ಲತಾ ಮಂಗೇಶ್ಕರ್

ಭಾರತೀಯ ಸಿನೆಮಾ ಗಾಯಕಿ
(ಲತಾ ಮಂಗೇಶ್‍‍ಕರ್ ಇಂದ ಪುನರ್ನಿರ್ದೇಶಿತ)

ಲತಾ ಮಂಗೇಶ್ಕರ್ (೨೮ ಸೆಪ್ಟೆಂಬರ್ ೧೯೨೯ - ೬ ಫೆಬ್ರವರಿ ೨೦೨೨) ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವುದಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ. ೧೯೬೭ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಕನ್ನಡ ಚಲನಚಿತ್ರದಲ್ಲಿನ "ಬೆಳ್ಳನೆ ಬೆಳಗಾಯಿತು" ಮತ್ತು "ಎಲ್ಲಾರೆ ಇರತೀರೋ ಎಂದಾರೆ ಬರತೀರೋ" ಹಾಡುಗಳನ್ನು ಹಾಡಿದ್ದಾರೆ.[] ಬರೋಬರಿ (೩೬) ಭಾಷೆಗಳಲ್ಲಿ ಹಾಡಿದ್ದಾರೆ

ಲತಾಮಂಗೇಶ್ಕರ್
ಲತಾ, ೨೦೧೪ರಲ್ಲಿ
ಜನನ೨೮ ಸೆಪ್ಟೆಂಬರ್ ೧೯೨೯
ಇಂದೋರ್, ಸೆಂಟ್ರೆಲ್ ಇಂಡಿಯ ಏಜೆನ್ಸಿ, ಬ್ರಿಟಿಷ್ ಭಾರತ
ಮರಣ೬ ಫೆಬ್ರವರಿ ೨೦೨೨
ರಾಷ್ಟ್ರೀಯತೆಭಾರತೀಯ
ವೃತ್ತಿಹಿನ್ನೆಲೆ ಗಾಯಕಿ
ಸಕ್ರಿಯ ವರ್ಷಗಳು೧೯೪೨ –೨೦೨೨
ಪೋಷಕ(ರು)ದೀನಾನಾಥ್ ಮಂಗೇಶ್ಕರ್ (ತಂದೆ)
ಶೇವಂತಿ ಮಂಗೇಶ್ಕರ್(ತಾಯಿ)
ಸಂಬಂಧಿಕರುಆಶಾ ಭೋಂಸ್ಲೆ (ತಂಗಿ)
ಉಷಾ ಮಂಗೇಶ್ಕರ್(ತಂಗಿ)
ಮೀನಾ ಮಂಗೇಶ್ಕರ್ (ಸೋದರಿ)
ಹೃದಯನಾಥ್ ಮಂಗೇಶ್ಕರ್ (ಸೋದರ)
ಪ್ರಶಸ್ತಿಗಳುಭಾರತ ರತ್ನ ೨೦೦೧
ಪದ್ಮ ವಿಭೂಷಣ ೧೯೯೯
ಪದ್ಮ ಭೂಷಣ ೧೯೬೯

