ಕರ್ಣಾಟ ಭಾರತ ಕಥಾಮಂಜರಿ
ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. ಇದು ಮೂಲ ಮಹಾಭಾರತದ ಮೊದಲ 10 ಪರ್ವಗಳನ್ನು ಒಳಗೊಂಡಿದೆ. ಹತ್ತನೇ ಗದಾಪರ್ವದಲ್ಲಿ, ಕೆಲವೇ ಪದ್ಯಗಳಲ್ಲಿ ಧರ್ಮರಾಯನ ಪಟ್ಟಾಭಿಷೇಕದ ಕಥಾಭಾಗವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ. ಕುಮಾರವ್ಯಾಸನನ್ನು "ರೂಪಕಸಾಮ್ರಾಜ್ಯ ಚಕ್ರವರ್ತಿ" ಎಂದು ಕರೆಯಲಾಗಿದೆ.
ಕುಮಾರವ್ಯಾಸ ಭಾರತ
ಬದಲಾಯಿಸಿ- ಇದು ವೇದವ್ಯಾಸರಿಂದ ರಚಿತವಾದ ಮಹಾಭಾರತವನ್ನು ತನ್ನದೇ ಆದ ಶೈಲಿ ಮತ್ತು ಅಗತ್ಯ ಮಾರ್ಪಾಟಿನೊಂದಿಗೆ ಕನ್ನಡದಲ್ಲಿ ಭಾಮಿನಿಷಟ್ಪದಿ ಛಂದಸ್ಸಿನಲ್ಲಿ ಗದುಗಿನ ನಾರಣಪ್ಪನು ಬರೆದ ಕನ್ನಡ ನಾಡಿನ ಅತ್ಯಂತ ಜನಪ್ರಿಯ ಕಾವ್ಯ. ಇವನು ತನ್ನನ್ನು ಕುಮಾರವ್ಯಾಸ ಎಂದು ಕರೆದುಕೊಂಡಿದ್ದಾನೆ ಮತ್ತು ಈ ಕಾವ್ಯಕ್ಕೆ 'ಕರ್ನಾಟ ಭಾರತ ಕಥಾ ಮಂಜರಿ' ಎಂದು ಹೆಸರು ಕೊಟ್ಟಿದ್ದಾನೆ. ಜನಪ್ರಿಯವಾಗಿ 'ಕುಮಾರವ್ಯಾಸ ಭಾರತ' ಎಂದು ಹೆಸರಾಗಿದೆ. ಇದು ಮೂಲ ಮಹಾಭಾರತದ ಮೊದಲ 10 ಪರ್ವಗಳನ್ನು ಒಳಗೊಂಡಿದೆ. ಹತ್ತನೇ ಗದಾಪರ್ವದಲ್ಲಿ, ಕೆಲವೇ ಪದ್ಯಗಳಲ್ಲಿ ಧರ್ಮರಾಯನ ಪಟ್ಟಾಭಿಷೇಕದ ಕಥಾಭಾಗವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ.[೧]
ಪರ್ವ ಮತ್ತು ಸಂಧಿಗಳ ವಿವರ
ಬದಲಾಯಿಸಿಪರ್ವಗಳು | ಸಂಧಿಗಳು | ಸಂಧಿಗಳ ವಿಷಯ ಸೂಚನೆ |
---|---|---|
1.ಆದಿಪರ್ವ | 20 | 1 ನೇ ಸಂಧಿ :ಮಂಗಳಾಚರಣೆ ;2 ನೇ ಸಂಧಿ : ಭಾರತ ಕಥಾರಂಭ; 3 ನೇ ಸಂಧಿ :ಕರ್ಣ ಜನನ ; 4 ನೇ ಸಂಧಿ :ಕುರು ಪಾಂಡವರ ಜನನ; 5 ನೇ ಸಂಧಿ ಪಾಂಡು ವೃತ್ತಾಂತ ; 6 ನೇ ಸಂಧಿ : ಭೀಮ ದುರ್ಯೋಧನರ ವೈರ - ದ್ರೋಣರಾಗಮನ; 7 ನೇ ಸಂಧಿ: ಶಸ್ತ್ರ ಪ್ರದರ್ಶನ; ದ್ರುಪದ ಮಾನಭಂಗ; ದ್ರೌಪದಿ - ದೃಷ್ಟದ್ಯುಮ್ನರ ಜನನ;; 8 ನೇ ಸಂಧಿ:ಅರಗಿನ ಮನೆಯಲ್ಲಿ; 9ನೇ ಸಂಧಿ : ಹಿಡಿಂಬಕ ವಧೆ, ಹೈಡಿಂಬ ಜನನ; 10ನೇ ಸಂಧಿ:ಬಕವಧೆ ; 11ನೇ ಸಂಧಿ:ಅಂಗಾರವರ್ಮ ವೃತ್ತಾಂತ. ಪಾಂಚಾಲ ನಗರ ಪ್ರವೇಶ; 12ನೇ ಸಂಧಿ:ಸ್ವಯಂವರ ಸಿದ್ಧತೆ.; 13 ನೇ ಸಂಧಿ:ಸ್ವಯಂವರ ಮಂಟಪದಲ್ಲಿ ದ್ರೌಪದಿ.; 14 ನೇ ಸಂಧಿ:ರಾಜರಾಜರನ್ನಲ್ಲಾ ಮತ್ಸ್ಯ ಯಂತ್ರ ಗೆದ್ದಿತು.; 15ನೇ ಸಂಧಿ:ಬ್ರಾಹ್ಮಣ ವೇಷಧಾರಿ ಅರ್ಜುನ: ಯಂತ್ರ ಬೇಧನ ರಿಪುನೃಪ ಮರ್ದನ. 16 ನೇ ಸಂಧಿ: ವ್ಯಾಸರ ಉಪದೇಶ; 17ನೇ ಸಂಧಿ: ಮತ್ತೆ ಹಸ್ತಿನಾಪುರಕ್ಕೆ ಪಾಮಡವರ ಪ್ರವೇಶ; 18ನೇ ಸಂದಿ:ರಾಜ್ಯ ವಿಭಜನೆ; 19ನೇ ಸಂಧಿ,ಸುಭದ್ರಾ ಪರಿಣಯ; 20 ನೇ ಸಂಧಿ:ಖಾಂಡವ ವನ ದಹನ. |
2.ಸಭಾಪರ್ವ | 16 | 1 ನೇ ಸಂಧಿ :ರಾಜಸೂಯಾರಂಭ ;2 ನೇ ಸಂಧಿ : ಜರಾಸಂದನ ವಧೆ; 3ನೇ ಸಂಧಿ :ಪಾರ್ಥ ದಿಗ್ವಿಜಯ ; 4 ನೇ ಸಂಧಿ :ಭೀಮನ ಪೂರ್ವ ದಿಗ್ವಿಜಯ; 5 ನೇ ಸಂಧಿ ಸಹದೇವನಿಂದ ದಕ್ಷಿಣ ದಿಗ್ವಿಜಯ; 6 ನೇ ಸಂಧಿ :ನಕುಲನ ಪಶ್ಚಿಮ ದಿದ್ವಿಜಯ ; 7 ನೇ ಸಂಧಿ: ಯಾಗಾರಂಭ; 8 ನೇ ಸಂಧಿ:ಶಿಶುಪಾಲ ಪ್ರತಾಪ; 9ನೇ ಸಂಧಿ : ಭೀಷ್ಮರಿಂದ ಕೃಷ್ನ ಸ್ತುತಿ; 10ನೇ ಸಂಧಿ:ಶಿಶುಪಾಲ ಛೇದನ; 11ನೇ ಸಂಧಿ:ಯಾಗ ಸಮಾಪ್ತಿ ; 12ನೇ ಸಂಧಿ:ಕಾಲಪಾಶಾಕರುಷಣದಿಂದ ಧರ್ಮರಾಯ ಹಸ್ತಿನಾವತಿಗೆ ಪಯಣ; 13 ನೇ ಸಂಧಿ:ಕಪಟದ್ಯೂತದಲ್ಲಿ ಕೌರವ ಧರ್ಮಜನನ್ನು ಗೆಲ್ಲುತ್ತಾನೆ.; 14 ನೇ ಸಂಧಿ:ಪರಿಭವದಿಂದ ದ್ರೌಪದಿಯನ್ನು ಶ್ರೀಕೃಷ್ಣನ ಸ್ತುತಿ ಕಾಯುತ್ತದೆ. ; 15ನೇ ಸಂಧಿ:ನೊಂದ ಪಾಂಡವರನ್ನು ಧೃತರಾಷ್ಟ್ರ ಸಂತೈಸಿ ಕಳಿಸುತ್ತಾನೆ.: 16 ನೇ ಸಂಧಿ: ಮತ್ತೆ ದ್ಯೂತ; ಮತ್ತೆ ಸೋಲು;ವನವಾಸ ಯಾತ್ರೆ; |
3.ಅರಣ್ಯಪರ್ವ | 23 | 1 ನೇ ಸಂಧಿ :ವನಪ್ರವೇಶ, ಕಿಮ್ಮೀರನ ವಧೆ ;2 ನೇ ಸಂಧಿ : ಶ್ರೀಕೃಷ್ಣ ಸಂದರ್ಶನ; 3ನೇ ಸಂಧಿ :ಕಣ್ವಾಶ್ರಮದ ಜಂಬೂಫಲ; 4 ನೇ ಸಂಧಿ :ಇಂದ್ರಕೀಲಕ್ಕೆ ಅರ್ಜುನನ ಯಾತ್ರೆ; 5 ನೇ ಸಂಧಿ: ಶಂಭು ಕಿರಾತಪ್ರವೇಶ;ಮೂಕದಾನವ ದಹನ; 6 ನೇ ಸಂಧಿ :ಧೀರಭಕ್ತ ಅರ್ಜುನನಿಗಾದ ಶಿವಕರುಣೆಯ ಲಾಭ; 7 ನೇ ಸಂಧಿ:ಇಂದ್ರಪುರಕ್ಕೆ ಅರ್ಜುನ; 8 ನೇ ಸಂಧಿ:ಊರ್ವಸಿಯ ಸುಮನೋಹರ ಪ್ರಣಯದಿಂದ ಅರ್ಜುನ ಪಾರಾದುದು.; 9ನೇ ಸಂಧಿ : ಧರ್ಮನಂದನನ ತೀರ್ಥಯಾತ್ರೆ; 10ನೇ ಸಂಧಿ:ಭೀಮ ಆಂಜನೇಯನ ದರ್ಶನ ಪಡೆಯುತ್ತಾನೆ; 11ನೇ ಸಂಧಿ:ಜಟಾಸುರ ಮಣಿಮಾನನರನ್ನು ಭೀಮ ಕೊಂದುದು.; 12ನೇ ಸಂಧಿ:ಧರ್ಮರಾಯನಿಗೆ ಅರ್ಜುನ ನಿರೂಪಿಸಿದ ನಿವಾತಕವಚರ ಯುದ್ಧ ವರ್ಣನೆ; 13 ನೇ ಸಂಧಿ:ಸರ್ಪಬಂದನದಿಂದ ಭೀಮಸೇನನ್ನು ಧರ್ಮರಾಯ ಉಳಿಸುತ್ತಾನೆ.; 14 ನೇ ಸಂಧಿ:ಕೃಷ್ಣಾಗಮನ.;15ನೇ ಸಂಧಿ:ಮುನಿಗಳ ಉಪಕಥೆ: 16 ನೇ ಸಂಧಿ: ದೂರ್ವಾ ವೃತ್ತಾಂತ; 17ನೇ ಸಂಧಿ: ಘೋಷಯಾತ್ರೆಯ ನೆಪ; 18ನೇ ಸಂದಿ:ಗಂಧರ್ವ ಕೌರವ ಬಲಗಳೊಡನೆ ಹೋರಾಟ; 19ನೇ ಸಂಧಿ,ಚಿತ್ರಸೇನ ಕೌರವನನ್ನು ಕಟ್ಟಿಕೊಂಡು ಒಯ್ಯುತ್ತಾನೆ; 20 ನೇ ಸಂಧಿ:ಅರ್ಜುನನಿಂದ ಚಿತ್ರಸೇನನ ಪರಾಭವ.; ೨೧ನೇ ಸಂಧಿ:ಮಾನಭಂಗದಿಂದ ನೊಂದ ಕೌರವ ಪ್ರಾಯೋಪವೇಶಕ್ಕೆ ತೊಡಗುವನು, ಅವನಿಗೆ ರಾಕ್ಷಸೋಪದೇಶ; ೨೨ನೇ ಸಂಧಿ:ಸೈಂಧವನಿಂದ ದ್ರೌಪದಿಯ ಅಪಹರಣ, ಅವನ ಪರಿಭವ-ಪ್ರತಿಜ್ಞೆ- ಶಿವನಿಂದ ಪಾಂಡವರನ್ನು ಗೆಲ್ಲಲು ವರ, ೨೩ನೇ ಸಂಧಿ:ಯಕ್ಷಪ್ರಶ್ನೆ. |
4.ವಿರಾಟಪರ್ವ | 10 | 1 ನೇ ಸಂಧಿ :ವಿರಾಟನಗರ ಪ್ರವೇಶ,; 2 ನೇ ಸಂಧಿ :ದ್ರೌಪದಿಯಲ್ಲಿ ಕೀಚಕನ ಮೋಹ; 3ನೇ ಸಂಧಿ :ಭೀಮನಿಂದ ಕೀಚಕನ ವಧೆ; 4 ನೇ ಸಂಧಿ :ದಕ್ಷಿಣ ಗೋಗ್ರಹಣದಲ್ಲಿ ಭೀಮ ಸಶರ್ಮಕನನ್ನು ಹಿಡಿಯುತ್ತಾನೆ; 5 ನೇ ಸಂಧಿ: ಉತ್ತರಗೋಗ್ರಹಣ, ಉತ್ತರನ ಪೌರುಷ, ಅರ್ಜುನನ ಸಾರಥ್ಯ; 6 ನೇ ಸಂಧಿ :ಭೀತಿಗೊಂಡ ಉತ್ತರನನ್ನು ಕಲಿಮಾಡಿ ಅರ್ಜುನ ಕೌರವ ಬಲವನ್ನು ಎದುರಿಸುತ್ತಾನೆ.;7 ನೇ ಸಂಧಿ: ಕೌರವನನ್ನು ಸದೆದು ಗೋವುಗಳನ್ನು ಬಿಡಿಸಿದುದು.; 8 ನೇ ಸಂಧಿ:ಸನ್ಮೋಹನಾಸ್ತ್ರ ಪ್ರಯೋಗ.; 9ನೇ ಸಂಧಿ : ಉತ್ತರ ಧನಂಜಯರು ಜಯಶಾಲಿಗಳಾಗಿ ನಗರಕ್ಕೆ ಹಿಂದಿರುಗಿದುದು.; 10ನೇ ಸಂಧಿ:ಅಭಿಮನ್ಯು ಉತ್ತರೆಯರ ಮದುವೆಗೆ ಶ್ರೀಕೃಷ್ಣ ಬರುತ್ತಾನೆ; |
5.ಉದ್ಯೋಗಪರ್ವ | 11 | 1 ನೇ ಸಂಧಿ :ಭಕ್ತಕುಟುಂಬಿ ಅರ್ಜುನನ ಸಾರಥಿಯಾಗುವುದು.; 2 ನೇ ಸಂಧಿ :ಶಲ್ಯನನ್ನು ಕೌರವ ಒಲಿಸಿಕೊಂಡುದು, ಸಂಜಯನ ದೌತ್ಯ; 3ನೇ ಸಂಧಿ :ವಿದುರ ನೀತಿ; 4 ನೇ ಸಂಧಿ :ಸನತ್ಸುಜಾತ ನೀತಿ; 5 ನೇ ಸಂಧಿ:ಕೃಷ್ಣ ಪಾಂಡವರು ಹೇಳಿದುದನ್ನು ಸಂಜಯ ಕೌರವರಿಗೆ ನಿರೂಪಿಸುತ್ತಾನೆ. ; 6 ನೇ ಸಂಧಿ :ಸಂಗ್ರಾಮಕ್ಕೆ ಪಾಂಡವರ ಮನಸ್ಸನ್ನು ಕೃಷ್ಣ ಹದಗೊಳಿಸಿದುದು.;7 ನೇ ಸಂಧಿ: 'ಕಾಳಗವನೇ ಬಲಿದು ಬಹೆ' ಎಂದು ದ್ರೌಪದಿಗೆ ವಚನವಿತ್ತು ಕೃಷ್ಣ ಹಸ್ತಿನಾವತಿಗೆ ಪಯಣ.; 8 ನೇ ಸಂಧಿ:ಕೌರವನ ಒಡ್ಡೋಲಗಕ್ಕೆ ರಾಯಭಾರಿ ಕೃಷ್ಣ ನಡೆತರುತ್ತಾನೆ.; 9ನೇ ಸಂಧಿ : 'ಬಿಡು ನೆಲನ, ಕೇಡಿಗರ ಮಾತಿಗೊಡಂಬಡದಿರು' ಎಂದು ಹೇಳಿದ ಕೃಷ್ಣನನ್ನು ಕೌರವ ಕಟ್ಟುವ ಯೋಜನೆ, ವಿಶ್ವರೂಪದರ್ಶನ.; 10ನೇ ಸಂಧಿ:ಕರ್ಣಬೇಧನ;11ನೇ ಸಂದಿ: ದೃಷ್ಟದ್ಯುಮ್ನನು ಸೇನಾಧಿಪತಿಯಾಗುತ್ತಾನ್.; |
6.ಭೀಷ್ಮಪರ್ವ | 10 | 1 ನೇ ಸಂಧಿ :ಭೀಷ್ಮನು ಕೌರವರ ಸೇನಾಧಿಪತಿಯಾದುದು.; 2 ನೇ ಸಂಧಿ :ಶತ್ರು ಸುಭಟರನ್ನು ಧರ್ಮರಾಯನು ಸಾಮದಿಂದ ಒಲಿಸಿಕೊಂಡುದು.; 3ನೇ ಸಂಧಿ :ತನ್ನ ನಿಜವನ್ನು ತೋರಿ ಶ್ರೀಕೃಷ್ಣನು ಅರ್ಜುನನ ವಿಷಾದವನ್ನು ಕಳೆಉದು.; 4 ನೇ ಸಂಧಿ :ಯುದ್ಧಾರಂಭ; 5 ನೇ ಸಂಧಿ:ಉಭಯ ಪಕ್ಷದ ಮಹಾರಥರ ಯುದ್ಧ. ; 6 ನೇ ಸಂಧಿ :ಕೃಷ್ಣನ ಕೋಪವನ್ನು ಕೆರಳಿಸಿ ಅದನ್ನು ಭಕ್ತಿಯಿಂದ ಶಮನಗೊಳಿಸಿ ದೇವನಿಗಾಗುತ್ತಿದ್ದ ಅಪವಾದವನ್ನು ತಪ್ಪಿಸುತ್ತಾನೆ.;7 ನೇ ಸಂಧಿ: ಕೃಷ್ಣನೊಡನೆ ಬಂದ ಪಾಂಡವರುಪ್ರಾರ್ಥಿಸಲು ಭೀಷ್ಮರು ಶಸ್ತ್ರಸಂನ್ಯಾಸ ಮಾಡುವುದಾಗಿ ತಿಳಿಸಿದುದು.; 8 ನೇ ಸಂಧಿ:ಅರ್ಜುನನ ಪ್ರತಾಪವನ್ನು ಕಂಡದ್ರೋಣಾದಿಗಳ ಬೆರಗು.; 9ನೇ ಸಂಧಿ : ಭೀಷ್ಮಾರ್ಜುನ ಸಂಗ್ರಾಮ.; 10ನೇ ಸಂಧಿ:ಭೀಶ್ಮರ ಶರಶಯನ; |
