ವಲ್ಲಭ್‌ಭಾಯಿ ಪಟೇಲ್
ಸರ್ದಾರ್ ವಲ್ಲಭಭಾಯಿ ಪಟೇಲ್ (ಅಕ್ಟೋಬರ್ ೩೧, ೧೮೭೫ - ಡಿಸೆಂಬರ್ ೧೫, ೧೯೫೦), ಸರ್ದಾರ್ ಪಟೇಲ್ ಎಂದೇ ಕರೆಯಲಾಗುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು.[೧] ಭಾರತ ಮತ್ತು ಇತರೆ ಕಡೆಗಳಲ್ಲಿ, ಅವರನ್ನು ಹೆಚ್ಚಾಗಿ ಸರ್ದಾರ್ ಎಂದು ಕರೆಯಲಾಗುತ್ತಿತ್ತು, ಇದರರ್ಥ ಹಿಂದಿ, ಉರ್ದು, ಮತ್ತು ಪರ್ಷಿಯನ್ ಭಾಷೆಗಳಲ್ಲಿ "ಮುಖ್ಯ"ವಾದ ವ್ಯಕ್ತಿ. 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು. ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದೂ ಪ್ರಜಾಮಾನಸದಲ್ಲಿ ದೊರೆತಿತ್ತು.[೨]
ವಲ್ಲಭ್‌ಭಾಯಿ ಪಟೇಲ್ | |
---|---|
ಅಧಿಕಾರ ಅವಧಿ ೧೫ ಆಗಸ್ಟ್ ೧೯೪೭ – ೧೫ ಡಿಸೆಂಬರ್ ೧೯೫೦ | |
ಪ್ರಧಾನ ಮಂತ್ರಿ | ಜವಾಹರಲಾಲ್ ನೆಹರು |
ಪೂರ್ವಾಧಿಕಾರಿ | ಹೊಸ ಪದವಿ |
ಉತ್ತರಾಧಿಕಾರಿ | ಮೊರಾರ್ಜಿ ದೇಸಾಯಿ |
ಅಧಿಕಾರ ಅವಧಿ ೧೫ ಆಗಸ್ಟ್ ೧೯೪೮ – ೧೫ ಡಿಸೆಂಬರ್ ೧೯೫೦ | |
ಪ್ರಧಾನ ಮಂತ್ರಿ | ಜವಾಹರಲಾಲ್ ನೆಹರು |
ಪೂರ್ವಾಧಿಕಾರಿ | ಹೊಸ ಪದವಿ |
ಉತ್ತರಾಧಿಕಾರಿ | ಸಿ. ರಾಜಗೋಪಾಲಚಾರಿ |
ವೈಯಕ್ತಿಕ ಮಾಹಿತಿ | |
ಜನನ | ವಲ್ಲಭಭಾಯ್ ಝವೇರಿಭಾಯ್ ಪಟೇಲ್ ೩೧ ಅಕ್ಟೋಬರ್ ೧೮೭೫ ನಾಡಿಯಾದ್, ಗುಜರಾತ್, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ |
ಮರಣ | Error: Need valid birth date (second date): year, month, day ಬಾಂಬೆ, ಬಾಂಬೆ ರಾಜ್ಯ, ಭಾರತ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಮಕ್ಕಳು | ಮಣೀಬೇನ್ ಪಟೇಲ್, ದಹ್ಯಭಾಯ್ ಪಟೇಲ್ |
ಅಭ್ಯಸಿಸಿದ ವಿದ್ಯಾಪೀಠ | ಇನ್ಸ್ ಆಫ್ ಕೋರ್ಟ್ |
ಉದ್ಯೋಗ | ವಕೀಲ ರಾಜಕೀಯ ಕಾರ್ಯಕರ್ತ |
ಧರ್ಮ | ಹಿಂದೂ ಧರ್ಮ |
ಮಿಲಿಟರಿ ಸೇವೆ | |
ಪ್ರಶಸ್ತಿಗಳು | ಭಾರತ ರತ್ನ |
ಗುಜರಾತ್ನ ಗ್ರಾಮಾಂತರ ಭಾಗದಲ್ಲಿ ಬೆಳೆದ ಪಟೇಲ್, ಯಶಸ್ವಿ ವಕೀಲರಾಗಿದ್ದರು.[೩] ಅವರು ತರುವಾಯ ಗುಜರಾತ್‌ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಮೂಲಕ ಗುಜರಾತ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ ನೇಮಕಗೊಂಡರು. ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು.
ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿ, ಪಟೇಲ್ ಭಾರತ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ, ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳನ್ನು ಸಂಘಟಿಸಿ, ಆ ಭಾಗಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡಿದರು. ಅವರು ಭಾರತಕ್ಕೆ "ಹಂಚಿಕೆಯಾದ" ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಸಂಯುಕ್ತ ಭಾರತವನ್ನು ರೂಪಿಸುವ ಕಾರ್ಯವನ್ನು ಮುನ್ನಡೆಸಿದರು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಲಾಯಿತು. ಸೇನಾಪಡೆಗಳ ಬೆದರಿಕೆಯನ್ನು ಉಪಯೋಗಿಸಿ ಬಹುತೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಿದರು. ಹೊಸ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ಮತ್ತು ತುಸುವೂ ರಾಜಿಯಾಗದ್ದಾಗಿತ್ತು.
ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು "ಭಾರತದ ನಾಗರಿಕ ಸೇವಕರ ಪೋಷಕ ಸಂತ" (patron saint of India's civil servants) ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು "ಭಾರತದ ಏಕೀಕರಣ ನೇತಾರ" ಎಂದೂ ಕರೆಯಲಾಗುತ್ತದೆ. [೪] ಪ್ರಪಂಚದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು 31 ಅಕ್ಟೋಬರ್ 2018 ರಂದು ದೇಶಕ್ಕೆ ಸಮರ್ಪಿಸಲಾಯಿತು, ಅದು ಸುಮಾರು 182 ಮೀಟರ್ ಎತ್ತರದ್ದಾಗಿದೆ. [೫]
ಆರಂಭಿಕ ಜೀವನ
ಬದಲಾಯಿಸಿವಲ್ಲಭಭಾಯ್ ಝವೇರಿಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾಡ್ ಎಂಬಲ್ಲಿನ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ ೩೧ ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ.[೬] ಅವರು ಮಧ್ಯ ಗುಜರಾತ್‍ನ ಲೇವಾ ಪಟೇಲ್ ಪಾಟಿದಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಆದಾಗ್ಯೂ ಲೇವಾ ಪಟೇಲ್ ಮತ್ತು ಕಡವ ಪಟೇಲ್‌ರ ಗುಂಪುಗಳು ಸರ್ದಾರ್ ಪಟೇಲ್‌ರನ್ನು ತಮ್ಮವರೆಂದು ಗುರುತಿಸುತ್ತಾರೆ.[೭]
ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, ವಿಠ್ಠಲಭಾಯಿ ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು. ಪಟೇಲ್‌ರು ನಡಿಯಾದ್, ಪೆಟ್ಲಾಡ್, ಮತ್ತು ಬೋರಸಾಡ್‌ನಲ್ಲಿ ಶಾಲೆಗಳಿಗೆ ಹಾಜರಾಗಲು, ಇತರ ಹುಡುಗರೊಂದಿಗೆ ಪ್ರಯಾಣಿಸುತ್ತಾ ಸ್ವಯಂ ಜೀವಿಸುತ್ತಿದ್ದರು. ಅವರು ಅಚಲ ಸಂಯಮ ಸ್ವಭಾವವನ್ನು ಬೆಳೆಸಿಕೊಂಡರು. ಒಂದು ಜನಪ್ರಿಯ ದಂತಕಥೆಯಂತೆ, ಒಮ್ಮೆ ಕ್ಷೌರಿಕನು ಒಂದು ಗುಳ್ಳೆಯ ಕಾರಣ ಅಳುಕುತಿದ್ದಾಗ, ತಾವೇ ಚಾಕುವನ್ನು ತೆಗೆದುಕೊಂಡು, ಕೆತ್ತಿಕೊಂಡರು. [೮]
ಪಟೇಲರು ೨೨ ವರ್ಷದವರಿದ್ದಾಗ, ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದರು. ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಪಟೇಲ್ ಸ್ವತಃ ವಕೀಲರಾಗಿ ಕೆಲಸ ಮಾಡಲು ಮತ್ತು ಹಣವನ್ನು ಉಳಿಸಲು, ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಮತ್ತು ನ್ಯಾಯವಾದಿಯಾಗಲು ಅಧ್ಯಯನ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ತನ್ನ ಕುಟುಂಬದಿಂದ ದೂರವಿದ್ದು, ಇತರ ವಕೀಲರಿಂದ ಎರವಲು ಪಡೆದ ಪುಸ್ತಕಗಳೊಂದಿಗೆ ತನ್ನದೇ ಆದ ಅಧ್ಯಯನವನ್ನು ನಡೆಸಿ, ಎರಡು ವರ್ಷಗಳಲ್ಲಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು.
ಆನಂತರ, ತನ್ನ ಪತ್ನಿಯಾದ ಜಾವೇರ್‌ಬಾರನ್ನು ತವರು ಮನೆಯಿಂದ ಕರೆಯಿಸಿ, ಗೋಧ್ರಾದಲ್ಲಿ ಮನೆ ಮಾಡಿದರು. ಈ ಜೋಡಿಗೆ, 1904 ರಲ್ಲಿ ಮಣಿಬೆನ್ (ಮಗಳು) ಮತ್ತು 1906 ರಲ್ಲಿ ದಹ್ಯಾಭಾಯಿ (ಮಗ) ಜನಿಸಿದರು. ಅಲ್ಲಿಯೇ ಅವರಿಗೆ ವಕೀಲಿ ವೃತ್ತಿಯ ಪರವಾನಿಗೆ ಸಹ ದೊರೆಯಿತು. ಹಣ ಉಳಿಸಲು ಹಲವು ವರ್ಷಗಳನ್ನು ತೆಗೆದುಕೊಂಡ ಪಟೇಲ್, ತೀವ್ರ ಮತ್ತು ನುರಿತ ವಕೀಲರಾಗಿ ಖ್ಯಾತಿಯನ್ನು ಗಳಿಸಿದರು. ಗುಜರಾತ್‌ನಾದ್ಯಂತ ಬಬೊನಿಕ್ ಪ್ಲೇಗ್ ಹರಡುತ್ತಿದ್ದಾಗ, ಸ್ನೇಹಿತರ ಆರೈಕೆ ಮಾಡಿದ್ದರು. ಪಟೇಲ್‌ರಿಗೇ ಈ ಮಾರಿ ಅಪ್ಪಳಿಸಿದಾಗ, ತನ್ನ ಕುಟುಂಬವನ್ನು ಸುರಕ್ಷತಾ ಜಾಗಕ್ಕೆ ಕಳುಹಿಸಿ, ತಾನೂ ಮನೆ ಬಿಟ್ಟು,ನಡಿಯಾದ್‌ನಲ್ಲಿ ಪ್ರತ್ಯೇಕವಾದ ಮನೆ ಮಾಡಿ ಉಳಿಯಲಾರಂಭಿಸಿದರು. (ಕೆಲವು ದಾಖಲೆಗಳ ಪ್ರಕಾರ, ಪಟೇಲ್ ಈ ಸಮಯವನ್ನು ಒಂದು ಶಿಥಿಲವಾದ ದೇವಾಲಯದಲ್ಲಿ ಕಳೆದರು); ಅಲ್ಲಿ ಅವರು ನಿಧಾನವಾಗಿ ಚೇತರಿಸಿಕೊಂಡರು.[೯]
ಅದಕ್ಕಾಗಿ ಹಣ ಒಟ್ಟುಮಾಡಿ, ಮುಂದೆ ಬ್ಯಾರಿಸ್ಟರಾಗಲು ಇಂಗ್ಲೆಂಡಿಗೆ ತೆರಳುತ್ತಾರೆ. ಪಟೇಲರು ಹಣಸಂಗ್ರಹಣೆಯಲ್ಲಿ ತೊಡಗಿದ್ದ ಕಾಲದಲ್ಲಿ ಅವರ ಅಣ್ಣ ವಿಠ್ಠಲಭಾಯಿ ವಕೀಲರಾಗಿ ಹೆಸರಾಗುತ್ತಿದ್ದರು.[೧೦]
ತಮ್ಮ ವಾಸಸ್ಥಾನವಾದ ಕರಮ್‌ಸಾದ್‌ನಲ್ಲಿನ ಹಣಕಾಸಿನ ತಾಪತ್ರಯಗಳನ್ನು ಅನುಭವಿಸುತ್ತ, ಗೋದಾ್ರಾ, ಬೋರಸದ್, ಮತ್ತು ಆನಂದ್‌ಗಳಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಮುಂದುವರೆಸಿದ್ದರು. ಬೋರಸದ್‌ನ "ಎಡ್ವರ್ಡ್ ಮೆಮೋರಿಯಲ್ ಹೈಸ್ಕೂಲ್(ಇಂದಿನ ಜಾವೆರ್ಭಾಯಿ ದಜಿಭಾಯಿ ಪಟೇಲ್ ಹೈಸ್ಕೂಲ್)"ನ ಮೊದಲ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದರು.
ಇಂಗ್ಲೆಂಡ್‌ಗೆ ತೆರಳಲು ಅವರು ಸಾಕಷ್ಟು ಹಣ ಉಳಿಸಿ, ಪಾಸ್ ಮತ್ತು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದಾಗ, "ವಿ.ಜೆ.ಪಟೇಲ್" ಎಂದು ನಮೂದಿಸಲಾಗಿತ್ತು. ಇವರದೇ ಹೆಸರಿನ ಮೊದಲಕ್ಷರ ಹೊಂದಿದ್ದ ಇವರ ಅಣ್ಣನಾದ ವಿಠಲ್‌ಭಾಯ್ ವಿಳಾಸವು ಸಹ ನಮೂದಾಗಿತ್ತು. ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡುವ ಆಶಯವನ್ನು ಹೊಂದಿದ್ದ ವಿಠಲ್‌ಭಾಯ್, ವಲ್ಲಭ್‌ಭಾಯಿ ಮೊದಲು ಹೋದರೆ, ಅಣ್ಣನಾದ ತಾನು ಅವನ ಹಿಂದೆ ಹೋಗಬೇಕಾಗಿ ಬರುತ್ತದೆ ಮತ್ತು ಅದು ತನ್ನ ಗೌರವಕ್ಕೆ ಕುಂದು ತರುವಿದೆಂದು ಅಭಿಪ್ರಾಯಪಟ್ಟರು. ಅವರ ಕುಟುಂಬದ ಗೌರವಾರ್ಥ, ಪಟೇಲ್ ವಿಠಲ್‌ಭಾಯ್ ಅವರನ್ನು ತಮ್ಮ ಜಾಗದಲ್ಲಿ, ತಮ್ಮ ಟಿಕೆಟ್ ಉಪಯೋಗಿಸಿಕೊಂಡು ಹೋಗಲು ಅನುಮತಿ ನೀಡಿದರು.[೧೧]
1909 ರಲ್ಲಿ ಪಟೇಲ್ ಅವರ ಹೆಂಡತಿ ಜಾವೇರ್‌ಬಾ ಬಾಂಬೆ (ಈಗನ ಮುಂಬೈ) ನಲ್ಲಿ, ಕ್ಯಾನ್ಸರ್‌ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಆರೋಗ್ಯವು ಹಠಾತ್ತಾಗಿ ಹದಗೆಟ್ಟಿತು ಮತ್ತು ಯಶಸ್ವಿ ತುರ್ತು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ಅವರು ಆಸ್ಪತ್ರೆಯಲ್ಲಿ ನಿಧನರಾದರು. ನ್ಯಾಯಾಲಯದಲ್ಲಿ ಸಾಕ್ಷಿಯನ್ನು ಅಡ್ಡ-ಪರೀಕ್ಷೆ ಮಾಡುತ್ತಿದ್ದ ಪಟೇಲ್ ಅವರಿಗೆ ಪತ್ನಿಯ ಮರಣದ ಬಗ್ಗೆ ತಿಳಿಸುವ ಒಂದು ಟಿಪ್ಪಣಿಯನ್ನು ನೀಡಲಾಯಿತು. ಸಾಕ್ಷಿಗಳ ಪ್ರಕಾರ, ಪಟೇಲ್ ಈ ಟಿಪ್ಪಣಿಯನ್ನು ಓದಿದರು, ಅದನ್ನು ಕಿಸೆಯಲ್ಲಿಟ್ಟರು ಮತ್ತು ಅವರ ಅಡ್ಡ-ಪರೀಕ್ಷೆಯನ್ನು ಮುಂದುವರೆಸಿದರಲ್ಲದೇ ಪ್ರಕರಣವನ್ನು ಗೆದ್ದರು. ವಿಚಾರಣೆ ಕೊನೆಗೊಂಡ ನಂತರ ಅವರು ಸುದ್ದಿಯನ್ನು ಹೊರಹಾಕಿದರು. ಮತ್ತೆ ಮದುವೆಯಾಗದಿರಲು ಪಟೇಲ್ ನಿರ್ಧರಿಸಿದ್ದರು. ತನ್ನ ಕುಟುಂಬದ ಸಹಾಯದಿಂದ ಅವರು ತಮ್ಮ ಮಕ್ಕಳನ್ನು ಬೆಳೆಸಿದರು ಮತ್ತು ಅವರನ್ನು ಮುಂಬೈಯ ಇಂಗ್ಲಿಷ್-ಭಾಷಾ ಶಾಲೆಗಳಿಗೆ ಕಳುಹಿಸಿದರು. 36 ನೇ ವಯಸ್ಸಿನಲ್ಲಿ ಅವರು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು ಮತ್ತು ಲಂಡನ್‌ನ "ಮಿಡಲ್ ಟೆಂಪಲ್ ಇನ್" ನಲ್ಲಿ ಸೇರಿಕೊಂಡರು. ಕೇವಲ 30 ತಿಂಗಳುಗಳಲ್ಲಿ, 36 ತಿಂಗಳ ಕೋರ್ಸ್ ಪೂರ್ಣಗೊಂಡಾಗ, ಯಾವುದೇ ಕಾಲೇಜು ಹಿನ್ನಲೆಯಿಲ್ಲದ ಪಟೇಲ್, ತಮ್ಮ ತರಗತಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಗಿದ್ದರು. [೧೨]
ಭಾರತಕ್ಕೆ ಹಿಂದಿರುಗಿದ ಪಟೇಲ್ ಅಹಮದಾಬಾದ್‌ನಲ್ಲಿ ನೆಲೆಸಿದರು ಮತ್ತು ನಗರದ ಅತ್ಯಂತ ಯಶಸ್ವಿ ನ್ಯಾಯವಾದಿಗಳ ಪೈಕಿ ಒಬ್ಬರಾದರು. ಯುರೋಪಿಯನ್-ಶೈಲಿಯ ಬಟ್ಟೆಗಳನ್ನು ಧರಿಸುವುದು ಮತ್ತು ಶಿಷ್ಟ (ನಗರೀಕರಣದ) ವರ್ತನೆಗಳನ್ನು ತೋರ್ಪಡಿಸುತ್ತ , ಅವರು ನುರಿತ ಬ್ರಿಡ್ಜ್ ಆಟಗಾರರಾದರು. ಪಟೇಲ್ ತಮ್ಮ ವೃತ್ತಿಯಿಂದ, ಬಹಳಷ್ಟು ಹಣಗಳಿಸಿ, ತಮ್ಮ ಮಕ್ಕಳಿಗೆ ಅಧುನಿಕ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದರು. ಬೊಂಬೆ ಪ್ರೆಸಿಡೆನ್ಸಿಯಿಂದ ರಾಜಕೀಯಕ್ಕೆ ಸೇರಲು ಸಿದ್ಧರಾಗಿದ್ದ ಅಣ್ಣ ವಿಠಲ್‌ಭಾಯ್‌ರವರೊಂದಿಗಿನ ಒಪ್ಪಂದದಂತೆ, ಅಹಮದಾಬಾದ್‌ನಲ್ಲಿಯೇ ಮನೆ ಜವಾಬ್ದಾರಿಯನ್ನು ವಹಿಸಿಕೊಂಡರು.[೧೩][೧೪]
