ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು

ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸರು
ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸರು
ಜನನ : ೨೧-೮-೧೮೮೦ (ಶ್ರಾವಣ ಬಹುಳ ಬಿದಿಗೆ)
ಹುಟ್ಟಿದೂರು : ಮಾಳೇನಹಳ್ಳಿ -ಹೊಳಲ್ಕೆರೆ ತಾಲ್ಲೂಕು
ತಂದೆ: ಕೃಷ್ಣಪ್ಪ
ತಾಯಿ: ಸುಬ್ಬಮ್ಮ
ದೇಹ ತ್ಯಾಗ : ೧೬-೭-೧೯೫೩(ಫಾಲ್ಗುಣ ಶುದ್ಧ ತೃತಿಯ)
ಸಮಾಧಿ: ಕೊಮಾರನಹಳ್ಳಿ - ಹರಿಹರ ತಾಲ್ಲೂಕು
ಗುರುಗಳು: ಶ್ರೀ ಶಂಕರ ಭಗವಾನರು,
ಶ್ರೀ ದತ್ತರಾಜ ಯೋಗೀಂದ್ರರು

'ಸಾಕ್ಷಾತ್ ಪರಬ್ರಹ್ಮ ' ನು, 'ಸದಾಶಿವ' ನು, 'ಶ್ರೀಮನ್ಮಹಾವಿಷ್ಣು' ವು ಅದ 'ಸದ್ಗುರು'ಗಳು ಲೋಕವನುದ್ದರಿಸಲು ಬೋದಿಸುವ ಮಾರ್ಗವೆ 'ಗುರುಪಂಥ'. ಇಂತಹ ಅನೇಕ ಗುರು ಪರಂಪರೆಗಳಿವೆ. ದಕ್ಷಿಣ ಭಾರತದಲ್ಲಿ ಮೂರು ಪರಂಪರೆಗಳು ಪ್ರಖ್ಯಾತವಾಗಿವೆ. ಅವುಗಳೆಂದರೆ-

'ಶ್ರೀ ಶಂಕರಲಿಂಗ ಭಗವಾನರು' ಈ ಮೂರೂ ಪಂಥಗಳ ಸಂಗಮ ಸ್ವರೂಪವಾಗಿದ್ದಾರೆ.[೧] ಅವರ ಶಿಶ್ಯ ವೃಂದವು ಅವರನ್ನು "ಅಪ್ಪ" ಎಂದು ಸಂಭೋಧಿಸುತ್ತಾರೆ. ಅವರನ್ನು ಅವಧೂತರೆಂದು ಪರಿಗಣಿಸಿ ಸ್ತುತಿಸುತ್ತಾರೆ.[೨] ಆವರನ್ನು ಈ ಕೆಳಗಿನಂತೆ ಸ್ತುತಿಸುತ್ತಾರೆ. "ಗುರುಸೇವೆಯು ಕೈವಲ್ಯ ಪ್ರದವಾದುದು.ಆತ್ಮಸಾಕ್ಷಾತ್ಕಾರಕ್ಕಾಗಿ ಗುರುವನ್ನಾಶ್ರಯಿಸಬೇಕು. ಸದ್ಗುರುವು ಕರುಣಾಸಾಗರನು. ಶಿಷ್ಯರ ಸಕಲ ದುಃಖಗಳನ್ನು, ಸಮಸ್ತಸಂತಾಪಗಲನ್ನು ನಿವಾರಿಸಿ ಮೋಕ್ಷವನ್ನು ದಯಪಾಲಿಸುತ್ತಾನೆ. ಸರ್ವತಂತ್ರ ಸ್ವತಂತ್ರನಾದ ಅವನು ಯಾರಿಂದ ಏನನ್ನೂ ಬಯಸುವುದಿಲ್ಲ. ಅವನು ಸಜ್ಜನರಿಗೆ ದಾತಾರನಾಗಿರುತ್ತಾನೆ. ಅಂತಹ ಸದ್ಗುರುಗಳಾದ ಶ್ರೀ ಶ್ರೀ ಶಂಕರಲಿಂಗ ಭಗವಾನರ ದಿವ್ಯಸನ್ನಿಧಿಯು ಕೊಮಾರನಹಳ್ಳಿ (ಶ್ರೀ ಹೆಳವನಕಟ್ಟೆ ರಂಗನಾಥನ ಪಕ್ಕದಲ್ಲಿ) ಯಲ್ಲಿದೆ. ಕೊಮಾರನಹಳ್ಳಿಯ ಅರುಣಗಿರಿಯು ವೈಕುಂಠ, ಕೈಲಾಸ, ಸತ್ಯಲೋಕ.ಶ್ರೀ ಶಂಕರಲಿಂಗನ ಸನ್ನಿಧಿಯು ಆನಂದ. ಅಲ್ಲಿ ಯಾವ ಬಂಧನಗಳೂ ಇಲ್ಲ.

ಶಂಕರಲಿಂಗ ಭಗವಾನರು ೨೧-೮-೧೮೮೦ ರಂದು ಶ್ರಾವಣ, ಬಹುಳ ಬಿದಿಗೆಯಂದು ಜನಿಸಿದರು. ಇವರು ಶಿವಚಿದಂಬರನ ಮೂರನೇ ಅವತಾರವೆಂದು ತಿಳಿಯಲ್ಪಟ್ಟಿದೆ. ಇವರ ತಂದೆಯ ಹೆಸರು ಕೃಷ್ಣಪ್ಪ ಮತ್ತು ತಾಯಿಯ ಹೆಸರು ಸುಬ್ಬಮ್ಮ, ತಂದೆ ಕೃಷ್ಣಪ್ಪನವರು, ಧನಿಕರು ಹಾಗೂ ಕೀರ್ತಿಶಾಲಿಗಳು, ದಕ್ಷರು ಹಾಗು ಹೊಳಲ್ಕೆರೆ ಹಾಗು ಸುತ್ತಮುತ್ತಲಿನ ಊರಿನ ಶ್ಯಾನುಭೋಗರಾಗಿದ್ದರು. ಇವರ ತಾಯಿ ಸುಬ್ಬಮ್ಮನವರು ಬಾಲ್ಯದಿಂದಲೂ ಹರಿದಾಸ ಕೀರ್ತನೆಗಳನ್ನೂ, ಕೃಷ್ಣಲೀಲೆಗಳನ್ನೂ ಸುಶ್ರಾವ್ಯ ವಾಗಿ ಹಾಡುತ್ತಿದ್ದರು. ಕೃಷ್ಣಪ್ಪ- ಸುಬ್ಬಮ್ಮ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಅವರು ಹೊಳಲ್ಕೆರೆ ವಿನಾಯಕನನ್ನು ಪ್ರಾರ್ಥಿಸಿದರು. ವಿನಾಯಕನು ಸ್ವಪ್ನದಲ್ಲಿ ಕಂಡು ಅವರ ಮನೆ ದೇವರು ಆದ ಮಾಳೇನಹಳ್ಳಿ ಲಕ್ಷ್ಮೀರಂಗನಾಥನ ಸೇವೆ ಮಾಡಲು ತಿಳಿಸಿದನು.[೩] ಅದರಂತೆ ಅವರು ಒಂದು ವರ್ಷದ ಕಾಲ ಮಾಳೇನಹಳ್ಳಿಯಲ್ಲೇ ಇದ್ದುಕೊಂಡು ಸೇವೆ ಮಾಡಿದರು. ಮತ್ತೆ ಲಕ್ಷ್ಮೀರಂಗನಾಥನು ಕನಸಿನಲ್ಲಿ ಕಂಡು ವರವನ್ನಿತ್ತನು. ಮತ್ತೆ ಅವರು ಒಂದು ದಿನ ವಿನಾಯಕನನ್ನು ಕುರಿತು ಧ್ಯಾನಿಸುತ್ತಿರಲು ವಿನಾಯಕನು ಪ್ರತ್ಯಕ್ಷನಾಗಿ ಆಶೀರ್ವದಿಸಿದನು. ಇಷ್ಟೆಲ್ಲಾ ತಪಸ್ಸಿನ ಫಲವೇ ಪುತ್ರ ರೂಪದಲ್ಲಿ ಜನಿಸಿತು. ಬಾಲಕನಿಗೆ 'ರಂಗನಾಥ'ನೆಂದು ನಾಮಕರಣ ಮಾಡಿದರು. ಈತನೇ ಮುಂದೆ ಶ್ರೀ. ಶ್ರೀ. ಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸನಾಗಿ, ಅನೇಕ ಲೀಲೆಗಳನ್ನು ಜನರಿಗೆ ತೋರಿದನು.

