ಆಪಸ್ತಂಬ ಮಹಾಭಾರತದ ಪ್ರಕಾರ ಭೃಗುವಂಶಜನಾದ ಮಹರ್ಷಿ. ಕಶ್ಯಪಮಹರ್ಷಿ ದಿತಿಯಿಂದ ಮಾಡಿಸಿದ ಪುತ್ರಕಾಮೇಷ್ಟಿಗೆ ಈತ ಆಚಾರ್ಯನಾಗಿದ್ದನೆಂದೂ (ಮತ್ಸ್ಯಪುರಾಣ) ಈತನ ಪತ್ನಿಯ ಹೆಸರು ಅಕ್ಷಸೂತ್ರಾ ಎಂದೂ ಪುತ್ರನ ಹೆಸರು ಕರ್ಕೆಯೆಂದೂ (ಬ್ರಹ್ಮಪುರಾಣ) ಪುರಾಣಗಳಲ್ಲಿ ಉಲ್ಲೇಖವಿದೆ.

ಆಪಸ್ತಂಬ ದಕ್ಷಿಣದೇಶದಲ್ಲಿದ್ದವನೆಂದೂ ಶರಾವತೀ ನದಿಯ ಉತ್ತರಕ್ಕೆ ಆಂಧ್ರರಾಜ್ಯದಲ್ಲಿ ನೆಲೆಸಿದ್ದನೆಂದೂ ವಿದ್ವಾಂಸರು ಊಹಿಸುತ್ತಾರೆ. ಕಾಲ ಕ್ರಿಸ್ತಪೂರ್ವ 900 ರಿಂದ 300 ಎಂದು ಕಾಣೆಯವರು ಸಾಧಾರವಾಗಿ ನಿರ್ಣಯಿಸಿದ್ದಾರೆ. ಈತ ಮಹಾಭಾರತವನ್ನೂ ಭವಿಷ್ಯ ಪುರಾಣವನ್ನೂ ಉಲ್ಲೇಖಿಸಿದ್ದಾನೆ. ಕೃಷ್ಣಯಜುರ್ವೇದ ತೈತ್ತಿರೀಯ ಶಾಖೆ ಇಲ್ಲವೆ ಚರಣವನ್ನು ತನ್ನ ಕಲ್ಪಸೂತ್ರಗಳಿಂದ ಪರಿಷ್ಕರಿಸಿ ವೈದಿಕಕರ್ಮ ಮಾರ್ಗವನ್ನು ಸರ್ವಗ್ರಾಹ್ಯವಾಗುವಂತೆ ಮಾಡಿದ ಕೀರ್ತಿ ಈತನದು. ಕುಮಾರಿಲಭಟ್ಟರು ಹೇಳಿರುವಂತೆ,

ವೇದಾದೃತೇsಪಿ ಕುರ್ವನ್ತಿ ಕಲ್ಪೈಃ ಕರ್ಮಾಣಿ ಯಾಜ್ಞಿಕಾಃ
ನತು ಕಲ್ಪೈರ್ವಿನಾ ಕೇಚಿನ್ಮನ್ತ್ರ ಬಾಹ್ಮಣಮಾತ್ರಕಾತ್||

ವೇದವೇ ಇಲ್ಲದಿದ್ದರೂ ಕಲ್ಪಸೂತ್ರಗಳ ಸಹಾಯದಿಂದ ಯಾಜ್ಞಿಕರು ಕರ್ಮಾಚರಣೆ ಮಾಡಬಲ್ಲರು. ಆದರೆ ಕಲ್ಪಸೂತ್ರಗಳಿಲ್ಲದೆ ಹೋದರೆ ಮನ್ತ್ರಬ್ರಾಹ್ಮಣಗಳಿದ್ದರೂ ಕರ್ಮಾಚರಣೆ ಅವಶ್ಯ. ಈ ದೃಷ್ಟಿಯಿಂದ ಕಲ್ಪವೆಂಬ ವೇದಾಂಗದ ಮಹತ್ತ್ವ ಸ್ಪಷ್ಟ. ಅಧ್ವರ್ಯಗಳಿಗೆ ಮೀಸಲಾದ ಯಜುರ್ವೇದಕ್ಕೆ ಕಲ್ಪಸೂತ್ರವನ್ನು ಸಮಗ್ರ ರೀತಿಯಿಂದ ನಿರ್ಮಿಸಿದ ಕೀರ್ತಿ ಆಪಸ್ತಂಬನದು. ಪ್ರಾಯಃ ಭಾರದ್ವಾಜನೆಂಬ ಕಲ್ಪಸೂತ್ರಕಾರನಿಗಿಂತ ಈಚಿನವರಾದರೂ ಹಿರಣ್ಯಕೇಶಿಯೆಂಬ ಕಲ್ಪಸೂತ್ರಕಾರನಿಗೆ ಆಪಸ್ತಂಬನೇ ಮಾರ್ಗದರ್ಶಕ. ಆಪಸ್ತಂಬ, ಶ್ರೌತಸೂತ್ರ, ಗೃಹ್ಯಸೂತ್ರ, ಧರ್ಮಸೂತ್ರ, ಶುಲ್ಬಸೂತ್ರ, ಮಂತ್ರಪಾಠ-ಹೀಗೆ ಸಮಗ್ರವಾಗಿ ಕಲ್ಪದ ಸರ್ವಾಂಗಗಳನ್ನೂ ಕುರಿತು ಪ್ರಮಾಣವೆಸಗುವಂತೆ ಸೂತ್ರರಚನೆ ಮಾಡಿದ್ದಾನೆ. ಇವೆಲ್ಲವೂ ಈಗ ವಿದ್ವಾಂಸರಿಂದ ಪ್ರಕಟಿತವಾಗಿವೆ. ಕುಮಾರಿಲಭಟ್ಟ, ಯಾಜ್ಞವಲ್ಕ್ಯ, ವಿಜ್ಞಾನೇಶ್ವರ ಮುಂತಾದವರು ಆಪಸ್ತಂಬನನ್ನು ಗೌರವದಿಂದ ಸ್ಮರಿಸಿದ್ದಾರೆ. ಹದಿನಾರನೆಯ ಶತಮಾನದ ಹರದತ್ತ ಧರ್ಮಸೂತ್ರಕ್ಕೆ ಉಜ್ವಲಾ ಎಂಬ ವೃತ್ತಿಯನ್ನು ರಚಿಸಿದ್ದಾನೆ.

ವೇದಸಂಹಿತೆ ಹಾಗೂ ಬ್ರಾಹ್ಮಣಗಳನ್ನು ಶ್ರುತಿಯೆನ್ನುವಂತೆ ವೇದಾಂಗ ಕಲ್ಪಸೂತ್ರಗಳನ್ನು ರಚಿಸಿರುವ ಆಪಸ್ತಂಬಾದಿಗಳನ್ನು ಸ್ಮøತಿಕಾರರೆನ್ನುತ್ತಾರೆ. ಬ್ರಾಹ್ಮಣಗಳಲ್ಲಿ ಯಜ್ಞವಿಧಿಗಳ ಸಂಗಡವೇ ರೋಚಕವಾದ ಕಥೆ ಮುಂತಾದುವೂ ಬಂದು ಅರ್ಥವಾದವೆನಿಸುತ್ತವೆ. ಆದರೆ ಅರ್ಥವಾದಗಳನ್ನು ತೆಗೆದು ವಿನಿಯುಕ್ತ ಮಂತ್ರಗಳನ್ನು ಕ್ರೋಡೀಕರಿಸಿಕೊಡುವ ಪರಿಷ್ಕರಣ ಶ್ರೌತಸೂತ್ರಗಳದು. ಸಾಮಾನ್ಯವಾಗಿ ಅಗ್ನಿಕಾರ್ಯಗಳು, ಮಂತ್ರಗಳು, ಇಷ್ಟಿಗಳು, ಅನೇಕ ಯಜ್ಞಗಳು-ಇವುಗಳ ವಿಧಿವಿವರಣೆ ಶ್ರೌತಸೂತ್ರಗಳ ವಿಷಯ. ಪುರೋಹಿತರ ಕೈಪಿಡಿಗಳೆಂದು ಇವನ್ನು ಭಾವಿಸಬಹುದು. ಯಜ್ಞಯಾಗಾದಿಗಳ ಇತಿಹಾಸವನ್ನರಿಯಲು ಇವುಗಳ ಅಧ್ಯಯನ ಅಗತ್ಯ. ಮನುಷ್ಯನ ಜನ್ಮಸಂಸ್ಕಾರದಿಂದ ಹಿಡಿದು, ಅಂತ್ಯಸಂಸ್ಕಾರದವರೆಗೆ ಸಕಲ ಗೃಹ್ಯಕರ್ಮಗಳೂ ಗೃಹ್ಯಸೂತ್ರಗಳ ವಿಷಯ. ಇಂದಿನವರೆಗೂ ಇವು ಆಚರಣೆಯಲ್ಲಿ ಉಳಿದು ಬಂದಿವೆ. ಗರ್ಭಾದಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೌಲ, ಉಪನಯನ, ಸಮಾವರ್ತನ, ವಿವಾಹ, ಶ್ರಾದ್ಧಾದಿಗಳು, ದೇವಯಜ್ಞ, ಪಿತೃಯಜ್ಞ, ಬ್ರಹ್ಮಯಜ್ಞ-ಇತ್ಯಾದಿ ಕರ್ಮಾಂಗಗಳ ಪ್ರಯೋಗವಿಧಿ ಗೃಹ್ಯ ಸೂತ್ರದಲ್ಲಿ ಬರುತ್ತದೆ. ವರ್ಣಾಶ್ರಮಧರ್ಮಗಳ ಕೂಲಂಕಷ ವಿವೇಚನೆ ಧರ್ಮಸೂತ್ರಗಳ ವಿಷಯ. ಹಾಗೆಯೇ ಶುಲ್ಬಸೂತ್ರಗಳಲ್ಲಿ ವೇದಿಯ ನಿರ್ಮಾಣ. ಅಗ್ನಿಕುಂಡದ ರಚನೆ, ಅಳತೆಯ ವಿಧಾನ, ಮುಂತಾದ ವಿಷಯಗಳಿರುತ್ತವೆ. ಉಪಯುಕ್ತ ಮಂತ್ರಗಳನ್ನು ಕಲ್ಪಸೂತ್ರಗಳಲ್ಲಿ ಪೂರ್ಣವಾಗಿ ಕೊಡುವುದೂ ಉಂಟು, ಪ್ರತೀಕವನ್ನು ಮಾತ್ರ ಸೂಚಿಸುವುದೂ ಉಂಟು. ಆಪಸ್ತಂಬಶಾಖೆಯ ಅನುಯಾಯಿಗಳು ನರ್ಮದಾನದಿಯ ದಕ್ಷಿಣದಲ್ಲಿ ಮಾತ್ರ ಉಂಟೆಂದು ಚರಣವ್ಯೂಹಭಾಷ್ಯ ಹೇಳಿದೆ. ಈಗಲೂ ಆಂಧ್ರ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಈ ಶಾಖೆಯ ಪ್ರಸಾರವನ್ನು ನೋಡಬಹುದು. ಉತ್ತರಭಾರತ ಮಧ್ಯಪ್ರದೇಶಗಳಲ್ಲಿ ಇದರ ಪ್ರಸಾರವಿಲ್ಲ.

"https://kn.wikipedia.org/w/index.php?title=ಆಪಸ್ತಂಬ&oldid=714914" ಇಂದ ಪಡೆಯಲ್ಪಟ್ಟಿದೆ