ವಾಂತಿ

(ವಮನ ಇಂದ ಪುನರ್ನಿರ್ದೇಶಿತ)

ವಾಂತಿ - Vomiting (ವಮನ) ಎಂದರೆ ಬಾಯಿ ಮತ್ತು ಕೆಲವೊಮ್ಮೆ ಮೂಗಿನ ಮೂಲಕ ಹೊಟ್ಟೆಯ ಒಳವಸ್ತುಗಳ ಅನೈಚ್ಛಿಕ, ಬಲಯುತ ಹೊರಹಾಕುವಿಕೆ.[]

ವಾಂತಿ ಮಾಡುವುದು

ವಾಂತಿಯು ವಿವಿಧ ರೀತಿಯ ಪರಿಸ್ಥಿತಿಗಳಿಂದ ಉಂಟಾಗಬಹುದು; ಇದು ಜಠರದುರಿತ ಅಥವಾ ವಿಷ ಸೇವನೆಯಂತಹ ಅಸ್ವಸ್ಥತೆಗಳಿಗೆ ನಿರ್ದಿಷ್ಟ ಪ್ರತಿಕ್ರಿಯೆಯಾಗಿ ವ್ಯಕ್ತವಾಗಬಹುದು, ಅಥವಾ ಮೆದುಳಿನ ಗೆಡ್ಡೆಗಳು ಮತ್ತು ಏರಿದ ಅಂತರ್ಕಪಾಲ ಒತ್ತಡದಿಂದ ಅಯಾನೀಕರಿಸುವ ವಿಕಿರಣಕ್ಕೆ ಅತಿಒಡ್ಡಿಕೆವರೆಗೆ ವ್ಯಾಪಿಸುವ ನಿರ್ದಿಷ್ಟವಲ್ಲದ ಅಸ್ವಸ್ಥತೆಗಳ ಅನುಗತ ರೋಗಲಕ್ಷಣವಾಗಿ ವ್ಯಕ್ತವಾಗಬಹುದು.[] ಇನ್ನೇನು ವಾಂತಿಯಾಗಿಬಿಡುವುದು ಎಂಬ ಅನಿಸಿಕೆಯನ್ನು ವಾಕರಿಕೆ ಎಂದು ಕರೆಯಲಾಗುತ್ತದೆ. ಇದು ಹಲವುವೇಳೆ ವಾಂತಿಗೆ ಮುಂಚೆಗೆ ಆಗುತ್ತದೆ ಆದರೆ ಇದರಿಂದ ವಾಂತಿ ಆಗಬೇಕೆಂದೇನಿಲ್ಲ. ಓಕರಿಕೆ ಮತ್ತು ವಾಂತಿಯನ್ನು ತಡೆಹಿಡಿಯಲು ಕೆಲವೊಮ್ಮೆ ವಾಂತಿ ನಿರೋಧಕ ಔಷಧಿಗಳು ಅಗತ್ಯವಾಗುತ್ತವೆ. ನಿರ್ಜಲೀಕರಣವು ಕಾಣಿಸಿಕೊಳ್ಳುವ ತೀವ್ರ ಪ್ರಕರಣಗಳಲ್ಲಿ, ಅಂತರಭಿಧಮನಿ ದ್ರವ ಅಗತ್ಯವಾಗಬಹುದು. ಸ್ವ-ಪ್ರಚೋದಿತ ವಾಂತಿಯು ಕ್ಷುದ್ರೋಗದಂತಹ ತಿನ್ನುವ ಅಸ್ವಸ್ಥತೆಯ ಘಟಕವಾಗಿರಬಹುದು. ಕ್ಷುದ್ರೋಗವು ಈಗ ಸ್ವತಃ ಒಂದು ತಿನ್ನುವ ಅಸ್ವಸ್ಥತೆಯಾಗಿದೆ (ಶುದ್ಧೀಕರಣ ಅಸ್ವಸ್ಥತೆ).

ವಾಂತಿಯು ಕಾರುವಿಕೆಯಿಂದ ಭಿನ್ನವಾಗಿದೆ. ಆದರೆ ಇವೆರಡೂ ಪದಗಳನ್ನು ಹಲವುವೇಳೆ ಒಂದರ ಬದಲು ಮತ್ತೊಂದನ್ನು ಬಳಸಲಾಗುತ್ತದೆ. ಕಾರುವಿಕೆ ಎಂದರೆ ವಾಂತಿಯೊಂದಿಗೆ ಸಂಬಂಧಿಸಲಾದ ಬಲ ಹಾಗೂ ಅಸಮಾಧಾನ ಇಲ್ಲದೆಯೇ ಜೀರ್ಣವಾಗದ ಆಹಾರವು ಅನ್ನನಾಳದಿಂದ ಹಿಂದಕ್ಕೆ ಬಾಯಿಗೆ ವಾಪಸಾಗುವುದು. ಸಾಮಾನ್ಯವಾಗಿ ಕಾರುವಿಕೆ ಮತ್ತು ವಾಂತಿಯ ಕಾರಣಗಳು ಭಿನ್ನವಾಗಿರುತ್ತವೆ.

ಹೊಟ್ಟೆಯ ಒಳವಸ್ತುವು ಶ್ವಸನ ವ್ಯೂಹವನ್ನು ಪ್ರವೇಶಿಸಿದರೆ ವಾಂತಿಯು ಅಪಾಯಕಾರಿಯಾಗಬಹುದು. ಸಾಧಾರಣ ಸಂದರ್ಭಗಳಲ್ಲಿ ಗ್ರಸನಕೂಪ ಪ್ರತಿಕ್ರಿಯೆ ಮತ್ತು ಕೆಮ್ಮು ಇದು ಉಂಟಾಗದಂತೆ ತಡೆಯುತ್ತದೆ; ಆದರೆ, ಮದ್ಯ ಅಥವಾ ಅರಿವಳಿಕೆಯಂತಹ ಕೆಲವು ಪದಾರ್ಥಗಳ ಪ್ರಭಾವಗಳಲ್ಲಿರುವ ವ್ಯಕ್ತಿಗಳಲ್ಲಿ ಈ ರಕ್ಷಣಾತ್ಮಕ ಪ್ರತಿಕ್ರಿಯೆಗಳು ದುರ್ಬಲವಾಗಿರುತ್ತವೆ. ಆ ವ್ಯಕ್ತಿಗೆ ಉಸಿರುಗಟ್ಟಬಹುದು ಅಥವಾ ಉಸಿರಾಟ ಸಂಬಂಧಿ ನ್ಯುಮೋನಿಯಾವನ್ನು ಅನುಭವಿಸಬಹುದು.[][] ದೀರ್ಘಕಾಲದ ಮತ್ತು ವಿಪರೀತ ವಾಂತಿಯು ದೇಹದಲ್ಲಿಂದ ನೀರನ್ನು ಬರಿದು ಮಾಡುತ್ತದೆ (ನಿರ್ಜಲೀಕರಣ) ಮತ್ತು ವಿದ್ಯುದ್ವಿಚ್ಛೇದ್ಯ ಸ್ಥಿತಿಯನ್ನು ಮಾರ್ಪಡಿಸಬಹುದು. ಜಠರಜನ್ಯ ವಾಂತಿಯಿಂದ ನೇರವಾಗಿ ಆಮ್ಲ ಮತ್ತು ಕ್ಲೋರೈಡ್‍ನ ನಷ್ಟ ಉಂಟಾಗುತ್ತದೆ.

ವಮನಕಾರಿ

ಬದಲಾಯಿಸಿ

ವಮನಕಾರಿ ಎಂದರೆ ವಾಂತಿಯನ್ನು ಪ್ರೇರಿಸುವ ಬಾಹ್ಯಕಾರಕ (ಎಮೆಟಿಕ್). ವಮನ ಎಂದರೆ ವಾಂತಿ.

ವಮನಕಾರಿಗಳಲ್ಲಿ ಎರಡು ಬಗೆಗಳಿವೆ:

  • ಜಠರದ ಮೇಲೆ ವರ್ತಿಸಿ ವಾಂತಿಮಾಡಿಸುವವು,
  • ಮಿದುಳಿನಲ್ಲಿರುವ ವಮನ ಕೇಂದ್ರವನ್ನು ಪ್ರಚೋದಿಸಿ ವಾಂತಿ ಬರಿಸುವವು.

ಮೊದಲನೆಯ ಬಗೆಗೆ ನಿದರ್ಶನಗಳು:

  1. ಊಟದ ಉಪ್ಪನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು;[]
  2. ಮೈಲುತುತ್ತ ಸೇವನೆ;[][]
  3. ಸಾಸಿವೆ ಪುಡಿಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಮಿಶ್ರಿಸಿ ಕುಡಿಯುವುದು.

ಈ ವಮನಕಾರಿ ಪದಾರ್ಥಗಳಿಗೆ ಜಠರದ ಲೋಳೆಪೊರೆಯಿಂದ ನೀರು ಹೀರುವ ಗುಣವಿದೆ. ಹೀಗೆ ಹೀರಲ್ಪಟ್ಟಾಗ ವಾಂತಿ ಪ್ರೇರಿಸಲ್ಪಡುತ್ತದೆ.

ಬೇರೆ ಕೆಲವು ವಮನಕಾರಿಗಳು ತಮ್ಮವೇ ಆದ ರಸಗಳಿಂದ ಜಠರವನ್ನು ಕೆರಳಿಸಿ ವಾಂತಿಯಾಗುವಂತೆ ಮಾಡುವುವು. ಇನ್ನು ಕೆಲವು ವಮನಕಾರಿಗಳು ಕಡಿಮೆ ಪ್ರಮಾಣದಲ್ಲಿ ತಮ್ಮ ಕಾರ್ಯ ನಡೆಸಿ ಶ್ವಾಸಕೋಶಗಳ ಮೇಲೆ ಪ್ರಭಾವ ಬೀರಿ ಅಲ್ಲಿ ಶೇಖರಗೊಂಡ ಕಫವನ್ನು ಸಡಿಲುಗಳಿಸಿ ವಾಂತಿಯಾಗುವಂತೆ ಮಾಡಿ ಅದನ್ನು ಉಚ್ಚಾಟಿಸುವುವು. ವಿಶೇಷವಾಗಿ ಈ ಸಮಸ್ಯೆ ಚಿಕ್ಕಮಕ್ಕಳನ್ನು ಬಾಧಿಸುತ್ತದೆ. ಮಕ್ಕಳಿಗೆ ಕೆಮ್ಮುವುದು ಸಾಧ್ಯವಾಗದಿದ್ದಾಗ ಕೆಮ್ಮಿದಂತೆ ಮಾಡಿ ಬಂದ ಕಫವನ್ನು ನುಂಗಿ ಬಿಡುತ್ತವೆ. ನುಂಗಿದ ಈ ಕಫ ಜಠರದಲ್ಲಿ ಶೇಖರಗೊಂಡಿರುತ್ತದೆ. ಇಂಥ ಕಫ ಹೊರತರಲು ವಮನಕಾರಿ ಪದಾರ್ಥಗಳನ್ನು ಬಳಸಲಾಗುತ್ತದೆ.

ಎರಡನೆಯ ಬಗೆಯ ವಮನಕಾರಿಗಳು:

ವ್ಯಕ್ತಿ ನುಂಗಿದ ವಿಷ ಇನ್ನೂ ಜಠರದಲ್ಲಿದೆ ಎಂದು ಅನಿಸಿದರೆ ಎರಡನೆಯ ಬಗೆಯ ವಮನಕಾರಿಗಳನ್ನು ಬಳಸಲಾಗುವುದು. ಕೆಲವು ವಿಷಗಳಿಗೆ ನುಂಗಿದೊಡನೆ ತಮ್ಮ ಸಂಪರ್ಕಕ್ಕೆ ಬರುವ ಎಲ್ಲ ಅಂಗಾಂಶಗಳನ್ನೂ ಪಚನಗೊಳಿಸುವ ಶಕ್ತಿ ಇರುವುದು. ಇಂಥ ಪ್ರಸಂಗದಲ್ಲಿ ವಮನಕಾರಿಗಳನ್ನು ಬಳಸಕೂಡದು. ಸೇವಿಸಿದ ಪದಾರ್ಥಗಳು ಗಂಟಲಲ್ಲಿ ಅಥವಾ ಅನ್ನನಾಳದಲ್ಲಿ ಸಿಲುಕಿದ್ದಾಗ ಅವನ್ನು ಹೊರತೆಗೆಯಲು ವಮನಕಾರಿಗಳನ್ನು ಉಪಯೋಗಿಸಲಾಗುವುದು.

ವಮನಕಾರಿಗಳನ್ನು ಬಳಸದಿರುವ ಪ್ರಸಂಗಗಳು

ತೀವ್ರ ಹೃದಯರೋಗಿಗಳು, ಹೆಚ್ಚಿದ ರಕ್ತದೊತ್ತಡ ಇರುವವರು, ರಕ್ತ ಕಾರುತ್ತಿರುವ ಕ್ಷಯರೋಗಿಗಳು, ಗರ್ಭಿಣಿಯರು ಮೊದಲಾದ ಕೂರುರೋಗಿಗಳಿಗೆ ವಮನಕಾರಿಗಳನ್ನು ಕೊಡಬಾರದು.

ಉಲ್ಲೇಖಗಳು

ಬದಲಾಯಿಸಿ
  1. Tintinalli, Judith E. (2010). Emergency Medicine: A Comprehensive Study Guide (Emergency Medicine (Tintinalli)). New York: McGraw-Hill Companies. p. 830. ISBN 0-07-148480-9.
  2. Hauser, Joshua M.; Azzam, Joseph S.; Kasi, Anup (2022-09-26). "Antiemetic Medications". StatPearls Publishing. PMID 30335336. Archived from the original on 2023-03-30. Retrieved 2023-07-12.
  3. Robson, Philip (1999). Forbidden Drugs (2nd ed.). New York: Oxford University Press. p. 49. ISBN 0-19-262955-7. Archived from the original on March 26, 2023. Retrieved August 9, 2021.
  4. Chambers, David; Huang, Christopher; Matthews, Gareth (January 15, 2015). Basic Physiology for Anaesthetists. Cambridge, United Kingdom: Cambridge University Press. p. 277. ISBN 978-1-107-63782-5. Archived from the original on December 28, 2023. Retrieved August 9, 2021.
  5. Decker, W. J. (1971). "In Quest of Emesis: Fact, Fable, and Fancy". Clinical Toxicology. 4 (3): 383–387. doi:10.3109/15563657108990490. PMID 4151103.
  6. Holtzmann NA, Haslam RH (July 1968). "Elevation of serum copper following copper sulfate as an emetic". Pediatrics. 42 (1): 189–93. doi:10.1542/peds.42.1.189. PMID 4385403. S2CID 32740524. Archived from the original on 2010-06-16. Retrieved 2009-03-06.
  7. Wang, S. C.; Borison, Herbert L. (1951). "Copper Sulphate Emesis: A Study of Afferent Pathways from the Gastrointestinal Tract". American Journal of Physiology. 164 (2): 520–526. doi:10.1152/ajplegacy.1951.164.2.520. PMID 14810961. S2CID 14006841.

ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ವಾಂತಿ&oldid=1218986" ಇಂದ ಪಡೆಯಲ್ಪಟ್ಟಿದೆ