ಲ್ಯೂಕೀಮಿಯ
ಲ್ಯೂಕೀಮಿಯ ಎಂಬುದು ಮನುಷ್ಯ ಮತ್ತು ಪ್ರಾಣಿ ದೇಹಗಳ ರಕ್ತಪ್ರವಾಹದಲ್ಲಿ ಶ್ವೇತರಕ್ತಕಣಗಳು ಬಹಳಷ್ಟು ಸಂಖ್ಯಾಭಿವೃದ್ಧಿ ಹೊಂದುವ ಕಾರಣ ತಲೆದೋರುವ ರೋಗಗಳ ಗುಂಪಿಗೆ ಇರುವ ಸಾಮಾನ್ಯ ಹೆಸರು.[೧] ಹೀಗಾಗಿ ಈ ರೋಗಕ್ಕೆ ಬೆಳ್ಕಣರಕ್ತ, ರಕ್ತದ ಕ್ಯಾನ್ಸರ್ ಎಂಬ ಹೆಸರುಗಳೂ ರೂಢಿಯಲ್ಲಿವೆ. ಸಾರ್ವತ್ರೀಕೃತ ವಿಷಮಗಂತೀಯ (ಜನರಲೈಸ್ಡ್ ನಿಯೋಪ್ಲಾಸ್ಟಿಕ್) ಬಿಳಿಯ ರಕ್ತಕಣಗಳ ಅನಿಯಂತ್ರಿತ ವೃದ್ಧಿಯ ಸಲುವಾಗಿ ದೇಹದಲ್ಲಿಯ ರಕ್ತರಚನಾ ಅಂಗಾಂಶಗಳನ್ನು ಬಿಳಿಯ ರಕ್ತಕಣಗಳು ಇಲ್ಲವೆ ಅವುಗಳ ಮುನ್ಸೂಚಕಗಳು (ಪ್ರೀಕರ್ಸರ್ಸ್) ಬದಲಿಡುತ್ತವೆ. ಇದರಿಂದ ಪ್ರಸಾಮಾನ್ಯ ಧಾತುಗಳು ಒಂದೆಡೆ ಸೇರುವುದನ್ನು ತಪ್ಪಿಹೋಗಿ ರಕ್ತಹೀನತೆ (ಅನೀಮಿಯ) ಮತ್ತು ಚಪ್ಪಟಕರಕ್ತಕೊರೆ (ತ್ರಾಂಬೊಸೈಟೋಪೀನಿಯ) ಉಂಟಾಗುತ್ತವೆ. ಲ್ಯೂಕೀಮಿಯ ರೋಗಪೀಡಿತ ಕೋಶಗಳು ದೇಹದ ಇನ್ನಿತರ ಭಾಗಗಳನ್ನೂ ಅಂಗಾಂಶಗಳನ್ನೂ ಆಕ್ರಮಿಸಿ ಅಲ್ಲೂ ಸಂಖ್ಯಾಭಿವೃದ್ಧಿ ಹೊಂದಿ ಬೇರೆ ಬೇರೆ ಅಹಿತಕರ, ಅನಾರೋಗ್ಯ ಸ್ಥಿತಿಗಳಿಗೆ ಕಾರಣವಾಗುತ್ತವೆ. ಈ ರೋಗಕ್ಕೆ ಖಚಿತವಾದ ಕಾರಣ ತಿಳಿದಿಲ್ಲವಾದರೂ ಕ್ರಿಮಿಗಳಿಂದ ಉಂಟಾಗುವ ಸೋಂಕು ರೋಗಗಳಿಗೂ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೂ ಮಧ್ಯವರ್ತಿಯಾಗಿರುವಂಥ ರೋಗ ಇದು ಎನ್ನಲಾಗಿದೆ.[೨]
ಲ್ಯೂಕೀಮಿಯ ಸಂಬಂಧಿರೋಗಗಳನ್ನು ಮೂರು ಬಗೆಗಳಲ್ಲಿ ವಿಂಗಡಿಸಲಾಗಿದೆ:
- ತೀವ್ರತರದ ಲ್ಯೂಕೀಮಿಯ (ಅಕ್ಯೂಟ್ ಲ್ಯೂಕೀಮಿಯ);
- ದೀರ್ಘಕಾಲೀನ ಇಲ್ಲವೆ ಬೇರೂರಿದ ಬೆನ್ನುಹುರಿಯ ಲ್ಯೂಕೀಮಿಯ (ಕ್ರಾನಿಕ್ ಮೈಲಾಯ್ಡ್ ಲ್ಯೂಕೀಮಿಯ) ಮತ್ತು
- ದೀರ್ಘಕಾಲದ ದುಗ್ಧರಸದ ಲ್ಯೂಕೀಮಿಯ (ಕ್ರಾನಿಕ್ ಲಿಂಫಾಟಿಕ್ ಲ್ಯೂಕೀಮಿಯ).
ಈ ರೋಗಪೀಡಿತರಲ್ಲಿ ಗುಲ್ಮ (ಸ್ಪ್ಲೀನ್) ಮತ್ತು ಕೆಲವು ಲಸಿಕೆಗಂಟುಗಳು (ಲಿಂಫ್ ನೋಡ್ಸ್) ಊದಿಕೊಂಡಿರುತ್ತವೆ. ಇಂಥವರಲ್ಲಿ ರಕ್ತದುರ್ಬಲತೆ, ರಕ್ತಸ್ರಾವವೃದ್ಧಿ, ಆಯಾಸಗಳು ತಲೆದೋರುತ್ತವೆ.
ತೀವ್ರತರದ ಲ್ಯೂಕೀಮಿಯ
ಬದಲಾಯಿಸಿಈ ರೋಗಪೀಡಿತರಲ್ಲಿ ಗಂಟಲಿನ ಉರಿ, ಮೂಳೆ ಮತ್ತು ಕೀಲುಗಳಲ್ಲಿ ನೋವು, ಜ್ವರ, ಸಾಮಾನ್ಯವಾಗಿ ಸುಸ್ತು ಮುಂತಾದವೆಲ್ಲ ಕಾಣಿಸಿಕೊಳ್ಳುವುವು.[೩][೪] ಚರ್ಮದ ಒಳಗೆ ಅಲ್ಪ ಪ್ರಮಾಣದ ರಕ್ತಸ್ರಾವ ಉಂಟಾಗಿ ಅಲ್ಲಲ್ಲಿ ಮೂಗುಪೆಟ್ಟಿನ ಸ್ಥಿತಿ ತಲೆದೋರಬಹುದು. ವ್ಯಕ್ತಿ ರಕ್ತಹೀನತೆಯಿಂದ ಬಳಲುವುದುಂಟು. ಕರುಳಿನ ಒಳಗೆ ಮತ್ತು ಮೂಗಿನಿಂದ ರಕ್ತಸ್ರಾವ ಆಗುವ ಸಾಧ್ಯತೆ ಇದೆ. ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವ ಸಂಭವವೂ ಉಂಟು. ಲಸಿಕೆಗ್ರಂಥಿಗಳು ಊದಿಕೊಂಡು ಎದೆಮೂಳೆಯ ಮೇಲೆ ಒತ್ತಡ ಬಿದ್ದಾಗ ಅಹಿತಕರ ಸ್ಥಿತಿಯೂ ಏರ್ಪಡಬಹುದು. ರೋಗಿಯನ್ನು ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಈಡುಮಾಡಿ ಆತನ ರಕ್ತವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ರೋಗನಿದಾನ ಮಾಡುವುದಿದೆ. ತೀವ್ರತರದ ಲ್ಯೂಕೀಮಿಯ ಸಾಮಾನ್ಯ ರೋಗವಲ್ಲದಿದ್ದರೂ ಹೆಚ್ಚಾಗಿ ತಲೆದೋರುವುದು ಕಂಡುಬಂದಿದೆ. ಈ ಬಗೆಯ ಲ್ಯೂಕೀಮಿಯ ಸಾಮಾನ್ಯವಾಗಿ 5 ವರ್ಷ ವಯಸ್ಸಿನ ಒಳಗೇ ಬರುತ್ತದೆ.[೫][೬] ಆಯಾಸ, ನಿಶ್ಶಕ್ತಿ, ದೇಹಾಲಸ್ಯ, ಅಗ್ನಿಮಾಂದ್ಯ, ಜ್ವರ, ಇಸಬು, ಮೂಳೆ ಮತ್ತು ಕೀಲುಗಳ ನೋವು, ಹಲ್ಲುಗಳನ್ನು ಕಿತ್ತಾಗ ಅಂಥಲ್ಲಿ ಅಧಿಕ ರಕ್ತಸ್ರಾವ ಮುಂತಾದವೆಲ್ಲ ಈ ರೋಗದಿಂದಾಗುವ ಪರಿಣಾಮಗಳು.
ಚಿಕಿತ್ಸೆ
ಬದಲಾಯಿಸಿಪ್ರೆಡ್ನಿಸೋನ್ನಂಥ ಕಾರ್ಟಿಕೊಸ್ಟಿರಾಯ್ಡುಗಳನ್ನು ಮತ್ತು ಜೀವಕಣವಿಷದ (ಸೈಟೋಟಾಕ್ಸಿಕ್) ಔಷಧಗಳನ್ನು ನೀಡುವುದರಿಂದ ಈ ಕಾಯಿಲೆಯನ್ನು ಗುಣಪಡಿಸಬಹುದು. ನಿತ್ಯಹಸುರಾಗಿರುವ ಅಡರುಗುಲ್ಮಜಾತಿ (ಪೆರಿವಿಂಕಲ್) ಸಸ್ಯದ ವರ್ಣದ್ರವ್ಯದಿಂದ ತಯಾರುಮಾಡುವ ವಿನ್‌ಕ್ರಿಸ್ಟೈನ್ ಸಲ್ಫೇಟ್‌ನಂಥ ಔಷಧವನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ರೋಗದ ಅವಧಿ ಮತ್ತು ಚಿಕಿತ್ಸೆಯ ಪ್ರಗತಿಯನ್ನು ವೈದ್ಯ ಎಚ್ಚರಿಕೆಯಿಂದ ಗಮನಿಸಿಕೊಂಡಿರಬೇಕಾಗುತ್ತದೆ. ಹದಿನೈದು ದಿವಸಗಳಿಗೊಮ್ಮೆ ರಕ್ತದ ಎಣಿಕೆಯನ್ನು (ಬ್ಲಡ್ ಕೌಂಟ್) ಮಾಡಬೇಕಾಗುವುದು. ರಕ್ತದಕೊರತೆ ಮತ್ತು ಸೋಂಕುರಹಿತವಾದ ಲ್ಯೂಕೀಮಿಯ ಸಂದರ್ಭಗಳಲ್ಲಿ ರಕ್ತನೀಡಿಕೆ ಮತ್ತು ಪ್ರತಿಜೈವಿಕ ಔಷಧಗಳ ಅಗತ್ಯ ಕಂಡುಬರುತ್ತದೆ.
ದೀರ್ಘಕಾಲೀನ ಇಲ್ಲವೆ ಬೇರೂರಿದ ಬೆನ್ನುಹುರಿಯ ಲ್ಯೂಕೀಮಿಯ
ಬದಲಾಯಿಸಿಇದು ಮಕ್ಕಳಲ್ಲಿ ಸಾಮಾನ್ಯ ಅಲ್ಲದಿದ್ದರೂ ಮಧ್ಯವಯಸ್ಕರಲ್ಲಿ ಕಂಡುಬರುವುದುಂಟು. ಹೊಟ್ಟೆಯಲ್ಲಿ ಅಹಿತಕರ ಸ್ಥಿತಿ, ಎಡೆಬಿಡದ ನಿಶ್ಶಕ್ತಿ, ರಾತ್ರಿ ವೇಳೆಯಲ್ಲಿ ಬೆವರುವುದು ಮತ್ತು ಜ್ವರ, ಸಾಮಾನ್ಯ ಅನಾರೋಗ್ಯ, ಹೊಟ್ಟೆಯ ಎಡಭಾಗದಲ್ಲಿ ಗುಲ್ಮ ಊದಿಕೊಂಡಿರುವುದು (ಕೆಲವೊಮ್ಮೆ ಗುಲ್ಮ ಬಹಳಷ್ಟು ಊದಿಕೊಂಡು ರೋಗಿ ಉಸಿರಾಡುವಾಗ ಹೊಟ್ಟೆಯ ಕೆಳಭಾಗದಲ್ಲಿ ಅದು ಚಲಿಸುವುದು ಕೂಡ ಕಂಡುಬರಬಹುದು) ಮುಂತಾದವೆಲ್ಲ ಈ ಬಗೆಯ ರೋಗದ ಲಕ್ಷಣಗಳು.[೭] ರಕ್ತದಲ್ಲಿಯ ನ್ಯೂಟ್ರೊಫಿಲ್ ಬಿಳಿಯ ರಕ್ತಕಣಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ರೋಗನಿದಾನ ಮಾಡಲಾಗುತ್ತದೆ. ಇಂಥ ಸನ್ನಿವೇಶದಲ್ಲಿ ಸಾಮಾನ್ಯವಾಗಿ ರಕ್ತದ ಒಂದು ಘನ ಮಿಲಿಮೀಟರ್ ಜಾಗದಲ್ಲಿ ಸುಮಾರು 2,00,000 ದಿಂದ 3,00,000 ನ್ಯೂಟ್ರೊಫಿಲ್ ಬಿಳಿಯ ರಕ್ತಕಣಗಳಿರುವುದು ಕಂಡುಬರುತ್ತದೆ.
