ಸದಸ್ಯ:Durgambika K/ನನ್ನ ಪ್ರಯೋಗಪುಟ1
ಗಿಂಡಿ ನೃತ್ಯ
ಬದಲಾಯಿಸಿಗಿಂಡಿ ನೃತ್ಯ ಎನ್ನುವ ಹೆಸರು ಕೇಳಲು ಎಷ್ಟು ಮಧುರವೋ ಆ ನೃತ್ಯವನ್ನು ನೋಡುವುದು ಕೂಡಾ ಅಷ್ಟೇ ಮನೋಹರ. ತಲೆಯ ಮೇಲೆ ಹಾಲು ಅಥವಾ ನೀರು ತುಂಬಿದ ಗಿಂಡಿಯನ್ನು ಇರಿಸಿಕೊಂಡು ಕಲಾವಿದ ಭಜನೆಯ ಸಂಗೀತ ಲಯಕ್ಕೆ ತಕ್ಕಂತೆ ವಿವಿಧ ರೀತಿಯಲ್ಲಿ ಹೆಜ್ಜೆ ಹಾಕುತ್ತಾ, ಹಾವ ಭಾವಗಳನ್ನು ಪ್ರದರ್ಶಿಸುತ್ತಾ ಗಂಟೆಗಟ್ಟಲೆ ತನ್ಮಯತೆಯಿಂದ ನರ್ತಿಸುವ ಪರಿಯೇ ಗಿಂಡಿ ನೃತ್ಯ. ವಿಟ್ಠಲ ರುಕುಮಾಯಿ ದೇವರ ಮುಂದೆ ದೊಡ್ಡ ದೀಪವೊಂದನ್ನು ಬೆಳಗಿಸುತ್ತಾರೆ. ಆ ದಿನ ರಾತ್ರಿ ಭಜನೆಯಲ್ಲಿ ದೊಡ್ಡ ದಂಡೇ ನೆರೆದಿರುತ್ತದೆ. ಈ ನಡುವೆ ‘ಹರಿ ವಿಟ್ಠಲ್ ಜೈ ವಿಟ್ಠಲ್’ ಎಂದು ತಾರಕ ಸ್ವರದಲ್ಲಿ ಭಜಿಸಿ ನರ್ತಿಸಿಕೊಂಡು ದೇವರತ್ತ ಬರುವ ನರ್ತಕನತ್ತ ಜನರ ದೃಷ್ಠಿಯೆಲ್ಲಾ ಹರಿಯುತ್ತದೆ. ಆ ನರ್ತಕ ಸಾಮಾನ್ಯ ನರ್ತಕನಲ್ಲ. ಆತನ ತಲೆಯ ಮೇಲೊಂದು ಪುಷ್ಪಾಲಂಕೃತ ಗಿಂಡಿ ಇರುತ್ತದೆ. ಕೊರಳಲ್ಲಿ ಹೂ ಮಾಲೆ ಇರುತ್ತದೆ. ಸಾಂಪ್ರದಾಯಿಕವಾಗಿ ಕಚ್ಚೆ ಹಾಕಿಕೊಂಡು ಧೋತಿ ಹಾಕಿಕೊಳ್ಳುವನು. ಕೈಯಲ್ಲಿ ಚಿಟಿಕೆ ವಾದ್ಯ. ಭಜನೆಯ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ತನ್ಮಯತೆಯಿಂದ ನರ್ತಿಸುವ ಆ ನರ್ತಕನ ತಲೆಯ ಮೇಲಿನ ಗಿಂಡಿ ಮಾತ್ರ ಒಂದಿನಿತೂ ಅಲುಗಾಡದು. ಅದರೊಳಗಿರುವ ಹಾಲಿನ ಒಂದು ಹನಿಯೂ ಹೊರಕ್ಕೆ ಚೆಲ್ಲದು. ದೇವರೆದುರಿನ ದೀಪದ ಸುತ್ತ ‘ಜೈ ವಿಟ್ಠಲ ಹರಿ ವಿಟ್ಠಲ’ ಎನ್ನುತ್ತಾ ನರ್ತಿಸಿ ದೇವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುವಾಗಲೂ ತಲೆಯ ಮೇಲಿರುವ ಗಿಂಡಿ ಹಾಗೇ ಇರುತ್ತದೆ. ಭಜಕ ವೃಂದಕ್ಕಂತೂ ಈ ದೃಶ್ಯ ಅತ್ಯಂತ ಕೌತುಕಮಯ. ಅದನ್ನು ನೋಡುತ್ತಲೇ ಭಕ್ತ ವೃಂದದಲ್ಲಿ ಅನನ್ಯವಾದ ಶ್ರದ್ಧಾ ಭಕ್ತಿ ಉಂಟಾಗುತ್ತದೆ. ಭಕ್ತಿ ಭಾವದಿಂದ ತುಂಬಿರುವ ಈ ವಿಶಿಷ್ಟ ನೃತ್ಯವೇ ಗಿಂಡಿ ನೃತ್ಯ. ಅತ್ಯಂತ ಪುರಾತನವಾಗಿರುವ ಈ ನೃತ್ಯ ಹಲವು ಬಗೆಯ ವಿಶಿಷ್ಟ ನೃತ್ಯವು ಭಾರತೀಯ ಪರಂಪರೆಯಲ್ಲಿ ಇತ್ತೆಂಬ ವಿಚಾರವೇ ಇಂದು ಲುಪ್ತವಾಗಿದೆ. [೧]
ಗಿಂಡಿನೃತ್ಯದ ಚರಿತ್ರೆ
ಬದಲಾಯಿಸಿಪಂಜಾಬಿನ ಸರಸ್ವತಿ ನದಿ ತೀರದಲ್ಲಿ ವಾಸಿಸಿಕೊಂಡಿದ್ದ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿರುವ ಸಾವಿರಾರು ವರ್ಷಗಳ ಹಿಂದಿನಿಂದಲೂ ಗಿಂಡಿ ನೃತ್ಯ ಕಲೆ ರೂಢಿಯಲ್ಲಿತ್ತು ಎನ್ನಲಾಗಿದೆ. ಅದೀಗ ಮರೆವಿನ ಅಂಚಿಗೆ ಹೋಗಲು ಅನೇಕ ಐತಿಹಾಸಿಕ ಕಾರಣಗಳಿವೆ ಎಂದು ಹೇಳಲಾಗಿದೆ. ವೇದ ಕಾಲದಲ್ಲಿ ಸಾರಸ್ವತ ಬ್ರಾಹ್ಮಣರ ಮೂಲ ಸ್ಥಳವಾಗಿದ್ದ ಸರಸ್ವತಿ ನದಿಯು ಕಾಲ ಕ್ರಮೇಣ ಬತ್ತಿ ಹೋದಾಗ ಸಾರಸ್ವತ ಬ್ರಾಹ್ಮಣರು ದೇಶದ ಇತರೆಡೆಗೆ ವಲಸೆ ಹೋಗಬೇಕಾದ ಅನಿವಾರ್ಯ ಒದಗಿತ್ತು. ಹಾಗೆ ಪಂಜಾಬಿನಿಂದ ಹಲವು ಕವಲುಗಳಾಗಿ ವಲಸೆ ಹೋದಂತಹ ಈ ಬ್ರಾಹ್ಮಣ ವರ್ಗ ಬಂಗಾಲದ ಗೌಡ ದೇಶದಲ್ಲಿ ನೆಲೆಸಿತು. ದುರಾದೃಷ್ಟಕ್ಕೆ ಅಲ್ಲಿಯೂ ಬರಗಾಲ ಕಾಣಿಸಿಕೊಂಡಿತು. ಕ್ರಮೇಣ ಅಲ್ಲಿಂದಲೂ ಮುಂದೆ ಸಾರಸ್ವತ ಬ್ರಾಹ್ಮಣರ ಕವಲು ಕೊಂಕಣ ವಲಯವನ್ನು ಪ್ರವೇಶಿಸಿತು. ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳವನ್ನು ತಲುಪಿದರು. ಸಹಸ್ರಾರು ವರ್ಷಗಳ ಕಾಲ ನಿರಂತರವಾಗಿ ಸಾಗಿದ ವಲಸೆಯಿಂದಾಗಿ ಸಾರಸ್ವತ ಬ್ರಾಹ್ಮಣರಲ್ಲಿ ಸಾಂಸ್ಕøತಿಕ ಸಿರಿವಂತಿಕೆ ಸ್ವಲ್ಪ ಮಟ್ಟಿಗೆ ನಷ್ಟವಾಗಿರುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ. ಭಗವಂತನ್ನು ಒಲಿಸಿಕೊಳ್ಳಲು ಮಾಡಲಾಗುವ ನೃತ್ಯ ಪ್ರಕಾರಗಳಲ್ಲಿ ಗಿಂಡಿ ನೃತ್ಯವೂ ಒಂದಾಗಿದೆ. ಅದು 500 ವರ್ಷಗಳ ಹಿಂದೆಯೇ ದಕ್ಷಿಣ ಕನ್ನಡದ ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ಸೇವಸ್ಥಾನಗಳಲ್ಲಿ ಚಾಲ್ತಿಯಲ್ಲಿತ್ತೆಂಬುದು ದೇಗುಲಗಳ ಇತಿಹಾಸದಿಂದ, ಗುರು ಹಿರಿಯರಿಂದ ತಿಳಿದು ಬರುತ್ತದೆ.
ಗಿಂಡಿ ನೃತ್ಯದ ಲಕ್ಷಣ
ಬದಲಾಯಿಸಿಗಿಂಡಿ ನರ್ತಕ ಸ್ವಚ್ಛವಾದ ಬಿಳಿ ಧೋತಿಯನ್ನು ಸಾಂಪ್ರದಾಯಿಕವಾಗಿ ಕಚ್ಚೆ ಹಾಕಿ ಉಟ್ಟುಕೊಂಡು ತುಂಬು ತೋಳಿನ ಅಂಗಿಯನ್ನು ತೊಟ್ಟು, ಎದೆಗೆ ಬಣ್ಣದ ಶಾಲು, ಸೊಂಟಕ್ಕೆ ಭದ್ರವಾಗಿ ಬಿಗಿದ ಕೇಸರಿ ವರ್ಣದ ವಸ್ತ್ರ. ಹಣೆಗೆ ತಿಲಕ, ಕುತ್ತಿಗೆಗೆ ಹೂವುನ ಹಾರ, ಎರಡು ಕೈಗಳಲ್ಲಿ ತಾಳ ಅಥವಾ ಚಿಟಿಕೆ ವಾದ್ಯದಲ್ಲಿ ವಿಜೃಂಭಿಸುವುದನ್ನು ಕಾಣುವುದೇ ಒಂದು ಸೊಬಗು. ಭಗವಂತನ ಲೀಲೆ ಸಾರುವ ನೃತ್ಯ ಭಗವಂತನ ಮಹಿಮೆಯನ್ನು ಸಾರುವ ಮೂಲಕ ಭಕ್ತಾಧಿಗಳಿಗೆ ಭಗವದ್ಭಕ್ತಿಯಲ್ಲಿ ತಾದಾತ್ಮ್ಯವನ್ನು ಉಂಟುಮಾಡುವುದೇ ಈ ನೃತ್ಯದ ಮೂಲ ಉದ್ದೇಶ. ದೇವರ ಕುರಿತಾಗಿ ಮಾತ್ರವೇ ಈ ನೃತ್ಯ ಸಾದರಗೊಳ್ಳುವುದು. [೨] ಅತ್ಯಂತ ಪ್ರಾಚೀನ ನೃತ್ಯ ಕಲೆಯಾದ ಗಿಂಡಿ ನರ್ತನ ಕಲೆಯು 21 ನೇ ಶತಮಾನದವರೆಗೂ ಸಾಗಿ ಬಂದಿರುವುದು ದೈವಸಂಕಲ್ಪ. ಈ ಕಲೆ ಇನ್ನೂ ದೀರ್ಘಕಾಲ ಉಳಿದು, ಬೆಳೆದು ಜನರಲ್ಲಿ ಭಗವದ್ಭಕ್ತಿಯನ್ನು ಜಾಗೃತಗೊಳಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.