ಕ್ರಾಂತಿವೃತ್ತ - ನಕ್ಷತ್ರಗಳಿಗೆ ಸಾಪೇಕ್ಷವಾಗಿ ಸೂರ್ಯನು ಆಗಸದಲ್ಲಿ ವರ್ಷದುದ್ದಲೂ ಚಲಿಸುವ ಗೋಚರ ಪಥಕ್ಕೆ ಕ್ರಾಂತಿವೃತ್ತವೆಂದು ಹೆಸರು. ಹೆಚ್ಚು ನಿಖರವಾಗಿ, ಇದು ಖಗೋಳ ಮತ್ತು ಕ್ರಾಂತಿವೃತ್ತ ಸಮತಳಗಳ ಛೇದನ (ಸೂರ್ಯನ ಸುತ್ತಲೂ ಭೂಮಿಯ ಸರಾಸರಿ ಕಕ್ಷೆಯನ್ನು ಹೊಂದಿರುವ ಜ್ಯಾಮಿತೀಯ ಸಮತಳಕ್ಕೆ ಕ್ರಾಂತಿವೃತ್ತ ಸಮತಳ ಎಂದು ಹೆಸರು). ಇದನ್ನು ಅಚರ ಕ್ರಾಂತಿವೃತ್ತ ಸಮತಳದೊಂದಿಗೆ ಗೊಂದಲಗೊಳಿಸಿಕೊಳ್ಳಬಾರದು. ಅಚರ ಕ್ರಾಂತಿವೃತ್ತ ಸಮತಳವು ಎಲ್ಲಾ ಗ್ರಹ ಕಕ್ಷಾ ಸಮತಳಗಳ ಕೋನೀಯ ಸಂವೇಗಗಳ ಸದಿಶ ಮೊತ್ತವಾಗಿದ್ದು, ಆ ಮೊತ್ತದಲ್ಲಿ ಗುರು ಗ್ರಹದ್ದೇ ಹೆಚ್ಚಿನ ಪ್ರಭಾವವಿದೆ.

ಚಂದ್ರ ಪೂರ್ವೇಕ್ಷಣೆ ಮಾಡಿದ ೧೯೯೪ರ ಕ್ಲೆಮೆಂಟೀನ್ ಗಗನನೌಕೆಯಿಂದ ಒದಗಿದ ಈ ಚಿತ್ರದಲ್ಲಿ ಕ್ರಾಂತಿವೃತ್ತದ ಸಮತಳವು ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಕಾಣುವಂತೆ (ಬಲದಿಂದ ಎಡಕ್ಕೆ) ಭೂಮಿಯ ಬೆಳಕಿನಲ್ಲಿ ಹೊಳೆಯುತ್ತಿರುವ ಚಂದ್ರ, ಚಂದ್ರನ ಕತ್ತಲ ಭಾಗದ ಮೇಲೇರುತ್ತಿರುವ ಸೂರ್ಯನ ಝಳ, ಮತ್ತು ಶನಿ, ಮಂಗಳ ಮತ್ತು ಬುಧ ಗ್ರಹಗಳು (ಕೆಳ ಎಡಭಾಗದಲ್ಲಿರುವ ಮೂರು ಚುಕ್ಕೆಗಳು).

