ಚಾಂದಕವಟೆ

(ಚಾಂದಕವಠೆ ಇಂದ ಪುನರ್ನಿರ್ದೇಶಿತ)

ಚಾಂದಕವಟೆ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.ಚೆಂದದ ಊರು ಚಾಂದಕವಟೆ!

ಚಾಂದಕವಟೆ
ಚಾಂದಕವಟೆ
village

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಾರಿತ್ರಿಕ ಮಹತ್ವದ ಗ್ರಾಮ #ಚಾಂದಕವಟೆ! ಪಕ್ಕದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯಲ್ಲಿ ‘ಭಂಡಾರಕವಠೆ’,’ಮಾಲಕವಠೆ’, ‘ಕವಠೆ ಮಹಾಂಕಾಲ್’ ಹೀಗೆ ‘ಕವಟೆ’ ಹೆಸರಿನ ಗ್ರಾಮಗಳಿವೆ. ವಿಶೇಷತೆ ಏನೆಂದರೆ ಹಿಂದೆ ಈ ಗ್ರಾಮಗಳು ಸಹ ಕನ್ನಡಮಯವಾಗಿದ್ದ ಕುರುಹಾಗಿ ಕನ್ನಡ ಭಾಷೆಯ ಪ್ರಾಚೀನ ಶಾಸನಗಳು ಈ ಗ್ರಾಮಗಳಲ್ಲಿ ದೊರೆತಿವೆ. ಈ ಶಾಸನಗಳು ‘ಕವಟ್ಟಿಗೆ’ ‘ಗವಟ್ಟಿಗೆ’ ಎಂದೇ ಊರಿನ ಹೆಸರನ್ನು ಉಲ್ಲೇಖಿಸುವುದರಿಂದ ಈ ಚಾಂದಕವಟೆಯ ಪ್ರಾಚೀನ ಹೆಸರು ಸಹ ‘ಕವಟ್ಟಿಗೆ’ ಎಂದೇ ಇದ್ದಿರಬೇಕು.

ಇನ್ನು ‘ಚಾಂದ್’ ಪದವು ಹಿಂದಿ ಅಥವಾ ಉರ್ದು ಭಾಷೆಯ ಮೂಲದ್ದು! ‘ಚಂದ್ರ’ ನಿಗೆ ‘ಚಾಂದ್’ ಎಂದು ಕರೆಯಲಾಗುತ್ತದೆ. ಮುಸ್ಲಿಮರಲ್ಲಂತೂ ಚಾಂದ್ ಪಾಷಾ, ಚಾಂದ್ ಬೀಬಿ ಹೀಗೆ ‘ಚಾಂದ್’ ಹೆಸರಿನ ವ್ಯಕ್ತಿನಾಮಗಳು ಅನೇಕ. ಹೀಗೆ ನಮಗಂತೂ ಸ್ಥಳನಾಮದ ಹಿನ್ನೆಲೆಯ ಕುತೂಹಲ ಹೆಚ್ಚಾಗಿ, ನಿಮ್ಮೂರಲ್ಲಿ ‘ಚಾಂದ್’ ಹೆಸರಿನ ದರ್ಗಾ ಅರಾ, ಇಲ್ಲಾ, ಜಹಾಗೀರದಾರ್ ಏನಾರ ಇದ್ದುರ ಏನ್ರಿ? ಎಂದು ಸ್ಥಳೀಯರಲ್ಲಿ ವಿಚಾರಿಸುವಂತೆ ಮಾಡಿತು! ಇದಕ್ಕೆ ಸ್ಥಳೀಯರು ಪ್ರತಿಕ್ರಿಯಿಸಿ, ‘ನೋಡ್ರಿ ನಮ್ಮೂರ್ ಹೆಸರು ಚಾಂದಕವಟೆ ಅದಾ! ಇದ್ರಾಗ ‘ಚಾಂದ್’ ಅಂದುರ್ ‘ಛೆಂದ್’ ಅಂದಂಗ್! ನಮ್ಮೂರ ನೋಡ್ಲಾಕ ಭಾಳ ‘ಛೇಂದ್’ ಅದಾರಿ.ಅದಕ್ಕ ನಮ್ಮ ಹಿರಿಯರು ಈ ಊರಿಗಿ ‘ಛಂದಕವಟಿ’ ಅಂತಾ ಕರದಾರಿ. ಅದೇ ಈವಾಗ ‘ಚಾಂದಕವಟಿ’ ಆಗ್ಯಾದರಿ ಅಷ್ಟೆ’ ಎಂದು ಅಭಿಮಾನದಿಂದ ಉತ್ತರಿಸುತ್ತಾರೆ! ಈ ಊರಿನ ಚಾರಿತ್ರಿಕ ದೇಗುಲ, ಸುಕ್ಷೇತ್ರ ಪರಮಾನಂದನ ಸನ್ನಿಧಿ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದ ಇಲ್ಲಿಯ ಪರಿಸರ, ಗೌಡರ ಭವ್ಯ ಮನೆ ಹೀಗೆ ಎಲ್ಲವನ್ನೂ ನೋಡುತ್ತಾ ಹೋದರೆ ನಿಜಕ್ಕೂ ಚೆಂದದ ಊರೇ ‘ಚಾಂದಕವಟೆ’ ಎಂದಾಗಿದೆ ಎಂದು ಕೊನೆಗೆ ನೀವು ಸಹ ಉದ್ಗಾರ ತೆಗೆದರೆ ಅಚ್ಚರಿಯಿಲ್ಲ!