ಜೀವನ
ಬದಲಾಯಿಸಿ- ನಂತರ ಪಟೇಲರು, ಹೆ೦ಡತಿ ಝವೇರಬಾರೊಂದಿಗೆ, ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿತ್ತು, ಸಂಸಾರ ಹೂಡಿದರು. ಅವರಿಗೆ ಇಬ್ಬರು ಮಕ್ಕಳಾದರು. ೧೯೦೪ರಲ್ಲಿ ಮಣಿ ಎಂಬ ಮಗಳು ಮತ್ತು ೧೯೦೬ರಲ್ಲಿ ದಹ್ಯಾ ಎಂಬ ಮಗ. ಬ್ಯುಬೋನಿಕ್ ಪ್ಲೇಗಿನಿಂದ ನರಳುತ್ತಿದ್ದ ಗೆಳೆಯನೊಬ್ಬನ ಆರೈಕೆ ಮಾಡುತ್ತ, ಪಟೇಲರು ಸ್ವತಃ ಆ ರೋಗಕ್ಕೆ ತುತ್ತಾದಾಗ, ತಮ್ಮ ಕುಟುಂಬವನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ, ತಮ್ಮ ಮನೆಯನ್ನು ತ್ಯಜಿಸಿ, ನಡಿಯಾದಿನ ಮನೆಯೊಂದರಲ್ಲಿ ( ಪಾಳುಬಿದ್ದ ದೇವಸ್ಥಾನ ಎಂದೂ ಕೆಲವರು ಹೇಳುತ್ತಾರೆ) ಚೇತರಿಕೊಳ್ಳುವವರೆಗೆ ನೆಲೆಸಿದರು. ೧೯೦೯ರಲ್ಲಿ ಅವರ ಪತ್ನಿ ತೀರಿಕೊಂಡರು. ಪಟೇಲರ ಅಂತರ್ಮುಖಿ ಸ್ವಭಾವದಿಂದ ಅವರ ಹೆಂಡತಿಯ ಬಗ್ಯೆ ಸಾರ್ವಜನಿಕರಿಗೆ ತಿಳಿದಿರುವುದು ಅತ್ಯಲ್ಪ. ಪಟೇಲರು ಮರುಮದುವೆ ಮಾಡಿಕೊಳ್ಳಲಿಲ್ಲ.
- ತಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಲೇ , ಪಟೇಲರು ಇಂಗ್ಲೆಂಡ್ ಪ್ರಯಾಣಕ್ಕೆ ಹಣ ಶೇಖರಿಸತೊಡಗಿದರು. ಮುಂದೆ ಇಂಗ್ಲೆಂಡ್ ಪ್ರಯಾಣದ ಅವಕಾಶ ಸಿಕ್ಕಿದಾಗ ಆ ಅವಕಾಶವನ್ನು ತಮ್ಮ ಅಣ್ಣ, ವಿಠ್ಠಲಭಾಯಿ ,ಗೆ ಬಿಟ್ಟುಕೊಟ್ಟದ್ದಷ್ಟೇ ಅಲ್ಲ, ಅದಕ್ಕೆ ತಾವು ಕೂಡಿಟ್ಟಿದ್ದ ಹಣವನ್ನೂ ನೀಡಿದರು. ಅದು ಆದದ್ದು ಹೀಗೆ: ಪರದೇಶ ಪ್ರಯಾಣದ ತಿಕೀಟುಗಳು ಮತ್ತು ಪಾಸು “ವಿ.ಜೆ.ಪಟೇಲ್” ( ಅಣ್ಣ , ತಮ್ಮ ಇಬ್ಬರ ಇನಿಷಿಯಲ್ಲುಗಳು ವಿ.ಜೆ. ಎಂದೇ ಇತ್ತು) ಎಂಬ ಹೆಸರಿಗೆ ಅವರ ಅಣ್ಣನ ಮನೆಯ ವಿಳಾಸಕ್ಕೆ ತಲುಪಿತು. ಅಣ್ಣನಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಹಿಂದೆಗೆಯದ ವಲ್ಲಭಭಾಯ್ ಅಣ್ಣನ ಪ್ರವಾಸದ ಖರ್ಚನ್ನೂ ನಿಭಾಯಿಸಿದರು.[೧೫]
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ
ಬದಲಾಯಿಸಿ- ೧೯೧೮ರಲ್ಲಿ ತಮ್ಮ ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಅದರ ಘನತೆ,ಗೌರವ, ದೊಡ್ಡ ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ, ಕಷ್ಟಕಾರ್ಪಣ್ಯ ಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತಮ್ಮ ಮಿತ್ರರೊಂದಿಗೆ ಗಾಂಧಿಯವರ ರೀತಿನೀತಿಗಳನ್ನೂ, ರಾಜಕೀಯ ನೀತಿಗಳನ್ನೂ ಲೇವಡಿ ಮಾಡಿದ್ದರೂ, ಅನ್ನಿ ಬೆಸಂಟರ ಬಂಧನಕ್ಕೆ ಸಹಿಹಾಕಿದ ಪಿಟಿಷನ್ ಬದಲು ಸಾರ್ವಜನಿಕ ಪ್ರತಿಭಟನೆಮಾಡಬೇಕು ಎಂದು ಗಾಂಧಿ ಸೂಚಿಸಿದಾಗ, ಅವರ ಮನಃಪರಿವರ್ತನೆಯಾಯಿತು.
- ಗಾಂಧಿಯವರ ಚಂಪಾರಣ್ಯದ ಸತ್ಯಾಗ್ರಹದ ನಂತರ ಪಟೇಲರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಗಾಂಧಿ ಸಮರ್ಥರು ಎಂದು ನಂಬಿಕೆಯುಂಟಾಯಿತು. ಆ ಹಿರಿಯ ವ್ಯಕ್ತಿ ಭಾರತೀಯ ಮೌಲ್ಯಗಳಲ್ಲಿಟ್ಟಿದ್ದ ಶ್ರದ್ಧೆ, ಅತಿ ಸರಳ ಜೀವನ ಇವುಗಳಿಂದ ಆಕರ್ಷಿತರಾದ ಪಟೇಲರು ಗಾಂಧಿಯವರ ಆಪ್ತರಾದರು.
- ಪಟೇಲರು ಕಾಂಗ್ರೆಸ್ ಪಕ್ಷ ಸೇರಿದ್ದು ೧೯೧೮ರ ನಂತರ. ಅವರು ಕಾರ್ಯದರ್ಶಿಯಾಗಿದ್ದ ಗುಜರಾತ್ ಸಭಾ ೧೯೨೦ ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿಯಾಗಿ ಬದಲಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಅವರು ೧೯೪೭ರವರೆಗೂ ಅಲ್ಲಿ ಸೇವೆ ಸಲ್ಲಿಸಿದರು.
ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳು
ಬದಲಾಯಿಸಿ- ಖೇಡಾ ಹೋರಾಟದೊಂದಿಗೆ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಕಾಲಿಟ್ಟರು. ಗುಜರಾತಿನ ಖೇಡಾ ವಿಭಾಗವು ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಗಾಂಧಿ ಈ ಹೋರಾಟಕ್ಕೆ ಒಪ್ಪಿದ್ದರೂ ಸ್ವತಃ ಚಂಪಾರಣ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಕಾರಣ, ಈ ಹೋರಾಟದ ಮುಖಂಡತ್ವವನ್ನು ವಹಿಸಲು ಅಸಾಧ್ಯವಾಗಿತ್ತು.
- ಖೇಡಾ ವಿಷಯಕ್ಕಾಗಿ ಪೂರ್ಣಾವಧಿ ಸಮಯವನ್ನು ಮೀಸಲಿಡುವ ಸ್ವಯಂಸೇವಕನಿಗಾಗಿ ಗಾಂಧಿ ಕೇಳಿದಾಗ ಪಟೇಲರು ಕೈಯೆತ್ತಿ , ಎದ್ದು ನಿಂತರು. ಹಿಂದೆ ವಕೀಲರೂ, ಗಾಂಧಿಯವರ ಅನುಯಾಯಿಗಳೂ ಆಗಿದ್ದ ನರಹರಿ ಪಾರೀಖ್ ಮತ್ತು ಮೋಹನಲಾಲ್ ಪಂಡ್ಯರೊಂದಿಗೆ ಪಟೇಲರು ಹಳ್ಳಿಹಳ್ಳಿ ಪ್ರವಾಸ ಕೈಗೊಂಡು, ಗ್ರಾಮಸ್ಥರ ತೊಂದರೆಗಳನ್ನು ಪರಿಶೀಲಿಸಿ, ರಾಜ್ಯವ್ಯಾಪಿ ಆಂದೋಳನದಲ್ಲಿ ಅವರೆಲ್ಲರ ಬೆಂಬಲವನ್ನು ಬೇಡಿದರು.
- ರಾಜ್ಯದ ಎಲ್ಲೆಡೆಗಳಲ್ಲಿ ಹಿಂದೂ, ಮುಸ್ಲಿಂ ಎನ್ನದೆ, ಬಹುತೇಕ ಪ್ರತಿಯೊಬ್ಬರೂ ಪಟೇಲರ ಪರಿಶ್ರಮ ಮತ್ತು ನಾಯಕತ್ವವನ್ನು ಒಪ್ಪಿಕೊಂಡರು. ಪಟೇಲರು ಈ ಹೋರಾಟವು ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಹಳ್ಳಿಗರು ಒಗ್ಗಟ್ಟನ್ನು ಮುರಿಯಬಾರದೆಂದು ಸಾರಿಹೇಳಿದರು. ಪಟೇಲರ ಈ ಕಾರ್ಯದಲ್ಲಿ ರಾಷ್ಟ್ರೀಯವಾದಿಗಳಾದ ಅಬ್ಬಾಸ್ ತ್ಯಾಬ್ಜೀ ಮತ್ತು ಅಹಮದಾಬಾದಿನ ಸಾರಾಭಾಯ್ ಕೈಗೂಡಿಸಿದರು.
- ಹಳ್ಳಿಗರ ಕರನಿರಾಕರಣೆಯ ಸತ್ಯಾಗ್ರಹವನ್ನು ಮುರಿಯಲು ಸರಕಾರ ಪೋಲಿಸ್ ಪಡೆಗಳನ್ನು ಕಳುಹಿಸಿ, ಜಮೀನು, ಸಾಕುಪ್ರಾಣಿಗಳನ್ನೊಳಗೊಂಡು, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಗ್ರಾಮಸ್ಥರು, ಬಂಧಿತರಾದರೂ ಹಳ್ಳಿಗರ ಕಡೆಯಿಂದ ಹಿಂಸಾತ್ಮಕ ಪ್ರತಿಕ್ರಿಯೆ ಇಲ್ಲವೇಇಲ್ಲವೆನ್ನುವಷ್ಟು ಅಪರೂಪವಾಗಿತ್ತು. ಸತ್ಯಾಗ್ರಹಿಗಳಿಗೆ ರಾಜ್ಯಾದ್ಯಂತ ಜನಸಾಮಾನ್ಯರು, ಆಹಾರ, ಬಟ್ಟೆ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಿ, ಬೆಂಬಲ ಸೂಚಿಸಿದರು.ತೆರಿಗೆ ಸಲ್ಲಿಸಿದ ,ಸರಕಾರಕ್ಕೆ ಬೆಂಬಲವಿತ್ತ ಹಳ್ಳಿಗಳಿಗೆ ಗುಜರಾತಿನ ಜನ ಬಹಿಷ್ಕಾರ ಹಾಕಿದರು.
- ಈ ಪ್ರತಿಭಟನೆಗೆ ಭಾರತದಾದ್ಯಂತ ಸಹಾನುಭೂತಿ ವ್ಯಕ್ತವಾದರೂ, ಈ ಪ್ರತಿಭಟನೆ ಸ್ಥಳೀಯ ಸಮಸ್ಯೆಗಾಗಿತ್ತೇ ಹೊರತು, ಭಾರತದ ಸ್ವಾತಂತ್ರ್ಯಕ್ಕಾಗಿ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು. ೧೯೧೯ರಲ್ಲಿ ಸರಕಾರ ಮಣಿದು, ಕರವನ್ನು ಮುಂದೂಡಿದ್ದಷ್ಟೇ ಅಲ್ಲ, ಅದರ ದರವನ್ನೂ ಕಡಿಮೆ ಮಾಡುವುದರೊಂದಿಗೆ ಈ ಹೋರಾಟ ಮುಕ್ತಾಯ ಕಂಡಿತು.
ಸಾಮಾಜಿಕ ಹೋರಾಟಗಳು
ಬದಲಾಯಿಸಿ- ಪಟೇಲರು ಈ ಸತ್ಯಾಗ್ರಹದಿಂದ ಮಹಾನಾಯಕ ಎಂದು ಗುಜರಾತಿ ಜನಮನ್ನಣೆಯನ್ನು ಪಡೆದು, ಭಾರತದಾದ್ಯಂತ ರಾಜಕೀಯ ಧುರೀಣರ ಮೆಚ್ಚುಗೆಯನ್ನು ಗಳಿಸಿದರು.೧೯೧೯ ರಿಂದ ೧೯೨೮ರವರೆಗೆ, ಪಟೇಲರು, ಅಸ್ಪ್ರಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಙಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು. ೧೯೨೨ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು.
- ಇದರಿಂದ ಪಟೇಲರಿಗೆ ಸಾರ್ವಜನಿಕ ಸೇವೆಯೊಂದಿಗೆ ರಾಜನೀತಿ ಮತ್ತು ಆಡಳಿತರಂಗಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವ ಅವಕಾಶ ದೊರಕಿತು. ಇವರ ಆಡಳಿತಾವಧಿಯಲ್ಲಿ ಅಹಮದಾಬಾದಿಗೆ ವಿದ್ಯುತ್ ಸರಬರಾಜು, ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ, ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳನ್ನು ತಂದರು. ಹಿಂದೂ-ಮುಸ್ಲಿಮ್ ವಿವಾದದಂತಹ ನಾಜೂಕು ವಿಷಯಗಳನ್ನೂ ಕೈಗೆತ್ತಿಕೊಂಡು, ನಗರದ ಬಹುತೇಕ ಜನಸಂಖ್ಯೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಂಡರು.
- ೧೯೨೮ರಲ್ಲಿ ಬಾರ್ಡೋಲಿಯು ದುರವಸ್ಥೆಗೀಡಾಯಿತು. ಗುಜರಾತಿನ ಬಹುತೇಕ ಭಾಗಗಳು ಕ್ಷಾಮದಿಂದ ತತ್ತರಿಸುವುದರೊಂದಿಗೇ, ಸರಕಾರ ಕಂದಾಯವನ್ನು ಹೆಚ್ಚು ಮಾಡಿತು. ಇದರ ವಿರುದ್ಧವಾಗಿ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆ ದೇಶದಲ್ಲೆಲ್ಲ ಹೆಸರುಮಾಡಿತು.
- ಖೇಡಾ ಸತ್ಯಾಗ್ರಹಕ್ಕಿಂತ ಉಗ್ರವಾಗಿದ್ದ ಈ ಪ್ರತಿಭಟನೆಗೆ ಬೆಂಬಲವಾಗಿ ಗುಜರಾತಿನ ಅನೇಕ ಕಡೆಗಳಲ್ಲಿ ಜನರು ಸತ್ಯಾಗ್ರಹ ಹೂಡಿದರು. ಈ ಎರಡೂ ಹೋರಾಟಗಳು ಮುಗಿದ ನಂತರ ಪಟೇಲರು, ಜನಸಾಮಾನ್ಯರು ಕಳೆದುಕೊಂಡಿದ್ದ ಭೂಮಿಕಾಣಿ ಹಾಗೂ ಆಸ್ತಿಪಾಸ್ತಿಗಳನ್ನು ಮತ್ತೆ ಅವರಿಗೆ ವಾಪಸು ದೊರಕಿಸಿಕೊಡಲು ಬಹಳಷ್ಟು ಪರಿಶ್ರಮಪಟ್ಟರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರದಾರ್ ಎಂಬ ಬಿರುದು ಪ್ರಾಪ್ತವಾಯಿತು. ಗುಜರಾತಿನ ಲಕ್ಷಾಂತರ ಜನರಿಗೆ ಪಟೇಲರು ಆರಾಧ್ಯದೈವವಾದರು.
ಭಾರತದ ವಿಭಜನೆ
ಬದಲಾಯಿಸಿ- ಜಿನ್ನಾರ ನಾಯಕತ್ವದಲ್ಲಿ ದಿನೇದಿನೇ ಹೆಚ್ಚುತ್ತಿದ್ದ ಮುಸ್ಲಿಮ್ ಪ್ರತ್ಯೇಕತಾ ಬೇಡಿಕೆಯಿಂದ ಭಾರತದ ವಿಭಜನೆ ಅನಿವಾರ್ಯ ಎಂಬ ನಿರ್ಣಯಕ್ಕೆ ಬಂದ ಮೊದಮೊದಲ ಕಾಂಗ್ರೆಸ್ ನಾಯಕರುಗಳಲ್ಲಿ ಪಟೇಲರು ಒಬ್ಬರಾಗಿದ್ದರು. ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಮಧ್ಯೆ ಸಂಧಾನದ ಪ್ರಯತ್ನಗಳನ್ನು ವಿಫಲಗೊಳಿಸಿ, ಜಿನ್ನಾ ತನ್ನ ಹಿಂಬಾಲಕರನ್ನು ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದದ್ದು ಪಟೇಲರನ್ನು ತೀವ್ರ ಸಂತಾಪಕ್ಕೆ ಈಡುಮಾಡಿತು.( ಜಿನ್ನಾ ಕರೆ ಕೊಟ್ಟ ಡೈರೆಕ್ಟ್ ಆಕ್ಷನ್ ಡೇ ಎಂಬ ಅಂದೋಳನದಲ್ಲಿ ೫೦೦೦ಕ್ಕೂ (?) ಹೆಚ್ಚು ಮಂದಿ ಕೊಲೆಗೀಡಾದರು.:- the death toll is estimated at between 500,000 to 1 million people: ಇಂಗ್ಲಿಷ್ ತಾಣ ನೋಡಿ).
- ಆದರೂ ಜಿನ್ನಾ ಮುಸ್ಲಿಮರ ಜನಪ್ರಿಯ ನಾಯಕನಾಗಿರುವುದರಿಂದ, ರಾಷ್ಟ್ರೀಯವಾದಿಗಳೊಂದಿಗಿನ ಅವರ ಭಿನ್ನಾಭಿಪ್ರಾಯಗಳು, ಬೃಹತ್ ಹಿಂದೂ ಮುಸ್ಲಿಮ್ ದಂಗೆಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳ ಅರಿವೂ ಅವರಿಗಿತ್ತು. ನೆಹರು ಮತ್ತಿತರರು ವಿಭಜನೆಯ ಸಾಧ್ಯತೆಯನ್ನು ಒಪ್ಪಿದ ಮೇಲೆ , ಈ ವಿಷಯದಲ್ಲಿ ಅತ್ಯಂತ ದುಃಖಿಗಳಾಗಿದ್ದ ಗಾಂಧಿಯನ್ನು ವಿಭಜನೆಯ ಅನಿವಾರ್ಯತೆಯ ಬಗ್ಯೆ ಒಪ್ಪಿಸುವ ಕಾರ್ಯವನ್ನು ಪಟೇಲರು ವಹಿಸಿಕೊಂಡರು.
ವಿಭಜನೆಯ ನಂತರದ ಭಾರತ
ಬದಲಾಯಿಸಿ- ಪಾರ್ಟಿಷನ್ ಕೌನ್ಸಿಲ್ಲಿನ, ಭಾರತದ ಪರವಾದ ಸದಸ್ಯರಾಗಿ ಪಟೇಲರು ಸರಕಾರಿ ಆಡಳಿತ ಯಂತ್ರಗಳ, ಆಸ್ತಿಪಾಸ್ತಿಗಳ ಸೂಕ್ತಹಂಚಿಕೆಯ ಮೇಲುಸ್ತುವಾರಿ ಮಾಡಿದರು ಭಾರತಕ್ಕಿಂತ ಗಾತ್ರದಲ್ಲೂ, ಜನಸಂಖ್ಯೆಯಲ್ಲೂ ಚಿಕ್ಕದಾಗಿದ್ದ ಪಾಕಿಸ್ತಾನಕ್ಕೆ, ಅದರ ಗಾತ್ರಕ್ಕನುಗುಣವಾಗಿ ಸಿಗಬೇಕಾಗಿದ್ದ ಸಂಪನ್ಮೂಲಗಳ ಭಾಗಕ್ಕಿಂತ ಹೆಚ್ಚಾಗಿ ಜಿನ್ನಾ ಪಡೆದುಕೊಳ್ಳದಂತೆ ಪಟೇಲರು ಎಚ್ಚರ ವಹಿಸಿದರು.
- ನೆಹರೂ ಮತ್ತು ಪಟೇಲರು ಜಂಟಿಯಾಗಿ ಕೇಂದ್ರ ಮಂತ್ರಿಮಂಡಲವನ್ನು ನಿರ್ಣಯಿಸಿ, ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ , ೫೬೫ ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ, ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ, ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.
- ಅಷ್ಟೇ ಅಲ್ಲ, ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು. ರಾಜ-ಮಹಾರಾಜ-ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ಇಂಡಿಯವನ್ನಾಗಿಸಲು ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು.
- ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಿಗೆ (ತಿರುವಾಂಕೂರು ಮತ್ತಿತರೆಡೆ) ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರನ್ನು ಒಲಿಸಿದರು.
- ಯುದ್ಧ ಮಾಡಲು ಹಿಂಜರಿಯದ, ಆದರೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ, ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.
ಭಾರತದ ರಾಜಕೀಯ ಏಕೀಕರಣ
ಬದಲಾಯಿಸಿ- ೫೬೫ ಅರೆ-ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ , ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು.
- ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೋಡಿದ್ದರು.
- ೧೯೪೭ರ ಮೇ ೬ರಂದು ಪಟೇಲರು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಈಗಲೇ ಚಿವುಟಿಹಾಕುವುದಾಗಿತ್ತು.
- ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ, ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು, ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಕಾಂಗ್ರೆಸ್ ಹಾಗೂ ಈ ರಾಜಕುಮಾರರಲ್ಲಿ ಮೂಲಭೂತವಾದ ಯಾವುದೇ ಚಕಮಕಿಯಿಲ್ಲ ಎಂದು ಪಟೇಲರು ಸ್ಪಷ್ಟಪಡಿಸಿದರೂ , ೧೯೪೭ ಆಗಸ್ಟ್ ೧೫ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು.
- ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಅದರಲ್ಲೂ ಮುಖ್ಯವಾಗಿ ಹೆಚ್ಚುತ್ತಿದ್ದ ಪ್ರತಿಭಟನೆಯ ವಿರುದ್ಧ, ನಿರರ್ಥಕತೆಯನ್ನೂ ಈ ೫೬೫ ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು. ಬರಿಯ ಮೂರು, ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು.
- ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ ೮೦ ಹಿಂದೂಗಳಾಗಿದ್ದರು. ಪಟೇಲರು ಮುತ್ಸದ್ದಿತನದೊಡನೆ, ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ, ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. *ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ (ಆರ್ಜೀ ಹುಕುಮತ್) ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು.
- ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ ೯೯.೫ ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ ೮೦ ಹಿಂದೂಗಳಾಗಿದ್ದರು.
- ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ, ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.ಕಾಸೀಂ ರಜ್ವಿಯಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳುತ್ವದಲ್ಲಿ ಸಾವಿರಾರು ಜನ ರಜಾಕಾರರು, ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು.
- ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು, ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.
- ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾದರೂ, ನಿಜಾಮ ತನ್ನ ನಿಲುವನ್ನು ಬದಲಾಯಿಸಿ, ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಅವನದಾಗಿತ್ತು. ೧೯೪೮ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು.
- ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕಾರರು ಕೊಲ್ಲಲ್ಪಟ್ಟರು. ೧೯೪೮ ಸೆಪ್ಟೆ೦ಬರ್ ೧೭ ರಂದು ಈಗಿನ ಬೀದರ್ ಜಿಲ್ಲೆಯ ಹುಮುನಾಬಾದಿನಲ್ಲಿ ನಿಜಾಮರ ಸೈನ್ಯ ಶರಣಾಯಿತು. ಹೈದರಾಬಾದು ಪ್ರಾ೦ತ್ಯ ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಕಾರ್ಯಚರಣೆಯನ್ನು, ಭಾರತ ಸರಕಾರದ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ.
- ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದು ಇಲ್ಲಿ ಗಮನಾರ್ಹ. ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ, ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೇ ಸವಾಲಾಗುವುದಷ್ಟೇ ಅಲ್ಲ, ಅದರಿಂದಾಗಿ ಹಿಂದೂಗಳಾಗಲೀ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
- ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೇ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಅನೇಕ ಭಾರತೀಯ ಮುಸ್ಲಿಮರು ಕೊಂಡಾಡಿದರು. ನಿಜಾಮರ ಮೇಲೆ ಸಂತಾಪವಿದ್ದರೂ, ಪಟೇಲರು ಅವರನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದ ಪಟೇಲರು ದೊಡ್ಡ ಮನಸ್ಸಿನಿಂದ ವೈರವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿದರು.
- ಹೈದರಾಬಾದು ಮತ್ತು ಜುನಾಘಡವನ್ನು ಭಾರತಕ್ಕೆ ಜಿನ್ನಾ ಬಿಟ್ಟುಕೊಟ್ಟರೆ , ಕಾಶ್ಮೀರ ಪಾಕಿಸ್ತಾನಕ್ಕೆ ಹೋಗುವುದಕ್ಕೆ ಅಡ್ಡಿಯಿಲ್ಲ ಎಂಬ ವಿಚಾರ ಪಟೇಲರ ಮನಸ್ಸಿನಲ್ಲಿ ಇರಬಹುದು ಎಂದು ರಾಜಮೋಹನ ಗಾಂಧಿ ಊಹಿಸುತ್ತಾರೆ. ತಮ್ಮ ಪಟೇಲ್ : ಎ ಲೈಫ್ ಎಂಬ ಪುಸ್ತಕದಲ್ಲಿ ಹೈದರಾಬಾದು ಮತ್ತು ಜುನಾಘಡವನ್ನು ಜಿನ್ನಾ ತಮ್ಮ ಸಂಘರ್ಷದ ಭಾಗವಾಗಬಯಸಿದ್ದರು ಎಂದು ಪ್ರತಿಪಾದಿಸುತ್ತಾರೆ.
- ಭಾರತ ಹೈದರಾಬಾದು ಮತ್ತು ಜುನಾಘಡಗಳಲ್ಲಿ ಜನಮತಗಣನೆ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟ ಜಿನ್ನಾರ ಉದ್ದೇಶ, ಮುಂದೆ ಇದೇ ತತ್ವವನ್ನು ಕಾಶ್ಮೀರಕ್ಕೂ ಅನ್ವಯಿಸಬೇಕಾಗುತ್ತದೆ ಹಾಗೂ ಜಿನ್ನಾರ ನಂಬಿದ್ದಂತೆ, ಅಲ್ಲಿಯ ಮುಸ್ಲಿಮ್ ಬಹುಸಂಖ್ಯಾತರು ಪಾಕಿಸ್ತಾನದ ಪರವಾಗಿ ಒಲವು ತೋರಿಸುವರು , ಎಂದಿತ್ತು ಎಂಬ ಅಭಿಪ್ರಾಯವೂ ಇದೆ.
- ಜುನಾಘಡ ಭಾರತದ ಭಾಗವಾದ ಮೇಲೆ , ಅಲ್ಲಿಯ ಬಹಾವುದ್ದೀನ್ ಕಾಲೇಜಿನಲ್ಲಿ ಮಾತನಾಡುತ್ತಾ ಪಟೇಲರು ಹೇಳುತ್ತಾರೆ: " ಹೈದರಾಬಾದು ಎಚ್ಚರಿಕೆಯಿಂದಿಲ್ಲದಿದ್ದರೆ, ಜುನಾಘಡದ ಗತಿಯೇ ಅದಕ್ಕೂ ಆದೀತು. ಪಾಕಿಸ್ತಾನ ಕಾಶ್ಮೀರವನ್ನು ಜುನಾಘಡದ ವಿರುದ್ಧ ದಾಳವಾಗಿ ಉಪಯೋಗಿಸಲು ನೋಡಿದೆ. ಜನಾಭಿಪ್ರಾಯದ ತಳಹದಿಯ ಮೇಲೆ ಈ ವಿಷಯವನ್ನು ಬಗೆಹರಿಸಲು ನಾವು ಪಾಕಿಸ್ತಾನಕ್ಕೆ ಸೂಚಿಸಿದಾಗ, ಕಾಶ್ಮೀರಕ್ಕೆ ಈ ನೀತಿಯನ್ನು ಅನುಸರಿಸುವಂತೆ ಅವರಿಂದ ತಕ್ಷಣದ ಪ್ರತಿಕ್ರಿಯೆ ಬಂತು. ನೀವು ಹೈದರಾಬಾದಿನಲ್ಲಿ ಈ ನೀತಿಗೆ ಒಪ್ಪಿದರೆ ನಾವು ಕಾಶ್ಮೀರದಲ್ಲಿ ಒಪ್ಪಬಹುದು ಎಂದು ಅದಕ್ಕೆ ನಾವು ಜವಾಬು ಕೊಟ್ಟೆವು.”
- ಭಾರತವನ್ನು ಒಟ್ಟುಗೂಡಿಸುವುದು ಸುಲಭದಕೆಲಸವೇನಾಗಿರಲಿಲ್ಲ. ಪಟೇಲರ ಗಣನೀಯಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು.
- ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು.
ಗೌರವ,ಪ್ರಶಸ್ತಿ
ಬದಲಾಯಿಸಿಗುಜರಾತಿನ ಜನರಿಂದ ಗೌರವಾರ್ಥ 'ಸರ್ದಾರ್' ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯ' ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ ೧೯೯೧ ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಏಕತಾ ಮೂರ್ತಿ
ಬದಲಾಯಿಸಿ- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ "ಏಕತೆಯ ಮೂರ್ತಿ"ಯನ್ನು ೩೧ ಅಕ್ಟೋಬರ್ ೨೦೧೮ ರಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು. ಗುಜರಾತಿನ ನರ್ಮದಾ ಸರೋವರ ದಂಡೆಯ ಮೇಲೆ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ವಡೋದರಾ ಸಮೀಪದ ಸಾಧು ಬೆಟ್ಟದಿಂದ 3.2 ಕಿಮೀ ದೂರದಲ್ಲಿದೆ. 182 ಮೀಟರ್ (597 ಅಡಿ) ಎತ್ತರದ, ಇದು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ.[೧೬][೧೭] ಇದು ವಿಶ್ವದ ಎಂಟನೇ ಅದ್ಭುತ...
ಉಲ್ಲೇಖ
ಬದಲಾಯಿಸಿ- ↑ "How Vallabhbhai Patel, V P Menon and Mountbatten unified India".
- ↑ "PM Modi pays rich tribute to 'iron man' Sardar Patel on his 141st birth anniversary", The Indian Express, 31 October 2016
- ↑ Lalchand, Kewalram (1977). The Indomitable Sardar. Bharatiya Vidya Bhavan. p. 4.
Sardar Vallabhbhai Patel
- ↑ "Prime Minister Narendra Modi pays tribute to India's 'Iron Man' on his 141st birth anniversary", The Financial Express, 31 October 2016
- ↑ "India unveils the world's tallest statue", BBC, 31 October 2018
- ↑ Rajmohan Gandhi 1990, p. 3.
- ↑ "Community power: how the Patels hold sway over Gujarat", Hindustan Times, 2 November 2017
- ↑ Rajmohan Gandhi 1990, p. 14.
- ↑ Rajmohan Gandhi 1990, p. 16.
- ↑ http://www.culturalindia.net/leaders/sardar-vallabhbhai-patel.html
- ↑ Rajmohan Gandhi 1990, p. 21.
- ↑ "Education profiles of India's top freedom fighters", The Indian Express
- ↑ Rajmohan Gandhi 1990, p. 33.
- ↑ "International Vegetarian Union (IVU) – Patel". International Vegetarian Union.
- ↑ http://mhrd.gov.in/sites/upload_files/mhrd/files/Sardar%20Vallabbhai%20Patel.pdf
- ↑ India unveils the world's tallest statue;31 October 2018
- ↑ ಗುಜರಾತಿನ ನರ್ಮದಾ ಕಣಿವೆಯ ಸಾವಿರಾರು ಆದಿವಾಸಿ ಕುಟುಂಬಗಳ ಕಥೆ
{{ಜನನನಿಧನ|೧೮೭೫|೧೯೫೦