ವಿಕ್ಟೋರಿಯಾ ಜಲಪಾತ
ವಿಕ್ಟೋರಿಯಾ ಜಲಪಾತ ( ಸ್ಥಳೀಯ ಭಾಷೆಯಲ್ಲಿ ಮೋಸಿ-ಓ-ಟುನ್ಯಾ ) ಆಫ್ರಿಕಾದ ದಕ್ಷಿಣ ಭಾಗದಲ್ಲಿ ಜಿಂಬಾಬ್ವೆ ಮತ್ತು ಜಾಂಬಿಯ ದೇಶಗಳ ಗಡಿಯಲ್ಲಿ ಜಾಂಬೆಜಿ ನದಿಯ ಒಂದು ಮಹಾ ಜಲಪಾತ. ವಿಕ್ಟೋರಿಯಾ ಜಲಪಾತ ಜಗತ್ತಿನ ಅತಿ ಭಾರೀ ಜಲಪಾತವೆನಿಸಿದೆ. ಅಲ್ಲದೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ವಿಶ್ವದ ಬೇರಾವ ಜಲಪಾತ ಪ್ರದೇಶಗಳಲ್ಲಿ ಕಾಣಬರದ ವನ್ಯಜೀವಿ ವೈವಿಧ್ಯವಿದೆ. ವಿಕ್ಟೋರಿಯಾ ಜಲಪಾತ ಸ್ಥಳೀಯವಾಗಿ ಗರ್ಜಿಸುವ ಹೊಗೆ ಎಂದು ಹೆಸರಾಗಿದೆ. ತನ್ನ ವಿಶಾಲ ಗೋಡೆಯಂತೆ ಧುಮುಕುವ ಜಲಧಾರೆಯ ಕೆಲ ಭಾಗವು ನೆಲವನ್ನು ತಲುಪುವಷ್ಟರೊಳಗೆ ತುಂತುರು ತುಂತುರಾಗಿ ತಡಸಲಿನ ಅಡಿಭಾಗದಿಂದ ನೀರಾವಿಯ ಮೋಡಗಳಾಗಿ ಮೇಲೇಳುವುದರಿಂದ ಈ ಹೆಸರು ವಿಕ್ಟೋರಿಯಾ ಜಲಪಾತಕ್ಕೆ ಬಂದಿದೆ. ಸ್ಕಾಟ್ಲೆಂಡ್‌ನ ಅನ್ವೇಷಕ ಡೇವಿಡ್ ಲಿವಿಂಗ್‌ಸ್ಟನ್ ಈ ಜಲಪಾತಕ್ಕೆ ವಿಕ್ಟೋರಿಯಾ ಜಲಪಾತ ಎಂಬ ಹೆಸರನ್ನಿಟ್ಟನು. ಆದರೆ ಜಿಂಬಾಬ್ವೆ ದೇಶದಲ್ಲಿ ಇದು ಡೇವಿಡ್ ಲಿವಿಂಗ್‌ಸ್ಟನ್ ಜಲಪಾತವೆಂಬ ಹೆಸರಿನಿಂದ ಕರೆಯಲ್ಪಟ್ಟರೆ ಜಾಂಬಿಯಾ ದೇಶದಲ್ಲಿ ಇದರ ಅಧಿಕೃತ ಹೆಸರು ಮೋಸಿ-ಓ-ಟುನ್ಯಾ. ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಈ ಎರಡೂ ಹೆಸರುಗಳನ್ನು ಮಾನ್ಯಮಾಡಲಾಗಿದೆ. ವೆನೆಜುವೆಲಾದ ಏಂಜೆಲ್ ಜಲಪಾತದಷ್ಟು ಎತ್ತರ ಮತ್ತು ಖೋನ್ ಜಲಪಾತದಷ್ಟು ಅಗಲವನ್ನು ಹೊಂದದೆ ಇದ್ದರೂ ಸಹ ವಿಕ್ಟೋರಿಯಾ ಜಲಪಾತವು ಜಗತ್ತಿನ ಅತಿ ದೊಡ್ಡ ಜಲಪಾತವೆನಿಸಿದೆ. ಇದಕ್ಕೆ ಕಾರಣ ಸುಮಾರು ೧.೭ ಕಿ,ಮೀ. ಅಗಲವಾಗಿ ಸುಮಾರು ೧೦೮ ಎತ್ತರದಿಂದ ನೀರಿನ ಒಂದೇ ಹಾಳೆಯಾಗಿ ಧುಮುಕುವ ರುದ್ರ ರಮಣೀಯ ನೋಟ. ಇಲ್ಲಿ ಜಿಗಿಯುವ ನೀರಿನ ಪ್ರಮಾಣವು ವಿಶ್ವದ ಇತರ ಮಹಾ ಜಲಪಾತಗಳೊಂದಿಗೆ ಉತ್ತಮ ಹೋಲಿಕೆಯನ್ನು ಹೊಂದಿದೆ. ಇತರ ದೊಡ್ಡ ಜಲಪಾತಪ್ರದೇಶಗಳಲ್ಲಿರುವಂತೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ಪರ್ವತಗಳಾಗಲಿ ಯಾ ಆಳ ಕಣಿವೆಗಳಾಗಲೀ ಇಲ್ಲದಿದ್ದು ಸರಿಸುಮಾರು ಪೂರ್ಣ ಬಯಲು ಪ್ರದೇಶದಲ್ಲಿ ಹರಿದು ಬರುವ ಜಾಂಬೆಜಿ ನದಿ ಇಲ್ಲಿ ಹಠಾತ್ತಾಗಿ ಕೆಳ ಧುಮುಕುವುದು ಇನ್ನೊಂದು ವೈಶಿಷ್ಟ್ಯ.
ಮೋಸಿ-ಓ-ಟುನ್ಯಾ / ವಿಕ್ಟೋರಿಯಾ ಜಲಪಾತ* | |
---|---|
UNESCO ವಿಶ್ವ ಪರಂಪರೆಯ ತಾಣ | |
ಚಿತ್ರ:Victoria Falls Zambezi.jpg ವಿಕ್ಟೋರಿಯಾ ಜಲಪಾತ. | |
ರಾಷ್ಟ್ರ | ಜಾಂಬಿಯ ಮತ್ತು ಜಿಂಬಾಬ್ವೆ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | vii, viii |
ಆಕರ | 509 |
ವಲಯ** | ಆಫ್ರಿಕಾ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1989 (13th ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಜೀವ ವೈವಿಧ್ಯಸಂಪಾದಿಸಿ
ವಿಕ್ಟೋರಿಯಾ ಜಲಪಾತದ ಪರಿಸರದಲ್ಲಿ ಜಾಂಬಿಯಾ ಮತ್ತು ಜಿಂಬಾಬ್ವೆ ದೇಶಗಳು ರಾಷ್ಟ್ರೀಯ ಉದ್ಯಾನಗಳನ್ನು ರಚಿಸಿದ್ದು ಇವು ದೊಡ್ಡ ಪ್ರಮಾಣದ ಜೀವ ವೈವಿಧ್ಯದ ನೆಲೆಗಳಾಗಿವೆ. ಇಲ್ಲಿನ ಸಸ್ಯರಾಜಿಯು ಸಾಮಾನ್ಯವಾಗಿ ಆಫ್ರಿಕಾದ ಸವಾನ್ನಾ ಹುಲ್ಲುಗಾವಲಿನ ಸಸ್ಯಗಳು. ಜೊತೆಗೆ ನದಿಯಂಚಿನಲ್ಲಿ ಕಾಣಬರುವ ತೆಂಗಿನ ಜಾತಿಯ ಮರಗಳ ಕಾಡುಗಳಿವೆ. ತೇಗದ ಮರಗಳ ತೋಪುಗಳು ಸಹ ಸಾಕಷ್ಟಿವೆ.
