Illicium verum
Illicium verum at the United States National Arboretum
Star anise fruits and seeds
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಗಣ: ಆಸ್ಟ್ರೋಬೇಯ್ಲಿಯೇಲೀಸ್
ಕುಟುಂಬ: ಶಿಸ್ಯಾಂಡ್ರೇಸೀ
ಕುಲ: ಇಲಿಸಿಯಮ್
ಪ್ರಜಾತಿ:
I. verum
Binomial name
Illicium verum
Synonyms[]
  • Illicium san-ki Perr.

ಮರಾಟಿಮೊಗ್ಗು ಮ್ಯಾಗ್ನೋಲಿಯೇಸೀ ಕುಟುಂಬಕ್ಕೆ ಸೇರಿದ ಸಂಬಾರ ಸಸ್ಯ (ಸ್ಟಾರ್ ಆನಿಸ್, ಸೈಬೀರಿಯನ್ ಕಾರ್ಡಮಮ್). ಚೀನ ಸೋಂಪು ಪರ್ಯಾಯನಾಮ. ಇಲಿಸಿಯಮ್ ವೇರಮ್ ಸಸ್ಯ ವೈಜ್ಞಾನಿಕ ಹೆಸರು. ಉಷ್ಣ ಹಾಗೂ ಉಪೋಷ್ಣ ಪೂರ್ವ ಏಷ್ಯ ವಲಯದಲ್ಲಿ ಸ್ಥಾನಿಕ ಸಸ್ಯವಾಗಿ ಬೆಳೆಯುವ ಇದನ್ನು ಈಶಾನ್ಯ ಚೀನದ ಕ್ವಾಂಗ್ಸೀ ಮತ್ತು ಇಂಡೊಚೀನದ ಟೋಕಿನ್ ಪ್ರದೇಶಗಳಲ್ಲಿ ಮಾತ್ರ ವ್ಯಾಪಕವಾಗಿ ಕೃಷಿ ಮಾಡಲಾಗುತ್ತದೆ.

ಸಸ್ಯ ವಿವರಣೆ

ಬದಲಾಯಿಸಿ

ಇದು 8-15 ಮೀ ಎತ್ತರಕ್ಕೆ ಬೆಳೆಯುವ ನಿತ್ಯ ಹಸುರಿನ ಮರ. ಎಲೆ 15 ಸೆಂ ಮೀ ಉದ್ದವೂ 4 ಸೆಂಮೀ ಅಗಲವೂ ಇದ್ದು ಅಂಡಾಕಾರದಲ್ಲಿದೆ. ಎಲೆಯಂಚು ಅಖಂಡ. ಹೂಗಳು ಬಿಳಿ ಇಲ್ಲವೇ ಕೆಂಪು ಬಣ್ಣದವು.[][] ಎಲೆಗಳ ಕಕ್ಷಗಳಲ್ಲಿ ಒಂಟೊಂಟಿಯಾಗಿ ಅರಳುವುವು. ಫಲ ನಕ್ಷತ್ರಾಕಾರದ್ದು; ಕೇಂದ್ರೀಯ ತೊಟ್ಟಿನ ಸುತ್ತ ವರ್ತುಲಾಕಾರದಲ್ಲಿ ಜೋಡಣೆಗೊಂಡಿರುವ 8 ಕೋಣೆಗಳಿಂದ ರಚಿತವಾಗಿದೆ. ಪ್ರತಿಯೊಂದು ಕೋಣೆ 15 ಮಿಮೀ ಉದ್ದದ ದೋಣಿಯಾಕಾರದ ಹಾಗೂ ಹೊಳೆಯುವ ಬೀಜ ಉಂಟು.

