ಗಂಟಲುಬೇನೆಯು ದನ, ಎಮ್ಮೆ, ಕುರಿ ಮತ್ತು ಆಡು ಜಾತಿಗಳಿಗೆ ತಗಲುವ ಅತಿ ತೀವ್ರವಾದ ಅಂಟುರೋಗ. ಗಳಲೆರೋಗ ಎಂದು ಕೂಡ ಕರೆಯುವುದುಂಟು. ಈ ರೋಗದಲ್ಲಿ ಚರ್ಮದ ಕೆಳಗೆ ಬಾವು ಬರಬಹುದು ; ಸಣ್ಣ ಕರುಳುಗಳ ನೋವು ತಲೆದೊರಬಹುದು; ಇಲ್ಲವೇ ಪುಪ್ಪುಸಭಾಗಗಳು ಕೆಟ್ಟು ನ್ಯೂಮೋನಿಯಬರಬಹುದು. 1838ರಲ್ಲಿ ಯುರೋಪ್ ಖಂಡದಲ್ಲಿ ಬೋಲಿಂಗ್‍ರ್ ಎಂಬ ವಿಜ್ಞಾನಿ ಈ ರೋಗವನ್ನು ಮೊದಲು ಕಂಡುಹಿಡಿದ. 1885ರಲ್ಲಿ ಕೆಟ್ ಎಂಬ ವಿಜ್ಞಾನಿ ಈ ರೋಗಕ್ಕೆ ಮೂಲಕಾರಣವಾದ ಕ್ರಿಮಿಯನ್ನು ಕಂಡುಹಿಡಿದ. ಅಂದಿನಿಂದ ಭಾರತದಲ್ಲಿಯೂ ಜಗತ್ತಿನ ಇತರ ಎಲ್ಲದೇಶಗಳಲ್ಲಿ ಈ ರೋಗವನ್ನು ಗುರುತಿಸಲಾಗಿದೆ. ಭಾರತದಲ್ಲಿ ಪ್ರತಿವರ್ಷ 33,000ಕ್ಕಿಂತಲೂ ಹೆಚ್ಚು ದನ ಮತ್ತು ಎಮ್ಮೆಗಳು ಈ ರೋಗದಿಂದ ಸಾಯುತ್ತವೆ.

ರೋಗಮೂಲ ವಿಜ್ಞಾನ ಬದಲಾಯಿಸಿ

ಈ ರೋಗಕ್ಕೆ ಮೂಲಕಾರಣ ಪಾಶ್ಚುರೆಲ್ಲ ಸೆಪ್ಟಿಕ ಎಂಬ ಹೆಸರಿನ ಒಂದು ಸೂಕ್ಷ್ಮಕ್ರಿಮಿ. ಇದು ದೇಹದ ಹೊರಗೆ ಭೂಮಿಯ ಮಣ್ಣಿನಲ್ಲಿ ಅಲ್ಲದೆ ಜೌಗುಪ್ರದೇಶದಲ್ಲಿ ಹೆಚ್ಚಾಗಿ ಇರುತ್ತದೆ. ಸಾಮಾನ್ಯವಾಗಿ ಇದು ಆರೋಗ್ಯವಾದ ಪ್ರಾಣಿಗಳ ಊರ್ಧ್ವಶ್ವಾಸನಾಳಗಳಲ್ಲಿಯೇ ಇದ್ದು ಪ್ರಾಣಿಗಳ ಶಕ್ತಿ ಕುಂದಿದಾಗ ಮೇಲ್ಮೈ ಹೊಂದಲು ಅವಕಾಶವಾಗುತ್ತದೆ. ಶರೀರದಲ್ಲಿ ಈ ಕ್ರಿಮಿ ರೋಗದಿಂದ ಬಳಲುವ ಪ್ರಾಣಿಯ ಎಲ್ಲ ಅವಯವಗಳಲ್ಲಿ ಅದರಲ್ಲಿಯೂ ರಕ್ತ ಮತ್ತು ಬಾವು ಬಂದ ಜಾಗಗಳಲ್ಲಿ ಕಂಡುಬರುತ್ತದೆ. ಇದನ್ನು ಸೂಕ್ಷ್ಮದರ್ಶಕ ಯಂತ್ರದಿಂದ ಗುರುತಿಸಬಹುದು.