ಬಾಲಕ ರಂಗನಾಥನು ಅತಿಶಯಕಾಂತಿಯುಕ್ತನಾಗಿದ್ದನು. ನೋಡಿದವರ ಮನಸ್ಸುಗಳನ್ನು ಅಕರ್ಷಿಸುತ್ತಿದ್ದನು. ಯಾವಾಗಲೂ ನಗುತ್ತಾ ತನ್ನಷ್ಟಕ್ಕೆ ತಾನೆ ಆಟವಾಡಿಕೊಂಡಿರುತ್ತಿದ್ದನು. ಊಟ ತಿಂಡಿಗಳಲ್ಲಿ ಹೆಚ್ಚಿಗೆ ಆಸಕ್ತನಾಗಿರಲಿಲ್ಲ. ರಂಗನಾಥನಿಗೆ ಎರಡು ವರ್ಷವಾಗಿದ್ದಾಗ ಶಿವರಾತ್ರಿಯಲ್ಲಿ ಅವರ ತಂದೆತಾಯಿ ಅವನನ್ನು ಅಣಜಿ (ದಾವಣಗೆರೆ ಜಿಲ್ಲೆ)ಎಂಬ ಊರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವನ ಅಜ್ಜಿ ಅಂದರೆ ಕೃಷ್ಣಪ್ಪನವರ ತಾಯಿ ಚಿದಂಬರಮ್ಮ ನವರು ಇದ್ದರು. ಶಿವಚಿದಂಬರನ ವರಪುತ್ರಿಯಾದ ಅವರು ಆ ದಿನ ಎಲ್ಲರನ್ನೂ ಬಿಲ್ವವೃಕ್ಷದ ಬಳಿ ಬರಲು ಹೇಳಿ ಅಲ್ಲಿ ಬಂದವರೆಲ್ಲರನ್ನೂ ವಿಚಾರಿಸಿದ ನಂತರ ರಂಗನಾಥನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅವನ ತಾಯಿ ಸುಬ್ಬಮ್ಮನನ್ನು ಕುರಿತು "ನಿನ್ನ ಮಗ ಲೋಕರೀತಿಯಮಗನಲ್ಲ. ಇವನು ಶಿವಚಿದಂಬರ. ಮೈಮರೆಯದೆ ಇವನನ್ನು ಚೆನ್ನಾಗಿ ನೋಡಿಕೊ" ಎಂದು ಹೇಳಿ ರಂಗನಾಥನಿಗೆ ಆಶೀರ್ವದಿಸಿದರು. ಆ ಮಹಾಮಾತೆಯು ತದ ನಂತರ ಇನ್ದು ಕೈಲಾಸದಲ್ಲಿ ಉತ್ಸವ. ನಾನು ಶಿವನನ್ನು ನೋಡಲು ಹೋಗುತ್ತೇನೆ ಎಂದು ಹೇಳಿ ದೇಹತ್ಯಾಗ ಮಾಡಿದರು. ರಂಗನಾಥನ ಜನನಕ್ಕೆ ಮೊದಲೇ ಕೃಷ್ಣಪ್ಪನವರ ಸಂಸಾರದಲ್ಲಿ ಅನೇಕ ಘಟನೆಗಳು ನಡೆದಿದ್ದವು. ಭೀಕರ ಬರಗಾಲದ ಕಾರಣದಿಂದ ಅತ್ಯಂತ ಧನಿಕರಾಗಿದ್ದ ಕೃಷ್ಣಪ್ಪನವರ ಮನೆಯವರೆಲ್ಲಾ ಅವರಲ್ಲಿದ್ದ ಸಂಪತ್ತನ್ನು ಕೊಳಗಗಳಲ್ಲಿ ತುಂಬಿಸಿ ನೆಲದಲ್ಲಿ ಹುದುಗಿಸಿಟ್ಟಿದ್ದರು. ಬರಗಾಲ ಹೋದ ನಂತರ ತೆಗೆದು ನೋಡಿದರೆ ಆ ಜಾಗದಲ್ಲಿ ಕೊಳಗಗಳೇ ಇರಲಿಲ್ಲ. ಇದರಿಂದ ಸಂಸಾರದಲ್ಲಿ ಅಪನಂಬಿಕೆಗಳು ಮೂಡಿ ಅಣ್ಣತಮ್ಮಂದಿರು ವಿಭಾಗವಾದರು. ಕೃಷ್ಣಪ್ಪನವರಿಗೆ ಆರ್. ನುಲೇನೂರು ಹಾಗು ಬಸಾಪುರದ ಶ್ಯಾನುಭೊಗಿಕೆ ಬಂದಿತು. ಹೊಳಲ್ಕೆರೆಯಲ್ಲಿ ಒಂದು ಮನೆ, ತೋಟ ,ಜಮೀನುಗಳು ಅವರ ಪಾಲಿಗೆ ಬಂದಿದ್ದಿತು. ಅಣಜಿಯಿಂದ ಬಂದಮೇಲೆ ಕೃಷ್ಣಪ್ಪನವರ ಸಂಸಾರದಲ್ಲಿ ಬಡತನ ಹೆಚ್ಚಾಯಿತು. ಜಮೀನುಗಳಿಂದ ಹೆಚ್ಚೇನು ಆದಾಯ ಬರುತ್ತಿರಲಿಲ್ಲ. ಸರ್ಕಾರದಲ್ಲೂ ರೈತರಲ್ಲೂ ವರ್ಚಸ್ವಿಗಳಾದ ರ್ಕೃಷ್ಣಪ್ಪನವರು ಮೂಲೆ ಗುಂಪಾದರು. ನಾನು ನನದು ಎಲ್ಲಾ ಸುಳ್ಳೆಂದು ಸ್ವಾನುಭವದಿಂದ ಮನಗಂಡು ದುಡಿಯುವ ಹಂಬಲವನ್ನೇ ಬಿಟ್ಟು ಬಿಟ್ಟರು. ಮನೆಯ ಭಾರ ಸುಬ್ಬಮ್ಮನವರ ಮೇಲೇ ಬಿದ್ದಿತು. ಅವರು ಯಾರನ್ನೂ ಬೇಡುತ್ತಿರಲಿಲ್ಲ. ಇದ್ದುದರಲ್ಲಿಯೇ ಮನೆತೂಗಿಸುತ್ತಿದ್ದರು. ಬಡತನ ದಿನದಿಂದ ದಿನಕ್ಕೆ ಹೆಚ್ಚುತ್ತಾಯಿದ್ದಿತು. ಕಡೆಗೆ ಎರಡು ಹೊತ್ತಿನ ಊಟಕ್ಕೂ ಇರದಂತಾಯಿತು. ಮನೆಯಲ್ಲಿ ಮಣ್ಣಿನ ಪಾತ್ರೆಗಳೂ ಸಹ ಇಲ್ಲದಂತಾಯಿತು. ಮಕ್ಕಳಿಗೆ ತಣ್ಣೀರಿನಿಂದಲೇ ಸ್ನಾನ. ಯಾರಾದರೂ ಎಣ್ಣೆ ಕೊಟ್ಟರೆ ರಾತ್ರಿ ಮನೆಯಲ್ಲಿ ದೀಪ ಇಲ್ಲದಿದ್ದರೆ ಅದೂ ಇಲ್ಲ. ಯಾರೂ ಸಹಾಯ ಮಾಡುತ್ತಿರಲಿಲ್ಲ. ಬಡತನ ಎಂದು ಬಂಧುಗಳು ಮಾತನಾಡಿಸುತ್ತಿರಲಿಲ್ಲ. ಆದರೆ ಇತ್ತ ಹಳ್ಳಿಯಲ್ಲಿ ರಂಗನಾಥನ ಮಹಿಮೆ ಹರಡಿತು. ರಂಗನಾಥನು ದೈವಾಂಶಸಂಭೂತನೆಂಬ ನಂಬಿಕೆ ಊರಿನಲ್ಲಿ ಬೆಳೆಯಿತು. ಇದಕ್ಕೆ ಒಂದು ಹಿನ್ನೆಲೆ ಇದೆ.

 • ರಂಗನಾಥನ ಮನೆಯ ಪಕ್ಕದ ಗುಡಿಸಲಿನಲ್ಲಿ ಬಸಜ್ಜಿ ಎಂಬ ಹೆಸರಿನ ವೃದ್ಧರು ವಾಸವಾಗಿದ್ದರು. ಅವರು ಬೆಳಗ್ಗೆ ಹೊಲದ ಕೆಲಸಕ್ಕೆ ಹೋದವರು ಸಂಜೆ ಹಿಂದಿರುಗುತ್ತಿದ್ದರು. ಒಂದು ದಿನ ಅವರು ಮನೆಗೆ ಹಿಂದಿರುಗಿದಾಗ ಗಡಿಗೆಯಲ್ಲಿಟ್ಟಿದ್ದ ಹಾಲಿನಕೆನೆ ಮಾಯವಾಗಿತ್ತು. ರಂಗನಾಥನು ಪ್ರತಿದಿನ ಅವರು ಕೆಲಸ ಮುಗಿಸಿ ಬರುವ ಮುನ್ನ ಹೀಗೆ ಮಾಡುತ್ತಿದ್ದನು. ನಾಲ್ಕೈದು ದಿನಗಳು ಹೀಗೇ ಆಗಲು ಒಂದು ದಿನ ಬೇಗನೇ ಬಂದು ಬಾಗಿಲಿನಲ್ಲಿ ಇಣುಕಿ ನೋಡಲು ಅವರಿಗೆ ಸಾಕ್ಷಾತ್ ರಂಗನಾಥನು(ಕೃಷ್ಣ) ಕಾಣಿಸಿಕೊಂಡನು. ಅಂದಿನಿಂದ ರಂಗನಾಥನು ಹಳ್ಳಿಯ ರಂಗನಾಥಸ್ವಾಮಿಯೇ (ಸಾಕ್ಷಾತ್ ಶ್ರೀಕೃಷ್ಣ)ನೆಂದು ಹಳ್ಳಿಯಲ್ಲಿ ಎಲ್ಲರೂ ತಿಳಿದರು. ಹಾಗೆಯೇ ಘಟನೆಗಳೂ ನಡೆದವು. ಹಸುಗಳು ರೋಗಪೀಡಿತವಾಗಿ ಹಾಲು ಕೊಡದೇ ಹೋದರೆ ರಂಗನಾಥನಿಗೆ ಹರಸಿ ಕೊಳ್ಳುತ್ತಿದ್ದರು. ಸಾಯುವ ಸ್ಥಿತಿಯಲ್ಲಿದ್ದ ಹಸುಗಳು ಗುಣಮುಖವಾಗಿ ಚೆನ್ನಾಗಿ ಹಾಲು ಕೊಡುತ್ತಿದ್ದವು. ರಂಗನಾಥನು ಆಡುತ್ತಿದ್ದ ಆಟ ಎಂದರೆ ಬರೀ ದೇವರ ಪೂಜೆಯ ಆಟ. ದನಗಳನ್ನು ಕಾಯುವ ಹುಡುಗರೋಂದಿಗೆ ಹೋಗಿ ಅಲ್ಲಿ ದನಗಳು ಮೇಯುತ್ತಿರುವಾಗ ಆ ಹುಡುಗರೊಂದಿಗೆ ಒಂದು ಕಲ್ಲನ್ನು ಮರದ ಕೆಳಗೆ ಇಟ್ಟು ಅದನ್ನು ದೇವರೆಂದು ಕೊಂಡು ಅದಕ್ಕೆ ಧೂಪ, ದೀಪ, ನೊರೆಹಾಲಿನ ನೈವೇದ್ಯ, ಆರತಿಗಳು ನಡೆಯುತ್ತಿದ್ದವು. ದೇವರ ಮುಂದೆ ಭಜನೆ, ದೇವರನಾಮವನ್ನು ರಂಗನಾಥನು ಹಾಡಿದರೆ ದನಗಳೂ ಕೇಳುತ್ತಾ ನಿಲ್ಲುತ್ತಿದ್ದವು. ಹೀಗೆ ರಂಗನಾಥನ ಖ್ಯಾತಿಯು ಹಳ್ಳಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು.