ಚಿಕಿತ್ಸೆ
ಬದಲಾಯಿಸಿರೋಗಿಯನ್ನು ಎಕ್ಸ್-ಕಿರಣನಕ್ಕೆ (ವಿಕಿರಣನ) ಈಡುಮಾಡುವುದು ಇಲ್ಲವೆ ಮೈಲೆರಾನ್‌ನಂಥ ಜೀವಕಣವಿಷದ ಔಷಧ ಬುಸಲ್ಫಾನ್‌ನನ್ನು ನೀಡುವುದು ಮುಂತಾದವು ಈ ರೋಗವನ್ನು ಗುಣಪಡಿಸುತ್ತವೆ.
ದೀರ್ಘಕಾಲೀನ ದುಗ್ಧರಸ ಲ್ಯೂಕೀಮಿಯ
ಬದಲಾಯಿಸಿಇದು ಸಾಮಾನ್ಯವಾಗಿ ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಅದರಲ್ಲೂ ಮಧ್ಯ ವಯಸ್ಕರು ಮತ್ತು ವೃದ್ಧರಲ್ಲಿ ಇದು ಅಧಿಕ. ರೋಗಪೀಡಿತರಲ್ಲಿ ಮೈಮೇಲಿನ ಎಲ್ಲೆಡೆಯಲ್ಲೂ ದುಗ್ಧರಸ ಗ್ರಂಥಿಗಳು ಊದಿಕೊಂಡಿರುತ್ತವೆ. ಗುಲ್ಮ ಮತ್ತು ಈಲಿಗಳೂ ಊದಿಕೊಳ್ಳಬಹುದಾದ ಸಾಧ್ಯತೆಗಳುಂಟು. ದೇಹತೂಕದಲ್ಲಿ ಹ್ರಾಸ, ಅನಾರೋಗ್ಯ ಮತ್ತು ನಿಶ್ಶಕ್ತಿ, ಜ್ವರ ಮತ್ತು ರಾತ್ರಿಯ ವೇಳೆ ಬೆವರುವುದು ಮುಂತಾದವೆಲ್ಲ ಸಾಮಾನ್ಯ.[೮][೯] ಕೆಲವೊಮ್ಮೆ ರೋಗಿಯಲ್ಲಿ ಅಜೀರ್ಣ ತಲೆದೋರಬಹುದು. ಬೇರೆ ಸಮಯದಲ್ಲಿ ರೋಗಿ ನರಸಂಬಂಧವಾದ ಅಹಿತಕರ ಲಕ್ಷಣಗಳನ್ನು ಪ್ರದರ್ಶಿಸಬಹುದು. ಉಡಿತದ್ದು ಅಥವಾ ಸರ್ಪಸುತ್ತಿನಂಥ ರೋಗದ ಬಾಧೆಯಿಂದ ಪರಿತಪಿಸುವ ಸಾಧ್ಯತೆ ಉಂಟು. ರೋಗಿಯ ರಕ್ತವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುವುದರಿಂದ ರಕ್ತದಲ್ಲಿ ದುಗ್ಧರಸ (ಲಿಂಫೊಸೈಟ್ಸ್) ಹೆಚ್ಚಾಗಿರುವುದು ಕಂಡುಬರುತ್ತದೆ.[೧೦] ಆದರೆ ಬಿಳಿರಕ್ತಕಣಗಳ ಎಣಿಕೆ ಬೆನ್ನುಹುರಿಯ ಲ್ಯೂಕೀಮಿಯದ ಸಂದರ್ಭದಲ್ಲಿ ಇರುವುದರ ಅರ್ಧದಷ್ಟು ಮಾತ್ರ ಇರುತ್ತದೆ.