ಮರಾಟಿಮೊಗ್ಗನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಒಟ್ಲುಪಾತಿಗಳಲ್ಲಿ (ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ) ಬೀಜ ಬಿತ್ತಿ, ಮೊಳೆತ ಸಸಿಗಳನ್ನು 3 ವರ್ಷಗಳ ತರುವಾಯ ತೋಟಗಳಲ್ಲಿ ನಾಟಿಮಾಡಲಾಗುತ್ತದೆ. ಮುಂದಿನ 10 ವರ್ಷಗಳಲ್ಲಿ ಮರಗಳು ಫಲಭರಿತವಾಗುವುವು. 80-100 ವರ್ಷಗಳ ತನಕ ಇಳುವರಿ ದೊರೆಯುತ್ತದೆ.

ಉಪಯೋಗಗಳು

ಬದಲಾಯಿಸಿ

ಮರಾಟಿಮೊಗ್ಗಿಗೆ ಸಿಹಿರುಚಿಯೂ ಸೋಂಪಿಗಿರುವಂಥ ಸುವಾಸನೆಯೂ ಉಂಟು. ಆಹಾರ ವಸ್ತುಗಳಿಗೆ, ಸಿಹಿತಿನಿಸುಗಳಿಗೆ, ಮಾದಕ ಪಾನೀಯಗಳಿಗೆ ವಾಸನೆ ಕಟ್ಟುವುದಕ್ಕೂ ಸುಗಂಧದ್ರವ್ಯಗಳ ತಯಾರಿಕೆಗೂ ಇದನ್ನು ಬಳಸಲಾಗುತ್ತದೆ. ಇದು ಜೀರ್ಣಕಾರಿಯೂ ಹೌದು. ಕಾಯನ್ನು ತಿಂದರೆ ಬಾಯಿ ದುರ್ವಾಸನೆಯನ್ನು ತಡೆಗಟ್ಟಬಹುದು. ತಾಜಾ ಕಾಯಿಗಳನ್ನು ಆವಿ ಅಸವೀಕರಣಕ್ಕೆ ಒಳಪಡಿಸಿ ತಿಳಿಹಳದಿ ಬಣ್ಣದ ಚಂಚಲತೈಲವನ್ನು ಪಡೆಯಬಹುದು. ಮಿಠಾಯಿ, ಚೂಯಿಂಗ್ ಗಮ್, ತಂಬಾಕು, ಕೆಲವು ಬಗೆಯ ಔಷಧಿಗಳು, ಮಾದಕ ಪಾನೀಯಗಳಿಗೆ ವಾಸನೆ ಕಟ್ಟಲೂ,[] ಸುಗಂಧದ್ರವ್ಯ, ಸೋಪುಗಳ ತಯಾರಿಕೆಯಲ್ಲೂ ಇದರ ಬಳಕೆ ಉಂಟು. ಅಲ್ಲದೆ ಇದು ಜೀರ್ಣಕಾರಿ, ಕಫಹರ, ಉತ್ತೇಜಕ, ಕ್ರಿಮಿನಾಶಕ ಎಂದು ಕೂಡ ಹೆಸರಾಗಿದೆ. ಕಜ್ಜಿ, ಹುಳುಕು, ಗಜಕರ್ಣ ಮುಂತಾದವುಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುವುದಿದೆ. ಚೀನದಲ್ಲಿ ಇದರ ಎಲೆಗಳಿಂದ ಒಂದು ರೀತಿಯ ಚಹಾ ತಯಾರಿಸುವರು.

ಉಲ್ಲೇಖಗಳು

ಬದಲಾಯಿಸಿ
  1. "The Plant List: A Working List of All Plant Species". Archived from the original on 9 ಮೇ 2020. Retrieved 3 September 2015.
  2. "Illicium verum". PlantUse. Retrieved November 8, 2020.
  3. Wang, Guo-Wei; Hu, Wen-Ting; Huang, Bao-Kang; Lu-Ping, Qin (2011). "Illicium verum: A review on its botany, traditional use, chemistry and pharmacology". Journal of Ethnopharmacology. 136 (1): 10–20. doi:10.1016/j.jep.2011.04.051. PMID 21549817.
  4. "Galliano". Retrieved 13 March 2016.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: