ಮೈಸೂರು ಸೂರ್ಯನರಾಯಣ ಭಟ್ಟ ಪುಟ್ಟಣ್ಣ
Born(೧೮೫೪-೧೧-೨೧)೨೧ ನವೆಂಬರ್ ೧೮೫೪
Died
ಬೆಂಗಳೂರು,ಮೈಸೂರು ಸಾಮ್ರಾಜ್ಯ,(ಈಗ ಕರ್ನಾಟಕ, ಭಾರತ)
Occupation(s)ಶಿಕ್ಷಕರ, ಕೋರ್ಟ್ ಭಾಷಾಂತರಕಾರ, ಅಡ್ವೋಕೇಟ್ ಜಿಲ್ಲಾಧಿಕಾರಿ / ಕಂದಾಯ ಅಧಿಕಾರಿ, ಕಾದಂಬರಿಕಾರ, ಸಂಪಾದಕ, ಲೇಖಕ ಮತ್ತು ಶ್ರೇಷ್ಠ ಸಾಹಿತ್ಯದ ಭಾಷಾಂತರಕಾರ.

ಎಂ. ಎಸ್. ಪುಟ್ಟಣ್ಣ ಬದಲಾಯಿಸಿ

ಪುಟ್ಟಣ್ಣನವರ ಮೂಲ ಬದಲಾಯಿಸಿ

ಪುಟ್ಟಣ್ಣನವರ ತಾತ ಲಕ್ಷ್ಮೀಕಾಂತಭಟ್ಟರು ಚನ್ನಪಟ್ಟಣದ ನಾಗವಾರ ಗ್ರಾಮದವರು, ವೇದ ವಿದ್ಯೆ ತಿಳಿದವರು, ಜ್ಯೋತಿಷ್ಯದಲ್ಲಿ ಪಾರಂಗತರು. ಅವರ ಮಕ್ಕಳು ನರಹರಿ ಭಟ್ಟರು, ಸೂರ್ಯನಾರಾಯಣ ಭಟ್ಟರು ಇಬ್ಬರೂ ವೈದಿಕ ವೃತ್ತಿಯವರು.

ಬಾಲ್ಯ ಬದಲಾಯಿಸಿ

ಸೂರ್ಯನಾರಾಯಣಭಟ್ಟರ ಒಬ್ಬರೇ ಮಗ ಎಂ.ಎಸ್.ಪುಟ್ಟಣ್ಣನವರು 1854 ರಲ್ಲಿ ತಾಯಿಯ ತವರಾದ ಮೈಸೂರಿನಲ್ಲಿ ಜನಿಸಿದರು. ಹುಟ್ಟಿದ ಹತ್ತು ದಿನಗಳೊಳಗೆ ತಾಯಿಯನ್ನು ಕಳೆದುಕೊಂಡ ಈ ಮಗುವನ್ನು ಸೋದರ ಮಾವ ಸಾಕಿದರು. ಜೊತೆಗೆ ಇನ್ನೊಬ್ಬ ಸೋದರತ್ತೆಯ ಆರೈಕೆಯ ಭಾಗ್ಯವೂ ಸಿಕ್ಕಿತು. ತಂದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಕಾಶಿಗೆ ಹೋಗಿ ಸನ್ಯಾಸಿಯಾದರು. ಪುಟ್ಟಣ್ಣನವರಿಗೆ ದೊಡ್ಡವರಾದ ಮೇಲೆ ತಂದೆಯ ಮುಖದರ್ಶನವಾಗಲೇ ಇಲ್ಲ. ಪುಟ್ಟಣ್ಣನವರ ನಿಜನಾಮಧೇಯ ಲಕ್ಷ್ಮಿನರಸಿಂಹ ಶಾಸ್ತ್ರಿ. ಎಳೆವರೆಯದ, ಚುರುಕುಗಣ್ಣುಗಳ ತಬ್ಬಲಿ ಮಗುವನ್ನು ಕಂಡವರೆಲ್ಲಾ ಕರೆದ ಮುದ್ದಿನ ಹೆಸರು ಪುಟ್ಟಣ್ಣ. ಮುಂದೆ ಅದೇ ಹೆಸರು ಗಟ್ಟಿಯಾಯಿತು.

ಜೀವನ ಶೈಲಿ ಬದಲಾಯಿಸಿ

ಸಂಪ್ರದಾಯಸ್ಥ ಮನೆತನದ ಪುಟ್ಟಣ್ಣನವರ ವಿದ್ಯಾಭ್ಯಾಸ ಪ್ರಾರಂಭದಲ್ಲಿ ಪಂತರ ಖಾಸಗಿ ಮಠಗಳಲ್ಲಿ ನಡೆಯಿತು. ಅನಂತರ ರಾಜಾ ಸ್ಕೂಲಿನಲ್ಲಿ ಎಫ್.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹಾಯೋಪಾಧ್ಯಾಯರಾಗಿ ನೇಮಕಗೊಂಡರು. ಪುಟ್ಟಣ್ಣನವರ ಮೊದಲ ದಾಂಪತ್ಯದಲ್ಲಿ ಹೊಂದಾಣಿಕೆಯಿಲ್ಲದೇ ಗಂಡ ಹೆಂಡಿರು ಬೇರ್ಪಟ್ಟರು. ಅನಂತರ ಬೇರೆ ಯಾವ ಆಯ್ಕೆಯಲ್ಲೂ ನಂಬಿಕೆಯಿರದೇ ಮುಂದೆ ತಾವೇ ಆರಿಸಿದ ಹೆಣ್ಣನ್ನು ಮದುವೆಯಾಗಿ ಆಕೆಗೆ ಪಾಠ ಹೇಳಿದರು, ಹೇಳಿಸಿದರು. ಅವರ ಈ ಎರಡನೆಯ ದಾಂಪತ್ಯದಲ್ಲಿ ಅವರಿಗೆ ಮೂವರು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳು ಜನಿಸಿದರು.

ವೃತ್ತಿ ಜೀವನ ಬದಲಾಯಿಸಿ

ವೃತ್ತಿಯೊಂದಿಗೆ ಅಧ್ಯಯನಕ್ಕೂ ಮನಸ್ಸು ಕೊಟ್ಟ ಪುಟ್ಟಣ್ಣನವರು 1885ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಬಿ.ಎ ಪದವಿಯನ್ನು ಪಡೆದರು. ಮರುವರ್ಷವೇ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಜೆ.ಭಾಷಾ ಅವರೊಡನೆ ಭಿನ್ನಾಭಿಪ್ರಾಯವುಂಟಾಗಿ ರಾಜಿ ಮಾಡಿಸಿಕೊಳ್ಳಲಿಚ್ಚಿಸದೇ ತಮ್ಮ ಹುದ್ದೆಗೆ ರಾಜಿನಾಮೆ ಇತ್ತರು. ಕೆಲವು ಕಾಲ ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ ಭಾಷಾಂತರಕಾರರಾಗಿ ದುಡಿದರು. 1897ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರರನ್ನಾಗಿ ನೇಮಿಸಲಾಯಿತು.ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿಯೂ ಅವರು ಅಮಲ್ದಾರರಾಗಿ ಕಾರ್ಯನಿರ್ವಹಣೆ ಮಾಡಿದರು. 1908 ರಲ್ಲಿ ಅವರು ತಮ್ಮ ವೃತ್ತಿಗೆ ರಾಜಿನಾಮೆ ನೀಡಿದರು. ಆನಂತರ ಸ್ವಲ್ಪ ಕಾಲ ವಕೀಲರಾಗಿದ್ದರು. ವಿಶ್ವವಿದ್ಯಾನಿಲಯ, ಶಿಕ್ಷಣ ಮಂಡಳಿಗಳಲ್ಲಿ ಪರೀಕ್ಷಕರಾಗಿ, ಪಠ್ಯ ಪುಸ್ತಕ ಸಮಿತಿಗಳಲ್ಲಿ ಸದಸ್ಯರಾಗಿ, ಭಾಷೆಯ ಸಾಧು ಅಸಾಧು ರೂಪಗಳನ್ನು ಚರ್ಚಿಸುವ ಸಮಿತಿಗಳಲ್ಲಿ ಒಬ್ಬರಾಗಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅವರು ಕೆಲಕಾಲ ಅದರ ಕಾರ್ಯದರ್ಶಿ ಕೂಡ ಆಗಿದ್ದರು.

ಸಾಹಿತ್ಯಾಸಕ್ತಿ ಬದಲಾಯಿಸಿ

  • ಪುಟ್ಟಣ್ಣನವರ ಸಾಹಿತ್ಯದೃಷ್ಟಿ ಅನುವಾದ ಮತ್ತು ಪಠ್ಯಗಳಿಂದ ಪ್ರಾರಂಭವಾಯಿತು. ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೊಧನೆ, ಪಠ್ಯರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು ಈ ಮಾತಿಗೆ ಸಾಕ್ಷಿಯಾಗಿವೆ. ಗದ್ಯದ ಸಾಧ್ಯತೆಗಳನ್ನು ಪುಟ್ಟಣ್ಣನವರು ಬಹುಬೇಗ ಅರಿತುಕೊಂಡರು. ಕನ್ನಡ ಕಾದಂಬರಿಗಳಿಗೆ ವಸ್ತು ನಮ್ಮಲ್ಲೇ ವಿಪುಲವಾಗಿದೆ ಎಂಬುದನ್ನು ಅವರು ಕಂಡುಕೊಂಡಿದ್ದರು. ಮಾರ್ಗ ಕಾವ್ಯದ ತೆರಪಾಗುತ್ತಿದ್ದ ಸ್ಥಳಕ್ಕೆ ಇಂದಿಗೂ ಜನಪ್ರಿಯವಾದ ಕಾದಂಬರಿಯ ಪ್ರಕಾರವನ್ನು ಯಶಸ್ವಿಯಾಗಿ ತಂದವರಲ್ಲಿ ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದಾರೆ. ಕನ್ನಡಿಗರಿಗೆ ಪರಿಚಯವಿಲ್ಲದ ಬೇರೆ ಸಮಾಜಗಳ ಚಿತ್ರಣದಿಂದ ಕೂಡಿದ ಅನುವಾದಿತ ಕಾದಂಬರಿಗಳ ನಡುವೆ ಕನ್ನಡ ಜನರ ಆಚಾರ ವಿಚಾರ, ಸ್ವಭಾವ, ಮರ್ಯಾದೆ, ಆಸೆ ಆಕಾಂಕ್ಷೆಗಳು, ಪೂರ್ವಾಚಾರಶ್ರದ್ಧೆ , ನೇರ ಕೊಂಕುಗಳನ್ನು ಕನ್ನಡದ ನುಡಿಗಟ್ಟಿನಿಂದ ಶ್ರೀಮಂತವಾದ ಶೈಲಿಯಲ್ಲಿ ತಮ್ಮ ಕಾದಂಬರಿಗಳಲ್ಲಿ ಸೃಷ್ಟಿಸಿದರು. ‘ಮಾಡಿದ್ದುಣ್ಣೋ ಮಹರಾಯ’(1915), ‘ಮುಸುಗ ತೆಗೆಯೇ ಮಾಯಾಂಗನೇ’ ಹಾಗೂ ‘ಅವರಿಲ್ಲದೂಟ’ ಕಾದಂಬರಿಗಳು ಪುಟ್ಟಣ್ಣನವರ ಸಾಹಿತ್ಯಕ ಸಿದ್ಧಿಯ ಅತ್ಯುತ್ತಮ ಉದಾಹರಣೆಗಳು.
  • ‘ಮುಸುಗ ತೆಗೆಯೇ ಮಾಯಾಂಗನೆ’ಯ ಹೆಸರು ಈ ಕಾದಂಬರಿ ಪತ್ತೇದಾರಿ ಕಥೆಯನ್ನೋ ರಂಜನೀಯವಾದ ಸುರಸ ಕಥೆಯನ್ನೋ ಹೇಳುತ್ತದೆ ಎನಿಸುವಂತೆ ಮಾಡುತ್ತದೆ. ಪುರಾಣ, ಇತಿಹಾಸ, ಕಾವ್ಯ, ಶಾಸ್ತ್ರ ಗ್ರಂಥಗಳು ಮತ್ತು ಇತರ ಹಲವು ಮೂಲಗಳಿಗಿಂತ ಆರಿಸಿದ ಸುಮಾರು ನೂರೈವತ್ತು ಕಥೆಗಳ ಸಂಕಲನವೇ ನೀತಿಚಿಂತಾಮಣಿ’ (1884) ‘ಪುಟ್ಟಣ್ಣ ಹೇಳಿದ ಕಥೆಗಳು’ (ಪ್ರ1981) ಸಂಕಲನದಲ್ಲಿ ರೂಢಿಯ ಕಥೆಗಳಿಗೆ ಪ್ರಾಧಾನ್ಯ ದಕ್ಕಿದೆ.
  • ಚೀನಾ ದೇಶದ ತತ್ತ್ವಜ್ಞಾನಿ ಕನ್ಫ್ಯೂಷಿಯಸ್ಸನ್ನು ಕುರಿತ ‘ಕಾಂಪೂಷನ ಚರಿತ್ರೆ’ (1892), ಮುಮ್ಮಡಿಯವರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ‘ಕುಣಿಗಲ ರಾಮಶಾಸ್ತ್ರಿಗಳ ಚರಿತ್ರೆ’ (1910), ಹೈದರಾಬಾದಿನ ಮಂತ್ರಿ ‘ಸರ್ ಸಾಲಾರ್ ಜಂಗನ ಚರಿತ್ರೆ’(1917), ಬಹುಮನಿ ಸಂಸ್ಥಾನದ ಮಂತ್ರಿ ;ಮಹಮ್ಮದ್ ಗವಾನನ ಚರಿತ್ರೆ’ (1922) ಮತ್ತು ಸ್ವಸಾಮರ್ಥ್ಯದಿಂದ ರಾಜ್ಯ ಕಟ್ಟಿ ಆಳಿದ ಶಿವಾಜಿಯ ವೃತ್ತಾಂತ ‘ಛತ್ರಪತಿ ಶಿವಾಜಿ ಮಹಾರಾಜ’ (ಪ್ರ1981) – ಇವು ಪುಟ್ಟಣ್ನನವರು ರಚಿಸಿದ ಐದು ಜೀವನಚರಿತ್ರೆಗಳು.

ಭಾಷಂತರಕಾರರಾಗಿ ಪುಟ್ಟಣ್ಣ ಬದಲಾಯಿಸಿ

ಪುಟ್ಟಣ್ಣನವರು ಷೇಕ್ಸ್ಫಿಯರನ ಮೂರು ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಸಿಂಬಲೈನ್’ ನಾಟಕದ ರೂಪಾಂತರ ‘ಜಯಸಿಂಹರಾಜ ಚರಿತ್ರೆ’ (1881), ಇದು ಕಥನ ರೂಪದಲ್ಲಿದೆ. ‘ಕಿಂಗ್ ಲಿಯರ್’ ನಾಟಕದ ರೂಪಾಂತರ ‘ಹೇಮಚಂದ್ರ ವಿಲಾಸ’(1899), ಇದು ಗದ್ಯ ಪದ್ಯ ಮಿಶ್ರ ನಾಟಕ. ‘ಹ್ಯಾಮ್ಲೆಟ್’ ನಾಟಕದ ರೂಪಾಂತರ ‘ಹೇಮಲತ’ (ರಚನೆ 1920, ಅಪ್ರಕಟಿತ). ಇದು ಕೂಡ ಗದ್ಯಪದ್ಯಮಿಶ್ರ ನಾಟಕ. ಮೂರು ಕೃತಿಗಳೂ ರೂಪಾಂತರಗಳೇ. ಈ ಮೂರೂ ಕೃತಿಗಳಲ್ಲೂ ಕನ್ನಡಕ್ಕೆ ಹೊಂದುವಂತೆ ಔಚಿತ್ಯವನ್ನರಿತು ಹಲವು ಬದಲಾವಣೆಗಳನ್ನು ಪುಟ್ಟಣ್ಣನವರು ಮಾಡಿಕೊಂಡಿದ್ದಾರೆ. ಷೇಕ್ಸ್ಫಿಯರನ ನಾಟಕಗಳಲ್ಲಿ ಪೂರ್ಣ ಗದ್ಯವನ್ನು ಉಪಯೋಗಿಸಿದವರಲ್ಲಿ ಪುಟ್ಟಣ್ಣನವರದು ಮೊದಲ ಸಾಲಿನ ಹೆಸರು. ಥಾಮಸ್ ಡೇ ಬರೆದ ‘ದಿ ಹಿಸ್ಟರಿ ಆಫ್ ಸ್ಯಾಂಡ್ ಫರ್ಢ್ ಆಂಡ್ ಮರ್ವನ್’ ಕೃತಿಯ ರೂಪಾಂತರವೇ ‘ಸುಮತಿ ಮದನಕುಮಾರರ ಚರಿತ್ರೆ’ (1897). ಮಕ್ಕಳಿಗೆ ಕಥೆಗಳ ಮೂಲಕ ಒಳ್ಳೆಯ ನಡತೆಯನ್ನು ಮತ್ತು ವಿದ್ಯಾಭ್ಯಾಸದ ವಿಷಯಗಳನ್ನು ಭೋದಿಸುವುದೇ ಇಲ್ಲಿಯ ಸ್ವಾರಸ್ಯ. ‘ಹಾತಿಂ ತಾಯ್’(ರಚನೆ 1920, ಅಪ್ರಕಟಿತ) ಪರ್ಷಿಯನ್ ಮೂಲದ್ದು. ಈ ಕೃತಿಯ ಇಂಗ್ಲಿಷ್ ಭಾಷಾಂತರದಿಂದ ಕನ್ನಡದ ತಮ್ಮ ಭಾಷಾಂತರವನ್ನು ಪುಟ್ಟಣ್ಣನವರು ಸಿದ್ಧಪಡಿಸಿದ್ದಾರೆ. ಹಾತಿಮ ಅಪರಿಗ್ರಹದ ಸಾಕಾರಮೂರ್ತಿ ಎಂಬುದೇ ಪುಟ್ಟಣ್ಣನವರಿಗೆ ಆಕರ್ಷಣೆಯನ್ನುಂಟುಮಾಡಿದೆ. ಇಂಗ್ಲಿಷ್ ಮೂಲದ ನಾಲ್ಕೂ ಕೃತಿಗಳು ರೂಪಾಂತರಗಳು. ಇಂಗ್ಲೀಷೇತರ ಮೂಲದ ‘ಹಾತಿಂತಾಯ್’ ಉಪಲಬ್ಧ ದಾಖಲೆಗಳ ಪ್ರಕಾರ ಪುಟ್ಟಣ್ಣನವರ ಏಕೈಕ ಭಾಷಾಂತರ ಕೃತಿ.

ಇತರ ಕೃತಿಗಳು ಬದಲಾಯಿಸಿ

ಪುಟ್ಟಣ್ಣನವರು ಪಾಳೆಯಗಾರರನ್ನು ಕುರಿತು ಮೊದಲು ಬರೆದ ಕೃತಿ ‘ಪಾಳಯಗಾರರು’(1923), ಮುಂದೆ ‘ಚಿತ್ರದುರ್ಗದ ಪಾಳಯಗಾರರು’(1924),ಗುಮ್ಮನನಾಯಕನ ಪಾಳಯದ ಪಾಳಯಗಾರರು(1926),’ಹಾಘಲವಾಡಿ ಪಾಳಯಗಾರರು(1931), ಮತ್ತು ಇಕ್ಕೇರಿ ಸಂಸ್ಥಾನದ ಚರಿತ್ರೆ’(1931)ಗಳು ಪ್ರಕಟಗೊಂಡವು. ‘ಹಿಂದೂ ಚರಿತ್ರ ದರ್ಪಣ’(1882). ಹಿಂದೂ ಚರಿತ್ರ ಸಂಗ್ರಹ’(1887),’ಕನ್ನಡ ಒಂದನೆಯ ಪುಸ್ತಕ’(1895) ಹಾಗೂ ಕನ್ನಡ ಲೇಖನ ಲಕ್ಷಣ’(1915) – ಈ ನಾಲ್ಕು ಪುಟ್ಟಣ್ಣನವರ ಪಠ್ಯ ಕೃತಿಗಳು. ಮೊದಲ ಎರಡು ಎಂ.ಬಿ ಶ್ರೀನಿವಾಸಯ್ಯಂಗಾರರ ಸಹಕೃತ್ವದಲ್ಲಿ ರಚಿತವಾದವು. ಮೂರನೆಯದರ ಗದ್ಯಪಾಠವನ್ನು ಪುಟ್ಟಣ್ನನವರೂ ಹೊಸಕಾಲದ ಕವಿತೆಗಳನ್ನು ಎಸ್.ಜಿ ನರಸಿಂಹಾಚಾರ್ಯರೂ ರಚಿಸಿದರು. ನಾಲ್ಕನೆಯದು ಪುಟ್ಟಣ್ಣನವರೊಬ್ಬರೇ ರಚಿಸಿದ ಕೃತಿ.

ಪತ್ರಿಕೋದ್ಯಮಿಯಾಗಿ ಪುಟ್ಟಣ್ಣ ಬದಲಾಯಿಸಿ

ಪುಟ್ಟಣ್ಣನವರು ಎಂ.ಬಿ ಶ್ರೀನಿವಾಸಯ್ಯಂಗಾರರೊಡನೆ 1883ರ ಅಕ್ಟೋಬರ್ ತಿಂಗಳಿನಲ್ಲಿ ‘ಹಿತಬೋಧಿನಿ’ ಮಾಸ ಪತ್ರಿಕೆಯನ್ನು ಆರಂಭಿಸಿದರು. ಪುಟ್ಟಣ್ಣನವರ ಸಾಮಾಜಿಕ ಪ್ರಜ್ಞೆ ಕಳಕಳಿಗಳು ಅಲ್ಲಿ ಸುವ್ಯಕ್ತ. ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ, ಜೀವನಚರಿತ್ರೆ, ದೇಶಾಂತರ ವರ್ತಮಾನ ಸಂಗ್ರಹ, ಕಥೆಗಳು ಇತ್ಯಾಧಿ ಹಲವು ಉಪಯುಕ್ತ ವಿಷಯಗಳು ಈ ಪತ್ರಿಕೆಯಲ್ಲಿ ಪ್ರಚುರವಾದವು. ಸ್ವತ: ಪುಟ್ಟಣ್ಣನವರೇ ಹಲವು ಲೇಖನಗಳನ್ನು ಬರೆದರು. ಆರು ತಿಂಗಳುಗಳ ಕಾಲ ನಡೆಸಿದ ಮೇಲೆ ತಮ್ಮ ಬಿ.ಎ ವ್ಯಾಸಂಗಕ್ಕಾಗಿ ಮದರಾಸಿಗೆ ತೆರಳಿದಾಗ ಪುಟ್ಟಣ್ಣನವರು ‘ಹಿತಬೋಧಿನಿ’ಯನ್ನು ಎಂ.ವೆಂಕಟಕೃಷ್ಣಯ್ಯನವರಿಗೆ ಒಪ್ಪಿಸಿದರು. ಈ ಪತ್ರಿಕೆಯ ನಿರ್ವಹಣೆಯಿಂದ ವೆಂಕಟಕೃಷ್ಣಯ್ಯನವರ ಪತ್ರಿಕಾ ಜೀವನದ ನಾಂದಿಯಾದುದು ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲೊಂದು ಮಹತ್ವದ ಸಂಗತಿಯಾಗಿದೆ. ತಮ್ಮಿಂದ ಪತ್ರಿಕೋದ್ಯಮದ ದೀಕ್ಷೆಯನ್ನು ಪಡೆದ ಸಿಡಿಲು ಮರಿಯ ಉಜ್ವಲ ವ್ಯಕ್ತಿತ್ವವನ್ನು ಪುಟ್ಟಣ್ಣನವರು ಗುರುತಿಸಿದ್ದು ಅವರ ಗುಣಗ್ರಹಣೆಯ ಗುರುತು. ಕನ್ನಡ ನುಡಿ ಮನ್ನಣೆ ಹಾಗೂ ಗದ್ಯದ ಬೆಳವಣಿಗೆಗೆ ಪ್ರೋತ್ಸಾಹ ‘ಹಿತಬೋಧಿನಿ’ಯ ಮುಖ್ಯಸಾಧನೆಗಳು.

ಉಲ್ಲೇಖ / ಆಧಾರ ಬದಲಾಯಿಸಿ

ಕನ್ನಡ ವಿಶ್ವಕೋಶ

ವರ್ಗ ಬದಲಾಯಿಸಿ