ಗುಲ್ಬರ್ಗಾ ವಿಶ್ವವಿದ್ಯಾಲಯ
ಗುಲ್ಬರ್ಗಾ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಕಲಬುರಗಿ ನಗರದಲ್ಲಿದೆ.ಈ ವಿಶ್ವವಿದ್ಯಾಲಯವು ೧೯೮೦ರಲ್ಲಿ ಪ್ರಾರಂಭವಾಯಿತು.
ಗುಲ್ಬರ್ಗಾ ವಿಶ್ವವಿದ್ಯಾಲಯ | |
---|---|
ಸ್ಥಾಪನೆ | 1980 |
ಪ್ರಕಾರ | ಸಾರ್ವಜನಿಕ |
ಉಪಕುಲಪತಿಗಳು | ಪ್ರೊಫೆಸರ್ ಎಸ್ ಆರ್ ನಿರಂಜನ.[೧] |
ವಿದ್ಯಾರ್ಥಿಗಳ ಸಂಖ್ಯೆ | 3500 |
ಸ್ಥಳ | ಕಲಬುರಗಿ,, ಕರ್ನಾಟಕ, ಭಾರತ 17°18′46.62″N 76°52′27.32″E / 17.3129500°N 76.8742556°E |
ಆವರಣ | ಗ್ರಾಮೀಣ |
ಅಂತರಜಾಲ ತಾಣ | www.gug.ac.in |
ಇತಿಹಾಸ
ಬದಲಾಯಿಸಿಹೈದರಾಬಾದ್ ಕರ್ನಾಟಕ ಪ್ರದೇಶ ಆರ್ಥಿಕವಾಗಿ ಹಿಂದುಳಿದ ಪ್ರದೇಶವಾದರೂ ಸಾಹಿತ್ಯ, ಸಂಸ್ಕೃತಿ, ಕಲೆಗಳ ದೃಷ್ಟಿಯಿಂದ ತುಂಬಾ ಸಂಪದ್ಭರಿತವಾದುದು. ಹಿಂದೆ ಈ ಪ್ರದೇಶದ ಜನ ಉನ್ನತ ಶಿಕ್ಷಣ ಪಡೆಯಲು ಹೈದರಬಾದಿಗೋ, ದೂರದ ಧಾರವಾಡಕ್ಕೋ ಹೋಗಬೇಕಾಗುತ್ತಿತ್ತು. 1970ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಗುಲ್ಬರ್ಗದಲ್ಲಿ ಪ್ರಾರಂಭ ಮಾಡಲಾಯಿತು. ಕನ್ನಡ, ರಸಾಯನ ವಿಜ್ಞಾನ, ಗಣಿತ ವಿಜ್ಞಾನ, ಇಂಗ್ಲಿಷ್ ಮತ್ತು ರಾಜ್ಯಶಾಸ್ತ್ರ ಈ ಐದು ವಿಷಯಗಳಲ್ಲಿ ಸ್ನಾತಕೋತ್ತರ ವಿಭಾಗಗಳಿದ್ದವು. ಈ ಪ್ರದೇಶದ ಶಿಕ್ಷಣತಜ್ಞರು, ಸಮಾಜ ಸೇವಕರು ಮತ್ತು ರಾಜಕೀಯ ಮುಂದಾಳುಗಳ ಪ್ರಯತ್ನಗಳಿಂದ 1980 ಸೆಪ್ಟಂಬರ್ 10ರಂದು ಗುಲ್ಬರ್ಗ ವಿಶ್ವವಿದ್ಯಾಲಯ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂತು.
ವಿಭಾಗಗಳು
ಬದಲಾಯಿಸಿಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 34 ವಿಭಾಗಗಳಿವೆ. ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬೀದರ್, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಗುಲ್ಬರ್ಗ ಈ ಆರು ಜಿಲ್ಲೆಗಳು ಒಳಪಟ್ಟಿವೆ. ಈ ವಿಶ್ವವಿದ್ಯಾಲಯ ಕಕ್ಷೆಯಲ್ಲಿ ನೂರ ನಲವತ್ತೇಳು (147) ಕಾಲೇಜುಗಳಿವೆ. ಇವುಗಳಲ್ಲಿ ಕೆಲವು 35 ಕಾಲೇಜುಗಳು ಸರ್ಕಾರದ ಅನುಧಾನ ಪಡೆದಿದೆ. ಇನ್ನುಳಿದ 112 ಕಾಲೇಜುಗಳು ಅನುದಾನ ಪಡೆಯದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಬೀದರ್, ರಾಯಚೂರು, ಸಂಡೂರು ಮತ್ತು ಬಳ್ಳಾರಿಗಳಲ್ಲಿ ಈ ವಿಶ್ವವಿದ್ಯಾಲಯದ ಅಧೀನದಲ್ಲಿ ಸ್ನಾತಕೋತ್ತರ ಕೇಂದ್ರಗಳಿವೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದರಬಾದ್ ಕರ್ನಾಟಕ ಪ್ರದೇಶದಲ್ಲಿ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯ ಈ ಭಾಗದ ಜನರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಮೂಲಕ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಆರು ವಿದ್ವನ್ಮಂಡಳಿ ನಿಕಾಯಗಳಿವೆ. ಕಲಾನಿಕಾಯದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ಸಂಸ್ಕೃತ ವಿಭಾಗಗಳಿವೆ. ವಾಣಿಜ್ಯ ಹಾಗೂ ವ್ಯಾಪಾರ ನಿರ್ವಹಣೆ ನಿಕಾಯದಲ್ಲಿ ವಾಣಿಜ್ಯ ಹಾಗೂ ವ್ಯಾಪಾರ ನಿರ್ವಹಣೆ ವಿಭಾಗಗಳಿವೆ. ಶಿಕ್ಷಣ ನಿಕಾಯದಲ್ಲಿ ಶಿಕ್ಷಣ ಹಾಗೂ ದೈಹಿಕಶಿಕ್ಷಣ ವಿಭಾಗಗಳಿವೆ. ಕಾನೂನು ನಿಕಾಯ ಕಾನೂನು ವಿಭಾಗವನ್ನು ಹೊಂದಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ನಿಕಾಯದಲ್ಲಿ ಆನ್ವಯಿಕ ವಿದ್ಯುನ್ಮಾನವಿಜ್ಞಾನ, ಜೀವರಸಾಯನ ವಿಜ್ಞಾನ, ಜೀವತಂತ್ರಜ್ಞಾನ, ಸಸ್ಯವಿಜ್ಞಾನ, ರಸಾಯನವಿಜ್ಞಾನ, ಗಣಕವಿಜ್ಞಾನ, ಭೂವಿಜ್ಞಾನ, ಮಿನರಲ್ ಪ್ರಾಸೆಸಿಂಗ್, ಭೂಗರ್ಭವಿಜ್ಞಾನ, ಔದ್ಯೋಗಿಕ ರಸಾಯನವಿಜ್ಞಾನ, ಉಪಕರಣ ತಂತ್ರಜ್ಞಾನ, ಗಣಿತ ವಿಜ್ಞಾನ, ಸೂಕ್ಷ್ಮಾಣುಜೀವವಿಜ್ಞಾನ, ಭೌತವಿಜ್ಞಾನ ಸಂಖ್ಯಾವಿಜ್ಞಾನ, ಸಕ್ಕರೆತಂತ್ರಜ್ಞಾನ, ಪ್ರಾಣಿವಿಜ್ಞಾನ ಈ ವಿಭಾಗಗಳಿವೆ. ಸಮಾಜವಿಜ್ಞಾನ ನಿಕಾಯದಲ್ಲಿ ಅರ್ಥಶಾಸ್ತ್ರ, ಇತಿಹಾಸ, ಗ್ರಂಥಾಲಯ ಹಾಗೂ ಮಾಹಿತಿವಿಜ್ಞಾನ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಸಮಾಜ ಕಾರ್ಯ, ಸಮಾಜಶಾಸ್ತ್ರ, ಮಹಿಳಾ ಅಧ್ಯಯನ ವಿಭಾಗಗಳಿವೆ.
ಗುಲ್ಬರ್ಗ ವಿಶ್ವವಿದ್ಯಾಲಯ ಜೀವತಂತ್ರಜ್ಞಾನ ವಿಭಾಗ, ಸೂಕ್ಷ್ಮಾಣುಜೀವವಿಜ್ಞಾನ ಹಾಗೂ ಮಹಿಳಾ ಅಧ್ಯಯನ ವಿಭಾಗಗಳನ್ನು ತೆರೆದ ರಾಜ್ಯದ ಪ್ರಪ್ರಥಮ ವಿಶ್ವವಿದ್ಯಾಲಯವೆನಿಸಿದೆ. ಈ ವಿಶ್ವವಿದ್ಯಾಲಯದ ಸಂಶೋಧನೆಯ ಫಲವಾದ ಕಬ್ಬಿನ ಹೊಸ ತಳಿಯನ್ನು ಈ ಪ್ರದೇಶದಲ್ಲಿ ಈಗ ಬೆಳೆಯಲಾಗುತ್ತಿದೆ. ಬೀದರ್ನಲ್ಲಿ ಪ್ರಾರಂಭಗೊಂಡಿರುವ ಸಕ್ಕರೆ ತಂತ್ರಜ್ಞಾನ ವಿಭಾಗ ಒಂದು ಮಾದರಿ ವಿಭಾಗವಾಗಿ ಬೆಳೆಯುತ್ತಿದೆ. ರಸಾಯನವಿಜ್ಞಾನ, ಪ್ರಾಣಿವಿಜ್ಞಾನ ಹಾಗೂ ಸೂಕ್ಷ್ಮಾಣುಜೀವವಿಜ್ಞಾನ, ಆನ್ವಯಿಕ ವಿದ್ಯುನ್ಮಾನ ವಿಭಾಗಗಳಲ್ಲಿ ನಡೆದಿರುವ ಸಂಶೋಧನೆಗಳು ಅನೇಕ ಸಂಶೋಧಕರ ಗಮನ ಸೆಳೆದಿವೆ. ರಸಾಯನವಿಜ್ಞಾನ, ಪ್ರಾಣಿವಿಜ್ಞಾನ, ಆನ್ವಯಿಕ ವಿದ್ಯುನ್ಮಾನ ವಿಭಾಗಗಳು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಿವೆ.
ಪದವಿಗಳು
ಬದಲಾಯಿಸಿಇದುವರೆಗೆ ಈ ವಿಶ್ವವಿದ್ಯಾಲಯದಿಂದ ನೂರಾರು ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಹಲವಾರು ವಿದ್ಯಾರ್ಥಿಗಳುಎಂ.ಫಿಲ್. ಪದವಿ ಹಾಗೂ ನಾನೂರು ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಗಾಗಿ ಸಂಶೋಧನೆ ನಡೆಸಿದ್ದಾರೆ. ಅನೇಕ ಜನ ಗಣ್ಯ ವ್ಯಕ್ತಿಗಳಿಗೆ ಈ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಪರದೇಶಗಳ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಡನೆ ಈ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಸಂಶೋಧನೆ ನಡೆಸಿದ್ದಾರೆ. ಶ್ರೀ ಗಳಂಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರ, ಅಂಬೇಡ್ಕರ್ ಪೀಠ ಹಾಗೂ ಎಸ್.ಎಸ್. ಪಾಟೀಲ ಸೈನ್ಸ್ ಕ್ರಿಯೇಟಿವಿಟಿ ಸೆಂಟರ್ ಇವು ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿವೆ. ಈ ವಿಶ್ವವಿದ್ಯಾಲಯದ ಕಕ್ಷೆಗೆ ಒಳಪಟ್ಟ 21 ಕಾಲೇಜುಗಳಲ್ಲಿ ಯುಜಿಸಿ ನೆರವಿನಿಂದ ವೃತ್ತಿಪರ ಕೋರ್ಸುಗಳು ನಡೆಯುತ್ತಿವೆ.
ಮೂಲಭೂತ ಸೌಕರ್ಯ
ಬದಲಾಯಿಸಿಗುಲ್ಬರ್ಗ ವಿಶ್ವವಿದ್ಯಾಲಯ ಸು. 344 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿದ್ದು ಸುಸಜ್ಜಿತ ಕಟ್ಟಡಗಳನ್ನು ಹೊಂದಿದೆ. ವಿಶ್ವವಿದ್ಯಾಲಯದ ಬಹುತೇಕ ಎಲ್ಲ ವಿಭಾಗಗಳು ಸ್ವತಂತ್ರ ಕಟ್ಟಡಗಳನ್ನು ಹೊಂದಿವೆ. ಗಣಕವಿಜ್ಞಾನ ವಿಭಾಗ ಅತ್ಯಾಧುನಿಕ ಗಣಕ ಯಂತ್ರಗಳನ್ನು ಹೊಂದಿದೆ. ಗ್ರಂಥಾಲಯದಲ್ಲಿ ಸೌಲಭ್ಯಗಳು ಸಾಕಷ್ಟಿದ್ದು 2 ಲಕ್ಷ ಗ್ರಂಥಗಳನ್ನು ಹೊಂದಿದೆ. ಗ್ರಂಥಾಲಯ ಇಂಟರ್ನೆಟ್ ಸೌಲಭ್ಯ ಹೊಂದಿದ್ದು ವಿದ್ಯಾರ್ಥಿಗಳಿಗೆ ಬಹು ಉಪಯೋಗಿಯಾಗಿದೆ. ಶಿಕ್ಷಕ ಹಾಗೂ ಶಿಕ್ಷಕೇತರರಿಗೆ ವಸತಿಗೃಹಗಳು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ವಸತಿನಿಲಯಗಳ ಸೌಲಭ್ಯವಿದೆ. ದೈಹಿಕಶಿಕ್ಷಣ ವಿಭಾಗl ವಿಶ್ವವಿದ್ಯಾಲಯದ ಹೆಮ್ಮೆಯ ಹಾಗೂ ಬೃಹತ್uiiuhi ವಿಭಾಗವಾಗಿದೆ. ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾ ಭವನಗಳಿವೆ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುತ್ತಲಿದೆ. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ವರ್ಗದ ಸರ್ವತೋನ್ಮುಖ ಬೆಳೆವಣಿಗೆಗೆ ವಿಶ್ವವಿದ್ಯಾಲಯದಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.
ವ್ಯಾಸಂಗವಿಸ್ತರಣೆ, ಸಂಶೋಧನೆ ಮತ್ತು ಪ್ರಕಟಣೆ
ಬದಲಾಯಿಸಿಕನ್ನಡ ಅಧ್ಯಯನ ಸಂಸ್ಥೆ ಮೊದಲು ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯದ ದೊಡ್ಡ ವಿಭಾಗವಾಗಿದ್ದು ಈ ಭಾಗದ ಸಾಹಿತ್ಯಕ ಸಾಂಸ್ಕೃತಿಕ ಬೆಳೆವಣಿಗೆಗೆ ಚಾಲನೆ ನೀಡುತ್ತ ಬಂದಿದೆ. ಸಂಸ್ಥೆಯಲ್ಲಿ ಹಸ್ತಪ್ರತಿ ಭಂಡಾರವಿದೆ. ಈ ಸಂಸ್ಥೆಯ ಕಟ್ಟಡದಲ್ಲಿಯೇ ಶ್ರೀ ಗಳಂಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರ ಹಾಗೂ ಪ್ರಸಾರಾಂಗ ವಿಭಾಗಗಳಿವೆ. ಬಸವಾದಿ ಶರಣ ಸಾಹಿತ್ಯ ಕೇಂದ್ರ ಅನೇಕ ಗ್ರಂಥಗಳನ್ನು ಪ್ರಕಟಿಸಿದೆ. ಪ್ರಸಾರಾಂಗ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿಯ ಮುಖವಾಣಿ. ವಿಶ್ವವಿದ್ಯಾಲಯದ ಹಾಗೂ ಕಾಲೇಜುಗಳ ಶಿಕ್ಷಕರಿಗೂ ಹಳ್ಳಿಯ ಸಾಮಾನ್ಯ ಜನರಿಗೂ ಸಂಬಂಧವೇರ್ಪಡಿಸಿ ಶೈಕ್ಷಣಿಕ ವಾತಾವರಣವನ್ನು ಸ್ಥಾಪಿಸುವಲ್ಲಿ ಇದು ಮಹತ್ವದ ಕಾರ್ಯ ಮಾಡುತ್ತಿದೆ. ನೂರಾರು ಪುಸ್ತಕಗಳನ್ನು ಪ್ರಕಟಿಸಿದೆ. ವಿಶ್ವವಿದ್ಯಾಲಯದಲ್ಲಿ ಹದಿಮೂರು ದತ್ತಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ ಈ ದತ್ತಿ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ವಿಶ್ವವಿದ್ಯಾಲಯದ ವತಿಯಿಂದ ಕಲಾಗಂಗಾ, ಜ್ಞಾನಗಂಗಾ, ವಿಜ್ಞಾನಗಂಗಾ ಎಂಬ ಮೂರು ಸಂಶೋಧನ ಪತ್ರಿಕೆಗಳನ್ನು ಪ್ರಸಾರಾಂಗ ಪ್ರಕಟಿಸುತ್ತಿದೆ. ಒಂದು ವಾರ್ತಾ ಪತ್ರವೂ ಪ್ರಕಟವಾಗುತ್ತಿದೆ. ಹೈದರಾಬಾದ್ಕರ್ನಾಟಕ ಭಾಗದ ಶ್ರೇಷ್ಠ ಲೇಖಕರಿಗೆ, ಕಥೆಗಾರರಿಗೆ, ಪುಸ್ತಕ ಪ್ರಕಾಶಕರಿಗೆ ಹಾಗೂ ಚಿತ್ರಕಲಾವಿದರಿಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಶಸ್ತಿ ಪತ್ರ ಹಾಗೂ ಗೌರವಧನ ನೀಡಿ ಪ್ರೋತ್ಸಾಹಿಸುವ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಪ್ರಸಾರಾಂಗ ನಡೆಸಿಕೊಂಡು ಬರುತ್ತಿದೆ. ಈ ಪದ್ಧತಿ ಬೇರೆ ವಿಶ್ವವಿದ್ಯಾಲಯಗಳಲ್ಲಿ ಇಲ್ಲ.
ಸ್ನಾತಕೋತ್ತರಕೇಂದ್ರಗಳು
ಬದಲಾಯಿಸಿಬಳ್ಳಾರಿ, ಸಂಡೂರು, ರಾಯಚೂರು, ಹಾಗೂ ಬೀದರ್ಗಳಲ್ಲಿ ಸ್ನಾತಕೋತ್ತರ ಕೇಂದ್ರಗಳಿವೆ. ಬೀದರ್ ಸ್ನಾತಕೋತ್ತರ ಕೇಂದ್ರದಲ್ಲಿ ಸಕ್ಕರೆ ತಂತ್ರಜ್ಞಾನ ಹಾಗೂ ಉರ್ದು ವಿಭಾಗಗಳಿವೆ. ರಾಯಚೂರು ಕೇಂದ್ರದಲ್ಲಿ ಕನ್ನಡ ವಿಭಾಗ, ಉಪಕರಣ ತಂತ್ರಜ್ಞಾನ, ಗಣಕವಿಜ್ಞಾನ, ಆನ್ವಯಿಕ ಗಣಕವಿಜ್ಞಾನದ ಸ್ನಾತಕೋತ್ತರ ಡಿಪ್ಲೊಮಾ ವಿಭಾಗವಿದೆ. ಬಳ್ಳಾರಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಬಿ.ಎ. ಹಾಗೂ ಔದ್ಯೋಗಿಕ ರಸಾಯನವಿಜ್ಞಾನ ವಿಭಾಗಗಳಿವೆ. ಸ್ನಾತಕೋತ್ತರ ವಿಭಾಗಗಳ ಜೊತೆಗೆ ಸಂಡೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ, ಭೂ ವಿಜ್ಞಾನ, ಖನಿಜ ಸಂಸ್ಕರಣ ಹಾಗೂ ಬಿಎಸ್ಸಿ ಕೋರ್ಸುಗಳನ್ನು ತೆರೆಯಲಾಗಿದೆ. ಭೂ ವಿಜ್ಞಾನ ವಿಭಾಗ ಉನ್ನತ ಸಂಶೋಧನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರಶಸ್ತಿ ಹಾಗೂ ಗೌರವಗಳು
ಬದಲಾಯಿಸಿಗುಲ್ಬರ್ಗ ವಿಶ್ವವಿದ್ಯಾಲಯ ಯು.ಜಿ.ಸಿ.ಯ ನ್ಯಾಕ್ ಸಮಿತಿಯಿಂದ ಮೌಲ್ಯಮಾಪನಕ್ಕೊಳಗಾಗಿದ್ದು ನಾಲ್ಕು ನಕ್ಷತ್ರ ಸ್ಥಾನ ಪಡೆದಿದೆ. ಅನೇಕ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವ್ಯಾಸಂಗ ಮತ್ತು ಸಂಶೋಧನೆಯಲ್ಲಿ ಉತ್ತಮ ಕೊಡುಗೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವ, ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. 1999ರಲ್ಲಿ ಸಾರ್ಕ್ ಯುವಜನ ಸಮ್ಮೇಳನವನ್ನು ಈ ವಿಶ್ವವಿದ್ಯಾಲಯ ಯಶಸ್ವಿಯಾಗಿ ನಡೆಸಿತು. ಎನ್.ಎಸ್.ಎಸ್. ಘಟಕ ಇಂದಿರಾ ಗಾಂಧಿ ಯುವಜನ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿದೆ. ಎಂ.ನಾಗರಾಜ (1980-84) ಈ ವಿಶ್ವವಿದ್ಯಾಲಯದ ಮೊದಲ ಕುಲಪತಿ. ಹಾ.ಮಾ.ನಾಯಕ (1984-87), ಕೆ.ಎಚ್.ಚೆಲುವರಾಜು (1987-90), ಎನ್.ರುದ್ರಯ್ಯ (1990-96), ಎಂ.ಮುನಿಯಮ್ಮ (1996-99), ಜಿ.ಎಸ್.ಪಾಟೀಲ (1999, ಹಂಗಾಮಿ ಕುಲಪತಿ), ಎಂ.ವಿ.ನಾಡಕರ್ಣಿ (1999-2002) ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗಿನ ಕುಲಪತಿ ಬಿ.ಜಿ. ಮೂಲಿಮನಿ.
ಇವನ್ನೂ ನೋಡಿ
ಬದಲಾಯಿಸಿ- ಕನ್ನಡ ವಿಶ್ವವಿದ್ಯಾಲಯ
- ಕರ್ನಾಟಕ ವಿಶ್ವವಿದ್ಯಾಲಯ
- ಬೆಂಗಳೂರು ವಿಶ್ವವಿದ್ಯಾಲಯ
- ಮೈಸೂರು ವಿಶ್ವವಿದ್ಯಾಲಯ
- ಕುವೆಂಪು ವಿಶ್ವವಿದ್ಯಾಲಯ
- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
- ಮಂಗಳೂರು ವಿಶ್ವವಿದ್ಯಾಲಯ
- ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
- ಕೃಷಿ ವಿಶ್ವವಿದ್ಯಾಲಯ, ಧಾರವಾಡ
- ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
- ಬಿಜಾಪುರ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ
- ತುಮಕೂರುವಿಶ್ವವಿದ್ಯಾಲಯ, ತುಮಕೂರು
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Official Website of Gulbarga University Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಪಟ್ಟಿ
- ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿ
ಉಲ್ಲೇಖಗಳು
ಬದಲಾಯಿಸಿ