ಆಕ್ಸಾಲಿಕ್ ಆಮ್ಲ
ಆಕ್ಸಾಲಿಕ್ ವರ್ಗದ ಸಸ್ಯಗಳಲ್ಲಿ ದೊರೆಯುವುದರಿಂದ ಆಕ್ಸಾಲಿಕ್ ಆಮ್ಲಕ್ಕೆ ಈ ಹೆಸರು ಬಂದಿದೆ. ಸೂತ್ರ H2C2O4.2H2O. ಈ ಆಮ್ಲದ ಪೊಟ್ಯಾಸಿಯಂ ಲವಣ ಸಾರೆಲ್ ಮತ್ತು ಬೀಟ್ ಗಿಡಗಳ ಎಲೆಗಳಲ್ಲಿ ದೊರೆಯುತ್ತದೆ. ಕ್ಯಾಲ್ಸಿಯಂ ಲವಣ ಕೆಲವು ವಿಶಿಷ್ಟ ಜಾತಿಯ ಯೂಕಲಿಪ್ಟಸ್ ಗಿಡದ ತೊಗಟೆಯಲ್ಲಿ 20% ರಷ್ಟು ಇದೆ; ಟರ್ಮಿನೇಲಿಯ ಅರ್ಜುನ ಗಿಡದ ತೊಗಟೆಯಲ್ಲಿಯೂ (ಭಾರತದಲ್ಲಿ ಆಕ್ಸಾಲಿಕ್ ಆಮ್ಲವನ್ನು ತಯಾರಿಸುವುದು ಇದರಿಂದಲೇ) ಸಿಕ್ಕುತ್ತದೆ. ಆಮ್ಲದ ಇತರ ಉತ್ಪನ್ನಗಳು ರೋಗಿಗಳ ಮೂತ್ರದಲ್ಲಿ ಕಾಣಬಹುದು.
ತಯಾರಿಕೆ
ಬದಲಾಯಿಸಿ೧. ವೆನೇಡಿಯಂ ಪೆಂಟಾಕ್ಸೈಡ್ ವೇಗವರ್ಧಕದ ಸಂಪರ್ಕದಲ್ಲಿ ಸಕ್ಕರೆಯನ್ನು ಪ್ರಬಲ ನೈಟ್ರಿಕ್ ಆಮ್ಲದೊಡನೆ ಕಾಯಿಸಿ, ದ್ರಾವಣವನ್ನು ಹಿಂಗಿಸಿ, ಆಕ್ಸಾಲಿಕ್ ಆಮ್ಲವನ್ನು ಪಡೆಯಬಹುದು. ಇದು ಪ್ರಯೋಗ ಶಾಲೆಯ ವಿಧಾನ.[೧]
೨. ಮರದ ಹೊಟ್ಟನ್ನು (ಗರಗಸದ ಹುಡಿ) ಕಾಸ್ಟಿಕ್ ಕ್ಷಾರಗಳೊಡನೆ 2500 ಸೆಂ.ಗ್ರೇಡಿಗೆ ಕಾಯಿಸಿದರೆ, ಅದರಲ್ಲಿರುವ ಸೆಲ್ಯುಲೋಸು ಸೋಡಿಯಂ ಅಥವಾ ಪೊಟ್ಯಾಸಿಯಂ ಆಕ್ಸಲೇಟುಗಳಿಗಾಗಿ ಉತ್ಕರ್ಷಿತವಾಗುವುದು. ಅದನ್ನು ಬಿಸಿ ನೀರಿನಲ್ಲಿ ವಿಲೀನ ಮಾಡಿ, ಸುಣ್ಣದ ಕೆನೆಯೊಡನೆ ಕುದಿಸಿದರೆ, ಕ್ಯಾಲ್ಸಿಯಂ ಆಕ್ಸಿಲೇಟು ಒತ್ತರಿಸುವುದು. ಇದನ್ನು ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಗೊಳಿಸಿದರೆ, ಕ್ಯಾಲ್ಸಿಯಂ ಸಲ್ಫೇಟ್ ಒತ್ತರಿಸಿ, ಶೋಧಿತ ದ್ರಾವಣದಲ್ಲಿ ಆಕ್ಸಾಲಿಕ್ ಆಮ್ಲ ಉಳಿಯುವುದು. ಹಿಂಗಿಸಿದರೆ ಸ್ಫಟಿಕೀಕರಿಸುವುದು.[೨] 1829ರಲ್ಲಿ ಗೇ ಲೂಸ್ಯಾಕ್ ಈ ವಿಧಾನವನ್ನು ಕಂಡುಹಿಡಿದ. ಇಂದು ಇದನ್ನು ಕೈಗಾರಿಕೆಯಲ್ಲಿ ಅಷ್ಟಾಗಿ ಬಳಸುವುದಿಲ್ಲ.
೩. ಆಧುನಿಕ ಪದ್ಧತಿಯ ಪ್ರಕಾರ 6-10 ವಾಯುಮಂಡಲಗಳ ಒತ್ತಡ ಮತ್ತು 210 ಸೆಂ.ಗ್ರೇ. ಉಷ್ಣತೆಯಲ್ಲಿ ಇಂಗಾಲದ ಮೊನಾಕ್ಸೈಡನ್ನು ಕಾಸ್ಟಿಕ್ ಸೋಡಾದ ಮೇಲೆ ಹಾಯಿಸಿದರೆ ಸೋಡಿಯಂ ಫಾರ್ಮೇಟ್ ಉಂಟಾಗುವುದು.[೩] ಇದನ್ನು 3900 ಸೆಂ.ಗ್ರೇಡಿಗೆ ವೇಗವಾಗಿ ಕಾಯಿಸಿದರೆ, ಸೋಡಿಯಂ ಆಕ್ಸಲೇಟಿಗೆ ಪರಿವರ್ತಿತವಾಗುವುದು. ಇದರಿಂದ ಆಕ್ಸಲಿಕ್ ಆಮ್ಲವನ್ನು ಮೇಲ್ಕಂಡಂತೆ ಪಡೆಯಬಹುದು.
ಆಕ್ಸಾಲಿಕ್ ಆಮ್ಲದ ಗುಣಗಳು
ಬದಲಾಯಿಸಿಆಕ್ಸಾಲಿಕ್ ಆಮ್ಲ ಆಶ್ರಕಾಕಾರದ ನಿರ್ವರ್ಣ ಹರಳುಗಳಾಗಿ ಸಂಯೋಜಿತ ಜಲದೊಡನೆ ಸ್ಫಟಿಕೀಕರಿಸುವುದು. ಹರಳುಗಳ ಕರಗುವ ಬಿಂದು 101.50 ಸೆಂ.ಗ್ರೇ. ಇಂಗಾಲದ ಟೆಟ್ರ ಕ್ಲೋರೈಡಿನೊಂದಿಗೆ ಕಾಯಿಸಿದರೆ ನಿರ್ಜಲಗೊಳ್ಳುವುದು. ಮೊಹರು ಮಾಡಿದ ನಾಳದಲ್ಲಿ ನಿರ್ಜಲಾಮ್ಲವನ್ನು ಕಾಯಿಸಿದರೆ, 189.50 ಸೆಂಟಿಗ್ರೇಡಿನಲ್ಲಿ ಕರಗುವುದು. ಸುಮಾರು 1570 ಸೆಂಟಿಗ್ರೇಡಿನಲ್ಲಿ ಕರ್ಪೂರೀಕರಿಸುವುದು. ನೀರು ಮತ್ತು ಮದ್ಯಸಾರದಲ್ಲಿ ವಿಶೇಷವಾಗಿಯೂ ಈಥರ್‌ನಲ್ಲಿ ಸ್ವಲ್ಪ ಮಟ್ಟಿಗೂ ದ್ರಾವ್ಯ. ಆಮ್ಲ ಮತ್ತು ಅದರ ದ್ರಾವ್ಯ ಲವಣಗಳು ವಿಷ ವಸ್ತುಗಳು. ನರಮಂಡಲವನ್ನು ನಿಷ್ಕ್ರಿಯಗೊಳಿಸುವುವು. ಆಕ್ಸಾಲಿಕ್ ಆಮ್ಲವಿರುವ ಜೊಂಡನ್ನು ತಿಂದ ದನಗಳು ಸತ್ತಿರುವ ನಿದರ್ಶನಗಳಿವೆ. ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ಕಾಯಿಸಿದಾಗ ಸಮಗಾತ್ರ ಇಂಗಾಲದ ಡಯಾಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್ ಅನಿಲಗಳು ಬಿಡುಗಡೆಯಾಗುವುವು. ಬಿಸಿಯಾದ ದುರ್ಬಲ ಸಲ್ಫ್ಯೂರಿಕ್ ಆಮ್ಲದ ಸಂಪರ್ಕದಲ್ಲಿ ಪೊಟ್ಯಾಸಿಯಂ ಪರ್ಮಾಂಗನೇಟು, ಆಕ್ಸಾಲಿಕ್ ಆಮ್ಲವನ್ನು ಇಂಗಾಲದ ಡಯಾಕ್ಸೈಡ್‍ಗೆ ಉತ್ಕರ್ಷಿಸುತ್ತದೆ. ಈ ಕ್ರಿಯೆ ಪರಿಮಾಣಾತ್ಮಕವಾಗಿ ನಡೆಯುವುದರಿಂದ, ಪರ್ಮಾಂಗನೇಟ್ ದ್ರಾವಣದ ಪ್ರಬಲತೆಯನ್ನು ಪ್ರಮಾಣಿಸಲು ಇದು ಸಹಕಾರಿಯಾಗಿದೆ. ದ್ವಿಪ್ರತ್ಯಾಮ್ಲೀಯ ಆಮ್ಲವಾದುದರಿಂದ, ಸೋಡಿಯಂ ಬೈಆಕ್ಸಲೇಟ್ ಮತ್ತು ಸೋಡಿಯಂ ಆಕ್ಸಲೇಟ್ ಎಂಬ ಎರಡು ಲವಣ ಶ್ರೇಣಿಗಳಿವೆ.
ಆಕ್ಸಾಲಿಕ್ ಆಮ್ಲದ ಉಪಯೋಗಗಳು
ಬದಲಾಯಿಸಿಆಕ್ಸಾಲಿಕ್ ಆಮ್ಲದ ಉಪಯೋಗ ಹಲವು. ಬಟ್ಟೆಯ ಮೇಲೆ ಅಚ್ಚುಮಾಡಲು, ವರ್ಣದ್ರವ್ಯ ಸ್ಥಾಪಕವಾಗಿ ಚರ್ಮವನ್ನು ಶುಭ್ರಗೊಳಿಸಲು, ಮೋಟಾರ್ ವಾಹನದ ರೇಡಿಯೇಟರ್ ನಳಿಗೆಯ ಮೇಲಿರುವ ತುಕ್ಕನ್ನು ತೊಳೆಯಲು, ಆಕ್ಸಾಲಿಕ್ ಆಮ್ಲ ಉಪಯೋಗಿಸಲ್ಪಡುವುದು. ಛಾಯಾಚಿತ್ರಗಳ ಆಕೃತಿಯನ್ನು ಸ್ಪಷ್ಟಪಡಿಸಲು (ಡೆವಲಪ್) ಪೊಟ್ಯಾಸಿಯಂ ಫೆರಸ್ ಆಕ್ಸಲೇಟನ್ನೂ K2[Fe(C2O4)2]·2H2O ಬಟ್ಟೆಯಿಂದ ಶಾಯಿ ಮತ್ತು ತುಕ್ಕಿನ ಕಲೆಗಳ ನಿವಾರಣೆಗೆ ಮತ್ತು ಹ್ಯಾಟನ್ನು ಮಾಡುವ ಹುಲ್ಲನ್ನು ಚೆಲುಗೊಳಿಸಲು ಪೊಟ್ಯಾಸಿಯಂ ಕ್ವಾಡ್ರಾಕ್ಸಲೇಟನ್ನೂ [KHC2O4.H2C2O4.2H2O] ಬಳಸುವುದು ಉಲ್ಲೇಖಾರ್ಹ.
ಪರೀಕ್ಷೆ
ಬದಲಾಯಿಸಿಒಂದು ಪ್ರನಾಳದಲ್ಲಿ ಆಕ್ಸಾಲಿಕ್ ಆಮ್ಲ ಮತ್ತು ರಿಸಾರ್ಸಿನಾಲ್ ದ್ರಾವಣಗಳ ಮಿಶ್ರಣವನ್ನು ಕಾಯಿಸಿ, ತಣಿಸಿ, ಪ್ರನಾಳದ ಪಾರ್ಶ್ವದಿಂದ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಿದರೆ ದ್ರಾವಣಗಳು ಸಂಧಿಸುವ ಸ್ಥಳದಲ್ಲಿ ನೀಲಿಬಣ್ಣದ ಉಂಗುರಾಕೃತಿ ಏರ್ಪಡುವುದು. ಆಕ್ಸಾಲಿಕಾಮ್ಲವನ್ನು ಗುರುತಿಸಲು ಇದೊಂದು ಸೂಕ್ಷ್ಮ ಪರೀಕ್ಷಾ ಪ್ರಯೋಗ.
ಉಲ್ಲೇಖಗಳು
ಬದಲಾಯಿಸಿ- ↑ Practical Organic Chemistry by Julius B. Cohen, 1930 ed. preparation #42
- ↑ Von Wagner, Rudolf (1897). Manual of chemical technology. New York: D. Appleton & Co. p. 499.
- ↑ "Oxalic acid | Formula, Uses, & Facts | Britannica".
ಹೊರಗಿನ ಕೊಂಡಿಗಳು
ಬದಲಾಯಿಸಿ- Oxalic acid MS Spectrum
- International Chemical Safety Card 0529
- NIOSH Guide to Chemical Hazards (CDC)
- Table: Oxalic acid content of selected vegetables (USDA)
- Alternative link: Table: Oxalic Acid Content of Selected Vegetables (USDA)
- About rhubarb poisoning (The Rhubarb Compendium)
- Oxalosis & Hyperoxaluria Foundation (OHF) The Oxalate Content of Food 2008 (PDF)
- Oxalosis & Hyperoxaluria Foundation (OHF) Diet Information
- Calculator: Water and solute activities in aqueous oxalic acid Archived 2009-05-11 ವೇಬ್ಯಾಕ್ ಮೆಷಿನ್ ನಲ್ಲಿ.