ಚಾಂದಕವಟೆ ಗ್ರಾಮದ ಬಸವಣ್ಣನ ಗುಡಿ ಬಳಿಯ ಬಾವಿ ಹತ್ತಿರ ಕಂಬದ ಮೇಲಿರುವ ಕ್ರಿ.ಶ.೧೦೬೮ರ ಶಾಸನವು, ಸೂರಸ್ಥ ಗಣದ ಮಾಘನಂದಿ ಭಟ್ಟಾರಕ ಜೈನಮುನಿಯು ಸಲ್ಲೇಖನ ವೃತ್ತವನ್ನು ಕೈಗೊಂಡು ಜಿನೈಕ್ಯರಾದ ಸ್ಮರಣೆಗಾಗಿ ಸಿಂದಗಿಯ ಜಾಕಿಯಬ್ಬೆಯು ನಿಷಿಧಿ ಕಲ್ಲನ್ನು ನಿಲ್ಲಿಸಿರುವ ಬಗ್ಗೆ ಪ್ರಸ್ತಾಪಿಸುತ್ತಾ, ಕೊಪ್ಪಸೆಟ್ಟಿ ಮತ್ತು ಚನ್ನಿಸೆಟ್ಟಿ ಎಂಬುವರಿಗೆ ಈ ಸ್ಮಾರಕ ಪ್ರತಿಷ್ಠಾಪನೆಯ ಉಸ್ತುವಾರಿಯನ್ನು ವಹಿಸಲಾಗಿತ್ತು ಎಂದು ದಾಖಲಿಸಿದೆ. ಈ ಶಾಸನವು ಪ್ರಸ್ತುತ ಚಾಂದಕವಟೆ ಗ್ರಾಮದ ಜೈನ ಧರ್ಮದ ಪ್ರಾಚೀನ ಕುರುಹು ಸಹ ಆಗಿದೆ!