ಕ್ರಾಂತಿವೃತ್ತ ಮತ್ತು ಸಮಭಾಜಕ

ಬದಲಾಯಿಸಿ

ಭೂಮಿಯ ಅಕ್ಷವು ಅದರ ಕಕ್ಷೀಯ ಪರಿಭ್ರಮಣೆಯ ಸಮತಳಕ್ಕೆ ಲಂಬವಾಗಿಲ್ಲ. ಹೀಗಾಗಿ, ಸಮಭಾಜಕದ ಸಮತಳವು ಕ್ರಾಂತಿವೃತ್ತದ ಸಮತಳಕ್ಕೆ ಸಮಾಂತರವಾಗಿಲ್ಲದೆ, ಸುಮಾರು ೨೩°೨೭' ಕೋನವನ್ನುಂಟುಮಾಡುತ್ತದೆ. ಈ ಕೋನಕ್ಕೆ ಕ್ರಾಂತಿವೃತ್ತದ ಬಾಗು ಎಂದು ಹೆಸರು. ಖಗೋಳ ಗುಮ್ಮಟದೊಡನೆ ಸಮಭಾಜಕದ ಮತ್ತು ಕ್ರಾಂತಿವೃತ್ತದ ಸಮತಳಗಳ ಛೇದನಗಳು ಉಂಟುಮಾಡುವ ಮಹಾವೃತ್ತಗಳಿಗೆ ಖಗೋಳ ವಿಷುವದ್ವೃತ್ತ ಮತ್ತು ಕ್ರಾಂತಿವೃತ್ತ ಎಂದು ಹೆಸರು. ಈ ಎರಡು ಸಮತಳಗಳ ಛೇದನ ರೇಖೆಯು ಒಂದು ವ್ಯಾಸದ ಮೇಲೆ ಎದುರುಬದಿರಾಗಿರುವ ಎರಡು ಬಿಂದುಗಳನ್ನು ಉಂಟುಮಾಡುತ್ತದೆ. ಈ ಬಿಂದುಗಳಿಗೆ ವಿಷುವ ಬಿಂದುಗಳೆಂದು ಹೆಸರು. ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಹಾದುಹೋಗುವ ವಿಷುವಕ್ಕೆ ವಸಂತವಿಷುವ ಅಥವಾ ಮೇಷದ ಮೊದಲ ಬಿಂದು ಎಂದು ಹೆಸರು. ಸಾಮಾನ್ಯವಾಗಿ λ ಚಿಹ್ನೆಯಿಂದ ಸೂಚಿಸಲಾಗುವ ಕ್ರಾಂತಿವೃತ್ತದ ರೇಖಾಂಶವನ್ನು ೦°ಯ ಈ ಬಿಂದುವಿನಿಂದ ೩೬೦°ಯವರೆಗೆ ಪೂರ್ವದ ಕಡೆಗೆ ಅಳೆಯಲಾಗುತ್ತದೆ. ಸಾಮಾನ್ಯವಾಗಿ β ಚಿಹ್ನೆಯಿಂದ ಸೂಚಿಸಲಾಗುವ ಅಕ್ಷಾಂಶವನ್ನು ಉತ್ತರಕ್ಕೆ +೯೦° ಅಥವಾ ದಕ್ಷಿಣಕ್ಕೆ -೯೦°ವರೆಗೆ ಅಳೆಯಲಾಗುತ್ತದೆ. ಇದೇ ಛೇದನ ಬಿಂದುವು ವಿಷುವದ್ವೃತೀಯ ನಿರ್ದೇಶಕ ವ್ಯವಸ್ಥೆಯ ಮೂಲವನ್ನೂ ವ್ಯಾಖ್ಯಾನಿಸುತ್ತದೆ. ಈ ವ್ಯವಸ್ಥೆಯ ಅಕ್ಷಗಳೆಂದರೆ: ೧. ಸಾಮಾನ್ಯವಾಗಿ α ಅಥವಾ R.A ಇಂದ ಸೂಚಿಸಲಾಗುವ ವಿಷುವದಂಶ - ಇದನ್ನು ಪೂರ್ವದೆಡೆಗೆ ೦ ಯಿಂದ ೨೪ ಘಂಟೆಗಳವರೆಗೆ ಅಳೆಯಲಾಗುತ್ತದೆ. ೨. ಸಾಮಾನ್ಯವಾಗಿ δ ಚಿಹ್ನೆಯಿಂದ ಸೂಚಿಸಲಾಗುವ ಕ್ರಾಂತಿ - ಇದನ್ನು ಉತ್ತರಕ್ಕೆ +೯೦° ಮತ್ತು ದಕ್ಷಿಣಕ್ಕೆ -೯೦°ಯವರೆಗೆ ಅಳೆಯಲಾಗುತ್ತದೆ. ಸರಳ ಆವರ್ತನ ಸೂತ್ರಗಳನ್ನು ಬಳಸಿ α,δ ಮತ್ತು λ,βಗಳನ್ನು ಒಂದರಿಂದ ಇನ್ನೊಂದಕ್ಕೆ ಮಾರ್ಪಡಿಸಬಹುದು (ಕ್ರಾಂತಿವೃತ್ತೀಯ ನಿರ್ದೇಶಕ ವ್ಯವಸ್ಥೆಯನ್ನು ನೋಡಿ).

ಕ್ರಾಂತಿವೃತ್ತ ಮತ್ತು ನಕ್ಷತ್ರಗಳು

ಬದಲಾಯಿಸಿ
 

ಕ್ರಾಂತಿವೃತ್ತವು ರಾಶಿಚಕ್ರ ಎಂಬ ವಲಯದ ಮಧ್ಯ ರೇಖೆಯಾಗಿದ್ದು, ಈ ರೇಖೆಯ ಎರಡೂ ಬದಿಗಳಲ್ಲಿ ೯°ಗಳವರೆಗೆ ರಾಶಿಚಕ್ರವು ವ್ಯಾಪಿಸಿದೆ. ಸಾಂಪ್ರದಾಯಿಕವಾಗಿ, ಈ ವಲಯವನ್ನು ತಲಾ ೩೦° ರೇಖಾಂಶದ ೧೨ ರಾಶಿಗಳನ್ನಾಗಿ ವಿಭಜಿಸಲಾಗಿದೆ. ಸಂಪ್ರದಾಯದ ಪ್ರಕಾರ, ಕ್ರಾಂತಿವೃತ್ತದಲ್ಲಿರುವ ೧೩ ಪುಂಜಗಳಲ್ಲಿ ೧೨ ಪುಂಜಗಳ ಹೆಸರುಗಳನ್ನು ಈ ಭಾಗಗಳಿಗೆ ಕೊಡಲಾಗಿದೆ. ಜ್ಯೋತಿಷ್ಯದಲ್ಲಿ ರಾಶಿ ಚಿಹ್ನೆಗಳು ಬಹಳ ಮುಖ್ಯ. ಈಗಿನ ಕಾಲದಲ್ಲಿ ಖಗೋಳಶಾಸ್ತ್ರಜ್ಞರು ಸಾಮಾನ್ಯವಾಗಿ ಬೇರೆ ನಿರ್ದೇಶಾಂಕ ವ್ಯವಸ್ಥೆಗಳನ್ನು ಬಳಸುತ್ತಾರೆ (ಈ ಕೆಳಗೆ ನೋಡಿ).

ನಕ್ಷತ್ರಗಳಿಗೆ ಸಾಪೇಕ್ಷವಾಗಿ ವಸಂತವಿಷುವದ ಸ್ಥಾನವು ಸ್ಥಿರವಾಗಿಲ್ಲ. ಸೂರ್ಯ-ಚಂದ್ರರ ಅಯನದ ಕಾರಣದಿಂದ, ವಸಂತವಿಷುವವು ಕ್ರಾಂತಿವೃತ್ತದ ಮೇಲೆ ನಿಧಾನವಾಗಿ ಪ್ರತಿ ೭೨ ವರ್ಷಗಳಲ್ಲಿ ೧°ಯಷ್ಟು ಪಶ್ಚಿಮದೆಡೆಗೆ ಸರಿಯುತ್ತಿದೆ. ಹೆಚ್ಚು ಸೂಕ್ಷ್ಮವಾದ ಉತ್ತರ/ದಕ್ಷಿಣ ಸ್ಥಳಾಂತರವನ್ನೂ ಗ್ರಹಿಸಬಹುದು. ತತ್‌ಕ್ಷಣದ ಸಮಭಾಜಕದ ಮೇಲೆ ಗ್ರಹದ ಅಯನದಿಂದ, ಕ್ರಾಂತಿವೃತ್ತವು ಆವರ್ತಿಸುವುದರಿಂದ ಈ ಸ್ಥಳಾಂತರವು ಉಂಟಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕ್ರಾಂತಿವೃತ್ತೀಯ ನಿರ್ದೇಶಕ ವ್ಯವಸ್ಥೆಯಲ್ಲಿ ಅಳೆದಂತೆ, ನಕ್ಷತ್ರಗಳು ಪೂರ್ವಕ್ಕೆ ಚಲಿಸುತ್ತವೆ (ಅಂದರೆ, ಅವುಗಳ ರೇಖಾಂಶವು ಹೆಚ್ಚಾಗುತ್ತದೆ).

ಪ್ರಸ್ತುತದ ಅಧಿಕೃತ ಅಂತರರಾಷ್ಟ್ರೀಯ ಖಗೋಳಶಾಸ್ತ್ರೀಯ ಸಂಸ್ಥೆಯ ರಾಶಿ ವ್ಯಾಖ್ಯಾನಗಳನ್ನು ಬಳಸಿ, ಹಾಗೂ ಕ್ರಾಂತಿವೃತ್ತದ ಆವರ್ತನೆ ಮತ್ತು ಅಸ್ಥಿರ ಅಯನ ವೇಗಗಳನ್ನು ಗಣನೆಗೆ ತೆಗೆದುಕೊಂಡರೆ, ವಿಷುವ ಬಿಂದುಗಳು ರಾಶಿಗಳ ಮೂಲಕ ಈ ಕೆಳಗಿನಂತೆ ಚಲಿಸುತ್ತವೆ:[]

  • -೧೮೬೫ನೇ ಇಸವಿಯಲ್ಲಿ ಮಾರ್ಚ್ ವಿಷುವವು ವೃಷಭದಿಂದ ಮೇಷಕ್ಕೆ, ಮತ್ತು -೬೭ನೇ ಇಸವಿಯಲ್ಲಿ ಮೀನ ರಾಶಿಗೆ ಹಾದುಹೋಯಿತು. ಇದು ೨೫೯೭ನೇ ಇಸವಿಯಲ್ಲಿ ಕುಂಭ ರಾಶಿಯ ಮೇಲೆ ಮತ್ತು ೪೩೧೨ನೇ ಇಸವಿಯಲ್ಲಿ ಮಕರ ರಾಶಿಯ ಮೇಲೆ ಹಾದುಹೋಗುತ್ತದೆ. ೧೪೮೯ನೇ ಇಸವಿಯಲ್ಲಿ ವಿಷುವವು ತಿಮಿಂಗಿಲದ ಒಂದು 'ಮೂಲೆ'ಯ ೦°೧೦' ಅಂತರದಲ್ಲಿ ಹಾದುಹೋಯಿತು.
  • ಜೂನ್ ವಿಷುವವು -೧೪೫೮ನೇ ಇಸವಿಯಲ್ಲಿ ಸಿಂಹ ರಾಶಿಯ ಮೇಲೆ, -೧೦ನೇ ಇಸವಿಯಲ್ಲಿ ಮಿಥುನ ರಾಶಿಯ ಮೇಲೆ ಮತ್ತು ೧೯೮೯ರ ಡಿಸೆಂಬರ್‌ನಲ್ಲಿ ವೃಷಭ ರಾಶಿಯ ಮೇಲೆ ಹಾದುಹೋಯಿತು. ಇದು ೪೬೦೯ನೇ ಇಸವಿಯಲ್ಲಿ ಮೇಷದ ಮೇಲೆ ಹಾದುಹೋಗಲಿದೆ.
  • ಸೆಪ್ಟೆಂಬರ್ ವಿಷುವವು -೭೨೯ನೇ ಇಸವಿಯಲ್ಲಿ ತುಲಾ ರಾಶಿಯಿಂದ ಕನ್ಯಾ ರಾಶಿಗೆ ಹಾದುಹೋಗಿ, ೨೪೩೯ನೇ ಇಸವಿಯಲ್ಲಿ ಸಿಂಹದ ಮೇಲೆ ಹಾದುಹೋಗಲಿದೆ.
  • -೧೩೦ನೇ ಇಸವಿಯಲ್ಲಿ ದಿಸೆಂಬರ್ ಅಯನವು ಮಕರ ರಾಶಿಯಿಂದ ಧನು ರಾಶಿಗೆ ಹಾದುಹೋಯಿತು. ಇದು ೨೨೬೯ನೇ ಇಸವಿಯಲ್ಲಿ ಉರಗಧರದ ಮೇಲೆ ಮತ್ತು ೩೫೯೭ರಲ್ಲಿ ವೃಶ್ಚಿಕದ ಮೇಲೆ ಹಾದುಹೋಗಲಿದೆ.