ಚಿಕಿತ್ಸೆ
ಬದಲಾಯಿಸಿರೇಡಿಯೊ ಚಿಕಿತ್ಸೆ ನಡೆಸುವುದು, ಜೀವಕಣವಿಷದ ಔಷಧಗಳ ನೀಡಿಕೆ ಮತ್ತು ಕಾರ್ಟಿಕೊಸ್ಟಿರಾಯ್ಡುಗಳ ನೀಡಿಕೆಗಳಿಂದ ಈ ರೋಗವನ್ನು ಗುಣಪಡಿಸಬಹುದು. ಲ್ಯೂಕೀಮಿಯ ರೋಗಕ್ಕೆ ಬೇರೆ ಬೇರೆ ಔಷಧಗಳ ಬಳಕೆ ಇದೆಯಾದರೂ ಹೊಸ ಹೊಸ ಚಿಕಿತ್ಸಾಕಾರಕ ಔಷಧಗಳ ಆವಿಷ್ಕಾರ ಗಣನೀಯ ಪ್ರಮಾಣದಲ್ಲಿ ಆಗುತ್ತಲಿದೆ. ಎಲ್ಲ ಬಗೆಯ ಔಷಧಗಳೂ ವ್ಯಕ್ತಿ ವ್ಯಕ್ತಿಗಳಿಗೆ ಅನುಗುಣವಾಗಿ ರೋಗದ ಇಳುವರಿಗಳನ್ನು ಉಂಟು ಮಾಡುತ್ತವೆ. ಪ್ರತಿಯೊಂದು ಚಿಕಿತ್ಸಾಕಾರಕ ಔಷಧಿಗೂ ಅದರದೇ ಆದ ನಿರ್ದಿಷ್ಟ ಪರಿಣಾಮಕಾರಕ ವ್ಯಾಪ್ತಿ ಇದೆ. ಯಾವುದೇ ಒಂದೇ ಒಂದು ಔಷಧ ಎಲ್ಲ ಬಗೆಯ ಲ್ಯೂಕೀಮಿಯ ರೋಗದ ಚಿಕಿತ್ಸೆಗೆ ಉಪಯೋಗಕ್ಕೆ ಬರುವುದಿಲ್ಲ. ಈ ಕಾರಕಗಳನ್ನು ಒಂಟಿಯಾಗಿ ಇಲ್ಲವೆ ಇನ್ನಿತರ ಔಷಧಗಳ ಸಂಯೋಗದೊAದಿಗೆ ಬಳಸುವುದಿದೆ. ಕೆಲವೊಂದು ಬಗೆಯ ಲ್ಯೂಕೀಮಿಯ ರೋಗಕ್ಕೆ ಎಲುಬುಮಜ್ಜೆ ನಾಟಿಹಾಕಣೆ (ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್) ಕ್ರಮವನ್ನು ಬಳಸುವುದುಂಟು. ಈ ಚಿಕಿತ್ಸೆಗೆ ಈಡಾಗುವ ವ್ಯಕ್ತಿಯನ್ನು ಮೊದಲು ಪೂರ್ಣದೇಹವಿಕಿರಣನಕ್ಕೆ (ಟೋಟಲ್ ಬಾಡಿ ರ‍್ರೇಡಿಯೇಷನ್) ಒಳಪಡಿಸಿ ಲ್ಯೂಕೀಮಿಯಕ್ಕೆ ಕಾರಣವಾಗುವ ಕೋಶಗಳನ್ನು ನಾಶಪಡಿಸಲು ಅಧಿಕ ಗುಟ್ಟಿಯ (ಹೈ-ಡೋಸ್) ರಾಸಾಯನಿಕ ಚಿಕಿತ್ಸೆ ನೀಡುವುದಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Leukemia". NCI. 1 January 1980. Archived from the original on 27 May 2014. Retrieved 13 June 2014.
Cancer that starts in blood-forming tissue, such as the bone marrow, and causes large numbers of abnormal blood cells
- ↑ Hutter JJ (June 2010). "Childhood leukemia". Pediatrics in Review. 31 (6): 234–241. doi:10.1542/pir.31-6-234. PMID 20516235. S2CID 207170780.
- ↑ "Childhood Acute Lymphoblastic Leukemia Treatment". National Cancer Institute. 8 December 2017. Retrieved 20 December 2017.
- ↑ Acute Lymphoblastic Leukemia at eMedicine
- ↑ "Acute Lymphocytic Leukemia – Cancer Stat Facts". SEER. Retrieved 20 December 2017.
- ↑ Inaba H, Greaves M, Mullighan CG (June 2013). "Acute lymphoblastic leukaemia". Lancet. 381 (9881): 1943–55. doi:10.1016/S0140-6736(12)62187-4. PMC 3816716. PMID 23523389.
- ↑ Besa EC, Buehler B, Markman M, Sacher RA (27 December 2013). Krishnan K (ed.). "Chronic Myelogenous Leukemia Clinical Presentation". Medscape Reference. WebMD. Retrieved 3 January 2014.
- ↑ "Chronic Lymphocytic Leukemia Treatment". National Cancer Institute. 26 October 2017. Retrieved 19 December 2017.
- ↑ Hallek M, Shanafelt TD, Eichhorst B (April 2018). "Chronic lymphocytic leukaemia". Lancet. 391 (10129): 1524–1537. doi:10.1016/S0140-6736(18)30422-7. PMID 29477250. S2CID 3517733.
- ↑ Boelens J, Lust S, Vanhoecke B, Offner F (February 2009). "Chronic lymphocytic leukaemia". Anticancer Research. 29 (2): 605–615. PMID 19331210.