.


ಉತ್ತಮ ಶಿಕ್ಷಣವನ್ನು ಕೊಡಿಸಬೇಕೆಂಬ ಉದ್ದೇಶದಿಂದ ಅವರ ಮಾತಾಪಿತರು ಅವರನ್ನು ಕೂನೂರಿನ ಸೈಂಟ್ ಜೋಸೆಫ್’ಸ್ ಕಾನ್ವೆಂಟ್‌ನಲ್ಲಿ ಸೇರಿಸಿದರು. ಆಗ ಅವರ ವಯಸ್ಸು ಎಂಟು. ಈ ಶಾಲೆಯನ್ನು ಅಯರ್ಲೆಂಡಿನ ಇಬ್ಬರು ಸೋದರರು ನಡೆಸುತ್ತಿದ್ದರು. ಬಳಿಕ ಅವರು ಬೆಂಗಳೂರಿನ ಬಿಶಪ್ ಕಾಟನ್ ಬಾಲಕರ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಶಾಲಾ ವಿದ್ಯಾರ್ಜನೆಯ ನಂತರ ದೆಹ್ರಾಡೂನಿನ ‘ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟ್ರಿ ಕಾಲೆಜ್’(ಈಗ ರಾಷ್ಟ್ರೀಯ ಇಂಡಿಯನ್ ಮಿಲಿಟ್ರಿ ಕಾಲೆಜ್)ನ್ನು ಸೇರಿದರು. ಭಾರತೀಯ ಸೇನೆಯ ಕಮಿಶನ್ ಹುದ್ದೆಗೆ ಇಲ್ಲಿ ಸೇರುವದು ಅತ್ಯವಶ್ಯವಾಗಿತ್ತು. ಈ ಕಾಲೆಜಿನಿಂದ ಪದವೀಧರರಾದ ಬಳಿಕ ಬ್ರಿಟನ್ನಿನ ರಾಯಲ್ ಮಿಲಿಟ್ರಿ ಅಕ್ಯಾಡೆಮಿ ಸ್ಯಾಂಡ್ಹರ್ಸ್ಟ್‌ಗೆ ಆಯ್ಕೆಯಾದ ಬರೀ ಆರು ಮಂದಿ ಭಾರತೀಯರಲ್ಲಿ ಒಬ್ಬರಾಗಿ ತರಬೇತಿಯನ್ನು ಪಡೆದರು.


ಕುಟುಂಬ

ಬದಲಾಯಿಸಿ

೧೯೩೫ರಲ್ಲಿ ತಿಮ್ಮಯ್ಯನವರು ನೈನಾ ಕಾರ್ಯಪ್ಪನವರನ್ನು ವಿವಾಹವಾದರು. ಆ ಸಮಯದಲ್ಲಿ ಅವರ ಕಾರ್ಯರಂಗ ಕ್ವೆಟ್ಟಾ (ಈಗಿದು ಪಾಕಿಸ್ತಾನದಲ್ಲಿದೆ) ದಲ್ಲಿತ್ತು. ಅದೇ ವರ್ಷ ಅಲ್ಲಿ ನಡೆದ ಭೂಕಂಪದ ಮರುದಿನಗಳಲ್ಲಿ ಈ ನವದಂಪತಿಗಳು ಮಾಡಿದ ಸೇವೆ ಚಿರಸ್ಮರಣೀಯ.


೨೦ನೇ ಮಾರ್ಚ್ ೧೯೩೬ರಲ್ಲಿ ಅವರ ಪುತ್ರಿಯ ಜನನವಾಯಿತು.