ಊರಿನ ಮಧ್ಯದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡ, ಶಿಥಿಲಾವಸ್ಥೆಯಲ್ಲಿದ್ದರೂ ಬಹುಸುಂದರವಾಗಿ ಕಂಗೊಳಿಸುವ ಶ್ರೀ ರಾಮಲಿಂಗ ದೇಗುಲವಿದೆ! ಗರ್ಭಗೃಹ, ತೆರೆದ ಅಂತರಾಳ, ನವರಂಗವನ್ನು ಒಳಗೊಂಡಿದ್ದು, ಬಹುತೇಕ ಭಾಗವು ನಶಿಸಿದ್ದರೂ ಸಹ ಅಳಿದುಳಿದ ರಚನೆಗಳು ಕಲಾತ್ಮಕವಾದ ಶಿಲ್ಪಸೌಂದರ್ಯದಿಂದ ಕಲಾರಸಿಕರನ್ನು ಕೈಬೀಸಿ ಕರೆಯುತ್ತವೆ! ಗರ್ಭಗೃಹದಲ್ಲಿ ಮೊದಲು ಪಾಣಿಪೀಠ ಹೊಂದಿರದ ಪ್ರಾಚೀನ ಶಿವಲಿಂಗವಿತ್ತು! ಇತ್ತೀಚೆಗೆ ಈ ಶಿವಲಿಂಗಕ್ಕೆ ಕಾಂಕ್ರೀಟ್ ಪೀಠವನ್ನು ನಿರ್ಮಿಸಲಾಗಿದೆ! ಬಾಗಿಲು ಪಂಚಶಾಖಾಲಂಕೃತವಾಗಿದ್ದು ಸಿಂಹ, ಅರ್ಧಕಂಬ, ಹೂಬಳ್ಳಿ ಪಟ್ಟಿಕೆಗಳು ಕಂಡುಬರುತ್ತವೆ. ಇಕ್ಕೆಲಗಳ ತಳಭಾಗದಲ್ಲಿ ನಾಗ, ಡಮರು, ಗದೆ ಹಿಡಿದು ನಿಂತಿರುವ ಶೈವ ದ್ವಾರಪಾಲರು, ಚಾಮರ ಧಾರಿಯರು ಮತ್ತು ನದಿ ದೇವತೆಯರ ಉಬ್ಬುಶಿಲ್ಪಗಳನ್ನು ಕಂಡರಿಸಲಾಗಿದೆ.ಹೊಸ್ತಿಲಲ್ಲಿ ಆಕರ್ಷಕವಾದ ಚಂದ್ರಶಿಲೆಯಿದ್ದು, ಲಲಾಟದಲ್ಲಿನ ಉಬ್ಬುಶಿಲ್ಪವು ನಾಶವಾಗಿದೆ. ತೆರೆದ ಅಂತರಾಳದಲ್ಲಿ ಎರಡು ಅರ್ಧಕಂಬಗಳನ್ನು ನಿಲ್ಲಿಸಲಾಗಿದೆ. ನವರಂಗದಲ್ಲಿ ಎರಡು ಕಂಬಗಳು ಮತ್ತು ದೇವಕೋಷ್ಠಕಗಳು ಮಾತ್ರ ಉಳಿದಿದ್ದು, ಬಹುಭಾಗ ನಶಿಸಿದೆ. ಇತ್ತೀಚೆಗೆ ಕಾಂಕ್ರೀಟ್ ಮಂಟಪ ಹಾಗೂ ಕೊಠಡಿಯನ್ನು ನವರಂಗದಲ್ಲಿ ನಿರ್ಮಿಸಿರುವರು.ದೇವಕೋಷ್ಠಕಗಳ ಮೇಲಿರುವ ಆಕರ್ಷಕ ಕೆತ್ತನೆಯು ಗಮನಸೆಳೆಯುತ್ತದೆ. ಹೊರಭಿತ್ತಿಯ ಒಂದು ಭಾಗವು ಬಿದಿದ್ದು ಅತಿಕ್ರಮಣಕ್ಕೆ ಒಳಗಾಗಿತ್ತು. ಅತಿಕ್ರಮಣ ಮಾಡಿದವರಿಂದ ಜಾಗವನ್ನು ಖರೀದಿಸಿ ಬಿದ್ದಿರುವ ಭಾಗವನ್ನು ಜೀರ್ಣೋದ್ಧಾರ ಮಾಡಲಾಗಿದೆ ಎನ್ನುತ್ತಾರೆ ಸ್ಥಳೀಯರು.ಇಲ್ಲಿ ಕೆಲವು ಶಿಲ್ಪಗಳನ್ನು ಅಸ್ತವ್ಯಸ್ತವಾಗಿ ಜೋಡಿಸಿರುವುದು ಒಂದಷ್ಟು ಬೇಸರ ತರಿಸಬಹುದು! ಹೊರಭಿತ್ತಿಯ ಇನ್ನೊಂದು ಭಾಗವು ಮೂಲಸ್ವರೂಪದಲ್ಲಿದ್ದು, ಅಪ್ಸರೆಯರ ಆಳೆತ್ತರದ ಉಬ್ಬುಶಿಲ್ಪಗಳಿಂದ ಕೂಡಿದೆ. ವಿವಿಧ ಭಂಗಿಯಲ್ಲಿ ನೃತ್ಯ, ಸಂಗೀತವನ್ನು ನುಡಿಸುತ್ತಿರುವ ಅಪ್ಸರೆಯರ ಶಿಲ್ಪಗಳು ನಯನ ಮನೋಹರವಾಗಿದ್ದು ದೇವಾಲಯದ ಅಂದವನ್ನು ಹೆಚ್ಚಿಸಿವೆ!

ಇನ್ನು ಊರಿನ ಗೌಡರ ಮನೆಯ ಬಳಿ ಕಲ್ಲಾಲಿಂಗನ ಗುಡಿ ಎಂದು ಕರೆಯುವ ಪ್ರಾಚೀನ ದೇಗುಲವಿದ್ದು, ಗರ್ಭಗೃಹ, ಮತ್ತು ತೆರೆದ ಅಂತರಾಳ ಮಾತ್ರ ಹೊಂದಿದೆ.ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಬಾಗಿಲುವಾಡಾವು ವಿವಿಧ ಅಲಂಕಾರಿಕ ದ್ವಾರ ಶಾಖೆಗಳು, ಶೈವ ದ್ವಾರಪಾಲರು ಹಾಗೂ ಚಾಮರಧಾರಿಯರ ಉಬ್ಬುಶಿಲ್ಪಗಳಿಂದ ಕೂಡಿದೆ! ತೆರೆದ ಅಂತರಾಳದಲ್ಲಿ ಎರಡು ಶಿವಲಿಂಗಗಳು ಹಾಗೂ ನಂದಿಯ ವಿಗ್ರಹ ಕಂಡುಬರುತ್ತವೆ.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಂಡಾಯ ಘಟನೆಗಳಿಗೂ ಸಹ ಸಾಕ್ಷಿಯಾಗಿದೆ ಈ ಚಾಂದಕವಟೆ ಗ್ರಾಮ! ಈ ಊರಿನ ದೇಶಮುಖರಾಗಿದ್ದ ಬಸಲಿಂಗಪ್ಪ ರವರ ನೇತೃತ್ವದಲ್ಲಿ ಸೈನ್ಯವನ್ನು ಸ್ಥಾಪಸಿ ಬ್ರಿಟಿಷರ ವಿರುದ್ಧ ಬಂಡಾಯದ ಕಹಳೆಯ ತಯ್ಯಾರಿಯೇ ಅಂದು ನಡೆದಿತ್ತು. ಇದಕ್ಕೆ ಸುರಪುರದ ವೆಂಕಟಪ್ಪ ನಾಯಕನ ಬೆಂಬಲ ಹಾಗೂ ಸೊಲ್ಲಾಪುರದ ನಾನಾ ಸಾಹೇಬ್ ಪೇಶ್ವೆಯ ಸಹಕಾರವು ಇತ್ತು.ಕೊನೆಗೆ ಬಂಡಾಯದ ಸಂಚನ್ನು ಅರಿತ ಬ್ರಿಟಿಷರು ಬಸಲಿಂಗಪ್ಪ ದೇಶಮುಖರನ್ನು ಸೆರೆಹಿಡಿದು ಜಾಗೀರ್ ಅನ್ನು ಮುಟ್ಟುಗೋಲು ಹಾಕಿ ಬಂಡಾಯವನ್ನು ಹತ್ತಿಕ್ಕಿದರು!

ಇನ್ನು ಊರಿನಲ್ಲಿ ೧೦೦ ವರ್ಷಗಳ ಹಿಂದಿನ ಗೌಡರ ವಿಶಾಲವಾದ ಮನೆಯಿದ್ದು ಪ್ರತಿಯೊಬ್ಬರು ನೋಡಲೇಬೇಕಾದ ತಾಣವಾಗಿದೆ. ಎರಡು ಅಂತಸ್ತಿನ ಭವ್ಯವಾದ ಈ ಮನೆಯನ್ನು ಇತ್ತೀಚೆಗೆ ಇದರ ವಾರಸುದಾರರು ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಿಪೇರಿ ಮಾಡಿರುವರು.ಕಂಬಗಳಿಂದ ಕೂಡಿದ ವಿಶಾಲವಾದ ಪಡಸಾಲೆ, ಅಡುಗೆ ಮನೆ, ಬಾಲ್ಕನಿ, ಎಲ್ಲವೂ ನೋಡುಗರನ್ನು ಗತಕಾಲಕ್ಕೆ ಕೊಂಡೊಯ್ಯುತ್ತವೆ! ಸದ್ಯಕ್ಕೆ ಈ ಮನೆತನದವರು ವಿಜಯಪುರ ನಗರದಲ್ಲಿ ವಾಸವಿರುವರು.ಈ ಮನೆತನದವರೇ ಆದ ದಿವಂಗತ ಗುರುಲಿಂಗಪ್ಪಗೌಡ.ದೆ.ಪಾಟೀಲರು (ಶ್ರೀ ಜಿ.ಡಿ.ಪಾಟೀಲರು) ೧೯೬೭ರಲ್ಲಿ ವಿಜಾಪುರ ಲೋಕಸಭಾ ಸದಸ್ಯರಾಗಿದ್ದರು (ಅದಕ್ಕೂ ಮೊದಲು ಡಿಸಿಸಿ ಬ್ಯಾಂಕ್ ನಿರ್ದೇಶಕ, ಜಿಲ್ಲಾ ಲೋಕಲ್ ಬೋರ್ಡ್ ಸದಸ್ಯ ಮತ್ತು ೧೯೬೨ರಲ್ಲಿ ಇಂಡಿ ಮತಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು)

ಊರಿನಿಂದ ಸುಮಾರು ೨ ಕಿ.ಮಿ. ದೂರ #ಶ್ರೀ_ಪರಮಾನಂದ ದೇವಾಲಯವಿದ್ದು ಸುಕ್ಷೇತ್ರವಾಗಿ ಗುರುತಿಸಲ್ಪಡುತ್ತದೆ. ಶ್ರಾವಣ ಮಾಸದಲ್ಲಿ ಇಲ್ಲಿ ಜರುಗುವ ವಿಜೃಂಭಣೆಯ ಜಾತ್ರೆಯು ಪ್ರಸಿದ್ಧವಾಗಿದ್ದು, ಅಂದು ಬೇವಿನ ಎಲೆಯ ಮೇಲೆ ಪ್ರಸಾದವನ್ನು ಬಡಿಸುವುದು ಇಲ್ಲಿಯ ವಿಶಿಷ್ಟ ಸಂಪ್ರದಾಯವಾಗಿದೆ! ಶ್ರೀ ಬಸವೇಶ್ವರ ದೇವಾಲಯ ದ ಮುಂದೆ ಇರುವ ಗ್ರಾಮದ ಬಡಿಗರ ಮನೆತನದ ಕೌಶಲ್ಯದ ಕುರುಹು ಆದ ೧೦೭ ವರ್ಷದ ಹಿಂದೆ ನಿರ್ಮಾಣ ಆದ ಭವ್ಯ ತೇರು(ಬಸವೇಶ್ವರ ರಥ) ಗ್ರಾಮದ ಇನ್ನೊಂದು ಹೆಮ್ಮೆ ತರುವ ವಿಷಯ., ಉಗಾದಿ ಹಬ್ಬದ ದಶಮಿಯಂದು ಬಸವೇಶ್ವರ ತೇರು ಏಳೆದು ಹತ್ತು ದಿನಗಳ ಕಾಲ ನಡೆಯುವ ಜಾತ್ರೆ ಊರಿನ ಇನ್ನೊಂದು ಪ್ರಮುಖ ಉತ್ಸವ.

ಭೌಗೋಳಿಕ ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ ಬದಲಾಯಿಸಿ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
  • ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ ಬದಲಾಯಿಸಿ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 15000 ಇದೆ. ಅದರಲ್ಲಿ 8000 ಪುರುಷರು ಮತ್ತು 7000 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 7665ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.

ಕಲೆ ಮತ್ತು ಸಾಹಿತ್ಯ ಬದಲಾಯಿಸಿ

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ನಾಟಕರಂಗ ಮುಂತಾದವು ಗ್ರಾಮದ ಕಲೆಯಾಗಿದೆ.


ಸಾಹಿತಿಗಳು

ಸಿದ್ದಣ ಲಂಗೋಟಿ(ವಚನ ಸಾಹಿತ್ಯ)

ಶಿವಕುಮಾರ್ ಕಕ್ಕಳಮೇಲಿ(ನಾಟಕ ರಂಗ)

ರಮೇಶ್ ಬಿ ನಾಟೀಕಾರ (ನಾಟಕ ರಂಗ)

ಪರಶುರಾಮ ಸೊನ್ನದ(ಜಾನಪದ ಸಾಹಿತ್ಯ)

ಬಸವರಾಜ ಮಾಗಿ(ಜಾನಪದ ಸಾಹಿತ್ಯ)

ಕಟ್ಟಪ್ಪ ಹಾಲಕೇರಿ(ಕಾದಂಬರಿ)

ಧರಿಯಪ್ಪ ಕಕ್ಕಲಮೇಲಿ(ಕಾದಂಬರಿ)

ಸಂಸ್ಕೃತಿ ಬದಲಾಯಿಸಿ

 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.

ಆಹಾರ (ಖಾದ್ಯ) ಬದಲಾಯಿಸಿ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.

ಕೃಷಿ ಬದಲಾಯಿಸಿ

ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ ಬದಲಾಯಿಸಿ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗ ಬದಲಾಯಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ ಉಪಕಸುಬುಗಳಾಗಿವೆ.

ಬೆಳೆಗಳು ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ ವರ್ಗ ಬದಲಾಯಿಸಿ

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ ವರ್ಗ ಬದಲಾಯಿಸಿ

ರೈತರ ಎತ್ತು, ಹಸು, ಎಮ್ಮೆ,ಕುರಿ,ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.

ಆರ್ಥಿಕತೆ ಬದಲಾಯಿಸಿ

ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

ಧರ್ಮಗಳು ಬದಲಾಯಿಸಿ

ಗ್ರಾಮದಲ್ಲಿ ಲಿಂಗಾಯತ (ಜಂಗಮ, ಪಂಚಮಸಾಲಿ, ಗಾಣಿಗ, ಬಣಜಿಗ, ಕುಡುಒಕ್ಕಲಿಗ,) ಕಬ್ಬಲಿಗ, ಕುರುಬ, ಮುಸ್ಲಿಂ, ಕಂಬಾರ, ಪತ್ತಾರ, ಬ್ರಾಹ್ಮಣ, ಹಾಗೂ ದಲಿತರು ಇತ್ಶಾದಿ ಶಾಂತಿ ಸೌಹಾರ್ದತೆ ಯಿಂದ ಇದ್ದಾರೆ.

ಭಾಷೆಗಳು ಬದಲಾಯಿಸಿ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.

ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ ಬದಲಾಯಿಸಿ

  • ಶ್ರೀ ಪರಮಾನಂದ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ಅಂಬಿಗರಚೌಡಯ್ಯ ದೇವಾಲಯ
  • ಶ್ರೀ ರೇವನಸಿದ್ದೇಶ್ವರ ದೇವಾಲಯ
  • ಶ್ರೀ ಹಾಲಮರಡಿಸಿದ್ದೇಶ್ವರ ದೇವಾಲಯ
  • ಶ್ರೀ ಕಾಳಿಕದೇವಿ ದೇವಾಲಯ
  • ಶ್ರೀ ಕಲ್ಮೇಶ್ವರ್ ದೇವಾಲಯ
  • ಶ್ರೀ ರಾಮಲಿಂಗ ದೇವಾಲಯ
  • ಶ್ರೀ ಅದವ್ಯಾತನಂದ ಮಠ
  • ಶ್ರೀ ರುದ್ರಸ್ವಾಮಿ ಮಠ

ಮಸೀದಿ ಬದಲಾಯಿಸಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು ಬದಲಾಯಿಸಿ

ಪ್ರತಿವರ್ಷ ರೈತರ ಹಬ್ಬ ಕಾರ ಹುಣ್ಣುಮೆ, ಬಸವ ಜಯಂತಿ, ಯುಗಾದಿ, ದಸರಾ, ಶ್ರಾವಣ, ದೀಪಾವಳಿ, ನಾಗರ ಪಂಚಮಿ, ಓಕುಳಿ, ರಮಝಾನ್, ಉರಸು, ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ ಬದಲಾಯಿಸಿ

ಸರ್ಕಾರಿ ಕನ್ನಡ ಪ್ರಾಥಮಿಕ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆ, ಉರ್ದು ಶಾಲೆ, ಪರಮಾನಂದ ಶಿಕ್ಷಣ ಸಂಸ್ಥೆ ಮಾಧ್ಯಮಿಕ ಶಾಲೆ

ಸಾಕ್ಷರತೆ ಬದಲಾಯಿಸಿ

ಗ್ರಾಮದ ಸಾಕ್ಷರತೆ ಪ್ರಮಾಣವು ಸುಮಾರು 75%. ಅದರಲ್ಲಿ 65% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ ಬದಲಾಯಿಸಿ

ಗ್ರಾಮವು ಸಿಂದಗಿ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.