ಪೀಟರ್ ಬ್ರೆಯಾನ್ ಮೇಡಾವರ್

ಪೀಟರ್ ಬ್ರೆಯಾನ್ ಮೇಡಾವರ್ (28 ಫೆಬ್ರುವರಿ 1915 - 2 ಅಕ್ಟೋಬರ್ 1987)[] ಬ್ರಿಟನ್ನಿನ ಜೀವವಿಜ್ಞಾನಿ. ಪ್ರತಿರೋಧಜನಕಗಳ (ಆಂಟಿಜೆನ್ಸ್) ಆರ್ಜಿತಸಹಿಷ್ಣುತೆಯ (ಅಕ್ವೈರ್ಡ್ ಇಮ್ಯೂನೊಲಾಜಿಕಲ್ ಟಾಲರೆನ್ಸ್) ಬಗ್ಗೆ ನಡೆಸಿದ ವ್ಯಾಸಂಗಕ್ಕಾಗಿ ಬರ್ನೆಟ್ ಎಂಬ ವಿಜ್ಞಾನಿಯೊಂದಿಗೆ ಜಂಟಿಯಾಗಿ 1960 ರ ನೊಬೆಲ್ ಪಾರಿತೋಷಿಕ ಪಡೆದ.[]

ಪೀಟರ್ ಮೇಡಾವರ್

ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಮೇಡಾವರ್ 1915 ಫೆಬ್ರುವರಿ 28 ರಂದು ದಕ್ಷಿಣ ಅಮೆರಿಕದ ರೈಯೋಡಿಜನೈರೋವಿನಲ್ಲಿ ಜನಿಸಿದ. ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿ ಆಕ್ಸ್‌ಫರ್ಡಿನ ಮಾರ್ಲ್‌ಬರೋ ಮತ್ತು ಮ್ಯಾಗ್ಡಲೀನ್ ವಿದ್ಯಾಲಯಗಳಲ್ಲಿ ವ್ಯಾಸಂಗಿಸಿ 1939 ರಲ್ಲಿ ವಿಜ್ಞಾನ ಪದವೀಧರನಾದ.

ವೃತ್ತಿ, ಸಾಧನೆಗಳು

ಬದಲಾಯಿಸಿ

ಅಲ್ಲೇ ಅಧ್ಯಾಪಕವೃತ್ತಿ ಕೈಗೊಂಡು 1936 - 45 ಮತ್ತು 1946 - 47 ಅವಧಿಗಳಲ್ಲಿ ಕೆಲಸ ಮಾಡಿದ. 1947 - 51 ಅವಧಿಯಲ್ಲಿ ಬರ್ಮಿಂಗ್ಹ್ಯಾಮಿನಲ್ಲಿ ಪ್ರಾಣಿವಿಜ್ಞಾನದ ಪ್ರಾಧ್ಯಾಪಕನಾಗಿದ್ದ. 1951 - 62 ರ ಅವಧಿಯಲ್ಲಿ ಲಂಡನ್ ಯೂನಿವರ್ಸಿಟಿಯ ಕಾಲೇಜಿನಲ್ಲಿ ಮೇಸನ್ ನಾಮಾಂಕಿತ ಪ್ರಾಣಿವಿಜ್ಞಾನ ಪ್ರಾಧ್ಯಾಪಕನಾಗಿಯೂ ಜೋಡ್ರೆಲ್ ನಾಮಾಂಕಿತ ತುಲನಾತ್ಮಕ ಅಂಗರಚನಾ ವಿಜ್ಞಾನದ ಪ್ರಾಧ್ಯಾಪಕನಾಗಿಯೂ ನೇಮಿತನಾಗಿದ್ದ. 1962 ರಲ್ಲಿ ಬ್ರಿಟನ್ನಿನ ವೈದ್ಯಕೀಯ ಸಂಶೋಧನೆಯ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಹುದ್ದೆ ಪಡೆದು 1971 ರ ತನಕ ಅಲ್ಲಿ ಸ್ವತಃ ಸಂಶೋಧನೆಗಳಲ್ಲಿ ನಿರತನಾಗಿದ್ದ.