ಹುಟ್ಟು ಮತ್ತು ಬಾಲ್ಯ

ಬದಲಾಯಿಸಿ

ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. ತಾಯಿಯನ್ನು 'ಮಾಯಿ,' ಎಂದೇ ಎಲ್ಲರೂ ಕರೆಯುತ್ತಿದ್ದರು. ತಾಯಿಯ ತವರಿನ ಹೆಸರು ಸೇವಂತಾ. ದೀನಾನಾಥರದು ಎರಡನೆಯ ಮದುವೆ. ಮೊದಲ ಮದುವೆ, 'ನರ್ಮದಾ' ಜೊತೆ. ಆಕೆಯ ಮರಣದ ನಂತರ ತಂಗಿ ಶೇವಂತಾರ ಜೊತೆಗೆ ಮದುವೆಯಾಯಿತು. ಈಕೆಯ ಹೆಸರನ್ನು 'ಶುದ್ಧಮತಿ' ಎಂದು ಹೆಸರಿಟ್ಟರು. 'ಬಲವಂತ್ ಸಂಗೀತ್ ಮಂಡಳಿ' ಎಂಬ ಸಂಸ್ಥೆಯನ್ನು ದೀನಾನಾಥ್ ಅವರು ನಡೆಸುತ್ತಿದ್ದರು. ದೀನಾನಾಥ್ ಒಳ್ಳೆಯ ನಟ, ಗಾಯಕ, ಕೃತಿಶೀಲ ಸಮಾಜಸೇವಕ. ಕೆಲವು ಕಾರಣಗಳಿಂದ ಕಂಪೆನಿ ಮುಚ್ಚಿತು. ದಂಪತಿಗಳಿಗೆ ಲತಾ, ಆಶಾ, ಮೀನಾ, ಉಷಾ ಎಂಬ ನಾಲ್ಕು ಹೆಣ್ಣು ಮಕ್ಕಳಲ್ಲದೆ ಹೃದಯನಾಥ್ ಎಂಬ ಗಂಡುಮಗ. ದೀನಾನಾಥ್ ಮನೆಯಲ್ಲಿ ಕೆಲವು ಮಕ್ಕಳಿಗೆ ಸಂಗೀತ ಪಾಠ ಹೇಳುತ್ತಿದ್ದರು. ಒಂದು ದಿನ ಒಬ್ಬ ಹುಡುಗ ಸಂಗೀತಾಭ್ಯಾಸ ಮಾಡುವಾಗ ತಪ್ಪುತ್ತಿದ್ದುದನ್ನು ಎಳೆಯ ವಯಸ್ಸಿನ ಲತಾ ತಿದ್ದುವುದನ್ನು ಗಮನಿಸಿದ ದೀನಾನಾಥ್ ಮಗಳಲ್ಲಿ ಸಂಗೀತದ ಪ್ರತಿಭೆ ಇರುವುದನ್ನು ಮನಗಂಡರು. ಮರುದಿನದಿಂದಲೇ ಅವರು ಮಗಳಿಗೆ ಮನೆಯಲ್ಲಿ ಸಂಗೀತಪಾಠ ಪ್ರಾರಂಭಿಸಿದರು.

ಲತಾ ಅವರ ಮೊದಲ ಹೆಸರು "ಹೇಮಾ" ಎಂದು. ಹೇಮಾಳ ಬಹುಮುಖಪ್ರತಿಭೆಯನ್ನು ತಂದೆ ಗುರುತಿಸಿ, ಒಮ್ಮೊಮ್ಮೆ 'ಹೃದಯಾ', 'ಟಾಟಾಬಾಬಾ,' ಎನ್ನುತ್ತಿದ್ದರು. "ಭಾವ್ ಬಂಧನ್" ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ಲತಾ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು. ತಾವು ತುಂಬಾ ತುಂಟತನ ಮಾಡುತ್ತಿದ್ದೆ ಎಂದು ಲತಾ ನೆನಪಿಸಿಕೊಂಡಿದ್ದಾರೆ. ಒಮ್ಮೆ ಮನೆಯವರು ಏನನ್ನೋ ತರಲು ಕಿರಾಣಿ ಅಂಗಡಿಗೆ ಕಳಿಸಿದರು. ಲತಾ ಹತ್ತಿರ ಒಂದು ಸವಕಲು ನಾಣ್ಯ ಇತ್ತು. ಅದನ್ನು ಅಂಗಡಿಗೆ ತೆಗೆದುಕೊಂಡು ಹೋಗಿ ಅಂಗಡಿಯವನಿಗೆ "ಇಗೋ ನಿನ್ನ ದುಡ್ಡಿನ ಪೆಟ್ಟಿಗೆಯಲ್ಲಿ ನಾಣ್ಯ ಹಾಕುತ್ತಿದ್ದೇನೆ, ನನಗೆ ಪದಾರ್ಥ ಕೊಡು," ಎಂದು ಅಂಗಡಿಯವನಿಗೆ ಟೋಪಿ ಹಾಕಿದರಂತೆ. ಮನೆಗೆ ಬಂದು ತಮ್ಮ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಾಗ ತಂದೆಯಿಂದ ಚೆನ್ನಾಗಿ ಬೈಸಿಕೊಂಡು ಮತ್ತೆ ಅಂಗಡಿಗೆ ಹೋಗಿ ಕ್ಷಮಾಪಣೆ ಕೇಳಬೇಕಾಯಿತಂತೆ.[ಸೂಕ್ತ ಉಲ್ಲೇಖನ ಬೇಕು]