7.ದ್ರೋಣಪರ್ವ | 19 | 1 ನೇ ಸಂಧಿ :ದ್ರೋಣ ಸೇನಾದಿಪತ್ಯ;; 2 ನೇ ಸಂಧಿ : ಧರ್ಮರಾಯನನ್ನು ಹಿಡಿದುತರುವುದಾಗಿ ಕೌರವನಿಗೆ ದ್ರೋಣರು ಭಾಷೆ ಕೊಡುವುದು.; 3ನೇ ಸಂಧಿ :ಸುಪ್ರತೀಕ ಭಗದತ್ತರನ್ನು ಅರ್ಜುನ ಕೊಲ್ಲುವುದು; 4 ನೇ ಸಂಧಿ :ಪದ್ಮವ್ಯೂಹ ರಚನೆ, ವ್ಯೂಹ ಬೇಧನಕ್ಕೆ ಅಭಿಮನ್ಯು ಹೊರಟಿದ್ದು,; 5 ನೇ ಸಂಧಿ: ಅಭಿಮನ್ಯುವಿನ ಮಕ್ಕಳಾಟಿಕೆ ಅತಿರಥರಿಗೆ ಮೃತ್ಯವಾಟವಾಗಿ ಶತ್ರು ಕುಮಾರರು ಅಹುತಿಗೊಳ್ಳುವರು.; 6 ನೇ ಸಂಧಿ :ಕಾಡುಕಿಚ್ಚಿನ ಉಪಶಮನ, ಅಭಿಮನ್ಯವಿನ ಮರಣ; 7 ನೇ ಸಂಧಿ:ಧರ್ಮರಾಯನ ದುಃಕಾತಿರೇಕ, ವ್ಯಾಸರ ಉಪದೇಶ; 8 ನೇ ಸಂಧಿ:ಅರ್ಜುನನ ಭಯಂಕರ ಶೋಕ, ಕೋಪ ಸೈಧವ ವಧೆ ಪ್ರತಿಜ್ಞೆ.; 9ನೇ ಸಂಧಿ : ಭಕ್ತಿಯಿಂದ ದ್ರೋಣರನ್ನು ಗೆದ್ದು ಅರ್ಜುನ ಸೈನ್ಯವ್ಯೂಹವನ್ನು ಬೇಧಿಸುವುದು. ; 10ನೇ ಸಂಧಿ:ಕೌರವನನ್ನು ಗೆದ್ದ ಅರ್ಜುನ ಬಳಲಿದ ತನ್ನ ಕುದುರೆಗಳಿಗೆ ಸಂಗ್ರಾಮ ಮಧ್ಯದಲ್ಲಿ ನೀರು ಕುಡಿಸುವುದು.; 11ನೇ ಸಂಧಿ:ಧರ್ಮರಾಜ ಕಳಿಸಿದ ಸಾತ್ಯಕಿ ಅರ್ಜುನನ್ನು ಸೇರುವುದು.; 12ನೇ ಸಂಧಿ:ಭೀಮಸೇನ ಕೌರವಾನುಜರನ್ನು ಅಹುತಿಗೊಳ್ಳುವುದು.; 13 ನೇ ಸಂಧಿ:ದ್ರೋಣರನ್ನು ಗೆದ್ದ ಭೀಮ ಕರ್ಣನೊಡನೆ ಸೆಣಸಿ ಘಾಸಿಯಾಗುವುದು.; 14 ನೇ ಸಂಧಿ:ಸೈಂದವ ವಧೆ.;15ನೇ ಸಂಧಿ:ಘಟೋತ್ಕಚನ ರಾತ್ರಿ ಯುದ್ಧ: 16 ನೇ ಸಂಧಿ: ಕರ್ಣನಿಂದ ಅವನ ಮರಣ.; 17ನೇ ಸಂಧಿ: ರಾತ್ರಿಯುದ್ಧದಲ್ಲಿ ದ್ರೋಣರ ಉಗ್ರ ಪ್ರತಾಪ.; 18ನೇ ಸಂದಿ:ದ್ರೋಣರ ಮರಣ.; 19ನೇ ಸಂಧಿ:ಅಶ್ವತ್ಥಾಮನ ಪ್ರಲಯ ಕೋಪ, ನಾರಾಯಣ ಅಸ್ತ್ರ ಪ್ರಯೋಗ, ಶ್ರೀಕೃಷ್ಣನಿಂದ ರಕ್ಷೆ; |
8.ಕರ್ಣ ಪರ್ವ | 27 | 1 ನೇ ಸಂಧಿ :ಕರ್ಣನ ಸೇನಾದಿಪತ್ಯ;; 2 ನೇ ಸಂಧಿ : ಭೀಮಸೇನನು ಕ್ಷೇಮಧೂರ್ತಿಯನ್ನು ಕೊಲ್ಲುವುದು.; 3ನೇ ಸಂಧಿ :ಕೌರವಸೈನ್ಯವನ್ನು ಸಾತ್ಯಕಿ ಕಲಕುವುದು; 4 ನೇ ಸಂಧಿ :ದುರ್ಯೋದನನ್ನು ಧರ್ಮರಾಯ ಗೆಲ್ಲುವುದು,; 5 ನೇ ಸಂಧಿ: ತ್ರಿಪುರ ದಹನದ ಕಥೆಯನ್ನು ಹೇಳಿ ಕೌರವನು ಶಲ್ಯನನ್ನು ಕರ್ಣನ ಸಾರಥಿಯಾಗಲು ಒಡಂಬಡಿಸುವುದು.; 6 ನೇ ಸಂಧಿ :ತ್ರಿಪುರ ದಹನದ ಕಥೆ; 7 ನೇ ಸಂಧಿ:ಕಾಮಾರಿಯು ತ್ರಿಪುರಾರಿಯಾದುದಯ; 8 ನೇ ಸಂಧಿ:ಸಾರಥಿ ಶಲ್ಯನೊಡನೆ ಕರ್ಣ ಯುದ್ಧಭೂಮಿಗೆ ಬರುವುದು.; 9ನೇ ಸಂಧಿ : ಶಲ್ಯ ಕರ್ಣರ ತಿಕ್ಕಾಟ. ; 10ನೇ ಸಂಧಿ:ಸುಷೇಣನನ್ನು ಭೀಮ ಕೊಂದುದು.;11ನೇ ಸಂಧಿ:ಧರ್ಮರಾಯನನ್ನು ಕರ್ಣ ಭಂಗಿಸುವುದು.; 12ನೇ ಸಂಧಿ:ಭೀಮನಿಂದ ಕರ್ಣನ ಪರಾಭವ.; 13 ನೇ ಸಂಧಿ:ಭೀಮನಿಂದ ಕೌರವಾನುಜರ ಮರಣ.; 14 ನೇ ಸಂಧಿ:ಅರ್ಜುನನು ಅಣ್ಣನ ಸೋಲನ್ನು ಕೇಳಿ ಬರುತ್ತಿರುವಾಗ ಕೌರವ ಬಲವನ್ನು ಸವರುವುದು.;15ನೇ ಸಂಧಿ:ಕೌರವಸಾಗರವನ್ನು ಭೀಮಸೇನ ಕದಡುವುದು.: 16 ನೇ ಸಂಧಿ: ನೊಂದ ಅಣ್ಣನನ್ನು ಕಾಣಲು ಅರ್ಜುನ ಕೃಷ್ಣನೊಡನೆ ಬರುವುದು, ಧರ್ಮಜನ ಬಿರುನುಡಿ.; 17ನೇ ಸಂಧಿ: ಅವಮಾನಿತ ಅರ್ಜುನ ಅಣ್ಣನನ್ನು ಕೊಲ್ಲುತ್ತೇನೆಂದು ಮುನ್ನುಗ್ಗುವುದು.ಶ್ರೀಕೃಷ್ಣನ ಹಿತವಚನ, ಸಹೋದರರ ಸಮ್ಮಿಲನ; 18ನೇ ಸಂದಿ:ಅಣ್ಣನಾಣತಿ ಪಡೆದು ಅರ್ಜು ಯುದ್ಧಕ್ಕೆ ಹೊರಟುದು ; 19ನೇ ಸಂಧಿ:ದುಶ್ಯಾಸನನ ರಕ್ತದಲ್ಲಿ ಭೀಮಸೇನನ ಕೋಪಾಗ್ನಿಗೆ ಸ್ನಾನ.; 20 ನೇ ಸಂಧಿ: ಜಯಮತ್ತನಾದ ಭೀಮನನ್ನು ವೃಷಸೇನನು ವಿರಥನನ್ನಾಗಿ ಮಾಡುವುದು.; 21ನೇ ಸಂದಿ:ಕರ್ಣಾರ್ಜುನರ ಯುದ್ಧಾರಂಬ; 22ನೇ ಸಂಧಿ:ಸೃಷ್ಟಿಯ ಸಮಸ್ತ ಸುರಾಸುರ ಶಕ್ತಿಗಳು ಎರಡೂ ಒಟ್ಟಾಗಿ ಕರ್ಣಾರ್ಜುನರ ಪಕ್ಷ ವಹಿಸುವುದು.; 23ನೇ ಸಂಧಿ: ಕರ್ಣಾರ್ಜುನರ ಯುದ್ಧ,ಕೃಷ್ಣ ಮೆಚ್ಚುವಂತೆ ಕರ್ಣಹೋರಾಡುವುದು.; 24 ನೇ ಸಂಧಿ :ಕರ್ಣನ ಪರಾಕ್ರಮಕ್ಕೆ ಆಂಜನೇಯ ತಲೆದೂಗುವುದು.; 25 ನೇ ಸಂಧಿ :ಸರ್ಪಬಾಣ ಪ್ರಯೋಗ, ಶಲ್ಯ ತಿರಸ್ಕಾರ.; 26 ನೇ ಸಂಧಿ:ಕರ್ಣನ ವಿಜಯಸಿರಿ ಧನಂಜಯನ ಭುಜಕ್ಕೆ ಸರಿದಳು.; 27 ನೇ ಸಂಧಿ:ಕರ್ಣಾವಸಾನ. ಪಾಂಡವರ ದುಮ್ಮಾನ. |
9.ಶಲ್ಯಪರ್ವ | 3 | 1 ನೇ ಸಂಧಿ :ಶಲ್ಯನ ಸೇನಾದಿಪತ್ಯ;; 2 ನೇ ಸಂಧಿ : ಧರ್ಮರಾಯನು ಶಲ್ಯನನ್ನು ಜಯಿಸುವುದು.; 3ನೇ ಸಂಧಿ :ಧರ್ಮರಾಯನಿಂದ ಶಲ್ಯವಧೆ; |
10.ಗದಾಪರ್ವ | 13 | 1 ನೇ ಸಂಧಿ :ಸುಯೋಧನನು ತನ್ನನ್ನು ತಾನೇ ಸೇನಾಧಿಪತಿಯಾಗಿ ಮಾಡಿಕೊಂಡುದು.; 2 ನೇ ಸಂಧಿ :ಸಹದೇವನಿಂದ ಶಕುನಿಯ ಕಥೆ.; 3ನೇ ಸಂಧಿ :ದ್ವೈಪಾವನ ಸರೋವರ ಪ್ರವೇಶ.; 4 ನೇ ಸಂಧಿ :ಪಾಂಡವರು ಸುಯೋಧನನ್ನು ಅರಸಿಕೊಂಡು ಅಲ್ಲಿಗೆ ಬರುವುದು.; 5 ನೇ ಸಂಧಿ:ಪಾಂಡವರ ಅವಹೇಳನದಿಂದ ಕೌರವ ಸರೋವರದಿಂದ ಹೊರಬರುತ್ತಾನೆ.; 6 ನೇ ಸಂಧಿ :ಭೀಮ ದುರ್ಯೋಧನರ ಸಂಗ್ರಾಮ; 8 ನೇ ಸಂಧಿ:ತೊಡೆಯೊಡೆದ ಕೌರವನನ್ನು ಕಂಡು ಅಶ್ವತ್ಥಾಮ ಪಾಂಡವರನ್ನು ನಿರ್ನಾಮಗೊಳಿಸಲು ಪ್ರತಿಜ್ಞೆ ಮಾಡುತ್ತಾನೆ.; 9ನೇ ಸಂಧಿ :ರಾತ್ರಿ ಪಾಂಡವ ಶಿಬಿರದಲ್ಲಿ ಪ್ರಾಣ ಹತ್ಯೆ.; 10ನೇ ಸಂಧಿ:ಅಶ್ವಸ್ಥಾಮನ ಕುಶಿಕಾಸ್ತ್ರದಿಂದ ಉತ್ತರೆಯ ಗರ್ಭವನ್ನು ಶ್ರೀಕೃಷ್ಣ ಕಾಪಾಡುತ್ತಾನೆ. ಅಶ್ವತ್ಥಾಮನನ್ನು ಕೊಲ್ಲಲು ಹೊರಡುವ ಭೀಮಾರ್ಜುನರನ್ನು ದ್ರೌಪದಿ ತಡೆಯುತ್ತಾಳೆ.;11ನೇ ಸಂಧಿ:ವೇದವ್ಯಾಸರು ದೃತರಾಷ್ಟ್ರನನ್ನು ಸಂತೈಸುವುದು, ಧರ್ಮರಾಯನಿಗೆ ಗಾಂಧಾರಿಯ ಶಾಪ.; 12ನೇ ಸಂಧಿ:ಮಡಿದ ಮಕ್ಕಳನ್ನು ಯುದ್ಧಭೂಮಿಯಲ್ಲಿ ಕಂಡು ಗಾಂಧಾರಿಯ ವಿಲಾಪ.; 13 ನೇ ಸಂಧಿ:ಧರ್ಮರಾಜ ಪಟ್ಟಾಭಿಷೇಕ.; |
ಒಟ್ಟು ಸಂಧಿಗಳು | 152 | ಪದ್ಯಗಳು: 8244 |
ಕುಮಾರವ್ಯಾಸ ಬಾರತದ ಹಿನ್ನೆಲೆಯ ಇತಿಹಾಸ
ಬದಲಾಯಿಸಿ- ಒಂದು ಸಾವಿರ ವರ್ಷದಿಂದ ಬೆಳೆದುಬಂದ ಕನ್ನಡ ಸಾಹಿತ್ಯವನ್ನು, ಆಧುನಿಕ ಕಾಲವನ್ನೂ ಸೇರಿಸಿ ನಾಲ್ಕು ಘಟ್ಟಗಳಾಗಿ ಗುರುತಿಸಬಹುದು. ಮೊದಲನೆಯದು, ಹತ್ತನೆಯ ಶತಮಾನದಲ್ಲಿ; ಎರಡನೆಯದು ಹನ್ನೆರಡನೆಯ ಶತಮಾನದಲ್ಲಿ, ಮೂರನೆಯದು ಹದಿನಾಲ್ಕು ಹದಿನೈದನೆಯ ಶತಮಾನದಲ್ಲಿ, ನಾಲ್ಕನೆಯದು ಹತ್ತೊಂಭತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ.
- ಪ್ರಥಮದ ಪ್ರೌಢ ಕಾವ್ಯೋದಯದಲ್ಲಿ ಜೈನಧರ್ಮರೂಪದಿಂದ ಆವಿರ್ಭೂತವಾದ ಆ ಚೇತನಶಕ್ತಿ ಕನ್ನಡಕ್ಕೆ ಪಂಪನ ಕೃತಿಗಳಲ್ಲಿ ಕಳಶರೂಪವಾಗಿ ನಿಂತಿದೆ. ದ್ವಿತೀಯ ಕಾವ್ಯೋದಯ ಕಾಲದಲ್ಲಿ ವೀರಶೈವ ಧರ್ಮರೂಪದಿಂದ ಮೈದೋರಿದ ಆ ಶಕ್ತಿ ಹರಿಹರ, ರಾಘವಾಂಕ, ಮೊದಲಾದವರ ಕೃತಿಗಳಲ್ಲಿ ಉಜ್ವಲವಾಗಿ ತೋರಿಕೊಂಡಿದೆ.
- ತೃತೀಯ ಕಾವ್ಯೋದಯ ಕಾಲದಲ್ಲಿ ವೈಷ್ಣವಭಕ್ತಿರೂಪದಲ್ಲಿ ಹೊಸಬಗೆಯಲ್ಲಿ ರಸಸ್ಪೂರ್ತಿಯಿಂದ ಕೂಡಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಣಪ್ಪನ ಈ ಮಹಾಕೃತಿಯು ಗಗನಚುಂಬಿ ಬೃಹತ್ ಗೋಪುರವಾಗಿ ಪ್ರಕಾಶಿಸುತ್ತಿದೆ. ಈಗ ಈ ಗದುಗಿನ ನಾರಣಪ್ಪನೆ ಪ್ರಸ್ತುತ ಕವಿನಾಯಕ. ಹೊಸ ಮತ್ತು ಹಳೆಗನ್ನಡಗಳ ಕಿರೀಟಪ್ರಾಯ ಕವಿ.
- ನಗರವಷ್ಟೇ ಅಲ್ಲ ಹಳ್ಳಿ ಹಳ್ಳಿಗಳಲ್ಲಿ ಇಂದೂ ನಾಡಿನೆಲ್ಲಡೆ ಮೊಳಗುವಂತೆ ರಸ, ಇಂಪು ಲಯ, ತಾನ, ಮಾತಿನ ಮೋಡಿ, ಛಂದಸ್ಸಿನ ಕುಣಿತವನ್ನು ಗಮಕಿಗಳಿಂದ ಹಾಡಿಸುತ್ತಿರುವ ಕಾವ್ಯರಸ ಹರಿಸುತ್ತಿರುವ ಮೋಡಿಗಾರ. ಇವನು ಭಾಮಿನಿಷಟ್ಪದಿಯ ಛಂದಸ್ಸಿನಲ್ಲಿ ಕನ್ನಡ ಕಾವ್ಯಕ್ಕೆ, ಹೊಸಹುಟ್ಟು, ಹೊಸಮಾರ್ಗ, ದಿಕ್ಕನ್ನು ತೋರಿದ ಧ್ರುವತಾರೆಯೆಂದರೆ ಉತ್ಪ್ರೇಕ್ಷೆಯಲ್ಲ.
- ಈತನಿಗೆ 'ವೇದವ್ಯಾಸರ ಪ್ರೇಮಕುಮಾರ'- ಕುಮಾರವ್ಯಾಸನೆಂದರೂ ಸರಿ, ಅವನೇ ಹೇಳಿದಂತೆ ವೀರನಾರಾಯಣನ ಪ್ರೇಮಕಿಂಕರ ಅಥವಾ ಕನ್ನಡ ನಾಡಿನ ನೆಚ್ಚಿನ 'ನಾರಣಪ್ಪ'ನೆಂದರೂ ಒಪ್ಪುವುದು.[೨]
ದಂತ ಕಥೆ
ಬದಲಾಯಿಸಿ- ವರಕವಿ ನಾರಣಪ್ಪನು ಗದುಗಿನ ವೀರನಾರಾಯಣ ದೇವಾಲಯದ ಒಂದು ಕಂಬದ ಹತ್ತಿರ ಒದ್ದೆ ಪಂಚೆಯನ್ನು ಉಟ್ಟು, ಆ ಪಂಚೆ ಒಣಗುವವರೆಗೂ ಈ ಕಾವ್ಯದ ಪದ್ಯಗಳನ್ನು ಬರೆಯುತ್ತಿದ್ದನಂತೆ. ಅದು ಒಣಗಿದ ನಂತರ ಅಲ್ಲಿಗೆ ನಿಲ್ಲಿಸಿ ಪುನಃ ಮಾರನೇ ದಿನ ಅದನ್ನು ಅದೇ ರೀತಿ ಮುಂದುವರೆಸುತ್ತಿದ್ದನೆಂಬ ಪ್ರತೀತಿ ಇದೆ. ಈಗಲೂ ಆ ದೇವಾಲಯದಲ್ಲಿ ನಾರಣಪ್ಪನು ಕುಳಿತ ಕಂಬದ ಗುರುತಿದ್ದು ಅಲ್ಲಿ ಅವನ ಮೂರ್ತಿಯನ್ನು ಸ್ಥಾಪಿಸಿದ್ದಾರೆ.
- ಈ ಪ್ರಸ್ತುತ ಗ್ರಂಥರಚನೆಯ ವಿಷಯದಲ್ಲಿ ಮೇಲೆ ಹೇಳಿದ ಒಂದು ದಂತ ಕಥೆಯನ್ನು ಈ ಹಿಂದೆ ಸರ್ಕಾರ ಅಚ್ಚು ಹಾಕಿಸಿದ ಕರ್ಣಾಟ ಭಾರತ ಕಥಾಮಂಜರಿ ಗ್ರಂಥದ ಪೀಠಿಕೆ 'ತೋರಣ ನಾಂದಿ'ಯಲ್ಲಿ, ಕುವೆಂಪು ಅವರು ತಮ್ಮದೇ ಭಾಷೆ ಶೈಲಿಯಲ್ಲಿ ಅದನ್ನು ಹೇಳಿದ್ದಾರೆ, "ಒದ್ದೆ ಬಟ್ಟೆಯುಟ್ಟು (ಗದುಗಿನ ದೇವಾಲಯದ) ವೀರನಾರಾಯಣನ ಮುಂದೆ ಕುಳಿತು, ಭಕ್ತಿರಸಾವೇಶದಿಂದ ಆಡುತ್ತಾ ಹಾಡುತ್ತಿದ್ದ ಆ ಭಕ್ತ ಕವಿಯನ್ನು ನೋಡಿರಲ್ಲಿ ! ಮೈಮರೆತು ಹಾಡುತ್ತಿದ್ದಾನೆ;
- ಜನ ಮೈಮರೆತು ಕೇಳುತ್ತಿದ್ದಾರೆ. ಅವನು ಉಟ್ಟ ಬಟ್ಟೆಯ ತೇವ ಆರಿದಂತೆಲ್ಲಾ ಅವನ ಆವೇಶವೂ ಬತ್ತುತ್ತಾ ಹೋಗುತ್ತದೆ. ಆದರೂ ಜನ ನಿಷ್ಪಂದರಾಗಿ ಕೇಳುತ್ತಲೇ ಇದ್ದಾರೆ." ದಂತಕಥೆಯಾದರೂ ಇದು ಭಾವಪೂರ್ಣವಾಗಿದೆ. ರಸಯಾತ್ರೆಯನ್ನು ಕೈಗೊಂಡ ಸಹೃದಯ ಚೇತನಕ್ಕೆ ಆ ದಂತಕಥೆಯು ಧ್ವನಿಪೂರ್ಣವಾಗಿ ತೋರುತ್ತದೆ.
- ದರ್ಶನಪ್ರತಿಭಾವಶಿಯಾಗಿ ಭಗವಾನ್ ವೀರನಾರಾಯಣ ಕೃಪಾಸೂತ್ರಚಾಲಿತನಾಗಿ ಹಾಡಿದ ಆ ಭಕ್ತ ಕವೀಶ್ವರನಿಗೆ ಈ ಮಾತು ಒಪ್ಪುವಂತೆ ಬೇರೆಯವರಿಗೆ ಒಪ್ಪದು. "ಮಹತ್ತಿನೊಡನೆ ಜನಪ್ರಿಯತೆಯನ್ನೂ ಪಡೆದಿರುವ ವಿರಳಸಂಯೋಗವುಳ್ಳ ಕವಿಗಳಲ್ಲಿ ಈತ ಅಗ್ರಗಣ್ಯನು". "ಕಲಿಯದವರಿಗೂ ಕಾಮಧೇನುವಾಗಿ ಕನ್ನಡ ನಾಡಿನ ಹೃದಯವೇದಿಕೆಯಲ್ಲಿ ಅಗ್ರಸ್ಥಾನ ಪಡೆದ ಮಹಾಧ್ಯಕ್ಷನಾಗಿದ್ದಾನೆ"(ಕುವೆಂಪು).
ಕಾವ್ಯ
ಬದಲಾಯಿಸಿ- ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಆಭಿವೃದ್ಧಿ ಇಲಾಖೆ ೧೯೫೮ರಲ್ಲಿ ಪ್ರಕಟಿಸಿದ 'ಕರ್ಣಾಟ ಭಾರತ ಕಥಾಮಂಜರಿ'ಯ ಮುನ್ನಡಿಯಲ್ಲಿ ಶ್ರೀ ಕೆ.ವಿ.ಪುಟ್ಟಪ್ಪನವರು ಈ ಕಾವ್ಯದ ವಿಚಾರವಾಗಿ ಬರೆದ ದೀರ್ಘ ಮುನ್ನುಡಿಯ ಸಾರಾಂಶವನ್ನು ಕೆಳಗೆ ಕೊಟ್ಟಿದೆ.(ಕಾಪಿರೈಟ್ ಮುಕ್ತ) ಅದು ಕಾವ್ಯದ ಬಗೆಗೆ ಎಲ್ಲವನ್ನೂ ಹೇಳದಿದ್ದರೂ, ಕಾವ್ಯದ ಗುಣಮಟ್ಟದ ಪರಿಚಯಕ್ಕೆ ಸಾಕಾಗುವುದು. ಅದರ ಜೊತೆಗೆ ಕೊರತೆ ಕಂಡಲ್ಲಿ ಕಾವ್ಯದ ಪರಿಚಯಕ್ಕೆ, ಪಾತ್ರ ವಿವರಣೆಗೆ ಕಾವ್ಯದ ಭಾಗಗಳನ್ನೇ ಆಧಾರವಾಗಿಟ್ಟುಕೊಂಡು ಕೊರತೆಯನ್ನು ತುಂಬಲು ಯತ್ನಿಸಿದೆ.
- ಕಾಲ:ನಾರಣಪ್ಪನೇ ತನ್ನ ಕಾಲವನ್ನು ಕುಲಗೋತ್ರಗಳನ್ನು ಹೇಳಿಕೊಳ್ಳಲಿಲ್ಲ. ಕಾವ್ಯದ ಕಾಲವನ್ನು ಶ್ರೀ ಮಂಜೇಶ್ವರ ಗೋವಿಂದ ಪೈಗಳು ೧೨೩೦ - ೩೫ ರೊಳಗೆ ಇರಬೇಕೆಂದಿದ್ದಾರೆ. ಕವಿಚರಿತಕಾರರು ೧೪೩೦ ಎಂದು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಏಕಾಭಿಪ್ರಾಯವಿಲ್ಲ. ಆದರೆ ೧೪೨೩ ಕ್ಕಿಂತ ಮುಂಚಿನವ ಎನ್ನುವುದಕ್ಕೆ ಆಧಾರವಿದೆ. ಮುಖ್ಯವಾಗಿ ಆತ ದೊಡ್ಡ ಕವಿ, ಮತತ್ವದಿಂದಲ್ಲ, ಕವಿತ್ವದಿಂದ; ಕನ್ನಡಿಗರ ಹೆಮ್ಮೆಯ ಕವಿ.
- ಕಾವ್ಯ ವಿಚಾರ:ಕುಮಾರವ್ಯಾಸ ಕಲಿಯದವರಿಗೂ ಕಾಮಧೇನು, ಕಲಿತವರಿಗೆ - "ಕಾವ್ಯಕೆ ಗುರು" (ಪೀಟಿಕಾ ಸಂಧಿ). ಕುವೆಂಪು ತಮ್ಮ ಕವನವನ್ನು ತಾವೇ ಉದಾಹರಿಸಿದ್ದಾರೆ:
- "ಕುಮಾರವ್ಯಾಸನು ಹಾಡಿದನೆಂದರೆ
- ಕಲಿಯುಗ ದ್ವಾಪರವಾಗುವುದು,
- ಭಾರತ ಕಣ್ಣಲಿ ಕುಣಿಯುವುದು! ಮೈಯಲಿ
- ಮಿಂಚಿನ ಹೊಳೆ ತುಳುಕಾಡುವುದು"
- ಕಾವ್ಯದ ಮೆಚ್ಚುಗೆಗೆ ಇದಕ್ಕಿಂತ ಹೆಚ್ಚಿನ ವಿವರ ಬೇಕಿಲ್ಲ. ತನ್ನ ಕುಲದೈವ, 'ವೀರನಾರಾಯಣನೆ ಕವಿ, ಲಿಪಿಕಾರ ಕುವರವ್ಯಾಸ' ಎಂದಿರುವ ಈ ಕವಿ ದರ್ಶನ ಪ್ರತಿಭೆಯವನು. ತಾನು ಲಿಪಿಕಾರನನ್ನಾಗಿ ಮಾಡಿಕೊಂಡಾಗ ಮಾತ್ರ ಮಹಾಕಾವ್ಯ ಮೂಡಿಬರವುದೆಂಬುದಕ್ಕೆ ಕುಮಾರವ್ಯಾಸನೇ ಸಾಕ್ಷಿ.
- ಪಂಪ ಮತ್ತು ಕುಮಾರವ್ಯಾಸ:ಈ ಭಾರತದ ಕಾವ್ಯ ವ್ಯಾಸ ಭಾರತದ ಪ್ರತಿಕೃತಿಯಲ್ಲ; ಪಂಪನ ಕಾವ್ಯದ ಪ್ರತಿಚ್ಛಾಯೆಯೂ ಅಲ್ಲ. ಮಹಾಕವಿ ಪಂಪನ ನಂತರ ಮಹಾಭಾರತ ಕಾವ್ಯವನ್ನು ನವೋನವ್ಯವಾಗಿ ರಚಿಸುವ ಸಾಹಸವನ್ನು ಕೈಗೊಂಡಿದ್ದಾನೆ. ಪಂಪನನ್ನು ಓದಿಯೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಹೊಸತನದ ಕಾವ್ಯವನ್ನು ಸೃಷ್ಟಿಸಿದ್ದಾನೆ. ಕೃಷ್ಣ ಕರ್ಣರ ಸಂವಾದವನ್ನು ನೋಡಿದಾಗ, ಪಂಪನ ರನ್ನರ ಪ್ರತಿಭೆಯ ಸೀಮೆಯನ್ನು ದಾಟಿ, ತನ್ನ ಸ್ವಂತ ಕಾವ್ಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ ರೀತಿಯನ್ನು ನೋಡಿದಾಗ ತಿಳಿಯುವುದು, ನಾರಣಪ್ಪನ ಮಹಾಪ್ರತಿಭೆಯ ಶಕ್ತಿ.
- ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಆರಂಭದ ಪರ್ವಗಳಲ್ಲಿ ವ್ಯಾಸರನ್ನೇ ಹಿಂಬಾಲಿಸಿಕೊಂಡು ಹೊರಟ ಈತ ಯುದ್ಧ ಪರ್ವಗಳು ಬಂದಾಗ ತನ್ನದೇ ದಾರಿಯನ್ನು ಹಿಡಿದುಕೊಂಡು ಹೋಗುತ್ತಾನೆ. ಇವನು ಕಥೆಗಾಗಿ ವ್ಯಾಸರನ್ನು ಅನುಸರಿಸಿದ್ದಾನೆಯೇ ಹೊರತು ಆದಿಕವಿ ಪಂಪನನ್ನಲ್ಲ. ಪಂಪನಿಗೆ ಭಾರತ ಲೌಕಿಕ ಕಾವ್ಯವಾದರೆ, ಕುಮಾರವ್ಯಾಸನಿಗೆ ಭಗವದ್ವಿಲಾಸ.
ಕಾವ್ಯ ರೀತಿ
ಬದಲಾಯಿಸಿ- ಕುಮಾರವ್ಯಾಸನ ಕಾವ್ಯ ರೀತಿಯು ಮಹಾಕವಿಯ ರೀತಿ - ಅದೇ ರೂಪಕ ರೀತಿ. ಈ ಭೂಮಿಕೆಯಲ್ಲಿ ಅವನನ್ನು ಸರಿಗಟ್ಟುವ ಕವಿ ಕನ್ನಡದಲ್ಲಿಲ್ಲವೇ ಇಲ್ಲ. “Wisdom speaks first in images” - W.B.Yeats ನ ಮಾತು ಇಲ್ಲಿ ಅನ್ವಯವಾಗುವುದು. ಕುಮಾರವ್ಯಾಸನನ್ನು "ರೂಪಕಸಾಮ್ರಾಜ್ಯ ಚಕ್ರವರ್ತಿ ಎಂದು ಕರೆದ ಮಾತು ಜನಜನಿತವಾಗಿದೆ, ಅವನ ರೂಪಕಗಳು ಕನ್ನಡದಲ್ಲಿ ಗಾದೆಗಳಾಗಿವೆ. ಅವನು ಕನ್ನಡದ ದಾರ್ಶನಿಕ ಕವಿ, ಮಾನವ ಗುಣಗಳ ಅಂತರಾಳವನ್ನು ಕಾಣಬಲ್ಲ ಮತ್ತು ಪದಗಳಲ್ಲಿ ಬಿಂಬಿಸಬಲ್ಲ.
- ಉದಾಹರಣೆಗೆ:
'ಮುನಿಯ ಮಾತಿನ ಬಲೆಗೆ ಸಿಲುಕಿತು ಜನಪತಿಯ ಚೈತನ್ಯಮೃಗ';
'ನಮ್ಮ ಬಾಗ್ಯದ ಬಾಣಸಿಗ ವಿಧಿ ವಿಷವ ಬೆರಸುವೊಡಾರು ಕಾವರು'.
'ಬಂಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ';
- ರೂಪಕವನ್ನು ಆ ನುಡಿಯಿಂದ ಬಿಡಿಸಿ ತೆಗೆಯಲು ಆಗದು. ಆದ್ದರಿಂದ ಕುಮಾರವ್ಯಾಸನನ್ನು ಅನುವಾದ ಮಾಡುವುದು ಅಸಾಧ್ಯ.
- ಆ ರೂಪಕಗಳಲ್ಲಿ ಅವಿಭಾಜ್ಯ ಶಕ್ತಿ ಇದೆ: 'ಬವರವಾದರೆ ಹರನ ವದನಕೆ ಬೆವರತಹೆ'; 'ಮೃತ್ಯು ಮರೆಹೊಕ್ಕಳು ಮಹೇಶ್ವರನ' ; 'ಕಾಲಕೂಟದ ಕಮಲ ತುಂಬಿಗೆ ಪಥ್ಯವಲ್ಲ';'ಬತ್ತಿದ ಕೆರೆಗೆ ಬಲೆಯೇಕೆ?'; 'ಕೆಂಡದಮಳೆಯ ತಡೆವವೆ ಕೊಡೆ'; ಬೆಳದಿಂಗಳಲಿ ಮೈ ಬೆವರುವುದೆ?'; 'ರುದಿರದ ತಿಲಕವಾದನಲೈ ಧರಾಂಗನೆಗೆ', 'ಸುರಧೇನು ನೆರೆ ಗೊಡ್ಡಾಯ್ತು', ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ' (ಹುಲುಮಾನವ ಅರ್ಜುನನ ಬಾಣದ ಜಿಮುರು ಮಳೆಗೆ ತಲೆಯ ಮೇಲೆ ನೀರಿನ ನದಿ ಗಂಗೆಯನ್ನೇ ಹೊತ್ತ ಶಿವ ಅಂಜುವನೇ?), ಇತ್ಯಾದಿ. (ನಾರಣಪ್ಪನಲ್ಲಿ ನಾಡನುಡಿಯ, ಗ್ರಾಮ್ಯದ ಕನ್ನಡ ಪದಗಳ ಭರಪೂರ ಪ್ರಯೋಗವನ್ನು ಕಾಣಬಹುದು, ಅದು ಇನ್ನಾವ ಕವಿಗಳಲ್ಲೂ ಕಾಣದು.)
- ಅದ್ಭುತ ಮಾತುಗಾರನಾದ ಕುಮಾರವ್ಯಾಸ ದುಸ್ಸಹ್ಯನಾಗಿಲ್ಲ. ಅವನ ಹೇಳಿಕೆ, 'ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದಗ್ಗಳಿಕೆ'; ಅವನು ಪದ್ಯಗಳನ್ನು ಸ್ಲೇಟಿನಲ್ಲಿ ಬರೆದು ಕರಡು ಪ್ರತಿಮಾಡಿಕೊಂಡು ತಿದ್ದಿ ತಿದ್ದಿ ಬರೆದವನಲ್ಲ. ಆದರೂ ಯಾವೆಡೆಯಲ್ಲಿಯೂ ಅನುಚಿತ ಪದ ಪ್ರಯೋಗವಿಲ್ಲ. ಅವನಲ್ಲಿ ವಚನ ವೈಭವ ವಿಪರೀತ!
- ಕನ್ನಡದ ಭಂಡಾರವನ್ನು ಶ್ರೀಮಂತಗೊಳಿಸಿದ ಈ ಕವಿ ಸಿಕ್ಕಿದ ಕಡೆಯಿಂದೆಲ್ಲಾ ಪದಗಳನ್ನು, ರೂಪಕಗಳನ್ನು ಸೂರೆಗೊಂಡಿದ್ದಾನೆ. ಬೇರೆಸಂದರ್ಭದಲ್ಲಿ ಅಶ್ಲೀಲವೆನಿಸುವುದು, ಇವನಲ್ಲಿ ಶಕ್ತಿಯುತವಾಗಿ ಬಳಕೆಯಾಗಿದೆ. ಉದಾ:'ಒರಲಬೇಡವೊ ಕುನ್ನಿ'; ಗಂಡರೊ ನೀವ್ ಷಂಡರೋ ಹೇಳೆಂದಳಿಂದುಮುಖಿ'; ಸತ್ಯದ ನುಡಿಗೆ ಹಾದರವಿಲ್ಲ'; ಇತ್ಯಾದಿ.
- ವರ್ಣನೆ:ಕುಮಾರವ್ಯಾಸನಿಗೆ ಎಷ್ಟು ವರ್ಣಿಸಿದರೂ ತೃಪ್ತಿ ಇಲ್ಲ. ಅವನ ಯುದ್ಧ ವರ್ಣನೆಯೇ ಅದಕ್ಕೆ ಸಾಕ್ಷಿ. ಒಂದು ಯುದ್ಧದಂತೆ ಮತ್ತೊಂದು ಯುದ್ಧದ ವರ್ಣನೆ ಇಲ್ಲ. ಒಬ್ಬನ ಸಾಹಸದಂತೆ ಮತ್ತೊಬ್ಬನ ಸಾಹಸ ವರ್ಣನೆ ಇಲ್ಲ. ಅವನಲ್ಲಿ ಅವಹೇಳನೆಯೂ ರೂಪಕ. ಅವನ ವೀರರಲ್ಲಿ ಒಬ್ಬೊಬ್ಬೊರು ಒಂದೊಂದು ಬಗೆಯಾಗಿ ಬಯ್ಯುತ್ತಾರೆ. ವೀರರ ಬೈಗುಳದಲ್ಲಿ ಗ್ರಾಮ್ಯವೂ ಇದೆ. ಇವನ ವೀರರ ಅಪಹಾಸ, ಕಟಕಿ ಎಲ್ಲವೂ ವಿಶಿಷ್ಟವಾದುದು.
ರಸ
ಬದಲಾಯಿಸಿ- ವಿಶೇಷ ಲೇಖನ:ಕುಮಾರವ್ಯಾಸ ಕಾವ್ಯದಲ್ಲಿ ನವರಸಗಳು (ಪುಟ ತೆರೆಯಬೇಕು)
- ನವರಸಗಳಲ್ಲಿ ಹಾಸ್ಯ ಒಂದು ರಂಜನೆಯ ಪ್ರಕಾರ. ಕುಮಾರವ್ಯಾಸ ಅರಿಯದ ಹಾಸ್ಯ ಪ್ರಕಾರವು ಒಂದೂ ಇಲ್ಲ. ಕಟಕಿ, ಬಿರುನುಡಿ, ಕಿರಿನುಡಿ, ವ್ಯಂಗ್ಯ, ಹಾಸ್ಯ, ಸರಸ, ವಕ್ರೋಕ್ತಿ, ಜಾಣ್ನುಡಿ, ಪರಿಹಾಸ, ಎಲ್ಲವೂ ಅವನ ಬತ್ತಳಿಕೆಯಲ್ಲಿದೆ. ತಾನಾಡದೆ ಆ ಪಾತ್ರಗಳ ಮೂಲಕ ಆಡಿಸಿ ನಗೆಗೆ ಈಡು ಮಾಡುವನು. ಶೃಂಗಾರಹಾಸ್ಯವೇ ರಂಜಕವೆಂಬ ಹಳೆಯ ಮಾರ್ಗ ಬಿಟ್ಟು ಹೊಸ ಹಾದಿಯನ್ನು ತುಳಿದಿರುವನು.ಕರುಣ ರಸ ಹಾಸ್ಯಕ್ಕೆ ವಿರೋಧಿ ಎಂಬ ನಂಬುಗೆಯನ್ನು ಹುಸಿಮಾಡಿ, ಹೊಸ ಮಾರ್ಗದಲ್ಲಿ ನಿಸ್ಸೀಮವಾದ ಹಾಸ್ಯದ ಹೊಳೆ ಹರಿಸಿದ್ದಾನೆ.
- ಕರುಣ: ಇಂತು ಸರಸಿಯಾದ ಕವಿ ಕರುಣದಲ್ಲಿ ತನ್ನನ್ನು ಅತಿಯಾಗಿ ತೊಡಗಿಸಿಕೊಳ್ಳದೆ, ಕೆಲವೇ ಸಂದರ್ಭದಲ್ಲಿ ಓದುಗರನ್ನು ಅಳಿಸುತ್ತಾನೆ. ಕೃಷ್ಣನಿಗೆ ದ್ರೌಪದಿಯ ಮೊರೆ, ಅಭಿಮನ್ಯುವಿನ ವೀರಮರಣ, ಕರ್ಣಾವಸಾನ, ಇವು ಉದಾಹರಣೆಗಳು.
- ಶೃಂಗಾರ : ಆರಂಭದಲ್ಲೇ ಕವಿ ಈ ಕಾವ್ಯ 'ವಿರಹಿಗಳ ಶೃಂಗಾರ' ಎಂದಿದ್ದಾನೆ. ಆದರೂ ಉಳಿದ ಕವಿಗಳಂತೆ ಅತಿ ಶೃಂಗಾರದಲ್ಲಿ ಪ್ರೀತನಾಗದೆ ಹದವರಿತು ಆ ರಸವನ್ನು ಕಾವ್ಯದಲ್ಲಿ ಹರಿಸಿದ್ದಾನೆ. ಶೃಂಗಾರದಲ್ಲಿ ಹಲವು ಕವಿಗಳ ರೀತಿ ಅತಿರಂಜಿತ ವರ್ಣನೆಗೆ ಇಲ್ಲಿ ಸ್ಥಳವಿಲ್ಲ. ಅತಿ ಶೃಂಗಾರ ಸನ್ನಿವೇಶಗಳಲ್ಲೂ ಸಂಧರ್ಭೋಚಿತವಾಗಿ ಅದನ್ನು ಮೆಟ್ಟಿಲಲ್ಲೇ ನಿಲ್ಲಿಸಿ, ಸಂದರ್ಭೋಚಿತವಾಗಿ ನಿರ್ವಹಿಸಿದ್ದಾನೆ. ಅದು ಕುಮಾರವ್ಯಾಸನಂಥ ಮಹಾಕವಿಗೆ ಮಾತ್ರಾ ಸಾಧ್ಯ.
- ಪ್ರಕೃತಿ ವರ್ಣನೆ: ಇದರಲ್ಲಿ ವಿರಕ್ತನಂತೆ ಕಾಣುವನು. ಅದು ಅವನ ಆರಾಧ್ಯವಸ್ತುವಲ್ಲ. ಮಾನವನ ಅಗತ್ಯಕ್ಕೆ ಯಾ ಸಂದರ್ಭಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರಾ ಪ್ರಕೃತಿಯನ್ನು ಚಿತ್ರಿಸುತ್ತಾನೆ. ವಸಂತಕಾಲ,'ತೆಗೆದುದಗ್ಗದ ತಂಪು ನದಿಸರಸಿಗಳ ತಡಿಯಲಿ ಹೆಜ್ಜೆಯಾದುದು, ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ, ಸೊಗಸಿದವು ನೆಳಲುಗಳು ದೂರಕೆ ಸೆಗಳಿಕೆಗಳೇರಿದವು ತಂಗಾಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ'.
- ಮಾನವ ಪ್ರಕೃತಿ:ಕುಮಾರವ್ಯಾಸ ಪಶುವಿನಿಂದ ಜ್ಞಾನಿಯವರೆಗಿನ ಮನೋವೃತ್ತಿಯನ್ನು ಬಲ್ಲ. "ಪಶುವಿನಿಂದ ಸ್ಥಿತಪ್ರಜ್ಞನವರೆಗೆ ಕುಮಾರವ್ಯಾಸ ಯೋಗೀಂದ್ರ ಅರಿಯದ ಮನೋವೃತ್ತಿ ಇಲ್ಲ". ಬಾಹ್ಯವರ್ಣನೆಯಿಂದಲೇ ಅಂತರಂಗವನ್ನು ಚಿತ್ರಿಸಬಲ್ಲನು. 'ತನುವ ಮರೆದನು ಪುಳಕಜಲದಲಿ ನೆನೆದು ನಾರಾಯಣನ ಪದದರುಶನದ ಹರ್ಷಾರಣ್ಯದಲಿ ಮನ ಹೊಲಬುದಪ್ಪಿದನು'. 'ಊಹೆದೆಗಹಿನ ಕಂಬನಿಯ ತನಿಮೋಹರದ ಘನಶೋಕವಹ್ನಿಯ ಮೇಹುಗಾಡಿನ ಮನದ ಕೌರವನಿತ್ತನೋಲಗವ'. ಕರ್ಣಬೇದನದಲ್ಲಿ ಕೃಷ್ಣ ಕರ್ಣನಿಗೆ ಅವನ ಜನ್ಮವೃತ್ತಾತ ಹೇಳಿದಾಗ, ಕರ್ಣ ಕೌರವನ ಮುಂದಿನ ಗತಿ ನೆನೆದು ದುಃಖ ಪಡವ ಸನ್ನಿವೇಶದಲ್ಲಿ ಕರ್ಣನ ದೇಹಸ್ಪಂದನ / ದೈಹಿಕ ಪ್ರತಿಕ್ರಿಯೆಯ ವರ್ಣನೆ: "ಕೊರಳಸೆರೆ ಹಿಗ್ಗಿದವು ದೃಗುಜಲ| ಉರವಣಿಸಿ ಕಡುನೊಂದನಕಟಾ| ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ|| ... ತನ್ನ ವಂಶವನರುಹಿ ಕೊಂದನು...|| ಮಾನವ ಪ್ರಕೃತಿಯನ್ನು ಇವನಂತೆ ಚಿತ್ರಿಸಿದ ಕವಿಗಳು (ಬಹಳ ಅಥವಾ ಯಾರೂ) ಇಲ್ಲ.[೧,೨]
ಕಾವ್ಯದ ಪಾತ್ರಗಳು
ಬದಲಾಯಿಸಿ- ಅವನು ಸೃಷ್ಟಿಸಿದ ಭೀಮ, ದ್ರೌಪದಿ, ಅಭಿಮನ್ಯು, ಉತ್ತರ, ಕರ್ಣ, ಅರ್ಜುನ, ಕೃಷ್ಣ, ಭೀಷ್ಮ, ದ್ರೋಣ, ವಿದುರ, ಕೌರವ - ಇವರೇ ಸಾಕ್ಷಿ. ಇವರೆಲ್ಲಾ ಸಚೇತನರಾದ ಪಾತ್ರಗಳಾಗಿ ನಡೆದಾಡುತ್ತಾರೆ. "ಜಿಗುಟಿದರೆ ರಕ್ತಸೋರುವ ಮಟ್ಟಿಗೆ ಪಾತ್ರಗಳು ತುಂಬುಜೀವಿಯಾಗಿವೆ'. (ಕೆ.ವಿ.ಪು. ಅವರ ಮಾತು). ಆದರೆ ಮಾನವ ಚಿತ್ರಣದಲ್ಲಿ ಆತನಿಗೆ ಪಂಪನ ಸಂಯಮ ಬೇಕು ಎಂದು ಎಷ್ಟೋವೇಳೆ ಅನ್ನಿಸುತ್ತದೆ (ಕುವೆಂಪು). ಭಕ್ತಕವಿಯಾದ ಕುಮಾರವ್ಯಾಸ ಭಗವಂತನ ಮಹಿಮೆಯ ವರ್ಣನೆಯ ಅತಿರೇಕದಲ್ಲಿ ಮಾನವತೆಯನ್ನು ಮರೆಯುತ್ತಾನೆ ಎಂಬ ಭ್ರಾಂತಿ ಬರುವುದುಂಟು. ಆದರೆ ಅಭಿಮನ್ಯವಿನ ವೀರಾವೇಶದ ಮಾತುಗಳು ಉಳಿದವರ ಹೊಗಳಿಕೆಗೂ ಅವನ ಪ್ರತಿಭೆ ಉಪಯೋಗವಾಗಿದೆ. ಉದಾ: ಅಭಿನ್ಯುವಿನ ಪೌರಷ: 'ಬವರವಾದರೆ ಹರನ ವದನಕೆ ಬೆವರ ತಹೆನವಗಡಿಸಿದರೆವಾಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ,..||ಜವನ ಜವಗೆಡಿಸುವೆನು...||(ಅರ್ಜುನ ಮಾಧವರು ಯುದ್ಧಕ್ಕೆ ಬಂದರೂ ಗೆಲುವೆನು...).
- ಹಾಗೆಯೇ ಭೀಮ : "ಭೀಮ ಕಷ್ಟವನೆಸಗಿದನು ಹಾ ಎಂದರಾದೊಡೆ ಮುಸುಡನಮರಾದ್ರಿಯಲಿ ತೇವೆನುದೇವ ಸಂತತಿಯ"; ಇವೆಲ್ಲಾ ಪಾತ್ರದಲ್ಲಿ ಪೌರಷಕ್ಕೆ ಉದಾಹರಣೆಗಳು. ಮುಖ್ಯ ನಾಯಕರು ಭಗವದ್‍ಭಕ್ತರಾದರೂ, ಮಾನುಷಶಕ್ತಿಯಲ್ಲಿ ಕಡಿಮೆಯಿಲ್ಲ.
- ಕುಮಾರವ್ಯಾಸನ ಪಾತ್ರದಲ್ಲಿ, ಶ್ರೀಕೃಷ್ಣ, ದ್ರೌಪದಿ, ಅಭಿಮನ್ಯು, ಉತ್ತರಕುಮಾರ, ಧರ್ಮರಾಯ, ಕೌರವ, ಕರ್ಣ ಮೊದಲಾದವರು ಕನ್ನಡ ಜನತೆಗೆ ವಿಶೇಷ ಪರಿಚಿತವಾಗಿರುವುದು ಕುಮಾರವ್ಯಾಸನಿಂದಲೆ ಎನ್ನಬಹುದು. ಕೃಷ್ಣ ಕಾವ್ಯಕ್ಕೆ ಪ್ರೇರಕನಾದಂತೆಯೇ, ಭಾರತದ ಪ್ರೇರಕ ಮತ್ತು ಕಾರಕ ಶಕ್ತಿಯೂ ಆಗಿದ್ದಾನೆ. ಆದರೂ ಮಾನವ ಗುಣ ಬಿಡುವುದಿಲ್ಲ.
- ಭೀಮ ಆರಗಿನ ಮನೆಯಿಂದ ತನ್ನವರನ್ನು ರಕ್ಷಿಸಿ, ಕಾಡಿನಲ್ಲಿ ಅವರನ್ನು ಮಲಗಿಸಿ ಕಾಲೊತ್ತುತ್ತಾ ದುಃಖಿಸುವುದು, 'ಅನಿಬರಿರವನು ನೋಡಿ ಪೂರ್ವವ ನೆನೆದು ಬಿರುದಳುತ ಘನ ಕಾನನದಲಿದ್ದನು ಹಿರಿದು ಚಿಂತಿಸುತ'
- ದ್ರೌಪದಿ ಭಾರತದಲ್ಲಿ ಅತಿಯಾಗಿ ನೊಂದ ಪಾತ್ರ; ವಿರಾಟನ ಅರಮನೆಯಲ್ಲಿ ಆಕೆ ತನ್ನ ಸ್ಥಿತಿಯನ್ನು ಹೇಳುತ್ತಾಳೆ: 'ಜನನವೇ ಪಾಂಚಾಲ ರಾಯನ ಮನೆ, ಮನೋವಲ್ಲಭರು ಅದಾರೆನೆ ಮನುಜಗಿನಜರು ಗಣ್ಯವೇ? ಗೀರ್ವಾಣರಿಂ ಮಿಗಿಲು, (ಆದರೆ) ಎನಗೆ ಬಂದೆಡರೀ ವಿರಾಟರಾಯನ ವನಿತೆಯರುಗಳ ಮುಡಿಯ ಕಟ್ಟುವ, ತನುವ ತಿಗುರುವ (ಮೈಗೆ ಪರಿಮಳದ್ರವ್ಯ ಹಚ್ಚುವ) ಕಾಲನೊತ್ತುವ ಕೆಲಸದುತ್ಸಾಹ!(ಪರ್ವ-೪; ಸಂಧಿ-೩; ಪದ್ಯ-೬೦)!' ರಾಜಕುಮಾರಯಾಗಿ ಹುಟ್ಟಿ ವೀರರ ಪತ್ನಿಯಾಗಿ, ವಿರಾಟನ ಹೆಂಡಿರ ಜಡೆ ಹೆಣಿಯುವುದು ಮೈಕೈಗೆ ಪರಿಮಳ ಪೂಸುವುದು, ಕಾಲನೊತ್ತುವ ಕೆಲಸದಲ್ಲಿ ಸಂಭ್ರಮ ಪಡಬೇಕು. (ಇದು ಗ್ರಾಮಗಳಲ್ಲಿ ಗಾದೆಯ ಮಾತಾಗಿದೆ). ಇದು ಕುಮಾರವ್ಯಾಸನ ಭಾಷೆ - ಅವನೇ ಕಷ್ಟವನ್ನು ಅನುಭವಿಸಿ ಬರೆದಂತಿದೆ. ಪದ್ಯ ರಚಿಸುವಾಗ ಆ ಪಾತ್ರ ಅವನಲ್ಲಿ ಆವೇಶವಾಗಿರುವಂತೆ ತೋರುವುದು. ದ್ರೌಪದಿ ಸೀರೆಸೆಳವಾಗ, 'ಕಮಲಮುಖಿ ಸುಲಿವಡೆದು ಲಕ್ಷೀರಮಣ ಲಕ್ಷ್ಮೀರಮಣ ಯೆಂದೊರಲಿದೊಡೆ,ಸಂಜಯ ನೊಂದೆನಾನೆಂದ.'
- ಅವಳ ಕೂಗು."ಕಾವುದೈ ಗೋವಿಂದ, ಸಲಹೈ ದೇವಕೀಸುತ, ಗಂಡರೈವರ ಭಾವಬೆಟ್ಟಿತು, ನೀನೆಲೈ ದೇಸಿಗರ ದೈವವಲೈ, ದೇವ ಕೆಟ್ಟೆನು ಕೆಟ್ಟನೈ ...ಎಂದೊರಲಿದಳು, ಹಂಗಿಗನು ತಾನೆಂದ'. ಕೃಷ್ಣ ನೆನಪಿಸಿಕೊಂಡು ಹೇಳಿದ್ದು.
- ದ್ರೌಪದಿಯ ಸೌಂದರ್ಯ: ದ್ರೌಪದಿಯ ಸ್ವಯಂವರ ಸಮಯದಲ್ಲಿ ಅವಳ ಸಖಿಯರು ಅವಳನ್ನು ನಾನಾಬಗೆಯಲ್ಲಿ ಅಲಂಕರಿಸಿದರು. ಕವಿಅವಳನ್ನು ವರ್ಣಿಸುವ ಪರಿ:
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ|
ಸರಸ ವೀಣಾಧ್ವನಿಯ ಹಂಸೆಯ
ಗರುವ ಗತಿಗಳನಾಯ್ದು ಮನ್ಮಥ
ವರ ವಿರಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ.||(೧-೧೩-೧೭)
- ಆ ವಿರಂಚಿ - ಬ್ರಹ್ಮ ಎಲ್ಲಾ ಸುಂದರ ವಸ್ತುಗಳನ್ನು ಆಯ್ದು ವೀಣಾಧ್ವನಿಯನ್ನು ಕೊಟ್ಟು ಅವಳನ್ನು ಸೃಷ್ಟಿಸಿದ್ದಾನೆ. ಇನ್ನೂ ಮುಂದುವರೆದು, ಅವಳು ಚೆಲುವಿಕೆಯ ಚೈತನ್ಯವೋ ಪರಿಮಳದ ಪುತ್ಥಳಿ (ಗೊಂಬೆ), .. ಇವಳು ಸಾಧಕರಿಗೆ ಸಿಕ್ಕದರೆ ಅವರು ಕೃತಕೃತ್ಯರು ಎನ್ನುವನು.
- ಕವಿ ಕುಮಾರವ್ಯಾಸ ೪೦ ಪದ್ಯಗಳಲ್ಲಿ ದ್ರೌಪದಿಯ ಅಂದವನ್ನು ವರ್ಣಿಸಿದ್ದಾನೆ. ಅದರ ಸೊಗಸು ಒಂದಕ್ಕಿಂತ ಒಂದು ಮಿಗಿಲು. 'ಏನನೆಂಬೆನು ಮನಸಿಜನ ಮದದಾನೆಯನು....ಮೂಲೋಕ ಮೋಹನ ವಶ್ಯ ಚಿತ್ರಕವ'|| ಮನ್ಮಥ ಶಿವನ ಮೇಲೆ ಪಂಚಬಾಣ ಹೊಡೆದು, ಅವನ ಸಿಟ್ಟಿನ ಹಣೆಗಣ್ಣಿನ ಬೆಂಕಿಗೆ ಸಿಕ್ಕಿ ಭಸ್ಮವಾಗಿ ದೇಹವಿಲ್ಲದೆ ಅನಂಗನಾದ; ಹಿಂದೆಯೇ ಇವಳು ಹುಟ್ಟಿದ್ದರೆ, ಅವನ ದೇಹ ಸುಡುವುದು ಅನಂಗನಾಗುವುದು ತಪ್ಪುತ್ತಿತ್ತು; ಶಿವನೆದುರು ಇವಳು ಸುಳಿದಿದ್ದರೆ ಸಾಕಿತ್ತು. 'ಪಿನಾಕಿ (ಶಿವ) ವೈರಾಗ್ಯದಲಿ ಹೊಗುವನೆ ತಪೋವನವ?...'. ಇದು ಕುಮಾರವ್ಯಾಸನ ಹಾಸ್ಯಭರಿತ ಉತ್ಪ್ರೇಕ್ಷಾಲಂಕಾರ. ಅವನ ಪದವೈಭವಕ್ಕೆ ಎಣೆ ಇಲ್ಲ.
- ದ್ರೌಪದಿಯ ಕೃಷ್ಣಭಕ್ತಿ: ಮೊಟ್ಟಮೊದಲಿಗೆ ದ್ರೌಪದಿ ಅಥವಾ ಕೃಷ್ಣೆ (ಅಪ್ರತಿಮ ಸುಂದರಿ ಕಪ್ಪು ಹುಡುಗಿ)ಗೆ ಅವಳ ಅಣ್ಣ ದೃಷ್ಟದ್ಯುಮ್ನ ಸ್ವಯಂವರ ಮಂಟಪದಲ್ಲಿ ಕೃಷ್ಣನನ್ನು ಪರಿಚಯಿಸುತ್ತಾನೆ. ಸುಂದರಾಂಗ ಕೃಷ್ಣನಲ್ಲಿ ಅವಳಿಗೆ ಮೋಹದ ಬದಲು ಭಕ್ತಿ ಆವೇಶವಾಗುವುದು. ಅವಳ ಅಣ್ಣ ಇವನು ಯಾದವರ ಪ್ರಮುಖ 'ಕೃಷ್ಣ' ಎಂದು ಪರಿಚಯಿಸಿದಾಗ: (ಕವಿಯ ಭಕ್ತಿಯ ದೇಹ ಭಾಷೆಯ ಸೊಗಸು)
"ಎನಲು ಭಕುತಿಯ ಭಾವರಸದಲಿ ನೆನೆದು ಹೊಂಪುಳಿಯಾಗಿ ರೋಮಾಂ
ಚನದ ಮೈಯುಭ್ಬಿನಲಿ ತನು ಪುಳುಕಾಂಬು ಪೂರದಲಿ,
ಮನದೊಳಗೆ ವಂದಿಸಿದಳೀತನಲಿ ಗುರು ಭಾವನೆಯ ಮತಿ ಸಂ
ಜನಿಸೇನೆಂದರಿಯೆನೆಂದಳು ಕಮಲಮುಖಿ ನಗುತ"||
- ಪತಿಗಳು ಕೌರವನ ಸಭೆಯಲ್ಲಿದ್ದ ಹಿರಿಯರು ಕೈಬಿಟ್ಟಾಗ ಅವಳು ಮೊರೆಇಟ್ಟುದು ಕೃಷ್ಣನಿಗೆ. ದೂರ್ವಾಸಾತಿಥ್ಯದಲ್ಲೂ ಕೃಷ್ಣನ ನೆನೆದು ಕಷ್ಟದಿಂದ ಪಾರಾಗುವಳು.
- ದ್ರೌಪದಿಯ ಸಂಯಮ :ಭಾರತಾಂತ್ಯದಲ್ಲಿ ತನ್ನ ಐವರು ಮಕ್ಕಳನ್ನೂ ಕಳೆದುಕೊಂಡು ಪರಿತಪಿಸುತ್ತಿದ್ದ ಈಕೆ, ತನ್ನಕುಮಾರನನ್ನು ಕೊಂದ ಅಶ್ವತ್ಥಾಮನನ್ನು ಭೀಮಾರ್ಜುನರು ಕೊಲ್ಲಲು ಹೊರಟಾಗ, ಅವರನ್ನು ತಡೆದು ಅವರ ತಪ್ಪು ನಡೆಯಯನ್ನು ತಡೆಯುವಳು; "ಬಂದಳಾದ್ರೌಪದಿಯಹಹ ಗುರು ನಂದನನ ಕೊಲಬಾರದಕಟಾ ಈ ನಂದನರ ಮರಣದ ಮಹಾವ್ಯಥೆಯು ಈತನಳವಿನಲಿ ಕೊಂದು ಕೂಗದೆ ಕೃಪೆಯನಬಲಾ ವೃಂದ ಸಮ ಸುಕದುಃಖಿಗಳು ಸಾರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ"||
- ಭೀಷ್ಮರನ್ನು ಕುರಿತು ಹೇಳುವಾಗ ಕುಮಾರವ್ಯಾಸ, ಭಗವಂತನಿಂದ ಪ್ರಲಯ ಭಯಂಕರ ಸಿಟ್ಟಿನಿಂದ ಚಕ್ರಧಾರಣೆ ಮಾಡಿಸಿ, ಅವನನ್ನು ಭಕ್ತಿಯಿಂದ ಮಾತಿಗೆ ತಪ್ಪದಂತೆ ನೋಡಿಕೊಳ್ಳುವ, ಕೈಮುಗಿವ ಭಕ್ತ! ಕುಮಾರವ್ಯಾಸ ಹೇಳುವುದು - 'ಅವರು ತಾಯಿ ಜಾಹ್ನವಿಯ ಮೊಲೆಹಾಲುಂಡವರು', ಎಂದು!
- ಭೀಷ್ಮ ದ್ರೋಣರು ಮಹಾಭಾರತದ ವೃದ್ಧರು.ಆದರೂ ಯೋಗಸಿದ್ಧ ಪುರುಷರು ಅಜೇಯರು. ಭೀಷ್ಮ ಹಸ್ತಿನ ಪುರದರಸು ಧರತರಾಷ್ಟ್ರನನ್ನು ಬಿಟ್ಟು ಬರಲಾರ. ಕುರುಡನನ್ನು ಸಿಂಹಾಸನದ ಮೇಲೆ ಕೂರಿಸಿ ವಿವಾಹಮಾಡಿ, ಅವನ ರಾಜ್ಯದ ಹೊಣೆ ಕುಟುಂಬ ರಕ್ಷಣೆಯ ಹೊಣೆಯನ್ನು ಹೊತ್ತಿದ್ದಾನೆ. ದೃತರಾಷ್ಟ್ರನ ಮಗ ಸುಯೋಧನ ಜಾಣನಾದರೂ ಉಡಾಳ, ಸೋದರಮಾವ ಶಕುನಿಯ ಗುರುತ್ವ.. ದ್ರೋಣರಿಗೆ ಅವರ ಗೆಳೆತನ ಹಳೆಯ ಋಣ; ಅವರೂ ಬಿಡರು. ಬೀಷ್ಮರು ಧರ್ಮರಾಯನ ರಾಜಸೂಯ ಯಾಗದಲ್ಲಿ ಕೃಷ್ಣನಿಗೆ ಅಗ್ರ ಪೂಜೆಗೆ ಕೂರಿಸಿ, ಅವನ ಕೃಷ್ಣನ ಶ್ರೇಷ್ಠತೆಯನ್ನು ಬಣ್ಣಿಸಿ ತಮ್ಮ ಭಕ್ತಿಯನ್ನು ತೋರಿದವರು. ಇವರು ಶರಶೆಯ್ಯೆಗೇರಿದಾಗ ಕುಮಾರವ್ಯಾಸ, "ಪಡುವಣ ಶೈಲ ವಿಪುಲಸ್ಥಂಬ ದೀಪಿಕೆಯಂತೆ ರವಿ ಮೆರೆದ", ಎನ್ನುತ್ತಾನೆ. ಮಹಾಪುರುಷನ ಮರಣವನ್ನು ಆಚರಿಸಲು ಪ್ರಕೃತಿದೇವಿ ಪಶ್ಚಿಮದ ಕಂಬದಮೇಲೆ ರವಿಯ ದೀಪವನ್ನು ಹಚ್ಚಿದ್ದಾಳೆ ಎನ್ನುವನು.
- ದ್ರೋಣರು ಕಷ್ಟದಲ್ಲಿ ಹಸ್ತಿನಾವತಿಗೆ ಬಂದಾಗ ಅವರ ಬಿಲ್ಲು ವಿದ್ಯಾ ಪರಿಣತಿಯನ್ನು ಗಮನಿಸಿ ಭೀಷ್ಮರು ಕೌರವ ಪಾಂಡು ಪುತ್ರಿಗೆ ಗುರಗಳಾಗಿ ನೇಮಿಸುವರು. ಆ ಋಣಕ್ಕಾಗಿ ಭೀಷ್ಮರ ಗೌರವ ಸ್ನೇಹಕ್ಕಾಗಿ ಕೊನೆಯವರೆಗೆ ಕೌರವರ ಜೊತೆಯೇ ಇರುವಂತಾಯಿತು. ಅದಕ್ಕೂ ಹೆಚ್ಚು ಅವರ ಮಗ ಆಶ್ವತ್ಥಾಮನನ್ನು ಕೌರವ ತನ್ನ ಸ್ನೇಹದ ಕಟ್ಟಿನಿಂದ ಬಿಟ್ಟುಹೋಗದಂತೆ ಬಂಧಿಸಿದ್ದ. ದ್ರೋಣರು ದ್ರುಪದನ ಅರ್ಧರಾಜ್ಯ "ಅಹಿಚ್ಛತ್ರ" ವನ್ನು ಕಸಿದುಕೊಂಡಿದ್ದು ಅದಕ್ಕೆ ಅಧಿಪತಿಯಾಗಿದ್ದರೂ ಹಸ್ತಿನಾವತಿ ಬಿಟ್ಟುಹೋಗಲಿಲ್ಲ. ಭೀಷ್ಮರ, ಕೌರವನ ರಾಜಕೀಯ ತಂತ್ರದ ಬಿಡಿಯದಲ್ಲಿ ಸಿಲುಕಿಬಿದ್ದರು. ಆದರೆ ದ್ರೋಣ ಯುದ್ಧದಲ್ಲಿ ಪ್ರಳಯ ಭೈರವರಾಗಿ ಐದು ದಿನ ಕಾದಿದ ವರ್ಣನೆ ಕವಿಯು ಅವರ ಪಾತ್ರವನ್ನು ಎತ್ತುವಲ್ಲಿ ಯಶಸ್ವಿಯಾಗಿದೆ. ಅವರ ಪುತ್ರವ್ಯಾಮೋಹ,ಅವರ ಯೋಗಸಿದ್ಧಿ, ಮಂತ್ರಸಿದ್ಧಿ, ಜ್ಞಾನ ವೈರಾಗ್ಯವನ್ನು ಮಸಕು ಮಾಡುವುದು. ಆವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯೋಧರನ್ನು ಕೊಲ್ಲುವ ನಿಷ್ಕರುಣೆಯ ಯುದ್ಧವನ್ನು ನೋಡಿ ಸಪ್ತರ್ಷಿಗಳು, 'ಪಾತಕವಲಾ ದ್ರೋಣ ನಿನಗೀ ಭೂತಹಿಂಸೆಯದೇಕೆ ಪಾರ್ಥಿವ ಜಾತಿಯಲಿ ಜನಿಸಿ?...| ಎಚ್ಚರಿಸುವರು. ಮಗ ಸತ್ತನೆಂದು ಕೊನೆಗೆ ಯುದ್ಧಭೂಮಿಯಲ್ಲಿ ಶಸ್ತ್ರತ್ಯಾಗ ಮಾಡಿ ಸಮಾಧಿ ಸ್ಥಿತರಾದಾಗ ದ್ರುಷ್ಟದ್ಯುಮ್ನ ಕೋಪದಲ್ಲಿ ಅವರ ತಲೆ ತರಿದು ದೇಹವನ್ನು ಚೂರುಚೂರು ಮಾಡಿದ.
- ಕೌರವನ ಪಾತ್ರಕ್ಕೆ ಅವನ ಬಾಯಲ್ಲೇ ಹೇಳಿಸಿದ ಮಾತು ಸಾಕಾಗುವುದು: "ಮಣಿದು ಬದುಕುವನಲ್ಲ, ಹಗೆಯಲಿ ಸೆಣಸಿಬಿಡುವವನಲ್ಲ, ದಿಟ ಧಾರುಣಿಯ ಸಿರಿಗೆಳಸುವನಲ್ಲಳುಕಿಲ್ಲ ಕಾಯದಲಿ! ರಣಮಹೋತ್ಸವವೆನ್ನಮತ, ಕೈದಣಿಯೆ ಹೊಯ್ದಾಡುವೆನು, ಕೃಷ್ಣನ ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ"||
- ಇದರಲ್ಲಿ ಕುಮಾರವ್ಯಾಸನ ಪಾತ್ರಚಿತ್ರಣದ ಜೊತೆಯಲ್ಲಿ ಪದನರ್ತನವನ್ನು ಗಮನಿಸಬೇಕು. ಕೌರವನಿಗೆ ಕೃಷ್ಣ ಮಾಯೆಯನ್ನರಿತೂ ಅದನ್ನು ಎದುರಿಸುವ ಛಲ. ಅತಿ ಎಚ್ಚರದಿಂದ ರಸಾಭಾಸಗಳಾಗಬಹುದು. ಎಚ್ಚರ ಮತ್ತು ಮರೆವೆಗಳ ಮಧ್ಯೆಯಿದ್ದು ರಸೋತ್ಕರ್ಷ ಮಾಡುವ ನಟನೆ ನಟ. ಕುಮಾರವ್ಯಾಸನ ಕೌರವ ಅಂತಹವನು. ಇಲ್ಲಿ ಅವನು ಕೃಷ್ಣನನ್ನು ಕೆಣಕಿ ಕೈವಲ್ಯಪಡೆಯುವೆನೆನ್ನುತ್ತಾನೆ. ಅದೇಕೆ ಕುಮಾರವ್ಯಾಸನಿಗೆ ಅವನನ್ನು ಪೂರ್ಣ ಖಳನಾಯಕನನ್ನಾಗಿ ಮಾಡಲು ಮನಸ್ಸಿಲ್ಲ? ಕುಮಾರವ್ಯಾಸನಿಗೆ ಎಲ್ಲರೂ ಕೃಷ್ಣಭಕ್ತರೇ! (ಪ್ರತಿ ನಾಯಕನನ್ನೂ ಭಕ್ತನನ್ನಾಗಿ ಮಾಡಿಬಿಟ್ಟಿದ್ದಾನೆ. ಇಲ್ಲಿ ವ್ಯಾಸರಿಂದ ಬೇರೆ ಮಾರ್ಗ ಹಿಡಿದಂತೆ ತೋರುವುದು. ಕೌರವ ಕೃಷ್ಣನನ್ನು ಕಟ್ಟುವ ಛಲ ಕೇವಲ ನಾಟಕ ಎಂದರೆ ಈ ಒಂದು ಕ್ಷಣ ರಸಾಭಾಸವಾಯಿತೇ?) "[೨]
ರಾಜಸೂಯ ಯಾಗದಲ್ಲಿ ಅವಮಾನ
ಬದಲಾಯಿಸಿ- ಮಾನನಿಧಿ ಕೌರವನಲ್ಲಿದ್ದುದು ತನಗಾದ ಮಾನಭಂಗದ ಸೇಡು. ರಾಜಸೂಯ ಯಾಗದಿಂದ ಹಿಂತಿರುಗಿ ಬಂದ ಕೌರವ ಪೂರ್ಣ ಖಿನ್ನತೆಗೋಳಗಾಗಿ ಮಲಗಿಬಿಡುವನು. '...ಭಂಗದ ಭಾರಣೆಯ ಬಿಸುಸುಯ್ಲ ಸೂರೆಯ ಸೈರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ', ಯಾರೊದಿಗೂ ಮಾತಾಡದಿದ್ದನು. ಶಕುನಿ ಕೇಳಿದ್ದಕ್ಕೆ,'ಯಮಸೂನು ವೈಭವ ವಹ್ನಿದಗ್ಧ ಮನ. ಧರ್ಮರಾಯನ ವೈಭವದ ಬೆಂಕಿ ನನ್ನ ಮನಸ್ಸನ್ನು ಸುಡುತ್ತಿದೆ ಅಂದ. ಅಷ್ಟೇ ಅಲ್ಲ, ಧೃತರಾಷ್ಟ್ರ ನಂಬಿಸಿ ಕೇಳಿದಾಗ ತನ್ನ ಮಾನಭಂಗದ ವಿಷಯ ಹೇಳುವನು. ಆ ದೇವ ನಿರ್ಮಿತ ಧರ್ಮಜನ ಸಭೆ ರಾಮಣೀಯಕ ವಿವಿಧ ರತ್ನಸ್ತೋಮತೇಜಃಪುಂಜಭಂಜಿತ..' ಅದರಲ್ಲಿ ಸ್ಪಟಿನಲದಲ್ಲಿ ನೀರಿದೆ ಎಂದು ತಿಳಿದು ತಡವರಿಸಿದೆ, ಮುಂದೆ ಸ್ಪಟಿಕದ ನೆಲವೆಂದು ನಡೆದು ನೀರಲಿಬಿದ್ದೆ, ಮುಂದೆ ಬಾಗಿದೆಯೆಂದು ಹೋದರೆ ಹಣೆಗೆ ಚೌಕಿ ಹೊಡೆಯಿತು,' ನಂತರ ಬಾಗಲ ಹತ್ತಿರ ಕೈಯಾಡಿಸಿ ತಡವರಿಸಿದೆ. ಆಗ ಪ್ರತಿಸಾರಿ (ಮೂರು ಬಾರಿ) ದ್ರೌಪದಿ ಮತ್ತು ಅವಳ ಗೆಳತಿಯರು, '..ದ್ರೌಪದೀ ಸಹಿತ ನಾರೀವೃಂದ ಕೈಗಳ ಹೊಯ್ದು ಮಿಗೆ ಗೊಳ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ'||...ಬೊಪ್ಪ ನಿಮ್ಮ ಮಗನವಸ್ಥಾರೂಪವಿದು ಚಿತ್ತವಿಸಿ..|| ..'ರೋಷದ ಗೊಡ್ಡು ನಾನಾದೆನು'..||..'ತಾ ಸಾವೆನು ಅಲ್ಲದೊಡೆ ಅಗ್ನಿಕುಂಡದಲಿ ಭಂಗಿಸುವೆನು ಆ ಫಲದೊಳು ನುಂಗಬೇಹುದು ವಹ್ನಿ, ಮೇಣ್ ಈ ಗಂಗೆಯಲಿ ಬಿದ್ದು ಒಡಲ ನೀಗುವೆನು||(೨.ಸಭಾಪರ್ವ-೧೨-೪೪). ಇದು ಒಳಗೇ ಬೇಯುತ್ತಿರುವ ಅವನ ನಿಜವಾದ ಸಂಕಟ.
ದ್ವೈತವನದಲ್ಲಿ ಮಾನಭಂಗ; ನಿರಶನವ್ರತ
ಬದಲಾಯಿಸಿ- ಇದರ ಜೊತೆ ಇನ್ನೊಂದು ಅವಮಾನ ಚಿತ್ರಸೇನನಿಂದ ಬಂಧಿತನಾದ ಕೌರವನನ್ನು ಬಿಡಿಸಿ ಧರ್ಮಜ (ಪಾಂಡವರು) ಜೀವದಾನ ಕೊಟ್ಟುದು. ಕೌರವ, ಅವನ ಪರಿವಾರ ಮತ್ತು ಗೆಳೆಯರು ಘೋಷಯಾತ್ರೆಯ ನೆಪದಲ್ಲಿ ಪಾಂಡವರಿದ್ದ ವನದ ಬದಿಯಲ್ಲಿ ತಮ್ಮ ವೈಭವ ಮೆರೆಯಲು ಹೋಗಿದ್ದರು. ಅಲ್ಲಿ ಗಂಧರ್ವ ಅದು ತಮ್ಮ ಮೀಸಲು ಪ್ರದೇಶವೆಂದು ಕರ್ಣಾದಿ ಎಲ್ಲರನ್ನೂ ಸೋಲಿಸಿ ಕೌರವರನ್ನು ಕೈಕಾಲು ಕಟ್ಟಿ ವಯ್ಯುತ್ತಾರೆ. ಕೌರವನ ಮಡದಿ ಮತ್ತು ಇತರರು ಧರ್ಮಜನಲ್ಲಿಗೆ ಬಂದು ಕಾಪಾಡಲು ಮೊರೆಯಿಡುವರು. ಅಣ್ನನ ಆಜ್ಞೆಯಂತೆ ಭೀಮಾರ್ಜುನರು ಗಂಧರ್ವನನ್ನು ಸೋಲಿಸುವರು. ಅದಕ್ಕೆ ಚಿತ್ರಸೇನ, 'ಹುಲಿಯನ್ನಕೊಂದರೆ ದನಕ್ಕೇನು ತೊಂದರೆ?', 'ಹೋದ ಮಾರಿಯನ್ನು ಮನೆಯೊಳಗೆ ಕರೆದಂತೆ ಇದು' ಎಂದು ಕೌರವನನ್ನು ಬಿಡುವನು. ಅದೇ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕೌರವನನ್ನೂ ದುಶ್ಶಾಸನನ್ನೂ ಉಳಿದ ಕೌರವರನ್ನೂ ಧರ್ಮಜನ ಎದುರು ತಂದು ಕೆಡಗುವರು.
- ಆಗ ಧರ್ಮರಾಯನ ಜಾಣತನ ನೋಡಿ. ಅವನು ದ್ರೌಪದಿಗೇ ಅವರ ಕಟ್ಟುಗಳನ್ನು ಬಿಚ್ಚಲು ಹೇಳುವನು. ಅವಳು ವಿರೋಧಿಸಲಿಲ್ಲ! ದ್ರೌಪದಿ ಕೆಳದಿಯರ ಕೈಯಿಂದ (ಮೂಲಕ) ಉಳಿದ ಕೌರವರ ಹಗ್ಗಗಳನ್ನು ಕತ್ತರಿಸುವಳು. ಆದರೆ ಬರಿ ನೆಲದಮೇಲೆ ಬಿದ್ದ ಕೌರವನ ಕೈಕಾಲು ಕಟ್ಟುಗಳ ಹಗ್ಗವನ್ನು ದ್ರೌಪದಿಯೇ ಕತ್ತರಿಸುವಳು. 'ಅಳಲಿಸಿದನೇ ಖಚರನಾತನ ಕೊಲಿಸಬೇಹುದು.. ಭೂಪಾಲ ಎಂದಳು ನಳಿನಮುಖಿ ನಗುತ||ನಿಮ್ಮನು ಉಚಿತವಾಗಿ ಉಪಚರಿಸಲು ಕಷ್ಟ, 'ಅರಸ ನೊಂದೈ ಮರ್ದನಕೆ... ಇಲ್ಲಿ ಎಮಗೆ ಒತ್ತುವುವು ಕಲು ಹರಳು ..ಹರಿಣಶಾರ್ದೂಲಾದಿ ಚರ್ಮಾಂಬರವೆ ಸಮಕಟ್ಟೆಮಗೆ ರತ್ನಾಭರಣವೇ ರುದ್ರಾಕ್ಷಿಯೆಂದಳು ನಗುತ ತರಲಾಕ್ಷಿ|| ಮರದನೆರಳು ಎಮಗೆ ಸತ್ತಿಗೆ, ಮರದಚಂಡೆಯೇ ಚಾಮರ ಈ ವಿಪ್ಪತ್ತಿನಲ್ಲಿ ಇವುಗಳಿಂದ ನಿಮಗೆ ಉಪಚರಿಸುವುದು ಎಮ್ಮ ಬಾಳಿಕೆ..'ಭಾವನವರೇ ಉಚಿತ ಅನುಚಿತ ಯಾವುದು ಎಂದು ನೀವೇ ಹೇಳಬೇಕು.' ಎಂದಳು ದ್ರೌಪದಿ. ಅದಕ್ಕೆ, 'ಮಾನಿನಿಯ ಕಟಕಿಯ ಮಹಾಸ್ತ್ರಕೆ ಮೌನವನು ಮರೆಗೊಂಡು ಕಲುಷದ್ಯಾನದೊಳಿದ್ದನು.. '|| ತಾನು ಕೇಡು ಮಾಡಿದ ಪಾಂಡವರಿಂದೇ ಜೀವದಾನ, ಸಭೆಯಲ್ಲಿ ಸೀರೆಸೆಳೆಸಿ ಹಂಗಿಸಿದ ಮಾನಿಧಿ ಕುರುರಾಯ, ಕೈಕಾಲಿಗೆ ಕಟ್ಟಿದ ಹಗ್ಗ ಕತ್ತರಿಸುತ್ತಾ ನಗುತ್ತಾ, 'ನೋವಾಯಿತೇ ಭಾವ?', ಎಂದು ದ್ರೌಪದಿ ಉಪಚರಿಸಿದಾಗ ಬದುಕಿದ್ದೂ ಸತ್ತಂತಾದ!
- ಆಗಲೇ ಅವನು ಧರ್ಮಜನ ಜೀವದಾನದ ಹಂಗಿನಲ್ಲಿ ಬದುಕುವುದನ್ನು ಬಿಟ್ಟು ಸಾವನ್ನು ನಿರ್ಧರಿಸಿಬಿಟ್ಟಿದ್ದನು. ಗಂಗಾತೀರಕ್ಕೆ ಬಂದವನು ದರ್ಭೆಹಾಸಿಗೆಯಲ್ಲಿ ಮಲಗುವನು; ಪ್ರಯೋಪವೇಶದಿಂದ (ಉಪವಾಸ; ನಿರಶನವೃತ) ಪ್ರಾಣ ಬಿಡಲು ನಿಶ್ಚಯಿಸುತ್ತಾನೆ. ಪತ್ನಿ ಭಾನುಮತಿಗೆ,'ಪಾಂಡುಪುತ್ರರ ಕರುಣಕಲುಷಿತ ಕಾಯವಿದ ನಾ ಧರಿಸುವೆನೆ? ಎಂದ'. ತಾಯಿಗೆ, 'ದುಶ್ಶಾಸನಗೆ ಪಟ್ಟವಕಟ್ಟಿ' ಎಂದ. ಕೊನೆಗೆ ರಾತ್ರಿಯಲ್ಲಿ ರಾಕ್ಷಸರು ಮುಂದಿನ ಯುದ್ಧಲ್ಲಿ ಕೌರವನಿಗೆ ಸಹಾಯ ಮಾಡುವೆವು ಎಂದಾಗ ಅರಮನೆಗೆ ಮರಳುವನು. ಹಾಗಾಗಿ ಪಾಂಡವರೊಡನೆ ಕೌರವನ ಯುದ್ಧ ನಿಶ್ಚಯವು ರಾಜಸೂಯ ಯಾಗ ಸಮಯದಲ್ಲಿಯೂ ಮತ್ತು ದ್ವೈತವನದಲ್ಲಿಯೂ ಆಗಿದೆ.(೧:ಅರಣ್ಯಪರ್ವ:ಸಂಧಿ ೧೯,೨೦,೨೧:ಪದ್ಯ ೬-೧೦)
- ಕೌರವನಿಗೆ ರಾಜಕಾರಣದಲ್ಲಿ ಅವನ ಸೋದರಮಾವ ಶಕುನಿಯ ಸಾರಥ್ಯ. ಧೀರೋದ್ಧತ ನಾಯಕ (ಉದ್ಧಟ), ಬಲಿಷ್ಠ ನಾಯಕತ್ವದ ಗುಣ ಹೊಂದಿದ್ದಾನೆ. ಅವನನ್ನು ಎದುರಿಸಲು ಅವನ ತಂದೆ ತಾಯಿ, ಭೀಷ್ಮ ದ್ರೋಣರಿಂದಲೂ ಆಗದು. ಆದರೆ ಗಾಢಮಿತ್ರತ್ವ ಬೆಳೆಸಬಲ್ಲ. ಅವನಿಗೆ ಕರ್ಣ, ಗುರುತನಯ ಅಶ್ವತ್ತಾಮ ಗಾಢ ಮಿತ್ರರು. ತಮ್ಮಂದಿರು ಇದಿರಾಡದ ವಿಧೇಯರು. ಸಿಂಹಾಸನದಲ್ಲಿ ಧೃತರಾಷ್ಟ್ರನಿದ್ದರೂ ದುರ್ಯೋಧನನದೇ ದರ್ಬಾರು ಮತ್ತು ಆಜ್ಞಾಧಿಕಾರ. ಎಂತಹ ನಾಯಕತ್ವವಿದೆಯೆಂದರೆ ಅವನು ಮಿತ್ರ ಕರ್ಣನನ್ನು ಬಿಟ್ಟು, ದ್ರೋಣರ ಸಲಹೆಯಂತೆ ವೃದ್ಧರಾದ ಅಜೇಯ ಭೀಷ್ಮರನ್ನೇ ಮೊದಲು ಸೇನಾಧಿಪತಿ ಮಾಡುವನು, ನಂತರ ದ್ರೋಣರ ಸರದಿ. ಯುದ್ಧಾರಂಭದಲ್ಲಿ 'ಈ ನದೀನಂದನನ ಬಲದಲಿ ಸೇನೆ ಶಿವಗಂಜುವುದೆ?' ಎಂದು ಬೀಗುವನು. ಯುದ್ಧತಂತ್ರವನ್ನು ಚೆನ್ನಾಗಿ ನಿಭಾಯಿಸಿದವನು. ಕೊನೆಗೆ ಪಶ್ಚಾತ್ತಾಪ ಪಡದೆ ಧೈರ್ಯವಾಗಿ ಯುದ್ಧದಲ್ಲಿ ಪ್ರಾಣ ಬಿಡುವನು.
ಭೂದೇವಿಗೆ ರಕ್ತದ ತಿಲಕವಾದ
ಬದಲಾಯಿಸಿ- ಯುದ್ಧದ ಕೊನೆಯ ದಿನ ಅಡಗಿದ ಕೊಳದಿಂದ ಹೊರ ಬಂದು, ಧರ್ಮಜ ಕೊಟ್ಟ ಕವಚಾದಿಗಳನ್ನು ತೊಟ್ಟು, ಗದೆಯನ್ನು ತಿರುವುತ್ತಾ, ಧರ್ಮಜಾದಿ ಪಾಂಡವರನ್ನೂ ದೃಷ್ಟದ್ಯುಮ್ನ ಸಾತ್ಯಕಿಯರನ್ನೂ ಒಟ್ಟಿಗೆ ಯುದ್ಧಮಾಡಲು ಆಹ್ವಾನಿಸಿ, ತಾನೊಬ್ಬನೇ ಅವರನ್ನು ಎದುರಿಸುವುದಾಗಿ ಹೇಳುತ್ತಾನೆ. ಆಗ ಧರ್ಮರಾಯ ತಮ್ಮ ಐವರಲ್ಲಿ ಯಾರನ್ನಾದೂ ಆರಿಸಿಕೊಂಡು ಯುದ್ಧಮಾಡು, ಗೆದ್ದರೆ ನೀನೇ ರಾಜ, ನಾವು ನಿನ್ನ ಕಿಂಕರರು ಎನ್ನುವನು. "...ನಮ್ಮೊಳೊಬ್ಬರು ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು". ಆದರೆ ಧೀರ ದುರ್ಯೋದನ ಭೀಮನನ್ನೇ ಆಯ್ದುಕೊಳ್ಳುವನು; ಧರ್ಮಜನಿಗೆ ಅವನ ಉತ್ತರ,"..ಬಾಯಿಬಡಕನು ಸತ್ವದಲಿ ನಾಗಾಯತದ ಬಲವೆಂಬ ಡೊಂಬಿನ ವಾಯುವಿನ ಮಗನೆನ್ನೊಡನೆ ಮಾರಾಂತಡೆ ಅಹುದೆಂದ(ಯುದ್ಧ ಮಾಡಿದರೆ ಆಗಲಿ)". ಭೀಮನಿಗೆ 'ಬಾಯಿಬಡುಕ' ಎನ್ನುವನು, ತನ್ನ ಹಳೆಯ ಕಡುವೈರಿಯನ್ನೇ ಆರಿಸಿಕೊಂಡು ಪರಾಕ್ರಮದಿಂದ ಹೋರಾಡಿ ಭೀಮನನ್ನು ಅವಗೆಡಿಸಿ ಕೊನೆಗೆ ಭೀಮನ ಗದೆಯಿಂದ ತೊಡೆ ಮುರಿದು, ನರಳದೆ ಪಶ್ಚಾತ್ತಾಪ ಪಡದೆ ರಕ್ತದ ಮಡುವಿನಲ್ಲಿ ಸಾಯುವನು. ಕವಿಯು ಅವನು 'ಭೂಮಿದೇವಿಗೆ ರಕ್ತದ ತಿಲಕ'ವಾದನು ಎಂದು ಸಂಜಯನಿಂದ ಹೇಳಿಸಿದ್ದಾನೆ.('...ಮಾನನಿಧಿ ತವಸೂನು ರುದಿರದ ತಿಲಕವಾದನೆಲೈ ಧರಾಂಗನೆಗೆ'....[೩](ಕೊನೆಯಲ್ಲಿ ದುರ್ಯೋದನ ಕೃಷ್ಣನ್ನು ನೆನೆಯುವುದಾಗಲಿ, ಕೃಷ್ಣ ಅವನಿಗೆ ಸಂತೈಸುವುದಾಗಲಿ ಇಲ್ಲ. ಹಾಗಾಗಿ ಅವನು ಕೃಷ್ಣ ಭಕ್ತನೆನ್ನಲು ಬರದು,-"ಕೃಷ್ಣನ ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ". ಎಂಬ ಕೌರವನ ಮಾತು ಪ್ರಕ್ಷಿಪ್ತವೇ? ಅಥವಾ ವ್ಯಂಗ್ಯವೇ?)
- ಕರ್ಣ ಸುಯೋಧನರ ಸ್ನೇಹ ಮಹಾಭಾರತವನ್ನೆಲ್ಲಾ ವ್ಯಾಪಿಸಿದೆ. ಕೌರವನಿಗದ್ದ ಪಾಂಡವರ ದ್ವೇಷ, ಅರ್ಜುನನ ಬಿಲ್ಲುಗಾರಿಕೆಯ ಭಯ, ಅವನಿಗೆ ಒಬ್ಬ ಶಕ್ತಿವಂತರ ಗೆಳೆತನ ಬೇಕಿತ್ತು. ಅದು ದ್ರೋಣರು ಏರ್ಪಡಿಸದ ಶಿಷ್ಯರ ಶಸ್ತ್ರ ಪ್ರದರ್ಶನದಲ್ಲಿ ಒದಗಿತು. ಅಲ್ಲಿ ಕರ್ಣ ಪ್ರವೇಶಿಸಿ ಅದ್ಭುತ ಬಿಲ್ಲುಗಾರಿಕೆ ತೊರುವನು. ಅನಾಮಧೇಯ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅನರ್ಹನೆಂದು ಅವಮಾನಿತನಾದಾಗ, ಅವನನ್ನು ಅಂಗ ದೇಶದ ಅಧಿಪತಿ ಮಾಡಿ ಅವನನ್ನು ಆಪ್ತ ಸಖನನ್ನಾಗಿ ಮಾಡಿಕೊಳ್ಳುತ್ತಾನೆ.
- ಇಲ್ಲಿ ದುರ್ಯೋಧನನ ಸ್ನೇಹದಲ್ಲಿ ಸ್ವಾರ್ಥವಿದೆ. ಆದರೆ ಕರ್ಣನ ಸ್ನೇಹ ನಿರ್ಮಲವಾದದ್ದು. ಕೃಷ್ಣ ಅವನಿಗೆ ಅವನ ಜನ್ಮ ವೃತ್ತಾಂತ ತಿಳಿಸಿ ಅವನನ್ನು ಚಕ್ರವರ್ತಿ ಮಾಡುವೆನೆಂದರೂ ಆಮಿಷಕ್ಕೆ ಒಳಗಾಗಲಿಲ್ಲ. ಪಕ್ಷ ಬದಲಿಸಲಿಲ್ಲ. ಆದರೆ ಪಾಂಡವರು ತನ್ನ ತಮ್ಮಂದಿರೆಂದು ತಿಳಿದಾಗ ಅವನು ಅನುಭವಿಸಿದ ಸಂಕಟ, ಅದೂ ಕೌರನಿಗಾಗಿ ಮರುಗಿದ ಸನ್ನಿವೇಶ ಕವಿ ಕುಮಾರವ್ಯಾಸ ತಾನೇ ಕಣ್ಣಾರೆ ಕಂಡಂತೆ ಬರೆದಿದ್ದಾನೆ.
- ಕೃಷ್ಣನ ಸಲಹೆಯಂತೆ ಕರ್ಣ ಹಸ್ತಿನಾವತಿಯ ಅರಸನಾಗಲು ಒಪ್ಪಿದ್ದರೆ ಏನಾಗುತ್ತಿತ್ತು; ಊಹೆಗೆ ಬಿಟ್ಟ ವಿಚಾರ. ತನ್ನ ಜನನ ವಿಷಯ ತಿಳಿದ ಕರ್ಣ ಅದನ್ನು ಸಾಯುವರೆಗೂ ರಹಸ್ಯವಾಗಿಟ್ಟು, ದಾನವೀರ ಆದವನು ಮಹಾ ತ್ಯಾಗವೀರನೂ ಆಗುತ್ತಾನೆ. ಕೌರವನಲ್ಲಿ ಅವನ ಸ್ನೇಹ ಎಷ್ಟೆಂದರೆ ಕವಿ ಕುಮಾರವ್ಯಾಸನೇ ಹೇಳಬೇಕು:ಕೃಷ್ಣ ಕರ್ಣನಿಗೆ:"ನಿನಗೆ ಹಸ್ತಿನಪುರದ ರಾಜ್ಯದ| ಘನತೆಯನು ಮಾಡುವೆನು, ಪಾಂಡವ ಜನಪ ಕೌರವಜನಪರೋಲೈಸುವರು ಗದ್ದುಗೆಯ"| ... "ಆರು ಸರಿಯೈ ಕರ್ಣ ನಡೆ ನಡೆ, ಧಾರುಣೀಪತಿಯಾಗು ನೀನಿರೆ ವೈರವಿತ್ತಂಡಕ್ಕೆ ಬಳಿಕಿಲ್ಲ" ಎಂದನಸುರಾರಿ||
- ಅದಕ್ಕೆ ಕರ್ಣ: "ಕೊರಳಸೆರೆ ಹಿಗ್ಗಿದವು ದೃಗುಜಲ| ಉರವಣಿಸಿ ಕಡುನೊಂದನಕಟಾ| ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ|| ... ತನ್ನ ವಂಶವನರುಹಿ ಕೊಂದನು...|| ನೀನು ರಾಜನಾಗು ಎಂದರೆ, ಕರ್ಣ ಕೌರವನಿಗಾಗಿ ಮರುಗುವನು. ವೀರ, ಗಂಡಸು ಅಳುವದು ತರವಲ್ಲ, ಆದರೆ ಮಿತ್ರ ಕೌರವನಿಗಾಗಿ ಒತ್ತರಿಸಿ ಬಂದ ದುಃಖದ ವರ್ಣನೆ, ದುಃಖದಿಂದ ಗಂಟಲು ನರನಾಳಗಳು ಉಬ್ಬಿವೆ, ಕೌರವನ ಮುಂದಿನ ಸ್ಥಿತಿಗಾಗಿ ಅವನಿಗೆ ದುಃಖದ ಉಮ್ಮಳಿಕೆ. ಅವನ ಚಿಂತೆ; "ಕಾದಿ ಕೊಲುವೊಡೆ ಪಾಂಡು ಸುತರು ಸಹೋದರರು, ಕೊಲಲಿಲ್ಲ ಕಾದೆನಾದೊಡೆ, ಕೌರವಂಗವನಿಯಲಿ ಹೊಗಲಿಲ್ಲ!" "ಬೇಧದಲಿ ಹೊಕ್ಕಿರಿದನೋ ಮಧುಸೂದನಕಕಟಕಟನೆನುತ ಘನ ಚಿಂತೋದಧಿಯಲದ್ದವೋಲ್ ಮೌನದೊಳಿದ್ದನಾ ಕರ್ಣ||
- ಕೊನೆಗೆ ಒಂದೇ ಮಾತು ಹೇಳುವನು,"ಮರುಳು ಮಾಧವ ಮಹಿಯ ರಾಜ್ಯದ ಸಿರಿಗೆ ಸೋಲುವವನಲ್ಲ...!" ...ಕೌರವೇಶ್ವರ ಸಲಹಿದನು..ಮನ್ನಣೆಯಲಿ... ಕೌರವೇಂದ್ರನನೆಂತು ಮರೆದಪೆನು?" ಎನ್ನುವನು.
- ಆದರೂ ಅವನು ಕೃಷ್ಣನ ಮಹಿಮೆಯನ್ನು ಬಲ್ಲವನು. ಕರ್ಣ ಕೃಷ್ನನಿಗೆ ಹೇಳಿದ: (ಕುರು)ಪತಿಯ ಅವಸರಕ್ಕೆ ಶರೀರವ ನೂಕುವೆನು, ನಿನ್ನಯ ವೀರರೈವರ ನೋಯಿಸೆನು, ರಾಜೀವಸಕನಾಣೆ". ಇದು ಕುಮಾರವ್ಯಾಸನ ಕರ್ಣನ ಪಾತ್ರ-ಚಿತ್ರ.
- ಕೊನೆಗೆ ಕೃಷ್ಣ ತನ್ನ ಪರಮಪದವನ್ನು ಕರ್ಣನಿಗೆ ನೀಡುತ್ತಾನೆ. ಪತಿತನೆನಿಸಿಕೊಂಡವನನ್ನೂ ಭಗವಂತ ಲೋಕಕ್ಕೆ ಅಂತಹವನ ಮಹತ್ತನ್ನು ತೋರಿಸಿ ಎತ್ತಿಕೊಳ್ಳವ ದರ್ಶನವನ್ನು ಇಲ್ಲಿ ತೋರಿಸಿದ್ದಾನೆ. "ಪರಮಕರುಣಾಸಿಂದು ಕರ್ಣಂಗಿರದೆ ನಿಜಮೂರ್ತಿಯನು ತೋರಿದ|ನುರುತರದ ಪ್ರೇಮದಲಿ ಮುಕುತಿಯ ಪದವ ನೇಮಿಸಿದ"|| -ಇತ್ಯಾದಿ. ಹೀಗೆ ಕರ್ಣನ ಮೂರ್ತಿ ನಮ್ಮ ಜನತೆಯ ಮನೋಮಂದಿರದಲ್ಲಿ ಕುಂದದ ಪ್ರಭೆಯಿಂದ ಸಚೇತನವಾಗಿದೆ.[೧,೨]
- ವಿಶೇಷ ಲೇಖನ:ಕುಮಾರವ್ಯಾಸ ಭಾರತದಲ್ಲಿ ಕೃಷ್ಣ (ಹೊಸ ಪುಟ ತೆರೆಯಬೇಕು).
- ಶ್ರೀಕೃಷ್ಣನ ಪಾತ್ರ ಸೃಷ್ಟಿಯ ವಿಷಯ ವಿಸ್ತಾರವಾದುದು. ಅವನೇ ಕುಮಾರವ್ಯಾಸನ ಕಥಾನಾಯಕ. ಮೊದಲೇ ಕವಿ ಘೋಷಣೆ ಮಾಡಿದ್ಧಾನೆ: "ತಿಳಿಯ ಹೇಳುವೆ ಕೃಷ್ಣಕಥೆಯನು| ಇಳೆಯ ಜಾಣರು ಮೆಚ್ಚುವಂತಿರೆ| ನಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ||
- "ಶ್ರೀಕೃಷ್ಣನ ಪಾತ್ರ ಕುಮಾರವ್ಯಾಸನ ಭಾರತದಲ್ಲಿ ಅತ್ಯಂತ ಪ್ರಧಾನವೂ ವಿಶಿಷ್ಟವೂ ಸರ್ವ ಪ್ರೇರಕವೂ ಚೋದಕವೂ ಆದುದು. ಕವಿಯ ದೃಷ್ಟಿಯಲ್ಲಿ ಆತ ಯಾವುದೋಒಂದು ಪಾತ್ರವಲ್ಲ; ನಾಯಕನ ಪಾತ್ರವಷ್ಟೇ ಅಲ್ಲ. ಆದರೆ ಪಾತ್ರಧಾರಿಯಾದ ಸೂತ್ರಧಾರಿ. ಹಾಗೆ ಅಲ್ಲದೇ ಅವನು ನಾಯಕ ಮಾತ್ರನಾಗಿದ್ದರೆ ಉಳಿದ ಕಾವ್ಯಗಳ ನಾಯಕರಂತೆ ಅವನೂ ಒಂದಿನಿತಾದರೂ ತೊಳಲಾಟಕ್ಕೆ ಒಳಗಾಗುತ್ತಿದ್ದ. ಆದರೆ ಕುಮಾರವ್ಯಾಸನ ಕೃಷ್ಣ ಅವನ ಕಾವ್ಯ ಚೋದಕಶಕ್ತಿಯಾಗಿರುವಂತೆಯೇ, ಶ್ರವಣ ಸುಧಾ ವಿನೂತನ ಕಥನ ಕಾರಣನಾಗಿರುವಂತೆಯೇ,ಆ ಅವನ ಭಾರತದ ಪ್ರೇರಕ ಶಕ್ತಿಯೂ ಆಗಿದ್ದಾನೆ." ಆದರೂ ಅವನು ಸೂತ್ರಧಾರನಾದರೂ, ಎಲ್ಲೂ ಅತಿ ಎನ್ನುವಂತ, ವಿಪರೀತ (Abnormal) ಎನ್ನುವಂತೆ ವರ್ತಿಸುವುದಿಲ್ಲ. ತನ್ನ ಅತಿ ಮಾನವತೆಯನ್ನು ಮನುಷ್ಯಕಟ್ಟಳೆಗೆ ಅಗೌರವವಾಗದಂತೆ ಪ್ರಕಾಶನಗೊಳಿಸುತ್ತಾನೆ. 'ನರನಾಟಕವ ತಾನೇ ನಟಿಸಿ ತೋರಿದನು' ಎಂದು ಕವಿ ಹೇಳುತ್ತಾನೆ. ಇದಕ್ಕೆ ದೃಷ್ಟಾಂತ, ಕುಂತಿ ಬಂದರೆ ಕುಳಿತಿದ್ದವನು ಜಗ್ಗನೆದ್ದು ನಮಸ್ಕರಿಸುತ್ತಾನೆ. ಪಾಂಡವರು ತನ್ನ ಭಕ್ತರಾಗಿದ್ದರೂ, 'ಆಳೊಡೆಯನೆಂದೆಂಬ ಭೇದವ ಬೀಳುಕೊಟ್ಟೇ ನಡೆಸುತಿರ್ದನುತನ್ನ ಮೈದುನರ -- '. ಅವನು ತನ್ನ ಮಡದಿ ಮಕ್ಕಳನ್ನು ಮರೆತು ತನ್ನ ಭಕ್ತರಿಗೆ ಕರಗುತ್ತಿದ್ದ.
- ಕೃಷ್ಣನ ಬಗೆಗೆ ಅವನ ತಂದೆ ವಸುದೇವ ಹೇಳುವುದು:
- ---ತನಗಾಗದವರಿಗೆ ತನ್ನ ತೆರುವನು, ಕೊಲುವ ಹಗೆಗೊಲಿವ,
- ಲೋಗರೆನ್ನವರೆಂದು ಲೋಗರಿಗಾಗಿ ಬದುಕುವೆನೆಂಬ ಬಲುಗೈ
- ಬಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ'||
- ಕುಮಾರವ್ಯಾಸ ಚಿತ್ರಿಸಿದ ಕೃಷ್ಠ ಇದೇ ಲೋಗರಿಗಾಗಿ- ಜನರಿಗಾಗಿ ಭಕ್ತರಿಗಾಗಿ ಬದುಕುವೆನೆಂಬ ಧ್ಯೇಯ! ಕೊನೆಗೆ ಕರ್ಣನಿಗೂ ತನ್ನ 'ನಿಜಪದವನಿತ್ತ ಭಗವಂತ! ಯುದ್ಧದಲ್ಲಿ ತನ್ನ ಪ್ರತಿಜ್ಞೆ ಮರೆತು ಚಕ್ರ ಹಿಡಿದಾಗ ಭೀಷ್ಮನ ಎಚ್ಚರಿಕೆಗೆ ಗೌರವಿಸಿ, 'ನೆಚ್ಚನಾಳಿನ ಬಿನ್ನಹಕೆ ಮನದೊಳು ನಾಚಿ ಚಕ್ರವ ಮುಚ್ಚಿದನು' ಎಂಬ ಕವಿಯ ಮನೋಜ್ಞ ಮಾತು; (ನೆಚ್ಚಿನಾಳಿನ - ನೆಚ್ಚಿನ - ಪ್ರೀತಿಯ, ಆಳಿನ - ಭಕ್ತನ ಬಿನ್ನಹ -ಪ್ರಾರ್ಥನೆ). ಹೀಗೆ ದೇವದೇವನಾದರೂ ಶ್ರೀಕೃಷ್ಣ ಉನ್ನತಮಾನವ ಗುಣಭಾವಗಳನ್ನು ಪ್ರದರ್ಶಿಸುತ್ತಾನೆ. ಕವಿ ಕಂಡ ಕೃಷ್ಣ ಭಾರತದ ಸೂತ್ರಧಾರನಾಗಿದ್ದರೂ, ಮಾನವ ಪಾತ್ರಧಾರಿಯಾದ ಸೂತ್ರಧಾರ!
- ಅರ್ಜುನ ಕೃಷ್ಣನ ಪರಮ ಮಿತ್ರನೂ ಅಹುದು, ಭಕ್ತನೂ ಅಹುದು. ಹತ್ತು ಹೆಸರುಳ್ಳವನು. ಶಿವನನ್ನು ಭಯಭಕ್ತಿಯಿಂದ ಗೆದ್ದು ಪಾಶುಪತ ಅಸ್ತ್ರ ಪೆಡೆದವನು. ಆದರೂ ಅಣ್ನನ ಆಜ್ಞೆಯನ್ನ ಮಾತ್ರಾ ಮೀರುತ್ತಿರಲಿಲ್ಲ. ಪುತ್ರನ ಮರಣದ ಸಂದರ್ಭದಲ್ಲೂ ಅಣ್ಣನಿಗೆ ಎದುರಾಡಲಿಲ್ಲ. ತನ್ನನ್ನು ಅವಮಾನಿಸಿದರೆ ಮಾತ್ರಾ ಅಣ್ಣನನ್ನೂ ಎದುರಿಸುವವ.
- ಅರ್ಜುನನ ವೈಶಿಷ್ಟ್ಯವು ಕಾಣುವುದು ಊರ್ವಶಿಯ ಪ್ರಸಂಗದಲ್ಲಿ, ಕರ್ಣನ ಅವಸಾನ ಸಂದರ್ಭದಲ್ಲಿ ಮತ್ತು ಕಿರಾತವೇಷದ ಶಿವನೊಡನೆ ಸೆಣಸುವಾಗ. ಶಿವನೊಡನೆ ಸೆಣಸುವಾಗ ತೋರಿದ ಅತಿಮಾನುಷ ಶಕ್ತಿ; ಅಸಾಧಾರಣ ಸೌಂದರ್ಯರಾಶಿಯ ಊರ್ವಶಿಯ ಪ್ರಣಯ ಭಿಕ್ಷಯನ್ನು ನಿರಾಕರಿಸವಲ್ಲಿ ತೊರಿದ ಅಸಾಧಾರಣ ಸಂಯಮ; ಕರ್ಣನ್ನು ಕೊಲ್ಲುವಾಗ ತನಗೇ ಅರ್ಥವಾಗದ ಮಾನುಷಾತೀತವಾದ ಅಂತರಂಗದ ಯಾತನೆ!
- ಇಂಥವನಿಗೂ ಗ್ಲಾನಿಯಾಗುತ್ತಿತ್ತು. ಯುದ್ಧದ ಆರಂಬದಲ್ಲಿ, ಸದಾ ಅವನನ್ನು ಕಾಯುತ್ತಿದ್ದ ಕೃಷ್ಣ ಸನಿಹದಲ್ಲೇ ಇರುತ್ತಿದ್ದ. ಆರಂಬದಲ್ಲಿ ಗೀತೋಪದೇಶವಾಯಿತು. ತನ್ನ ಮೇಲೆ ಬಿಟ್ಟ ಭಗದತ್ತನ ಮಹಾಸ್ತ್ರವನ್ನು ಕೃಷ್ನ ಸ್ವೀಕರಿಸಿದಾಗ, ಅರ್ಜುನನ ಸ್ವಾಭಿಮಾನ ಎಚ್ಚೆತ್ತು, ಕೃಷ್ಣಮೇಲೆ ಅಮಾಧಾನ ತೂರುವ ಅರ್ಜುನ. ಧರ್ಮಜ ಗಾಂಢೀವವನ್ನು ಬೇರೆಯವರಿಗೆ ಕೊಡು ಎಂದಾಗ ಭಗವಂತ ಪಕ್ಕದಲ್ಲಿದ್ದರೂ ಗ್ಲಾನಿಯಿಂದ ಅಣ್ಣನನ್ನೆ ಕೊಲ್ಲಲು ಹೊರಡುತ್ತಾನೆ. ಆಗಲೂ ಕೃಷ್ಣ ತಡೆದು ಅನಾಹುತ ತಪ್ಪಿಸುವನು. ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಮುಂದಾದಾಗಲೂ ಕೃಷ್ಣನೇ ಧರ್ಮಸಂಕಟ ಪರಿಹರಿಸುವನು. ಭಗವಮತ ಪಕ್ಕದಲ್ಲಿದ್ದರೂ ಮಾನವಗ್ಲಾನಿ ತಪ್ಪದು ಎಂದು ಕವಿ ತೋರಿಸಿದ್ದಾನೆ.
