ತಲಕಾಡಿನ ಗಂಗರ ಶಾಸನಗಳು
ಸುಮಾರು 700 ವರ್ಷಗಳಷ್ಟು ಕಾಲ ಆಳಿದ ಗಂಗವಂಶದ ರಾಜರ ಶಾಸನಗಳ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಆದರೂ ಅವು ಹಲವು ರೀತಿಯಲ್ಲಿ ಮುಖ್ಯವೂ ವೈವಿಧ್ಯಪೂರ್ಣವೂ ಆದಂಥವು. ಮೊದಮೊದಲ ಗಂಗರಾಜರ ಇತಿಹಾಸವನ್ನರಿಯಲು ಇವೇ ಪೂರ್ಣ ಆಧಾರ. ಗಂಗರ ಶಾಸನಗಳು ಸ್ಥೂಲವಾಗಿ ಮೂರು ಬಗೆ:
- ತಾಮ್ರಶಾಸನಗಳು,
- ಶಿಲಾ ಶಾಸನಗಳು ಮತ್ತು
- ವೀರಗಲ್ಲುಗಳು
ತಾಮ್ರಶಾಸನಗಳು ಮತ್ತು ಶಿಲಾಶಾಸನಗಳ ನಡುವಿನ ವ್ಯತ್ಯಾಸಗಳು
ಬದಲಾಯಿಸಿಸುಮಾರು 4ನೆಯ ಶತಮಾನದಿಂದಲೇ ಗಂಗರಾಜರ ಆಳ್ವಿಕೆ ಆರಂಭವಾಗಿದ್ದರೂ 8ನೆಯ ಶತಮಾನದವರೆಗೂ ಇವರ ಶಿಲಾಶಾಸನಗಳು ಬಲು ವಿರಳವಾಗಿವೆ. 726 ರಲ್ಲಿ ಪಟ್ಟಕ್ಕೆ ಬಂದ ಶ್ರೀಪುರುಷನಿಗಿಂತ ಹಿಂದಿನ ರಾಜರ ಶಿಲಾಶಾಸನಗಳೆಂದರೆ ಆವನಿಯಲ್ಲಿ ದೊರಿತಿರುವ ತುಂಡುಶಾಸನ, ಸಿರಿಗುಂದದ ನಿರ್ವಿನೀತನ ಶಾಸನ, ಕಲ್ಲೂರಿನ ಶ್ರೀವಿಕ್ರಮನ ಶಾಸನ ಮತ್ತು ತಿರುವಳ್ಳೂರಿನ 1ನೆಯ ಶಿವಮಾರನ ಶಾಸನ-ಇವಿಷ್ಟೆ. ಆದರೆ ಇದೇ ಅವಧಿಯಲ್ಲಿ ಗಂಗರ ಹಲವಾರು ತಾಮ್ರಶಾಸನಗಳು ದೊರೆತಿವೆ.
ಪ್ರಾಚೀನ ಕನ್ನಡ ಅರಸುಮನೆತನಗಳಲ್ಲಿ ಬಹುಶಃ ಗಂಗರಷ್ಟು ಹೆಚ್ಚಾಗಿ ತಾಮ್ರ ಶಾಸನಗಳನ್ನು ಹಾಕಿಸಿರುವರು ಬೇರೆ ಇಲ್ಲ. ಇದುವರೆಗೂ ಸುಮಾರು ನೂರಕ್ಕೂ ಮೀರಿ ಅವರ ತಾಮ್ರಶಾಸನಗಳು ದೊರೆತಿವೆ. ಇಮ್ಮಡಿ ಮಾರಸಿಂಹನವರೆಗೂ ಗಂಗರಾಜರು ತಾಮ್ರಶಾಸನಗಳನ್ನು ಹಾಕಿಸಿದ್ದಾರೆ. ಮುಂದಿನ ರಾಜರ ತಾಮ್ರ ಶಾಸನಗಳು ದೊರೆತಿಲ್ಲ.
ಗಂಗರ ತಾಮ್ರಶಾಸನಗಳಿಗೂ ಶಿಲಾಶಾಸನಗಳಿಗೂ ಹಲವು ಮುಖ್ಯವಾದ ವ್ಯತ್ಯಾಸಗಳುಂಟು.
- ತಾಮ್ರಶಾಸನಗಳು ಬಹುಪಾಲು ಸಂಸ್ಕೃತದಲ್ಲಿವೆ; ಶಿಲಾ ಶಾಸನಗಳು ಕನ್ನಡದಲ್ಲಿವೆ.
- ತಾಮ್ರಶಾಸನಗಳಲ್ಲಿ ಒಕ್ಕಣೆ ಹೆಚ್ಚು. ಗಂಗವಂಶದ ಮೂಲಪುರುಷ ಕೊಂಗುಣಿವರ್ಮನಿಂದ ಆರಂಭಿಸಿ ಶಾಸನ ಕೊರಿಸಿದ ರಾಜನವರೆಗೂ ಪೀಳಿಗೆಯನ್ನು ಸವಿವರವಾಗಿ ಕೊಟ್ಟಿರುತ್ತದೆ. ಶಿಲಾ ಶಾಸನಗಳಲ್ಲಾದರೋ ಹೆಚ್ಚು ವಿಷಯಗಳಿರುವುದಿಲ್ಲ; ಅವನ್ನು ಹಾಕಿಸಿದ ರಾಜರ ಹೆಸರು, ಒಮ್ಮೊಮ್ಮೆ ಅವರ ಬಿರುದುಗಳು, ಶಾಸನದ ಕಾಲ ಮತ್ತು ಉದ್ದೇಶಗಳನ್ನು ನೇರವಾಗಿ ಸರಳವಾಗಿ ತಿಳಿಸಿರುತ್ತದೆ.
ಆವಣಿಯ ತುಂಡು ಶಿಲಾಶಾಸನ ಇದಕ್ಕೆ ಅಪವಾದ. ಇದು ತಾಮ್ರ ಶಾಸನಗಳಂತೆ ಸಂಸ್ಕೃತದಲ್ಲಿದೆ: ಗಂಗರ ಪೀಳಿಗೆಯನ್ನು ಕೊಡುತ್ತದೆ. ಆದರೆ ನಡುವೆಯೇ ನಿಂತು ಹೋಗುವುದರಿಂದ ಇದು ಯಾರ ಕಾಲದ್ದೆಂದು ಹೇಳಲುಬಾರದು. ಹೀಗೆಯೇ ಗುಂಡ್ಲುಪೇಟೆ ತಾಲ್ಲೂಕಿನ ಶಾಸನವೊಂದರಲ್ಲಿ ಒಂದೂವರೆ ಶ್ಲೋಕಗಳಲ್ಲಿ ಗಂಗವಂಶದ ಪೀಳಿಗೆಯನ್ನು ಕೊಂಗುಣಿವರ್ಮನಿಂದ ಆರಂಭಿಸಿ ಒಂದನೆಯ ಶಿವಮಾರನವರೆಗೆ ಹೀಗೆ ತಿಳಿಸಿದೆ:
ಕೊಂಗುಣಿರ್ಮಾಧವಶ್ಚೈವ ಹರಿಶ್ಚ ವಿಷ್ಣುಗೋಪಮಃ
ಮಾಧವೋಪ್ಯವಿನೀತಶ್ಚ ದುರ್ವೀನಿತಶ್ಚ ಮುಷ್ಕರಃ
ಶ್ರೀ ವಿಕ್ರಮಶ್ಚ ದುಗಶ್ಚ ಶಿವಮಾರಸ್ತಥೈವಚ
ವಳ್ಳಿಮಲೆಯ ಗುಹೆಯೊಂದರಲ್ಲಿ ಇರುವ ಒಂದನೆಯ ರಾಚಮಲ್ಲನ ಶಾಸನದಲ್ಲಿ ಅವನ ಹಿಂದಿನ ಮೂರು ತಲೆಮಾರುಗಳ ಹೆಸರುಗಳನ್ನು, ಎಂದರೆ ಒಂದನೆಯ ಶಿವಮಾರ, ಅವನ ಮಗ ಶ್ರೀಪುರುಷ, ಅವನ ಮಗ ರಣವಿಕ್ರಮ, ರಣವಿಕ್ರಮನ ಮಗ ರಾಚಮಲ್ಲ ಎಂದು ತಿಳಿಸುವುದೊಂದು ವಿಶೇಷ. ಉಳಿದಂತೆ ಈ ಪೀಳಿಗೆ ಶಿಲಾಶಾಸನಗಳಲ್ಲಿ ಕಂಡುಬರುವುದಿಲ್ಲ. ಆದ್ದರಿಂದಲೇ ಗಂಗರ ವಂಶಾವಳಿಯನ್ನು ಗುರುತಿಸಲು ಶಿಲಾಶಾಸನಗಳಿಗಿಂತ ಹೆಚ್ಚಾಗಿ ತಾಮ್ರಶಾಸನಗಳೇ ಆಧಾರ.
ಕೂಟಶಾಸನಗಳು
ಬದಲಾಯಿಸಿಗಂಗರ ತಾಮ್ರ ಶಾಸನಗಳು ಹೆಚ್ಚಾಗಿದ್ದರೂ ಅವುಗಳ ನೈಜತೆಯ ವಿಷಯದಲ್ಲಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ರೈಸ್ ತನಗೆ ದೊರೆತ ತಾಮ್ರಶಾಸನಗಳೆಲ್ಲವನ್ನೂ ಸಾಮಾನ್ಯವಾಗಿ ನೈಜವೆಂದೇ ಪ್ರತಿಪಾದಿಸಿದರೆ, ಫ್ಲೀಟ್ ಮೊದಮೊದಲು ಈ ಎಲ್ಲ ಶಾಸನಗಳೂ ಕೂಟಶಾಸನಗಳೆಂದೇ ಹೇಳಿದ. ಆದರೆ ಕಡೆಗೆ ಪೆನುಗೊಂಡೆ ತಾಮ್ರಶಾಸನವೇ ಮೊದಲಾದ ಕೆಲವನ್ನಾದರೂ ನೈಜವೆಂದು ಫ್ಲೀಟ್ ಒಪ್ಪಿಕೊಳ್ಳಬೇಕಾಯಿತು. ಈಚೆಗೆ ಗಂಗರ ಹಲವು ತಾಮ್ರಶಾಸನಗಳೂ ದೊರೆತಿರುವುದರಿಂದ ಇವುಗಳ ತೌಲನಿಕ ಅಧ್ಯಯನದಿಂದ ನೈಜ ಮತ್ತು ಕೂಟಶಾಸನಗಳನ್ನು ಬೇರ್ಪಡಿಸುವುದು ಈಗ ಸಾಧ್ಯವಾಗಿದೆ. ಹೀಗೆ ಪರಿಶೀಲಿಸಿದಾಗ ಅವುಗಳಲ್ಲಿ ಕೆಲವಾದರೂ ಕೂಟಶಾಸನಗಳಿರಬೇಕೆಂಬುದು ವ್ಯಕ್ತವಾಗುತ್ತದೆ. ಇಂಥ ಶಾಸನಗಳಲ್ಲಿ ಗಂಗರ ವಂಶಾವಳಿಯನ್ನು ಸರಿಯಾಗಿ ಕೊಟ್ಟಿದ್ದರೂ ಲಿಪಿ, ಭಾಷೆ, ಕೊಟ್ಟಿರುವ ಕಾಲ ಮುಂತಾದವುಗಳಲ್ಲಿಯೂ, ಶಾಸನಗಳನ್ನು ಕೊರೆದಿರುವ ರೀತಿ, ಹಲಗೆಗಳ ಆಕಾರಗಳಲ್ಲಿಯೂ ಅವು ಹುಟ್ಟಿತೆಂದು ಹೇಳಲಾದ ಕಾಲದ್ದಲ್ಲದೆ ಬೇರೆಯ ಕಾಲದವಾಗಿರುತ್ತವೆ. ಸು. 5ನೆಯ ಶತಮಾನದಲ್ಲಿದ್ದ 1ನೆಯ ಮಾಧವನದೆಂದು ತಿಳಿಸುವ ನಂದಿಯ ತಾಮ್ರಶಾಸನದ ಲಿಪಿ ಒಂಬತ್ತನೆಯ ಶತಮಾನದ್ದಕ್ಕಿಂತ ಹಿಂದೆ ಹೋಗಲಾರದು; ಕನ್ನಡ ಬೆರೆತ ಸಂಸ್ಕೃತ ಭಾಷೆ, ಅದರಲ್ಲಿಯ ಹೇರಳವಾದ ವ್ಯಾಕರಣ ದೋಷಗಳು, ಕಂಡರಿಸಿರುವ ಒರಟು ರೀತಿ-ಇವುಗಳನ್ನು ನೋಡಿದಾಗ ಇವು ಗಂಗರ ಆಸ್ಥಾನದಲ್ಲಿದ್ದ ವಿಶ್ವಕರ್ಮರಿಂದ ರಚಿತವಾದವೇ? ಎಂಬ ಸಂದೇಹ ಬರುತ್ತದೆ. ತಗಡೂರು, ತಂಜಾವುರು, ಕೂಡಲೂರುಗಳಲ್ಲಿ ದೊರೆತ-ಹರಿವರ್ಮನವೆಂದು ಹೇಳಿಕೊಳ್ಳುವ-ಶಾಸನಗಳು, ಮಡಿಕೇರಿಯಲ್ಲಿ ದೊರೆತ ಅವಿನೀತನ ತಾಮ್ರ ಶಾಸನ ಮುಂತಾದವನ್ನು ಈ ಗುಂಪಿಗೆ ಸೇರಿಸಬಹುದು. ಗಂಗರ ತಾಮ್ರಶಾಸನಗಳಲ್ಲಿ ಸುಮಾರು 12 ರಿಂದ 15 ರ ವರೆಗೆ ಇಂಥ ಕೂಟಶಾಸನಗಳಿರಬಹುದೆಂದು ಈಗ ವಿದ್ವಾಂಸರು ಒಪ್ಪುತ್ತಾರೆ.
ಉತ್ತನೂರು ಎಂಬಲ್ಲಿ ಗಂಗ ದುರ್ವಿನೀತನ ಮೂವತ್ತನೆಯ ವರ್ಷದ ಆಳ್ವಿಕೆಯ ಎರಡು ತಾಮ್ರಶಾಸನಗಳು ದೊರೆತಿವೆ. ಒಂದನ್ನು ಸುಂದರವಾಗಿ ತಪ್ಪಿಲ್ಲದಂತೆ ಕಂಡರಿಸಲಾಗಿದ್ದು, ಅದು ನೈಜಶಾಸನದ ಎಲ್ಲ ಲಕ್ಷಣಗಳನ್ನೂ ಪಡೆದಿದ್ದರೆ, ಇನ್ನೊಂದು ಒರಟಾದ ಕೆತ್ತನೆಯಿಂದ ಕೂಡಿದ್ದು, ಕೂಟಶಾಸನದ ಲಕ್ಷಣಗಳನ್ನೂ ಒಳಗೊಂಡಿದೆ. ಆದರೆ ಈ ಎರಡು ಶಾಸನಗಳಲ್ಲಿಯೂ ಬರುವ ವಿಷಯ ಒಂದೇ; ಒಂದೇ ದಾನದ ವಿಷಯವನ್ನೇ ಎರಡೂ ತಿಳಿಸುತ್ತವೆ. ಆದ್ದರಿಂದ ಕೂಟಶಾಸನವೆಂದು ಕಂಡುಬರುವ ತಾಮ್ರಶಾಸನವನ್ನು ದಾನ ಪಡೆದವರ ವಂಶದವರು ಮುಂದೆ ಯಾವಾಗಲೋ ತಮ್ಮ ದಾಖಲೆಗಾಗಿ ಮೂಲಶಾಸನದಿಂದ ಪ್ರತಿ ಮಾಡಿಸಿಕೊಂಡಿದ್ದಿರಬೇಕೆಂಬುದು ಸ್ಪಷ್ಟ. ಈಗ ಕೂಟಶಾಸನಗಳೆಂದು ಸ್ಪಷ್ಟವಾಗಿರುವ ತಾಮ್ರಶಾಸನಗಳಲ್ಲಿ ಕೆಲವಾದರೂ ಇಂಥ ಪ್ರತಿಗಳಾಗಿರಬಹುದು.
ತಾಮ್ರಶಾಸನಗಳು
ಬದಲಾಯಿಸಿಇವರ ತಾಮ್ರಶಾಸನಗಳು ಮೂರರಿಂದ ಏಳು ಹಲಗೆಗಳವರೆಗೆ ಇರುತ್ತವೆ. ಮೊದಮೊದಲಿನ ಶಾಸನಗಳ ಹಲಗೆಗಳ ಅಗಲ ಕಿರಿದಾಗಿದ್ದು ಓಲೆಗರಿಯಾಕಾರದಲ್ಲಿವೆ. ಹಲಗೆಯ ಒಂದೊಂದು ಮುಖದ ಮೇಲೂ ಸ್ಫುಟವಾಗಿ ಹಳಗನ್ನಡ ಲಿಪಿಯಲ್ಲಿ ಕಡೆದ 4 ಅಥವಾ 5 ಪಂಕ್ತಿಗಳಿವೆ. ಮುಂದೆ ಕ್ರಮೇಣ ಹಲಗೆಯ ಅಗಲ ಹೆಚ್ಚಾಗಿದೆ. ಸಾಲುಗಳು ಹೆಚ್ಚಿವೆ. ಒಕ್ಕಣೆ ಬೆಳೆದಿದೆ. ಶಾಸನದ ಹಲಗೆಗಳನ್ನು ಎಡಭಾಗದಲ್ಲಿರುವ ರಂಧ್ರಗಳ ಮೂಲಕ ಹಾದುಗೋಗುವ ಒಂದು ಬಳೆಯಿಂದ ಬಂಧಿಸಿ ಬಳೆಯ ತುದಿಗಳನ್ನು ಜೋಡಿಸಿ ಆನೆಯ ಮುದ್ರೆ ಹಾಕಲಾಗುತ್ತಿತ್ತು. ಲಿಪಿ ಆಯಾ ಶತಮಾನದ ಕನ್ನಡದಲ್ಲಿದ್ದರೂ ಭಾಷೆ ಸಂಸ್ಕೃತ, ಪ್ರೌಢ ಶೈಲಿಯ ಗದ್ಯ; ಶಾಸನಗಳ ಒಕ್ಕಣೆ ಒಂದೇ ಬಗೆ. ನೈಜಶಾಸನಗಳಲ್ಲಿ ಮೊದಮೊದಲಿನ ತಾಮ್ರಶಾಸನಗಳು ಪೂರ್ತಿಯಾಗಿ ಸಂಸ್ಕೃತದಲ್ಲಿದ್ದರೂ ದುರ್ವಿನೀತನಿಂದೀಚೆಗೆ ದಾನ ಕೊಟ್ಟ ಗ್ರಾಮದ ಎಲ್ಲೆಯನ್ನು ತಿಳಿಸುವಾಗ ಒಮ್ಮೊಮ್ಮೆ ಕನ್ನಡವನ್ನು ಬಳಸುವ ರೂಢಿ ಬಳಕೆಗೆ ಬಂತು. ಗಂಗ ದುರ್ವೀನೀತನ ಆಳ್ವಿಕೆಯ ನಾಲ್ಕನೆಯ ವರ್ಷದ, ಪೆಣ್ಣೂರು ತಾಮ್ರಶಾಸನದಲ್ಲಿ ಕೊನೆಯ ಒಂದು ವಾಕ್ಯ ಮಾತ್ರ ಕನ್ನಡದಲ್ಲಿದೆ-ಶಾಸನವನ್ನು ಕಂಡರಿಸಿದ ಚೋಮತ್ತಟ್ಟಾರನಿಗೆ ಕೊಟ್ಟ ದತ್ತಿಯನ್ನು ತಿಳಿಸುವ
ಮುಕ್ಕಣ್ಡಕತ್ತು ಮಣುಮ್ಮನೆಯುಮ್ಪಾೞುಮ್ಪಟ್ಟಿಯುನ್ತರಕ್ಕುಮ್ ಒಡೆಅನ್
ಎಂಬ ವಾಕ್ಯ ಆ ಕಾಲದ ಕನ್ನಡದ ಸ್ವರೂಪವನ್ನು ಚೆನ್ನಾಗಿ ಪ್ರತಿಬಿಂಬಿಸುತ್ತದೆ.
ಸಾಮಾನ್ಯವಾಗಿ ಈ ಶಾಸನಗಳು ಆರಂಭವಾಗುವುದು ಸ್ವಸ್ತಿಜಿತಂ ಭಗವತಾ ಎಂದು. ಮುಂದೆ ಕೊಂಗುಣಿವರ್ಮನಿಂದ, ತಾಮ್ರಶಾಸನವನ್ನು ಹಾಕಿಸಿದ ರಾಜನವರೆಗೆ ವಂಶಾವಳಿಯನ್ನು ವಿವರಿಸುತ್ತದೆ. ಗ್ರಾಮಗಳನ್ನು ದಾನವಾಗಿ ಕೊಟ್ಟ ವಿಷಯವನ್ನು ನಿರೂಪಿಸಿರುವುದೇ ಹೆಚ್ಚು. ಶಾಸನಗಳನ್ನು ಕೊರೆಯುತ್ತಿದ್ದವನ ಬಗ್ಗೆ ವಿಶ್ವಕರ್ಮಾಚಾರ್ಯ ಎಂಬ ಅವನ ಅಧಿಕಾರದ ಹೆಸರನ್ನೇ ತಿಳಿಸುತ್ತಿದ್ದರೂ ಒಮ್ಮೊಮ್ಮೆ ಅವನ ಹೆಸರನ್ನು ಕೊಡುತ್ತಿದ್ದುದುಂಟು.
ಗಂಗರ ತಾಮ್ರಶಾಸನಗಳ ರೀತಿ, ಲಿಪಿಯ ಬೆಳವಣಿಗೆ, ಅದರ ಸೌಂದರ್ಯ-ಇವಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು:
- ಕೃಷ್ಣವರ್ಮನ ಕುಡಿಥಿಯಂ ದಾನ ಶಾಸನ,
- ಅವಿನೀತನ ಹೊಸಕೋಟೆಯ ತಾಮ್ರಶಾಸನ,
- ದುರ್ವಿನೀತನ ಪೆಣ್ಣೂರು ದಾನಶಾಸನ, ಗುಮ್ಮರೆಡ್ಡಿಪುರ ಶಾಸನ,
- ಸುಂದರವಾದ ಲಿಪಿಯುಳ್ಳ, 1ನೆಯ ಶಿವಮಾರನ 713 ರ ಹಲ್ಲೆಗೆರೆ ತಾಮ್ರಶಾಸನ,
- ಶ್ರೀಪುರುಷನ ಆಳ್ವಿಕೆಯ ಮೊದಲನೆಯ ವರ್ಷದ ಬಾರದೂರು ದಾನಶಾಸನ, ಇಪ್ಪತ್ತೈದನೆಯ ವರ್ಷದ ಜಾವಳಿ ಶಾಸನ, ಐವತ್ತನೆಯ ವರ್ಷದ ದೇವರಹಳ್ಳಿ ಶಾಸನ,
- 1ನೆಯ ರಾಚಮಲ್ಲನ ಆಳ್ವಿಕೆಯ ಮೊದಲನೆಯ ವರ್ಷದ (819) ಪೆರ್ಜರಂಗಿ ದಾನಶಾಸನ ಇವು ಕೆಲವು.
ಅತ್ಯಂತ ವಿಸ್ತಾರವಾದ ಶಾಸನ: ಇವುಗಳಲ್ಲೆಲ್ಲ ಮಾರಸಿಂಹನ, ಏಳು ಹಲಗೆಗಳಿರುವ, ಕೂಡಲೂರು ಶಾಸನ ಮಾದರಿಯಾದ್ದು ಮತ್ತು ಚಾರಿತ್ರಿಕವಾಗಿ ಅಮೂಲ್ಯವಾದ್ದು. 963 ರಲ್ಲಿ ಹುಟ್ಟಿದ ಈ ಶಾಸನ ಭಾಷೆ, ಲಿಪಿ ಎಲ್ಲದರಲ್ಲಿಯೂ ಸುಂದರವಾಗಿದೆ. ಚೌಕನಾಗಿರುವ ಇದರ ಆನೆಯ ಮುದ್ರೆಯೂ ಆಕರ್ಷಕವಾಗಿದೆ. ಅದರ ಕೆಳಗೆ ಶ್ರೀಮಾರಸಿಂಘದೇವ ಎಂಬ ರಾಜನ ಅಂಕಿತವೂ ಇದೆ. ಮಾರಸಿಂಹನ ಸಂಪೂರ್ಣವಾದ ವಂಶಾವಳಿಯಿದೆ. ಒಬ್ಬೊಬ್ಬ ರಾಜನಿಗೂ ದೀರ್ಘವಾದ ವಿವರಗಳುಂಟು. ಇದೇ ಗಂಗರ ಶಾಸನಗಳಲ್ಲೆಲ್ಲ ಅತ್ಯಂತ ವಿಸ್ತಾರವಾದ ಶಾಸನವೆಂದು ಹೇಳಬಹುದು. ಇದೇ ರಾಜನ ಇದೇ ರೀತಿಯ ಇನ್ನೊಂದು ತಾಮ್ರಶಾಸನ-ಧಾರವಾಡ ಜಿಲ್ಲೆಯಲ್ಲಿ ಈಚೆಗೆ ದೊರೆತಿದೆ.
ಶಿಲಾಶಾಸನಗಳು
ಬದಲಾಯಿಸಿಹಿಂದೆಯೇ ತಿಳಿಸಿದಂತೆ ಗಂಗರ ಮೊದಲ ರಾಜರುಗಳ ಶಿಲಾಶಾಸನಗಳೂ ಹೆಚ್ಚಾಗಿ ದೊರೆತಿಲ್ಲ. ಶ್ರೀಪುರುಷನಿಗಿಂತ ಹಿಂದಿನ ಕೇವಲ ನಾಲ್ಕು ಶಾಸನಗಳು ಮಾತ್ರ ದೊರೆತಿವೆ. ಗಂಗರ ತಾಮ್ರಶಾಸನಗಳ ನೈಜತೆಯನ್ನು ಶಂಕಿಸುವುದಕ್ಕೆ ಫ್ಲೀಟನಿಗೆ ಇದೂ ಒಂದು ಕಾರಣ. ಶ್ರೀಪುರುಷ ಪಟ್ಟಕ್ಕೆ ಬಂದ ವರ್ಷದಿಂದಲೇ ಶಿಲಾಶಾಸನಗಳೂ ವೀರಗಲ್ಲೂಗಳೂ ದೊರೆಯಲಾರಂಭಿಸುತ್ತವೆ. ಇವುಗಳ ಸಂಖ್ಯೆ ಮುಂದೆ ಬೆಳೆಯುತ್ತ ಹೋಗುತ್ತದೆ. ಈ ಶಾಸನಗಳೂ, ವೀರಗಲ್ಲುಗಳೂ ಹೆಚ್ಚಾಗಿ ಕಗ್ಗಲ್ಲಿನ ಮೇಲೆಯೇ ಇವೆ. ಇವರ ಪ್ರಾಚೀನ ಶಿಲಾಶಾಸನಗಳಲ್ಲೊಂದಾದ, ನಿರ್ವಿನೀತನ ಸಿರಿಗುಂದದ ಶಾಸನವನ್ನು ಬಳಪದ ಕಲ್ಲಿನ ತೆಳುಹಲಗೆಯ ಮೇಲೆ ಕಂಡರಿಸಿದೆ; ಹಾಗೆಯೇ ಚಾವುಂಡರಾಯನ ಪ್ರತಾಪವನ್ನು ವರ್ಣಿಸುವ ಶಾಸನವಿರುವ ತ್ಯಾಗದ ಬ್ರಹ್ಮದೇವರ ಕಂಬವೂ ಬಳಪದ ಕಲ್ಲಿನದು. ತಲಕಾಡಿನಲ್ಲಿ ದೊರೆತ ಶ್ರೀಪುರುಷನ ರಾಜ್ಯಾಡಳಿತದ ಒಂದನೆಯ ವರ್ಷದ ಶಿಲಾಶಾಸನದಂತೆ ನಯಗೊಳಿಸಿದ ದೊಡ್ಡದಾದ ಶಿಲಾಫಲಕದ ಮೇಲೆ ಸುಂದರವಾಗಿ ಕಂಡರಿಸಿರುವ ಶಾಸನಗಳು ಕೆಲವಿದ್ದರೂ ಸಾಮಾನ್ಯವಾಗಿ ಒರಟು ಬಂಡೆಯ ಮೇಲೋ ಹದಗೊಳಿಸದ ಕಲ್ಲಿನ ಹಲಗೆಗಳ ಮೇಲೋ ಉಬ್ಬು ತಗ್ಗುಗಳ ನಡುವೆಯೇ ಕೊರೆದಿರುವುದೇ ಹೆಚ್ಚು. ಆದರೂ ಅಕ್ಷರಗಳೂ ದೊಡ್ಡವೂ ಆಳವೂ ಆಗಿರುವುದರಿಂದ ಅವನ್ನು ಗುರುತಿಸಲು ಹೆಚ್ಚು ತೊಂದರೆ ಆಗದು. ಇವುಗಳಲ್ಲಿ ಹೆಚ್ಚು ವಿಷಯ ಇರುವುದಿಲ್ಲ. ಭಾಷೆ ಕನ್ನಡವೇ ಆದರೂ ಆಗಿನ ಆಡುನುಡಿಗಳನ್ನು ಹೆಚ್ಚು ಬಳಸುತ್ತಿದ್ದುದರಿಂದಲೋ, ಆಗಿನ ಅನೇಕ ಪಾರಿಭಾಷಿಕ ಪದಗಳು ಈಗ ಬಳಕೆಯಲ್ಲಿಲ್ಲದಿರುವುದರಿಂದಲೋ, ಬರವಣಿಗೆಯಲ್ಲಿ ತಪ್ಪು ಹೆಚ್ಚಾಗಿರುವುದರಿಂದಲೋ ಎಷ್ಟೋವೇಳೆ ಈ ಶಾಸನಗಳೂ ಅರ್ಥಕ್ಕೆ ನಿಲುಕುವುದಿಲ್ಲ. ಮಂಡ್ಯ ತಾಲ್ಲೂಕಿನ ತಾಯಲೂರು ಶಾಸನ, ಶ್ರೀರಂಗಪಟ್ಟಣ ತಾಲ್ಲೂಕಿನ ಕ್ಯಾತನಹಳ್ಳಿ ಶಾಸನ ಮುಂತಾದವುಗಳಲ್ಲಿರುವಂತೆ ಶಾಸನದ ಕಲ್ಲಿನ ಮೇಲೆ ಗಂಗರ ವಂಶಲಾಂಛನವಾದ ಆನೆಯ ಚಿತ್ರವನ್ನು ಬಿಡಿಸುವುದುಂಟು. ಕೊಡಗಿನ ಬಳಿಯೂರು ಪೆಗ್ಗೂರುಗಳಲ್ಲಿ ದೊರೆತ ಗಂಗ ಶಾಸನಗಳ ಮೇಲ್ಬಾಗದಲ್ಲಿ ಆನೆಯೊಂದಿಗೆ ಕಲಶ, ದೀಪಸ್ತಂಭ, ಮುಕ್ಕೊಡೆಗಳ ಶಿಲ್ಪವನ್ನೂ ನೋಡಬಹುದು.
ಕಂಬ ಶಾಸನಗಳು
ಬದಲಾಯಿಸಿಗಂಗರ ಕೆಲವು ಕಂಬ ಶಾಸನಗಳೂ ಉಂಟು. ಇವುಗಳಲ್ಲಿ ಶ್ರವಣಬೆಳಗೊಳದ ಕೂಗೆಬ್ರಹ್ಮದೇವರ ಕಂಬದ ಬುಡದಲ್ಲಿರುವ ಮಾರಸಿಂಹನ ಶಾಸನ ಗಂಗರ ಶಿಲಾಶಾಸನಗಳಲ್ಲಿಯೇ ಉದ್ದವಾದ್ದೆನ್ನಬಹುದು. ಇದು ಮಾರಸಿಂಹ ತೀರಿಕೊಂಡ ಅನಂತರ ಅವನ ನೆನಪಿಗಾಗಿ ನಿಲ್ಲಿಸಿರುವ ಶಾಸನಗಂಬ.[೧] ಈ ದೊಡ್ಡ ಶಾಸನದಲ್ಲೂ ಮಾರಸಿಂಹನ ವಂಶಾವಳಿಯನ್ನು ತಿಳಿಸಿಲ್ಲ. ತನ್ನ ಜೀವಿತಕಾಲದಲ್ಲಿ ಮಾರಸಿಂಹ ನಡೆಸಿದ ಯುದ್ಧಗಳನ್ನು ಮತ್ತು ಅವನ ಸಾಧನೆಗಳನ್ನು ಹೃದಯಂಗಮವಾಗಿ ಚಿತ್ರಿಸಿದೆ. ತ್ಯಾಗದ ಬ್ರಹ್ಮದೇವರ ಕಂಬ ಇನ್ನೊಂದು. ರಾಚಮಲ್ಲನ ಮಂತ್ರಿ ಚಾವುಂಡರಾಯನ ಗುಣಗಾನ ಮಾಡುವ ಈ ಕಂಬದ ಮೇಲಿನ ಶಾಸನವನ್ನು ಮೂರು ಮುಖಗಳ ಮೇಲೆ ಕೆತ್ತಿ ಹಾಕಿರುವುದು ಶೋಚನಿಯ.
ವೀರಗಲ್ಲುಗಳು
ಬದಲಾಯಿಸಿಗಂಗರ ಕಾಲದ ವೀರಗಲ್ಲುಗಳು ತಮ್ಮದೇ ಆದ ವೈಶಿಷ್ಟ್ಯ ಹೊಂದಿವೆ.[೨] ಇವರ ಕಾಲದ ದಾನಶಾಸನಗಳಿಗಿಂತ ವೀರಗಲ್ಲಿನ ಶಾಸನಗಳ ಸಂಖ್ಯೆಯೇ ಹೆಚ್ಚೆಂದು ಹೇಳಬಹುದು. ಸಾಂಪ್ರದಾಯಿಕವಾದ, ಮೂರು ಅಂತಸ್ತುಗಳ ವೀರಗಲ್ಲುಗಳು ಕೆಲವಿವೆ. ಅವುಗಳಲ್ಲಿ ಎಳ್ಳಂಬಳಸೆಯ ವೀರಗಲ್ಲು ದೊಡ್ಡದಾಗಿಯೂ ಅತ್ಯಂತ ಸುಂದರವಾಗಿಯೂ ಇದೆ. ಬೂದುಬಣ್ಣದ ಕಗ್ಗಲ್ಲಿನಲ್ಲಿ ಈಗ ತಾನೆ ಕಡೆದು ನಿಲ್ಲಿಸಿರುವಷ್ಟು ಹೊಸದಾಗಿ ಕಾಣಿಸುವ ಈ ವೀರಗಲ್ಲಿನ ಮೊದಲ ಅಂತಸ್ತು ವೀರರು ಯುದ್ಧದಲ್ಲಿ ತೊಡಗಿರುವುದನ್ನು, ಎರಡನೆಯದು ಅವರು ಅಪ್ಸರೆಯರ ತೋಳತೆಕ್ಕೆಯಲ್ಲಿ ಸ್ವರ್ಗದೆಡೆಗೆ ಹಾರುತ್ತಿರುವುದನ್ನೂ, ಮೇಲಿನ ಅಂತಸ್ತು ಸ್ವರ್ಗದಲ್ಲಿ ಸುಖಾಸೀನರಾಗಿ ಕುಳಿತಿರುವ ನಾಲ್ವರು ವೀರರನ್ನು ಚಿತ್ರಿಸಿದೆ. ಅಡ್ಡಪಟ್ಟಿಕೆಗಳಲ್ಲಿ ಶ್ರೀಪುರುಷ, ಶಿವಮಾರ ಮೊದಲಾದವರು ತೀರಿಕೊಂಡ ವಿಷಯವನ್ನು ತಿಳಿಸುವ ಶಾಸನವಿದೆ. ಆದರೂ ಇವರ ವೀರಗಲ್ಲುಗಳು ಒರಟು ಹಾಸುಗಲ್ಲಗಳ ಮೇಲಿರುವುದೇ ಹೆಚ್ಚು. ಎಷ್ಟೋ ವೇಳೆ ಈ ಹಾಸುಗಲ್ಲುಗಳಿಗೆ ನಿರ್ದಿಷ್ಟವಾದ ಆಕಾರ, ಅಳತೆ ಇರುವುದಿಲ್ಲ. ಬಂಡೆಯಿಂದ ಸಿಡಿಸಿದ ಈ ಹಲಗೆಗಳು ಯಾವ ಆಕಾರದಲ್ಲಿದ್ದರೆ ಹಾಗೆಯೇ ಅವನ್ನು ಕಂಡರಿಸಲು ಉಪಯೋಗಿಸಿದ್ದಾರೆ. ಶಿಲ್ಪವನ್ನು ಶಾಸನವನ್ನು ಕಂಡರಿಸಿರುವ ಮುಖವನ್ನು ಕೂಡ ನಯಗೊಳಿಸಿರುವುದಿಲ್ಲ. ಇದರಲ್ಲಿ ಹೆಚ್ಚು ಭಾಗ ವೀರರ ಆಕೃತಿಗಳಿಗಾಗಿ ಮೀಸಲು-ಒಂದೇ ಅಂತಸ್ತಿನಲ್ಲಿ ಕತ್ತಿ ಗುರಾಣಿಗಳನ್ನು ಹಿಡಿದ ವೀರರು ಒಬ್ಬರನ್ನೊಬ್ಬರು ಎದುರಿಸುತ್ತಿರುವಂತೆಯೋ, ಆನೆಕುದುರೆಗಳ ಮೇಲೆ ಕುಳಿತು ಯುದ್ಧ ಮಾಡುತ್ತಿರುವಂತೆಯೋ ತೆಳುವುಬ್ಬು ಶಿಲ್ಪದಲ್ಲಿ ಬಿಡಿಸಿದ್ದು ಭಾವಯುಕ್ತವಾಗಿರುತ್ತವೆ. ಈ ಶಿಲ್ಪದ ಸುತ್ತಲೂ ಯುದ್ಧದ ವಿಷಯವನ್ನು ತಿಳಿಸುವ ಒಂದು ಶಾಸನ. ಹಿರೆಗುಂಡುಗಲ್ಲಿನಲ್ಲಿ ಇಂಥ ಇಪ್ಪತ್ತಕ್ಕೂ ಹೆಚ್ಚು ವೀರಗಲ್ಲುಗಳ ಒಂದು ದೊಡ್ಡ ಗುಂಪೇ ಇದೆ. ರಾಷ್ಟ್ರಕೂಟರಿಗೂ ಗಂಗ ಶ್ರೀಪುರುಷ, ಶಿವಮಾರರಿಗೂ ಬೇರೆಬೇರೆ ಕಡೆ ನಡೆದ ಯುದ್ಧಗಳಲ್ಲಿ ಮಡಿದ ವೀರರ ಸ್ಮಾರಕವಾಗಿ ಇವು ನಿಂತಿವೆ. ಈಗ ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರುವ, ಬೇಗೂರಿನದಾದ, ಏಳು ಅಡಿ ಉದ್ದ ಏಳು ಅಡಿ ಅಗಲ ಇರುವ ದೊಡ್ಡದೊಂದು ವೀರಗಲ್ಲು, ಗಂಗ ಎೞೆಯಪ್ಪನಿಗೂ ನೊಳಂಬರ ವೀರಮಹೇಂದ್ರನಿಗೂ ನಡೆದ ಯುದ್ಧ ಮಾಡಿ, ತುಂಬೆಪಾಡಿಯಲ್ಲಿ ಗಂಗರ ಸಾಮಂತನಾಗಿದ್ದ ನಾಗತ್ತರ ಶತ್ರವಿನ ಆನೆಯನ್ನೆದುರಿಸಿ ತುಮುಲ ಯುದ್ಧದಲ್ಲಿ ಮಡಿದ ವಿಷಯವನ್ನು ತಿಳಿಸುತ್ತದೆ. ಶಾಸನದ ಕೆಳಗೆ ವಿಸ್ತಾರವಾಗಿ ಬಿಡಿಸಿರುವ ಯುದ್ಧದ ನೈಜಚಿತ್ರಣ, ಅದಕ್ಕೆ ಸೇರಿದಂತೆಯೇ-ಮೇಲ್ಭಾಗದಲ್ಲಿ-ಯುದ್ಧದಲ್ಲಿ ಮಡಿದ ನಾಗತ್ತರ ಸ್ವರ್ಗದಲ್ಲಿ ಕುಳಿತು ಅಪ್ಸರೆಯರ ನೃತ್ಯವನ್ನೀಕ್ಷಿಸುತ್ತಿರುವ ದೃಶ್ಯ ಅನ್ಯಾದೃಶ್ಯವಾದ್ದು. ಯುದ್ಧದಲ್ಲಿ ಸತ್ತ ವೀರರಿಗಷ್ಟೆ ಅಲ್ಲ, ರಾಜರಿಗಾಗಿ, ವೇಳೆಗೊಂಡು ಸತ್ತ ವೀರರಿಗಾಗಿ ನಿಲ್ಲಿಸಿರುವ ವೀರಗಲ್ಲುಗಳೂ ಹಲವಿದೆ. ನೀತಿಮಾರ್ಗ ಸ್ವರ್ಗಸ್ಥನಾದಾಗ, ಅವನ ಮನೆಮಗತಿಯಾಗಿದ್ದ ಅಗರಯ್ಯ ಕೀಱುಂಠೆಯಾಗಿ ಅವನೊಂದಿಗೆ ಸಾವನಪ್ಪಿದ ವಿಷಯವನ್ನು ದೊಡ್ಡಹುಂಡಿಯ ವೀರಗಲ್ಲೊಂದು ತಿಳಿಸುತ್ತದೆ. ಪರ್ಯಾಂಕದ ಮೇಲೆ ಮಲಗಿರುವ ರಾಜನನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಅಗರಯ್ಯ ಸಾಯಲು ಸಿದ್ಧವಾಗಿರುವಂತೆ ಆ ಶಾಸನದ ಮೇಲಿರುವ ಶಿಲ್ಪದಲ್ಲಿ ಬಿಡಿಸಿದೆ. ರಾಚಮಲ್ಲ ಕುಂಬಳೆಯಲ್ಲಿ ಸ್ವರ್ಗಸ್ಥನಾದಾಗ ಬೆದನ್ತೆರಾಚಯ ಎನ್ನುವರು ಕಿಚ್ಚು ಹೊಕ್ಕುದನ್ನೂ ಗಂಗ ಚನ್ದಿಯಮ್ಮರಸ ಕಾಲವಾದಾಗ ಅಲ್ಲಿಗ ಕೀಱೊಂಠೆಯಾದ್ದನ್ನೂ ವೀರಗಲ್ಲುಗಳು ತಿಳಿಸುತ್ತವೆ. ಆತಕೂರಿನಲ್ಲಿ ದೊರೆತ ದೊಡ್ಡದೊಂದು ವೀರಗಲ್ಲು ಸ್ವಾರಸ್ಯವಾದ್ದು. ಗಂಗಬೂತುಗ ರಾಷ್ಟ್ರಕೂಟರೊಡನೆ ಸೇರಿ ಚೋಳ ರಾಜಾದಿತ್ಯನ ಮೇಲೆ ತಕ್ಕೊಲದಲ್ಲಿ ಯುದ್ಧ ಮಾಡಿದಾಗ ಮನಾಲರನೆಂಬ ವೀರ ತೋರಿಸಿದ ಶೌರ್ಯಕ್ಕೆ ಮೆಚ್ಚಿ ಬೇಡಿಕೊ ಎಂದಾಗ, ಕಾಳಿ ಎಂಬ ಬೇಟೆನಾಯಿಯನ್ನು ಮನಾಲರ ಕೇಳಿ ಪಡೆಯುತ್ತಾನೆ. ಒಮ್ಮೆ ಆ ನಾಯಿಯನ್ನು ಕಾಡುಹಂದಿಯೊಂದರ ಮೇಲೆ ಬಿಟ್ಟಾಗ ನಾಯಿಯೂ ಹಂದಿಯೂ ಒಡಸಾಯುತ್ತವೆ. ಮನಾಲರ ಆ ನಾಯಿಗಾಗಿ ವೀರಗಲ್ಲನ್ನು ನಿಲ್ಲಿಸಿ ಅದರ ಪೂಜೆಗಾಗಿ ಭೂಮಿದಾನ ಮಾಡಿದ್ದಾನೆ. ಶಾಸನದ ಮೇಲೆ ನಾಯಿ ಹಂದಿಗಳು ಕಚ್ಚಾಡುತ್ತಿರುವ ಶಿಲ್ಪವಿದೆ.[೩][೪][೫][೬]
ಉಲ್ಲೇಖಗಳು
ಬದಲಾಯಿಸಿ
ಗ್ರಂಥಸೂಚಿ
ಬದಲಾಯಿಸಿ- Adiga, Malini (2006) [2006]. The Making of Southern Karnataka: Society, Polity and Culture in the early medieval period, AD 400–1030. Chennai: Orient Longman. ISBN 81-250-2912-5.
- Sarma, I.K. (1992) [1992]. Temples of the Gangas of Karnataka. New Delhi: Archaeological Survey of India. ISBN 0-19-560686-8.