ವಿದ್ಯಾಭ್ಯಾಸ ಮುಗಿದೊಡನೆ ಮೇಡಾವರ್ ತನ್ನ ಪ್ರಯೋಗಾಲಯದಲ್ಲಿ ಊತಕ ಕೃಷಿ (ಟಿಶ್ಯೂ ಕಲ್ಚರ್) ಸಫಲವಾಗಲು ಅಗತ್ಯ ವಿಷಯಗಳ ವ್ಯಾಸಂಗಗಳಲ್ಲಿ ತೊಡಗಿದ. 1939 ರಲ್ಲಿ ಎರಡನೆಯ ಮಹಾಯದ್ಧ ಪ್ರಾರಂಭವಾದಾಗ ಯುದ್ಧರಂಗದಲ್ಲಿ ಅನುಕೂಲವಾದೀತು ಎನ್ನಿಸಿದ ಛಿದ್ರಿತ ನರದುರಸ್ತಿ ಬಗ್ಗೆ ಸಂಶೋಧನೆ ಮಾಡಿ ಛಿದ್ರಿತ ನರಗಳನ್ನೂ ನಾಟಿಮಾಡಿದ ನರಗಳನ್ನೂ ಸ್ಥಳೀಯವಾಗಿ ನೆಲೆ ನಿಲ್ಲಿಸಲು ಮೊತ್ತಮೊದಲಾದ ಜೈವಿಕ ಅಂಟನ್ನು (ಬಯೊಲಾಜಿಕಲ್ ಗ್ಲೂ) ತಯಾರಿಸಿದ. ಅಧಿಕವಾಗಿ ವಿಲೀನಗೊಳಿಸಿದ ಫೈಬ್ರಿನೋಜೆನ್ ದ್ರಾವಣ ಇದು. ಯುದ್ಧರಂಗದಲ್ಲಿ ತೀರ ಅಗತ್ಯವೆಂದು ತೋರಿದ ಇನ್ನೊಂದು ಸಂದರ್ಭವೆಂದರೆ ಗಾಯದಿಂದ ಚರ್ಮನಾಶವಾಗಿ ಗಾಯಾಳುಗಳು ಅಗಾಧ ನೋವು ವ್ರಣಗಳಿಂದ ನರಳುವುದಕ್ಕೆ ಚಿಕಿತ್ಸೆ. ಗಾಯವಾದ ಜಾಗದಲ್ಲಿ ಚರ್ಮ ಪುನಃಶ್ಚೇತನವನ್ನು ತೀವ್ರಗೊಳಿಸುವ ಚಿಕಿತ್ಸೆಗಳನ್ನೂ, ಲೇಪನಗಳನ್ನೂ ಬಳಸಿ ಸಫಲವಾಗದೇ ಮೇಡಾವರ್ ಹತಾಶನಾಗಿ ಮೃತ ವ್ಯಕ್ತಿಯೊಬ್ಬನ ಚರ್ಮವನ್ನು ಗಾಯದ ಮೇಲೆ ನಾಟಿ ಹಾಕಲು ಆಸಕ್ತನಾದ. ಇದಕ್ಕಾಗಿ ಮೇಧೋಜೀರಕ ರಸದಲ್ಲಿ ಇರುವ ಟ್ರಿಪ್ಸಿನ್ ಎಂಬ ಕಿಣ್ವದಿಂದ ಚರ್ಮವನ್ನು ಭಾಗಶಃ ಪಚನಮಾಡಿಸಿ ದ್ರವದಲ್ಲಿ ಇನ್ನೂ ಉಳಿದುಕೊಂಡು ತೇಲಾಡುತ್ತಿರುವ ಹೊರಚರ್ಮಕೋಶಗಳನ್ನು ಗಾಯದ ಮೇಲೆ ಪದರವಾಗುವಂತೆ ಲೇಪಿಸಿದ.[][] ಈ ಕೋಶಗಳು ನೆಲೆನಿಂತು ಹೊಸಚರ್ಮ ಬೆಳೆಯುವುದೇನೋ ಎಂಬ ಇವನ ಆಸೆ ಸಫಲವಾಗಲಿಲ್ಲ. ಗಾಯ ವಾಸಿ ಆದಾಗ ಅದು ಮಾಮೂಲಿನಂತೆ ಸುತ್ತಲಿನ ಚರ್ಮವನ್ನು ಎಳೆದುಕೊಂಡು ಸುತ್ತುಕಟ್ಟಿಕೊಂಡ ಕಲೆಯಾಗಿಯೇ ಉಳಿಯಿತು. ಮುಂದೆ ಮೇಡಾವರ್ ತಾವಾಗಿಯೇ ಮುಂಬಂದ ದಾನಿಗಳ ಚರ್ಮ ತೆಗೆದು ನಾಟಿಹಾಕಿದ. ಆದರೆ ಇಲ್ಲಿಯೂ ಯಶಸ್ಸು ದೊರೆಯಲಿಲ್ಲ. ಅಕಸ್ಮಾತ್ ಏನಾದರೂ ನಾಟಿ ಕೆಲವು ದಿನ ನಿಂತಿದ್ದರೂ ಶೀಘ್ರವಾಗಿ ನಾಶವಾಗಿ ಹೋಗುತ್ತಿತ್ತು. ಇಲಿ ಚರ್ಮಗಳನ್ನು ನಾಟಿಹಾಕಿ ಅವು ಊರ್ಜಿತವಾಗದಿರುವ ವಿಷಯ ಇವನಿಗೆ ಮುಂಚೆಯೇ ತಿಳಿದಿತ್ತು. ಅನ್ಯಜಾತಿ ನಾಟಿ ವಿಫಲವಾಗುವುದೇನೋ ಸರಿ. ಆದರೆ ಜೀವಂತ ವ್ಯಕ್ತಿಯ ಚರ್ಮನಾಟಿ ಅನೂರ್ಜಿತವಾಗುವುದು ಏಕೆಂದು ಈತನಿಗೆ ಅರ್ಥವಾಗಲಿಲ್ಲ. ಅಲ್ಲದೆ ಎರಡನೆಯ ಸಾರಿ ನಾಟಿಹಾಕಿದರೆ ಅದು ಇನ್ನೂ ಬೇಗ ನಾಶವಾಗಿಬಿಡುತ್ತಿತ್ತು. ಅಂದರೆ ದೇಹದಲ್ಲೇ ನಾಟಿಗೆ ಪ್ರತಿರೋಧಕತೆ ಇರುವುದು ಸ್ಪಷ್ಟವಾಯಿತು. ಆದರೆ ಪ್ರತಿಶೋಧಕ ವಸ್ತು ಯಾವುದೆಂಬುದು ಪತ್ತೆ ಆಗಲಿಲ್ಲ.

