ಗೃಹ್ಯ ಮತ್ತು ವೇದೋಕ್ತ ಕರ್ಮಗಳನ್ನು ತಿಳಿಸುವ ಶಾಸ್ತ್ರಗ್ರಂಥಗಳು. ಇವು ಭಾರತೀಯ ಸಾಮಾಜಿಕ ಜೀವನರಚನೆಗೆ ತಳಹದಿಯಾಗಿವೆ.

ಇವುಗಳ ಕಾಲವನ್ನು ನಿರ್ಣಯಿಸುವುದು ದುಸ್ಸಾಧ್ಯವಾಗಿದ್ದರೂ ಇವು ಸಂಹಿತೆ, ಬ್ರಾಹ್ಮಣ ಮತ್ತು ಶ್ರೌತಸೂತ್ರಗಳಿಗಿಂತ ಈಚಿನವೆಂದು ನಿರ್ಧರಿಸಲಾಗಿದೆ. ಇವುಗಳಿಗೆ ವೇದಗಳೇ ಆಧಾರವಾಗಿವೆ ಎನ್ನಬಹುದು. ಋಗ್ವೇದ ಕಾಲವನ್ನು ಪ್ರ.ಶ.ಪು. 2500 ಎಂದು ಇಟ್ಟುಕೊಂಡರೆ ಗೃಹ್ಯಸೂತ್ರಗಳ ಕಾಲವನ್ನು ಪ್ರ.ಶ.ಪು. ಸುಮಾರು 2000 ಎಂದು ನಿರ್ಣಯಿಸಬಹುದಾದರೂ ಎಲ್ಲ ಗೃಹ್ಯಸೂತ್ರಗಳೂ ಸಮಕಾಲೀನವಾದುವುಗಳೆಂದು ಭಾವಿಸಲಾಗುವುದಿಲ್ಲ.

ಪ್ರಮುಖ ಗೃಹ್ಯಸೂತ್ರಗಳು

ಬದಲಾಯಿಸಿ

ಇವುಗಳಲ್ಲಿ ಮುಖ್ಯವಾದುವು ಈ ರೀತಿ ಇವೆ : ಸಾಂಖ್ಯಾಯನ, ಆಶ್ವಲಾಯನ, ಸಾಂಖ್ಯಾನ್ಯ, ಕೌಶೀತಕಿ-ಇವು ಋಗ್ವೇದಕ್ಕೆ ಸೇರಿದುವು. ಗೋಭಿಲ, ಖಾದೀರ, ಜೈಮಿನಿ-ಇವು ಸಾಮವೇದಕ್ಕೆ ಸೇರಿದುವು. ಆಪಸ್ತಂಬ, ಹಿರಣ್ಯಕೇಶಿ, ಭಾರದ್ವಾಜ, ಬೌಧಾಯನ, ಮಾನವ, ಕಾಥಕ, ವೈಖಾನಸ-ಇವು ಕೃಷ್ಣ ಯಜುರ್ವೇದಕ್ಕೆ ಸೇರಿದುವು. ಕಾತ್ಯಾಯನ ಗೃಹ್ಯಸೂತ್ರ ಶುಕ್ಲ ಯಜುರ್ವೇದಕ್ಕೂ ಕೌಶಿಕ ಗೃಹ್ಯಸೂತ್ರ ಅಥರ್ವ ವೇದಕ್ಕೂ ಸೇರಿವೆ.