ರಂಗಭೂಮಿಯಲ್ಲಿ

ಬದಲಾಯಿಸಿ
  • 'ತ್ರಾಟಿಕಾ',
  • 'ಪುಣ್ಯಪ್ರಭಾವ್',
  • 'ಸಂಗೀತ್ ಸೌಭದ್ರ್,' ದಲ್ಲಿ ನಾರದನಪಾತ್ರ.
  • 'ಗುರುಕುಲ್,'

'ಸಂಗೀತ್ ಸೌಭದ್ರ್', ನಾಟಕದ ನಾರದನ ಪಾತ್ರಧಾರಿ ಏನೋ ಕಾರಣದಿಂದ ಬರಲಿಲ್ಲ. ಲತಾ, ತಂದೆಯವರನ್ನು ಒಪ್ಪಿಸಿ ತಾವೇ ಅದನ್ನು ಮಾಡಿದರು. ೮ ವರ್ಷದ ಲತಾ ಒನ್ಸ್ ಮೋರ್, ಗಿಟ್ಟಿಸಿಕೊಂಡರು. ತಂದೆಯೇ ಅವರ ಪ್ರಥಮ ಗುರು. ನಂತರ 'ರಾಮಕೃಷ್ಣ ಬುವಾವಚೆ' ಮತ್ತು 'ಉಸ್ತಾದ್ ಅಮಾನತ್ ಖಾನ್' ಅವರ ಬಳಿ ಸಂಗೀತ ಶಿಕ್ಷಣ ಪಡೆದರು. ಶಾಸ್ತ್ರೀಯ ಸಂಗೀತ ಗಾಯಕಿಯಾಗುವ ಹಂಬಲವಿತ್ತು. ಆದರೆ ತಂದೆ ೪೧ ನೇ ವರ್ಷದಲ್ಲೇ ತೀರಿಕೊಂಡಾಗ ೧೩ ವರ್ಷದ ಬಾಲಕಿ ಲತಾ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿತ್ತು. ತಾಯಿ, ೪ ಜನ ತಂಗಿಯರು, ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿಕೊಳ್ಳಬೇಕಾಗಿ ಬಂತು. ಅವರು ಮರಾಠಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಲು ಹೋಗಬೇಕಾಯಿತು. ೧೯೪೨ ರಲ್ಲಿ ಪ್ರಾರಂಭಮಾಡಿದ ಮರಾಠಿ ಚಿತ್ರ ಕಿತೀ ಹಸಾಲ್ ನಲ್ಲಿ ಹಾಡಿದರೂ ಕಾರಣಾಂತರಗಳಿಂದ ಅವರ ಗಾಯನ ಸೇರ್ಪಡೆಯಾಗಲಿಲ್ಲ. 'ಮಂಗಳಗೌರ್' ಚಿತ್ರದಲ್ಲಿ ನಟಿಸಿದ್ದರು. ೧೯೪೭ ರಲ್ಲಿ ಹಿಂದಿ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು. 'ಆಪ್ ಕಿ ಸೇವಾಮೆ', 'ಪಾಂ ಲಾಗೂ ಕರ್ ಚೋರಿರೇ' ಎಂಬ ಹಾಡುಗಳನ್ನು ಹಾಡಿದರು. 'ಹುಸ್ನ್ ಲಾಲ್ ಭಗತ್ ರಾಮ್' ಆಕೆಯ ಕಂಠಶ್ರೀಯನ್ನು ಕೇಳಿ ಮೆಚ್ಚಿ ಸರಿಯಾದ ಅವಕಾಶಗಳನ್ನು ಕೊಟ್ಟರು.[]

