ಮುತ್ತುಗಳು -ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ, ಅಪೂರ್ವ ರತ್ನ, ತನ್ನ್ನ ಆಕಾರ, ವರ್ಣವೈವಿಧ್ಯತೆ ಮತ್ತು ಮೃದುತ್ವಗಳಂತಹ ಗುಣಗಳಿಂದ, ಜನರನ್ನು ವಶೀಕರಿಸುತ್ತಾ ಬಂದಿದೆ. ಎಲ್ಲರನ್ನು ಪ್ರಾಚೀನ ಕಾಲದಿಂದಲೇ ತನ್ನ ಕಡೆ ಹಾಗು ತನ್ನ ಜನ್ಮರಹಸ್ಯದ ಕಡೆಗೆ ಸೆಳೆಯುತ್ತಾ ಬಂದಿರುವ ಈ ರತ್ನದ ಜನ್ಮವು ಒಂದು ನಿಜವಾದ ಪವಾಡವೇ ಎಂದು ಹೇಳಬಹುದು.

ಮುತ್ತುಗಳು
ಚಿಪ್ಪು

ಎಲ್ಲಾ ಬೆಲೆಬಾಳುವ ರತ್ನಗಳು ಅಂದರೆ ವಜ್ರ, ಪಚ್ಚೆ, ಮಾಣಿಕ್ಯದಂತಹ ಹರಳುಗಳು ಹಾಗು ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ಲೋಹಗಳು ಭೂಮಿಯನ್ನು ಅಗೆದಾಗ ಸಿಗುತ್ತವೆ. ಆದರೆ ಮುತ್ತುಗಳನ್ನು ಮಾತ್ರ ಆಳ ಸಮುದ್ರದೊಳಗೆ ಇರುವ ಸಿಂಪಿ ಚಿಪ್ಪುಗಳು ತಯಾರಿಸುತ್ತವೆ. ಬೆಲೆಬಾಳುವ ರತ್ನಗಳ ಅಂದ-ಚಂದಗಳನ್ನು ಹೊರತರಬೇಕಾದರೆ, ಅವುಗಳನ್ನು ಕತ್ತರಿಸಿ, ಮಾರ್ಪಡಿಸಿ, ಹೊಳೆಯುವಂತೆ ಮನುಷ್ಯರೇ ಮಾಡಬೇಕು. ಆದರೆ ಮುತ್ತುಗಳನ್ನು ಈ ಯಾವುದೇ ರೀತಿಯಲ್ಲಿ ಮಾರ್ಪಡಿಸುವ ಅಗತ್ಯವಿಲ್ಲ. ಅವುಗಳ ನೈಸರ್ಗಿಕ ಸೌಂದರ್ಯವೇ ಅವುಗಳ ವೈಶಿಷ್ಟ್ಯತೆ.

ಮುತ್ತುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳುಸಂಪಾದಿಸಿ

ಕೆಲವರು ಮುತ್ತುಗಳು ದೇವರ ಕಂಬನಿಗಳೆಂದು ನಂಬಿದ್ದರು.ಇನ್ನು ಕೆಲವರು ಚಂದ್ರನ ಬೆಳದಿಂಗಳನ್ನು ತುಂಬಿಕೊಂಡ ಇಬ್ಬನಿ ಹನಿಗಳು ಸಮುದ್ರಕ್ಕೆ ಸೇರುತ್ತವೆ, ಆ ಹನಿಗಳನ್ನು ಸಿಂಪಿ ಚಿಪ್ಪುಗಳು ನುಂಗಿಬಿಟ್ಟವು, ಹೀಗೆ ಸಿಂಪಿ ಚಿಪ್ಪುಗಳ ಒಳಗೆ ಮುತ್ತುಗಳು ಬರುತ್ತವೆ ಎಂದು ಜನರು ತಿಳಿದರು.

ಆದರೆ ಸಂಶೋಧನೆಗಳ ಮೂಲಕ ತಿಳಿದು ಬಂದಿರುವುದೇನೆಂದರೆ, ಮುತ್ತುಗಳು ಒಂದು ಜೈವಿಕ ಪ್ರಕ್ರಿಯೆಯ ಫಲಿತಾಂಶ. ಸಿಂಪಿಗಳು ತಮ್ಮನ್ನು ತಾವು ಹೊರಪದಾರ್ಥಗಳಿಂದ (foreign substance) ಕಾಪಾಡಿಕೊಳ್ಳುವ ಸಲುವಾಗಿ, ಮುತ್ತುಗಳನ್ನು ತಯಾರಿಸುತ್ತವೆ.