ಗೃಹ್ಯಸೂತ್ರಗಳಲ್ಲಿ ಸಾಮಾಜಿಕ ಪ್ರಗತಿಗೆ ಸಂಬಂಧಿಸಿರುವ ವಿಷಯಗಳ ಸವಿಸ್ತಾರ ನಿರೂಪಣೆ ಇದೆ. ಚತುರ್ವರ್ಣಗಳು, ವಿವಾಹ, ಸ್ತ್ರೀಯರ ಸ್ಥಾನಮಾನಗಳು, ಕುಟುಂಬ ನಿರ್ವಹಣೆ, ಕೃಷಿ, ವಾಣಿಜ್ಯ, ವೃತ್ತಿಗಳು, ಕಲೆ ಮತ್ತು ಕೈಕೆಲಸ, ವ್ಯಾಸಂಗ, ವಾಸ್ತುಶಿಲ್ಪ, ದಿನಚರಿ ಮತ್ತು ಕ್ರೀಡೆಗಳು ಹಾಗೂ ನೈತಿಕ ಪದ್ಧತಿಗಳು, ಸಂಪ್ರದಾಯಗಳು, ಪಿತೃಗಳಿಗೆ ಮಾಡುವ ಉತ್ತರಕ್ರಿಯೆಗಳು-ಈ ಎಲ್ಲವನ್ನೂ ಈ ಸೂತ್ರಗಳಲ್ಲಿ ವಿಶದವಾಗಿ ನಿಯಮಿಸಲಾಗಿದೆ. ರಾಜನೀತಿಯನ್ನೂ ನಿಬಂಧಿಸಲಾಗಿದೆ. ಇಷ್ಟಲ್ಲದೆ ಈ ಸೂತ್ರಗಳು ಖಗೋಳಶಾಸ್ತ್ರ, ಜ್ಯೋತಿಶ್ಶಾಸ್ತ್ರಗಳ ಮತ್ತು ಆರೋಗ್ಯಶಾಸ್ತ್ರದ ನಿಯಮ ನಿಬಂಧನೆಗಳನ್ನೂ ಒಳಗೊಂಡಿವೆ. ಅದರಿಂದಾಗಿ ಪ್ರಾಚೀನ ಹಿಂದೂ ಸಮಾಜದ ಚಿತ್ರವನ್ನು ಇವು ಸ್ಪಷ್ಟವಾಗಿ ರೂಪಿಸುತ್ತವೆ.

ವರ್ಣಗಳು

ಬದಲಾಯಿಸಿ

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವರ್ಣಗಳು ನಾಲ್ಕು. ಇವು ಭಿನ್ನಭಿನ್ನವಾದ ಸಾಮಾಜಿಕ ಜೀವನವನ್ನು ಸೂಚಿಸುವಂಥವು. ಒಂದೊಂದು ವರ್ಣಕ್ಕೂ ಪ್ರತ್ಯೇಕ ನಿಬಂಧನೆಗಳುಂಟು. ಚೂಡಾಕರ್ಮ, ಉಪನಯನ, ವಿವಾಹ ಮುಂತಾದ ಸಂಸ್ಕಾರಗಳಿಗೆ ವರ್ಣಭೇದದ ಪ್ರಕಾರ ಬೇರೆ ಬೇರೆ ವಯಸ್ಸುಗಳನ್ನು, ಕಾಲಕ್ರಮಗಳನ್ನು ನಿಬಂಧಿಸಲಾಗಿದೆ. ಆ ಸಂಸ್ಕಾರ ಕಾಲಗಳಲ್ಲಿ ಧರಿಸಬೇಕಾದ ಉಡಿಗೆತೊಡಿಗೆಗಳು ಉಚ್ಚರಿಸುವ ಮಂತ್ರಗಳು ಬೇರೆಬೇರೆಯಾಗಿವೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ದ್ವಿಜರೆಂದೂ ಶೂದ್ರವರ್ಣದವರನ್ನು ಉಪನಯನವಿಲ್ಲದವರೆಂದೂ ಹೇಳಲಾಗಿದೆ. ಇಲ್ಲಿ ಸಂಕರವಾದ ವರ್ಣಗಳ ನಿರೂಪಣೆಯೂ ಇದೆ. ಗೃಹ್ಯಸೂತ್ರಗಳಲ್ಲಿ ವರ್ಣಗಳನ್ನು ಮೇಲುಕೀಳೆಂದಾಗಲೀ, ಅಸ್ಪೃಶ್ಯರೆಂದು ಕೆಲವರನ್ನು ಸಮಾಜ ಬಹಿಷ್ಕರಿಸಬೇಕೆಂದಾಗಲೀ ಹೇಳಿಲ್ಲ.