ಸೇನೆ ಸೇರಿಕೆ ಮತ್ತು ಮೊದಲಿನ ಕೆಲವು ವರ್ಷಗಳು

ಬದಲಾಯಿಸಿ

ತರಬೇತಿ ಶಿಕ್ಷಣವನ್ನು ಮುಗಿಸಿ ೧೯೨೬ರಲ್ಲಿ ಬ್ರಿಟಿಶ್ ಇಂಡಿಯನ್ ಆರ್ಮಿಯಲ್ಲಿ ಕಮಿಶನ್ ಹುದ್ದೆಯನ್ನು ಪಡೆದು, ಬ್ರಿಟಿಶ್ ಭಾರತೀಯ ಭೂಸೈನ್ಯದ ರೆಜಿಮೆಂಟ್‌ವೊಂದರಲ್ಲಿ ಖಾಯಂ ಅಧಿಕಾರ ಸ್ಥಾನವನ್ನು ಗಳಿಸುವ ಮುನ್ನ ಆಗಿನ ಕಾಲದಲ್ಲಿದ್ದಂತೆ ಹೈಲ್ಯಾಂಡ್ ಲೈಟ್ ಇನ್ಫಂಟ್ರಿಯಲ್ಲಿ ಸೆಕೆಂಡ್ ಲೆಫ್ಟಿನಂಟ್ ಆಗಿ ನೇಮಕಗೊಂಡರು. ಶೀಘ್ರದಲ್ಲೇ ಬಾಗ್ದಾದಿನಲ್ಲಿದ್ದ ೧೯ನೇ ಹೈದರಾಬಾದ್ ರೆಜಿಮೆಂಟ್‌(ಈಗಿನ ಕುಮಾಓ ರೆಜಿಮೆಂಟ್)ನ ೪ನೇ ಬೆಟಾಲಿಯನ್ನಿನ ಅಧಿಕಾರಿಯಾದರು ಮತ್ತು ೧೯೨೮ರಲ್ಲಿ ಲೆಫ್ಟಿನಂಟ್ ಆಗಿ ಬಡ್ತಿ ಪಡೆದರು. ೧೯೩೦ರಲ್ಲಿ ರೆಜಿಮೆಂಟಲ್ ಅಡ್ಜಟಂಟ್ ಆಗಿ ನೇಮಕಗೊಂಡರು. ತಿಮ್ಮಯ್ಯನವರು ತಮ್ಮ ಯುದ್ಧ ಚಾತುರ್ಯವನ್ನು ವಾಯವ್ಯ ಗಡಿನಾಡಿನ (ಅಂದರೆ ಈಗಿನ ಪಾಕಿಸ್ತಾನದ) ರಣರಂಗದಲ್ಲಿ ನಡೆದ ಬಂಡುಕೋರ ಪಠಾಣ್ ಪಂಗಡಗಳ ವಿರುದ್ಧದ ಕದನದಲ್ಲಿ ಉತ್ತಮಪಡಿಸಿಕೊಂಡರು. ಫೆಬ್ರವರಿ ೧೯೩೫ರಲ್ಲಿ ಕ್ಯಾಪ್ಟನ್ ಆದರು. ಮರುವರ್ಷ ಚೆನ್ನೈಯಲ್ಲಿರುವ ಯೂನಿವರ್ಸಿಟಿ ಟ್ರೈನಿಂಗ್ ಕೋರ್‌ನಲ್ಲಿ ಅಡ್ಜಟಂಟ್ ಆಗಿ ನೇಮಕಗೊಂಡರು. ಇಲ್ಲಿ ಅವರು ಭಾರತೀಯ ಸೈನ್ಯದಲ್ಲಿ ಸೇವೆಗೈಯಲಿಚ್ಚಿಸುವ ನವತರುಣರಿಗೆ ಉತ್ತಮ ಸೈನಿಕನಾಗಿರಬೇಕಾದರೆ ಎಂತಿರಬೇಕೆಂದು ಜೀವಂತ ನಿದರ್ಶನರಾಗಿದ್ದು ಬೋಧಿಸಿದರು.


