ಶಲ್ಯ (ಮಹಾಭಾರತದ ಪಾತ್ರ)
ಶಲ್ಯ (ಮಹಾಭಾರತದ ಪಾತ್ರ) | |
---|---|
ಮಾಹಿತಿ | |
ಕುಟುಂಬ | (ಮಾದ್ರಿ - ತಂಗಿ) |
ಮಕ್ಕಳು | ರುಕುಮಾಂಗದ, ರುಕುಮಾರತ ಮತ್ತು ಮಾದ್ರಂಜಯ. |
ಸಂಬಂಧಿಕರು | ನಕುಲ ಮತ್ತು ಸಹದೇವ (ತಂಗಿಯ ಮಕ್ಕಳು), ಪಾಂಡು (ಭಾವ) |
ಶಲ್ಯನು ಮದ್ರ ದೇಶದ ರಾಜ, ನಕುಲ ಸಹದೇವರ ತಾಯಿಯಾದ ಮಾದ್ರಿಯ ಅಣ್ಣ. ಇವನು ಋತಾನರಾಜನ ಮಗ. ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ. ಕುಂತಿಯ ಸ್ವಯಂವರದಲ್ಲಿ ಸೋತು ಪಾಂಡುವಿಗೆ ಕುಂತಿಯನ್ನು ಬಿಟ್ಟುಕೊಟ್ಟ. ಶಲ್ಯನು ಗದಾ ಯುದ್ಧದಲ್ಲಿ ದೃಢ ಎದುರಾಳಿಯಾಗಿದ್ದನು. ಈತ ಯುದ್ಧ ವಿದ್ಯೆಯಲ್ಲಿ ನಿಪುಣ. ಮಲ್ಲಯುದ್ಧದಲ್ಲಿ ಈತನಿಗೆ ಸರಿಸಾಟಿಯೆಂದರೆ ಭೀಮ ಒಬ್ಬನೇ. ಈತ ದ್ರೌಪದಿಯ ಸ್ವಯಂವರದ ಕಾಲದಲ್ಲಿ ಅರ್ಜುನ ಮತ್ಸ್ಯಯಂತ್ರ ಭೇದಿಸಿದಾಗ ದುರ್ಯೋಧನಾದಿಗಳೊಡನೆ ಸೇರಿ ಪಾಂಡವರ ಮೇಲೆ ಕಲಹಕ್ಕಿಳಿದ; ಭೀಮನಿಂದ ಪರಾಜಿತನಾದ.
ಪಾಂಡುರಾಜನು ಅಳಿಯಾನಾದ ರೀತಿ
ಬದಲಾಯಿಸಿಒಂದು ದಿನ ಶಲ್ಯ ರಾಜ ತನ್ನ ಸೈನ್ಯದೊಂದಿಗೆ ಹಸ್ತಿನಾಪುರಕ್ಕೆ ಹೋಗುವಾಗ, ಪಾಂಡು ರಾಜನು ನೋಡಿ ಅವನನ್ನು ಮಾತನಾಡಿಸುತ್ತಾನೆ. ಶಲ್ಯ ರಾಜನ ಸಾಮಾನ್ಯ ಮಾತುಗಳಿಂದ ಪ್ರೇರಣೆಗೊಂಡ ಪಾಂಡು ರಾಜ ಶಲ್ಯನೊಡನೆ ಸ್ನೇಹ ಬೆಳಸಿ ತನ್ನ ಆಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಭೀಷ್ಮನಿಗೆ ಶಲ್ಯ ಮತ್ತು ಅವನ ಸುಂದರ ಸಹೋದರಿಯಾದ ಮಾದ್ರಿಯ ಬಗ್ಗೆ ಗೊತ್ತಿದ್ದ ಕಾರಣ, ಪಾಂಡುರಾಜನ ಜೊತೆ ಮದುವೆ ಮಾಡಿಸಲು ನಿರ್ಧರಿಸಿ, ಶಲ್ಯನ ಜೊತೆ ಮಾತನಾಡುತ್ತಾನೆ. ಶಲ್ಯನು ಇದಕ್ಕೆ ಒಪ್ಪಿದ ಕಾರಣ ಚಿನ್ನ ಮತ್ತು ರತ್ನಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸುತ್ತಾನೆ.[೧][೨][೩]
ನಕುಲ ಮತ್ತು ಸಹದೇವರನ್ನು ಉತ್ತರಾಧಿಕಾರಿಯಾಗಿಸಲು ಪ್ರಯತ್ನ
ಬದಲಾಯಿಸಿವರ್ಷಗಳು ಕಳೆದಂತೆ ಮಾದ್ರಿಯು ತನ್ನ ಪತಿಯ ಸಾವಿಗೆ ತಾನೇ ಕಾರಣವೆಂಬ ನೋವಿನಿಂದ ಸಹಗಮನ ಮಾಡಿಕೊಂಡಳು. ಆಗ ಶಲ್ಯರಾಜ, ನಕುಲ ಮತ್ತು ಸಹದೇವರನ್ನು ಕರೆದು ಉತ್ತರಾಧಿಕಾರಿಯಾಗುವಂತೆ ಆಶಿಸುತ್ತಾನೆ . ನಕುಲ ಮತ್ತು ಸಹದೇವರ ೧೮ನೇ ಜನ್ಮದಿನದಂದು, ಶಲ್ಯ ರಾಜ “ನಕುಲ ಮತ್ತು ಸಹದೇವರು ಹಸ್ತಿನಾಪುರದ ಸಿಂಹಾಸನಕ್ಕೆ ಕಾಯುವ ಬದಲಿಗೆ ಮದ್ರದ ರಾಜರಾಗುತ್ತಾರೆ” ಎಂದು ಹೇಳುತ್ತಾನೆ.
ಶಲ್ಯ ರಾಜನಿಗೆ ಸ್ವಂತ ಮಕ್ಕಳಿದ್ದರು ಕೂಡ, ನಕುಲ ಮತ್ತು ಸಹದೇವರು ದೇವತೆಯರ ಮಕ್ಕಳೆಂದು ತನ್ನ ರಾಜ್ಯದ ಉತ್ತರಾಧಿಕಾರಿಯಾಗಿಸಲು ಇಷ್ಟಪಡುತ್ತಾನೆ. ಆದರೆ ನಕುಲ ಮತ್ತು ಸಹದೇವರನ್ನು ಕುಂತಿ ಮಾತೆ ತನ್ನ ಸ್ವಂತ ಮಕ್ಕಳಂತೆಯೂ ಮತ್ತು ಧರ್ಮರಾಯ, ಭೀಮ, ಅರ್ಜುನರು ಸ್ವಂತ ತಮ್ಮಂದಿರಂತೆಯೂ ನೋಡಿಕೊಳ್ಳುತ್ತಿದ್ದ ಕಾರಣ, ಉತ್ತರಾಧಿಕಾರಿಯಾಗಲು ಒಪ್ಪದೆ, ಶಲ್ಯ ರಾಜನಿಗೆ "ನಿನ್ನ ಮಕ್ಕಳನ್ನೆ ಉತ್ತರಾಧಿಕಾರಿಯಾಗಿ ಮಾಡು” ಎಂದು ಹೇಳುತ್ತಾರೆ. ಶಲ್ಯ ರಾಜ ಅದಕ್ಕೆ ಒಪ್ಪದೇ ಇದ್ದಾಗ, ನಕುಲ ಮತ್ತು ಸಹದೇವರು "ನಾವು ರಾಜ್ಯಾಡಳಿತವನ್ನು ಸ್ವೀಕರಿಸಿದರು ಕೂಡ ಪಾಂಡವರ ಜೊತೆ ಇದ್ದುಕೊಂಡು ರಾಜ್ಯಾಡಳಿತ ಮಾಡಲು ಅನುಮತಿ ಇದ್ದರೆ ಮಾತ್ರ ಉತ್ತರಾಧಿಕಾರಿಯಾಗುತ್ತೇವೆ" ಎಂದು ಹೇಳುತ್ತಾರೆ.[೪]
ಕುರುಕ್ಷೇತ್ರದಲ್ಲಿ ಶಲ್ಯನ ಪಾತ್ರ
ಬದಲಾಯಿಸಿಶಲ್ಯ ರಾಜನು ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ನೆರವಾಗಲು ತನ್ನ ಸೈನ್ಯವನ್ನು ಕರೆದುಕೊಂಡು ಬರುತ್ತಿರುತ್ತಾನೆ. ಸಂಚರಿಸುವಾಗ ಸೈನ್ಯವು ಹಸಿವು ಮತ್ತು ದಣಿವಿಗೆ ಒಳಗಾಗುತ್ತದೆ, ಇದನ್ನು ತಿಳಿದ ದುರ್ಯೋಧನನು ಶಲ್ಯನ ಸೈನ್ಯವನ್ನು ತನ್ನ ಕಡೆಗೆ ಪಡೆಯಲು ಕಪಟದಿಂದ, ತಾನು ಆಹಾರ ಮತ್ತು ವಿರಾಮದ ನೆರವಿಗೆ ಬರುತ್ತಿದ್ದೇನೆ ಎಂದು ತಿಳಿಯಗೊಡದೆ ತನ್ನ ಅಧಿಕಾರಿಗಳನ್ನು ಮುಂದಿಟ್ಟುಕೊಂಡು, ಧರ್ಮರಾಯನು ಆಹಾರ ಮತ್ತು ವಿರಾಮಕ್ಕೆ ನೆರವನ್ನು ಒದಗಿಸುತ್ತಿದ್ದಾನೆ ಎಂಬಂತೆ ವರ್ತಿಸುತ್ತಾನೆ. ಕೊನೆಗೆ ತನ್ನ ಅಧಿಕಾರಿಯಿಂದ ಇಂತಹ ಉಪಕಾರ ಮಾಡಿದವರಿಗೆ ನಿನ್ನ ಉಡುಗೊರೆ ಏನು ಎಂದು ಕೇಳಿಸುತ್ತಾನೆ. ಶಲ್ಯ ರಾಜ ಈ ರೀತಿಯ ಉಪಚಾರ ಮಾಡುವ ಭಾವನೆ ಇರುವುದು ಯುಧಿಷ್ಠಿರನಿಗೆ ಮಾತ್ರ, ಅವನೇ ಈ ಎಲ್ಲಾ ಉಪಚಾರ ಮಾಡಿರುವುದು ಎಂದು ಭಾವಿಸಿ, ಇಂತಹ ಆತಿಥ್ಯಕ್ಕೆ ಕಾರಣರಾದ ಧರ್ಮಾತ್ಮರು ಯಾರೋ ಅವರಿಗೆ ಯುದ್ಧದಲ್ಲಿ ನೆರವಾಗುತ್ತೇನೆ ಎಂದು ಮಾತುಕೊಡುತ್ತಾನೆ. ನಂತರ ದುರ್ಯೋಧನ ಶಲ್ಯನ ಮುಂದೆ ಬಂದು ತಾನೇ ಈ ಆತಿಥ್ಯಕ್ಕೆ ಕಾರಣ ಎಂದು ಹೇಳುತ್ತಾನೆ. ಮನನೊಂದ ಶಲ್ಯ, ಬೇರೆ ದಾರಿ ಇಲ್ಲದೆ ಕೌರವರ ಕಡೆ ಯುದ್ಧ ಮಾಡಬೇಕಾಗುತ್ತದೆ.
ವಿಷಯವನ್ನು ತಿಳಿದ ನಕುಲ ಮತ್ತು ಸಹದೇವರು ಶಲ್ಯರಾಜನನ್ನು ನಿಂದಿಸಲು ಮುಂದಾದಾಗ ಯುಧಿಷ್ಠಿರ ಸಮಾಧಾನ ಪಡಿಸಿ, ಶಲ್ಯ ರಾಜನಿಗೆ “ನೀನು ನಿಷ್ಠೆಯಿಂದ ಕೌರವರ ಕಡೆ ಯುದ್ಧಮಾಡು” ಎಂದು ಹೇಳುತ್ತಾನೆ.
ಯುದ್ಧದಲ್ಲಿ ಅರೆಮನಸ್ಸಿನಿಂದ ಭಾಗವಹಿಸಿದರೂ ಶಲ್ಯನು ಉತ್ತರಕುಮಾರನೂ ಸೇರಿದಂತೆ ಹಲವಾರು ವೀರರನ್ನು ಕೊಲ್ಲುತ್ತಾನೆ. ಯುದ್ಧಭೂಮಿಯಲ್ಲಿ ಅಭಿಮನ್ಯುವನ್ನು ಶಲ್ಯ ಎದುರಿಸುವ ಪ್ರಸಂಗದಲ್ಲಿ ಅವನ ಮೇಲೆ ಒಂದು ಅಸ್ತ್ರವನ್ನು ಪ್ರಯೋಗಿಸಿದ. ಅಭಿಮನ್ಯು ಅದನ್ನು ತಡೆದು ಶಲ್ಯನ ಕಡೆಗೆ ಎಸೆದಾಗ ಶಲ್ಯನ ಸಾರಥಿ ಸತ್ತ. ಭೀಮನಿಂದ ಶಲ್ಯ ಪರಾಜಿತನಾದರೂ ಪುನಃ ಕೆಲವೇ ಕ್ಷಣದಲ್ಲಿ ಎಚ್ಚೆತ್ತು ಪಾಂಡವರಲ್ಲಿದ್ದ 25 ಚೇದಿ ವೀರರನ್ನು ಸಂಹರಿಸಿದ.
ಕರ್ಣನು ಯುದ್ಧದಲ್ಲಿ ಶಲ್ಯರಾಜನ ಸೂಚನೆಗಳನ್ನು ತಿರಸ್ಕರಿಸಿದ ಸನ್ನಿವೇಶಗಳು
ಬದಲಾಯಿಸಿ- ಕುರುಕ್ಷೇತ್ರ ಯುದ್ಧ ಪ್ರಾರಂಭವಾಗಿ ಕೌರವನ ಕಡೆ ಕ್ರಮವಾಗಿ ಭೀಷ್ಮ, ದ್ರೋಣರು ಸೈನ್ಯದ ಮುಖಂಡತ್ವವನ್ನು ವಹಿಸಿದ ಅನಂತರ ಕರ್ಣನ ಸರದಿ ಬಂತು. ಆ ಸಮಯದಲ್ಲಿ ಕರ್ಣನಿಗೆ ಕುಶಲಿಯಾದ ಸಾರಥಿಯೊಬ್ಬನ ಆವಶ್ಯಕತೆ ಇತ್ತು. ಕೊನೆಗೆ ಕೌರವ, ಶಲ್ಯನನ್ನು ಸಂಧಿಸಿ ಕರ್ಣನಿಗೆ ಸಾರಥಿಯಾಗು ಎಂದು ಪ್ರಾರ್ಥಿಸಿದ. ಕರ್ಣನು ಸೂತಪುತ್ರನೆಂದು ಆತನಿಗೆ ಸಾರಥಿಯಾಗೆನೆಂದು ಮೊದಲು ತಿರಸ್ಕರಿಸಿದರೂ ಅನಂತರ ಶಲ್ಯ ಸಾರಥ್ಯವಹಿಸಲು ಸಮ್ಮತಿಸಿದ. ಘಟೋತ್ಕಚನ ವಿರುದ್ಧ ಯುದ್ಧಮಾಡುವಾಗ ಕರ್ಣ ಘಟೋತ್ಕಚನನ್ನು ಸೋಲಿಸಲು ವಾಸವಿ ಶಕ್ತಿ ಅಸ್ತ್ರವನ್ನು ಬಳಸಲು ಮುಂದಾದಾಗ, ಶಲ್ಯನು ಕರ್ಣನಿಗೆ, "ಬೇಡ ಕರ್ಣ. ವಾಸವಿ ಶಕ್ತಿ ಅಸ್ತ್ರವನ್ನು ಅರ್ಜುನನ ಮೇಲೆ ಪ್ರಯೋಗಿಸಲು ಉಳಿಸಿಕೋ" ಎಂದು ಹೇಳಿದರೂ ಕೇಳದೆ ಬ್ರಹ್ಮಾಸ್ತ್ರವನ್ನು ಬಳಸಿ ಘಟೋತ್ಕಚನನ್ನು ಕೊಲ್ಲುತ್ತಾನೆ. ತನ್ನ ಮಾತಿನಂತೆ ನಡೆದುಕೊಳ್ಳದಿದ್ದಾಗ ಕರ್ಣನ ಸಾರಥ್ಯವನ್ನು ತ್ಯಜಿಸಿದ.
- ಅರ್ಜುನನ ವಿರುದ್ಧ ಯುದ್ಧ ಮಾಡುವಾಗ ನಾಗಾಸ್ತ್ರವನ್ನು ಪ್ರಯೋಗಿಸಲು ಮುಂದಾಗುತ್ತಾನೆ, ಆಗ ಶಲ್ಯ ರಾಜ, "ಕರ್ಣ. ಅಸ್ತ್ರವನ್ನು ಅರ್ಜುನನ ಎದೆಗೆ ಗುರಿ ಮಾಡಿ ಬಿಡು" ಎಂದಾಗ, "ಇಲ್ಲ. ಅವನ ತಲೆ ಕತ್ತರಿಸಿ ಅದನ್ನು ನನ್ನ ಗೆಳೆಯನಿಗೆ ಕೊಟ್ಟು ಅವನ ಸಂತೋಷವನ್ನ ನೋಡಬೇಕು" ಎನ್ನುತ್ತಾನೆ. ಆದರೆ ಶಲ್ಯ "ಬೇಡ ಕರ್ಣ, ನಿನ್ನ ಗೆಳೆಯನ ಸಂತೋಷದ ಸಲುವಾಗಿ ಯುದ್ಧವನ್ನ ಮಾಡಬೇಡ. ಬದಲಿಗೆ ಯುದ್ಧವನ್ನ ಗೆಲ್ಲುವ ಸಲುವಾಗಿ ಯುದ್ಧ ಮಾಡು" ಎಂದು ಹೇಳಿದರು ಕೂಡ ಕೇಳದೆ, ಕೋಪದಿಂದ ಶಲ್ಯನಿಗೆ, "ನೀನು ಸಾರಥಿ, ಸಾರಥಿಯ ಕೆಲಸ ಮಾಡು, ಮಂತ್ರಿಯ ಕೆಲಸವನ್ನಲ್ಲ" ಎಂದು ಹೇಳಿ ನಾಗಾಸ್ತ್ರವನ್ನು ಅರ್ಜುನನ ತಲೆಗೆ ಗುರಿಮಾಡಿ ಪ್ರಯೋಗಿಸುತ್ತಾನೆ. ಆಗ ಕೃಷ್ಣ ತನ್ನ ಕಾಲಿನಿಂದ ರಥವನ್ನು ತುಳಿದು ಭೂಮಿಯ ಒಳಗೆ ಹೋಗುವಂತೆ ಮಾಡಿದಾಗ, ನಾಗಾಸ್ತ್ರ ಅರ್ಜುನನ ಕಿರೀಟಕ್ಕೆ ಸೋಕಿ ವಿಫಲವಾಗುತ್ತದೆ.[೫]
- ಕರ್ಣನು ಯುದ್ಧವನ್ನು ಮುಂದುವರೆಸುತ್ತ ತನ್ನ ಸಾರಥಿಯಾದ ಶಲ್ಯನಿಗೆ, ರಕ್ತದಿಂದ ತೊಯ್ದು ಕೆಸರುಗೊಂಡ ಯುದ್ಧಭೂಮಿಯ ಮುಖಾಂತರ ನಡೆಸಲು ಹೇಳುತ್ತಾನೆ. ಶಲ್ಯನು “ಬೇಡ ಕರ್ಣ. ನಾವು ಬೇರೆ ಮಾರ್ಗದಿಂದ ಹೋಗೋಣ, ಏಕೆಂದರೆ ಆ ಜಾಗದಲ್ಲಿ ರಕ್ತ ತುಂಬಿ ಭೂಮಿ ಕೆಸರಾಗಿದೆ. ನಾವು ಅಲ್ಲಿಗೆ ಹೋದರೆ ಚಕ್ರವು ಕೆಸರಿಗೆ ಸಿಲುಕಿಕೊಳ್ಳುತ್ತದೆ”, ಎಂದು ಹೇಳಿದರು ಕೂಡ ಕರ್ಣ ಕೇಳದೆ ರಥವನ್ನು ಅದೇ ಮಾರ್ಗದಲ್ಲಿ ನಡೆಸುವಂತೆ ಆಜ್ಞಾಪಿಸುತ್ತಾನೆ. ರಥವು ರಕ್ತ ಕೂಡಿದ ರಣರಂಗಕ್ಕೆ ತಲುಪಿದಾಗ ಚಕ್ರವು ಕೆಸರಿಗೆ ಸಿಲುಕಿಕೊಳ್ಳುತ್ತದೆ. ಕರ್ಣನು ಸಿಲುಕಿದ ಚಕ್ರವನ್ನು ಸರಿಪಡಿಸಿಕೊಳ್ಳುತ್ತಿರುವಾಗ ಅರ್ಜುನನು ತನ್ನ ಬಾಣವನ್ನು ಪ್ರಯೋಗಿಸಿ ಕರ್ಣನನ್ನು ಕೊಲ್ಲುತ್ತಾನೆ.
- ಕರ್ಣ ಮಡಿದಾಗ ಮುಂದೆ ಸೇನಾಧಿಪತ್ಯವನ್ನು ಯಾರಿಗೆ ಕೊಡಬೇಕೆಂದು ಕೌರವ ಯೋಚನೆಗೀಡಾದಾಗ ಅಶ್ವತ್ಥಾಮನ ಮಾತಿನಂತೆ ಶಲ್ಯನಿಗೆ ಸೇನಾಧಿಪತ್ಯವನ್ನು ವಹಿಸಿದ. ಇತ್ತ ಪಾಂಡವರು ಶಿಬಿರದಲ್ಲಿ ಶಲ್ಯನನ್ನು ನಿಗ್ರಹಿಸುವ ಬಗೆಯನ್ನು ಆಲೋಚಿಸುತ್ತಿದ್ದರು. ಭೀಷ್ಮ, ದ್ರೋಣ, ಕರ್ಣರಿಗೆ ಶಲ್ಯ ಒಂದು ಕೈ ಮಿಗಿಲು ಎಂದು ತಿಳಿದಿದ್ದ ಕೃಷ್ಣ ಶಲ್ಯನನ್ನು ಸಂಹರಿಸಲು ಯುಧಿಷ್ಠಿರನೇ ಯೋಗ್ಯನೆಂದು ತೀರ್ಮಾನಿಸಿದ. ಕೊನೆಗೆ ಧರ್ಮರಾಯ ತನ್ನ ಶಕ್ತ್ಯಾಯುಧ ಬಳಸಿ ಶಲ್ಯನನ್ನು ಕೊಂದ.
ಉಲ್ಲೇಖಗಳು
ಬದಲಾಯಿಸಿ- ↑ Ganguly, Kisari. "The Mahabharata of Krishna-Dwaipayana Vyasa".
- ↑ "Kunti" (PDF). Manushi India Organization. Retrieved 10 January 2013.
- ↑ Puranic Encyclopaedia by Vettam Mani
- ↑ Rajagopalachari, C. (. (1970). Mahabharata (10th ed.). Bombay : Bharatiya Vidya Bhavan
- ↑ https://sacred-texts.com/hin/m08/m08090.htm