ಇಂದೋರ್ನಿಂದ ಲತಾ ಪುಣೆಗೆ ಬಂದರು. ಕೊಲ್ಲಾಪುರದಲ್ಲಿ ಸ್ವಲ್ಪ ದಿನವಿದ್ದು, ೧೯೪೭ ರಲ್ಲಿ ಪರಿವಾರದೊಡನೆ ಮುಂಬಯಿ ನ ನಾನಾ ಚೌಕ್ ನಲ್ಲಿ ಬಂದಿಳಿದರು. 'ಆನಂದ್ ಧನ್' ಎಂಬ ಹೆಸರಿನಿಂದ ಮರಾಠಿಚಿತ್ರಗಳ ಸಂಗೀತನಿರ್ದೇಶನ ಮಾಡುತ್ತಿದ್ದರು.

ಮನೆಯಲ್ಲಿ ಮರಾಠಿ ಮಾತಾಡುತ್ತಿದ್ದುದರಿಂದ ಲತಾ ಅವರಿಗೆ ಹಿಂದಿ ಮತ್ತು ಉರ್ದೂ ಮಾತಾಡುವುದು ಸ್ವಲ್ಪ ಕಷ್ಟವಾಗುತ್ತಿತ್ತು. ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುವಾಗ ನಟ ದಿಲೀಪ್ ಕುಮಾರ್ ಇವರ ಹಿಂದಿ ಭಾಷೆಯನ್ನು ಸ್ವಲ್ಪ ಅಣಕಿಸಿ ನಕ್ಕರಂತೆ. ಆಗ ಹಠ ಹಿಡಿದು ಒಬ್ಬ ಮನೆಮೇಷ್ಟ್ರನ್ನು ಹುಡುಕಿ ಅವರಿಂದ ಹಿಂದಿ ಮತ್ತು ಉರ್ದೂ ಸಹಜವಾಗಿ ಮಾತಾಡುವುದನ್ನು ಕಲಿತರು. ಮುಂದೆ ಒಮ್ಮೆ ಅವರು ಒಂದು ಉರ್ದೂ ಗಜಲ್ ರೆಕಾರ್ಡ್ ಮಾಡುವಾಗ ಸ್ಟೂಡಿಯೋಗೇ ಬಂದಿದ್ದ ನರ್ಗಿಸ್ ದತ್ ಅವರ ತಾಯಿ ಲತಾ ಅವರನ್ನು "ನೀನು ಹೀಗೆ ಸಹಜವಾಗಿ ಉಚ್ಚರಿಸುವುದು ಎಲ್ಲಿಂದ ಕಲಿತೆ?" ಎಂದು ಕೇಳಿದರಂತೆ.

ಸಂಗೀತದ ಬದುಕು

ಬದಲಾಯಿಸಿ

ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಇದಕ್ಕೆ ಒಂದೇ ಅಪವಾದವೆಂದರೆ ಓ.ಪಿ. ನಯ್ಯರ್. ಅದೇ ರೀತಿ ಅವರೊಂದಿಗೆ ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯಾರಿಗಾಗಿ ಲತಾ ಹಾಡಿದ್ದಾರೆ. ಐವತ್ತರ ದಶಕದಲ್ಲಿ ಮೇಲೇರಿದ ಅವರ ಕೀರ್ತಿ ಪತಾಕೆ ಕೆಳಕ್ಕೆ ಇಳಿಯಲೇ ಇಲ್ಲ. ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ ... ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರನ್ನು "ಲತಾ ದೀದಿ" ಎಂದೇ ಕರೆಯುತ್ತಾರೆ. ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ಒಂದು ವಿಶೇಷ. ಆಶಾ ಮತ್ತು ಲತಾ, ಉಷಾ ಮತ್ತು ಲತಾ, ಮೀನಾ ಮತ್ತು ಲತಾ ಹಾಡಿರುವ ಕೆಲವು ಯುಗಳಗೀತೆಗಳೂ ಪ್ರಸಿದ್ಧವಾಗಿವೆ. ತಮ್ಮ ಹೃದಯನಾಥ್ ಮಂಗೇಷ್ಕರ್ ಸಂಗೀತ ನಿರ್ದೇಶನದಲ್ಲಿ ಲತಾ ಅನೇಕ ಗೀತೆಗಳನ್ನು ಹಾಡಿದ್ದಾರೆ - ಉದಾ. ಮೀರಾ ಭಜನೆಗಳು. ಲತಾ ಅವರು "ಲೇಕಿನ್" ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸಿದರು.

ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ತೆತ್ತರು. ಇವರ ನೆನಪಿನಲ್ಲಿ ಒಂದು ವಿಶೇಷಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು ೧೯೬೩ ಜನವರಿ ೨೭ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು. "ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ ... " ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಕಾರ್ಯಕ್ರಮದ ನಂತರ ಮಾತಾಡಿ "ನೀನು ನನ್ನನ್ನು ಅಳಿಸಿಬಿಟ್ಟೆ," ಎಂದು ಭಾವುಕರಾಗಿ ಹೇಳಿದರಂತೆ. ಈ ಹಾಡನ್ನು ನವದೆಹಲಿಯಲ್ಲಿ ಪ್ರತಿ ಜನವರಿ ೨೬ರ ಸಮಾರಂಭದಲ್ಲಿ ಕೇಳಬಹುದು.

೧೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ೨೨ ಭಾಷೆಗಳಲ್ಲಿ ಹಾಡಿದ್ದಾರೆ. ಅಮೆರಿಕ, ಯೂರೊಪ್ ಸುತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆಕೆಯ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿಹಾಡುವ ಕಲೆ. "ಪುಲೆ ವೇಚಿತಾ"- ಲತಾರವರ ಆತ್ಮಚರಿತ್ರೆ.

ಲತಾ ಅವರು ೬ ಫೆಬ್ರವರಿ ೨೦೨೨ರಂದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ ೯೨ ನೇ ವಯಸ್ಸಿನಲ್ಲಿ ನಿಧನರಾದರು. []

ಪ್ರಶಸ್ತಿಗಳು

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

ಕೆಲವು ಪ್ರಸಿದ್ಧ ಚಿತ್ರ ಗೀತೆಗಳು

ಬದಲಾಯಿಸಿ
  • ರಸಿಕ ಬಲಮಾ ...(ಚೋರಿ ಚೋರಿ)
  • ಜ್ಯೋತಿ ಕಲಷ್ ಛಲಕೇ ... (ಭಾಭೀ ಕೀ ಚೂಡಿಯಾಂ)
  • ಯೆ ದಿಲ್ ಔರ್ ಉನ್ ಕೀ ನಿಗಾಹೋಂಕೆ ಸಾಯೇ ... (ಪ್ರೇಮ್ ಪರ್ಬತ್)
  • ಕುಹೂ ಕುಹೂ ಬೋಲೇ ಕೋಯಲಿಯಾ ... (ಸುವರ್ಣ ಸುಂದರಿ)
  • ಪಂಖ್ ಹೋತೀ ತೋ ಉಡ್ ಜಾತೀರೇ ... (ಸೆಹರಾ)
  • ನೈನೋಂ ಮೆ ಬದರಾ ಛಾಯೆ ... (ಮೇರಾ ಸಾಯಾ)
  • ಜಾನೆ ಕೈಸೆ ಸಪನೋಂಮೆ ಖೋಗಯೀ ಅಖಿಯಾಂ ... (ಅನುರಾಧ)
  • ತುಮ್ ನ ಜಾನೆ ಕಿಸ್ ಜಹಾಂಮೆ ಖೋಗಯೇ ... (ಸಜಾ)
  • ಏರೀ ಮೈ ತೋ ಪ್ರೇಮ್ ದಿವಾನಿ ... (ಬಹಾರ್)
  • ಯೂಂ ಹಸರತೋಂ ಕೆ ದಾಗ್ (ಅದಾಲತ್)
  • ಯೆ ಜಿಂದಗೀ ಉಸೀಕಿ ಹೈ ... (ಅನಾರ್ ಕಲೀ),
  • ಮೋಹೆ ಭೂಲ್ ಗಯೇ ಸಾವರಿಯಾಂ (ಬೈಜೂ ಬಾವ್ರಾ)
  • ಧೀರೆಸೆ ಆಜಾರೆ ಅಖಿಯನ್ ಮೇಂ ನಿಂದಿಯಾ ...
  • ರೈನಾ ಬೀತಿ ಜಾಯೇ ...
  • ಪವನ್ ದಿವಾನಿ ...
  • ಕೈಸೆ ಜಾಂವು ಜಮುನಾ ಕೆ ತೀರ್ ...
  • ಘನಶ್ಯಾಮ ಸುಂದರಾ, ಶ್ರೀಧರಾ
  • ಅರುಣೋದಯ ಝಾಲ, (ಅಮರ್ ಭೂಪಾಲಿ)
  • ಏರಣಿಚಾ ದೆವ ತುಲ ಠಿಣ್ಗಿ ಠಿಣ್ಗಿ ವಾಹೂಂ, ದೇಸಾದೀ (ಮಾಣಸಾ)
  • ಲೇಕ್ ಲಾಡ್ ಇದು. ಕಿ ಯಾ ಘರ್ ಚೀ.

ಕನ್ನಡದಲ್ಲಿ ಲತಾ ಕುರಿತ ಪುಸ್ತಕ

ಬದಲಾಯಿಸಿ

'ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ'-’ಹಾಡುಹಕ್ಕಿಯ ಹೃದಯಗೀತೆ’ ಪುಸ್ತಕವನ್ನು ಹಿರಿಯ ಪತ್ರಕರ್ತ 'ವಸಂತ ನಾಡಿಗೇರ್' ರಚಿಸಿದ್ದಾರೆ. 'ಸುಮುಖ ಪ್ರಕಾಶನ' ಪ್ರಕಟಿಸಿರುವ ಈ ಪುಸ್ತಕವು ೨೭ ಅಕ್ಟೋಬರ್ ೨೦೦೯ರಂದು ಬೆಂಗಳೂರಲ್ಲಿ ಲೋಕಾರ್ಪಣೆಗೊಂಡಿತ್ತು[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖಗಳು

ಬದಲಾಯಿಸಿ
  1. https://timesofindia.indiatimes.com/lata-mangeshkar/articleshow/30899862.cms
  2. https://www.hindustantimes.com/inspiring-lives/lata-mangeshkar-the-queen-of-melody/story-TBN6Pq9c9wktF7ptW0gBmN.html
  3. "ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ". Kannada Prabha. 6 February 2022. Archived from the original on 6 ಫೆಬ್ರವರಿ 2022. Retrieved 6 ಫೆಬ್ರವರಿ 2022.
  4. https://www.gkgigs.com/padma-vibhushan-award-recipients/
  5. https://web.archive.org/web/20080307062946/http://india.gov.in/myindia/bharatratna_awards.php