ಹೆಗ್ಡೆ ಎಂಬುದು ಭಾರತದ ಮಹಾರಾಷ್ಟ್ರ, ಗುಜರಾತ್, ಕೇರಳ ಮತ್ತು ಕರ್ನಾಟಕದಲ್ಲಿ ಬಳಕೆಯಲ್ಲಿರುವ ಉಪನಾಮವಾಗಿದೆ. ಇದು ಬಂಟ ಸಮುದಾಯದ ಹಿಂದೂಗಳು,[] ಗೌಡ ಸಾರಸ್ವತ ಬ್ರಾಹ್ಮಣರು, ಹವ್ಯಕ ಬ್ರಾಹ್ಮಣರು, ವೊಕ್ಕಲಿಗರು[][] ಮತ್ತು ಕುರುಬರಲ್ಲಿ ಗೊಲ್ಲರಲ್ಲಿ[] ಕಂಡುಬರುತ್ತದೆ.[]

ವ್ಯುತ್ಪತ್ತಿ

ಬದಲಾಯಿಸಿ

ಹೆಗ್ಡೆ ಎಂಬ ಪದವು ಹಳೆಯ ಕನ್ನಡ ಪದವಾದ ಪೆರ್ಗಡೆಯಿಂದ ಬಂದಿದೆ, ಇದರರ್ಥ ಮುಖ್ಯಸ್ಥ. []

ಇತಿಹಾಸ

ಬದಲಾಯಿಸಿ

ಹೆಗ್ಗಡೆಗಳು ವಿಜಯನಗರ ಹಾಗೂ ಅನಂತರದ ಕಾಲದಲ್ಲಿ ತುಳುನಾಡಿನ ಹಲವೆಡೆ ಸಣ್ಣಪುಟ್ಟ ರಾಜ್ಯಗಳನ್ನು ಆಳುತ್ತಿದ್ದವರು. ಹೆಗ್ಗಡೆಗಳು ಸಾಲೆ ಬಳಿಗೆ(ವಂಶ) ಸೇರಿದವರು. ಹನುಮಧ್ವಜಾಂಕಿತರು. ಶೈವ ವೈಷ್ಣವ ಮತಗಳನ್ನು ಸಮಾನದೃಷ್ಟಿಯಿಂದ ಪೋಷಿಸಿದವರು. ಇವರ ಕುಲದೇವತೆ ಹಾಗೂ ಅಧಿದೇವತೆ ವಿಟ್ಲದ ಪಂಚಲಿಂಗೇಶ್ವರ. ಅಳಿಯಸಂತಾನ ಪದ್ಧತಿಯನ್ನು ಇವರು ಅನುಸರಿಸುತ್ತಿದ್ದರು. ಈ ವಂಶದ ಉಗಮದ ಬಗ್ಗೆ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಡೊಂಬ ಎಂಬುದು ಕದಂಬ ಎಂಬ ಶಬ್ದದಿಂದ ಬಂದಿರಬೇಕೆಂದೂ ಕಡಬ ಇವರ ಮೂಲ ಸ್ಥಳವಾಗಿದ್ದು ಅನಂತರ ವಿಟ್ಲಕ್ಕೆ (ವಿಟ್ಲ, ಇಷ್ಟಕಾಪುರದ ತದ್ಭವ) ತಮ್ಮ ಕೇಂದ್ರವನ್ನು ವರ್ಗಾಯಿಸಿಕೊಂಡಿರಬೇಕೆಂದೂ ಒಂದು ಅಭಿಪ್ರಾಯವಿದೆ.

ವಿಟ್ಲದಿಂದ ಆಳುತ್ತಿದ್ದ ಡೊಂಬ ಹೆಗ್ಗಡೆಗಳ ಬಗ್ಗೆ ಹೆಚ್ಚು ವಿವರಗಳು ತಿಳಿಯುವುದಿಲ್ಲ. ಹಲವು ಶತಮಾನಗಳ ಕಾಲ ಇವರು ಸ್ವತಂತ್ರ ಅರಸರಾಗಿ ರಾಜ್ಯವಾಳಿದರೆಂಬುದು ಸಾಂಪ್ರದಾಯಿಕ ಹೇಳಿಕೆ. ಇವರ ರಾಜ್ಯ ಮುಡ್ನೂರು, ವಿಟ್ಲ, ಪಡ್ನೂರು, ಬಾಯಾರು, ಚಿಪ್ಪಾರು, ಕೆಳನಾಡು ಮುಂತಾದ ಹತ್ತೊಂಬತ್ತು ಮಾಗಣೆಗಳನ್ನೊಳಗೊಂಡಿತ್ತು. 1436ರಲ್ಲಿ ಇವರ ಮೊದಲ ಶಾಸನ ಕಾಣಸಿಗುತ್ತದೆ. ಕುಂಚಣ್ಣಶೇಖ ಡೊಂಬ ಹೆಗ್ಗಡೆಯ ಮಗ ವಿಯೆಣಸ್ವಾಮಿಯ ಅಳಿಯನಾದ ಮುಂಡಿಸಿದ್ದಶೇಖನ ಪ್ರಸ್ತಾಪ ಇದರಲ್ಲಿದೆ. 1571ರ ಶಾಸನವೊಂದರಲ್ಲಿ ಕುನ್ನಿದೇವರಸನಾದ ಡೊಂಬಹೆಗ್ಗಡೆಯ ಉಲ್ಲೇಖವಿದೆ. ಇಕ್ಕೇರಿಯ ಅರಸ ವೆಂಕಟಪ್ಪನಾಯಕ ನೊಂದಿಗೆ 1608ರಲ್ಲಿ ಹೆಗ್ಗಡೆಯೊಬ್ಬ ಶಾಂತಿಯೊಪ್ಪಂದ ಮಾಡಿಕೊಂಡ. ಆದರೆ ಅವನ ಮಗ ವೀರಭದ್ರನಾಯಕನ ಕಾಲದಲ್ಲಿ ದಂಗೆ ಎದ್ದ ತುಳುನಾಡಿನ ಅರಸರ ಪೈಕಿ ವಿಟ್ಲದ ಹೆಗ್ಗಡೆಯೂ ಸೇರಿಕೊಂಡ. ಕಪ್ಪವನ್ನು ಸರಿಯಾಗಿ ಪಾವತಿ ಮಾಡದ ಹೆಗ್ಗಡೆಯೊಬ್ಬನನ್ನು ಸಂಕೋಲೆ ಸಮೇತ ಇಕ್ಕೇರಿಯ ಅರಮನೆಗೆ ಕೊಂಡೊಯ್ದ ವಿಚಾರ 1719ರ ಶಾಸನವೊಂದರಲ್ಲಿ ಹೇಳಿದೆ. ಈ ಕಾಲದಲ್ಲಿ ನಿರ್ವಾಣಶೆಟ್ಟಿ ಎಂಬ ಪ್ರಜೆಯೊಬ್ಬ ಹೆಗ್ಗಡೆಗೆ ಆರ್ಥಿಕ ಸಹಾಯ ನೀಡಿ ಆಪತ್ತಿನಿಂದ ಅವನನ್ನು ಪಾರುಮಾಡಿದ. 1727 ಮತ್ತು 1734ರ ಶಾಸನಗಳಲ್ಲಿ ಪಾರ್ಥಂಪಾಡಿ ನರಸಿಂಹರಸ, ಅವನ ಅಳಿಯ ನಂದಪ್ಪರಸ, ನರಸಿಂಹ ಕೃಷ್ಣಪ್ಪರಸ ಹಾಗೂ ಕಿನ್ಯಣ್ಣಕಾವ ಹೆಗ್ಗಡೆ ಮುಂತಾದ ಹೆಗ್ಗಡೆ ಅಧಿಪರು ಉಕ್ತರಾಗಿದ್ದಾರೆ. ಇದರಿಂದ ಪಾರ್ಥಂಪಾಡಿ ಇವರ ಇನ್ನೊಂದು ಕೇಂದ್ರವಾಗಿತ್ತೆಂಬ ಅಂಶ ವಿದಿತವಾಗುತ್ತದೆ. 1744ರ ಶಾಸನದಲ್ಲಿ ಪಾಂಡ್ಯಪ್ಪರಸನ ಉಲ್ಲೇಖವಿದೆ.

ಇಕ್ಕೇರಿ ಅರಸರ ಅಧೀನಲ್ಲಿದ್ದ ಹೆಗ್ಗಡೆಗಳ ಅಧಿಕಾರ ಹೈದರ್ ಅಲಿಯ ದಿಗ್ವಿಜಯ ಕಾಲದಲ್ಲಿ ತಪ್ಪಿಹೋಯಿತು. ಆದರೆ ಇಸ್ಲಾಂ ಮತಕ್ಕೆ ಸೇರಿಕೊಳ್ಳಲು ಹೆಗ್ಗಡೆ ಅಧಿಪ ಮರಿಯಪ್ಪರಸ ಒಪ್ಪಿಕೊಂಡಾಗ ಅವನ ರಾಜ್ಯವನ್ನು ಹಿಂದಿರುಗಿಸಲಾಯಿತು. 1765ರಲ್ಲಿ ತನಗೆ ಸಲ್ಲಬೇಕಾದ ಕಪ್ಪದ ಮೊತ್ತವನ್ನು ಹೈದರ್ ಅಲಿ ಹೆಚ್ಚಿಸಿದಾಗ 1768ರಲ್ಲಿ ಇವರ ನಡುವೆ ಭಿನ್ನಾಭಿಪ್ರಾಯ ತಲೆದೋರಿತು. ಅಚ್ಯುತ ಹೆಗ್ಗಡೆ ಪದಚ್ಯುತನಾಗಿ ವಿಟ್ಲದಿಂದ ಓಡಿಹೋಗಿ ಬ್ರಿಟಿಷರ ಆಶ್ರಯಪಡೆದ. ಮಾಹೆಯಾನ ನೂರು ರೂಪಾಯಿಗಳ ವಿಶ್ರಾಂತಿವೇತನ ಪಡೆಯುತ್ತ ತೆಲ್ಲಿಚೇರಿಯಲ್ಲಿ ಆತ ಇರಬೇಕಾಯಿತು. 1768 ಮತ್ತು 1780ರಲ್ಲಿ ಸಂಭವಿಸಿದ ಮೈಸೂರು-ಬ್ರಿಟಿಷ್ ಕದನಗಳಲ್ಲಿ ಅಚ್ಯುತ ಹೆಗ್ಗಡೆ ಬ್ರಿಟಿಷರ ಪರ ಹೋರಾಡಿದ. ಆದರೆ ಅವನನ್ನು ಟಿಪ್ಪು ಕೈಸೆರೆಹಿಡಿದು ತಲೆ ಕಡಿಸಿದ. ವಿಟ್ಲದ ಅರಮನೆ ಬೆಂಕಿಗೆ ತುತ್ತಾಯಿತು. ಅಚ್ಯುತ ಹೆಗ್ಗಡೆಯ ವಂಶಸ್ಥರು ಬ್ರಿಟಿಷರ ರಕ್ಷಣೆಯಲ್ಲಿ ತೆಲ್ಲಿಚೇರಿಯಲ್ಲಿ ಉಳಿದು, ಬ್ರಿಟಿಷರ ಪರ ಹೋರಾಡಿದರು.

ಬ್ರಿಟಿಷ್-ಮೈಸೂರು ಹೋರಾಟದ ಸಮಯದಲ್ಲಿ ಹೆಗ್ಗಡೆಗೆ ಮಂಜೇಶ್ವರದ ದೇವಾಲಯದಿಂದ ಸಲ್ಲುತ್ತಿದ್ದ ಕಾಣಿಕೆ ನಿಂತುಹೋಯಿತು. ಸಿಟ್ಟಿಗೆದ್ದ ಹೆಗ್ಗಡೆ ಮಂಜೇಶ್ವರ ದೇವಾಲಯವನ್ನೇ ಕೊಳ್ಳೆಹೊಡೆದ. ಹಾನಿಗೆ ತುತ್ತಾದ ಸ್ಥಳೀಯ ಜನರು ಕ್ಯಾಪ್ಟನ್ ಥಾಮಸ್ ಮನ್ರೋಗೆ ದೂರಿತ್ತರು. ಬ್ರಿಟಿಷರು ಈ ಹೆಗ್ಗಡೆಯನ್ನು ಬಂಡುಕೋರನೆಂದು ತೀರ್ಮಾನಿಸಿದರು (ಡೊಂಬ ಎಂಬ ಶಬ್ದ ಡೊಂಬಿ ಎಂದಾಗಿ ಈ ಮನೆತನವನ್ನು ಬಂಡುಕೋರ ಮನೆತನವೆಂದು ಅರ್ಥೈಸಲು ಅವಕಾಶ ಕಲ್ಪಿಸಿತು).

ಕೊಯಮತ್ತೂರಿನ ಸುಬ್ಬರಾವ್ ವಿಟ್ಲದ ಹೆಗ್ಗಡೆಯೊಂದಿಗೆ ಸೇರಿ ಉಪ್ಪಿನಂಗಡಿ ದೇವಾಲಯವನ್ನಾಕ್ರಮಿಸಿದ. ಈ ಪ್ರದೇಶದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಕಡಬದ ತಹಶೀಲದಾರ ತಲೆತಪ್ಪಿಸಿಕೊಂಡ. ಸುಬ್ಬರಾವ್ ಮುಂದೆ ಸಾಗಿ ಬಂಟ್ವಾಳವನ್ನು ಲೂಟಿ ಹೊಡೆದು ಪುತ್ತೂರನ್ನು ತಲುಪಿದ. ಈ ಸಮಯದಲ್ಲಿ ಮನ್ರೋ ಧರ್ಮಸ್ಥಳದ ಕುಮರ ಹೆಗ್ಗಡೆಯ ನೇತೃತ್ವದಲ್ಲಿ ತುಕಡಿಯೊಂದನ್ನು ಸಿದ್ಧಪಡಿಸಿದ್ದ. ಸುಬ್ಬರಾವ್ ಪರಾಜಿತನಾದ. ಇತ್ತ ವಿಟ್ಲದ ಹೆಗ್ಗಡೆಯನ್ನು ತಹಶೀಲದಾರ ಸೋಲಿಸಿ ಅವರ ವಂಶದ ಒಂಬತ್ತು ಜನರನ್ನು ಕೈಸೆರೆಹಿಡಿದ. ಇಬ್ಬರನ್ನು ಗಲ್ಲಿಗೇರಿಸಲಾಯಿತು. ಉಳಿದವರನ್ನು ತೆಲ್ಲಿಚೇರಿಯಲ್ಲಿ ಬಂಧನದಲ್ಲಿ ಇಡಲಾಯಿತು. ವೃದ್ಧಾಪ್ಯಕಾಲದಲ್ಲಿ ರಾಮವರ್ಮನನ್ನು ಹಾಗೂ ಅವನ ಅಳಿಯ ನರಸಿಂಹರಾಜನನ್ನು ವಿಟ್ಲಕ್ಕೆ ವರ್ಗಾಯಿಸಲಾಯಿತು. ಇವರ ರಾಜ್ಯ ಬ್ರಿಟಿಷರ ಅಧೀನವಾಯಿತು. 1856-57ರಲ್ಲಿ ಇಮ್ಮಡಿ ನರಸಿಂಹರಾಜ ಮತ್ತು 1896ರಲ್ಲಿ ಅವನ ಸೋದರಿ ದೊಡ್ಡಮ್ಮ ಅರಸಿ ಮರಣಹೊಂದಿದರು. ಈಗಲೂ ಇವರ ವಂಶದವರು ವಿಟ್ಲದಲ್ಲಿ ನೆಲಸಿದ್ದಾರೆ.

ಕಾಪು ಎಂಬಲ್ಲಿಂದ ಮರ್ದಹೆಗ್ಗಡೆ ಅಥವಾ ಮದ್ದಹೆಗ್ಗಡೆ ಎಂಬವರು ಸಾಮಂತರಾಗಿ ಆಳುತ್ತಿದ್ದರು. ಇವರ ಆಡಳಿತದ ಆರಂಭದ ಕಾಲವನ್ನು ನಿರ್ಧರಿಸಲು ಸಾಧ್ಯವಾಗಿಲ್ಲ. 1475ರ ಶಾಸನದಲ್ಲಿ ಮರ್ದಹೆಗ್ಗಡೆಯೊಬ್ಬನ ಉಲ್ಲೇಖವಿದೆ. 1500ರ ಇನ್ನೊಂದು ಶಾಸನ ತಿರುಮಲರಸ ಅಥವಾ ಮದ್ದಹೆಗ್ಗಡೆಯನ್ನು ಹೆಸರಿಸುತ್ತದೆ. ಈ ಹೆಗ್ಗಡೆಗಳು ಯೆಲ್ಲೂರು, ಯೇಳಿಂಜೆಗಳ ಹೆಗ್ಗಡೆ ಹಾಗೂ ಚೌಟರಸರೊಂದಿಗೆ ಮಾಡಿಕೊಂಡ ರಾಜಕೀಯ ಶಾಂತಿಒಪ್ಪಂದ ಶಾಸನಗಳಲ್ಲಿ ಕಾಣಸಿಗುತ್ತದೆ. 1541ರಲ್ಲಿ ಗಣಪಣ ಸಾವಂತ ಅಥವಾ ಮದ್ದಹೆಗಡೆ ಆಳುತ್ತಿದ್ದ; 1558ರಲ್ಲೂ ಈತನಿದ್ದ. ಇವರ ರಾಜ್ಯದ ವ್ಯಾಪ್ತಿಯ ಬಗ್ಗೆ ತಿಳಿಯದು. ಆದರೆ ಇವರ ರಾಜ್ಯ ಸಪ್ತಗ್ರಾಮಗಳನ್ನೊಳಗೊಂಡಿತ್ತೆಂಬ ಪ್ರತೀತಿ ಇದೆ.

ಮಾರಮ್ಮ ಹೆಗ್ಗಡೆಗಳು ಉಡುಪಿ ತಾಲ್ಲೂಕಿನ ಯೇರುವಾಳ ಎಂಬಲ್ಲಿಂದ ಆಳುತ್ತಿದ್ದರು. ಇವರ ರಾಜ್ಯ ಎರಡೇ ಗ್ರಾಮಗಳನ್ನೊಳಗೊಂಡಿತ್ತೆಂದು ತಿಳಿದುಬರುತ್ತದೆ. ತಿರುಮಲರಸನಾದ ಮಾದಂಬ (ಮಾರಮ್ಮ) ಹೆಗ್ಗಡೆ ಈ ವಂಶದ ಒಬ್ಬ ಅಧಿಪ.

ಯೆಲ್ಲೂರಿನ ಅಧಿಪರನ್ನು ಕುಂದಹೆಗ್ಗಡೆಗಳೆಂದು ಕರೆಯಲಾಗುತ್ತಿತ್ತು. 15ನೆಯ ಶತಮಾನದಲ್ಲೆ ಈ ವಂಶದ ಅಧಿಪನ ಉಲ್ಲೇಖವಿದೆ. ವಿಶ್ವನಾಥ ಇವರ ಕುಲದೇವತೆ. ಉಡುಪಿ ತಾಲ್ಲೂಕಿನ ಕೆಲಪ್ರದೇಶದಲ್ಲಿ ಆಳುತ್ತಿದ್ದ ಇವರು ಕೆಲವು ಶಾಂತಿ ಒಪ್ಪಂದಗಳಲ್ಲಿ ಸಾಕ್ಷಿಗಳಾಗಿ ಉಲ್ಲೇಖಗೊಂಡಿದ್ದಾರೆ.

ನಂದಳಿಕೆಯ ಅಧಿಪರನ್ನು ಕಿನ್ಯಕ ಪೆಗ್ರ್ಗಡೆ ಎಂದು ಕರೆಯಲಾಗುತ್ತಿತ್ತು.

ಕಾರ್ಕಳ ತಾಲ್ಲೂಕಿನ ಮುದರಾಡಿಯಲ್ಲಿ ವಿಜಯನಗರಕಾಲದಲ್ಲಿ ಸಾವಂತರೆಂದು ಪರಿಚಿತರಾದ ಹೆಗ್ಗಡೆಗಳ ಆಳಿಕೆ ಇತ್ತು. ಇವರು ಪುತ್ತಿಗೆಯ ಚೌಟರಸರ ಬಂಧುಗಳು. ಅಣ್ಣ ಸಾವಂತ ಹೆಗ್ಗಡೆ ಮೂಡಬಿದರೆಯ ತ್ರಿಭುವನತಿಲಕಚೂಡಾಮಣಿ ಚೈತ್ಯಾಲಯಕ್ಕೆ 1461ರಲ್ಲಿ ದಾನವಿತ್ತ ಸಂಗತಿ ತಿಳಿದುಬರುತ್ತದೆ.

ಗಮನಾರ್ಹ ಜನರು

ಬದಲಾಯಿಸಿ

ಹೆಗ್ಡೆ ಎಂಬ ಉಪನಾಮ ಹೊಂದಿರುವ ಗಮನಾರ್ಹ ವ್ಯಕ್ತಿಗಳ ಪಟ್ಟಿ ಈ ಕೆಳಗಿನಂತಿದೆ.

ಉಲ್ಲೇಖಗಳು

ಬದಲಾಯಿಸಿ
  1. "Hegde Name Meaning & Hegde Family History at Ancestry.com®". www.ancestry.com. Retrieved 2020-07-16.
  2. K. S. Singh (1998). India's Communities. Anthropological Survey of India Oxford University Press. p. 3677. ISBN 978-0-19-563354-2. They are also known as Namdhari Gauda or Nadavaru. Heggade and Gowda are the titles, which they suffix to their names.
  3. ೩.೦ ೩.೧ Whitworth, George Clifford (1885). An Anglo-Indian Dictionary: A Glossary of Indian Terms Used in English, and of Such English Or Other Non-Indian Terms as Have Obtained Special Meanings in India. London: K. Paul, Trench. p. 120.
  4. "ಆರ್ಕೈವ್ ನಕಲು" (PDF). Archived from the original (PDF) on 2019-05-12. Retrieved 2019-05-12.
  5. "Hegde Family History". Oxford University Press. Dictionary of American Family Names ©2013, Oxford University Press.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹೆಗ್ಡೆ&oldid=1183511" ಇಂದ ಪಡೆಯಲ್ಪಟ್ಟಿದೆ