ದೇಹದಲ್ಲಿ ಪರಜೀವಿಯ ಕೋಶ ಹಾಗೂ ಅನ್ಯವಸ್ತುಗಳ ವಿರುದ್ಧ ಪ್ರತಿರೋಧಕತೆ ಇದ್ದು ಅವನ್ನು ದೇಹ ಸಹಿಸುವುದಿಲ್ಲ, ವರ್ಜಿಸುತ್ತದೆ, ನಾಶಮಾಡುತ್ತದೆ. ಈ ವಿಷಯವಾಗಿ ಬರ್ನೆಟ್ ಎಂಬ ವಿಜ್ಞಾನಿ ಪ್ರಾಯೋಗಿಕ ವ್ಯಾಸಂಗ ಮಾಡಿ 1949 ರಲ್ಲಿ ಒಂದು ಸಿದ್ಧಾಂತ ಮಂಡಿಸಿದ್ದ. ಭ್ರೂಣ ಬೆಳೆವಣಿಗೆಯ ಒಂದು ಹಂತದಲ್ಲಿ ಅದು ಸ್ವಕೀಯ ಕೋಶಗಳನ್ನೂ ಅನ್ಯ ಕೋಶಗಳನ್ನೂ ಗುರುತಿಸುವ ಸಾಮರ್ಥ್ಯ ಪಡೆದು ಅನ್ಯಕೋಶಗಳ ವಿರುದ್ಧ ಪ್ರತಿರೋಧಕಗಳನ್ನು ತಯಾರಿಸಿಕೊಳ್ಳುವುದೆಂದೂ ಜನನಾನಂತರವೂ ಈ ಪ್ರತಿರೋಧ ವಸ್ತುಗಳು ಅನ್ಯಕೋಶ ಆಕ್ರಮಣ ವಿರುದ್ಧ ರಕ್ಷಣೆ ಒದಗಿಸುವುದೆಂದೂ ಸಿದ್ಧಾಂತಿಸಿದ.[] ಇವಕ್ಕೂ ಅನುಗುಣವಾಗಿಯೇ ಅನ್ಯಚರ್ಮದ ನಾಟಿ ನಿಲ್ಲದೆ ಹೋಗಿರಬೇಕೆಂದು ಮೇಡಾವರನಿಗೆ ವೇದ್ಯವಾಯಿತು. ಆದರೆ ಸಜಾತಿ ನಾಟಿಯಾದರೂ ನಿಲ್ಲುವಂತೆ ಉಪಾಯ ಪತ್ತೆ ಮಾಡಬೇಕೆಂದು ಬಯಸಿ ಬಿಲ್ಲಿಂಗ್ಹ್ಯಾಮ್ ಎಂಬ ಪ್ರತಿಭಾವಂತ ವಿಜ್ಞಾನಿ ಎರಡನೆಯ ಮಹಾಯುದ್ಧದ ನಂತರ ಮೇಡಾವರನಿಗೆ ಸಹಾಯಕನಾಗಿ ಸೇರಿದ. ಮೊದಲು ಇವರು ಬೇರೆ ವ್ಯಾಸಂಗಗಳ ಕಡೆ ಗಮನ ಕೊಟ್ಟರೂ ಶೀಘ್ರವಾಗಿಯೇ ಸ್ವಜಾತಿ ಅಂಗನಾಟಿ ಊರ್ಜಿತವಾಗಲು ಉಪಾಯ ಶೋಧಿಸುವ ಪ್ರಯತ್ನ ಮುಂದುವರಿಸಿದರು.

ಈ ಸಮಯದಲ್ಲಿ ಇವರಿಗೆ ಅವಳಿ ಕರುಗಳ ವಿಷಯ ತನಿಖೆಗಾಗಿ ಒಂದು ಕರೆ ಬಂತು. ಅವು ಒಂದೇ ಭ್ರೂಣಾಣುವಿನಿಂದ ಬೆಳೆದಿದ್ದವೇ ಅಥವಾ ಎರಡು ಬೇರೆ ಭ್ರೂಣಾಣುಗಳಿಂದ ಬೆಳೆದಿದ್ದವೇ ಎಂಬುದನ್ನು ಖಚಿತವಾಗಿ ಪತ್ತೆಮಾಡುವ ವಿಧಾನವನ್ನು ಇವರು ಸೂಚಿಸಬೇಕಾಗಿತ್ತು. ಅವಳಿಗಳು ಗಂಡೊಂದು ಹೆಣ್ಣೊಂದಾಗಿದ್ದರೆ ಅವು ಬೇರೆ ಬೇರೆ ಭ್ರೂಣಾಣುಗಳಿಂದ ಬೆಳೆದವು ಎಂಬುದು ವ್ಯಕ್ತ. ಎರಡೂ ಒಂದೇ ಲಿಂಗವಾಗಿದ್ದರೆ ಕಷ್ಟ. ಈ ಸಂದರ್ಭದಲ್ಲಿ ಒಂದರ ಚರ್ಮವನ್ನು ಇನ್ನೊಂದಕ್ಕೆ ನಾಟಿಹಾಕಿ ನೋಡಿದರೆ ಪತ್ತೆ ಆದೀತೇನೋ ಎನಿಸಿತು. ಅದರಂತೆ ಪ್ರಯೋಗ ಮಾಡಿದಾಗ ಅವಳಿಗಳಲ್ಲಿ ಗಂಡೊಂದು ಹೆಣ್ಣೊಂದು ಆಗಿದ್ದ ಸಂದರ್ಭದಲ್ಲಿ (ಅಂದರೆ ಅವು ಬೇರೆ ಬೇರೆ ಭ್ರೂಣಾಣುಗಳಿಂದ ಜನಿಸಿದವು ಎಂದು ಖಾತ್ರಿ ಆಗಿದ್ದರೂ) ಒಂದರ ಚರ್ಮ ಇನ್ನೊಂದಕ್ಕೆ ಸಹ್ಯವಾಗಿರುತ್ತಿತ್ತು. ಇದು ಬರ್ನೆಟ್ಟನ ಸಿದ್ಧಾಂತಕ್ಕೆ ವ್ಯತಿರಿಕ್ತ ಎನಿಸಿತು. ಆದರೆ ಅದೇ ಕಾಲದಲ್ಲಿ ಓವೆನ್ ಎಂಬ ವಿಜ್ಞಾನಿ ಗರ್ಭದಲ್ಲಿ ಏಕಕಾಲಿಕವಾಗಿ ಇರುವ ಎರಡು ಭ್ರೂಣಗಳ ನಡುವೆ ಕೆಂಪು ರಕ್ತಕಣ ಮಾತೃಕೆಗಳ ವಿನಿಮಯ ಆಗುತ್ತದೆ ಎಂದು ತೋರಿಸಿದ್ದ. ಇದೇ ರೀತಿ ಬಹುಶಃ ಎರಡೂ ಭ್ರೂಣಗಳ ನಡುವೆ ಚರ್ಮಕೋಶಗಳೂ (ಇನ್ನಿತರವೂ) ವಿನಿಮಯಗೊಳ್ಳುವುದೆಂದೂ ಅಂಥ ಅನ್ಯಕೋಶಗಳನ್ನು ಭ್ರೂಣ ಗುರುತಿಸಲಾರದೆಂದೂ ಆದ್ದರಿಂದ ಜನಿಸಿದ ಮೇಲೂ ಅದನ್ನು ಸಹಿಸಿಕೊಳ್ಳವುದೆಂದೂ ಯೋಚಿಸಿದರು. ಬಹುಶಃ ಹೀಗಾಗಿಯೇ ಹೆಣ್ಣುಗಂಡು ಅವಳಿಗಳಲ್ಲಿ ಚರ್ಮಕೋಶಗಳ ವಿನಿಮಯ ಆಗಿರುವುದರಿಂದ ಜನಿಸಿದ ಮೇಲೆಯೂ ಅವುಗಳಲ್ಲಿ ಪರಸ್ಪರ ಚರ್ಮನಾಟಿ ಸಹ್ಯವಾಗುವುದೆಂದು ಅರ್ಥ ಮಾಡಿದನು. ಆದರೆ ಈ ವಾದ ಸರಣಿ ಸರಿ ಎಂದು ಪ್ರಾಯೋಗಿಕವಾಗಿ ತೋರಿಸಿದ ಹೊರತು ಇದನ್ನು ಒಪ್ಪುವಂತಿರಲಿಲ್ಲ. ಆದ್ದರಿಂದ ಯುಕ್ತ ಪ್ರಯೋಗಗಳನ್ನು ಮಾಡಲು ಮೇಡಾವರ್ ಮತ್ತು ಬಿಲ್ಲಿಂಗ್ಹ್ಯಾಮ್ ನಿರ್ಧರಿಸಿದರು. ಇದೇ ಕಾಲದಲ್ಲಿ ಅವರನ್ನು ಇನ್ನೊಬ್ಬ ಪ್ರತಿಭಾವಂತ ವಿಜ್ಞಾನಿ ಬ್ರೆಂಟ್ ಎಂಬಾತ ಸೇರಿದ. ಬೆಳೆದ ಒಂದು ನಿರ್ದಿಷ್ಟ ಇಲಿಯ ಕೋಶಗಳನ್ನು ಇವರು ಇನ್ನೊಂದು ಇಲಿಯ ಗರ್ಭಸ್ಥ ಭ್ರೂಣ ದೇಹದ ಒಳಕ್ಕೆ ಚುಚ್ಚಿ ಮದ್ದು ರೀತಿ ಹುಗಿಸಿದರು. ಇಲಿಮರಿ ಹುಟ್ಟಿದ ಮೇಲೆ ಅದಕ್ಕೆ ನಿರ್ದಿಷ್ಟ ಇಲಿಯ ಚರ್ಮ ನಾಟಿಹಾಕಿ ನೋಡಿದರು. ನಾಟಿ ಸಫಲವಾಯಿತು. ದಾನಿಯ ಕೋಶಗಳನ್ನು ಭ್ರೂಣ ಕಾಲದಲ್ಲಿಯೇ ಪಡೆದಿದ್ದರೆ ಜನನಾನಂತರ ಆ ಜೀವಿ ದಾನಿಯ ಕೋಶಗಳನ್ನು ವರ್ಜಿಸದೆ, ಅಂದರೆ ಪ್ರತಿರೋಧಕತೆ ತೋರಿಸದೆ ಸಹಿಸಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿದಂತಾಯಿತು.

ಭ್ರೂಣದಲ್ಲಿ ಸಹಿಷ್ಣುತೆ ಉಂಟುಮಾಡತಕ್ಕವು ಅನ್ಯಕೋಶಗಳು ಮಾತ್ರವೇ ಅಲ್ಲ. ಅವುಗಳ ಸಾರ ಕೂಡ ಈ ರೀತಿ ಪ್ರತಿಕ್ರಿಯೆ ತೋರಿಸಬಲ್ಲದು ಎಂದು ಮೇಡಾವರ್ ಮತ್ತು ಅವನ ಸಹೋದ್ಯೋಗಿಗಳು ತೋರಿಸಿದರು. ಇಷ್ಟರಲ್ಲಿ ಬಿಲ್ಲಿಂಗ್ಹ್ಯಾಮ್ ಬೇರೆ ಕಡೆ ಹೊರಟುಹೋಗಿದ್ದರಿಂದ ಬ್ರೆಂಟ್ ಒಬ್ಬನೇ ಮೇಡಾವರನ ಜೊತೆಗೆ ಉಳಿದ. ಇವರಿಬ್ಬರೇ ವ್ಯಾಸಂಗ ಮುಂದುವರಿಸುತ್ತ ಅನ್ಯಕೋಶ ಪ್ರತಿರೋಧಕತೆ ಕುರಿತು ಕೆಲವು ಅಂಶಗಳನ್ನು ವಿಶದೀಕರಿಸಿದರು. ದೇಹ ಅನ್ಯಕೋಶಾಂಗವನ್ನು ತಿರಸ್ಕರಿಸುವುದರ ಮುಖ್ಯ ಕಾರಣ ಆ ಕೋಶಗಳಿಗೆ ಅನುಗುಣವಾದ ಪ್ರತಿರೋಧವಸ್ತುವಿನ (ಆಂಟಿಬಾಡಿ) ತಯಾರಿಕೆ ಅಲ್ಲ, ದೇಹದ ದುಗ್ಧರಸ ಕಣಗಳು ಸೂಕ್ಷ್ಮಗ್ರಾಹಿಗಳಾಗಿ ವ್ಯತ್ಯಸ್ತವಾಗುವುದೆ ನಿಜ ಕಾರಣ ಎಂದು ಇವರು ವಿವರಿಸಿದರು. ಪ್ರತಿರೋಧಜನಕಗಳನ್ನು ದೇಹಕ್ಕೆ ಹುದುಗಿಸಿದರೆ ಪ್ರತಿರೋಧಕಗಳು ರಕ್ತದಲ್ಲಿ ಮತ್ತು ಲಸಿಕೆಯಲ್ಲಿ ಸಾಕಷ್ಟು ಶೀಘ್ರವಾಗಿಯೇ ಕಂಡುಬರುವುದು ಸಾಮಾನ್ಯ. ಇವು ಕೂಡಲೇ ಪ್ರತಿರೋಧಕಜನಕಗಳೊಡನೆ ವರ್ತಿಸಿ ಇವನ್ನು ನಿಷ್ಕ್ರಿಯಗೊಳಿಸುತ್ತವೆ. ಆದರೆ ಪ್ರತಿರೋಧಕಜನಕಗಳು ಗ್ರಾಹಕ ದೇಹದಲ್ಲಿ ದುಗ್ಧರಸ ಕಣಗಳನ್ನು ಸೂಕ್ಷ್ಮವೇದಿಗಳಾಗಿಯೂ ಮಾರ್ಪಡಿಸುತ್ತವೆ. ಇದರಿಂದ ಪುನಃ ಪ್ರತಿಕ್ರಿಯೆ ಕಂಡುಬರುತ್ತದೆ. ಅಂಗನಾಟಿ ವಿಸರ್ಜನೆಯಲ್ಲಿ ಪ್ರತಿರೋಧಕಗಳ ಕ್ರಿಯೆಗಿಂತಲೂ ಈ ರೀತಿಯ ತಡವಾದ ಪ್ರತಿಕ್ರಿಯೆ ಮುಖ್ಯ; ಆದರೆ ರಾಸಾಯನಿಕಗಳೇ ಆದ ಪ್ರತಿರೋಧಕಗಳಿಗಿಂತ ದುಗ್ಧರಸಕಣಗಳ ಪಾತ್ರವನ್ನೇ ಹೆಚ್ಚಾಗಿ ಗಮನಿಸಬೇಕು ಎಂದು ಮೇಡಾವರ್ ಸ್ಪಷ್ಟಪಡಿಸಿದ. ಇದಕ್ಕಾಗಿಯೇ ಇವನಿಗೆ ನೊಬೆಲ್ ಪಾರಿತೋಷಿಕ ದೊರೆತದ್ದು.