ವಿವಾಹ ಪದ್ಧತಿ

ಬದಲಾಯಿಸಿ

ಧರ್ಮಸೂತ್ರಗಳಲ್ಲಿಯೂ ಮನು ಮತ್ತು ಯಾಜ್ಞವಲ್ಕ್ಯ ಸ್ಮೃತಿಗಳಲ್ಲಿಯೂ ನಿರೂಪಿಸಲಾಗಿರುವ ಎಂಟು ವಿವಾಹ ಪದ್ಧತಿಗಳನ್ನು ಆಶ್ವಲಾಯನ ಗೃಹ್ಯಸೂತ್ರ ನಿರೂಪಿಸುತ್ತದೆ. ಬ್ರಾಹ್ಮ, ದೈವ, ಪ್ರಾಜಾಪತ್ಯ, ಆರ್ಷ, ಅಸುರ, ಗಾಂಧರ್ವ, ಪೈಶಾಚ, ರಾಕ್ಷಸ ಎಂಬ ಎಂಟು ಬಗೆಯ ವಿವಾಹ ಪದ್ಧತಿಗಳಲ್ಲಿ ಮೊದಲನೆಯ ನಾಲ್ಕು ಪದ್ಧತಿಗಳನ್ನು ಸಮಾಜ ಪುರಸ್ಕರಿಸುತ್ತಿತ್ತು. ಇವು ಆರ್ಯರ ಸಾಮಾಜಿಕ ಪ್ರಗತಿಯನ್ನು ಸೂಚಿಸುತ್ತವೆ. ಉಳಿದ ನಾಲ್ಕು ಪದ್ಧತಿಗಳು ಆರ್ಯರಲ್ಲದವರಲ್ಲಿ ಆಚರಣೆಯಲ್ಲಿದ್ದ ಪದ್ಧತಿಗಳು. ಕ್ರಮೇಣ ಆರ್ಯರು ರಾಕ್ಷಸ ಮತ್ತು ಗಾಂಧರ್ವ ಪದ್ಧತಿಗಳನ್ನು ಕ್ಷತ್ರಿಯರಿಗೆ ಮಾತ್ರ ಸಮ್ಮತವೆಂದು ಅನುಮೋದಿಸಿದರು. ಸಮಾಜ ಸಮ್ಮತವಾದ ವಿವಾಹ ಪದ್ಧತಿಗಳಲ್ಲಿ ವಧೂವರರನ್ನು ಹಿರಿಯರು ಪರೀಕ್ಷಿಸುವ ಅಂಗ ಮೊದಲನೆಯದು. ವಧುವಿಗೆ ಕೆಲವು ಲಕ್ಷಣಗಳಿರಬೇಕೆಂದು ನಿಬಂಧಿಸಲಾಗಿದೆ. ಅಂತೆಯೇ ವರನಿಗೂ ಕೆಲವು ಯೋಗ್ಯಲಕ್ಷಣಗಳಿರ ಬೇಕು. ಇವು ಮುಖ್ಯವಾಗಿ ದೃಢಕಾಯ, ಯೌವನ, ಬೌದ್ಧಿಕ ವಿಕಾಸ ಮತ್ತು ಮಂಗಳ ಸೂಚಕ ಚಿಹ್ನೆಗಳು. ಎಲ್ಲಕ್ಕೂ ಶ್ರೇಷ್ಠವಾದುದು ಸೌಶೀಲ್ಯ. ಕೆಲವು ಗೃಹ್ಯಸೂತ್ರಗಳಲ್ಲಿ ಬಾಲ್ಯವಿವಾಹ ಪದ್ಧತಿಗೆ ಪ್ರಾಶಸ್ತ್ಯ ಕೊಡಲಾಗಿದೆ. ಆದರೆ ಗರ್ಭಾದಾನ ಸಂಸ್ಕಾರವನ್ನು ವಿವಾಹದ ಕೊನೆಯ ಅಂಗವಾಗಿ ಸೇರಿಸಿರುವುದರಿಂದ ಕನ್ಯೆಗೆ ಸುಮಾರು ಹದಿಮೂರಕ್ಕೆ ಮೀರಿದ ವಯಸ್ಸನ್ನು ನಿಬಂಧಿಸಲಾಗಿತ್ತೆಂದು ಹೇಳಬಹುದು. ಪಾರಸ್ಕರ ಗೃಹ್ಯಸೂತ್ರ ಬ್ರಾಹ್ಮಣನಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ವರ್ಣಗಳ ಕನ್ಯೆಯರನ್ನು ವಿವಾಹವಾಗುವ ಅರ್ಹತೆಯನ್ನು ಕೊಟ್ಟಿದೆ. ಅಂತೆಯೇ ಕ್ಷತ್ರಿಯ ತನ್ನ ಮತ್ತು ವೈಶ್ಯವರ್ಣಗಳ ಇಬ್ಬರನ್ನೂ ವೈಶ್ಯ ತನ್ನ ಮತ್ತು ಶೂದ್ರವರ್ಣಗಳ ಇಬ್ಬರನ್ನೂ ವಿವಾಹವಾಗಲು ಅನುಮತಿ ಇದೆ. ಆದರೆ ಏಕಪತ್ನೀವ್ರತಸ್ಥನಿಗೆ ಹೆಚ್ಚು ಗೌರವವಿತ್ತು. ಆರ್ಷ ವಿವಾಹ ಪದ್ಧತಿಯಲ್ಲಿ ಕನ್ಯಾಶುಲ್ಕದ ಸೂಚನೆಯೂ ಬ್ರಾಹ್ಮ, ದೈವ, ಪ್ರಾಜಾಪತ್ಯ ಪದ್ಧತಿಗಳಲ್ಲಿ ವರದಕ್ಷಿಣೆಯ ಸೂಚನೆಯೂ ಇದೆ. ವಿವಾಹ ಕೇವಲ ದೈಹಿಕ ಸಂಬಂಧ ಮಾತ್ರವೇ ಆಗಿರದೆ, ಶಾಶ್ವತವಾದ ಧಾರ್ಮಿಕ ಸಂಬಂಧವೆಂಬುದನ್ನು ಕನ್ಯಾದಾನ, ಪಾಣಿಗ್ರಹಣ, ಸಪ್ತಪದಿ ಎಂಬ ವಿವಾಹ ಸಂಸ್ಕಾರಗಳ ಕಾಲದಲ್ಲಿ ವಧೂವರರು ಉಚ್ಚರಿಸುವ ಮಂತ್ರಗಳು ಸ್ಪಷ್ಟಪಡಿಸುತ್ತವೆ. ಸತ್ಪುತ್ರರನ್ನು ಪಡೆದು ಕುಲಗೌರವವನ್ನು ವೃದ್ಧಿಸುವುದೇ ವಿವಾಹದ ಮುಖ್ಯಧ್ಯೇಯವೆಂದು ಗೃಹ್ಯಸೂತ್ರಗಳು ಹೇಳಿವೆ. ಸ್ತ್ರೀಯರಿಗೆ ಉನ್ನತವಾದ ಸ್ಥಾನಮಾನಗಳನ್ನು ಕೊಡಲಾಗಿದ್ದರೂ ಪುತ್ರನನ್ನು ಪಡೆಯಬೇಕೆಂಬುದೇ ವಿವಾಹ, ಪುಂಸವನ, ಸೀಮಂತ ಕಾಲಗಳಲ್ಲಿ ಉಚ್ಚರಿಸಲಾಗುವ ಮಂತ್ರಗಳ ಉದ್ದೇಶವಾಗಿದೆ. ಆರ್ಯಸಮಾಜ ಕೃಷಿಪ್ರಧಾನವಾಗಿದ್ದುದರಿಂದ ಗಂಡು ಸಂತತಿಗೆ ಪ್ರಾಧಾನ್ಯವಿತ್ತು.