ರೋಗಲಕ್ಷಣಗಳು ಬದಲಾಯಿಸಿ

ಗಂಟಲುಬೇನೆ ಅತಿ ತೀಕ್ಷ್ಣವಾಗಿದ್ದು ರಕ್ತದಲ್ಲಿ ಕ್ರಿಮಿಬೇಗನೆ ಪಸರಿಸಿ ಕೂಡಲೇ ರೋಗದ ಲಕ್ಷಣಗಳು ಕಂಡುಬರುತ್ತವೆ. ಜ್ವರ 1060 ಫ್ಯಾ. 1070 ಫ್ಯಾ. ಇರುವುದು. ನಾಲಗೆ ಬಾಯಿಯಿಂದ ಹೊರಗೆ ಚಾಚಿರುತ್ತದೆ. ವಿಪರೀತ ಜೊಲ್ಲುಸೋರುವುದು. ಕಣ್ಣು ಕೆಂಪಾಗುವುದು. ಪ್ರಾಣಿ ಅತೀವ ಇಳಿಮುಖವಾಗಿದ್ದು 34 ಗಂಟೆಗಳಲ್ಲಿ ಮರಣ ಹೊಂದಬಹುದು. ಕೆಲವು ಸಮಯ ಗಂಟಲು, ಗಂದೆಗಳು, ಎದೆ ಈ ಜಾಗಗಳಲ್ಲಿ ಅತೀವ ನೋವಾದ ಬಾವುಗಳು ಕಂಡುಬರುತ್ತವೆ. ಉಸಿರಾಡಲು ತೊಂದರೆಯಾಗುತ್ತದೆ. ಬೇನೆಯ ಕೆಲವು ದಿವಸಗಳು ಕಳೆಯುವಾಗ ನಿಮೋನಿಯ ತಲೆದೊರಬಹುದು. ಇಲ್ಲವೇ ಕರುಳಿನಲ್ಲಿ ಬದಲಾವಣೆಗಳು ಕಂಡುಬರಹುದು. ಮರಣಾಂತರ ಪ್ರಾಣಿಗಳ ದೇಹವನ್ನು ತೆಗೆದು ಪರೀಕ್ಷೆ ಮಾಡಿದರೆ ರೋಗ ಅತಿ ತೀಕ್ಷ್ಣವಾಗಿದ್ದರೆ ದೇಹದ ಎಲ್ಲ ಭಾಗಗಳಲ್ಲಿ ರಾಗಿಯಷ್ಟು ಗಾತ್ರದ ರಕ್ತ ಗಂಟುಗಳು ಕಂಡುಬರುತ್ತವೆ. ರಸಗ್ರಂಥಿಗಳು ಕೆಂಪಾಗಿ ಉಬ್ಬಿರುತ್ತವೆ. ಈ ಬೇನೆ ಎದೆಗೆ ಪಸರಿಸಿದಾಗ ಎದೆಗೂಡಿನಲ್ಲಿ ದೇಹದ ರಸ ಅಥವಾ ಮಂದವಾದ ರಸ ತುಂಬಿಕೊಂಡಿದ್ದು ಎದೆಗೂಡಿನ ಪದರು ಕೆಂಪಾಗಿರುತ್ತದ. ಪುಪ್ಪಸಗಳು ಬಾತಿದ್ದು ಅಲ್ಲಲ್ಲಿ ಕೆಂಪು ಅಥವಾ ಕಪ್ಪುಬಣ್ಣದ ಬದಲಾವಣೆಗಳನ್ನು ತೋರಿಸುತ್ತವೆ. ಇಂಥ ಪುಪ್ಪುಸ ಒಂದನ್ನು ಕತ್ತರಿಸದರೆ ಅದರಲ್ಲಿ ದಪ್ಪವಾದ ಬಿಳಿಗೆರೆಗಳನ್ನು ಕಂಡುಬರುತ್ತವೆ.

ಚಿಕಿತ್ಸೆ ಬದಲಾಯಿಸಿ

ಗಂಟಲು ಬೇನೆ ಬಂದಿರುವ ಎಲ್ಲ ಪ್ರಾಣಿಗಳನ್ನು ಬೇರ್ಪಡಿಸಿ ಉಳಿದವುಗಳಿಂದ ದೂರವಿಡಬೇಕು. ಅವನ್ನು ಬೆಚ್ಚಗಿರುವ ಜಾಗದಲ್ಲಿ ಕಟ್ಟಿ ಒಳ್ಳೆಯ ಆಹಾರವನ್ನು ಕೊಡಬೇಕು. ಈ ರೋಗಕ್ಕೆ ಬಗೆ ಬಗೆಯ ಸಲ್ಫ್‍ನಾಮೈಡ್ ಔಷಧಿಗಳ ಗುಣ ಕೊಡುತ್ತವೆ. ಸಮರ್ಥ ವೈದ್ಯರ ನೆರವನ್ನು ಒಡನೆ ಪಡೆಯುವುದು ಕ್ಷೇಮ. ಆಗಿಂದಾಗ್ಗೆ ರೋಗ ಕಾಣಬರುವ ಪ್ರದೇಶಗಳಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ಆರಂಭದಲ್ಲಿ ವಿಶೇಷವಾಗಿ ಈ ರೋಗ ಬರುತ್ತದೆ. ಇದು ಒಮ್ಮೆಲೆ ತೀಕ್ಷ್ಣವಾಗಿ ಉಲ್ಪಣ ಸ್ಥಿತಿಯುಂಟಾಗುತ್ತದೆ. ಆದ್ದರಿಂದ ಚಿಕಿತ್ಸಾ ಕ್ರಮ ಕೈಗೊಳ್ಳವಷ್ಟು ಅವಕಾಶ ಸಿಗುವುದು ಕೂಡ ಕಷ್ಟವಾಗುತ್ತದೆ. ರೋಗ ದೊಡ್ಡ ಗಾತ್ರದಲ್ಲಿ ಹಬ್ಬಿದರೆ ಪ್ರತಿಯೊಂದು ಪ್ರಾಣಿಯನ್ನೂ ಉಪಚರಿಸುವುದು. ಕಠಿಣವಾಗುತ್ತದೆ. ಇಂಥ ಪ್ರಸಂಗದಲ್ಲಿ ಒಂದೇ ಪ್ರತಿಬಂಧಕ ಮಾರ್ಗವೆಂದರೆ ಪ್ರತಿವರ್ಷ ಈ ಪ್ರದೇಶಗಳಲ್ಲಿ ಚುಚ್ಚುಮದ್ದನ್ನು ಎಲ್ಲ ದನಗಳಿಗೆ ಹಾಕಿಸುವುದು. ಈ ಚುಚ್ಚುಮದ್ದು ರೋಗವನ್ನು ಹತೋಟಿಗೆ ತರಲು ಬಹಳ ಉಪಕಾರಿಯಾಗಿದೆ. ಚುಚ್ಚುಮದ್ದಿನಿಂದ ಉಪಚರಿಸಿದ ಪ್ರಾಣಿಗಳು ಕನಿಷ್ಠ 10 ತಿಂಗಳವರೆಗೆ ಗಂಟಲುಬೇನೆಯಿಂದ ಮುಕ್ತವಾಗಿರುತ್ತವೆ.

ಹೊರಗಿನ ಕೊಂಡಿಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: