ಇಸಬು ಚರ್ಮದ ಉರಿಯೂತವನ್ನು ಉಂಟುಮಾಡುವ ರೋಗಗಳ ಒಂದು ಗುಂಪು.[] ತುರಿಕೆ, ಕೆಂಪು ಚರ್ಮ ಮತ್ತು ಗಂದೆ ಈ ರೋಗಗಳ ಲಕ್ಷಣಗಳಾಗಿರುತ್ತವೆ. ಅಲ್ಪಾವಧಿಯ ಪ್ರಕರಣಗಳಲ್ಲಿ ಸಣ್ಣ ಬೊಕ್ಕೆಗಳು ಆಗಬಹುದು, ಮತ್ತು ದೀರ್ಘಾವಧಿಯ ಪ್ರಕರಣಗಳಲ್ಲಿ ಚರ್ಮವು ಗಟ್ಟಿಯಾಗಬಹುದು. ಒಳಗೊಂಡ ಚರ್ಮದ ಪ್ರದೇಶ ಸಣ್ಣ ಭಾಗದಿಂದ ಹಿಡಿದು ಇಡೀ ದೇಹದವರೆಗೆ ಬದಲಾಗಬಹುದು.

ಕೈಮೇಲೆ ಆಗಿರುವ ಇಸಬು

ಇಸಬು ಚರ್ಮದ ಸ್ಥಿತಿಗಳ ಒಂದು ಗುಂಪು. ಇದರಲ್ಲಿ ಆ್ಯಟಪಿ ಸಂಬಂಧಿ ಇಸಬು, ಅಲರ್ಜಿ ಸಂಬಂಧಿ ಸಂಪರ್ಕ ಇಸಬು, ಉದ್ರೇಕಕಾರಿ ಸಂಪರ್ಕ ಇಸಬು, ಮತ್ತು ಸ್ತಂಭನ ಇಸಬು ಸೇರಿವೆ. ಹಲವುವೇಳೆ ಇಸಬಿನ ನಿಖರ ಕಾರಣ ಅಸ್ಪಷ್ಟವಾಗಿರುತ್ತದೆ. ಪ್ರಕರಣಗಳಲ್ಲಿ ಕಿರಿಕಿರಿ/ಕೆರಳಿಕೆ, ಅಲರ್ಜಿ, ಮತ್ತು ಸಾಮಾನ್ಯವಲ್ಲದ ಸಿರೆಯ ಮೂಲಕ ಹರಿವಿನ ಸಂಯೋಜನೆ ಸೇರಿರಬಹುದು. ಇಸಬಿನ ಪ್ರಕಾರವನ್ನು ಸಾಮಾನ್ಯವಾಗಿ ವ್ಯಕ್ತಿಯ ಇತಿಹಾಸ ಮತ್ತು ಗಂದೆಯ ಸ್ಥಳದಿಂದ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಹಲವುವೇಳೆ ಉದ್ರೇಕಕಾರಿ ಇಸಬು ಆಗಾಗ್ಗೆ ತಮ್ಮ ಕೈಗಳನ್ನು ಒದ್ದೆ ಮಾಡಿಕೊಳ್ಳುವ ಜನರಲ್ಲಿ ಉಂಟಾಗುತ್ತದೆ. ಅಲರ್ಜಿ ಸಂಬಂಧಿ ಸಂಪರ್ಕ ಇಸಬು ಚರ್ಮದಲ್ಲಿ ಅತಿಸಂವೇದನಶೀಲತಾ ಪ್ರತಿಕ್ರಿಯೆಯನ್ನು ಉಂಟುಮಾಡುವ ಅಲರ್ಜಿಕಕ್ಕೆ ಒಡ್ಡಿಕೆಯಿಂದ ಉಂಟಾಗುತ್ತದೆ.

ಆ್ಯಟಪಿ ಸಂಬಂಧಿ ಇಸಬಿನ ಚಿಕಿತ್ಸೆಯನ್ನು ಸಾಮಾನ್ಯವಾಗಿ ಆರ್ದ್ರಕಾರಿಗಳು ಮತ್ತು ಸ್ಟೀರಾಯ್ಡ್ ಕ್ರೀಮ್‍ಗಳಿಂದ ಮಾಡಲಾಗುತ್ತದೆ. ಸ್ಟೀರಾಯ್ಡ್ ಕ್ರೀಮ್‍ಗಳು ಸಾಮಾನ್ಯವಾಗಿ ಮಧ್ಯಮದಿಂದ ಹೆಚ್ಚು ಶಕ್ತಿಯದ್ದಾಗಿರಬೇಕು ಮತ್ತು ಅಡ್ಡಪರಿಣಾಮಗಳು ಆಗುವುದರಿಂದ ಇವನ್ನು ಒಂದು ಸಲಕ್ಕೆ ಎರಡು ವಾರಗಳಿಗಿಂತ ಕಡಿಮೆ ಸಮಯ ಬಳಸಬೇಕು. ಚರ್ಮದ ಸೋಂಕಿನ ಚಿಹ್ನೆಗಳಿದ್ದರೆ ಪ್ರತಿಜೀವಿಕಗಳು ಬೇಕಾಗಬಹುದು. ಸಂಪರ್ಕ ಇಸಬನ್ನು ಸಾಮಾನ್ಯವಾಗಿ ಅಲರ್ಜಿಕ ಅಥವಾ ಉದ್ರೇಕಕಾರಿಯನ್ನು ತಪ್ಪಿಸುವ ಮೂಲಕ ಇಲಾಜು ಮಾಡಲಾಗುತ್ತದೆ. ನಿದ್ದೆಬರಲು ಮತ್ತು ರಾತ್ರಿಸಮಯದ ಕೆರೆತವನ್ನು ಕಡಿಮೆಮಾಡಲು ಆ್ಯಂಟಿಹಿಸ್ಟಮಿನ್‍ಗಳು ನೆರವಾಗಬಹುದು.

ಇಸಬು ೨೦೧೫ರಲ್ಲಿ ಜಾಗತಿಕವಾಗಿ ೨೪೫ ಮಿಲಿಯ ಜನರನ್ನು ಬಾಧಿಸಿತ್ತು ಎಂದು ಅಂದಾಜುಮಾಡಲಾಗಿತ್ತು. ಆ್ಯಟಪಿ ಸಂಬಂಧಿ ಇಸಬು ಅತಿ ಸಾಮಾನ್ಯ ಪ್ರಕಾರದ್ದಾಗಿದ್ದು ಸಾಮಾನ್ಯವಾಗಿ ಬಾಲ್ಯದಲ್ಲಿ ಆರಂಭವಾಗುತ್ತದೆ. ಅಮೇರಿಕದಲ್ಲಿ ಇದು ಸುಮಾರು ೧೦-೩೦ ಶೇಕಡ ಜನರನ್ನು ಬಾಧಿಸುತ್ತದೆ. ಸಂಪರ್ಕ ಇಸಬು ಪುರುಷರಿಗಿಂತ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚು ಸಾಮಾನ್ಯವಾಗಿದೆ. ಅಲರ್ಜಿ ಸಂಬಂಧಿ ಸಂಪರ್ಕ ಇಸಬು ಸುಮಾರು ಶೇಕಡ ೭ರಷ್ಟು ಜನರನ್ನು ಯಾವುದೋ ಸಮಯದಲ್ಲಿ ಬಾಧಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Nedorost, Susan T. (2012). Generalized Dermatitis in Clinical Practice (in ಇಂಗ್ಲಿಷ್). Springer Science & Business Media. pp. 1–3, 9, 13–14. ISBN 9781447128977. Archived from the original on 15 ಆಗಸ್ಟ್ 2016. Retrieved 29 ಜುಲೈ 2016. {{cite book}}: Unknown parameter |deadurl= ignored (help)


"https://kn.wikipedia.org/w/index.php?title=ಇಸಬು&oldid=843140" ಇಂದ ಪಡೆಯಲ್ಪಟ್ಟಿದೆ