ಕೌಟುಂಬಿಕ ಜೀವನ

ಬದಲಾಯಿಸಿ

ಗೃಹಸ್ಥಾಶ್ರಮ ಸಾಮಾಜಿಕ ಜೀವನದಲ್ಲಿ ಅತ್ಯಂತ ಮಹತ್ತ್ವದ ಸ್ಥಾನವನ್ನು ಪಡೆದಿತ್ತು. ಗೃಹ್ಯಸೂತ್ರಗಳಲ್ಲಿ ಇದರ ಪ್ರಾಮುಖ್ಯವನ್ನು ವಿವರಿಸಲಾಗಿದೆ. ಗೃಹಸ್ಥ ದೇವಋಣ, ಪಿತೃಋಣಗಳನ್ನು ತೀರಿಸುವುದಲ್ಲದೆ ಮನುಷ್ಯ ಋಣವನ್ನು ನಾನಾ ರೀತಿಯಲ್ಲಿ ಸಲ್ಲಿಸಬೇಕು. ಅತಿಥಿಗಳನ್ನು ದೇವರಂತೆ ಕಾಣಬೇಕು. ಅವನ ಕುಟುಂಬ ಸತ್ಪುತ್ರರಿಂದಲೂ ಗೋಧಾನ್ಯಗಳಿಂದಲೂ ಸಮೃದ್ಧವಾಗಿದ್ದು, ಸ್ತ್ರೀಯರು ಗೃಹದೇವತೆಗಳಂತೆ ಅಲ್ಲಿ ಶೋಭಿಸುತ್ತಿರಬೇಕು. ಅವನು ಸಾಮಾಜಿಕ ಉನ್ನತಿಗೆ ಯಾವ ದೋಷವೂ ಬಾರದಂತೆ ಯಥೋಚಿತವಾಗಿ ನಡೆದುಕೊಳ್ಳಬೇಕು ಮತ್ತು ಸೇವಾನಿರತನಾಗಿರ ಬೇಕು. ಗೃಹ್ಯಸೂತ್ರಗಳ ನಿಬಂಧನೆಗಳು ಅವಿಭಕ್ತ ಕುಟುಂಬಕ್ಕೆ ಅನ್ವಯಿಸುವಂಥವು.

ಗೃಹ್ಯಸೂತ್ರಗಳು ಗೃಹನಿರ್ಮಾಣಕ್ಕೆ ಹೆಚ್ಚಿನ ಗಮನವನ್ನು ಕೊಟ್ಟಿವೆ. ಮುಖ್ಯ ದ್ವಾರ ಪುರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇರಬೇಕು. ಪಶ್ಚಿಮಾಭಿಮುಖ ವಾಗಿರಕೂಡದು. ಭೂಮಿ ಸಮನಾಗಿರಬೇಕು. ಭದ್ರವಾಗಿರಬೇಕು. ಹೊರಗೆ ಸಂಚರಿಸುವವರಿಗೆ ಗೃಹಸ್ಥ ಮಾಡುವ ಹೋಮಾದಿಕಾರ್ಯಗಳಾಗಲೀ ಅವನ ಆಹಾರ ಸೇವನೆಯಾಗಲೀ ಕಾಣುವಂತಿರಬಾರದು. ಗೃಹಪ್ರವೇಶಕಾಲದಲ್ಲಿ ಮಾಡಬೇಕಾದ ವಾಸ್ತುಶಮನ ಎಂಬ ಹೋಮವನ್ನು ವಿವರವಾಗಿ ಹೇಳಲಾಗಿದೆ. ಗೃಹಸ್ಥನ ನೆಲೆಯಾದ ಗೃಹವನ್ನು ಅತ್ಯಂತ ಪ್ರೀತಿಯಿಂದ ಕಾಪಾಡಬೇಕೆಂದು ಗೃಹ್ಯಸೂತ್ರಗಳು ನಿಬಂಧಿಸಿವೆ.

ಶಿಕ್ಷಣ ಕ್ರಮ

ಬದಲಾಯಿಸಿ

ಗುರುಕುಲವಾಸದಲ್ಲಿ ವಿದ್ಯಾರ್ಜನೆ ಮಾಡಿ ನೈತಿಕಜೀವನವನ್ನು ನಡೆಸಿಕೊಂಡು ಹೋಗುವುದೇ ಬ್ರಹ್ಮಚರ್ಯಾಶ್ರಮದ ಮುಖ್ಯ ಧ್ಯೇಯವಾಗಿತ್ತು. ಇದರಲ್ಲಿ ಮಾನವನ ಶ್ರೇಯಸ್ಸಿಗೆ ಭದ್ರವಾದ ಅಡಿಪಾಯವನ್ನು ಹಾಕಲಾಗಿದೆ. ಗುರುಶಿಷ್ಯರ ಸಂಬಂಧ ನಿಕಟವಾಗಿರಬೇಕೆಂದು ಗುರುಕುಲವಾಸದ ಉದ್ದೇಶ. ಗುರುಕುಲವಾಸ ಉಪನಯನ ಸಂಸ್ಕಾರದ ಅನಂತರ ಪ್ರಾರಂಭವಾಗುತ್ತದೆ. ಉಪನಯನ ಸಂಸ್ಕಾರದ ಮಹತ್ತ್ವವನ್ನು ಈ ಸೂತ್ರಗಳು ವಿಶದಪಡಿಸಿವೆ. ವ್ಯಾಸಂಗದ ಅವಧಿಯನ್ನು ಹನ್ನೆರಡರಿಂದ ನಲವತ್ತೆಂಟು ವರ್ಷಗಳವರೆಗೆಂದು ನಿಯಮಿಸಲಾಗಿದೆ. ಅಂದರೆ ವೇದಾಧ್ಯಯನಕ್ಕೆ ದೀರ್ಘಕಾಲದ ಅವಧಿ ಆವಶ್ಯಕವಾಗಿತ್ತು. ಅಧ್ಯಯನದೊಂದಿಗೆ ಉಪವಾಸಾದಿ ವ್ರತಗಳನ್ನು ನಿಬಂಧಿಸಲಾಗಿದ್ದಿತು. ದೊಡ್ಡ ದೊಡ್ಡ ಸಭೆಗಳಲ್ಲಿ ಚರ್ಚಾಕೂಟಗಳನ್ನು ಏರ್ಪಡಿಸುವ ಪದ್ಧತಿಯೂ ಇತ್ತು. ಸ್ನಾತಕವಾಗಿ ಮನೆಗೆ ಹಿಂದಿರುಗಿದ ಮೇಲೆ ಗೃಹಸ್ಥಾಶ್ರಮಕ್ಕೆ ಪ್ರವೇಶ. ಸ್ನಾತಕನಾದ ಅನಂತರವೂ ಅವನು ವೇದಾಧ್ಯಯನ ಮತ್ತು ನೈತಿಕ ನಿಯಮಗಳನ್ನು ತ್ಯಜಿಸಕೂಡದೆಂದು ವಿಧಿಸಲಾಗಿದೆ.

ಶಿಕ್ಷಣದಲ್ಲಿ ವ್ಯಾಯಾಮ ಮತ್ತು ಅಂಗಸಾಧನೆಗೂ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಾಣಾಯಾಮವನ್ನು ಸಂಧ್ಯಾಕ್ರಮದಲ್ಲಿ ಸೇರಿಸಲಾಗಿದೆ.

ಗೃಹ್ಯಸೂತ್ರಗಳಲ್ಲಿ ಸಂಗೀತ ನಾಟ್ಯ ಮತ್ತು ಕ್ರೀಡೆಗಳು-ಇಂಥ ಮನರಂಜನ ಕಾರ್ಯಕ್ರಮಗಳ ನಿರೂಪಣೆಯೂ ಇದೆ.

ಇವುಗಳಲ್ಲಿ ಕಾಣುವ ಜೀವನದೃಷ್ಟಿ ಆಶಾದಾಯಕವಾದುದು, ಸುಭದ್ರವಾದುದು. ಆದರೆ ಹಿಂದೂ ಧರ್ಮಕ್ಕನುಸಾರವಾಗಿ ಮಾನವನ ಜೀವನ ಮುಖ್ಯವಾಗಿ ಆಧ್ಯಾತ್ಮಿಕ ರೀತಿಯದು. ಅವನ ಕರ್ಮಗಳು ಕೇವಲ ಲೌಕಿಕ ಹಿತಕ್ಕೋಸ್ಕರ ಮಾಡುವಂಥವಾಗಿರದೆ ಪ್ರೇಯಸ್ಸಿಗಿಂತಲೂ ಶ್ರೇಯಸ್ಸಿಗೆ ಹೆಚ್ಚು ಗಮನ ಕೊಡುವಂಥವುಗಳಾಗಿವೆ. ಪ್ರತಿಯೊಂದು ಕ್ರಿಯೆಯನ್ನು ಒಂದು ಆರಾಧನೆಯಂತೆ ಭಾವಿಸಲಾಗಿದೆ. ಮಂತ್ರಗಳ ಸಹಿತವೇ ಅವನು ನಿತ್ಯಕರ್ಮಗಳನ್ನು ಆಚರಿಸಬೇಕು. ಮಂತ್ರಬಲದಿಂದ ಶತ್ರುಗಳನ್ನು ಕೂಡ ಗೆಲ್ಲಬಹುದೆಂದು ಗೃಹ್ಯಸೂತ್ರಗಳು ಹೇಳಿವೆ. ಜೀವನದ ಹೋರಾಟದಲ್ಲಿ ಜಯಿಸಿ ಧನಕನಕ ವಸ್ತುಗಳನ್ನು ಸಮೃದ್ಧವಾಗಿ ಪಡೆದು ಸುಖಶಾಂತಿಗಳಿಂದ ಬಾಳಬೇಕೆಂದು ಪ್ರಾರ್ಥಿಸುವ ಮಂತ್ರಗಳಿವೆ. ಗೋಸಂಪತ್ತಿಗಾಗಿ ಪ್ರಾರ್ಥಿಸುವ ಮಂತ್ರಗಳೂ ಇವೆ.

ಧರ್ಮ, ಅರ್ಥ, ಕಾಮ ಎಂಬ ಪುರುಷಾರ್ಥಗಳು ಅಂತಿಮವಾಗಿ ಮೋಕ್ಷವೆಂಬ ಪರಮಗತಿಗೆ ಸಾಧನಗಳೇ ಹೊರತು ಅವುಗಳಿಗಾಗಿಯೇ ಅವು ಅಪೇಕ್ಷಿತವಲ್ಲ ಎಂದು ಗೃಹ್ಯಸೂತ್ರಗಳ ಎಲ್ಲ ನಿಬಂಧನೆಗಳ ಒಟ್ಟು ಸಾರಾಂಶವಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: