ಖಗೋಳ ಕೋಷ್ಟಕ
ಖಗೋಳ ಕೋಷ್ಟಕ ಎನ್ನುವುದು ನಮಗೆ ಪರಿಚಿತವಾಗಿರುವ ಹಲವಾರು ಆಕಾಶಕಾಯಗಳು ಅಂದರೆ ಸೂರ್ಯ, ಚಂದ್ರ, ಗ್ರಹ ಮತ್ತು ಕೆಲವು ನಕ್ಷತ್ರಗಳ ಸ್ಥಾನಗಳನ್ನು ಗೊತ್ತಾದ ವೇಳೆಗಳಿಗೆ ತಿಳಿಸುವ ಸಂಖ್ಯಾಕೋಷ್ಟಕ (ಎಫಿಮೆರಿಸ್). ಒಂದು ಆಕಾಶಕಾಯದ ಅಕ್ಷಾಂಶ, ರೇಖಾಂಶ, ವಿಷುವದಂಶ, ಘಂಟಾವೃತ್ತಾಂಶ ಮೊದಲಾದವುಗಳೇ ಅಲ್ಲದೆ ಒಂದು ವಾಂಛಿತ ಕ್ಷಣದಲ್ಲಿ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು, ಜ್ಞಾತಧೂಮಕೇತುಗಳು ಯಾವ ಸ್ಥಾನಗಳಲ್ಲಿರುತ್ತವೆ, ಹೇಗೆ ಸಂಚರಿಸುತ್ತವೆ, ಅವುಗಳ ವೇಗಗಳೆಷ್ಟು, ಪರಿಭ್ರಮಣ ಕಾಲವೆಷ್ಟು, ಅವುಗಳ ಪರಸ್ಪರ ಸ್ಥಾನಪಲ್ಲಟಗಳಿಂದುಂಟಾಗುವ ಗ್ರಹಣಗಳು ಯಾವಾಗ ಆಗುತ್ತವೆ-ಈ ಎಲ್ಲ ವಿಷಯಗಳು ಖಗೋಳಕೋಷ್ಟಕದಲ್ಲಿ ದೊರೆಯುವುದು. ಈ ಮಾಹಿತಿಗಳು ನೌಕಾಯಾತ್ರಿಗೆ ಬಹು ಅಗತ್ಯ, ಅಲ್ಲದೆ ಖಗೋಳಶಾಸ್ತ್ರಜ್ಞರಿಗೆ ಆಕಾಶಕಾಯಗಳ ಬಗ್ಗೆ ಸಂಶೋಧನೆ ನಡೆಸಲು ಮತ್ತು ದೂರದರ್ಶಕದಿಂದ ವೀಕ್ಷಿಸಲು ಅಗತ್ಯ. ಅವುಗಳ ಸ್ಥಾನಗಳಲ್ಲದೆ ಅವು ಸಂಚರಿಸುವ ಪಥಗಳು ಮತ್ತು ಆ ಪಥಗಳ ಸಮೀಕರಣಗಳು ಇವೆಲ್ಲವೂ ಅಗತ್ಯ.
ಇತಿಹಾಸ
ಬದಲಾಯಿಸಿಒಂದು ಖಗೋಳಕೋಷ್ಟಕವನ್ನು ಸಿದ್ಧಪಡಿಸುವ ಕಾರ್ಯ ಮೊಟ್ಟಮೊದಲು ಜೆ. ಪಿಕಾರ್ಡ್ ಎಂಬಾತನ ನಿರ್ದೇಶನದಲ್ಲಿ 1679ರಲ್ಲಿ ಫ್ರಾನ್ಸಿನ ಪ್ಯಾರಿಸಿನಲ್ಲಿ ಪ್ರಾರಂಭವಾಯಿತು. ಬೇಡಿಕೆ ಹೆಚ್ಚಾದಂತೆ ಇಂಗ್ಲೆಂಡಿನ ಗ್ರೀನ್‌ವಿಚ್-ವೀಕ್ಷಣಾಲಯ 1767ರಲ್ಲಿ ದ ನಾಟಿಕಲ್ ಆಲ್ಮನಕ್ ಎಂಬ ಹೆಸರಿನಿಂದ ಖಗೋಳಕೋಷ್ಟಕದ ಪ್ರಕಟಣೆಯನ್ನು ತೊಡಗಿತು.[೧][೨][೩][೪] ಇದರಲ್ಲಿ ಪ್ರತಿ ಮಧ್ಯಾಹ್ನ ಮತ್ತು ಮಧ್ಯರಾತ್ರಿಯಲ್ಲಿ ಚಂದ್ರನ ಸ್ಥಾನವನ್ನು ಲೆಕ್ಕಮಾಡಿ ಕೊಡಲಾಗಿತ್ತು. ಈ ಕೆಲಸವನ್ನು ಬಹು ಯಶಸ್ವಿಯಾಗಿ ಮ್ಯಾಸ್ಕಲೈನ್ ಎಂಬಾತ ನಡೆಸಿಕೊಂಡು ಬಂದ. 1811ರಲ್ಲಿ ಆತನ ಮರಣಾನಂತರ ದ ನಾಟಿಕಲ್ ಆಲ್ಮನಕ್ ತನ್ನ ಕೀರ್ತಿಗೆ ಕಳಂಕ ತರುವ ತಪ್ಪು ಅಂಶಗಳನ್ನು ಪ್ರಕಟಿಸಿದ ಕಾರಣದಿಂದ ಈ ಕಾರ್ಯವನ್ನು ನಡೆಸಲು ಇಂಗ್ಲೆಂಡ್ ಸರ್ಕಾರ ಒಂದು ಪುನಾರಚಿತ ಸಮಿತಿಯನ್ನೇ ನೇಮಿಸಿತು. ಅದರ ಆಶ್ರಯದಲ್ಲಿ ಖಗೋಳಕೋಷ್ಟಕಗಳ ರಚನೆ ಪುನಃ ಪ್ರಾರಂಭವಾಗಿ 1923ರ ವರೆಗೂ ನಡೆದುಕೊಂಡು ಬಂದು ಆ ವರ್ಷ ಮತ್ತಷ್ಟು ಪ್ರಗತಿ ಸಾಧಿಸಿತು. ಇದೇ ರೀತಿಯ ಖಗೋಳಕೋಷ್ಟಕ ಜರ್ಮನಿಯ ಬರ್ಲಿನಿನಲ್ಲಿ ಜೆ. ಇ. ಬೋಡ್ ಎಂಬಾತನ ನೇತೃತ್ವದಲ್ಲಿ ರೂಪುಗೊಂಡಿತು (1774). ಆದರೆ ಇದು 1959ರಲ್ಲಿ ನಿಂತುಹೋಯಿತು. ಸ್ಪೇನಿನಲ್ಲಿ 1827ರಲ್ಲಿ ಮೊದಲ ಸಂಚಿಕೆ ಪ್ರಕಟವಾಯಿತು. ಎಲ್ಲಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವ ಅಮೆರಿಕನ್ ಎಫಿಮೆರಿಸ್ ಮತ್ತು ನಾಟಿಕಲ್ ಆಲ್ಮನಕ್ 1852ರಲ್ಲಿ ವಾಷಿಂಗ್ಟನ್ ನಗರದಲ್ಲಿ ಪ್ರಾರಂಭವಾಯಿತು. ಡೇವಿಸ್ ಮತ್ತು ಸೈಮನ್ ಎಂಬುವರು ಸಂಪಾದಕರಾಗಿದ್ದು ಈ ಕೋಷ್ಟಕ ಬಹು ಜನಪ್ರಿಯವೆಂದು ಪ್ರಸಿದ್ಧವಾಗಿದೆ. ರಷ್ಯದಲ್ಲಿ ಖಗೋಳಕೋಷ್ಟಕ ಪ್ರಾರಂಭವಾದದ್ದು 1925ರಲ್ಲಿ.
ಅಂತೂ ಖಗೋಳಕೋಷ್ಟಕದ ಅವಶ್ಯಕತೆ ದಿನದಿನಕ್ಕೂ ಬೆಳೆಯಿತು. ಮೊದಲನೆಯ ಮಹಾಯುದ್ಧದಲ್ಲಿ ನೌಕಾಯಾನಕ್ಕೆ ಸಂಬಂಧಿಸಿದಂತೆ ವಿಧವಿಧವಾದ ವಿಷಯಗಳನ್ನೊಳಗೊಂಡ ಕೋಷ್ಟಕಗಳು ಪ್ರಕಟವಾದವು. ನೌಕಾಯಾತ್ರಿಗಳಿಗೆ ಅನ್ವಯವಾಗುವಂಥ ಒಂದು ವಿಶೇಷ ಸಂಚಿಕೆಯೇ 1914ರಲ್ಲಿ ಪ್ರಕಟವಾಯಿತು. ಆಕಾಶಯಾನಕ್ಕೆ ಮತ್ತು ವಿಮಾನ ಸಂಚಾರಕ್ಕೆ ಸಂಬಂಧಿಸಿದ ಅಂಶಗಳು 1914ರಿಂದ ಹೆಚ್ಚುಹೆಚ್ಚಾಗಿ ಪ್ರಕಟವಾಗತೊಡಗಿದವು. ಒಂದು ವಿಮಾನದ ಸ್ಥಾನವನ್ನು ಕಂಡುಹಿಡಿಯಲು ಸೂರ್ಯ, ಚಂದ್ರ ಮತ್ತು ಗ್ರಹಗಳಲ್ಲದೆ ಕೆಲವು ನಿರ್ದಿಷ್ಟ ನಕ್ಷತ್ರಗಳ ಕೋಷ್ಟಕಗಳು ಹೆಚ್ಚು ನೆರವಾದವು. ಖಗೋಳಕೋಷ್ಟಕಗಳ ಪ್ರಾಮುಖ್ಯ ಹೆಚ್ಚಿದಂತೆ ಅಂತರರಾಷ್ಟ್ರೀಯ ಸಹಕಾರ ಕ್ರಮ ಕೈಗೊಳ್ಳುವ ಉದ್ದೇಶದಿಂದ 1896ರಲ್ಲಿ ಒಂದು ಸಮ್ಮೇಳನ ನಡೆಯಿತು. ಇದರಲ್ಲಿ ಖಗೋಳಶಾಸ್ತ್ರದ ಕೆಲವೊಂದು ಸ್ಥಿರಾಂಕಗಳ ಬಗ್ಗೆ ಚರ್ಚೆಯಾಗಿ ಹಲವಾರು ಒಪ್ಪಂದಗಳು ಸಾಧ್ಯವಾದುವು. ಇವುಗಳ ಮೇರೆಗೆ ಎಲ್ಲ ಖಗೋಳಕೋಷ್ಟಕಗಳು ಒಂದೇ ಬಗೆಯ ಮಾಹಿತಿಗಳನ್ನು ತಯಾರುಮಾಡುವುದು ವ್ಯರ್ಥಕಾಲಕ್ಷೇಪವೆಂದರಿತು ಬೇರೆ ಬೇರೆ ರಾಷ್ಟ್ರಗಳು ವಿವಿಧ ಭಾಗಗಳನ್ನು ಹಂಚಿಕೊಂಡು ಮಾಹಿತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದೆಂದು ತೀರ್ಮಾನಿಸಲಾಯಿತು. ಒಂದು ಖಗೋಳಕೋಷ್ಟಕವನ್ನು ತಯಾರಿಸುವ ಕೆಲಸ ಸುಧೀರ್ಘವಾದುದ್ದು. ಗಣನೆಗಳನ್ನು ಸುಲಭಗೊಳಿಸಲು ಇಂದು ಗಣಕಯಂತ್ರಗಳ ನೆರವನ್ನು ಪಡೆಯಲಾಗುತ್ತದೆ. ಬ್ರೌನ್ ಖಗೋಳಕೋಷ್ಟಕದಲ್ಲಿ ಚಂದ್ರನಿಗೆ ಸಂಬAಧಿಸಿದ (1,400) ಬೇರೆ ಬೇರೆ ವಿಷಯಗಳು ಪ್ರಕಟವಾಗುತ್ತಿವೆ. ಚಂದ್ರನ ನಿರ್ದಿಷ್ಟ ಸ್ಥಾನವನ್ನು ಗುರುತಿಸಲು (180) ಕೋಷ್ಟಕಗಳನ್ನು ಬಳಸಬೇಕಾಗುತ್ತದೆ ಎಂದರೆ ಕೋಷ್ಟಕಗಳ ಅಗತ್ಯ ಎಷ್ಟಿರಬಹುದೆಂಬುದನ್ನು ಊಹಿಸಬಹುದು.
ಎಫಿಮೆರಿಸ್ ಕಾಲ
ಬದಲಾಯಿಸಿಕೆಲವು ಆಕಾಶಕಾಯಗಳ ಚಲನವಲನಗಳನ್ನು ನೋಡಿಕೊಂಡು ಸಂಚರಿಸುವ ನಾವಿಕರಿಗೂ, ಆಕಾಶವಿಜ್ಞಾನಿಗಳಿಗೂ, ಧೂಮಕೇತು, ಗ್ರಹಣ ಮುಂತಾದ ಹಲವು ಆಕಾಶವಿಶೇಷಗಳನ್ನು ಪೂರ್ವಭಾವಿಯಾಗಿ ಲೆಕ್ಕಮಾಡಿ ತಿಳಿಯಲು ಪ್ರಯತ್ನಿಸುವ ಗಣಿತಶಾಸ್ತ್ರಜ್ಞರಿಗೂ ಖಗೋಳಕೋಷ್ಟಕಗಳು ಉಪಯೋಗವಾಗುತ್ತವೆ. ಆಕಾಶಕಾಯಗಳ ಸ್ಥಾನಗಳನ್ನು ನಿಶ್ಚಿತವಾಗಿ ಅರಿಯಲು ಸುಮಾರು 1960ರ ವರೆಗೂ ಗ್ರೀನ್‌ವಿಚ್ ಮಾಧ್ಯಕಾಲವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದಿತು. ಇದಕ್ಕೆ ವಿಶ್ವಕಾಲ (ಯೂನಿವರ್ಸಲ್ ಟೈಂ) ಎಂದು ಹೆಸರು. ಈ ಕಾಲ ಭೂಮಿ ತನ್ನ ಅಕ್ಷದ ಮೇಲೆ ಒಮ್ಮೆ ಆವರ್ತಿಸುವ ಅವಧಿಗೆ ಅನುಗುಣವಾಗುತ್ತದೆ.[೫] ಆದರೆ ಭೂಮ್ಯಾವರ್ತನ ಕಾಲ ಏಕರೀತಿಯಾಗಿರುವುದಿಲ್ಲವೆಂದು ಇತ್ತೀಚಿಗೆ ಖಚಿತವಾಗಿದೆ. ಈ ಕಾರಣದಿಂದ ಇದನ್ನು ಆಧಾರವಾಗಿಟ್ಟುಕೊಳ್ಳದೆ ಎಫಿಮೆರಿಸ್ ಕಾಲ ಎಂಬ ಮತ್ತೊಂದು ಗುಣಕಕಾಲವನ್ನು ಪರಿಗಣಿಸಬೇಕೆಂದು 1955ರಲ್ಲಿ ಡಬ್ಲಿನ್ ಎಂಬೆಡೆ ನಡೆದ ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ಸಭೆ ಸೂಚಿಸಿ ಈ ಕಾಲವನ್ನು ಅನುಸರಿಸಿ ಖಗೋಳಕೋಷ್ಟಕಗಳನ್ನು 1960ರಿಂದ ಪ್ರಕಟಿಸಬೇಕೆಂದು ನಿರ್ಧರಿಸಿತು.
ಖಗೋಳಕೋಷ್ಟಕ ಕಾಲವನ್ನು (ಎಫಿಮೆರಿಸ್ ಟೈಂ) ಅನೇಕ ವರ್ಷಗಳ ಪರ್ಯಂತ ಭೂಮ್ಯಾವರ್ತನ ಕಾಲಗಳನ್ನು ಲೆಕ್ಕ ಮಾಡಿ ಗಣಿತಶಾಸ್ತ್ರ ರೀತಿಯಾಗಿ ನಿರ್ಧರಿಸುತ್ತಾರೆ. ಹೀಗಾಗಿ ಇದು ಯಾವೊಂದು ವರ್ಷದ ಆವರ್ತನ (ರೊಟೇಷನ್) ಅವಧಿಗೂ ಅನುಗುಣವಾಗಿರುವುದಿಲ್ಲ. ಅಲ್ಲದೆ ಇದನ್ನು ಮುಂಚಿತವಾಗಿಯೇ ಗೊತ್ತುಪಡಿಸುವುದಕ್ಕಾಗುವುದಿಲ್ಲ. ಗ್ರೀನ್‌ವಿಚ್ ಮಾಧ್ಯಕಾಲಕ್ಕೂ ಖಗೋಳಕೋಷ್ಟಕ ಕಾಲಕ್ಕೂ 1963ರಲ್ಲಿ 35 ಸೆಕೆಂಡುಗಳ ವ್ಯತ್ಯಾಸವಿತ್ತು. ಇದನ್ನು ಅನುಸರಿಸಿ ಈಗ ಕೋಷ್ಟಕಗಳನ್ನು ತಯಾರಿಸುತ್ತಿದ್ದಾರೆ. ಕೋಷ್ಟಕಕಾಲಕ್ಕೆ ಅನುಗುಣವಾಗಿ ಕೋಷ್ಟಕ ಮಧ್ಯಾಹ್ನರೇಖೆ (ಎಫಿಮೆರಿಸ್ ಮೆರಿಡಿಯನ್) ಎಂಬುದನ್ನು ಪರಿಗಣಿಸಲಾಗಿದೆ. ಭಾರತದಲ್ಲಿ 1957ರಿಂದಲೂ ಈ ಕೋಷ್ಟಕಗಳನ್ನು ಪ್ರಕಟಿಸುತ್ತಿದ್ದಾರೆ. ಇದಕ್ಕೆ ಇಂಡಿಯನ್ ಎಫಿಮೆರಿಸ್ ಅಂಡ್ ನಾಟಿಕಲ್ ಆಲ್ಮನಕ್ ಎಂದು ಹೆಸರು. ಇದು ಭಾರತೀಯ ಪಂಚಾಂಗಗಳನ್ನು ಸಿದ್ಧಗೊಳಿಸುವುದಕ್ಕೆ ಬೇಕಾದ ಕೆಲವು ವಿಶಿಷ್ಟ ವಿವರಗಳನ್ನು ಕೂಡ ಒದಗಿಸುತ್ತದೆ.
ಭಾರತೀಯ ಕ್ರಮ
ಬದಲಾಯಿಸಿಪ್ರತಿಯೊಬ್ಬ ಭಾರತೀಯನ ದಿನಚರಿಯೂ ಒಂದಲ್ಲ ಒಂದು ವಿಧದಲ್ಲಿ ತಿಳಿದೋ ತಿಳಿಯದೆಯೋ ಖಗೋಳಕೋಷ್ಟಕಗಳನ್ನು ಅವಲಂಬಿಸಿದೆ. ಇತಿಹಾಸತಜ್ಞರ ಮತ್ತು ಸಂಶೋಧಕರ ದೃಷ್ಟಿಗೆ ನಿಲುಕದ ದಿನಗಳಿಂದಲೂ ಇಲ್ಲಿಯ ಜನ ಖಗೋಳಕೋಷ್ಟಕವನ್ನು ಬಳಸುತ್ತಿದ್ದಾರೆ. ಗ್ರಹ ವಿಜ್ಞಾನ ಭಾರತಕ್ಕೆ ಗ್ರೀಕರ ಕೊಡುಗೆ ಎಂದು ಹಲವಾರು ದೊಡ್ಡ ವಿದ್ವಾಂಸರು ತಪ್ಪು ಅಭಿಪ್ರಾಯಕ್ಕೆ ಬಂದಿದ್ದಾರೆ. ಇದು ಹೇಗೂ ಇರಲಿ. ಭಾರತೀಯ ಸಂಪ್ರದಾಯದ ಪ್ರಕಾರ ಕ್ರಾಂತಿವೃತ್ತದ ಎರಡೂ ಕಡೆ ಸೇರಿದ ಖಗೋಳ ಪಟ್ಟಿಗೆ ರಾಶಿಚಕ್ರ (ಝೋಡಿಯಕ್) ಎಂದು ಹೆಸರು. ಇದನ್ನು 27 ಸಮಭಾಗ ಮಾಡಿದರೆ ಪ್ರತಿಭಾಗಕ್ಕೂ ಒಂದು ನಕ್ಷತ್ರ ಎಂದು ಹೆಸರು. ಅಶ್ವಿನಿ, ಭರಣಿ ಇತ್ಯಾದಿಗಳೇ ನಕ್ಷತ್ರಗಳು. ಒಂದು ನಕ್ಷತ್ರದ ವ್ಯಾಪ್ತಿಯನ್ನು 4 ಭಾಗ ಮಾಡಿದರೆ ಪ್ರತಿಭಾಗಕ್ಕೂ ಒಂದು ಪಾದವೆಂದು ಹೆಸರು. ಭಚಕ್ರವನ್ನು 12 ಸಮಭಾಗ ಮಾಡಿ ಪ್ರತಿಯೊಂದಕ್ಕೂ ಒಂದು ರಾಶಿ ಎಂದು ಕರೆಯುತ್ತಾರೆ. ಮೇಷ, ವೃಷಭ ಇತ್ಯಾದಿ 12 ರಾಶಿಗಳು. ಒಂದು ರಾಶಿಯಲ್ಲಿ (2 1/4) ನಕ್ಷತ್ರಗಳಿವೆ. ಮೇಷದಲ್ಲಿ, ಅಶ್ವಿನಿ 4 ಭಾಗ, ಭರಣಿ, ಕೃತ್ತಿಕಾ 1 ಇತ್ಯಾದಿ. ಖಗೋಳದಲ್ಲಿ ಚಂದ್ರ ಯಾವ ನಕ್ಷತ್ರದ ಯಾವ ಪಾದದಲ್ಲಿರುವುದೋ ಅದಕ್ಕೆ ದಿನ ಅಥವಾ ನಿತ್ಯನಕ್ಷತ್ರ ಎಂದು ಹೆಸರು. ಹಾಗೆಯೇ ಸೂರ್ಯ ಇರುವ ನಕ್ಷತ್ರಕ್ಕೆ ಮಹಾನಕ್ಷತ್ರ ಅಥವಾ ಮಳೆಯ ನಕ್ಷತ್ರ ಎಂದು ಹೆಸರು. ಚಂದ್ರನೂ, ಸೂರ್ಯನೂ ಒಟ್ಟಾಗಿ ಸಂಚರಿಸುವ ದಿನ ಅಮಾವಾಸ್ಯೆ. ಅಂದಿನಿಂದ ಕ್ರಮವಾಗಿ ಪಾಡ್ಯ, ಬಿದಿಗೆ ಮೊದಲಾದವು ತಿಥಿ ಎನಿಸಿಕೊಳ್ಳುತ್ತವೆ. ಜಾತಕ ಬರೆಯುವ ಪದ್ಧತಿ ಬಹಳ ಹಿಂದಿನಿಂದಲೂ ಬಂದಿದೆ. ಜಾತಕದಲ್ಲಿ ಕುಂಡಲಿಯ ಭಾಗ ಒಂದು ವೈಜ್ಞಾನಿಕ ದಾಖಲೆ. ಅದರಲ್ಲಿ ಉಕ್ತವಾಗುವ ಫಲಗಳು ವೈಜ್ಞಾನಿಕವೇ ಎಂಬುದು ಚರ್ಚೆಗೊಳಗಾದ ವಿಷಯ. ಏನೇ ಇರಲಿ, ಕುಂಡಲಿಗೆ ಖಗೋಳಕೋಷ್ಟಕ ಅತ್ಯಾವಶ್ಯಕ. ಭಚಕ್ರದಲ್ಲಿ ಇಷ್ಟ ಸಮಯಕ್ಕೆ ಸರಿಯಾಗಿ ಉದಯಿಸುವ (ಪೂರ್ವದಿಕ್ಕಿನಲ್ಲಿ ಕಾಣಿಸಿಕೊಳ್ಳುವ) ನಕ್ಷತ್ರಕ್ಕೆ (ರಾಶಿಗೆ) ಆ ಸಮಯದ ಲಗ್ನ ಎಂದು ಹೆಸರು. ಯಾವುದೇ ಕೆಲಸ ಮಾಡಲು ಮುಹೂರ್ತವನ್ನು ಸಾಧಿಸುವ ಪದ್ಧತಿ ಭಾರತದಲ್ಲಿ ವೇದಗಳ ಕಾಲದಿಂದಲೂ ಬಂದಿದೆ. ಇಂಥ ಲಗ್ನವನ್ನೂ ತಿಥಿ, ನಕ್ಷತ್ರ, ಮಾಸ, ಸಂವತ್ಸರ ಮತ್ತು ಗ್ರಹಗಳ ರಾಶಿಸ್ಥಾನಗಳನ್ನೂ ಗಣನೆ ಮಾಡಲು ಆರ್ಯಭಟನಿಗಿಂತ ಹಿಂದಕ್ಕೆ ಅನೇಕ ಶತಮಾನಗಳ ಕಾಲ ಭಾರತದಲ್ಲಿ ಕೋಷ್ಟಕಗಳ ಬಳಕೆ ದೃಗ್ಗಣಿತದ ಆಧಾರದ ಮೇಲೆ ನಡೆಯುತ್ತಿತ್ತು. ಬಲ್ಲವರು ಪ್ರತಿದಿನ ಸೂರ್ಯ, ಚಂದ್ರ, ಗ್ರಹಗಳ ಸ್ಥಾನಗಳನ್ನು ನಕ್ಷತ್ರಗಳಿಗೆ ಸಾಪೇಕ್ಷವಾಗಿ ಗುರುತಿಸುತ್ತಿದ್ದರು. ಹಾಗೆ ಗುರುತಿಸುವುದು ಕರಾರುವಾಕ್ಕಾಗಿರಲೇಬೇಕಷ್ಟೆ.. ಇಂಥ ಶ್ರಮಸಾಧ್ಯ ನಿರ್ಣಯದ ಕಾರ್ಯವನ್ನು ದೂರೀಕರಿಸುವ ಪ್ರಯತ್ನ ಆರ್ಯಭಟನಿಂದ ಪ್ರಾರಂಭವಾಯಿತು. ಅಂದಿನಿಂದ ಲೆಕ್ಕಾಚಾರ ಪ್ರಾರಂಭವಾಗಿ ದಿನಮಾನ, ಸೂರ್ಯೋದಯ ಕಾಲ, ತಿಥಿ, ನಕ್ಷತ್ರ, ಮೊದಲಾದ ಎಲ್ಲ ಮಾಹಿತಿಗಳನ್ನೊಳಗೊಂಡ ಖಗೋಳ ಕೋಷ್ಟಕಗಳು (ಪಂಚಾಂಗಗಳು) ಭಾರತದ ಅನೇಕ ಭಾಗಗಳಲ್ಲಿ ಪ್ರಕಟವಾಗುತ್ತಿವೆ. ಈ ಮಾಹಿತಿಗಳಲ್ಲಿ ಕೆಲವುಗಳ ಬಗ್ಗೆ ಇಂದಿಗೂ ವಾದವಿವಾದಗಳು, ಸಮ್ಮೇಳನಗಳು ನಡೆಯುತ್ತಲೇ ಇವೆ. ಒಂದು ಬಹುಮುಖ್ಯ ವಿಷಯವೆಂದರೆ ಭಾರತದಲ್ಲಿ ಯಾವುದೇ ಒಂದು ಘಟನೆಯ ಪುನರಾವರ್ತನೆಯ ಮುಹೂರ್ತ ನಿರ್ಧರಿಸಲು ಬಳಸುವ ಮಾರ್ಗ ಪರಿಪೂರ್ಣ ವೈಜ್ಞಾನಿಕ. ಉದಾಹರಣೆಗೆ ಗಣೇಶನ ಚತುರ್ಥಿಯನ್ನು ಆಚರಿಸುವ ದಿನ ಭೂಮಿ, ಚಂದ್ರ ಮತ್ತು ಸೂರ್ಯ ಸಾಪೇಕ್ಷವಾಗಿ ಒಂದೇ ಸ್ಥಾನದಲ್ಲಿರುತ್ತವೆ. ಎಂದರೆ ಘಟನೆಗೆ ಸೂರ್ಯಚಂದ್ರರಿಬ್ಬರೂ ಸಾಕ್ಷಿಗಳು. ಗ್ರಿಗೋರಿಯನ್ ಪದ್ಧತಿಯಲ್ಲಿರುವ ಬಹು ದೊಡ್ಡ ದೋಷ ಇಂಥ ಹೊಂದಾಣಿಕೆಯ ಅಭಾವ. ಉದಾಹರಣೆಗೆ ಗ್ರಿಗೋರಿಯನ್ ಪದ್ಧತಿಯ ಪ್ರಕಾರ ಗಾಂಧಿ ಜಯಂತಿಯನ್ನು ಪ್ರತಿವರ್ಷ ಅಕ್ಟೋಬರ್ 2ರಂದು ಆಚರಿಸಬೇಕು. ಆ ದಿನ ಒಂದು ವರ್ಷ ಅಮಾವಾಸ್ಯೆ ಮತ್ತೊಂದು ವರ್ಷ ಪೌರ್ಣಮಿ ಆಗಿರಬಹುದು. ಎಂದರೆ ಘಟನೆಗೂ ಭೂಮಿಯ ನಿಕಟವರ್ತಿಯಾದ ಚಂದ್ರನಿಗೂ ಸಂಬಂಧವೇ ಇಲ್ಲವೆಂದ ಹಾಗಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ Nevil Maskelyne, The Nautical Almanac and Astronomical Ephemeris, for the year 1767 (London: J. Nourse & Mess. Mount and Page, 1766).
- ↑ "The History of HM Nautical Almanac Office". HM Nautical Almanac Office. Archived from the original on 30 June 2007. Retrieved 31 July 2007.
- ↑ 'ESAE 1961': Explanatory Supplement to the Astronomical Ephemeris and the American Ephemeris and Nautical Almanac ('prepared jointly by the Nautical Almanac Offices of the United Kingdom and the United States of America', HMSO, London, 1961)
- ↑ 'ESAA 1992': ed. P.K. Seidelmann, Explanatory Supplement to the Astronomical Almanac (CA, 1992).
- ↑ Seago, John H.; Seidelmann, P. Kenneth; Allen, Steve (5–7 October 2011). "Legislative Specifications for Coordinating with Universal Time" (PDF). Decoupling civil timekeeping from Earth rotation: proceedings of a colloquium exploring implications of redefining Coordinated Universal Time (UTC). Analytical Graphics, Inc., Exton, Pa.: American Astronautical Society. ISBN 978-0877035763. Archived (PDF) from the original on 9 October 2022.
ಹೊರಗಿನ ಕೊಂಡಿಗಳು
ಬದಲಾಯಿಸಿ- The JPL HORIZONS online ephemeris
- Introduction to the JPL ephemerides (archived 26 February 2005)
- "Ephemerides-IMCEE".