ಪ್ರಾರಂಭದಲ್ಲಿ ಅಂಗನಾಟಿ ವ್ಯಾಸಂಗವನ್ನು ಕೆಲವೇ ವಿಜ್ಞಾನಿಗಳು ಕೈಗೊಳ್ಳುತ್ತಿದ್ದರು. ಮೇಡಾವರನ ಸಂಶೋಧನೆಯಿಂದಾಗಿ ಸಾವಿರಾರು ಜನ ವಿಜ್ಞಾನಿಗಳು ಈ ಒಂದು ವ್ಯಾಸಂಗದಲ್ಲಿ ನಿರತರಾದರು. ಹಾಗೆಯೇ ಅಂಗನಾಟಿ ಪ್ರಾರಂಭದಲ್ಲಿ ಅಕಸ್ಮಾತ್ತಾಗಿ ಊರ್ಜಿತವಾಗುವ ಸಂಭವವಿತ್ತು. ಈಗ ಮೇಡಾವರನ ವಿಶದೀಕರಣಗಳಿಂದ ತಕ್ಕ ಕ್ರಮಗಳನ್ನು ಅನುಸರಿಸಿ ಅದು ಅಧಿಕ ಪ್ರಮಾಣದಲ್ಲಿ ಸಫಲವಾಗುವಂತೆ ಮಾಡಲಾಗುತ್ತದೆ. ಇದಕ್ಕೆ ಮಾರ್ಗ ತೋರಿಸಿಕೊಟ್ಟ ಮೇಡಾವರನನ್ನು ಅಂತಾರಾಷ್ಟ್ರೀಯ ಅಂಗನಾಟಿ ಸಂಸ್ಥೆ 1966 ರಲ್ಲಿ ತನ್ನ ಅಧ್ಯಕ್ಷನನ್ನಾಗಿ ಮಾಡಿ ಗೌರವಿಸಿತು.