ಎರಡನೇ ವಿಶ್ವ ಯುದ್ಧ ಮತ್ತು ವಿದೇಶಗಳಲ್ಲಿ ಸೇವೆ

ಬದಲಾಯಿಸಿ

ಇಲ್ಲಿಯ ಸೇವಾವಧಿಯ ನಂತರ ಸಿಂಗಪುರದಲ್ಲಿನ ಅವರ ಬೆಟಾಲಿಯನ್ನಿಗೆ ವರ್ಗಾಯಿಸಲಾಯಿತು. ೧೯೪೧ರಲ್ಲಿ ಅವರ ಕೋರಿಕೆಯಂತೆ ಭಾರತಕ್ಕೆ ಮರು ವರ್ಗಾವಣೆಯಾಗಿ ಆಗ್ರಾದ ಹೊಸ ಹೈದ್ರಾಬಾದ್ ರೆಜಿಮೆಂಟಲ್ ಸೆಂಟರ್‌ನಲ್ಲಿ ದ್ವಿತೀಯ ದಳಪತಿ (ಸೆಕಂಡ್-ಇನ್-ಕಮಾಂಡ್)ಯನ್ನಾಗಿ ನೇಮಿಸಲಾಯಿತು. ಬಳಿಕ ಕ್ವೆಟ್ಟಾದ ಸ್ಟಾಫ್ ಕಾಲೆಜಿನಲ್ಲಿ ದಾಖಲಾದರು. ೧೯೩೫ರಲ್ಲಿ ಇದೇ ಕ್ವೆಟ್ಟಾದಲ್ಲಿ ನಡೆದ ವಿಧ್ವಂಸಕಾರೀ ಭೂಕಂಪದಲ್ಲಿ ತಮ್ಮ ಪತ್ನಿಯೊಂದಿಗೆ ನಿಸ್ವಾರ್ಥ ಸೇವೆಗೈದು ತಿಮ್ಮಯ್ಯನವರು ಹೆಸರುವಾಸಿಯಾಗಿದ್ದರು. ಫೆಬ್ರವರಿ ೧೯೪೩ರಲ್ಲಿ ಮೇಜರ್ ಆಗಿ ಬಡ್ತಿ ಪಡೆದು ಅವರು ೨೫ನೇ ಭಾರತೀಯ ವಿಭಾಗದಲ್ಲಿ ಹುದ್ದೆಯನ್ನಲಂಕರಿಸಿದ ಪ್ರಥಮ ಅಧಿಕಾರಿಯಾದರು.


ಎರಡನೇ ವಿಶ್ವ ಯುದ್ಧದಲ್ಲಿ ಜಪಾನೀ ಸೈನ್ಯವನ್ನು ಬರ್ಮಾದಲ್ಲಿ ಎದುರಿಸಲು ತಿಮ್ಮಯ್ಯನವರ ಇನ್ಫಂಟ್ರಿ ವಿಭಾಗವು ಅರಣ್ಯ ಯುದ್ಧದ ತರಬೇತಿಯನ್ನು ಮಾಡಿಕೊಂಡಿತು. ಮೇ ೧೯೪೪ರಲ್ಲಿ ಅವರಿಗೆ ತಾತ್ಕಾಲಿಕ ಲೆಫ್ಟಿನಂಟ್ ಕರ್ನಲ್ ಆಗಿ ಬಡ್ತಿ ನೀಡಲಾಯಿತು. ಬರ್ಮಾದಲ್ಲಿ ಅವರ ಹಳೆಯ ೮/೧೯ನೇ ಹೈದರಾಬಾದ್ ರೆಜಿಮೆಂಟಿನ ದಂಡನಾಯಕನನ್ನಾಗಿ ನೇಮಿಸಲಾಯಿತು. ಬರ್ಮಾದ ಮಾಂಗ್ದಾ ಯುದ್ಧದಲ್ಲಿ ಅದ್ವಿತೀಯ ಶೌರ್ಯ ಪ್ರದರ್ಶಿಸಿ ಹೋರಾಡಿ, ನಿಶ್ಚಿತ ಜಯ ಸಿಗದಿರಲು, ಜಪಾನೀ ಸೈನ್ಯದ ರಕ್ಷಣಾ ರೇಖೆಯನ್ನು ಚಾಣಾಕ್ಷತನದಿಂದ ಭೇದಿಸಿ ಒಳನುಗ್ಗಿ ಹಿಲ್ ೧೦೯ ಎಂದು ಗುರುತಿಸಲಾಗಿದ್ದ ಭೂಪ್ರದೇಶವನ್ನು ವಶಪಡಿಸಿಕೊಂಡರು. ತರುವಾಯ ಜಪಾನೀ ಸೈನ್ಯವು ಮೊದಲು ಸಿಂಗಪುರದಲ್ಲಿ ಆಮೇಲೆ ಫಿಲಿಪೈನ್ಸ್‌ನಲ್ಲಿ ಶರಣಾದಾಗ ತಿಮ್ಮಯ್ಯನವರು ಆ ಎರಡೂ ಸ್ಥಳಗಳಲ್ಲಿ ಬ್ರಿಟಿಶ್-ಭಾರತದ ಪ್ರತಿನಿಧಿಯಾಗಿ ಸಂಧಾನಪತ್ರಗಳಿಗೆ ರುಜು ಮಾಡಿದರು.


ಬರ್ಮಾ ಯುದ್ಧದ ಧೈರ್ಯ, ಪರಾಕ್ರಮ ಹಾಗೂ ಚಾಣಾಕ್ಷತನಕ್ಕೆ ತಿಮ್ಮಯ್ಯನವರಿಗೆ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಆರ್ಡರ್ (DSO) ಇತ್ತು ಗೌರವಿಸಲಾಯಿತು. ತದನಂತರ ಅವರನ್ನು ೩೬ನೇ ಬ್ರಿಟಿಶ್ ಬ್ರಿಗೇಡಿನ ಆಜ್ಞಾಧಿಕಾರಿಯ ಹುದ್ದೆಯನ್ನಿತ್ತರು. ಅದುವರೆಗೂ ಬರೇ ಆಂಗ್ಲರಿಗೇ ಮೀಸಲಾಗಿದ್ದ ಈ ಪದವಿಯನ್ನು ಪಡೆದ ಮೊದಲ ಭಾರತೀಯರಿವರು! ಆಕ್ರಮಿತ ಸೈನ್ಯದ ಅಂಗವಾಗಿ ಈ ಬ್ರಿಗೇಡನ್ನು ಜಪಾನಿನ ಮಾತ್‌ಸ್ಯೂವಿಗೂ, ಬಳಿಕ ಫಿಲಿಪೈನ್ಸ್‌ಗೂ ಭಾರತೀಯಸೈನ್ಯದ ಪ್ರತಿನಿಧಿಯಾಗಿ ಕೊಂಡೊಯ್ದರು.


ಅವರ ವ್ಯಕ್ತಿತ್ವ, ಅಂತರ-ರಾಷ್ಟ್ರೀಯ ರಾಯಭಾರ ವ್ಯವಹಾರ ನಿರ್ವಹಣಾ ಚಾತುರ್ಯವನ್ನು ಜಪಾನೀಯರೂ ಗೌರವಿಸಿ, ೫ನೇ ಗುರ್ಖಾ ರೈಫಲ್ನ್‌ನ ಸೈನಿಕರು ಆ ದೇಶದ ಟೊಕಿಯೋದ ಮಿಕಾದೊದಲ್ಲಿ ಬ್ರಿಟಿಶ್ ಅಧಿಕಾರಿಗಳ ಆಜ್ಞೆಗಳನ್ನು ಪಾಲಿಸಲೊಪ್ಪದೆ ಸತ್ಯಾಗ್ರಹ ಹೂಡಿದಾಗ, ತಿಮ್ಮಯ್ಯನವರನ್ನು ಸಂಧಾನಕ್ಕೆ ಕರೆಯಲಾಗಿತ್ತು.


ಸ್ವಾತಂತ್ರ್ಯಾನಂತರ ಸೇವೆ

ಬದಲಾಯಿಸಿ

೧೯೪೭ರಲ್ಲಿ ಭಾರತವು ಸ್ವತಂತ್ರಗೊಳ್ಳುವ ಸನ್ನಾಹದಲ್ಲಿದ್ದುದರಿಂದ ತಿಮ್ಮಯ್ಯನವರನ್ನು ಫಿಲಿಪೈನ್ಸ್‌ನಿಂದ ವಾಪಸ್ ಕರೆದುಕೊಳ್ಳಲಾಯಿತು. ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಸೈನ್ಯದ ಮತ್ತು ಆಯುಧಗಳ ವಿಲೇವಾರಿಯನ್ನು ಕುರಿತು ರಚಿಸಿದ ಸಮಿತಿಯ ಸದಸ್ಯನನ್ನಾಗಿ ನೇಮಿಸಲಾಯಿತು. ಈ ಕರ್ತವ್ಯದ ಬಳಿಕ ಸೆಪ್ಟೆಂಬರ್ ೧೯೪೭ರಲ್ಲಿ ಅವರಿಗೆ ಮೇಜರ್-ಜನರಲ್ ಆಗಿ ಬಡ್ತಿ ನೀಡಲಾಯಿತು. ೪ನೇ ಇನ್ಫಂಟ್ರಿ ವಿಭಾಗದ ದಳಪತಿಯನ್ನಾಗಿ ಹೆಚ್ಚುವರಿ ಅಧಿಕಾರವಿತ್ತು, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪರಸ್ಪರ ವಲಸೆ ಹೋಗುವದನ್ನು ನಿಯಂತ್ರಿಸಲು ಪಂಜಾಬ್ ಗಡಿ ಸೇನೆಯ ಮುಖ್ಯಾಧಿಕಾರವನ್ನು ವಹಿಸಿಕೊಳ್ಳುವ ಆದೇಶ ನೀಡಲಾಯಿತು. ಮತೀಯ ಗಲಭೆಗಳಿಂದ ಹೊತ್ತಿ ಉರಿಯುತ್ತಿದ್ದ ಭಾರತ-ಪಾಕಿಸ್ತಾನದ ಗಡಿಯ ಸುತ್ತುಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದು ಕೋಟಿ ಜನರ ರಕ್ಷಣೆಯ ಭಾರ ಅವರ ಮೇಲಿತ್ತು. ಆ ರಣರಂದಲ್ಲಿ ಅವರ ವೈಯಕ್ತಿಕ ಪ್ರವೇಶದಿಂದ ಸಾವಿರಾರು ಮಂದಿ ಹಿಂದೂಗಳನ್ನೂ ಸಿಕ್ಖರನ್ನೂ ಕಾಪಾಡಿ ಅವರೆಲ್ಲ ನೆಚ್ಚಿನ ಧೀರೋದಾತ್ತ ನಾಯಕನೆನ್ನಿಸಿಕೊಂಡರು.


ಇದಾದ ನಂತರ ಜಮ್ಮು-ಕಾಶ್ಮೀರದಲ್ಲಿದ್ದ ೧೯ನೇ ಇನ್ಫಂಟ್ರಿ ವಿಭಾಗದ ಆಧಿಪತ್ಯದಲ್ಲಿ ಅವರು ಕಾಶ್ಮೀರವನ್ನು ಆಕ್ರಮಿಸಲೆಸುತ್ತಿದ್ದ ಪಾಕಿಸ್ತಾನದ ಸೇನೆಯನ್ನು ತಡೆಹಿಡಿದು ಹಿಮ್ಮೆಟ್ಟಿಸುವದರಲ್ಲಿ ಜಯಶೀಲರಾದರು. ೧೯೪೮ರ ನವೆಂಬರ್‌ನಲ್ಲಿ ತಾವೇ ಮುಂಚೂಣಿಯಲ್ಲಿದ್ದು ೧೨,೦೦೦ ಅಡಿ ಎತ್ತರದಲ್ಲಿರುವ ಜೊಜಿಲಾ ಕಣಿವೆಯ ಮೇಲೆ ಹಠಾತ್ ಧಾಳಿ ನಡೆಸಿ ಪಾಕಿಸ್ತಾನಿ ಸೈನ್ಯವನ್ನು ಓಡಿಸಿ ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳನ್ನು ಕೈವಶಮಾಡಿಕೊಂಡರು. ೧೦,೦೦೦ ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿ ಜಗತ್ತಿನ ಯಾವದೇ ಸೈನ್ಯವು ಟ್ಯಾಂಕನ್ನು ಯುದ್ಧ ಕಾರ್ಯಾಚರಣೆಯಲ್ಲಿ ಬಳಸಿರುವದು ಇದೇ ಪ್ರಪ್ರಥಮವೆಂದು ದಾಖಲಾಗಿದೆ.


ತಿಮ್ಮಯ್ಯನವರು ಅಂದಿನ ಪ್ರಧಾನಿ ನೆಹ್ರೂರವರನ್ನು ಮೂರು ತಿಂಗಳ ಅವಧಿಯಿತ್ತರೆ ಅತಿಕ್ರಮಣಕಾರರನ್ನು ಮುಜಾಫರಬಾದ್‌ವರೆಗೆ ಅಟ್ಟುವದಾಗಿ ಕೇಳಿಕೊಂಡರೂ, ಒಪ್ಪದೇ ಇದ್ದು ಅಕಾಲಿಕ ಶಾಂತಿಸಂಧಾನದಿಂದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದೇ ಉಳಿಸಿರುವದು ಇತಿಹಾಸ.


೧೯೫೩ರಲ್ಲಿ ಕೊರಿಯಾದಲ್ಲಿ ತಟಸ್ಥ ರಾಷ್ಟ್ರಗಳ ಸ್ವದೇಶ-ಪುನರ್ವಸತಿ ಸಮಿತಿಯ (Neutral Nations Repatriation Commission) ಸಭಾಧ್ಯಕ್ಷನನ್ನಾಗಿ ಸಂಯುಕ್ತ ರಾಷ್ಟ್ರಗಳು ಆಯ್ಕೆ ಮಾಡಿದವು. ಕಮ್ಯುನಿಸ್ಟ್ ಮತ್ತು ಪಶ್ಚಿಮ ದೇಶಗಳೊಡನೆ ನಿಷ್ಪಕ್ಷಪಾತದಿಂದ ವ್ಯವಹರಿಸಿ ತಿಮ್ಮಯ್ಯನವರು ಎಲ್ಲರ ಮೆಚ್ಚಿಗೆಯನ್ನು ಪಡೆದರು. ಈ ಸಂದರ್ಭದಲ್ಲಿ ಅವರಿಗೆ ಲೆಫ್ಟಿನಂಟ್-ಜನರಲ್ ಪದವಿಯನ್ನೀಯಲಾಯಿತು. ಭಾರತ ಸರಕಾರವು ಅವರನ್ನು ಪದ್ಮವಿಭೂಷಣವನ್ನಿತ್ತು ಗೌರವಿಸಿತು.


೭ನೇ ಮೇ ೧೯೫೭ರಂದು ತಿಮ್ಮಯ್ಯನವರು ಭಾರತೀಯ ಭೂಸೈನ್ಯದ ೬ನೇ ಮುಖ್ಯಸ್ಥನಾಗಿ ಅಧಿಕಾರವನ್ನು ವಹಿಸಿಕೊಂಡರು. ೧೯೫೯ರಲ್ಲೇ ಭಾರತ-ಚೀನಾ ಯುದ್ಧದ ಮುನ್ಸೂಚನೆಯಿದ್ದು, ಅದಕ್ಕೆ ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಬೇಕೆಂಬ ತಿಮ್ಮಯ್ಯನವರ ಸಲಹೆಯನ್ನು ಆಗಿನ ರಕ್ಷಣಾ ಮಂತ್ರಿ ವಿ ಕೆ ಕೃಷ್ಣ ಮೆನೊನ್ ತಳ್ಳಿಹಾಕಿದ್ದರಿಂದ ಅದನ್ನು ಪ್ರತಿಭಟಿಸಿ ತಿಮ್ಮಯ್ಯನವರು ತಮ್ಮ ರಾಜೀನಾಮೆಯನ್ನು ಪ್ರಧಾನಿಗಿತ್ತರು. ನೆಹ್ರೂ ತಿಮ್ಮಯ್ಯನವರ ಮನವೊಲಿಸಿ ರಾಜೀನಾಮೆಯನ್ನು ಹಿಂತೆಗೆಕೊಳ್ಳುವಂತೆ ಮಾಡಿದರು. ಆದರೆ ಅವರ ಸಲಹೆ-ಸೂಚನೆಗಳನ್ನು ಕಾರ್ಯಗತ ಮಾಡಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ೭ನೇ ಮೇ ೧೯೬೧ರಲ್ಲಿ ತಿಮ್ಮಯ್ಯನವರು ನಿವೃತ್ತರಾದರು. ೩೫ ವರ್ಷಗಳ ಅವರ ಸೈನ್ಯದ ಸೇವೆ ಅಲ್ಲಿಗೆ ಮುಗಿಯಿತು.


ನಿವೃತ್ತರಾದ ನಂತರದ ದಿನಗಳು

ಬದಲಾಯಿಸಿ

ಭಾರತೀಯ ಸೈನ್ಯದಿಂದ ನಿವೃತ್ತರಾದ ಮೇಲೆ, ಸಂಯುಕ್ತ ರಾಷ್ಟ್ರಗಳು ಅವರ ಸೇವೆಯನ್ನುಬಯಸಿ ಸೈಪ್ರಸ್‌ನಲ್ಲಿ ಸಂಯುಕ್ತ ರಾಷ್ಟ್ರಗಳ ಸೇನೆಯ ಆಧಿಪತ್ಯವನ್ನು ಜುಲೈ ೧೯೬೪ರಲ್ಲಿ ನೀಡಿದರು. ಅಲ್ಲಿನ ಅತ್ಯಂತ ವಿಸ್ಪೋಟಕ ಪರಿಸ್ಥಿತಿಯನ್ನು ಸೂಕ್ತವಾಗಿ ಬಗೆಹರಿಸಿದ್ದಕ್ಕೆ ತುರ್ಕಿಯ ವಿದೇಶಾಂಗ ಸಚಿವರು , ‘ಅವರ ಬೌದ್ಧಿಕ ಪ್ರಾಮಾಣಿಕತೆ ಮತ್ತು ಅಚಲ ನಿಷ್ಪಕ್ಷಪಾತದಿಂದ ಶಾಂತಿಯನ್ನು ಸ್ಥಾಪಿಸಿದ ಅತಿಮಾನುಷ ಪ್ರಯತ್ನ’ವನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದರು.


ಗ್ರೀಕ್ ಸರ್ಕಾರವು ಅವರ ‘ಚಾರಿತ್ರ್ಯಬಲ, ವಾಸ್ತವವಾದಿತ್ವ ಮತ್ತು ನ್ಯಾಯಪ್ರಜ್ಞೆ’ಯನ್ನು ಹೊಗಳಿ ಗೌರವಿಸಿತ್ತು.


ಅಲ್ಲಿ ಅವರು ೧೮ನೇ ಡಿಸೆಂಬರ್ ೧೯೬೫ರಂದು ನಿಧನರಾದರು. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತಂದು, ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ಶ್ಮಶಾನದಲ್ಲಿ ದಫನ ಮಾಡಲಾಯಿತು. ಕೆಲವು ಸಮಯದ ಬಳಿಕ ಅದನ್ನು ಬೇರೆಡೆಯಲ್ಲಿ ದೇಶದ ಮಹೋನ್ನತ ಯೋಧನಿಗೆ ಸಲ್ಲಬೇಕಾದ ತೆರದಲ್ಲಿ ಗೌರವಯುತವಾಗಿ ಸಂಸ್ಕಾರ ಮಾಡಲಾಯಿತು.


ಸ್ಮಾರಕಗಳು

ಬದಲಾಯಿಸಿ
 

ಸೈಪ್ರಸ್ ದೇಶವು ತನ್ನ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ವೀರನ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತಲ್ಲದೆ, ಅವರು ವಾಸಿಸುತ್ತಿದ್ದ ನಿಕೋಸಿಯಾದ ಒಂದು ಮಾರ್ಗಕ್ಕೆ ಅವರ ಹೆಸರನ್ನಿಟ್ಟಿತು.


ಆಗ್ರಾ ಪಟ್ಟಣವು ತನ್ನ ಒಂದು ಮುಖ್ಯ ರಸ್ತೆಗೆ ಅವರ ಹೆಸರನ್ನು ಕಳೆದ ೭೦ರ ದಶಕದ ಆರಂಭದಲ್ಲೇ ಇಟ್ಟು ಗೌರವಿಸಿತು.


ಬೆಂಗಳೂರಿನ ಶಿವಾಜಿನಗರದ ದಂಡು ಪ್ರದೇಶದಲ್ಲಿ ಒಂದು ರಸ್ತೆಗೆ ಅವರ ಹೆಸರನ್ನಿಟ್ಟಿದ್ದು, ಇತ್ತೀಚೆಗೆ ರಿಚ್ಮಂಡ್ ವೃತ್ತದಿಂದ ಹಳೆಯ ವಿಮಾನ ನಿಲ್ದಾಣದವರೆಗಿರುವ ರಿಚ್ಮಂಡ್ ರಸ್ತೆಯನ್ನು ಜನರಲ್ ತಿಮ್ಮಯ್ಯ ರಸ್ತೆಯೆಂದು ಮರುಹೆಸರನ್ನಿತ್ತಿದ್ದಾರೆ.


ಅವರ ಹುಟ್ಟೂರಾದ ಮಡಿಕೇರಿಯಲ್ಲಿ ಮಂಗಳೂರಿನಿಂದ ಮತ್ತು ವಿರಾಜಪೇಟೆಯಿಂದ ಬಂದು ಮಡಿಕೇರಿಯನ್ನು ಸೇರುವಲ್ಲಿ ಆಳೆತ್ತರದ ವಿಗ್ರಹವನ್ನು ಸ್ಥಾಪಿಸಿದ್ದಾರೆ.

  • A Study of the Origins of Coorgs, Lt Col K C Ponnappa (Rtd), 2nd edition 1999.

ಬಾಹ್ಯ ಸಂಪರ್ಕ ಕೊಂಡಿಗಳು

ಬದಲಾಯಿಸಿ