ಆಫ್ರಿಕಾದ ಆನೆಗಳ ಬೃಹತ್ ಗುಂಪುಗಳು ಇಲ್ಲಿ ವಾಸವಾಗಿವೆ. ಜೊತೆಗೆ ಕಾಡುಕೋಣ, ಜಿರಾಫೆ, ಜೀಬ್ರಾ ಮತ್ತು ಜಿಂಕೆಗಳ ಹಲವು ತಳಿಗಳನ್ನು ಇಲ್ಲಿ ಕಾಣಬಹುದು. ಕೆಲವೊಮ್ಮೆ ಸಿಂಹ ಮತ್ತು ಚಿರತೆಗಳು ಸಹ ಕಾಣಬರುವುದಿದೆ. ಬಬೂನ್ ಮತ್ತು ವೆರ್ವೆಟ್ ಕೋತಿಗಳು ಇಲ್ಲಿ ಸಾಮಾನ್ಯ. ಜಲಪಾತದ ಮೇಲ್ಭಾಗದ ನದಿಯಲ್ಲಿ ಹಿಪ್ಪೊಪೊಟಮಸ್‌ಗಳ ದೊಡ್ಡ ಹಿಂಡುಗಳು ನೆಲೆಸಿವೆ. ಮೊಸಳೆಗಳು ಈ ಪ್ರದೇಶದಲ್ಲಿ ಸಾಕಷ್ಟಿವೆ. ಆಟ್ಟರ್, ಕಪ್ಪು ಗರುಡ ಮತ್ತು ಹಲವು ಜಾತಿಗಳ ಹದ್ದುಗಳು ಸಹ ವಿಕ್ಟೋರಿಯಾ ಜಲಪಾತದ ಪರಿಸರದಲ್ಲಿ ನೆಲೆಸಿವೆ. ಜಾಂಬೆಜಿ ನದಿಯಲ್ಲಿ ಜಲಪಾತದ ಮೇಲ್ಭಾಗದಲ್ಲಿ ೮೯ ತಳಿಗಳ ಮೀನುಗಳಿಗೆ ನೆಲೆಯಾಗಿದ್ದರೆ ಜಲಪಾತದ ಕೆಳಗಣ ಭಾಗದಲ್ಲಿ ೩೯ ತಳಿಗಳ ಮೀನುಗಳು ಜೀವಿಸಿವೆ.
ವಿಡಿಯೊ ಚಿತ್ರಣಸಂಪಾದಿಸಿ
ಇವುಗಳನ್ನೂ ನೋಡಿಸಂಪಾದಿಸಿ
ಬಾಹ್ಯ ಸಂಪರ್ಕಕೊಂಡಿಗಳುಸಂಪಾದಿಸಿ
ವಿಕಿಮೀಡಿಯ ಕಣಜದಲ್ಲಿ Victoria Falls ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಗಳ ಮಾಹಿತಿತಾಣದಲ್ಲಿ ಮೋಸಿ-ಓ-ಟುನ್ಯಾ.
- ಜಾಂಬಿಯಾದ ಸರಕಾರಿ ಪ್ರವಾಸಿ ಇಲಾಖೆಯ ಮಾಹಿತಿತಾಣದಲ್ಲಿ ವಿಕ್ಟೋರಿಯಾ ಜಲಪಾತದ ವಿಷಯಗಳು
- ಜಿಂಬಾಬ್ವೆಯ ಸರಕಾರಿ ಪ್ರವಾಸಿ ಇಲಾಖೆಯ ಮಾಹಿತಿತಾಣದಲ್ಲಿ ವಿಕ್ಟೋರಿಯಾ ಜಲಪಾತದ ವಿಷಯಗಳು
- ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿ
- ೧೮೯೧ ರಲ್ಲಿ ತೆಗೆಯಲಾದ ವಿಕ್ಟೋರಿಯಾ ಜಲಪಾತದ ಮೊಟ್ಟಮೊದಲ ಛಾಯಾಚಿತ್ರಗಳು