ಮನುಷ್ಯನ ದೇಹ ಬೆಳೆವಣಿಗೆ ಮತ್ತು ಅದರ ಮೇಲೆ ವಯಸ್ಸಿನ ಪರಿಣಾಮ, ಅಂಗನಾಟಿಯ ಮೇಲೆ ಪ್ರತಿರೋಧ ಲಕ್ಷಣಗಳು, ಮುಖ್ಯವಾಗಿ ಅಂಗನಾಟಿ ತಿರಸ್ಕೃತವಾಗುವುದಕ್ಕೆ ಕಾರಣಗಳು, ಪ್ರತಿರೋಧಜನಕಗಳು, ಸೂಕ್ಷ್ಮಗ್ರಾಹಿಗಳಾಗಿ ಅಂಗನಾಟಿ ವಿಸರ್ಜಿತವಾಗುವುದಕ್ಕೆ ಕಾರಣವಾದ ದುಗ್ಧರಸಕಣಗಳನ್ನು ನಾಶಮಾಡಬಲ್ಲ ಲಸಿಕೆ ಮುಂತಾದ ವಿಷಯ ಕುರಿತು ಮೇಡಾವರ್ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ.

1949 ರಲ್ಲಿ ಇಂಗ್ಲೆಂಡಿನ ರಾಯಲ್ ಸೊಸೈಟಿ ಇವನನ್ನು ಸದಸ್ಯನಾಗಿ ಪರಿಗಣಿಸಿ ಗೌರವಿಸಿತು.

ಉಲ್ಲೇಖಗಳು

ಬದಲಾಯಿಸಿ
  1. Mitchison, N. A. (1990). "Peter Brian Medawar. 28 February 1915 – 2 October 1987". Biographical Memoirs of Fellows of the Royal Society. 35: 283–301. doi:10.1098/rsbm.1990.0013. PMID 11622280.
  2. "The Nobel Prize in Physiology or Medicine 1960". Nobelprize.org. Nobel Media AB. Retrieved 19 October 2015.
  3. Medawar, P. B. (1944). "The behaviour and fate of skin autografts and skin homografts in rabbits: A report to the War Wounds Committee of the Medical Research Council". Journal of Anatomy. 78 (Pt 5): 176–199. PMC 1272490. PMID 17104960.
  4. Medawar, P. B. (1945). "A second study of the behaviour and fate of skin homografts in rabbits: A Report to the War Wounds Committee of the Medical Research Council". Journal of Anatomy. 79 (Pt 4): 157–176. PMC 1272582. PMID 17104981.
  5. Simpson, E. (2015). "Medawar's legacy to cellular immunology and clinical transplantation: a commentary on Billingham, Brent and Medawar (1956) 'Quantitative studies on tissue transplantation immunity. III. Actively acquired tolerance'". Philosophical Transactions of the Royal Society B: Biological Sciences. 370 (1666): 20140382 (online). doi:10.1098/rstb.2014.0382. PMC 4360130. PMID 25750245.


ಹೊರಗಿನ ಕೊಂಡಿಗಳು

ಬದಲಾಯಿಸಿ