ಸಿಂಪಿಗಳೆಂದರೇನು?ಸಂಪಾದಿಸಿ

ಸಿಂಪಿಗಳನ್ನು ನಾವು ಸಾಮಾನ್ಯವಾಗಿ ಸಮುದ್ರಗಳ ಒಳಗೆ ಕಾಣಬಹುದು. ಸಿಂಪಿಗಳಿಗಿರುವ ಚಿಪ್ಪುಗಳಿಗೆ ಎರಡು ಭಾಗಗಳನ್ನು ಒಂದು ಇಲಾಸ್ಟಿಕ್ ಕಟ್ಟು ಕುಡಿಸುತ್ತದೆ. ಅಂದರೆ, ಈ ಇಲಾಸ್ಟಿಕ್ ಕಟ್ಟು ಸಿಂಪಿ ಚಿಪ್ಪುಗಳ ಭಾಗಗಳ ಒಂದು ಬದಿಯನ್ನು ಕೂಡಿಸುತ್ತದೆ, ಮಾತ್ತು ಇನ್ನೊಂದು ಬದಿಯನ್ನು ಕೂಡಿಸದೆ ಅದನ್ನು ಹಾಗೆಯೇ ತೆರೆದಿಡುತ್ತದೆ. ಈ ತೆರೆದ ಬಾಯಿಯ ಮೂಲಕ ಸಿಂಪಿಗಳು ತಮ್ಮ ಆಹಾರವನ್ನು ಸೇವಿಸುತ್ತದೆ. ಸಿಂಪಿಗಳು ಬೆಳೆದಂತೆ, ಅವುಗಳ ಚಿಪ್ಪುಗಳ ಗಾತ್ರವೂ ಬೆಳೆಯುತ್ತದೆ. ಈ ಚಿಪ್ಪುಗಳ ಒಳಪದರವನ್ನು ಮುತ್ತು ಚಿಪ್ಪು ಎಂದು ಕರೆಯುತ್ತಾರೆ (Nacre) ಸಿಂಪಿಗಳ ಕವಚವು (Mantle), ಸಿಂಪಿಗಳು ತಿಂದ ಆಹಾರದಲ್ಲಿರುವ ಖನಿಜಗಳ ಸಹಾಯದಿಂದ ಈ ಮುತ್ತು ಚಿಪ್ಪುಗಳನ್ನು (Nacre) ತಯಾರು ಮಾಡುತ್ತದೆ. ಮುತ್ತು ಚಿಪ್ಪುಗಳ ಸಹಾಯದಿಂದ ಸಿಂಪಿಗಳು ಮುತ್ತುಗಳಿಗೆ ಜನ್ಮ ನೀಡುತ್ತವೆ.[೧]

ಸಿಂಪಿಗಳಲ್ಲಿ ಹಲವಾರು-ತರಹದ ಸಿಂಪಿಗಳಿರುತ್ತವೆ, ಹಾಗೆಯೇ ಹಲವಾರು-ತರಹದ ಮುತ್ತುಗಳನ್ನು ತಯಾರಿಸುತ್ತವೆ. ಎಲ್ಲಾ ಸಿಂಪಿಗಳೂ ನೈಸರ್ಗಿಕ ಮುತ್ತುಗಳನ್ನು ತಯಾರಿಸುವುದಲ್ಲ. ನೈಸರ್ಗಿಕ ಮುತ್ತುಗಳು ಸಿಗುವುದು ಬಹಳ ಅಪರೂಪ. ನೈಸರ್ಗಿಕ ಮುತ್ತುಗಳನ್ನು ಮಾಡಲು ವಿಶಿಷ್ಟವಾದ ಸಿಂಪಿಗಳೇ ಇರುತ್ತವೆ. ಆ ಸಿಂಪಿಯ ಹೆಸರು-Pinctada Radiata.[೨]

ಮುತ್ತುಗಳು ಹೇಗೆ ತಯಾರಾಗುತ್ತವೆ?ಸಂಪಾದಿಸಿ

ಯಾವುದಾದರು ಪರೋಪಜೀವಿ(parasite) ದಾಳಿ ಮಾಡಿದಾಗ, ಅಥವಾ ಯಾವುದಾದರು ಹೊರ ಪದಾರ್ಥವು(foreign substance), ಸಿಂಪಿಯ ಕವಚ ಹಾಗು ಚಿಪ್ಪುಗಳ ನಡುವೆ ಸಿಲುಕಿ ಕೊಂಡರೆ, ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗುತ್ತದೆ. ಕಿರಿಕಿರಿ ಉಂಟಾಗಲು ಶುರುವಾದಾಗ, ಮುತ್ತನ್ನು ತಯಾರು ಮಾಡಲು ಶುರುಮಾಡುತ್ತದೆ. ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗಿ ಅಲ್ಲಿ ಗಾಯವಾದಂತೆ ಆಗುತ್ತದೆ. ಹೀಗೆ ಆದ ಗಾಯವನ್ನು ಗುಣಪಡಿಸಿಕೊಳ್ಳಲು, ಮೊದಲು ಮುತ್ತು ಚಿಪ್ಪನ್ನು ತಯಾರಿಸುತ್ತದೆ.

ಗಾಯವಾದಾಗ ಸಿಂಪಿಯು ಎರಡು ರೀತಿಯ ಪ್ರೋಟೀನನ್ನು ಹೊರಹಾಕುತ್ತದೆ. ಅವು ಕೊಂಚಿನ್(conchin) ಮತ್ತು ಪೆರ್ಲುಸಿನ್(perlucin).[೩] ಈ ಎರಡು ಪ್ರೋಟೀನ್ ಗಳು ಸೇರಿ ಕೊಂಕಿಯೊಲಿನ್ (conchiolin) ಎಂಬ ಒಂದು ಮೇಟ್ರಿಕ್ಸ್ ಆಗಿ ರೂಪುಗೊಳ್ಳುತ್ತದೆ. ಸಿಂಪಿಗಳೂ ಆರೊಗೊನೈಟ್ (aroganite)[೪] ಹರಳುಗಳನ್ನು ಆ ಮೇಟ್ರಿಕ್ಸ್ ನಲ್ಲಿರುವ ಖಾಲಿ ಜಾಗಗಳಲ್ಲಿ ತುಂಬುತ್ತವೆ. ಆರೊಗೊನೈಟ್ ಹರಳುಗಳಲ್ಲಿ ಕಾಲ್ಶಿಯಂ ಕಾರ್ಬೊನೇಟ್ (calcium carbonate) ಇರುತ್ತದೆ. ಈ ರೀತಿಯಲ್ಲಿ ಆಗಿರುವ ಕೊಂಕಿಯೊಲಿನ್ ಮತ್ತು ಆರೊಗೊನೈಟ್ ಮಿಶ್ರಣವೇ ಮುತ್ತು ಚಿಪ್ಪು (Nacre). ಸಿಂಪಿಯು ಹೊರ ಪದಾರ್ಥದ ಮೇಲೆ ಈ ಮುತ್ತು ಚಿಪ್ಪಿನ ಪದರವನ್ನು ಹರಡುತ್ತಾ ಹೋಗುತ್ತದೆ. ಪದರಗಳ ಮೇಲೆ ಪದರವನ್ನು ಹರಡಿ, ಆ ಹೊರ ಪದಾರ್ಥವನ್ನು ಒಂದು ಮೃದುವಾದ ಮುತ್ತಾಗಿ ಹೊರಹಾಕುತ್ತದೆ.[೫] ಹೀಗೆ ಹೊರ ಪದಾರ್ಥವನ್ನು ಮುತ್ತಾಗಿ ಬದಲಾಯಿಸುವುದರಿಂದ ಸಿಂಪಿಗೆ ಆದ ಕಿರಿಕಿರಿಯು ಕಡಿಮೆ ಆಗುತ್ತದೆ. ಇದುವೇ ಸಿಂಪಿಗಳು ಮುತ್ತುಗಳನ್ನು ತಯಾರಿಸುವ ಅದ್ಭುತ ಪ್ರಕ್ರಿಯೆ. ಕೆಲವರು, ಒಂದು ಕಾಳು ಮರಳು ಸಿಂಪಿಗಳಲ್ಲಿ ಹೊರಪದಾರ್ಥವಾಗಿ ಕಿರಿಕಿರಿ ಮಾಡಲು ಪ್ರಯತ್ನಿಸಿದಾಗ ಮಾತ್ರ, ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ ಎನ್ನುತ್ತಾರೆ. ಆದರೆ ಮರಳಲ್ಲದೆ, ಯಾವುದೇ ವಿದೇಶಿ ಪದಾರ್ಥಗಳು ಅವುಗಳ ಮಧ್ಯೆ ಉಳಿದರೆ, ಅದರಿಂದ ಸಿಂಪಿಗೆ ಕಿರಿಕಿರಿ ಉಂಟಾಗಿ ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ.[೬]

ಆಭರಣಗಳಲ್ಲಿ ಮುತ್ತುಗಳುಸಂಪಾದಿಸಿ

ನಾವು ಆಭರಣ ಮಳಿಗೆಗಳಲ್ಲಿ ಚೆನ್ನಾಗಿ ಕಾಣುವ, ಉರೂಟಾದ ಮುತ್ತುಗಳನ್ನು ಕಾಣಬಹುದು. ಆದರೆ ಆ ಮುತ್ತುಗಳೆಲ್ಲಾ ನೈಸರ್ಗಿಕ ಮುತ್ತುಗಳಾಗಿರುವುದಿಲ್ಲ, ಹಾಗೆಯೇ ಎಲ್ಲಾ ಮುತ್ತುಗಳು ಅಷ್ಟೊಂದು ಚೆನ್ನಾಗಿ ಹೊರಬರುವುದಿಲ್ಲ. ನಾವು ಮುತ್ತುಗಳನ್ನು ಬಹಳಷ್ಟು ಬಣ್ಣ ಮತ್ತು ಆಕಾರಗಳಲ್ಲಿ ಕಾಣಬಹುದು- (ಬಿಳಿ, ಕಪ್ಪು, ಹಸಿರು, ನೀಲಿ, ಕೆಂಪು). ಅವುಗಳ ನೈಸರ್ಗಿಕ ಬಣ್ಣವು ಸಿಂಪಿಯ ತಳಿಯ ಮೇಲೆ ಪರಾಧೀನವಾಗಿರುತ್ತದೆ. ಅಷ್ಟೇ ಅಲ್ಲದೇ ಅವುಗಳಿರುವ ನೀರು, ಉಷ್ಣಾಂಶ, ಎಲ್ಲಾ ಮುತ್ತುಗಳ ಬಣ್ಣದ ಮೇಲೆ ಪರಿಣಾಮ ಬೀಳುತ್ತದೆ.[೭][೮]

ಮುತ್ತುಗಳಲ್ಲಿ ವರ್ಗೀಕರಣಸಂಪಾದಿಸಿ

 • ನೈಸರ್ಗಿಕ ಮುತ್ತುಗಳು(natural pearls): ಮನುಷ್ಯ ನ ಹಸ್ತಕ್ಷೇಪವಿಲ್ಲದೆ ಸಿಂಪಿಗಳಿಂದ ತಯಾರಾಗುವ ಮುತ್ತುಗಳೇ ನೈಸರ್ಗಿಕ ಮುತ್ತುಗಳು.
 • ಬೆಳೆಸಿದ ಮುತ್ತುಗಳು(cultured pearls): ಈ ರೀತಿಯ ಮುತ್ತುಗಳನ್ನು ಸಿಂಪಿಗಳು ತಯಾರು ಮಾಡುವಾಗ, ಅದರಲ್ಲಿ ಮನುಷ್ಯನ ಕೈವಾಡವೂ ಇರುತ್ತದೆ. ಅಂದರೆ ಮನುಷ್ಯರು ಸಿಂಪಿಗಳನ್ನು ಬೆಳೆಸಿ, ಅವುಗಳಿಂದ ಮುತ್ತುಗಳನ್ನು ಪಡೆಯಲು, ಅವುಗಳಿಗೆ ಗಾಯ ಮಾಡುತ್ತಾನೆ. ಈ ರೀತಿ ಗಾಯ ಮಾಡಿದಾಗ ಅವುಗಳಿಗೆ ಕಿರಿಕಿರಿ ಉಂಟಾಗಿ ಮುತ್ತುಚಿಪ್ಪಿನ ಪದರವನ್ನು ಗಾಯ/ಹೊರ ಪದಾರ್ಥದ ಮೇಲೆ ಹರಡಲು ಶುರುಮಾಡುತ್ತದೆ. ಈ ರೀತಿ ಜನ್ಮ ಪಡೆದುಕೊಂಡ ಮುತ್ತಿಗೆ ಬೆಳೆಸಿದ ಮುತ್ತುಗಳು ಎನ್ನುತ್ತಾರೆ.


 • ನೈಸರ್ಗಿಕ ಮುತ್ತುಗಳು(natural pearls): ಇವು ಮುಟ್ಟಲು ಮೃದುವಾಗಿರುತ್ತದೆ; ಆದರೆ ಕಚ್ಚಿದಾಗ ಸಮಗ್ರವಾಗಿರುತ್ತದೆ.
 • ಕೃತಕ ಮುತ್ತುಗಳು( artificial pearls): ಇವುಗಳನ್ನು ಕಚ್ಚಿದರೆ ಅವು ಸಮಗ್ರವಾಗಿರುವುದಿಲ್ಲ.


ಇತಿಹಾಸದಲ್ಲಿ ಮುತ್ತುಗಳ ವಿಶೇಷತೆಸಂಪಾದಿಸಿ

ಮುತ್ತುಗಳನ್ನು ಬೆಳಸುವುದನ್ನು ೧೯೦೦ನೇ ಇಸವಿ ಇಂದ ಶುರುಮಾಡಿದರು, ಆದರೆ ಅದಕ್ಕೆ ಮುಂಚೆ ನೈಸರ್ಗಿಕವಾಗಿ ಹುಟ್ಟಿದ ಮುತ್ತುಗಳು ಅಪರೂಪವಾಗಿದ್ದವು ಹಾಗು ಬಹುಮೂಲ್ಯವಾದ ಹರಳಾಗಿ ಮೆರೆಯುತ್ತಿತ್ತು.

ಜಾರ್ಜ್ ಫ್ರೆಡರಿಕ್ ಕುನ್ಸ್ [೯]ನ ಪ್ರಕಾರ ಪ್ರಾಚೀನ ಕಾಲದಲ್ಲಿ ಭಾರತದ ಮೀನುಗಾರರು, ಸಿಂಪಿಗಳನ್ನು ಆಹಾರವಾಗಿ ತಿನ್ನಲು ಅದನ್ನು ತೆರೆದಾಗ, ಮುತ್ತುಗಳನ್ನು ನೋಡಿ ಅದರ ಅಂದ-ಚಂದಗಳನ್ನು ನೋಡಿ ಪ್ರಶಂಸಿಸುತ್ತಿದ್ದರು.

ರೋಮನ್ ಸಾಮ್ರಾಜ್ಯಸಂಪಾದಿಸಿ

ರೋಮನ್ ಸಾಮ್ರಾಜ್ಯದಲ್ಲಿ ಮುತ್ತುಗಳಿಗೆ ತುಂಬಾ ಬೆಲೆ ಹಾಗು ಬೇಡಿಕೆ ಇದ್ದಿತ್ತು. ರೋಮನ್ ಜನರಲ್ ಆಗಿದ್ದ ವಿಟೆಲಿಯಸ್ ನು(Vitellius) ತನ್ನ ತಾಯಿಯ ಒಂದು ಮುತ್ತಿನ ಕುಡಿಕೆಯನ್ನು ಮಾರಿ ಅದರಿಂದ ಬಂದ ಹಣದಲ್ಲಿ ಒಂದು ದೊಡ್ಡ ಸೇನೆಯ ಖರ್ಚು-ವೆಚ್ಚಗಳನ್ನು ನೋಡಿಕೊಂಡಿದ್ದನು. ಹಿಂದಿನ ಕಾಲದಲ್ಲಿ ರೋಮನ್ ಹೆಂಗಸರು ತಮ್ಮ ಬಟ್ಟೆಗಳು ಆಕರ್ಷಕವಾಗಿ ಕಾಣಲು ಅವುಗಳಿಗೆ ಮುತ್ತುಗಳನ್ನು ಸೇರಿಸಿಕೋಳ್ಳುತ್ತಿದ್ದರು.[೧೦]

ಈಜಿಪ್ಟ್ಸಂಪಾದಿಸಿ

ಈಜಿಪ್ಟಿನ ಸುಪ್ರಸಿದ್ಧ ರಾಣಿಯಾಗಿದ್ದ ಕ್ಲಿಯೋಪಾಟ್ರಾಳು (Cleopatra) ಈಜಿಪ್ಟಿನವರ ಪರಂಪರೆ ಮತ್ತು ಸಂಪತ್ತನ್ನು ರೋಮಿನ ಮಾರ್ಕ್ ಆಂಟನಿ (Mark Antony)ಯವರಿಗೆ ತೋರಿಸಿಕೊಡಲು, ಒಂದು ಭೋಜನ ಕೂಟವನ್ನು ಏರ್ಪಡಿಸಿದಳು. ಆ ಭೋಜನ ಕೂಟದಲ್ಲಿ ಒಂದು ಖಾಲಿ ತಟ್ಟೆ ಮತ್ತು ವೈನ್ ಗ್ಲಾಸನ್ನು ಇಟ್ಟುಕೊಂಡಿದ್ದಳು. ಆ ವೈನ್ ಗ್ಲಾಸಿನಲ್ಲಿ, ವೈನ್ ಜೊತೆ, ಒಂದು ಮುತ್ತನ್ನು ಪುಡಿಮಾಡಿ, ಅದರಲ್ಲಿ ಬೆರೆಸಿ ಕುಡಿದಳು. ಇದನ್ನು ಕಂಡು ಬೆರಗಾದ ಮಾರ್ಕ್ ಆಂಟನಿಯವರು, ಈಜಿಪ್ಟಿನವರ ಶ್ರೀಮಂತಿಕೆಯನ್ನು ಒಪ್ಪಿಕೊಂಡರು. ಹೀಗೆ ಮುತ್ತುಗಳು ಒಂದು ಸಾಮ್ರಾಜ್ಯದ ಘನತೆ-ಗೌರವವನ್ನು ಎತ್ತಿ ಹಿಡಿಯುತ್ತಿತ್ತು.[೧೧]

ಯುರೋಪ್ಸಂಪಾದಿಸಿ

ಸ್ಪೇನಿನ ಆಡಳಿತಗಾರರು ತಮ್ಮ ಆಳುಗಳಿಗೆ ಸಮುದ್ರಕ್ಕೆ ಧುಮಿಕಿಯಾದರೂ ಮುತ್ತುಗಳನ್ನು ಹುಡಿಕಿ ತರಲು ಆಜ್ಞೆ ಮಾಡುತ್ತಿದ್ದರು. ಇವರ ರೀತಿ ಬ್ರಿಟಿಷರೂ ಸಹ ಮುತ್ತುಗಳಿಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು.

ಹಿಂದಿನ ಕಾಲದಲ್ಲಿ ಪರ್ಷಿಯನ್ ಗಲ್ಫ್ ಗಳಲ್ಲಿ, ಭಾರತ ಮತ್ತು ಶ್ರೀಲಂಕಾದ ಪ್ರದೇಶಗಳಲ್ಲಿ, ಕೆಂಪು ಸಮುದ್ರದ ಬಳಿ ಮುತ್ತುಗಳು ಸಿಗುತ್ತಿದ್ದವು. ಚೀನಿಗಳಿಗೆ ಮುತ್ತುಗಳು ಸಿಹಿನೀರಿನಕೊಳಗಳಲ್ಲಿ ಸಿಗುತ್ತಿದ್ದರೆ, ಜಪಾನೀಯರಿಗೆ ಸಮುದ್ರದ ಒಳಗೆ ಸಿಗುತ್ತಿದ್ದವು.[೧೨]

ಧಾರ್ಮಿಕ ಉಲ್ಲೇಖಗಳಲ್ಲಿ ಮುತ್ತುಗಳುಸಂಪಾದಿಸಿ

ಹಿಂದೂ ಪುರಾಣಗಳಲ್ಲಿ ಉಲ್ಲೇಖಗಳುಸಂಪಾದಿಸಿ

ಪುರಾಣಗಳ ಪ್ರಕಾರ ಜಗತ್ತಿನ ಮೊದಲ ಮುತ್ತು ಕೃಷ್ಣನಿಗೆ ಸಿಕ್ಕಿತ್ತು, ಹಾಗು ಆ ಮುತ್ತನ್ನು ತನ್ನ ಮಗಳಾದ ಪಂಡಾಲಳ ಮದುವೆಗೆ ಉಡುಗೊರೆಯಾಗಿ ಕೊಟ್ಟಿದ್ದನು ಎಂದು ಹೇಳಲಾಗಿದೆ. ಗರುಡಪುರಾಣದಲ್ಲಿಯೂ ಕೂಡ ಮುತ್ತಿನ ಬಗ್ಗೆ ಉಲ್ಲೇಖವಿದೆ. ಅಷ್ಟೇ ಅಲ್ಲದೆ, ಆಯುರ್ವೇದದಲ್ಲಿಯೂ ಸಹ ಮುತ್ತುಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಮಾರ್ಕೋ ಪೋಲೋನ ಪ್ರಕಾರ, ಮಲಬಾರಿನ ರಾಜರು ೧೦೪ ಮಾಣಿಕ್ಯಗಳು ಹಾಗು ಮುತ್ತುಗಳನ್ನು ಹೊಂದಿದ ಹಾರವನ್ನು ಹಾಕಿಕೊಳ್ಳುತ್ತಿದ್ದರು. ೧೦೪ ಮಾಣಿಕ್ಯಗಳು ಮತ್ತು ಮುತ್ತುಗಳು ರಾಜನ ಬೆಳಗ್ಗಿನ ಮತ್ತು ಸಂಜೆಯ ೧೦೪ ಪ್ರಾರ್ಥನೆಗೆ ಸಮವಾಗಿದ್ದವು. ಪುರಾಣಗಳಲ್ಲಿ ಮಹಾವಿಷ್ಣುವಿನ ಎದೆಯ ಮೇಲಿದ್ದ ಮುತ್ತು ಪ್ರಸಿದ್ಧವಾದದ್ದು. ಅದರ ಹೆಸರು ಕೌಸ್ತುಭ. ಇದಲ್ಲದೆ ಹಲವಾರು ಜನಪದ ಕಥೆಗಳಲ್ಲಿಯೂ ಸಹ ಮುತ್ತುಗಳನ್ನು ವರ್ಣಿಸಲಾಗಿದೆ.[೧೩][೧೪]

ಕ್ರಿಶ್ಚಿಯನಿಟಿಯಲ್ಲಿ ಉಲ್ಲೇಖಗಳುಸಂಪಾದಿಸಿ

ಬೈಬಲ್ ನಲ್ಲಿ ಸಹ ಮುತ್ತುಗಳ ಬಗ್ಗೆ ಹಲವಾರು ಉಲ್ಲೇಖಗಳಿವೆ. ಈ ಮೂಲಕ ಮುತ್ತುಗಳ ಬೆಲೆಯನ್ನು ನಾವು ತಿಳಿಯಬಹುದು.ಒಮ್ಮೆ ಸಾಮ್ಯದಲ್ಲಿ ಯೇಸು ಪರಲೋಕ ರಾಜ್ಯವನ್ನು ಅಮೂಲ್ಯವಾದ ಮುತ್ತಿಗೆ ಹೋಲಿಸಿದ್ದಾರೆ -ಮತ್ತಾಯ ೧೩:೪೫-೪೬ "..ಪರಲೋಕರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು." ಮತ್ತು ಬೈಬಲ್ ಪ್ರಕಾರ ಪರಿಶುದ್ಧ ವಸ್ತುಗಳೆಲ್ಲವು ಮುತ್ತುಗಳಿಗೆ ಹೋಲಿಸಲಾಗಿದೆ -ಮತ್ತಾಯ ೭:೬ "ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲ ಬೇಡಿರಿ.." ಮತ್ತು ಹಲವಾರು ಭಾಗಗಳಲ್ಲಿ ಮುತ್ತುಗಳ ಕುರಿತು ಬರೆಯಲ್ಪಟ್ಟು ,ಅದು ಮನುಷರ ಅಥವಾ ಜನರ ದುಷ್ಟತನ ಮತ್ತು ಹೆಮ್ಮೆಗಳನ್ನು ಪರಿಗಣಿಸಿದೆ. - ಪ್ರಕಟನೆ ೧೮:೧೬ "...ನಯವಾದ ನಾರು ಮಡಿಯನ್ನೂ ಧೂಮ್ರವರ್ಣದ ವಸ್ತ್ರಗಳನ್ನೂರಕ್ತಾಂ ಬರವನ್ನೂ ಧರಿಸಿಕೊಂಡು ಚಿನ್ನ, ರತ್ನ ,ಮುತ್ತು ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾಪಟ್ಟಕ್ಕೆ ಏನು ದುರ್ಗತಿ ಸಂಭವಿಸಿತು." ಪರಲೋಕ ಎಂಬ ಹೊಸ ಪಟ್ಟಣದಲ್ಲಿ ಹನ್ನೆರಡು ಹೆಬ್ಬಾಗಿಲುಗಳು ಇದ್ದು , ಪ್ರತಿ ಹೆಬಾಗಿಲು ಒಂದು ಮುತ್ತಿನಿಂದ ಹೀಗೆ ಒಟ್ಟು ಹನ್ನೆರಡು ಮುತ್ತುಗಳಿಂದ ನಿರ್ಮಾಣವಾಗಿದೆ. -ಪ್ರಕಟನೆ ೨೧:೨೧ "..ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು;.."[೧೫]

ಇಸ್ಲಾಮ್ ನಲ್ಲಿ ಉಲ್ಲೇಖಗಳುಸಂಪಾದಿಸಿ

ಖುರಾನಿನಲ್ಲಿಯೂ ಮುತ್ತುಗಳ ಬಗ್ಗೆ ಉಲ್ಲೇಖಗಳಿವೆ. ಖುರಾನ್ ನಲ್ಲಿ ಸ್ವರ್ಗವನ್ನು ವಿವರಿಸುತ್ತಾ ಬರೆದಿರುವುದೇನೆಂದರೆ ಅಲ್ಲಿ ಇರುವ ಹರಳುಗಳು ಮುತ್ತು ಮತ್ತು ರತ್ನಗಳಾಗಿವೆ; ಅಲ್ಲಿಯ ಮರಗಳಲ್ಲಿ ಹಣ್ಣಗಳು ಮುತ್ತುಗಳು ಎಂದು ಹೇಳಲಾಗಿದೆ. ಆ ಆನಂದಮಯವಾದ ಸ್ಥಳಕ್ಕೆ ಸೇರುವ ಪ್ರತಿಯೊಬ್ಬರಿಗೂ ಮುತ್ತು, ರನ್ನ ಹಾಗೂ ಪಚ್ಚೆಯಿಂದ ಅಲಂಕರಿಸಿದ ಡೇರೆ ಇದ್ದು, ಅವರ ತಲೆಯ ಮೇಲೆ ಹೊಳೆಯುವ ಮುತ್ತಿನ ಕಿರೀಟ ಇರುತ್ತದೆ. ಅವರನ್ನು ಉಪಚಾರಮಾಡಲು ಮುತ್ತಿನ ಹಾಗೆ ಸುಂದರವಾಗಿರುವ ಅಪ್ಸರೆಯರು ಇರುವರು.[೧೬]

ಉಲ್ಲೇಖಗಳುಸಂಪಾದಿಸಿ

 1. http://science.howstuffworks.com/zoology/question630.htm
 2. "ಆರ್ಕೈವ್ ನಕಲು". Archived from the original on 2013-12-14. Retrieved 2014-01-31.
 3. "ಆರ್ಕೈವ್ ನಕಲು". Archived from the original on 2013-12-14. Retrieved 2014-01-31.
 4. "ಆರ್ಕೈವ್ ನಕಲು". Archived from the original on 2013-12-14. Retrieved 2014-01-31.
 5. http://www.americanpearl.com/historyoyster.html
 6. http://www.thepearlmarket.co.uk/pearl-formation.htm
 7. http://www.thepearlmarket.co.uk/pearl-formation.htm
 8. http://science.howstuffworks.com/zoology/question630.htm
 9. http://www.pbs.org/wgbh/nova/ancient/history-pearls.html
 10. http://www.pbs.org/wgbh/nova/ancient/history-pearls.html
 11. http://www.pbs.org/wgbh/nova/ancient/history-pearls.html
 12. http://www.pbs.org/wgbh/nova/ancient/history-pearls.html
 13. http://www.pbs.org/wgbh/nova/ancient/history-pearls.html
 14. https://en.wikipedia.org/wiki/Pearl#Creation_of_a_pearl
 15. https://en.wikipedia.org/wiki/Pearl#Creation_of_a_pearl
 16. http://www.pbs.org/wgbh/nova/ancient/history-pearls.html