ಶಂಖ

(ಕಂಬು ಇಂದ ಪುನರ್ನಿರ್ದೇಶಿತ)

ಶಂಖವು ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಲ್ಲಿ ಕ್ರಿಯಾವಿಧಿಯ ಮತ್ತು ಧಾರ್ಮಿಕ ಮಹತ್ವದ ಹೊರಚಿಪ್ಪು. ಇದು ಹಿಂದೂ ಮಹಾಸಾಗರದಲ್ಲಿ ಕಾಣಿಸುವ ದೊಡ್ಡ ಪರಭಕ್ಷಕ ಸಮುದ್ರ ಶಂಬುಕವಾದ ಟರ್ಬಿನೆಲಾ ಪೈರಮ್‍ನ ಚಿಪ್ಪು. ಶಂಖವೆಂದರೆ ಮೃದ್ವಂಗಿಗಳು ತಮ್ಮ ಶರೀರದ ಸುತ್ತ ರಕ್ಷಣೆಗಾಗಿ ನಿರ್ಮಿಸಿಕೊಂಡ ಕವಚ. ಪ್ರಾಣಿಗಳಲ್ಲಿ ಇದು ಸಾಮಾನ್ಯವಾಗಿ ದೇಹದ ಹೊರಭಾಗದಲ್ಲಿದ್ದು ಕೆಲವಲ್ಲಿ ಒಳಗೂ ಇರಬಹುದು. ಆಮೆ, ಬಸವನಹುಳು, ಶಂಖದಹುಳು ಮುಂತಾದವುಗಳಲ್ಲಿ ಶಂಖ ಶರೀರದ ಹೊರಗೂ, ಆಕ್ಟೋಪಸ್, ಸೆಪಿಯಾ, ಸ್ಕ್ವಿಡ್ ಮುಂತಾದವುಗಳಲ್ಲಿ ಒಳಗೂ ಇರುತ್ತದೆ. ಹೀಗೆ ಶರೀರದ ಒಳಗಡೆ ಬೆಳೆಯುವ ಶಂಖಕ್ಕೆ ಕಟಲ್ ಬೋನ್ ಎಂದು ಹೆಸರು. ಶಂಖದ ಆಕಾರ, ಬಣ್ಣ, ವೈವಿಧ್ಯ ವಿವಿಧ ಪ್ರಭೇದಗಳಲ್ಲಿ ವಿಭಿನ್ನ. ಕೆಲವು ಪ್ರಾಣಿಗಳಲ್ಲಿ ಶಂಖ ಬಲು ಸುಂದರವಾಗಿರುವುದುಂಟು. ವಿಟ್ರಿನೆಲಿಡ್ಸ್, ಕಡಲ ಬಸವನಹುಳು (ಮರೀನ್ ಸ್ನೈಲ್) ಪ್ರಪಂಚದಲ್ಲಿ ಅತಿ ಚಿಕ್ಕ ಶಂಖ ಪಡೆದಿರುವ ಪ್ರಾಣಿ. 1.2192 ಮೀ ಉದ್ದ ಹಾಗೂ 230 ಕಿಲೊಗ್ರಾಮ್‌ನಷ್ಟು ತೂಕ ವಿರುವ ದೈತ್ಯ ಕ್ಲಾಮ್‌ನ ಶಂಖವೇ ಅತಿ ದೊಡ್ಡದು.

ಕೆತ್ತಿದ ಶಂಖಗಳು

ಹಿಂದೂ ಧರ್ಮದಲ್ಲಿ ಶಂಖದ ಮಹತ್ತ್ವ

ಬದಲಾಯಿಸಿ

ಹಿಂದೂ ಪುರಾಣದಲ್ಲಿ, ಶಂಖವು ಹಿಂದೂ ಸಂರಕ್ಷಕ ದೇವರಾದ ವಿಷ್ಣುವಿನ ಪವಿತ್ರ ಲಾಂಛನವಾಗಿದೆ. ಈಗಲೂ ಇದನ್ನು ಹಿಂದೂ ಧರ್ಮಾಚರಣೆಯಲ್ಲಿ ಕಹಳೆಯಾಗಿ ಬಳಸಲಾಗುತ್ತದೆ, ಮತ್ತು ಹಿಂದೆ ಇದನ್ನು ಯುದ್ಧ ಕಹಳೆಯಾಗಿ ಬಳಸಲಾಗುತ್ತಿತ್ತು. ಹಿಂದೂ ಧರ್ಮಗ್ರಂಥಗಳಲ್ಲಿ ಶಂಖವನ್ನು ಖ್ಯಾತಿ, ದೀರ್ಘಾಯಸ್ಸು ಮತ್ತು ಸಮೃದ್ಧಿಯನ್ನು ನೀಡುವಂಥದ್ದು, ಪಾಪದ ಶುಭ್ರಕಾರಿ ಮತ್ತು ಸಂಪತ್ತಿನ ದೇವತೆ ಹಾಗೂ ವಿಷ್ಣುವಿನ ಪತ್ನಿಯಾದ ದೇವತೆ ಲಕ್ಷ್ಮಿಯ ನಿವಾಸ ಎಂದು ಹೊಗಳಲಾಗಿದೆ.

ಹಿಂದೂ ಕಲೆಯಲ್ಲಿ ಶಂಖವನ್ನು ವಿಷ್ಣುವಿನ ಸಂಬಂಧದಲ್ಲಿ ತೋರಿಸಲಾಗುತ್ತದೆ. ನೀರಿನ ಸಂಕೇತವಾಗಿ, ಇದನ್ನು ಸ್ತ್ರೀ ಫಲವತ್ತತೆ ಮತ್ತು ನಾಗಗಳೊಂದಿಗೆ ಸಂಬಂಧಿಸಲಾಗುತ್ತದೆ. ಶಂಖವು ಕೇರಳ ರಾಜ್ಯದ ರಾಜ್ಯ ಲಾಂಛನವಾಗಿದೆ ಮತ್ತು ತಿರುವಾಂಕೂರು ರಾಜ್ಯ ಮತ್ತು ಕೊಚ್ಚಿ ರಾಜ್ಯದ ರಾಷ್ಟ್ರ ಲಾಂಛನ ಕೂಡ ಆಗಿತ್ತು. ಚಿಪ್ಪು ವಸ್ತುವಿನಿಂದ ತಯಾರಿಸಲಾದ ಒಂದು ಪುಡಿಯನ್ನು ಆಯುರ್ವೇದದಲ್ಲಿ ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.[]

ಭೂಮಿಯ ಮೇಲೆ ಸುಮಾರು ಒಂದು ಲಕ್ಷದಷ್ಟು ಮೃದ್ವಂಗಿಗಳಿದ್ದು, ಅವುಗಳಲ್ಲಿಯ ಶಂಖಗಳ ಮೂಲ ಒಂದೇ ಆದರೂ ಆಕಾರ, ರಚನೆ, ಚಿತ್ತಾರ ಹಾಗೂ ವೈಶಿಷ್ಟ್ಯಗಳಲ್ಲಿ ವಿಭಿನ್ನವಾಗಿರುತ್ತವೆ. ಸಿಹಿ ನೀರಿನಲ್ಲಿ, ಕಡಲಿನಲ್ಲಿ ಇಲ್ಲವೇ ನೆಲದಲ್ಲಿ ಕಂಡುಬರುತ್ತವೆ. ಶಂಖದಲ್ಲಿ ಮೂರು ಪದರಗಳು: ಪ್ರಿಸ್‌ಮ್ಯಾಟಿಕ್ ಸ್ತರ ಅಥವಾ ಹೊರಪದರ, ಲ್ಯಾಮೆಲ್ಲಾರ್ ಅಥವಾ ನಡುಪದರ, ನ್ಯಾಕ್ರಿಯಸ್ ಸ್ತರ ಅಥವಾ ಒಳ ಪದರ. ಆದರೆ ಪ್ರಾಚೀನಕಾಲದ ಶಂಖಗಳಲ್ಲಿ ಕೇವಲ ಎರಡೇ ಪದರಗಳಿದ್ದುವಂತೆ. ಪ್ರತಿ ಪದರವೂ ಹರಳು ಖನಿಜದಿಂದಾಗಿತ್ತು. ಕ್ಯಾಲ್ಷಿಯಮ್ ಕಾರ್ಬೊನೇಟ್ ಹಾಗೂ ಸಾವಯವ ವಸ್ತುಗಳ ಮಿಶ್ರಣ ಇದರ ಘಟಕಗಳು. ಶಂಖಜೀವಿಯಲ್ಲಿ ಅದು ಸೇವಿಸಿದ ಆಹಾರ, ನೀರು, ಮಣ್ಣಿನಲ್ಲಿ ದೊರೆಯುವ ಖನಿಜ ಪದಾರ್ಥಗಳು ಒಗ್ಗೂಡಿ ಶಂಖದ ರಚನೆ ಆಗುತ್ತದೆ. ಶಂಖದ ಕಲಾಕೃತಿ ಮುಖ್ಯವಾಗಿ ಅದರ ಬಣ್ಣ ಮತ್ತು ವಿವಿಧ ರಂಗುಗಳಿMದ ಮೂಡಿದ ಗೆರೆಗಳನ್ನು ಅವಲಂಬಿಸಿದೆ. ಇಂದು ಅಸ್ತಿತ್ವದಲ್ಲಿರುವ ಮೃದ್ವಂಗಿಗಳನ್ನು:

  1. ಗ್ಯಾಸ್ಟ್ರೊಪಾಡ್ ಅಥವಾ ಏಕಭಿತ್ತಿನಿರ್ಮಿತ ಶಂಖಗಳು,
  2. ದ್ವಿಕವಾಟವಿರುವ ಶಂಖ,
  3. ಆಕ್ಟೋಪಸ್ ಮತ್ತು ಸ್ಕ್ವಿಡ್,
  4. ಟೂತ್ ಶೆಲ್ (ಆನೆದಂತ ಹೋಲುವ) ಮತ್ತು
  5. ಕೆಂಟಾನ್

ಎಂಬ ಐದು ವರ್ಗಗಳಾಗಿ ವಿಂಗಡಿಸಿದೆ. ಇವೆಲ್ಲ ಬಗೆಗಳವೂ ವರ್ಣರಂಜಿತ ಹಾಗೂ ಆಕರ್ಷಕ ಶಂಖಗಳನ್ನು ನಿರ್ಮಿಸುತ್ತವೆ. ಒಳಗಿನ ಜೀವಿ ಬೆಳೆದಂತೆ ಶಂಖವೂ ಬೆಳೆಯುತ್ತದೆ.

ಕಡಲ ಬಸವನಹುಳು ಹುಟ್ಟುವಾಗ ಶಂಖದ ಗಾತ್ರ ಕೇವಲ 3 ಮಿಮೀ ಇದ್ದು 6 ತಿಂಗಳಲ್ಲಿ 13-15 ಸೆಂಮೀ ವರೆಗೆ ಬೆಳೆಯುತ್ತದೆ. ಹೀಗೆ ಅದು 6 ವರ್ಷದ ತನಕ ಬೆಳೆಯಬಹುದು. ಅನೇಕ ಪ್ರಭೇದಗಳಲ್ಲಿ ಶಂಖ ಪ್ರಾರಂಭದಲ್ಲಿ ತ್ವರಿತವಾಗಿ ಬೆಳೆಯುತ್ತ ಮುಂದೆ ನಿಧಾನವಾಗುತ್ತದೆ. ನಿಶ್ಚಿತ ಅವಧಿಯ ತರುವಾಯ ಬೆಳೆವಣಿಗೆ ನಿಂತುಹೋಗುತ್ತದೆ. ಕೆಲವು ಪ್ರಭೇದಗಳಲ್ಲಿ ಶಂಖ 100 ವರ್ಷ ಪರ್ಯಂತವೂ ಬೆಳೆಯುವುದುಂಟು.

ಮೃದ್ವಂಗಿಗಳ ಶರೀರವನ್ನು ಆವರಿಸಿ ಚರ್ಮದ ಪದರವಿದೆ. ಇದಕ್ಕೆ ಮ್ಯಾಂಟಲ್ ಅಥವಾ ಮೇಲಂಗಿ ಎಂದು ಹೆಸರು. ಮ್ಯಾಂಟಲ್‌ನ ಅಂಚಿನಲ್ಲಿ ಅಥವಾ ಮೇಲ್ಭಾಗದಲ್ಲಿರುವ ಕೆಲವು ಕೋಶಗಳು ಶಂಖ ನಿರ್ಮಾಣಕ್ಕೆ ಅಗತ್ಯ. ಇವು ಕ್ಯಾಲ್ಶಿಯಮ್ ಕಾರ್ಬೊನೇಟ್ ಹಾಗೂ ಇನ್ನಿತರ ಸಾವಯವ ಪದಾರ್ಥಗಳನ್ನು ಸ್ರವಿಸುತ್ತವೆ.

ಈ ಚಿಪ್ಪು ಪಿಂಗಾಣಿಯಂತೆ ಇರುತ್ತದೆ (ಅಂದರೆ ಚಿಪ್ಪಿನ ಮೇಲ್ಮೈಯು ದೃಢ, ಗಟ್ಟಿ, ಹೊಳಪುಳ್ಳದ್ದು, ಮತ್ತು ಪಿಂಗಾಣಿಯಂತೆ ಸ್ವಲ್ಪ ಅರೆಪಾರದರ್ಶಕವಾಗಿದೆ). ಚಿಪ್ಪಿನ ಮುಖ್ಯಕಾಯದ ಒಟ್ಟಾರೆ ಆಕಾರವು ಆಯತದಂತೆ ಅಥವಾ ಶಂಕುವಿನಂತೆ ಇರುತ್ತದೆ. ಆಯತ ರೂಪದಲ್ಲಿ, ಇದು ಮಧ್ಯದಲ್ಲಿ ಉಬ್ಬಿರುತ್ತದೆ, ಆದರೆ ಪ್ರತಿ ಕೊನೆಯಲ್ಲಿ ಕಿರಿದಾಗುತ್ತ ಹೋಗುತ್ತದೆ. ಮೇಲಿನ ಭಾಗವು (ಇಳಿಗೊಳವೆ) ಬಿರಡೆ ತಿರುಪಿನ ಆಕಾರವಿರುತ್ತದೆ, ಮತ್ತು ಕೆಳಗಿನ ಭಾಗವು (ಶಿಖರ/ಶೃಂಗ) ತಿರುಚಿಕೊಂಡಿದ್ದು ಕಿರಿದಾಗುತ್ತ ಹೋಗುತ್ತದೆ. ಇದರ ಬಣ್ಣವು ಮಂದವಾಗಿದ್ದು, ಮೇಲ್ಮೈಯು ಗಟ್ಟಿ, ಭಿದುರವಾಗಿ ಮತ್ತು ಅರೆಪಾರದರ್ಶಕವಾಗಿರುತ್ತದೆ. ಎಲ್ಲ ಶಂಬುಕ ಚಿಪ್ಪುಗಳಂತೆ, ಒಳಭಾಗವು ಪೊಳ್ಳಾಗಿರುತ್ತದೆ. ಚಿಪ್ಪಿನ ಒಳಮೈಗಳು ಬಹಳ ಹೊಳಪುಳ್ಳವಾಗಿರುತ್ತದೆ, ಆದರೆ ಹೊರ ಮೇಲ್ಮೈಯು ಹೆಚ್ಚಿನ ಗಂತಿರಚನೆಯನ್ನು ಪ್ರದರ್ಶಿಸುತ್ತದೆ. ಹಿಂದೂ ಧರ್ಮದಲ್ಲಿ, ಚೂಪಾದ ಕೊನೆಗಳಿರುವ ಹೊಳಪುಳ್ಳ, ಬಿಳಿ, ಮೃದು, ಭಾರದ ಶಂಖವು ಬಹಳ ಬೇಡಿಕೆಯಲ್ಲಿದೆ.

ಸುತ್ತುವಿಕೆಯ ದಿಕ್ಕನ್ನು ಆಧರಿಸಿ ಎರಡು ಬಗೆಯ ಶಂಖಗಳಿವೆ: ದಕ್ಷಿಣಾವರ್ತಿ ಶಂಖ ಮತ್ತು ವಾಮಾವರ್ತಿ ಶಂಖ. ದಕ್ಷಿಣಾವರ್ತಿ ಶಂಖವು ಈ ಪ್ರಜಾತಿಯ ಬಹಳ ಅಪರೂಪವಾದ ಎಡಚ ರೂಪವಾಗಿದೆ. ಚಿಪ್ಪಿನ ಸುತ್ತುಗಳು ಅಥವಾ ಸುರುಳಿಗಳು ಅಪ್ರದಕ್ಷಿಣವಾಗಿ ವಿಸ್ತರಿಸುತ್ತವೆ. ದಕ್ಷಿಣಾವರ್ತ ಶಂಖವು ವಿಷ್ಣುವನ್ನು ಸಂಕೇತಿಸುತ್ತದೆ.

ಶಂಖದ ಶುದ್ಧೀಕರಣ, ಪ್ರದರ್ಶನ ವಿಧಾನ ಹಾಗೂ ಸಂರಕ್ಷಣೆ

ಬದಲಾಯಿಸಿ

ಶಂಖವನ್ನು ಕುದಿಯುವ ನೀರಿನಲ್ಲಿ 5-10 ಮಿನಿಟುಗಳ ತನಕ ಕಾಸಿ, ತಣ್ಣಗಾದ ಮೇಲೆ ಸೂಜಿ ಅಥವಾ ಚೂಪಾದ ಮೊನೆಯಿಂದ ಶರೀರವನ್ನು ಶಂಖದಿಂದ ಬೇರ್ಪಡಿಸಿ, ಸಾಬೂನಿನಲ್ಲಿ ತೊಳೆದು, ಬಿಸಿನೀರಿನಲ್ಲಿ ಆರಿಸಿ, ಅನಂತರ ಮದ್ಯಸಾರದಲ್ಲಿ ಹಲವು ದಿನಗಳ ಕಾಲ ಇರಿಸುವುದರಿಂದ ಶಂಖಗಳು ವಾಸನೆ ಬಂದು ಹಾಳಾಗುವುದನ್ನು ತಡೆಯಬಹುದು. ಹೀಗೆ ಸಂಗ್ರಹಿಸಿ ಪರಿಷ್ಕರಿಸಿದ ಶಂಖವನ್ನು ದಪ್ಪ ಹಾಳೆ ಅಥವಾ ಹಲಗೆ ಮೇಲೆ ಅಥವಾ ಕೆಳಗೆ ಬಿಗಿಯಾಗಿ ಅಂಟಿಸಿ, ಅಲ್ಲೇ ಕೆಳಗೆ ಅದರ ವೈಜ್ಞಾನಿಕ ಹಾಗೂ ಸಾಮಾನ್ಯ ನಾಮ, ಸಂಗ್ರಹಿಸಿದ ದಿನಾಂಕ, ಸ್ಥಳ, ಸಂಗ್ರಹಕಾರನ ಹೆಸರು ಇತ್ಯಾದಿ ಮಾಹಿತಿಗಳನ್ನಿರಿಸಿ ಪ್ರದರ್ಶಿಸಬಹುದಾಗಿದೆ. ಇದರಿಂದ ದೊರೆಯುವಂಥ ಶಂಖಗಳ ವಿಧಗಳು, ಬಗೆಗಳು, ವರ್ಣ ವೈವಿಧ್ಯ, ಆಕೃತಿ, ಶ್ರೀಸಾಮಾನ್ಯನಿಗೂ ತಿಳಿಯಲು ಸಹಾಯವಾಗುತ್ತದೆ.

ಉಪಯೋಗಗಳು

ಬದಲಾಯಿಸಿ

ಹಿಂದಿನ ಕಾಲದಲ್ಲಿ ಶಂಖಗಳನ್ನು ಹಣ ಅಥವಾ ನಾಣ್ಯಗಳಾಗಿ ಬಳಸಿದ್ದುಂಟು.[] ಅವುಗಳ ಪುಡಿ ಬಟ್ಟೆಗಳ ಬಣ್ಣ ತಯಾರಿಸಲು ಉಪಯೋಗವಾಗುತ್ತದೆ. ಸುಮನೋಹರ ಮತ್ತು ಅತಿ ವಿರಳವಾದ ಶಂಖಗಳು ಅದ್ಭುತ ಕಲಾಕೃತಿಗಳ ನಿರ್ಮಾಣದಲ್ಲಿ ಉಪಯುಕ್ತವಾಗುತ್ತವೆ.[] ಶಂಖ ರಚನೆಯನ್ನೇ ಹೋಲುವ ಕೆಲವು ಮೃದ್ವಂಗಿ ಪ್ರಭೇದಗಳಿಂದ ದೊರೆಯುವ ಮುತ್ತುಗಳನ್ನು ಆಭರಣ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಹಲವು ಶಂಖಗಳನ್ನು ಪ್ರಸಾಧನ ಹಾಗೂ ಅಲಂಕಾರೀಕರಣ ವಸ್ತುಗಳ ತಯಾರಿಕೆಯಲ್ಲಿ,[][] ಇನ್ನು ಕೆಲವನ್ನು ಗೃಹಾಲಂಕರಣದಲ್ಲಿ, ಮತ್ತೆ ಕೆಲವನ್ನು ರುಚಿಕರ ಖಾದ್ಯವಸ್ತು, ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ.

ವಿಜ್ಞಾನಿಗಳು ವಿವಿಧ ಶಂಖಗಳನ್ನು ಸಂಶೋಧನೆಯಲ್ಲಿಯೂ ಕಡಲಿನಲ್ಲಿ ದೊರೆಯುವ ತೈಲನಿಕ್ಷೇಪಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿಯೂ ಬಳಸಿಕೊಂಡಿರುತ್ತಾರೆ. ಕೆಲವು ಪ್ರಭೇದಗಳ ಶಂಖಗಳನ್ನು (ಬಲಮುರಿ, ಎಡಮುರಿ) ಭಾರತೀಯರು ಪವಿತ್ರವೆಂದು ಭಾವಿಸಿ ಪೂಜೆಕಾರ್ಯದಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "Shankh (Shankha) Bhasma". Retrieved 2016-12-29.
  2. "10000 years of economy". www.citeco.fr (in ಅಮೆರಿಕನ್ ಇಂಗ್ಲಿಷ್). Retrieved 2022-04-20.
  3. "Shankha | Shilpiyon - Rejuvenating The Artisans". Shilpiyon (in ಇಂಗ್ಲಿಷ್). Archived from the original on 2022-12-12. Retrieved 2022-12-12.
  4. "Materials Used for Cameos". Casco Cameos, LLC. (in ಇಂಗ್ಲಿಷ್). Archived from the original on 2021-08-03. Retrieved 2022-04-20.
  5. "Shells Through the Centuries". Bunny Williams Interior Design (in ಅಮೆರಿಕನ್ ಇಂಗ್ಲಿಷ್). 2020-07-02. Retrieved 2022-04-20.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಶಂಖ&oldid=1229466" ಇಂದ ಪಡೆಯಲ್ಪಟ್ಟಿದೆ