ಹರ್ಡೇಕರ ಮಂಜಪ್ಪ
ಹರ್ಡೇಕರ ಮಂಜಪ್ಪನವರು ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು.
ಹರ್ಡೇಕರ ಮಂಜಪ್ಪ | |
---|---|
ಜನನ | ಫೆಬ್ರುವರಿ ೧೮, ೧೮೮೬ ಬನವಾಸಿ, ಉತ್ತರ ಕನ್ನಡ |
ಮರಣ | ಜನವರಿ ೩, ೧೯೪೭ |
ವೃತ್ತಿ | ಪತ್ರಕರ್ತ, ಸಾಹಿತಿ, ಚಿಂತಕ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಕೆಲಸ(ಗಳು) | ಸಮಾಜ ಸುಧಾರಣೆ, ಸ್ವಾತ೦ತ್ರ ಚಳವಳಿ, ಗಾ೦ಧಿವಾದ |
ಹಿನ್ನಲೆ ಮತ್ತು ಶಿಕ್ಷಣ
ಬದಲಾಯಿಸಿ೧೮೮೬ರ ಫೆಬ್ರುವರಿ ೧೮ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಡ ಕುಟುಂಬ ಒಂದರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತನು. ಮಂಜಪ್ಪನವರು ಕಲಿತಿದ್ದು ಕೇವಲ ಕನ್ನಡ, ೭ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. ೧೯೦೩ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. ೧೯೦೫ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು.
ಪತ್ರಿಕಾ ಜೀವನ
ಬದಲಾಯಿಸಿಮಂಜಪ್ಪನವರು ಅಂದಿನ ರಾಷ್ಟ್ರೀಯತೆ ವಾತಾವರಣದಿಂದ ಪ್ರಭಾವಿತರಾಗಿ ತಮ್ಮ ಶಿಕ್ಷಕ ವ್ರುತ್ತಿಗೆ ರಾಜೀನಾಮೆ ಕೊಟ್ಟರು. ಇವರ ಅಣ್ಣನೂ ಸಹ ತಮ್ಮ ಕೆಲಸವನ್ನು ಬಿಟ್ಟುಬಿಟ್ಟರು. ಇವರಿಬ್ಬರೂ ಜೊತೆಯಾಗಿ ೧೯೦೬ರ ಸೆಪ್ಟಂಬರದಲ್ಲಿ "ಧನುರ್ಧಾರಿ" ಎನ್ನುವ ಪತ್ರಿಕೆಯನ್ನು ದಾವಣಗೆರೆಯಿಂದ ಪ್ರಕಟಿಸತೊಡಗಿದರು. ಈ ಪತ್ರಿಕೆಯು ಲೋಕಮಾನ್ಯ ತಿಲಕರು ಮಹಾರಾಷ್ಟ್ರದಲ್ಲಿ ಹೊರಡಿಸುತ್ತಿದ್ದ ಮರಾಠಿ ಪತ್ರಿಕೆ ಕೇಸರಿಯ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುತ್ತಿತ್ತು. ಪತ್ರಿಕೆಯ ಉಗ್ರಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆ ಹೆಚ್ಚಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. ೧೯೦೮ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿ ಪತ್ರಿಕೆಯನ್ನು ಮತ್ತೆ ಪ್ರಾರಂಭಿಸಿದರು. ಆದರೆ ೧೯೧೫ರಲ್ಲಿ ಧನುರ್ಧಾರಿ ಮತ್ತೆ ನಿಂತುಹೋಯಿತು.
ಸತ್ಯಾಗ್ರಹ ಆಶ್ರಮ
ಬದಲಾಯಿಸಿರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು ೧೯೧೦ರಲ್ಲಿ ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು. ೧೯೧೪ರಲ್ಲಿ ತಿಲಕರನ್ನು ಭೆಟ್ಟಿಯಾದರು. ೧೯೨೦ ಅಗಸ್ಟದಲ್ಲಿ ಖಾದಿವ್ರತ ಕೈಗೊಂಡರು. ಹರಿಹರ ರೇಲ್ವೆ ಸ್ಟೇಶನ್ದಿಂದ ೫ ಕಿ.ಮಿ. ದೂರದಲ್ಲಿ, ತುಂಗಭದ್ರಾ ನದಿಯ ದಂಡೆಯ ಮೇಲೆ ಬಾಳಪ್ಪ ಎನ್ನುವ ತಮ್ಮ ಗೆಳೆಯರ ಭೂಮಿಯಲ್ಲಿ ಒಂದು ಆಶ್ರಮ ಕಟ್ಟಿಸಿಕೊಂಡರು. ಅದಕ್ಕೆ “ಸತ್ಯಾಗ್ರಹ ಆಶ್ರಮ” ಎಂದು ಹೆಸರಿಡಲಾಯಿತು. ೧೯೨೩ರಲ್ಲಿ ಈ ಆಶ್ರಮವನ್ನು ಪ್ರವೇಶಿಸಿದರು. ೧೯೨೪ರಲ್ಲಿ ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಬಸವೇಶ್ವರ ಸೇವಾದಳ ಎನ್ನುವ ಸ್ವಯಂಸೇವಕರ ಸಂಘಟನೆಯನ್ನು ರಚಿಸಿ ಅಧಿವೇಶನದ ಯಶಸ್ಸಿಗೆ ಕಾರಣರಾದರು.
ವಿಧಾಯಕ ಕಾರ್ಯಕ್ರಮ
ಬದಲಾಯಿಸಿ೧೯೨೫ರಲ್ಲಿ ಮಂಜಪ್ಪನವರ ತಾಯಿ ತೀರಿಕೊಂಡರು. ಆಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿದರು. ಗ್ರಾಮೋದ್ಧಾರದ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಿದರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. ನೈತಿಕ ಪ್ರಚಾರ ಮಾಡಿದರು.
೧೯೨೭ರ ಮೇ ೧೩ರಂದು ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿದ್ಯಾಲಯದಲ್ಲಿ ಕೇವಲ ಔಪಚಾರಿಕ ಶಿಕ್ಷಣವನ್ನಲ್ಲದೆ , ಜೀವನ ಶಿಕ್ಷಣ ಎನ್ನುವ ಹೆಸರಿನಲ್ಲಿ ಕೈಕಸಬುಗಳನ್ನೂ ಸಹ ಕಲಿಸಲಾಗುತ್ತಿತ್ತು. ಗಾಂಧೀಜಿಯವರೂ ಸಹ ಆನಂತರದ ತಮ್ಮ ಶಿಕ್ಷಣಪದ್ಧತಿಯಲ್ಲಿ ಇಂತಹದೆ ನಯೀ ತಾಲೀಮ ಎನ್ನುವ ವಿಧಾನವನ್ನು ಅಳವಡಿಸಿಕೊಂಡರು.
೧೯೩೦ರಲ್ಲಿ ಮಂಜಪ್ಪನವರು “ಉದ್ಯೋಗ” ಎನ್ನುವ ಮಾಸಪತ್ರಿಕೆಯನ್ನು ಹಾಗು ಮಕ್ಕಳ ಸಾಹಿತ್ಯಮಾಲೆಯನ್ನು ಪ್ರಾರಂಭಿಸಿದರು. ೧೯೩೧ರಲ್ಲಿ ಶರಣಸಂದೇಶ ಎನ್ನುವ ಮಾಸಪತ್ರಿಕೆಯನ್ನು ಹೊರಡಿಸತೊಡಗಿದರು.
೧೯೩೪ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆಗಿನ ಸುತ್ತಾಟದಲ್ಲಿ ಪಾಲ್ಗೊಂಡರು.
೧೯೪೬ರಲ್ಲಿ ಮಂಜಪ್ಪನವರು ಪ್ರಗತಿ ಗ್ರಂಥಮಾಲೆಯನ್ನು ಪ್ರಾರಂಭಿಸಿದರು.
ಸಾಹಿತ್ಯ
ಬದಲಾಯಿಸಿಹರ್ಡೀಕರ ಮಂಜಪ್ಪನವರು ಅನೇಕ ಲೇಖನಗಳನ್ನು ಹಾಗು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂತಿವೆ:
- ಸ್ವಕರ್ತವ್ಯ ಸಿದ್ಧಾಂತ
- ಬುದ್ಧಿಯ ಮಾತು
- ವಾರದ ಮಲ್ಲಪ್ಪನವರ ಚರಿತ್ರೆ
- ಸ್ತ್ರೀನೀತಿ ಸಂಗ್ರಹ
- ಆರೋಗ್ಯ ಜೀವನ
- ಬುದ್ಧ ಚರಿತ್ರೆ
- ಗಾಂಧೀ ಚರಿತ್ರೆ
- ರಾಮತೀರ್ಥರ ಉಪನ್ಯಾಸ
- ಭಾರತೀಯರ ದೇಶಭಕ್ತಿ
- ಬಸವ ಚರಿತ್ರೆ
- ಆಧುನಿಕ ಜರ್ಮನಿ
- ವೀರಶೈವ ಸಮಾಜ ಸುಧಾರಣೆ
- ಕೇರ ಹಾರ್ಡಿ
- ಖಾದಿ
- ಬ್ರಹ್ಮಚರ್ಯ
- ಅಹಿಂಸೆ
- ಸತ್ಯಾಗ್ರಹ ಧರ್ಮ
- ಬಸವ ಬೋಧಾಮೃತ
- ಸುಬೋಧಸಾರ
- ಎಚ್ಚತ್ತ ಹಿಂದುಸ್ಥಾನ
- "ಕಳೆದ ನನ್ನ ೩೦ ವರ್ಷಗಳ ಕಾಣಿಕೆ" ೧೯೩೬ ರಲ್ಲಿ ಪ್ರಕಟವಾದ ಇದು ಹರ್ಡೀಕರ ಮಂಜಪ್ಪನವರ ಆತ್ಮ ಚರಿತ್ರೆಯಾಗಿದೆ ಮತ್ತು ಕನ್ನಡದ ಮೊದಲ ಆತ್ಮ ಚರಿತ್ರೆಯ ದಾಖಲೆಯಾಗಿದೆ.
ಉಲ್ಲೇಖಗಳು
ಬದಲಾಯಿಸಿಹೊರಸಂಪರ್ಕಗಳು
ಬದಲಾಯಿಸಿ- "ಕರ್ನಾಟಕ ಗಾಂಧಿ" ಹರ್ಡೇಕರ ಮಂಜಪ್ಪ (1886-1947), LingayatReligion.com
- ಕರ್ನಾಟಕದ ಮಹಾನ್ ಚೇತನ ಹರ್ಡೇಕರ ಮಂಜಪ್ಪ, ವಿಜಯವಾಣಿ, ೦೨ಜುಲಾಯಿ೨೦೧೬