ಕ್ರಾಂತಿವೃತ್ತ ಮತ್ತು ಸೂರ್ಯ

ಬದಲಾಯಿಸಿ

ಬೇರೆ ಗ್ರಹಗಳು ಭೂಮಿಯ ಕಕ್ಷೆಗಲ್ಲಿ ಉಂಟುಮಾಡುವ ಕ್ಷೋಭೆಗಳ ಕಾರಣದಿಂದ, ಸೂರ್ಯನ ನೈಜ ಸ್ಥಾನವು ಯಾವಾಗಲೂ ಕ್ರಾಂತಿವೃತ್ತದ ಮೇಲೆಯೇ ಇರದೆ, ಅದರಿಂದ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಕೆಲವು ಆರ್ಕ್‌ಕ್ಷಣಗಳ ಅಂತರದಲ್ಲಿ ಇರಬಹುದು. ಆದ್ದರಿಂದ, ಕ್ರಾಂತಿವೃತ್ತವು ಸೂರ್ಯನ ಸರಾಸರಿ ಪಥವನ್ನು ಸೂಚಿಸುತ್ತದೆ. ಭೂಮಿಯು ಸೂರ್ಯನ ಸುತ್ತ ಒಂದು ವರ್ಷದಲ್ಲಿ ಒಂದು ಪರಿಭ್ರಮಣೆಯನ್ನು ಪೂರ್ಣಗೊಳಿಸಿದಂತೆ, ಸೂರ್ಯನೂ ಕ್ರಾಂತಿವೃತ್ತದ ಮೇಲೆ ಪೂರ್ಣವಾಗಿ ಚಲಿಸಲು ಒಂದು ವರ್ಷ ಬೇಕಾಗುವಂತೆ ಕಂಡುಬರುತ್ತದೆ. ವರ್ಷದಲ್ಲಿ ೩೬೫ ದಿನಗಳಿದ್ದು, ಸೂರ್ಯವು ಪ್ರತಿದಿನ ಸುಮಾರು ೧° ಪೂರ್ವಕ್ಕೆ (ಹೆಚ್ಚುತ್ತಿರುವ ರೇಖಾಂಶದ ದಿಕ್ಕಿನಲ್ಲಿ) ಚಲಿಸುತ್ತದೆ. ಸಮಭಾಜಕ ರೇಖೆಯ ಮೇಲೆ ಪಶ್ಚಿಮದೆಡೆಗೆ ನಡೆಯುವ ೨೪ ಘಂಟೆಗಳ ಸೂರ್ಯನ (ಹಾಗೂ, ನಕ್ಷತ್ರಗಳ ಮತ್ತು ಖಗೋಳದ) ದೈನಂದಿಕ ಚಲನೆಯನ್ನು ಈ ಮೇಲಿನ ವಾರ್ಷಿಕ ಚಲನೆಯೊಂದಿಗೆ ಗೊಂದಲಗೊಳಿಸಿಕೊಳ್ಳಬಾರದು. ನಕ್ಷತ್ರಗಳು ಈ ಒಂದು ದೈನಂದಿಕ ಚಲನೆಯನ್ನು ಪೂರ್ಣಗೊಳಿಸಲು ೨೩ಘಂ ೫೬ನಿ ಕಾಲ ಬೇಕಾಗುತ್ತದೆ (ನಾಕ್ಷತ್ರಿಕ ದಿನ). ಈ ಕಾಲಾವಧಿಯಲ್ಲಿ ಸೂರ್ಯನು ೧° ಪೂರ್ವಕ್ಕೆ ಚಲಿಸುವುದರಿಂದ, ಸೂರ್ಯನಿಗೆ ತನ್ನ ಇದೇ ವೃತ್ತವನ್ನು ಪೂರ್ಣಗೊಳಿಸುವುದಕ್ಕೆ ೪ ನಿಮಿಷಗಳ ಹೆಚ್ಚು ಕಾಲ ಬೇಕಾಗುತ್ತದೆ. ಇದರಿಂದ, ಸೌರ ದಿನದ ಅವಧಿಯು ೨೪ ಘಂಟೆಗಳ ಕಾಲವಿರುತ್ತದೆ.

ವಸಂತವಿಷುವದ ಸಮಯದಲ್ಲಿ (ಸುಮಾರು ಮಾರ್ಚ್ ೨೧ರ ಹೊತ್ತಿಗೆ) ಸೂರ್ಯನು ಸಮಭಾಜಕವನ್ನು ಹಾದುಹೋಗುವಾಗ, ಅದರ ಕ್ರಾಂತಿ, ವಿಷುವದಂಶ ಮತ್ತು ಕ್ರಾಂತಿವೃತ್ತದ ರೇಖಾಂಶಗಳೆಲ್ಲ ೦ ಪ್ರಮಾಣವನ್ನು ಹೊಂದಿರುತ್ತವೆ. ಮಾರ್ಚ್‌ನ ಈ ವಿಷುವವು ಭೂಮಿಯ ಉತ್ತರಾರ್ಧಗೋಳದಲ್ಲಿ ವಸಂತ ಋತುವಿನ ಆಗಮನವನ್ನು ಮತ್ತು ದಕ್ಷಿಣಾರ್ಧಗೋಳದಲ್ಲಿ ಶರತ್ ಋತುವಿನ ಆಗಮನವನ್ನೂ ಸೂಚಿಸುತ್ತದೆ. ಅಧಿಕ ವರ್ಷಗಳ ಕಾರಣದಿಂದ, ಈ ವಿಷುವಗಳು ನಡೆಯುವ ದಿನಾಂಕ ಮತ್ತು ನಿಖರ ಸಮಯಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿರುವ ಅಸಮಗ್ರತೆಗಳ ಕಾರಣ, ವಿಷುವದ ಸಮಯವು ಶತಮಾನಗಳ ಅವಧಿಯಲ್ಲೂ ನಿಧಾನವಾಗಿ ಚಲಿಸುತ್ತದೆ.

ಸುಮಾರು ಜೂನ್ ೨೨ರ ಹೊತ್ತಿಗೆ ಭೂಮಿಯು ೯೦°ಕ್ರಾಂತಿವೃತ್ತೀಯ ರೇಖಾಂಶ, ೬ ಘಂಟೆಗಳ ವಿಷುವದಂಶ, ಮತ್ತು ಕ್ರಾಂತಿವೃತ್ತದ ಬಾಗಿನಷ್ಟೇ ಉತ್ತರ ಕ್ರಾಂತಿ (೨೩.೪೪°) ಸ್ಥಾನಕ್ಕೆ ಬರುತ್ತದೆ. ಇದು ಉತ್ತರಾರ್ಧಗೋಳದಲ್ಲಿ ಕರ್ಕಾಯನ ಮತ್ತು ದಕ್ಷಿಣಾರ್ಧಗೋಳದಲ್ಲಿ ಮಕರಾಯನವೆಂದು ಕರೆಯಲ್ಪಡುತ್ತದೆ. ಈ ಬಿಂದುವು ಕರ್ಕಾಟಕದ ಮೊದಲ ಬಿಂದುವೂ ಆಗಿದ್ದು, ಭೂಮಿಯ ಕರ್ಕಾಟಕ ಸಂಕ್ರಾಂತಿ ವೃತ್ತದ ನೇರ ನೆತ್ತಿಯಲ್ಲಿರುತ್ತದೆ. ಈ ಬಿಂದುವಿನಲ್ಲಿ ಸೂರ್ಯನು ಕ್ರಾಂತಿಯ ದೃಷ್ಟಿಯಲ್ಲಿ ಸಂಕ್ರಮಿಸುವುದರಿಂದ, ಈ ವೃತ್ತಕ್ಕೆ ಸಂಕ್ರಾಂತಿ ವೃತ್ತವೆಂಬ ಹೆಸರು ಬಂದಿದೆ. ಸುಮಾರು ಸೆಪ್ಟೆಂಬರ್ ೨೩ರಂದು ೧೮೦° ಕ್ರಾಂತಿವೃತ್ತೀಯ ರೇಖಾಂಶ ಮತ್ತು ೧೨ ಘಂಟೆಗಳ ವಿಷುವದಂಶಕ್ಕೆ ಬಂದು, ಎರಡನೇ ಅಯನ ಅಥವಾ ತುಲಾದ ಮೊದಲ ಬಿಂದುವನ್ನು ಸೂಚಿಸುತ್ತದೆ. ಭೂಮಿಯ ಕಕ್ಷೆಯಲ್ಲಿನ ಕ್ಷೋಭೆಗಳಿಂದಾಗಿ, ಸೂರ್ಯನು ಸಮಭಾಜಕವನ್ನು ಹಾದುಹೋಗುವ ಸಮಯವು ಇದರ ಹಲವು ನಿಮಿಷಗಳು ಮುನ್ನ ಅಥವಾ ನಂತರ ಇರಬಹುದು. ಸುಮಾರು ಡಿಸೆಂಬರ್ ೨೨ರ ಹೊತ್ತಿಗೆ, ಮಕರದ ಮೊದಲ ಬಿಂದುವಿನಲ್ಲಿ, ೨೭೦° ಕ್ರಾಂತಿವೃತ್ತದ ರೇಖಾಂಶ ಮತ್ತು ೧೮ ಘಂಟೆಗಳ ವಿಷುವದಂಶವನ್ನು ಹೊಂದಿ, ಸೂರ್ಯವು ಅತ್ಯಂತ ಹೆಚ್ಚಿನ ದಕ್ಷಿಣ ಕ್ರಾಂತಿಯಲ್ಲಿರುತ್ತದೆ.

