ಹಸ್ತಿನಾಪುರದ ದೊರೆ ಮತ್ತು ಕೌರವರ ತಂದೆಯಾದ ಧೃತರಾಷ್ಟ್ರ

ಮಹಾಭಾರತ ಮಹಾಕಾವ್ಯದಲ್ಲಿ ಬರುವ ಪಾತ್ರ ಧೃತರಾಷ್ಟ್ರ ವಿಚಿತ್ರವೀರ್ಯನ ಮೊದಲ ಪತ್ನಿ ಅಂಬಿಕೆಯ ಪುತ್ರ. ಹಸ್ತಿನಾಪುರದ ಅಂಧ ರಾಜನಾದ ಇವನಿಗೆ ಪತ್ನಿ ಗಾಂಧಾರಿಯಿಂದ ನೂರು ಜನ ಪುತ್ರರು - ಇವರೇ ಕೌರವರು ಎಂದು ಪ್ರಸಿದ್ಧರಾದವರು ಮತ್ತು ಒಬ್ಬ ಮಗಳು ದುಶ್ಶಲೆ-ಅವಳೇ ಮುಂದೆ ಜಯದ್ರಥನ ಪತ್ನಿಯಗುತ್ತಾಳೆ. ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು.

ಅಂಧ ರಾಜ ಧೃತರಾಷ್ಟ್ರ ಕುರುಕ್ಷೇತ್ರ ಯುದ್ಧದ ವಿವರಗಳನ್ನು ದಿವ್ಯದೃಷ್ಟಿ ಹೊಂದಿದ್ದ್ದ ಸಂಜಯನಿಂದ ತಿಳಿದುಕೊಳ್ಳುತ್ತಿರುವುದು
Draupadi disrobed in Dhritarashtra's assembly. Dhritarashtra seated in the centre.
Dhrutarastra Lament
The blind Dhritarashtra attacks the statue of Bhima

ಜನನಸಂಪಾದಿಸಿ

ವಿಚಿತ್ರವೀರ್ಯನ ಮರಣದ ನಂತರ ಅವನ ತಾಯಿ ಸತ್ಯವತಿ ತನ್ನ ಮೊದಲ ಪುತ್ರ ವ್ಯಾಸನ ಸಹಾಯ ಯಾಚಿಸಿದಳು. ತಾಯಿಯ ಇಚ್ಛೆಯಂತೆ 'ನಿಯೋಗ ಪದ್ಧತಿ'ಯಿಂದ ವಿಚಿತ್ರವೀರ್ಯನ ಇಬ್ಬರು ಪತ್ನಿಯರನ್ನು ಕೂಡಿದನು. ಆ ಸಮಯದಲ್ಲಿ ಅಂಬಿಕೆ ವ್ಯಾಸರ ಆಕೃತಿಯನ್ನು ನೋಡಲಾರದೆ ಹೆದರಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಂಡಳು. ಹೀಗಾಗಿ ಅವಳ ಮಗ ಧೃತರಾಷ್ಟ್ರನು ಹುಟ್ಟು ಅಂಧನಾಗಿ ಹುಟ್ಟಿದನು. ಈ ಕಾರಣದಿಂದ ಅವನ ತಮ್ಮ ಪಾಂಡು ಅಣ್ಣನ ಪರವಾಗಿ ರಾಜ್ಯಭಾರ ಮಾಡುತ್ತಿದ್ದನು. ಪಾಂಡುವಿನ ನಿಧನದ ನಂತರ ಧೃತರಾಷ್ಟ್ರ ಹಸ್ತಿನಾಪುರದ ರಾಜ್ಯಭಾರ ಮಾಡಿದನು.

ಆಳ್ವಿಕೆಸಂಪಾದಿಸಿ

ಮೊದಲ ಪುತ್ರ ದುರ್ಯೋಧನನ ಜನ್ಮ ಸಮಯದಲ್ಲಿ ಅಶುಭ ಸಂಕೇತಗಳು ಕಂಡ ಕಾರಣ ಭೀಷ್ಮ, ವಿದುರ ಮುಂತಾದವರು ಮಗುವನ್ನು ಬಿಟ್ಟುಬಿಡಲು ಸೂಚಿಸಿದರೂ, ಪುತ್ರವ್ಯಾಮೋಹದಿಂದ ಧೃತರಾಷ್ಟ್ರ ಮಗನನ್ನು ಉಳಿಸಿಕೊಂಡನು.

ಉತ್ತರಾಧಿಕಾರಸಂಪಾದಿಸಿ

ತನ್ನ ತಂದೆಯ ನಂತರ ದುರ್ಯೋಧನನಿಗೆ ತಾನೇ ರಾಜನಾಗುವ ಹಂಬಲವಿದ್ದಿತು. ಧೃತರಾಷ್ಟ್ರನ ಇಚ್ಛೆಯೂ ಇದೇ ಆಗಿದ್ದರೂ ತನ್ನ ಮಗನಿಗಿಂತ ಹಿರಿಯನಾಗಿದ್ದ ಯುಧಿಷ್ಠಿರನನ್ನು ಯುವರಾಜನನ್ನಾಗಿ ಮಾಡಿದನು. ಇದರಿಂದ ಹತಾಶನಾದ ದುರ್ಯೋಧನನನ್ನು ಕಂಡು ಭೀಷ್ಮ ಹಸ್ತಿನಾಪುರವನ್ನು ಇಬ್ಭಾಗ ಮಾಡುವ ಸಲಹೆ ಕೊಟ್ಟನು. ಇದನ್ನೊಪ್ಪಿದ ಧೃತರಾಷ್ಟ್ರ, ಯುಧಿಷ್ಠಿರನಿಗೆ ಕುರು ರಾಜ್ಯದ ಅರ್ಧಭಾಗವನ್ನು ಬಿಟ್ಟುಕೊಟ್ಟನು. ಆದರೆ ಈ ಭಾಗವು ಬೆಂಗಾಡಾದ ಖಾಂಡವಪ್ರಸ್ಥವಾಗಿದ್ದಿತು. ಉದ್ದೇಶಪೂರ್ವಕವಾಗಿ ಧೃತರಾಷ್ಟ್ರನು ಕುರು ರಾಜ್ಯದ ಸಂಪದ್ಭರಿತ ಹಸ್ತಿನಾಪುರವನ್ನು ಮಗನ ಸಲುವಾಗಿ ತನ್ನಲ್ಲಿಯೇ ಇಟ್ಟುಕೊಂಡನು.

ಪಗಡೆಯಾಟಸಂಪಾದಿಸಿ

ಯುಧಿಷ್ಠಿರನು ಪಗಡೆಯಾಟದಲ್ಲಿ ಶಕುನಿ ಮತ್ತು ಕೌರವರಿಗೆ ಸೋಲುತ್ತಿರುವಾಗ ಧೃತರಾಷ್ಟ್ರನು ಉಪ್ಸ್ಥಿತನಿದ್ದನು. ಪ್ರತಿ ಹಂತದಲ್ಲೂ ಸೋಲುತ್ತಿದ್ದ ಯುಧಿಷ್ಠಿರ ರಾಜ್ಯ, ಸಕಲೈಶ್ವರ್ಯ, ಸಹೋದರರು, ಕೊನೆಗೆ ತನ್ನ ಪತ್ನಿ ದ್ರೌಪದಿಯನ್ನೂ ಸೋತನು. ಇದೆಲ್ಲ ನಡೆಯುತ್ತಿದ್ದರೂ ಸುಮ್ಮನಿದ್ದ ಧೃತರಾಷ್ಟ್ರ ದುಶ್ಶಾಸನ ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿರುವುದೂ ಗೊತ್ತಾದರೂ ಕೂಡ ಮೂಕನಾಗಿದ್ದನು. ಕೊನೆಗೆ ಮನಸ್ಸಾಕ್ಷಿಯ ಹೆದರಿಕೆಯಿಂದ ಪಾಂಡವರು ಸೋತಿದ್ದನ್ನೆಲ್ಲ ಹಿಂದಿರುಗಿಸಿದನು.

ಕುರುಕ್ಷೇತ್ರ ಮಹಾಯುದ್ಧಸಂಪಾದಿಸಿ

ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದ ಸಮಯ ದಿವ್ಯ ದೃಷ್ಟಿ ಹೊಂದಿದ್ದ ಸಾರಥಿ ಸಂಜಯನು ಯುದ್ಧದ ಆಗು-ಹೋಗುಗಳನ್ನು ಧೃತರಾಷ್ಟ್ರ-ಗಾಂಧಾರಿಯರಿಗೆ ವಿವರಿಸುತ್ತಿದ್ದನು. ದಿನ ಬಿಟ್ಟು ದಿನ ತನ್ನ ಮಕ್ಕಳು ಸಾಯುತ್ತಿದ್ದಂತೆ ಧೃತರಾಷ್ಟ್ರನ ದುಗುಡ ಹೆಚ್ಚಾಗುತ್ತ ಹೋಯಿತು. ಅವರನ್ನು ಉಳಿಸಲಿಕ್ಕಾಗದ ತನ್ನ ಅಂಧತ್ವದಿಂದ ಬಹಳ ನೊಂದು ಹೋದನು. ಸಂಜಯನು ರಾಜನನ್ನು ಸಂತೈಸುತ್ತಿದ್ದರೂ, ಧರ್ಮ ಪಾಂಡವರ ಬಳಿ ಇರುವುದನ್ನು ನೆನಪು ಮಾಡುತ್ತಿದ್ದನು.

ಭೀಮನ ಮೂರ್ತಿಯ ಜಜ್ಜುವಿಕೆಸಂಪಾದಿಸಿ

ಕುರುಕ್ಶೇತ್ರ ಯುದ್ಧ ಮುಗಿದ ನಂತರ ಧೃತರಾಷ್ಟ್ರನ ದುಃಖ-ರೋಷಗಳಿಗೆ ಲೆಕ್ಕವಿರಲಿಲ್ಲ. ಪಾಂಡವರನ್ನು ಭೇಟಿ ಮಾಡಿ ಅವರನ್ನು ಆಲಂಗಿಸಿದನು. ಆದರೆ ಭೀಮನ ಸರದಿ ಬಂದಾಗ ಅಪಾಯ ಅರಿತ ಕೃಷ್ಣನು ಭೀಮನನ್ನು ಪಕ್ಕಕ್ಕೆ ಸರಿಸಿ ಅವನ ಉಕ್ಕಿನ ಮೂರ್ತಿಯನ್ನು ಮುಂದೆ ಮಾಡಿದನು. ತನ್ನ ಮಗನ ಹಂತಕನಾದ ಭೀಮನು ಎದುರಿಗಿರುವುದನ್ನು ಅರಿತ ಧೃತರಾಷ್ಟ್ರ ತನ್ನೆಲ್ಲ ಶಕ್ತಿಯಿಂದ ರೋಷದಿಂದ ಗಟ್ಟಿಯಾಗಿ ಆಲಂಗಿಸಿದಾಗ ಉಕ್ಕಿನ ಮೂರ್ತಿ ಪುಡಿ ಪುಡಿಯಾಯಿತು. ನಂತರ ಸಮಾಧಾನಗೊಂಡ ಧೃತರಾಷ್ಟ್ರ ಪಾಂಡವರನ್ನು ಹರಸಿದನು.

ವೃದ್ಧಾಪ್ಯ ಮತ್ತು ಮರಣಸಂಪಾದಿಸಿ

ಕುರುಕ್ಷೇತ್ರ ಯುದ್ಧದ ನಂತರ ಕರುಣಾಮಯಿಯಾದ ಯುಧಿಷ್ಠಿರನು ಧೃತರಾಷ್ಟ್ರನಿಗೆ ರಾಜ್ಯಭಾರ ಮುಂದುವರಿಸಲು ವಿನಂತಿಸಿದನು. ಮತ್ತೆ ಹಸ್ತಿನಾಪುರವನ್ನು ವರ್ಷಾನುಗಟ್ಟಲೆ ಆಳಿದ ನಂತರ ಧೃತರಾಷ್ಟ್ರನು ಗಾಂಧಾರಿ, ಕುಂತಿ, ಮತ್ತು ವಿದುರರೊಂದಿಗೆ ವಾನಪ್ರಸ್ಥಕ್ಕೆ ತೆರಳಿದನು. ಹಿಮಾಲಯದಲ್ಲಿ ಉಂಟಾದ ಕಾಡ್ಗಿಚ್ಚಿನಿಂದ ಮೃತರಾದರು.