- ಭೀಮನ್ನು ನಾರಣಪ್ಪ ವಿಶಿಷ್ಟವಾಗಿ ಚಿತ್ರಿಸಿದ್ದಾನೆ. ಅಸಾಧಾರಣ ಶಕ್ತಿವಂತ. ಬಾಲ್ಯದಲ್ಲಿ ಅತಿ ತುಂಟಾಟ. ಮರದ ಮೇಲಿದ್ದ ಕೌರವ ಬಾಲಕರನ್ನು ಮರ ಅಲುಗಿಸಿ ಕೆಡಹುವುದು. ಹೀಗೆ ಕೌರವರ ವೈರಕ್ಕೆ ಪಾತ್ರ. ಕೌರವರ ವೈರಕ್ಕೆ ತುತ್ತಾಗಿ ತೊಂದರೆಯಾದರೂ ಅಣ್ನನ ಮಾತನ್ನು ಮೀರುತ್ತಿರಲಿಲ್ಲ. ಅನ್ಯಾಯ ಅಧರ್ಮಕ್ಕೆ ಸಿಡಿದೇಳುವ ಸ್ವಭಾವ. ಆದರೂ ಅಣ್ಣ ಧರ್ಮಜನಿಗೆ ವಿಧೇಯ. ಕೀಚಕನ ಸನ್ನಿವೇಶದಲ್ಲಿ ದ್ರೌಪದಿ ಸಭೆಯಲ್ಲಿ ಒದೆಸಿಕೊಂಡು ಅವಮಾನಿತಳಾಗಿ ಕಷ್ಟವನ್ನು ಭೀಮನೇ ಪರಿಸಬಲ್ಲನೆಂದು ಅವನಲ್ಲಿಗೆ ಹೋದೆರೆ, "ಹೆಣ್ಣಹರಿಬಕ್ಕೋಸುಗವೆ ತಮ್ಮಣ್ಣನಾಜ್ಞೆಯಮೀರಿ ಕುಂತಿಯ ಚಿಣ್ಣ ಬದುಕಿದನೆಂದು ನುಡಿವರು ಕುಜನರಾದವರು ... " ಎಂದು ಹೇಳಿ ಅವಳೆಷ್ಟು ಗೋಗರೆದರು ಅಣ್ಣನ ಅನುಮತಿ ಇಲ್ಲದ ಭೀಮ ತಣ್ನಗಿದ್ದ.
- ಆದರೆ ದ್ರೌಪದಿ ಬಾಯಲ್ಲಿ ಕವಿ ನುಡಿಸಿದ ಮಾತು ಯಾವ ಗಂಡಸಿಗೂ ಕೇಳಲಸಾದ್ಯವಾಗಿತ್ತು; "ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಭಂಗಿತರು ಭುವನೊದೊಳಿನ್ನು ಜನಿಸಲು ಬೇಡ ಗಂಡರು ಭೀಮಸನ್ನಿಭರು..."; "ಆವ ಗರಳವ (ವಿಷವ)ಕುಡಿವೆನೋ ಮೇಣಾವ ಬೆಟ್ಟವನಡಡರಿ ಬೀಳ್ವೆನೋ ಯಾವ ಮಡುವನು ಹೊಗುವೆನೋ ..."; "--..ನೀವು ತಟತಟವಾಗಿ ಲೋಗರ ಸೇವೆಯಲಿ ಬೆಂದೊಡಲಹೊರೆವಿರಿ ಸಾವವಳು ನಿಮಗಂಜಲೇಕೆಂದಬಲೆಯೊರಲಿದಳು|| ಭೀಮ ಕೊಟ್ಟೈ ತನಗೆ ಸಾವಿನ ನೇಮವನು ನಿಮ್ಮಣ್ಣನಾಜ್ಞೆ ವಿರಾಮವಾಗದೆ ಬದುಕಿ ಮೈಸಿರಿಯನರಿದು| ಕಾಮಿನಿಯ ಕೇಳಿಯಲಿ ನೆನೆವುದು...ಎಂದು ಎರಗಿದಳು ಚರಣದಲಿ|
- ಅದಕ್ಕೆ ಭೀಮನ ಪ್ರತಿಕ್ರಿಯೆ ಪತ್ನಿಯನ್ನು ಸಂತೈಸುವ ರೀತಿ ಅವನ ಚಿತ್ರಣವನ್ನು ತೋರುವುದು: ಎನಲು ಕಂಬನಿದುಂಬಿದನು ಕಡುನೆನೆದುದಂತಃಕರಣ ರೋಷದ ಘನತೆ ಹೆಚ್ಚಿತು ಹಗೆಗಳ ಹಿಂಡಿದನು ಮನದೊಳಗೆ... ಮೆಲ್ಲನೆ ವನಿತೆಯನು ತೆಗೆದಪ್ಪಿದನು, ಕಂಬನಿಯದೊಡೆದನು ಸೆರಗೊಳಗೆ..| ...ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ...| ..ಬಿಡು ಬಿಡು ಖಾತಿಯನು ವಿಸ್ತರಿಸಲೇಕೆ ಎಮ್ಮಣ್ಣನಾಜ್ಞೆಯ ಗೆರೆಯ ದಾಂಟಿದೆನು..|ಬಸುರ ಬಗೆವೆನು ಕೀಚಕನ....ಹಾಯೆಂದರಾದೊಡೆ,ಮುಸುಡನಮರಾದ್ರಿಯಲಿತೇವೆನು ದೇವ ಸಂತತಿಯ||[೪]
ಬಾಲ ಪಾತ್ರಗಳು
ಬದಲಾಯಿಸಿಉತ್ತರ ಕುಮಾರ
ಬದಲಾಯಿಸಿ- ಉತ್ತರ ಕುಮಾರ ಮತ್ತು ಅಭಿಮನ್ಯು ಈ ಬಾಲಕರು ವಿಭಿನ್ನ ಸಂಸ್ಕಾರ ಪರಿಪಾಕವುಳ್ಳ ಚಿರಸ್ಮರಣೀಯ ವ್ಯಕ್ತಿಗಳು. ಇವರನ್ನು ಚಿರಸ್ಮರಣೀಯರನ್ನಾಗಿ ಕಡೆದಿಟ್ಟ ಬಹುಮಟ್ಟಿನ ಕೀರ್ತಿ ನಾರಣಪ್ಪನದೆ. ಒಂದೇ ವಯಸ್ಸಿನವರು, ಭಾವಮೈದುನರು.
- ಉತ್ತರ ಎಂಬುದು ಕನ್ನಡದಲ್ಲಿ ಗಾದೆಯಾಗಿಬಿಟ್ಟಿದೆ. ಅವನು ವಾಕ್ ಶೂರರ ಅಧಿನಾಯಕನಾಗಿಬಿಟ್ಟಿದ್ದಾನೆ. ಈ ವ್ಯಕ್ತಿ ಮಹಾಭಾರತದ ಪರ್ವಗಳ ಮೌನಗಂಭೀರ ಸಾಗರಗಳಿಗೆ ಹಾಸ್ಯದ ಸೇತುವಾಗಿದ್ದಾನೆ. ಹೆಂಗಳೆಯರ ಮುಂದೆ ವೀರಾಲಾಪಮಾಡಿ ವಾಕ್‍ಶರಧಾರೆಯನ್ನು ಹರಿಸಿದ ವೀರ! ಅದೇ ಯುದ್ಧಭೂಮಿಯಲ್ಲಿ ರಥದಿಂದ ಧುಮ್ಮಿಕ್ಕಿ ಓಡುವ ದೃಶ್ಯ, ಕಣ್ಣೆವೆ ಸೀದು ಹೋಯಿತೆಂದು ಮಖವನ್ನು ಮುಚ್ಚಿಕೊಳ್ಳುವುದು ಯಾರನ್ನು ತಾನೇ ನಗಿಸದು?
- ಆದರೆ ಈ ನಗೆಗೇಡಿ ಉತ್ತರನು ಕುಮಾರವ್ಯಾಸ ಚಿತ್ರಿಸಿರುವ ಪೂರ್ವಾವಸ್ಥೆ ಮಾತ್ರಾ. ಅವನನ್ನು ಧನಂಜಯನು 'ಕಲಿಮಾಡಿ'ದ ಬಗೆಯನ್ನೂ ಅನಂತರ ಅವನು ನಡದುಕೊಂಡ ಅಪೂರ್ವ ವಿಧಾನವನ್ನೂ ನೋಡಿದರೆ, ಕವಿ ಕಂಡ ಉತ್ತರನ ಜೀವನದ ಅರಿವಾಗುವುದು. ಹಾಸ್ಯ ಗಂಭೀರತೆಗೆ ತಿರುಗುವುದನ್ನೂ, ಹೇಡಿತನ ಶೌರ್ಯವಾಗುವುದನ್ನೂ ಕವಿ ಉತ್ತರನ ಜೀವನದಲ್ಲಿ ಚಿತ್ರಿಸಿದ್ದಾನೆ.
ಉತ್ತರನ ಪೌರುಷ
ಬದಲಾಯಿಸಿ- ಕೌರವರಿಂದ ಅವಮಾನಿತ ಗೋವಳ ಬಂದು, 'ನೀ ಕಾದುವೊಡೆ ದುರ್ಗವ ಬಲಿಸು ..' ಎಂದರೆ; 'ನೂಕು ಕುನ್ನಿಯ ..ಎನಗೆ ಕಾಕ ಬಳಸುವನಿವನು ತಾನುದ್ರೇಕಿಸಲು, ಸಮರದಲಿ ನಿಲಲು ಪಿನಾಕಿಧರನಿಗೆ ನೂಕದೆಂದನು ಸತಿಯರಿದಿರನಲಿ'.|| ಮತ್ತೆ, '...ಜೂಜಿನ ಕುಹಕದಲಿ ಹೆಂಗುಸ ಬಡಿದು ಪಾಂಡವರಾಯರನು ಹೊರವಡಿಸಿ ಕೊಬ್ಬಿದ ಬುಜಬಲವನೆನ್ನಲಿ ತೋರಿದನೆ? ಬಡ ಯುದಿಷ್ಟಿರನೆಂದು ಬಗೆದನೆ?..||ಜವನ ಮೀಸೆಯ ಮುರಿವನೋ ಭೈರವನ ದಾಡೆಯನಲುಗಿದನೊ ಮೃತ್ಯುವಿನ ಮೇಲುದವ ಸೆಳೆದನೋ ಕೇಸರಿಯ ಕೆಣಕಿದನೊ ...ಕೌರವನಕಟ ಮರುಳಾದನು ಎಂದು ಆ ಯುವತಿಯರ ಮೊಗನೋಡುತುತ್ತರ ಬಿರುದ ಕೆದರಿದನು||
ತನಗೆ ಸರಿಸಾಟಿಯವರಿಲ್ಲ
ಬದಲಾಯಿಸಿ- ಅವನು ತನಗೆ ಸರಿಸಾಟಯಾದ ವೀರರು ಕೌರವನ ಪಾಳಯದಲ್ಲಿ ಇಲ್ಲ ಎನುವನು, ಕೆಲಬರು ಹಾರುವರು (ದ್ರೋಣ ಕೃಪ, ಅಶ್ವತ್ಥಾಮ ಬ್ರಾಹ್ಮಣರು ಕೊಲ್ಲುವಂತಿಲ್ಲ); ಕೆಲವರು ಅಂತಕನ ನೆರಯೂರವರು (ಯಮಲೋಕದ ಹತ್ತಿರ ಇದ್ದಾರೆ, ಮುಪ್ಪಿನ ಮುದುಕರು, ಭೀಷ್ಮ ದ್ರೋಣ ಕೃಪ, ಕೆಲವರು ಅಧಮ ಕುಲದಲಿ ಸಂದು ಬಂದವರು (ಕರ್ಣ). ಇತ್ಯಾದಿ. ನಾರಣಪ್ಪನ ಭಾಷಾಪ್ರೌಢಿಮೆ ಇಲ್ಲಿ ಹಾಸ್ಯಕ್ಕೆ ಸಂದಿದೆ. ಉತ್ತರೆಯ ಮುಗ್ಧತೆ:ಬವರವನು (ಯುದ್ಧವನ್ನು) ನಮ್ಮಣ್ಣ ಗೆಲಿದಪನು, ಸಾರಥಿ ಅವರ ಆಭರಣ ಕೊಂಡು ಬಾ ಎಂದಳಿಂದುಮುಖಿ'.
ತದ್ವಿರುದ್ಧ ಸ್ಥಿತಿ
ಬದಲಾಯಿಸಿ- ಅರ್ಜುನ ಸಾರಥ್ಯದಲ್ಲಿ ಉತ್ತರ ಸೈನ್ಯದ ಮುಂದೆ ಹೋದಾಗ ಕಂಡದ್ದೇನು!:ಅವನ ಮುಂದೆ ...ತರದ ವಾದ್ಯ ಧ್ವನಿಯ ರವದುಬ್ಬರದೊಳಿದ್ದುದು ಬಹಳ ಜಲವನಿಧಿಯಂತೆ ಕುರುಸೇನೆ! ಜಡಿವ ಖಡ್ಗದ ಕಿಡಿಯ ಸೇನೆಯ ...ರೌದ್ರರವ ಛಟಿಛಟಿತ ನಿಸ್ವನದ...ದಾವಾಗ್ನಿಯಂತಿರೆ ತೋರಿತಿದಿರಿನಲಿ'. ಇದೇನು--ಮಾರಿಯ ಗೂಳೆಯವೊ, ಮೃತ್ಯುವಿನ ಗಂಟಲತಾಳಿಗೆಯೊ (ನಾಲಿಗೆ).. ಶಿವ ಎನುತ ಹೆದರಿದನು ಕುಮಾರ. ಇದನ್ನು ಎದುರಿಸಿದವ ಮೃಡನೇ ಸರಿ. "ಹಸಿದ ಮಾರಿಯ ಮಂದೆಯಲಿ ಕುರಿ ನುಸುಳಿದಂತಾದೆನು; ಸಾರಥಿ "ರಥವ ಮರಳಿಚು" ಎಂದ. ಎಲೆ ಕುಮಾರಕ "ಮೊದಲ ಚುಂಬನದೊಳಗೆ ಹಲುಬಿದ್ದಂತೆ", ಯುದ್ಧಕ್ಕೆ ಮೊದಲೇ ಹೆದರಿದೆಯಲಾ ಎಂದ ಪಾರ್ಥ. ರಥ ಮುಂದಕ್ಕೆ ಹರಿಸಿದಾಗ, 'ರಥವ ಮುಂದಕೆ ನೂಕಿ ಗಂಟಲ ಕೊಯ್ವೆ...ನಾವ್ ಹಗೆಗಳೇ', ಸ್ವಾಮಿದ್ರೋಹ ಮಾಡಬೇಡ ಎಂದ. ಮತ್ತೆ ರಥ ನಾಲ್ಕೆಂಟಡಿ ಮುಂದೆಹೋಗಲು, '...ಮೆಲ್ಲನೆ ಹಿಂದಕೆ ನಿಂದು ದುಮ್ಮಿಕಿದನು ಬದುಕಿದೆನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ,' ಕವಿ ಕುಮಾರವ್ಯಾಸನ ಬಾಷೆ ಹಾಸ್ಯದಲ್ಲೂ ಛಂದಸ್ಸು ಯತಿ ತಪ್ಪದೆ ಮಿಂಚಿ ಬೆರಗುಗೊಳಿಸುವಂತಿದೆ. ".. ಇತ್ತಲು ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ|. ಈ ಭಾಗವನ್ನು ಓದಿದವರ, ಕೇಳಿದವರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾನೆ ಕುಮಾರವ್ಯಾಸ.
ಉತ್ತರ ಕಲಿಯಾದ
ಬದಲಾಯಿಸಿ- ಅರ್ಜುನ ಅವನನ್ನು ಹಿಡಿದಾಗ, 'ನೀನೆ ಕೊಂದುಬಿಡು', ಎಂದ. 'ನಾನೇ ನಪುಂಸಕ ಜೀವಗಳ್ಳ ಬಿಟ್ಟುಬಿಡು', ಎಂದ. ಯುದ್ಧದಲ್ಲಿ ಸತ್ತರೆ ಸ್ವರ್ಗದ ಅಪ್ಸರೆಯರ ಸೇವೆ ಸಿಗುತ್ತೆ ಎಂದರೆ, 'ನಮ್ಮ ಅರಮನೆಯ ನಾರಿಯರೇ ಸಾಕು', ಎಂದ! ಹೊಗಲಿ ನೀನು ಸಾರಥಿಯಾಗು ನಾನು ಇವರನ್ನು ಗೆಲ್ಲುವೆನು ಎಂದು ಪಾರ್ಥ ಹೇಳಿದರೆ, 'ಹುಲು ಬೃಹನ್ನಳೆಯಾದ ನಿನಗೀ ಕದನ ನಾಟಕವಿದ್ಯೆಯಲ್ಲೆಂದ' ಉತ್ತರ. ಅದಕ್ಕೆ ಪಾರ್ಥ, 'ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ', ಎಂದು ಮತ್ತೆ ಧೈರ್ಯ ತುಂಬಿ...ರಣದೊಳಗೋಡಿಸುವೆನಹಿತರನು ...ಕೋಡದಿರು ಕೊಂಕದಿರು ..ಸಾರಥಿಯಾಗೆನುತ (ಉತ್ತರನನ್ನು) ಕಲಿಮಾಡಿ', ತನ್ನ ಶಸ್ತ್ರಗಳಿರುವ ಶಮೀವೃಕ್ಷದ ಕಡೆ ರಥವನ್ನು ಕೊಂಡೊಯ್ದ.[೧,೨]
- ಅಭಿಮನ್ಯುವಿನದು ಉತ್ತರ ಕುಮಾರನ ತದ್ವಿರುದ್ಧದ ಸನ್ನಿವೇಶ ಮತ್ತು ಪಾತ್ರ. ಅಭಿಮನ್ಯು ನಿಜಕ್ಕೂ ವೀರ, ಸಿಂಹದ ಮರಿ. ಹುಟ್ಟಿನಿಂದಲೂ ಗುಣದಿಂದಲೂ ಮಹಾವೀರ. ಅವನ ಯುದ್ಧ 'ಮಕ್ಕಳಾಟ'ವಾಗಿದ್ದು ಕುರುರಾಯರಿಗೆ 'ಮಾರಿಯಾಟ'ವಾಯಿತು. ಯುದ್ಧಕ್ಕೆ ಮೊದಲು ಅವನ ವೀರೋತ್ಸಾಹದ ಮಾತನ್ನು ಕೇಳಿ ಧರ್ಮರಾಯನೇ ಅಂಜಿದ. ಅರ್ಜುನನು ಬೇರೆಕಡೆ ಯುದ್ಧಕ್ಕೆ ಹೋದರೆ ಧರ್ಮಜನನ್ನು ಸೆರೆಹಿಡಿಯುವೆನು ಎಂದು ದ್ರೋಣ ಪದ್ಮವ್ಯೂಹವನ್ನು ರಚಿಸಿದ್ದಾನೆ.ಅರ್ಜುನ ಸಮಸಪ್ತಕರೊಡನೆ ಯುದ್ಧಕ್ಕೆ ಹೊಗಿಒದ್ದಾನೆ. ಆಗ ಧರ್ಮಜ ಈ ಪದ್ಮವ್ಯೂಹವನ್ನು ಬೇಧಿಸಲು, '..ರಾಮನರಿವನು, ಕೃಷ್ಣನರಿವನು, ಕಲಿಪಾರ್ಥನರಿವನು, ' ಎಂದು ಕೊನೆಗೆ, ವೀರ ಪಾರ್ಥನ ಮಗನು ಹೊಗಲು ಬಲ್ಲನು, ಹೊಕ್ಕವೊಲು ಹೆರದೆಗೆಯಲರಿಯನು,' ಎಂದಾಗ ನಗುತಲೆದ್ದ ಅಭಿಮನ್ಯು, ಧರ್ಮಜನಿಗೆ ಕೈಮುಗಿದು, ಪದ್ಮವ್ಯೂಹವನ್ನು ಬೇಧಿಸಿ,' ಅನುವರವ ಗೆಲುವೆನು ಕೃತಾಂತನ (ಯಮನ) ಮನೆಗೆ ಕಳುಹುವೆನು ಅನಿತರನು...ನೀ ಎನ್ನ ಕಳುಹೆಂದ'
- ಧರ್ಮಜ, ಅದಕ್ಕೆ "ಕಂದನ ತೆಗೆದು ಬಿಗಿದಪ್ಪಿ, ಶಿಶುವು ನೀನೆಲೆ ..ಕಾದುವರು ಅಸಮ ಬಲರು ಕಣಾ ..." ಎಂದು ನೀನು ಅವರನ್ನು ಹೇಗೆ ಎದುರಿಸುವೆ ಎಂದ. ಸಮುದ್ರದ ಸುಳಿಯಲ್ಲಿ ಸಿಕ್ಕಿ ಬರಬಹುದು,..ಅಹಿಪನ (ಸರ್ಪದ)ಪಣಾಮಂಡಲದಲಿ ಆಢಬಹುದು..ಆದರೆ ಪದ್ಮವ್ಯೂಹವ ಗೆಲುವ ಹದನನು ಕಾಣೆನು' ಎಂದ. ಅದಕ್ಕೆ, 'ಕೊಡನ ಮಗನ ದ್ರೋಣನ) ಕುಮಂತ್ರಕಾನಂಜುವೆನೆ' ನ್ನ ಕಳುಹಿ ನೋಡು ಎಂದ. "ಗಾಳಿ ಬೆಮರುವುದುಂಟೆ ವಹ್ನಿಜ್ವಾಲೆ ಹಿಮಕಂಜುವುದೆ...' ಎಂದಾಗ ಧರ್ಮಜ,'ಪವನಜ,ನಕುಲ,ಸಾತ್ಯಕಿ,ದ್ರುಪದ ವಿರಾಟರು ಹಿಮ್ಮಟ್ಟಿದ್ದಾರೆ, ನೀನೊಬ್ಬನೇ ಗೆಲುವುದು ಸಾಧ್ಯವೇ? ಎಂದ. ನೀನು ಧಾರಿ ಬಿಡಿಸು ನಿನ್ನ ಹಿಂದೆ ನಾವು ಬರುವೆವು ಎಂದ.
ಯುದ್ಧರಂಗ ಪ್ರವೇಶ
ಬದಲಾಯಿಸಿ- ಅದಕ್ಕೆ ಅಬಿಮನ್ಯು, '...ಕಣನೊಳು ಮತ್ತಗಜ ಮುರಿದಂತೆ ಕೆಡಹುವೆನಹಿತ ಮೋಹರವ..' ಎಂದು ಧರ್ಮಜನ ನಮಿಸಿ ಅಪ್ಪಣೆ ಪಡೆದು, ಭೀಮ ನಕುಲರಿಗೆ ವಂದಿಸಿ ಸಿದ್ಧನಾಗಿ ಹೊರಟಾಗ, ಸಾರಥಿ ಕರ್ಣ,ಕೃಪ,ದ್ರೋಣ, ಜಯದ್ರಥರನ್ನು ನೆನಪಿಸಿ ಇವರನ್ನು ಎದುರಿಸಬಲ್ಲೆಯಾ ಎಂದು ಅನುಮಾನಿಸಿದ. 'ಅವರು ನನಗೆ ಗಣ್ಯವೇ ಕೇಳು ಭಾಷೆ!' ...ಬವರವಾದರೆ ಹರನವದನಕೆ ಬೆವರತಹೆನು, ಅವಗಡಿಸಿದರೆ ವಾಸವನ ಸದೆವೆನು,...ಜವನ ಜವಗೆಡಿಸುವನು (ಯಮನನ್ನೇ ಮೂರ್ಛೆಗೊಳಿಸುವೆನು).. ಅರ್ಜುನ ಮಾದವನು ಮುನಿದಡೆ ಗೆಲುವೆನು..! ಎಂದ. ಇವನ ಧಾಳಿಗೆ, 'ಮಹಾರಥರು ಹಿಮ್ಮೆಟ್ಟಿದರು' ಮುಂದೆ ವ್ಯೂಹವನ್ನು ಹೊಕ್ಕು, ಹರನ ನಯನಜ್ವಾಲೆ ಪಾರ್ಥಿಯ ಸರಳ ಕಿಡಿಯಲಿ ..ಸದೆದನು ಸಕಲ ಸೈನಿಕರ'. ಕೌರವ ಇವನ ಶೌರ್ಯವನ್ನು ಮೆಚ್ಚಿ,'ಭರತಕುಲದಲಿ ನಿನ್ನ ಬೆಳವಿಗೆಯೆರಡು ಕುಲವನ್ವಯಕೆ ಕೊಡದೇ ಸುಗತಿ ಸಂಪದವ', 'ಪಾರ್ಥ ಕೃತಾರ್ಥ',(೭-೫-೧೮) ಎನ್ನುವನು.
ಅಸಹಾಯ ಶೂರ
ಬದಲಾಯಿಸಿ- ಅನ್ಯರಿಗೆ ಅಭೇದ್ಯವಾಗಿದ್ದ ಪದ್ಮವ್ಯೂಹವನ್ನು ಏಕೈಕನಾಗಿ ಭೇದಿಸಿ ಒಳಹೊಕ್ಕ ಈ ಸಿಡಿಲಮರಿ ಎದುರಿಸಿದ ವೀರರನ್ನೆಲ್ಲಾ ದಿಕ್ಕಗೆಡಿಸುತ್ತಾನೆ. ನೀನು ಮಗು ನಿಮ್ಮಯ್ಯನನ್ನು ಕಳುಹಿಸು ಎಂದವರಿಗೆ, 'ಮಗುವು ತಾನಹೆ, ತನ್ನ ಬಾಣಕೆ ಮಗುತನ ಬೇರಿಲ್ಲ ನೋಡು' ...ಮೊದಲಲಿ ನಮ್ಮ ನೀ ಗೆಲಿದು ಬಳಿಕ ಭೀಮಾರ್ಜುನರ ಬಯಸುವುದು' ಎನ್ನುವನು. ತಾನು ಶೂರನಾದರೂ ಭೀಮಾರ್ಜುನರಿಗೆ ಗೌರವಕೊಟ್ಟು ಮಾತನಾಡುವನು. ಎದುರಿಗೆ ಸಿಕ್ಕಿದ ದುಶ್ಶಾಸನನ್ನು ಸೀಳಿ ಅವನ ರಕ್ತದಲ್ಲಿ ತಾಯ ತುರುಬನ್ನು ನಾದುವೆನೆಂದು ಹೊರಟವನಿಗೆ ತಟಕ್ಕನೆ ದೊಡ್ಡಪ್ಪನ ಪ್ರತಿಜ್ಞೆ ನೆನಪಾಗಿ, 'ಇವನ ಕೊಂದರೆ ತಂದೆ ಮಿಗೆ ಮೆಚ್ಚುವನೊ ಮುನಿವನೊ' ತನ್ನ ನುಡಿಸಂಭವಿಸದೆಂಬನೊ! "ಭೀಮಸೇನನ ಭಾಷೆಗಂಜುವೆನು! ಇವನ ತಾನೇ ಕೊಲಲಿ, ನಮಗಿನ್ನಿವನ ತೊಡಕೇ ಬೇಡ, ಕದನದೊಳಿವನ ಭಂಗಿಸಿಬಿಡುವೆನೆಂದನು ಮನದೊಳಗೆ.(೭-೫-೪೪,೪೯); ಒಂದು ಬಾಣದಿಂದ ಅವನನ್ನು ಘಾಯಗೊಳಿಸಿ ರಣವಿಮುಖನನ್ನಾಗಿ ಮಾಡಿದನು.
ಸುರಪಾಲ ತನಯನ ತನಯನಸ್ತಮಿಸಿದನು
ಬದಲಾಯಿಸಿ- ಷಡ್ರಥರು ಅವನನ್ನು ಸುತ್ತುಗಟ್ಟಿ ಗೆಲ್ಲಲಾರದೆ ಸೋತು ದಿಕ್ಕೆಡುತ್ತಾರೆ. ಆಗ ದ್ರೋಣರು ಕರ್ಣನನ್ನು 'ಒಡಂಬಡಿಸಿ' ಅಭಿಮನ್ಯುವಿನ ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸುವಂತೆ ಮಾಡುವರು. ಹಿಂದಿರುಗಿ ಕರ್ಣನನ್ನು ಕಂಡು ಅಭಿಮನ್ಯು ಅಚ್ಚರಿಯಿಂದ, 'ಮುಖದಲಿ ಕಿರುನಗೆಯ ಕೇವಣಿಸಿ ನುಡಿದನು ಬೆರಳನೊಲೆದೊಲೆದು,' - 'ಆವ ಶರಸಂಧಾನ ಲಾಘವವದಾವಪರಿ, ಮಝ! ಪೂತು ಪಾಯಿಕುದೇವ (ಕೀಳು ಮನುಷ್ಯ?) ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ| ಈ ವಿವೇಕವಿದಾರ ಸೇರುವೆ? ಯಾವಗಹುದಿದು (ಯಾವಾಗ ಅಹುದು-ಸರಿ-ನ್ಯಾಯ) ಹಿಂದೆ ಬಂದೆಸಗುವೀ ವಿಗಡತನ ನಿನಗೆ ಮೆರೆವುದು ಕರ್ಣ ಕೇಳೆಂದ|| ಆಭಿಮನ್ಯುವಿಗೆ ಭಯವೆಂಬುದೇ ಇಲ್ಲ. ಉತ್ತರ ಕುಮಾರನ ತದ್ವಿರುದ್ಧ ಪಾತ್ರ. (ಕುಮಾರವ್ಯಾಸನ ದೇಹಭಾಷೆಯ ತೋರುವ ಪರಿ , ನಟನಾ ಕೌಶಲ್ಯ ಜ್ಞಾನವನ್ನು ಇಲ್ಲಿ ಗಮನಿಸಬೇಕು); ಅವನನ್ನು ಸುತ್ತುವರಿದವರು, ದ್ರೋಣ, ಅಶ್ವತ್ಥಾಮ, ಕರ್ಣ, ಕೃಪ, ಶಲ್ಯ, ಕೌರವ. ಈ ಆರು ಜನ ಷಡುರಥರು,ಮತ್ತೆ ದುಶ್ಶಾಸನನ ಮಗ.
- ಧನುರ್ಭಂಗವಾದ ಮೇಲೆ ಕತ್ತಿ ಹಿಡಿದು ಭಯಂಕರವಾಗಿ ಕಾದುವನು. ಕತ್ತಿಯನ್ನೂ ಕೈಗಳನ್ನೂ ಕಳೆದುಕೊಂಡು ರಥಚಕ್ರಗಳನ್ನೇ ಚಕ್ರಾಯಧಮಾಡಿ ಯುದ್ಧ ಮಾಡುವನು. ಕೊನೆಗೆ ಚಕ್ರವೂ ಇಲ್ಲದೆ ಇದ್ದಾಗ ಮೇಲ್ವಾದು ಬಂದ ದುಶ್ಶಾಸನನ ಮಗನನ್ನು ಕೊಂದು ತಾನೂ ಮಡಿಯುತ್ತಾನೆ.
- ಕವಿ ಅದನ್ನು ಹೇಳಿದ ರೀತಿ:
'ಕಾಡು ಕಿಚ್ಚೆದ್ದಡವಿಯನು ಕುಡಿ
ನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು ಗಗನದ ಮುಗಿಲ ಮೋಹರವ|
ದಾಳಿಯಲಿಯರೆಯಟ್ಟಿ ಸುಂಟರು
ಗಾಳಿಯುರವಣಿಸಿ ನಿಂದವೊಲು ಸುರ
ಪಾಲ ತನಯನ ತನಯನಸ್ತಮಿಸಿದನು ರಣದೊಳಗೆ||
......ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾ ಹವದೊಳಗೆ ಪವಡಿಸಿದ||
....ವಿಕ್ರಮಾಗ್ನಿಯ
ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ||
ತಾವು ಷಡುರಥರು ಒಬ್ಬ ಹಸುಳೆಯ
ಹೇವವಿಲ್ಲದ ಕೊಂದರೋ ಸುಡಲಾವ ವೀರರು ಕೌರವಾದಿಗಳೆಂದುದಮರಗಣ||
(ಮಡಿದ ....ಬಾಲಕನನು ಈಕ್ಷಿಸಲು ಅರಿದು (ಸಾದ್ಯವಿಲ್ಲ) ತನಗೆ ಎಂಬಂತೆ ರವಿ ಜಾರಿದನು ಪಶ್ಚಿಮಕೆ||
- ವೀರ ಗುಣದ ಮಹಾಪೂರವಾಗಿ ಬಂದ ಈ ಕುಮಾರ ಕರುಣೆಯ ಮಹಾಸಾಗರವನ್ನೇ ಉಕ್ಕಿಸಿ ಹೋಗುತ್ತಾನೆ. (ಗಮಕ ವಾಚನ ಕಾರ್ಯಕ್ರಮಗಳಲ್ಲಿ ಗಮಕಿಗಳು ಈ ಭಾಗವನ್ನು ವಾಚನ ಮಾಡಲು, ವ್ಯಾಖ್ಯಾನ ಮಾಡಲು ಹಿಂಜರಿಯುತ್ತಾರೆ, ಕಾರಣ, ವೀರ ರಸದಲ್ಲಿ ಆರಂಭವಾಗಿ ಕೊನೆಗೆ ಅತೀವ ಕರುಣ ರಸದಲ್ಲಿ ವಾಚನ ವ್ಯಾಖ್ಯಾನ ಮುಕ್ತಾಯವಾಗುವುದು, ವೀರ ನಾಯಕನ ದುರಂತ ಮುಕ್ತಾಯ, ಇಷ್ಟವಾಗದು. ಅದೂ ಅರೆಂಟು ಜನ ವೀರರು ಒಟ್ಟಾಗಿ ಒಬ್ಬ ಬಾಲ ವೀರ ನಿರಾಯುಧನನ್ನು ಕೊಂದದ್ದು.)
ಕವಿಯ ತಾತ್ವಿಕ ದರ್ಶನ
ಬದಲಾಯಿಸಿ- ಕುವೆಂಪು:
- ಕುಮಾರವ್ಯಾಸನ ದರ್ಶನ ಅವನ ಕಾವ್ಯಪ್ರತಿಭೆಯಲ್ಲಡಗಿದೆ. ಅವನ ಭಗವದ್ಭಕ್ತಿ, ಅವನ ಧರ್ಮದೃಷ್ಟಿ, ಆತನ ಋಷಿಸದೃಶ ಅಂತರದರ್ಶನ, ಅವನ ಕಾವ್ಯ ಮಹಿಮೆಗೆ ಕಾರಣ. ಕುಮಾರವ್ಯಾಸ ಕವಿ ವಿರಾಟ್. ನಡುಗನ್ನಡದ ಭಾಮಿನೀಗಣದ ತರಂಗ ಶೈಲಿ, ಸರಳತೆ, ಆದರೆ ಭಾಗೀರಥಿಯ ಅದಮ್ಯವೇಗದ ಗಂಭೀರತೆಯಿಂದ ಮುನ್ನುಗ್ಗುವ ಪ್ರತಿಭೆ ಅವನದು. ದಿಗಂತದಿಂದ ಅನಿರೀಕ್ಷಿತವಾಗಿ ಆವರಿಸುವ ದೊಡ್ಡ ಮೋಡದಂತೆ ಅವನ ಕಲ್ಪನಾಶಕ್ತಿ ಮತ್ತು ಅಗತ್ಯಕ್ಕೆ, ಸಂದರ್ಭಕ್ಕೆ ತಕ್ಕ ಸಹಜ ಭಾವಸ್ಪಂದನ. ಮೋಡದಲ್ಲಿ ತೋರುವ ಮಿಂಚಿನ ಬಳ್ಳಿಯಂತೆ ಅವನ ರೂಪಕಾದಿ ಅಲಂಕಾರಗಳ ರುದ್ರ ರಮ್ಯತೆ ಮತ್ತು ಅಗತ್ಯವಿದ್ದಲ್ಲಿ ಪದಗಳ ನರ್ತನದ ರುದ್ರನೃತ್ಯ ಶೈಲಿ. ಶಾಂತ ಗಂಭೀರ ಸಂದರ್ಭದಲ್ಲಿ ಅದಕ್ಕೆ ತಕ್ಕಭಾವ ಬಿಂಬಿಸುವ ನುಡಿಗಟ್ಟು, ಈ ಮುದಲಾದ ಗೂಣಗಳು ಆವನ ಮಹಿಮೆ ಮತ್ತು ಅವನ ಕಾವ್ಯದ ಜನಪ್ರಿಯತೆಗೆ ಕಾರಣ.
- ಶೈಲಿಯ ನುಣ್ಪು, ಧ್ವನಿ ಸೂಕ್ಷ್ಮತೆ ಸುಸಂಸ್ಕೃತ ಭಾಷೆ, ಜಗದ ಪೃಕ್ರತಿಯ ವಿವರಪರಿಜ್ಞಾನ, ಪ್ರಕೃತಿ ಸೌಂದರ್ಯದಲ್ಲಿ ಪ್ರೀತಿ ಮತ್ತು ಅದರ ಬಣ್ಣನೆಯಲ್ಲಿ ಆಸಕ್ತಿ ಇವು ಅನನ್ಯವಾಗಿದ್ದರೂ ಕಲಾದೃಷ್ಟಿಯಿಂದ ಪಂಪನಿಗೆ ದ್ವಿತೀಯನೆನ್ನಬುಹುದು . ಕೆಲವೊಮ್ಮೆ ಭಾವ ತೀಕ್ಷಣತೆಯಲ್ಲಿ ರಸಾವೇಶದಲ್ಲಿ ಸಹಜತೆಗೆ ತುಸು ದೂರವಾದರೂ, ಸರ್ವವನ್ನೂ ಭಗವತ್ ದೃಷ್ಟಿಯಲ್ಲಿ ನೋಡುವವನಾದರೂ, ಲೌಕಿಕ ಮತ್ತು ಅಲೌಕಿಕ ಎಂದು ಬೇಧ ಮಾಡದೆ ಬದುಕಿಗೆ ಬೆಳಕಿತ್ತು ಬಾಳನ್ನು ಹುರಿದುಂಬಿಸುವ ಬಗೆ ಕುಮಾರವ್ಯಾಸನೇ ಅದ್ವಿತೀಯನಾಗಿ, ಪಂಪನನ್ನೇ ದ್ವಿತೀಯನನ್ನಾಗಿ ಮಾಡುವನು.
- ಕುಮಾರವ್ಯಾಸನ ಕೃಷ್ಣ ಅವನ ದರ್ಶನದ ಪ್ರತಿಮೆಯಾಗಿದ್ದಾನೆ. ಕೃಷ್ಣನೇ ನರನಾಟಕದ ಸೂತ್ರಧಾರಿ. ಉಳಿದ ಪಾತ್ರಗಳೆಲ್ಲವೂ ನಟವರ್ಗ ಮಾತ್ರಾ. ಸೂತ್ರಧಾರಿಯೇ ಪಾತ್ರಧಾರಿಯೂ ಆಗಿ ಮಾನವಸಹಜವಾಗಿಯೇ ವರ್ತಿಸುತ್ತದ್ದ. ಇಲ್ಲಿ ಮುಖ್ಯ ಪಾತ್ರಗಳು ಆ ಸೂತ್ರಧಾರಿಯ ಕೈಚಳಕವನ್ನು ಅರಿತೂ ತನ್ನ ಪಾತ್ರದಲ್ಲಿ ರಸಾಭಾಸವಾಗದಂತೆ ಅಭಿನಯಿಸುತ್ತಿರುವಂತೆ ಕಾಣಿಸುವ ಜಾಣತನವನ್ನು ಕವಿ ತೋರಿದ್ದಾನೆ.[೫]
ಕವಿಯ ಜೀವನ-ದರ್ಶನ
ಬದಲಾಯಿಸಿಪರ್ವ, ಸಂಧಿ ಮತ್ತು ಪದ್ಯಗಳು
ಬದಲಾಯಿಸಿ- ಸಂಧಿಗಳ ಕೆಳಗಡೆ ತಿಳಿಗೆಂಪು ಬಣ್ಣದಲ್ಲಿ ಅದರಲ್ಲಿರುವ ಪದ್ಯಗಳ ಸಂಖ್ಯೆಗಳನ್ನು ಕೊಟ್ಟಿದೆ.
* | * | * | * | * | * | * | * | * | * | * | * | * | ಸಂಧಿಗಳು | ಪದ್ಯಗಳು | |||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|
ಆದಿ ಪರ್ವ | 1(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | 20 | |
ಪದ್ಯಗಳು | 23 | 28 | 28 | 70 | 32 | 46 | 74 | 94 | 25 | 40 | 46 | 26 | ಼68 | 34 | 52 | 67 | 33 | 34 | 51 | 69 | 940 | ||
ಸಭಾ | 2(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 16 | |||||
94 | 129 | 67 | 14 | 51 | 26 | 47 | 54 | 65 | 81 | 36 | 101 | 78 | 132 | 67 | 78 | 1120 | |||||||
ಅರಣ್ಯ | 3(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | ||
37 | 35 | 41 | 47 | 47 | 110 | 104 | 55 | 39 | 58 | 33 | 66 | 72 | 48 | 31 | 50 | 38 | 43 | 56 | 41 | ||||
3(ಸಂಧಿ->) | 21 | 22 | 23 | 23 | |||||||||||||||||||
71 | 53 | 53 | 1228 | ||||||||||||||||||||
ವಿರಾಟ | 4(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 10 | |||||||||||
34 | 56 | 110 | 61 | 48 | 66 | 52 | 93 | 41 | 85 | 646 | |||||||||||||
ಉದ್ಯೋಗ | 5(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 11 | ||||||||||
45 | 48 | 137 | 122 | 22 | 30 | 31 | 72 | 80 | 25 | 49 | 661 | ||||||||||||
ಭೀಷ್ಮ | 6(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 10 | |||||||||||
64 | 39 | 93 | 98 | 42 | 48 | 34 | 67 | 51 | 43 | 579 | |||||||||||||
ದ್ರೋಣ | 7(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 19 | ||
71 | 82 | 80 | 61 | 82 | 67 | 39 | 68 | 52 | 63 | 18 | 33 | 64 | 48 | 71 | 56 | 45 | 72 | 56 | 1128 | ||||
ಕರ್ಣ | 8(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | ||
31 | 21 | 31 | 39 | 37 | 33 | 46 | 42 | 40 | 49 | 61 | 33 | 48 | 40 | 37 | 34 | 53 | 30 | 100 | 41 | 1154 | |||
8(ಸಂಧಿ->) | 21 | 22 | 23 | 24 | 25 | 26 | 27 | 27 | |||||||||||||||
26 | 49 | 48 | 57 | 45 | 52 | 31 | (308) | ||||||||||||||||
ಶಲ್ಯ | 9(ಸಂಧಿ->) | 1 | 2 | 3 | 3 | ||||||||||||||||||
35 | 63 | 77 | 175 | ||||||||||||||||||||
ಗದಾ | 10(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 13 | ||||||||
69 | 41 | 45 | 60 | 56 | 35 | 54 | 64 | 44 | 27 | 73 | 25 | 20 | 613 | ||||||||||
[೬] | ಒಟ್ಟು | 152 | 8244 |
ನೋಡಿ
ಬದಲಾಯಿಸಿಹೆಚ್ಚಿನ ಓದಿಗೆ
ಬದಲಾಯಿಸಿಸಹಯೋಗ
ಬದಲಾಯಿಸಿ- ಕುಮಾರವ್ಯಾಸ ಭಾರತದ ಧ್ವನಿಸುರಳಿಗಳು
- ವಿಕಿಸೋರ್ಸ್ :[೧]
ಉಲ್ಲೇಖ
ಬದಲಾಯಿಸಿ- ↑ ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
- ↑ ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
- ↑ ೧,೨[೧೦-೮-೨]
- ↑ ಪರ್ವ ೪,ಸಂ.೩,ಪದ್ಯ-೬೬,೬೭,೬೮
- ↑ [ಕುವೆಂಪು-೨]
- ↑ ಆಧಾರ:ಉಲ್ಲೇಖ-೧