ಕ್ರಾಂತಿವೃತ್ತ ಮತ್ತು ಗ್ರಹಗಳು

ಬದಲಾಯಿಸಿ

ಸೂರ್ಯನ ಸುತ್ತ ಬಹುತೇಕ ಗ್ರಹಗಳ ಕಕ್ಷೆಗಳು ಭೂಮಿಯ ಕಕ್ಷೆಯ ಸಮತಳದಲ್ಲೇ ಇದ್ದು, ಹೆಚ್ಚೆಂದರೆ ಕೆಲವು ಡಿಗ್ರಿಗಳಷ್ಟು ವ್ಯತ್ಯಾಸವನ್ನು ಹೊಂದಿರುತ್ತವೆ. ಹೀಗಾಗಿ ಇವುಗಳು ಆಗಸದಲ್ಲಿ ಸದಾ ಕ್ರಾಂತಿವೃತ್ತದ ಹತ್ತಿರವೇ ಕಂಡುಬರುತ್ತವೆ. ೭° ಕಕ್ಷೀಯ ಓರೆಯನ್ನು ಹೊಂದಿರುವ ಬುಧ ಗ್ರಹವು ಇದಕ್ಕೆ ಅಪವಾದವಾಗಿದೆ. ಪ್ಲುಟೊ ಭೂಮಿಯ ಕ್ರಾಂತಿವೃತ್ತದಿಂದ ೧೭° ಓರೆಯಲ್ಲಿದ್ದು, ಇದನ್ನು ಕುಬ್ಜ ಗ್ರಹವೆಂದು ಮರು-ವಿಂಗಡಣೆ ಮಾಡುವವರೆಗೆ ಈ ಮೇಲಿನ ನಿಯಮಕ್ಕೆ ಒಂದು ಅಪವಾದದಂತಿತ್ತು. ಆದರೆ, ಸೌರಮಂಡಲದ ಬೇರೆ ಕಾಯಗಳು ಇನ್ನೂ ಹೆಚ್ಚಿನ ಕಕ್ಷೀಯ ಓರೆಗಳನ್ನು ಹೊಂದಿವೆ (ಉದಾ: ಎರಿಸ್ ೪೪° ಮತ್ತು ಪಲಸ್ ೩೪°).

ಕ್ರಾಂತಿವೃತ್ತೀಯ ಸಮತಳ ಮತ್ತು ಇನ್ನೊಂದು ಗ್ರಹದ ಕಕ್ಷೀಯ ಸಮತಳಗಳ ಛೇದನ ರೇಖೆಯನ್ನು ಪಾತೀಯ ರೇಖೆ ಎಂದು ಕರೆಯಲಾಗುತ್ತದೆ. ಖಗೋಳದ ಮೇಲೆ ಪಾತೀಯ ರೇಖೆಯ ಛೇದನ ಬಿಂದುಗಳು ಆರೋಹಣ ಸಂಪಾತ (ಇಲ್ಲಿ ಗ್ರಹವು ಕ್ರಾಂತಿವೃತ್ತವನ್ನು ದಕ್ಷಿಣದಿಂದ ಉತ್ತರಕ್ಕೆ ಹಾದುಹೋಗುತ್ತದೆ) ಮತ್ತು ವ್ಯಾಸದ ಎದುರು ಬದಿಯಲ್ಲಿರುವ ಅವರೋಹಣ ಸಂಪಾತ. ಒಂದು ನೀಚ ಗ್ರಹವು ತನ್ನ ಪಾತ ಬಿಂದುವಿನ ಮೂಲಕ ಹಾದುಹೋದಾಗ ಮಾತ್ರ ಸೂರ್ಯ ಸಂಕ್ರಮಣವಾಗುವ ಸಾಧ್ಯತೆಯಿದೆ.

ಬೇರೆ ಗ್ರಹಗಳಿಂದುಂಟಾಗುವ ಕ್ಷೋಭೆಗಳ ಕಾರಣ, ಬಹುತೇಕ ಬೇರೆಲ್ಲಾ ಕಕ್ಷೀಯ ಅಂಶಗಳಂತೆ, ಓರೆ ಮತ್ತು ಪಾತೀಯ ರೇಖೆಗಳೂ ಶತಮಾನಗಳ ಅವಧಿಯಲ್ಲಿ ನಿಧಾನವಾಗಿ ಬದಲಾಗುತ್ತವೆ.

ಕ್ರಾಂತಿವೃತ್ತ ಮತ್ತು ಚಂದ್ರ

ಬದಲಾಯಿಸಿ

ಚಂದ್ರನ ಕಕ್ಷೆಯು ಕ್ರಾಂತಿವೃತ್ತದ ಮೇಲೆ ಸುಮಾರು ೫° ಓರೆಯಲ್ಲಿದೆ. ಅದರ ಪಾತೀಯ ರೇಖೆಯು ಸ್ಥಿರವಾಗಿರದೆ ಪ್ರತಿ ೧೮.೬ ವರ್ಷಗಳಿಗೊಮ್ಮೆ ಒಂದು ಪೂರ್ಣ ವೃತ್ತಾಕಾರದಲ್ಲಿ ಹಿಂದೆ ಸರಿಯುತ್ತದೆ (ಅಂದರೆ, ಪಶ್ಚಿಮದ ಕಡೆಗೆ ಚಲಿಸುತ್ತದೆ). ಇದು ಅಕ್ಷ ವಿಚಲನೆ ಮತ್ತು ಚಾಂದ್ರ ತಾಟಸ್ಥ್ಯಗಳಿಗೆ ಕಾರಣ. ಚಂದ್ರವು ತಿಂಗಳಿಗೆ ಸುಮಾರು ಎರಡು ಬಾರಿ ಕ್ರಾಂತಿವೃತ್ತವನ್ನು ಹಾದುಹೋಗುತ್ತದೆ. ಈ ಹಾಯುವಿಕೆಯು ಅಮಾವಾಸ್ಯೆಯಂದು ಆದರೆ ಸೂರ್ಯ ಗ್ರಹಣ ಉಂಟಾಗುತ್ತದೆ, ಮತ್ತು ಹುಣ್ಣಿಮೆಯಂದಾದರೆ ಚಂದ್ರ ಗ್ರಹಣ ಉಂಟಾಗುತ್ತದೆ. ಈ ರೀತಿಯಲ್ಲಿ ಹಿಂದಿನ ಕಾಲದ ಜನರು ಆಗಸದಲ್ಲಿ ಕ್ರಾಂತಿವೃತ್ತವನ್ನು ಕಂಡುಹಿಡಿಯಬಲ್ಲವರಾಗಿದ್ದರು; ಅವರು ಗ್ರಹಣಗಳಾಗುತ್ತಿದ್ದ ಜಾಗಗಳನ್ನು ಗುರುತು ಮಾಡುತ್ತಿದ್ದರು.

ಕ್ರಾಂತಿವೃತ್ತ ಮತ್ತು ನಕ್ಷತ್ರ ನಿರ್ದೇಶಾಂಕಗಳು

ಬದಲಾಯಿಸಿ

೧೭ನೇ ಶತಮಾನದವರೆಗೆ ನಾಕ್ಷತ್ರಿಕ ನಕ್ಷೆಗಳಲ್ಲಿ ಮತ್ತು ನಕ್ಷತ್ರ ಸೂಚಿಗಳ ಸ್ಥಾನಗಳಿಗೆ ಕ್ರಾಂತಿವೃತ್ತೀಯ ನಿರ್ದೇಶಾಂಕಗಳನ್ನು ಕೊಡಲಾಗುತ್ತಿತ್ತು. ಖಗೋಳಶಾಸ್ತ್ರಜ್ಞರು ನಕ್ಷತ್ರ ಸ್ಥಾನಗಳನ್ನು ನಿರ್ಧರಿಸಲು ದೂರದರ್ಶಕಗಳನ್ನು ಬಳಸಲು ಆರಂಭಿಸಿದ ಮೇಲೆ ವಿಷುವದ್ವೃತ್ತೀಯ ನಿರ್ದೇಶಾಂಕಗಳು ಬಳಕೆಗೆ ಬಂದವು. ಈ ಹೊಸ ನಿರ್ದೇಶಾಂಕಗಳು ಬಳಕೆಗೆ ಬಂದವೆಂದರೆ, ಈ ನಡುವೆ ಕ್ರಾಂತಿವೃತ್ತೀಯ ನಿರ್ದೇಶಾಂಕಗಳನ್ನು ಯಾರೂ ಉಪಯೋಗಿಸುವುದೇ ಇಲ್ಲ. ಆದರೆ, ಕ್ರಾಂತಿವೃತ್ತೀಯ ನಿರ್ದೇಶಾಂಕಗಳು ಕೆಲವು ಪ್ರಯೋಜನೆಗಳನ್ನು ಹೊಂದಿವೆ. ಉದಾಹರಣೆಗೆ, ಗ್ರಹದ ಯುತಿಯನ್ನು ಕ್ರಾಂತಿವೃತ್ತೀಯ ನಿರ್ದೇಶಾಂಕಗಳಿಂದ (ಸಮಭಾಜಕದ ನಿರ್ದೇಶಾಂಕಗಳಿಗಿಂತ) ಹೆಚ್ಚು ಸುಲಭವಾಗಿ ವಿವರಿಸಬಹುದು.

ರಾಶಿಚಕ್ರದ ನಿರ್ದೇಶಾಂಕಗಳನ್ನೂ ನೋಡಿ.

ಉಲ್ಲೇಖಗಳು

ಬದಲಾಯಿಸಿ
  1. J. Meeus; Mathematical astronomical morsels; ISBN 0-943396-51-4

ಬಾಹ್ಯ ಸಂಪರ್ಕಗಳು

ಬದಲಾಯಿಸಿ