ಗೋಕುಲದಲ್ಲಿ ಶ್ರೀಕೃಷ್ಣನು ಎಲ್ಲರಿಗೂ ಅಚ್ಚುಮೆಚ್ಚಾದಂತೆ ಹಳ್ಳಿಯಲ್ಲಿ ರಂಗನಾಥನು ಎಲ್ಲರಿಗೂ ಪ್ರೀತಿಪಾತ್ರನಾಗಿದ್ದನು. ಒಮ್ಮೆ ರಂಗನಾಥನು ಸಂಜೆಯ ವೇಳೆಯಲ್ಲಿ ಆಟಾ ಅಡುತ್ತಿರುವಾಗ ಯಾರೋ ಮರಕೊರೆಯುವವರು ಮರವನ್ನು ಅಲುಗಾಡದಂತೆ ಹಿಡಿದುಕೊಳ್ಳಲು ಅವನಿಗೆ ಹೇಳಿದರು. ಆಗ ಗರಗಸ ರಂಗನಾಥನ ಕೈ ಮೇಲೆ ಬಂದು ಎಡಗೈ ಬೆರಳು ತುಂಡಾಗಿ ಹೋಯಿತು. ಆದರೂ ನೋವಿನಿಂದ ಚೀರದೆ ಸುಮ್ಮನೇ ಕುಳಿತ ಹುಡುಗನನ್ನು ನೋಡಿ ಗಾಬರಿಯಾಗಿ ಗರಗಸದವರು ಮನೆಗೆ ಕರೆದುಕೊಂಡು ಬಿಟ್ಟರು. ಮುಂದೆ ಶಂಕರಲಿಂಗ ಭಗವಾನರು ಆ ಬೆರಳನ್ನು ತೋರಿಸಿ ತನ್ನ ಭಕ್ತರಿಗೆ ಕಾಳಿಯು ಈ ಬೆರಳನ್ನು ಬಲಿ ತೆಗೆದುಕೊಂಡಳು ಎಂದು ಹೇಳುತ್ತಿದ್ದರು. ಎಂಟನೇ ವರ್ಷದಲ್ಲಿ ರಂಗನಾಥನಿಗೆ ಉಪನಯನ ಮಾಡಲು ಅವರ ತಂದೆ ತಾಯಿ ಅಣಜಿ ಗ್ರಾಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಯಲ್ಲಪ್ಪಜ್ಜನೆಂಬ ಸಾಧುಗಳಿದ್ದರು. ಅವರು ನೋಡುವುದಕ್ಕೆ ಮಂಕರಂತೆ, ಮೂಢರಂತೆ, ಹುಚ್ಚು ಹಿಡಿದವರಂತೆ ಕಂಡರೂ ಎಂಥಹ ವಿದ್ವಾಂಸರನ್ನೂ ವಾದದಲ್ಲಿ ಜಯಿಸುವ ಪ್ರೌಢಿಮೆ ಇದ್ದಿತು. ಅವರಿಗೆ ಅವರ ಗುರುಗಳಾದ ಬ್ರಹ್ಮಾನಂದರು ಮೊದಲೇ ಹೀಗೆ ಹೇಳಿದ್ದರು. "ನಿಮ್ಮ ಬಂಧುವರ್ಗದಲ್ಲಿ ಒಬ್ಬ ಮಹಾಪುರುಷನು ಜನಿಸುತ್ತಾನೆ. ಅವನು ಸಹಜ ಸಿದ್ಧ, ಅವತಾರ ಪುರುಷ. ಅವನ ಉಪನಯನವು ಅಣಜಿಯಲ್ಲಿ ನಡೆಯುತ್ತದೆ. ಅವನಾರೆಂದು ನಮ್ಮಿಂದ ನಿಮಗೆ ತಿಳಿಯುತ್ತದೆ. ಆಗ ಅವನಿಗೆ ನೀವು ಮಹಾವಾಕ್ಯಗಳನ್ನು ಉಪದೇಶಿಸಿ ಅರ್ಥ ವಿವರಣೆ ಮಾಡಬೇಕು." ಯಲ್ಲಪ್ಪನವರು ರಂಗನಾಥನಿಗೆ ಉಪನಯನವಾದ ಮೇಲೆ ಮಹಾವಾಕ್ಯಗಳನ್ನು ಉಪದೇಶಿಸಿದರು. ಅಷ್ಟೆ ಅಲ್ಲದೆ ರಂಗನಾಥನಿಗೆ ಗುರುಸೇವೆ, ಗುರು ಮಹಿಮೆಗಳನ್ನು ಬೊಧಿಸಿ ಅವನ ಹೃದಯದಲ್ಲಿ ವಿವೇಕ, ವಿಚಾರ, ಶ್ರದ್ಧೆಗಳು ಮೂಡುವಂತೆ ಮಾಡಿದರು. ಅಲ್ಲದೆ ಅಣಜಿಯಲ್ಲಿ ರಂಗನಾಥನು ಮಹಾಭಾರತ (ಗದುಗಿನ ಭಾರತ)ವನ್ನು ರಾಗವಾಗಿ ಓದುವುದು ಅರ್ಥ ವಿವರಣೆ ಮಾಡುವುದನ್ನು ಕಲಿತನು. ಅಣಜಿಯಿಂದ ಹಿಂತಿರುಗಿದ ಮೇಲೆ ಮನೆಯಲ್ಲಿ ಬಹಳ ಬಡತನದ ಕಾರಣ ರಂಗನಾಥನಿಗೆಂದೇ ಸ್ವಲ್ಪ ಅನ್ನವನ್ನು ಆತನ ತಾಯಿಯು ಮಾಡುತ್ತಿದ್ದರು. ಆದರೇ ಅದನ್ನು ತಿನ್ನದೆ ರಂಗನಾಥನು ತಂದೆ ತಾಯಿಯಂತೆ ಮುದ್ದೆಯನ್ನೇ ತಿನ್ನುತ್ತಿದ್ದ. ತಂದೆಯನ್ನೂ ಸಹ ಕಳೆದುಕೊಂಡು ಮನೆಯ ಜವಾಬ್ದಾರಿಯನ್ನು ಬಾಲ್ಯದಲ್ಲಿಯೇ ವಹಿಸಿಕೊಂಡರೂ ಎಲ್ಲಾ ಕಷ್ಟಗಳಿಗೂ ಸ್ವಲ್ಪವೂ ಅಂಜದೇ ತಾಯಿಗೆ ಧೈರ್ಯ ಹೇಳುತ್ತಿದ್ದ.

ತಂದೆಯ ಮರಣಾನಂತರ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ತಾಯಿ,ತಮ್ಮಂದಿರು,ತಂಗಿಯರನ್ನು ಅಣಜಿಯಲ್ಲಿ ಬಿಟ್ಟು, ಅರಸಿನಘಟ್ಟ ಎಂಬ ಊರಿನಲ್ಲಿ ತಮ್ಮ ಮನೆತನದ ಕುಲಕಸುಬಾದ 'ಶ್ಯಾನುಭೊಗಿಕೆ' ಕೆಲಸವನ್ನು ಮಾಡಲು ಭೀಮರಾಯರೆಂಬ ಆ ಊರಿನ ಶ್ಯಾನುಭೋಗರ ಬಳಿಗೆ ಹೋದ ರಂಗನಾಥನು ಅಚ್ಚುಕಟ್ಟಾಗಿ ಲೆಕ್ಕ ಬರೆದುದಷ್ಟೆ ಅಲ್ಲದೆ ತನ್ನ ಸಹಜ ಸ್ವಭಾವವಾದ ಮೃದುತ್ವ,ಕೆಲಸದಲ್ಲಿ ಶ್ರದ್ಧೆ ,ಉತ್ತಮವಾದ ನಡೆನುಡಿಗಳಿಂದ ಆ ಊರಿನ ಜನರ ಮನಸ್ಸನ್ನು ಗೆದ್ದನು. ಬ್ರಾಹ್ಮೀ ಮುಹೂರ್ತದಲ್ಲೆದ್ದು ಸ್ನಾನಾಹ್ನಿಕಗಳನ್ನು ಮುಗಿಸಿ ಊರ ಮುಂದಿನ ಮಾರುತಿ ದೇವಾಲಯದಲ್ಲಿ ಜಪಮಾಡುತ್ತಾ ಕುಳಿತಿರುತ್ತಿದ್ದನು.ಬಳಿಕ ಮನೆಗೆಲಸದಲ್ಲಿ ಸಹಾಯ,ಲೆಕ್ಕ ಬರೆಯುವುದು ಇದಾದ ಮೇಲೆ ಹನ್ನೆರಡು ಘಂಟೆಯ ವೇಳೆಗೆ ಊಟಕ್ಕೆ ಕರೆದರೆ ನನಗೆ ಹಸಿವಿಲ್ಲ ಎನ್ನುತ್ತಿದ್ದನು. ಊಟ ತಿಂಡಿಯಲ್ಲಾಗಲಿ ನಿದ್ದೆಯಲ್ಲಾಗಲೀ ಸ್ವಲ್ಪವೂ ಆಸಕ್ತಿಇರಲಿಲ್ಲ. ಭಕ್ಷ್ಯಭೋಜ್ಯಗಳನ್ನೂ ಮುಟ್ಟುತ್ತಿರಲಿಲ್ಲ. ಎನೋ ಸ್ವಲ್ಪ ತಿಂದು ಎದ್ದುಬಿಡುತ್ತಿದ್ದನು.ಮಾರುತೀ ಮಂದಿರದಲ್ಲಿ ಮದ್ಯಾಹ್ನ ಕುಮಾರವ್ಯಾಸ ಭಾರತ ಓದುವುದು ಅರ್ಥ ಹೇಳುವುದನ್ನು ಕೇಳಿ ಊರ ಜನರು ರಂಗಣ್ಣನವರೇ ಎಂದೇ ಕರೆಯಲಾರಂಬಿಸಿದರು. ಒಂದು ವರ್ಷ ಆ ಊರಿನಲ್ಲಿ ದುಡಿದು ೨೦ ರುಪಾಯಿ ಸಂಭಾವನೆಯನ್ನು ತಂದು ತಾಯಿಯ ಕೈಗೆ ಕೊಟ್ಟನು. ಆಗ ಆತನ ತಾಯಿ ಮೂರು ಮಕ್ಕಳೊಂದಿಗೆ 'ನುಲೇನೂರಿ'ನಲ್ಲಿ 'ಮಾರುತೀ ಮಂದಿರ'ದ ಬಳಿ ಊರಿನವರು ಹಾಕಿಕೊಟ್ಟ ಒಂದು ಚಿಕ್ಕ ಗುಡಿಸಿಲಿನಲ್ಲಿದ್ದರು. ತಾನು ತಂದ ಹಣದಿಂದ ತಂದೆಯ ಮೊದಲನೇ ವರ್ಷದ ಶ್ರಾದ್ಧವನ್ನು ಮುಗಿಸಿದರು. ತಾಯಿಗೆ ಮಗನನ್ನು ಕಂಡು ಆನಂದಭಾಷ್ಪಗಳು ಉಕ್ಕಿದವು. ನುಲೇನೂರಿನಲ್ಲಿರುವಾಗ ರಂಗಣ್ಣನ ತಾಯಿಗೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗಿಬಂದಿತು. ಆದರೆ ಆಕೆ ಮಹಾನ್ ದೈವಭಕ್ತೆ. ಆಕೆಯ ದೈವಭಕ್ತಿಯೇ ಆಕೆಯನ್ನು ಎಲ್ಲಾ ಕಷ್ಟಗಳಿಂದ ಪಾರುಮಾಡಿತು. ರಂಗಣ್ಣನು ಹಿರೇಗುಂಟನೂರು(ಚಿತ್ರದುರ್ಗ ಜಿಲ್ಲೆ) ಹಾಗು ಸೊಕ್ಕೆ ಎಂಬ ಊರುಗಳಲ್ಲಿ ಒಂದೆರಡು ವರುಷ ಕೆಲಸ ಮಾಡಿದ ನಂತರ ಭರಮಸಾಗರ(ದಾವಣಗೆರೆ ಜಿಲ್ಲೆ)ಕ್ಕೆ ಬಂದು ಅಲ್ಲಿ ಗಣ್ಯರಾದ ಶ್ಯಾನುಭೋಗರೂ,ಆಸ್ತಿವಂತರೂ ಆದ ನಂಜುಡಪ್ಪನೆನ್ನುವರ ಬಳಿ ವರ್ಷಕ್ಕೆ ೫೦ರೂಪಾಯಿ ಸಂಭಾವನೆಯ ಮೇಲೆ ಕೆಲಸಕ್ಕೆ ಸೇರಿದರು. ಕೆಲಸದಲ್ಲಿ ಅತ್ಯಂತ ಪ್ರಾಮಾಣಿಕತೆ,ದಕ್ಷತೆ, ವಿನಯ ,ವಿಧೇಯತೆ , ಮಾತಿನಲ್ಲೂ ನಡೆಯಲ್ಲೂ ಸತ್ಯವಂತಿಕೆ,ಸಹಜ ಸರಳ ಸ್ವಭಾವಗಳು ಅಂತರಂಗದ ಆಧ್ಯಾತ್ಮಿಕ ಪ್ರಗತಿ ಹಾಗು ಬಹಿರಂಗದಲ್ಲಿ ರೈತರ ಸರ್ಕಾರದ ಊರಿನ ಹಿರಿಯ,ಕಿರಿಯ ಜನರ ವೇದಾಧ್ಯಯನ ಸಂಪನ್ನರ ಸಾತ್ವಿಕರ ಮುಮುಕ್ಷುಗಳ ಸ್ನೇಹ,ಮೆಚ್ಚುಗೆ,ಪ್ರೀತಿ ವಿಶ್ವಾಸಗಳ ಪ್ರಗತಿಗೆ ಕಾರಣವಾದವು.ಭರಮಸಾಗರದಲ್ಲೇ ಹೆಚ್ಚಿನ ಆದ್ಯಾತ್ಮಿಕ ಒಲವು ಮೂಡಿತು.ಆ ಊರಿನಲ್ಲಿದ್ದ ಅನೇಕ ಸಾತ್ವಿಕರಲ್ಲಿ ಮಹದೇವ ಶಾಸ್ತ್ರಿಗಳೆಂಬುವವರು ಇದ್ದರು.ಅವರೊಡನೆ ರಂಗಪ್ಪನವರು ಪಂಚದಶಿ, ಮಹಾಭಾರತ,ಅನುಭವಾಮೃತ,ಉಪನಿಷತ್ತುಗಳು,ಙ್ಞಾನಸಿಂಧು ಹೀಗೆ ಅನೇಕ ಗ್ರಂಥಗಳನ್ನು ಹಸಿವು, ನೀರಡಿಕೆ, ನಿದ್ರೆ ಗಳ ಪರಿವಿಲ್ಲದೆ ಅಭ್ಯಾಸ ಮಾಡುತ್ತಿದ್ದರು.

ಚಿತ್ರ:Malenahalli Ashrama (1).jpg
' ರಂಗಪ್ಪನವರು,ಮಾಳೇನಹಳ್ಳಿ'

ಲೆಕ್ಕಬರೆಯಲು ಅಥವಾ ರೈತರಿಗೆ ಸರ್ಕಾರದ ಕೆಲಸ ಮಾಡಿಕೊಡಲು ಬೇರೆ ಊರಿಗೆ ಹೋದಾಗಲೆಲ್ಲಾ ಕೆಲಸ ಮುಗಿಸಿ ೧೫-೨೦ ಮೈಲಿಗಳು ನೆಡೆದು ಊರಿಗೆ ಬರುತ್ತಿದ್ದರು.ಹೀಗೆ ಬರುವಾಗ ದಾರಿಯಲ್ಲಿ ಸಿಗುವ ಮಾರುತೀ ಮಂದಿರಗಳಲ್ಲಿ,ದೇವಾಲಯಗಳಲ್ಲಿ ಬಹಳ ಕಾಲ ಧ್ಯಾನಮಗ್ನರಾಗಿ ಕುಳಿತುಬಿಡುತ್ತಿದ್ದರು. ಧರ್ಮಾನುಸಾರವಾಗಿ ನೆಡೆದು ಜೀವನದ ಅನುಭವಗಳನ್ನು ಇಚ್ಚಾದ್ವೇಷಗಳಿಲ್ಲದೆ ಸ್ವೀಕರಿಸಿ ಆತ್ಮಸಾಕ್ಷಾತ್ಕಾರಕ್ಕಾಗಿ ಹಾತೊರೆಯುತ್ತಿದ್ದರು.ಅವರ ಅಂತರಂಗವನ್ನು ಸಾರಿ ಹೇಳುವ ಘಟನೆಯೊಂದು ಈ ಕಾಲದಲ್ಲಿ ನೆಡೆಯಿತು. ಅವಧೂತರಾದ,ಮಹಾಯೋಗೀಶ್ವರರಾದ ಶಿವನು,ರಾಮನು ಒಂದೇ ರೂಪದಲ್ಲಿ ಅವತರಿಸಿದರೋ ಎಂಬತಿದ್ದ ಮೈಸೂರಿನ ಶಿವರಾಮಶಾಸ್ತ್ರಿಗಳು ಆಗ ಭರಮಸಾಗರಕ್ಕೆ ಬಂದಿದ್ದರು.ಊರಿನ ಜನರನೇಕರು ಅವರ ದರ್ಶನ ಪಡೆಯಲು ಅವರಿದ್ದಲ್ಲಿಗೆ ತೆರಳಿದ್ದರು. ಆಗ ರಂಗಪ್ಪನವರೂ ದರ್ಶನಕ್ಕಾಗಿ ಬಂದರು. ರಂಗಪ್ಪನನ್ನು ಕಂಡಕೂಡಲೇ ಶಾಸ್ತ್ರಿಗಳು ಮೇಲೆದ್ದು ಆನಂದದಿಂದ ನರ್ತಿಸುತ್ತಾ ಬಂದು ಅವರನ್ನು ಬಾಚಿ ತಬ್ಬಿಕೊಂಡು 'ನಾನು ನಿನ್ನನ್ನೇ ಹುಡುಕುತ್ತಿದ್ದೆ.ನಿನಗಾಗಿಯೇ ಬಂದೆ.ನಿನ್ನಲ್ಲಿ ನಾನು ನನ್ನಲ್ಲಿ ನೀನು ತುಂಬಿ ತುಳುಕಾಡುತ್ತಿದ್ದೇವೆ' ಎಂದರು.ಆನಂತರ ಪ್ರಾಪಂಚಿಕರಂತೆ ಕೆಲಕಾಲವಿದ್ದು ದೇಹ ಋಣ ತೀರಿಸಿದ ನಂತರ ಲೋಕೋದ್ಧಾರಕನಾದ ಗುರುವಾಗುವೆ, ನಿನ್ನ ಙ್ಞಾನದ ತೇಜಸ್ಸು ದಿಗಂತದಲ್ಲಿ ಪ್ರಸರಿಸುವುದು, ಎಂದು ಆಶೀರ್ವದಿಸಿದರು.

 
'ರಂಗಪ್ಪನವರು ಹಾಗು ಅವರ ಪತ್ನಿ ಪಾರ್ವತಮ್ಮನವರು'

ರಂಗಪ್ಪನವರಿಗೆ ಇಪ್ಪತ್ನಾಲ್ಕು ವರ್ಷದಲ್ಲಿ ಅಣಜಿಯ ಶಂಕರಪ್ಪನವರ ಮಗಳಾದ ಪಾರ್ವತಮ್ಮನವರೊಡನೆ ವಿವಾಹವಾಯಿತು. ವಿವಾಹವಾದಮೇಲೆ ಹೆಂಡತಿಯನ್ನು ಕರೆದುಕೊಂಡು ಹೋಗಿ ಮನೆಮಾಡಲಿಲ್ಲವೆಂದು ಜನರು ಟೀಕಿಸಿದರು. ಆಗ ರಂಗಪ್ಪನವರು ಆಧ್ಯಾತ್ಮಿಕ ಸಾಧನೆ ಒನ್ದು ಮಟ್ಟಕ್ಕೆ ಬರುವವರೆಗು ಇದಕ್ಕೆ ಗಮನ ಕೊಡುವುದಿಲ್ಲವೆಂದು ಹೇಳಿಬಿಟ್ಟರು.ಒಂದು ವರ್ಷದ ನಂತರ ಭರಮಸಾಗರದಲ್ಲಿ ಆಧ್ಯಾತ್ಮಿಕ ಸಾಧನೆಗೆ ಉತ್ತಮ ಸನ್ನಿವೇಶ ಇದೆಯೆಂದು ಅಲ್ಲೇ ಮನೆಮಾಡಿ ಸಂಸಾರ ಹೂಡಬೇಕೆಂದಿದ್ದರು. ಆದರೆ ತಾಯಿ ಸುಬ್ಬಮ್ಮನವರು ತಾನಿದ್ದ ಊರನ್ನು ಬಿಟ್ಟು ಬರುವುದಿಲ್ಲ ಎಂದರು.ಹಾಗೂ ಸರ್ಕಾರವು ಇವರಿಗೆ ನುಲೇನೂರಿನ ಶ್ಯಾನುಭೋಗಿಕೆಯನ್ನು ವಹಿಸಿತು.ತಾಯಿಯ ಇಚ್ಚೆಯಂತೆ ,ಸರ್ಕಾರದ ಆದೇಶದಂತೆ ಭರಮಸಾಗರದಲ್ಲಿ ತಾನು ಪಡೆದಿದ್ದ ಅಮೂಲ್ಯವಾದ ಆಧ್ಯಾತ್ಮಿಕಧನದೊಂದಿಗೆ ನುಲೇನೂರಿಗೆ ಬಂದರು.

ಗೃಹಸ್ಥಾಶ್ರಮ

ಬದಲಾಯಿಸಿ

ರಂಗಪ್ಪನವರು ತಮ್ಮ ಅಂತರಂಗದ ಸಾಧನೆಯ ಜೊತೆ ಲೌಕಿಕ ವ್ಯವಹಾರಗಳಲ್ಲಿಯೂ ಅಸ್ಟೇ ದಕ್ಷರಾಗಿದ್ದರು.ಅವರು ತಮಗೆ ಬಾಲ್ಯದಲ್ಲಿ ಬಂದಿದ್ದ ಅತ್ಯಂತ ಬಡತನವನ್ನು ಅವರ ಧರ್ಮಾನುಸಾರವಾದ,ಸ್ವಂತ ಪರಿಶ್ರಮದ ದುಡಿಮೆಯಿಂದ ನಿವಾರಿಸಿಕೊಂಡರು.ತಾವೇ ಸ್ವತಃ ನೇಗಿಲು ಹಿಡಿದು ವ್ಯವಸಾಯ ಮಾಡುತ್ತಿದ್ದರು. ಚಿತ್ರದುರ್ಗಾ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನೆಲಗಡಲೆಯ ಬೆಳೆಯನ್ನು ತೆಗೆದರು. ಮಳಿಗೆಗಳನ್ನು ಆರಂಭಿಸಿ ಆಹಾರ ಧಾನ್ಯಗಳು,ಕಂಬಳಿಗಳು ಮುಂತಾದವುಗಳ ವ್ಯಾಪಾರ ಮಾಡಿದರು.ಅವರ ಕಷ್ಟಕ್ಕಾಗದ ಅನೇಕರ ಕಷ್ಟಕ್ಕೆ ಸಹಾಯ ಮಾಡಿದರು.ಇಷ್ಟಲ್ಲದೇ ಊರಿನ ಶಾಂತಿ ಪಾಲನೆಯ ಜವಾಬ್ದಾರಿಯನ್ನು ಸರ್ಕಾರವು ಅವರಿಗೊಹಿಸಿತು.ಒಮ್ಮೆ ಊರಿನ ಎರಡು ಪಂಗಡಗಳಲ್ಲಿ ಜಗಳವಾಗಿ ಒಂದು ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಇನ್ನೊಂದು ಪಂಗಡದವರು ರಾತ್ರಿ ಕೊಲೆ ಮಾಡಲು ಯತ್ನಿಸಿದರು.ಇದನ್ನು ತಿಳಿದ ರಂಗಪ್ಪನವರು ಆ ವ್ಯಕ್ತಿಯ ಜಾಗದಲ್ಲಿ ತಾವು ಮಲಗಿ ದರು.ಕೊಲೆಮಾಡಲೆಂದು ಬಂದವರು ಹೊದಿಕೆಯನ್ನು ತೆಗೆದು ನೋಡಬೇಕೋ ಬೇಡವೋ ಎಂದು ಪಿಸುಗುಟ್ಟುತ್ತಿದ್ದಾಗ ಹೊದಿಕೆಯನ್ನು ತೆಗೆದು ಯಾರಪ್ಪಾನೀವು ಎಂದರು.ಆಗ ಆ ಜನರು ತರತರ ನಡುಗಿ ನಾವು ಈ ದಿನ ಎಷ್ಟು ಪಾಪದ ಕೆಲಸಮಾಡಲು ಹೊರಟಿದ್ದೆವು,ನಮ್ಮ ಮೇಲೆ ದಯೆತೋರಿ ನಮ್ಮ ಕಣ್ತೆರೆಸಿ ಉದ್ಧಾರ ಮಾಡಿದಿರಿ ಎಂದು ರಂಗಪ್ಪನವರ ಪಾದದ ಮೇಲೆ ಬಿದ್ದು ಕಣ್ಣೀರಿಟ್ಟರು. ಸಾಧು, ಸಂತರನೇಕರು ಅವರ ಮನೆಗೆ ಬರುತ್ತಿದ್ದರು.ಯಾರೇ ಬಂದರು ಅವರನ್ನು ಸತ್ಕರಿಸಿ ಮನೆಯಲ್ಲುಳಿಸಿಕೊಂಡು ಅವರ ಮನಸ್ಸಿಗನುಗುಣವಾಗಿ ಅತಿಥಿಸೇವೆ ಮಾಡುತ್ತಿದ್ದರು.ಅವರ ಪತ್ನಿಯಾದ ಪಾರ್ವತಮ್ಮನವರೂ ಅತ್ಯಂತ ದೈವಭಕ್ತೆಯಾಗಿದ್ದರು.ಸದಾ ತನ್ನ ಪತಿಯು ಅನುಸರಿಸುವ ಮಾರ್ಗದಲ್ಲೇ ನೆಡೆಯುತ್ತಿದ್ದರು.ಕಿರಿಯರಲ್ಲಿ ಪ್ರೀತಿ,ಗುರುಹಿರಿಯರಲ್ಲಿ,ಅತಿಥಿಗಳಲ್ಲಿ ಭಕ್ತಿ,ಗೌರವ ಹೊಂದಿದ್ದರು.ರಂಗಪ್ಪನವರು ಊರಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ,ಸೇವೆಗಳು ಸರಿಯಾಗಿ ನೆಡೆಯುವಂತೆ ವ್ಯವಸ್ಥೆ ಮಾಡಿದರು.ಇಷ್ಟೆಲ್ಲಾ ಕೆಲಸಕಾರ್ಯಗಳ ಮಧ್ಯೆಯೂ ಬೆಳಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಮಾಳೇನಹಳ್ಳಿಗೆ ಹೋಗಿ ಅಲ್ಲಿ ರಂಗನಾಥಸ್ವಾಮಿ ದೇವಾಲಯದಲ್ಲಿ ಧ್ಯಾನಮಗ್ನರಾಗಿರುತ್ತಿದ್ದರು.ಸೂರ್ಯೌದಯಕ್ಕೆ ಮುನ್ನ ಹಿಂತಿರುಗುತ್ತಿದ್ದರಿಂದ ಇದು ಯಾರಿಗೂ ತಿಳಿದಿರಲಿಲ್ಲ. ಒಂದು ದಿನ ಹೀಗೆ ಧ್ಯಾನಮಗ್ನರಾದಾಗ ದಿವ್ಯಸುಂದರನಾದ,ಮೇಘಶ್ಯಾಮಲವರ್ಣನಾದ ,ಸಹಸ್ರಸೂರ್ಯ ಪ್ರಕಾಶನಾದ ,ತನ್ನ ನಾಲ್ಕು ಕೈಗಳಲ್ಲಿ ಶಂಕು,ಚಕ್ರ,ಗಧಾ ಪದ್ಮ ಧರನಾದ ,ವನಮಾಲಾ ಧಾರಿಯಾದ ಮಂದಹಾಸವನ್ನು ಬೀರುತ್ತಿದ್ದ ರಂಗನಾಥ ಸ್ವಾಮಿಯು ದರ್ಶನವನ್ನಿತ್ತನು.ಆ ದಿನ ಸೂರ್ಯೋದಯಕ್ಕೆ ಮುನ್ನ ಬಹಿರ್ಮುಖರಾಗದೆ ಸ್ವಾಮಿಯನ್ನು ನೋಡುತ್ತಾಕುಳಿತುಬಿಟ್ಟರು.ಆ ಹೊತ್ತಿನಲ್ಲಿ ಸ್ವಾಮಿಯ ಅರ್ಚಕನು ನಿತ್ಯ ಪೂಜೆಗೆಂದು ಬಂದನು.ರಂಗಪ್ಪನವರು ಕುಳಿತಿದ್ದನ್ನು ನೋಡಿ ಬಹಳ ಹೊತ್ತು ಕಾದನು.ಎಸ್ಟುಹೊತ್ತಾದರೂ ರಂಗಪ್ಪನವರು ಏಳಲಿಲ್ಲ.ಪೂಜೆಗೆಂದು ಗರ್ಭಗುಡಿಯೊಳಗೆ ಪ್ರವೇಶಿಸಲು ಹೋದರೆ ಕರಿನಾಗರಹಾವೊಂದು ಅವನತ್ತ ಹೆಡೆಮಾಡಿ ಬುಸುಗುಟ್ಟಿತು.ಅವನು ಭಯದಿಂದ ಆಚೆ ಕಾದು ಕುಳಿತನು. ಮಧ್ಯಾಹ್ನ ಒಂದು ಘಂಟೆಯ ವೇಳೆಗೆ ಗರ್ಭಗುಡಿಯೊಳಗಿಂದ ದಿವ್ಯವಾದ ಗಾನವೊಂದನ್ನು ಕೇಳಿ ಒಳಗೆ ಹೋಗಿ ನೋಡಿದನು.ರಂಗಪ್ಪನವರು ಸ್ವಾಮಿಯ ಎದುರು ನಿಂತು "ಕಾಯಬೇಕೆಲೋ ರಂಗ ಕಾಯಬೇಕೆಲೋ,ಮಾಯಕಾರಿ ರಂಗ ನೀನು......"ಎಂದು ಗದ್ಗದವಾದ ಕಂಟದಿಂದ ಆನಂದಾಶ್ರುಗಳನ್ನು ಸುರಿಸುತ್ತಾ ಹಾಡುತ್ತಿದ್ದರು.ಅರ್ಚಕನು ರಂಗಪ್ಪನವರಿಗೆ ನಮಸ್ಕರಿಸಿ "ಸ್ವಾಮಿ ನೀನು ಮಾತನಾಡುವ ರಂಗಪ್ಪ,ಕಾಪಾಡು"ಎಂದು ಕೇಳಿಕೊಂಡನು.ನನ್ನಿಂದ ನಿನ್ನ ಪೂಜೆಗೆ ಅಡ್ಡಿಯಾಯಿತೇ?ಎಂದರು.ಅದಕ್ಕೆ ಅರ್ಚಕನು "ಸ್ವಾಮೀ,ನೀನು ಮಾಡಿದ ಪೂಜೆಗಿಂತ ಹೆಚ್ಚಿನ ಪೂಜೆಇದೆಯೇ"?ಎಂದನು.ಅಂದಿನಿಂದ ಸದಾ ರಂಗನಾಥಸ್ವಾಮಿಯು ಅವರಿಗೆ ಪ್ರತ್ಯಕ್ಷನಾಗಿರುತ್ತಿದ್ದನು.ಕೂತಲ್ಲಿ,ಮಲಗಿದಲ್ಲಿ,ಓಡಾಡುತ್ತಾ,ಒಮ್ಮೆ ಹೃದಯದಲ್ಲಿ,ಒಮ್ಮೆ ಭ್ರೂಮಧ್ಯದಲ್ಲಿ,ಒಮ್ಮೆ ಎದುರು,ಒಮ್ಮೆ ಎಲ್ಲೆಡೆಗಳಲ್ಲಿ ಸ್ವಾಮಿಯ ದರ್ಶನವಾಗುತ್ತಿತ್ತು. ರಂಗಪ್ಪನವರು ತಮ್ಮ ವೃತ್ತಿಯಲ್ಲಿ,ವ್ಯವಹಾರದಲ್ಲಿ,ಆಧ್ಯಾತ್ಮಸಾಧನೆಯಲ್ಲಿ ಎಸ್ಟೇ ಮುಂದುವರೆದರೂ ಮೇಲುನೋಟಕ್ಕೆ ಸಾಮಾನ್ಯರಂತೆಯೇ ಇರುತ್ತಿದ್ದರು.ಆದರೆ ಅಂತರಂಗದಲ್ಲಿ ಭಕ್ತಿಯು ,ನಿರಹಂಕಾರವು,ಆತ್ಮವಿಚಾರವು ಸದಾ ತುಂಬಿ ತುಳುಕಾಡುತ್ತಿತ್ತು.ಅವರು ಸಗುಣ,ನಿರ್ಗುಣವೆಂಬ ಎರುಡೂ ಉಪಾಸನೆ ಯನ್ನೂ ಮಾಡುತ್ತಿದ್ದರು.ಸದಾ ಜಾಗ್ರತರಾಗಿರುತ್ತಿದ್ದರು.

ಗುರು ಅನುಗ್ರಹ

ಬದಲಾಯಿಸಿ

೧೯೧೯ರ ಧನುರ್ಮಾಸದಲ್ಲಿ ಅಗಡಿ ಶೇಷಾಚಲ ಸದ್ಗುರುಗಳ ಸೇವಾಕಾರ್ಯಕ್ಕಾಗಿ ಅವರ ಶಿಷ್ಯರಾದ ಶ್ರೀ ನಾರಾಯಣ ಭಗವಾನರು ನುಲೇನೂರಿಗೆ ಬಂದಿದ್ದರು.ಅವರು ರಂಗಪ್ಪನವರ ಸತ್ಕಾರ ಸ್ವೀಕರಿಸಿ ಅವರಿಗೆ ಆತ್ಮವಿಚಾರವನ್ನು ಹೇಳುತ್ತಿದ್ದರು.ರಂಗಪ್ಪನವರು ತದೇಕಚಿತ್ತರಾಗಿ ಕೇಳುತ್ತಿದ್ದರು.ಆಗ ಅವರು "ಗುರುಕೃಪೆಯು ಉತ್ತಮಾಧಿಕಾರಿಗೆ ದೊರೆಯುತ್ತದೆ.ರಂಗಪ್ಪನವರೇ ನೀವು ಉತ್ತಮಾಧಿಕಾರಿಗಳು . ನಿಮಗೆ ಗುರುಕೃಪೆಯಾಗುವ ಕಾಲ ಪಕ್ವವಾಗುತ್ತಾ ಬಂದಿದೆ" ಎಂದರು.ರಂಗಪ್ಪನವರು ತಕ್ಷಣ ಅವರ ಕಾಲಿಗೆ ನಮಸ್ಕರಿಸಿ ಕೃಪೆ ಮಾಡಲು ಕೋರಿದರು.ನಾರಾಯಣ ಭಗವಾನರು ನಕ್ಕು "ಮಹಾರಾಜ್ ಈ ಘಟಕ್ಕೆ ನಿಮ್ಮ ಗುರುವಾಗುವ ಯೋಗವಿಲ್ಲ.ಚಿದಂಬರನ ಇಚ್ಛಾಕ್ಕೆ ಬಂದಿದೆ ;ಅಂದ ಮೇಲೆ ಅವನು ಸಿಗುವುದು ಎಸ್ಟು ಹೊತ್ತು.ಅವನೇ ನಿಮ್ಮನ್ನು ಹುಡುಕಿಕೊಂಡು ಬರುವನು".ಎಂದರು. ಅಂದಿನಿಂದ ಗುರುವನ್ನು ಪಡೆಯುವ ಹಂಬಲ ಬಹಳವಾಗಿ ಬೆಳೆಯಿತು.ಒಂದಾನೊಂದು ದಿನ ಸ್ವಪ್ನದಲ್ಲಿ ರಂಗನಾಥ ಸ್ವಾಮಿಯು ಪ್ರಕಟವಾಗಿ "ನಿನಗೆ ಏನು ಬೇಕು" ಎಂದು ಕೇಳಲು ರಂಗಪ್ಪನವರು "ನನಗೆ ಮುಕ್ತಿ ಬೇಕು" ಎಂದರು. ಸ್ವಾಮಿಯು "ಮುಕ್ತಿ ಮಾರ್ಗವನ್ನು ಸದ್ಗುರುವು ತೋರಿಸುತ್ತಾನೆ.ಅಂತಹ ಗುರುವನ್ನು ಪಡೆಯುವ ಸಂಕಲ್ಪಮಾಡಿ ಒಂದು ಮಂಡಲಕಾಲ(೪೮ ದಿನ) ಮಾರುತಿ ಉಪಾಸನೆಯನ್ನು ಮಾಡು" ಎಂದು ಅಪ್ಪಣೆ ಕೊಟ್ಟನು. ಅದರಂತೆ ರಂಗಪ್ಪನವರು ದೇವರಮನೆಯ ಗೋಡೆಯಮೇಲೆ ಶ್ರೀಗಂಧದಿಂದ ಮಾರುತಿಯ ಚಿತ್ರ ಬರೆದು ದಿನಕ್ಕೆ ಒಂದು ಸುತ್ತು ಬಾಲವನ್ನು ಹೆಚ್ಚಿಸುತ್ತಾ ಪೂಜಿಸುತ್ತಾ ಹೋದರು.ಹೀಗೆ ಒಂದು ಮಂಡಲ ಉಪಾಸನೆ ಮಾಡಿದರು.ನಲವತ್ತೆಂಟನೇ ದಿನ ರಾತ್ರಿ ಮಾರುತಿಯು ಸ್ವಪ್ನದಲ್ಲಿ ಕಾಣಿಸಿಕೊಂಡು ಶ್ರೀಗುರುವು ಬರುವನೆಂದು ಅಭಯವಿತ್ತನು.ಮರುದಿನ ಉಪಾಸನೆಯ ಮಂಗಳಮಾಡಲು ಸಂತರ್ಪಣೆ ಏರ್ಪಡಿಸಲಾಗಿತ್ತು.ಅನೇಕ ಜನರು ಬಂದು ಕುಳಿತಿದ್ದರು.ಪೂಜೆ, ನೈವೇದ್ಯಗಳಾದಮೇಲೆ ಎಲ್ಲರಿಗೂ ಭೋಜನಕ್ಕೆ ಎಲೆ ಹಾಕಿದರು.ಇನ್ನೇನು ಭೋಜನ ಪ್ರಾರಂಭವಾಗುವ ಹೊತ್ತಿಗೆ ಸರಿಯಾಗಿ ಹೊರಗಡೆ ಚಿದಂಬರ ಭಜನೆಯು ಕೇಳಿಸಿತು. ರಂಗಪ್ಪನವರು ಹೊರಗೆ ಹೋಗಿ ನೋಡಲು ಒಂಟಿ ಎತ್ತಿನ ಬಂಡಿಯ ಮೇಲೆ ಸಾಧುಗಳೊಬ್ಬರು ಕುಳಿತಿದ್ದರು.ಅವರನ್ನು ಹಿಂಬಾಲಿಸಿ ಅವರ ಶಿಶ್ಯರು ನಿಂತಿದ್ದರು.ಆ ಸಾಧುಗಳು "ಚಿದಂಬರನು ತನ್ನ ಮನೆಯನ್ನು ಹುಡುಕಿಕೊಂಡು ಬಂದೇ ಬಿಟ್ಟ" ಎಂದರು. ರಂಗಪ್ಪನವರು ಸಾಕ್ಷಾತ್ ಸದ್ಗುರುವೇ ಬಂದನೆಂದು ಸಂಭ್ರಮದಿಂದ ಅವರನ್ನು ಮನೆಗೆ ಕರೆದುಕೊಂಡು ಬಂದು ಪಾದಪೂಜೆ ಸಲ್ಲಿಸಿ ಅವರಿಗೆ ಭಿಕ್ಷಾವಂದನೆ ಸಲ್ಲಿಸಿ ದನಂತರ ಎಲ್ಲರಿಗೂ ಸಂತರ್ಪಣೆಯಾಯಿತು. ಆ ಸಾಧುಗಳೇ ಅಗಡಿಯ ಶೇಶಾಚಲ ಸದ್ಗುರುಗಳ ಶಿಶ್ಯರಾದ ಶ್ರೀ. ಶ್ರೀ. ಶಂಕರ ಭಗವಾನರು.ಅವರು ರಂಗಪ್ಪನವರಿಗೆ ಆಧ್ಯಾತ್ಮ ಬೋಧೆಮಾಡಿದರು.ರಂಗಪ್ಪನವರು ಮಂತ್ರೋಪದೇಶ ಮಾಡಬೇಕೆಂದು ಕೋರಿದರು. ಮನೆಯ ಹಿರಿಯರಾದ ರಂಗಪ್ಪನವರ ತಾಯಿಯಾದ ಸುಬ್ಬಮ್ಮನವರಿಗೆ ಮೊದಲು ಮಂತ್ರೋಪದೇಶ ಮಾಡಲು ಕರೆಯಿಸಿದರು.ಮುಪ್ಪಿನಿಂದಾಗಿ ಕಣ್ಣು ಸರಿಯಾಗಿ ಕಾಣದ ಕಾರಣದಿಂದಾಗಿ ತಾವೇ ಪೂಜಾಸಾಮಗ್ರಿಗಳನ್ನು ಕೈಗೆ ಕೊಟ್ಟು ಪಾದಪೂಜೆ ಮಾಡಿಸಿಕೊಂಡರು. ಯಾವ ಮಂತ್ರ ನಿನಗೆ ಇಸ್ಟವಮ್ಮ ಎಂದು ಕೇಳಲು ಅವರು "ರಾಮನನ್ನು ಪೂಜಿಸುವಾಗ ಅವನೇ ಹೆಚ್ಚು.ಶಿವನನ್ನು ಪೂಜಿಸುವಾಗ ಅವನೇ ಹೆಚ್ಚು.ಶಿವನೂ ರಾಮನೂ ಆಗಿ ಭಕ್ತರನ್ನುದ್ಧರಿಸುವ ಗುರುನಾಥನೇ ಹೆಚ್ಚೆಂದು ಅವನು ಕೊಟ್ಟ ಮಂತ್ರವೇ ತನಗಿಷ್ಟವೆಂದು " ಹೇಳಿದರು. ಇದನ್ನು ಕೇಳಿ ಶಂಕರಭಗವಾನರು "ಅವ್ವ ,ನೀನು ಇಂತಹ ಮಹಾಮಹಿಮಳಾದ್ದರಿಂದಲೇ ಚಿದಂಬರನು ನಿನ್ನ ಉದರದಲ್ಲಿ ಜನಿಸಿರುವನು. ನೀನು ಮಹಾವೃಕ್ಷದ ಬೇರು."ಎಂದು ನುಡಿದರು. ಶಂಕರ ಭಗವಾನರು ದೇವಿಯ ಉಪಾಸಕರು.ಅವರು ರಂಗಪ್ಪನವರಿಗೆ ದೇವೀ ಉಪಾಸನೆಯನ್ನು ಭೋದಿಸಿದರು.ಕೀರ್ತನೆಗಳನ್ನು ರಚಿಸಬಾರದೆಂದು ನಿರ್ದೇಶಿಸಿದರು. ಗುರುವಿನ ಚೈತನ್ಯಮೂರ್ತಿಯನ್ನು ಧ್ಯಾನಿಸುವಂತೆ ಬೋಧಿಸಿದರು. ಶಂಕರಭಗವಾನರು ೧೯೨೫ರಲ್ಲಿ ತಿಪ್ಪಾಪುರದಲ್ಲಿ ಲಕ್ಷಬ್ರಾಹ್ಮಣ ಸಂತರ್ಪಣೆಯನ್ನಾರಂಭಿಸಿದ್ದರು. ಆ ಮಹತ್ಕಾರ್ಯಕ್ಕಾಗಿ ಸೇವಾಮಾಡಲು ದೇಶಸಂಚಾರ ಮಾಡುತ್ತಾ ನುಲೇನೂರಿಗೆ ಬಂದರು.ಅವರು ನುಲೇನೂರಿನಲ್ಲಿ ಆಗ ೫ದಿನಗಳಕಾಲ ಇದ್ದು ರಂಗಪ್ಪನವರನ್ನು ಒಂದು ವರ್ಷ ತಮ್ಮೊಡನೆ ಇರಲು ಆದೇಶಿಸಿದರು.ಅದರಂತೆ ರಂಗಪ್ಪನವರು ೧೯೨೬ ರಲ್ಲಿ ತಿಪ್ಪಾಪುರಕ್ಕೆ ಹೋದರು.ಶಂಕರಭಗವಾನರು ರಂಗಪ್ಪನವರಿಂದ ಯಾವುದೇ ಸಗುಣ ಸೇವೆ ಸ್ವೀಕರಿಸುತ್ತಿರಲಿಲ್ಲ. ಅನೇಕರು ಭಗವಾನರ ಬೊಧೆಗಾಗಿ ಕಾಯುತ್ತಿದ್ದರು. ಅವರ ಬದಲಿಗೆ ಆ ಕೆಲಸವನ್ನು ರಂಗಪ್ಪನವರಿಗೆ ಮಾಡಲು ಹೇಳಿದರು. ರಂಗಪ್ಪನವರು ನಾನು ಅಲ್ಪಙ್ಞ, ನಾನೇನು ಹೇಳಬಲ್ಲೆ ಎನ್ನಲು ಭಗವಾನರು ಗುರುನಾಥನೇ ನಿಮ್ಮಲ್ಲಿದ್ದು ನುಡಿಸುತ್ತಾನೆ ಎಂದರು.ಪ್ರತಿನಿತ್ಯವೂ ಬೆಳಗ್ಗೆ ಭಜನೆ,ಆರತಿಗಳಾಗಿ ಸ್ನಾನ,ಸಂಧ್ಯಾದಿಗಳಾದ ಮೇಲೆ ಶ್ರೀಗುರುನಾಥನ ಸನ್ನಿಧಿಯಲ್ಲಿ ಪ್ರವಚನ ಮಾಡುತ್ತಿದ್ದರು.ಜನರು ಭಕ್ತಿಯಿಂದ ನಮಸ್ಕರಿಸಲು ಬಂದರೆ ನಾನು ಹೇಳಿದ ಒಂದು ಪದವೂ ನನ್ನದಲ್ಲ,ಗುರುವಿವನದು.ಅವನಿಗೇ ನಮಸ್ಕರಿಸಿ ಎಂದು ಹೇಳುತ್ತಿದ್ದರು.ಒಂದೇ ಹೊತ್ತು ಪ್ರಸಾದ ಸ್ವೀಕರಿಸುತ್ತಿದ್ದರು. ರಾತ್ರಿ ಭಜನೆ ಆರತಿಗಳಾದ ಮೇಲೆ ಶಂಕರಭಗವಾನರೊಂದಿಗೆ ಮಠದಿಂದ ಸ್ವಲ್ಪದೂರದಲ್ಲಿರುವ ಗುರುಪಾದುಕಾ ಮಂಟಪದ ಬಳಿ ಹೋಗುತ್ತಿದ್ದರು.ಅಲ್ಲಿ ಬೇರೆಯಾರೂ ಬರದಂತೆ ಭಗವಾನರು ನಿರ್ದೇಶಿಸಿದ್ದರು.ಶಂಕರಭಗವಾನರು ಆ ಕಾಲದಲ್ಲಿ ತಮ್ಮ ಶಿಶ್ಯನಾದ ರಂಗಪ್ಪನವರಿಗೆ ತಮ್ಮ ಆಧ್ಯಾತ್ಮ ಧನವನ್ನು ನೀಡಿ ದರು.ರಂಗಪ್ಪನವರಿಗೆ ಊರಿಗೆ ಹೊರಡಲು ಹೇಳಿದರು.ಗುರುಗಳ ಆದೇಶದಂತೆ ರಂಗಪ್ಪನವರು ಊರಿಗೆ ಹೊರಡಲು ಸಿದ್ದರಾಗಿ ನಮಸ್ಕರಿಸಲು ಶಂಕರಭಗವಾನರು "ನಿಮ್ಮಲ್ಲಿ ಎಲ್ಲಾ ಸಿದ್ಧವಾಗಿದೆ.ಆದರೆ ಗುರುಕೃಪೆಗೆ ಇನ್ನೂ ಕೆಲ ಕಾಲ ನೀವು ಕಾಯಬೇಕು.ಅಲ್ಲಿವರೆಗೆ ಈ ಘಟ(ದೇಹ) ಇರುವುದಿಲ್ಲ.ಯಾವ ದೇಹದಲ್ಲಿ ಸೂರ್ಯಮಂಡಲ ಮಧ್ಯಸ್ತನಾದ ದತ್ತಾತ್ರೇಯನ ದರ್ಶನವಾಗುತ್ತದೋ, ಆ ಕಾಲಕ್ಕೆ ನಾವು ನಿಮಗೆ ತಿಳಿಸೋ ಮಾತನ್ನು ಯಾರು ಅನ್ನುತ್ತಾರೋ ಅವರೇ ನಾವು ಎಂದು ತಿಳಿಯಿರಿ. ಆಗ ನಿಮಗೆ ಶಂಕರಲಿಂಗನೆಂಬ ಹೆಸರು ಬರುತ್ತದೆ. ನೀವು ಚಿದಂಬರನ ಆಟ (ಲೀಲೆ ಅಥವಾ ಲೋಕೋದ್ಧಾರ) ಆಡೋದು ಬಹಳ ಇದೆ. ಅಡ್ಲಿಕೇ ಬಂದಿರುವಿರಿ" ಎಂದು ಆಶೀರ್ವದಿಸಿ ತಾವು ಬೇರೆ ರೂಪದಲ್ಲಿ ಕಂಡಾಗ ಹೇಳುವ ಮಾತನ್ನು ತಿಳಿಸಿದರು. ಅದೇ ವರ್ಷದಲ್ಲಿ ಶಂಕರಭಗವಾನರು ಮಹಾಸಮಾಧಿಸ್ತರಾದರು. ರಂಗಪ್ಪನವರು ಹೆಚ್ಚುಹೆಚ್ಚು ಅಂತರ್ಮುಖಿಗಳಾದರು. ಕಣ್ಣುತೆರೆದಿದ್ದರೂ ಸುತ್ತಲಿನದೇನು ಕಾಣುತ್ತಿರಲಿಲ್ಲ.ಸ್ನಾನ ಮಾಡಲು ಹೋದರೆ ಬರಿಯ ಬಿಸಿನೀರನ್ನು ಒಂದೇ ತೋಳಿನ ಮೇಲೆ ಸುರಿದುಕೊಂಡು ಬರುತ್ತಿದ್ದರು.ತುಂಬು ಕುಟುಂಬದಲ್ಲಿದ್ದ ಅವರು ಮನೆಯಲ್ಲಿ ಮಕ್ಕಳು ಮೈಮೇಲೆ ಹತ್ತಿ ತುಳಿದರೂ ಅವರಿಗೆ ಬಾಹ್ಯ ಪ್ರಘ್ನೆಯೇ ಇರುತ್ತಿರಲಿಲ್ಲ. ಯಾವಾಗಲೂ ಬ್ರಹ್ಮಾನಂದದಲ್ಲಿ ತಲ್ಲೀನರಾಗಿರುತ್ತಿದ್ದರು.

ಉದ್ಧವ ಚಿದ್ಘನರು ತಪಸ್ಸನ್ನು ಧಾರೆಯೆರೆದದ್ದು

ಬದಲಾಯಿಸಿ

ಗೋಂದಾವಲೆಯ ಬ್ರಹ್ಮಚೈತನ್ಯ ಮಹಾರಾಜರ ಶಿಶ್ಯರಾದ ಉದ್ಧವ ಚಿದ್ಘನರೆಂಬುವವರು ನುಲೇನೂರಿಗೆ ಬಂದು ರಂಗಪ್ಪನವರ ಮನೆಯಲ್ಲಿಳಿದುಕೊಂಡಿದ್ದರು.ಅವರು ತಮ್ಮ ಗುರುಗಳಿಂದ ಆಗ್ರಹಪೂರ್ವಕವಾಗಿ ಅವರ ಟೋಪಿಯನ್ನು ಪಡೆದುಕೊಂಡಿದ್ದರು.ಆಗ ಅವರ ಗುರುಗಳು ಈ ಟೋಪಿಯು ಬೇರೊಬ್ಬರ ಸ್ವತ್ತು.ಸಕಾಲದಲ್ಲಿ ಆ ಮಹಾತ್ಮರ ಸಂಗಮವಾಗುವುದು.ಆಗ ಈ ಟೋಪಿಯೋಡನೆ ನಿನ್ನ ಸಕಲ ತಪಸ್ಸನ್ನೂ ಧಾರೆಎರೆಯ ಬೇಕಾಗಿ ಆಙ್ಞಾಪಿಸಿದ್ದರು.ಅವರು ನುಲೇನೂರಿಗೆ ಬಂದಾಗ ಅವರ ದೇಹಾರೋಗ್ಯ ಕೆಟ್ಟಿತು.ರಂಗಪ್ಪನವರು ಭಕ್ತಿಶ್ರದ್ಧೆಗಳಿಂದ ಬಹುವಾಗಿ ಶುಶ್ರೂಷೆ ಮಾಡುತ್ತಿದ್ದರೂ ಅವರನ್ನು ಪರೀಕ್ಷಿಸಲು ಬಹುವಾಗಿ ನಿಂದನೆ,ಆಕ್ಷೇಪನೆ ಮಾಡುತ್ತಿದ್ದರು.ಎಸ್ಟೇ ಆಕ್ಷೇಪಿಸಿದರೂ ಎದುರಾಡದೇ ಅಸ್ಟೇ ಶ್ರದ್ಧೆಭಕ್ತಿಗಳಿಂದ ಸೇವೆಮಾಡಿದ ರಂಗಪ್ಪನವರನ್ನು ಕಂಡು ನೀವೇ ನಮ್ಮ ಗುರುಗಳು ಹೇಳಿದ ಯೋಗ್ಯ ವ್ಯಕ್ತಿಗಳು ಎಂದು ನುಡಿದು ಅತ್ಯಂತಪ್ರೀತಿಯಿಂದ ಅವರು ತಂದಿದ್ದ ಬ್ರಹ್ಮಚೈತನ್ಯರ ಟೋಪಿಯನ್ನೂ ಹಾಗು ಅವರ ಸಕಲ ತಪಸ್ಸನ್ನೂ ರಂಗಪ್ಪನವರಿಗೆ ಧಾರೆಎರೆದರು.

ಸದ್ಗುರು ಕೃಪೆ

ಬದಲಾಯಿಸಿ

ರಂಗಪ್ಪನವರು ತಮ್ಮ ಗುರುಗಳ ಇನ್ನೊಂದು ರೂಪದ ದರ್ಶನ ಹಾಗು ಕೃಪೆಗಾಗಿ ಕಾಯುತ್ತಿದ್ದರು.ಆ ಕಾಲ ಒದಗಿ ಬಂದಿತು.ಒಮ್ಮೆ ಹೊಳಲ್ಕೆರೆಗೆ ಯಾರೋ ಮಹಾತ್ಮರು ಬಂದಿರುವುದನ್ನು ತಿಳಿದು ಅವರ ದರ್ಶನಕ್ಕಾಗಿ ರಂಗಪ್ಪನವರು ಹೋದರು.ಆ ಮಹಾತ್ಮರನ್ನು ಕಂಡೋಡನೇ ಅವರಲ್ಲಿ ಸೂರ್ಯಮಂಡಲ ಮಧ್ಯಸ್ತನಾದ ದತ್ತಾತ್ರೇಯನ ದರ್ಶನವಾಗಿ ಶಂಕರಭಗವಾನರು ತಿಳಿಸಿದ ದಿವ್ಯವಾಣಿಯು ಅವರ ಮುಖಕಮಲದಿಂದ ಹೊರಟಿತು.ಆ ಮಹಾತ್ಮರೇ ಬನವಾಸಿಯ ಶ್ರೀ ಸಹಜಾನಂದರ ಶಿಶ್ಯರಾದ ಶ್ರೀ ದತ್ತರಾಜ ಯೋಗೀಂದ್ರರು. ಸದಾಶಿವನಂತೆಯೂ ಕರುಣಾಮೂರ್ತಿಯಾದ ಅವರನ್ನು ಕಂಡು ತನ್ನ ಗುರುವು ತನಗಿತ್ತ ವಚನವನ್ನು ಪಾಲಿಸಲು ಈ ರೂಪದಲ್ಲಿ ಬಂದಿರುವನ್ನು ನೆನೆದು ರಂಗಪ್ಪನವರ ಅಂತರಂಗವು ಆನಂದದಲ್ಲಿ ತೇಲಾಡಿತು. ಮಹಾತ್ಮರು ರಂಗಪ್ಪನವರ ಅಂತರಂಗವನ್ನು ತಮ್ಮ ದಿವ್ಯದೃಷ್ಟಿಯಿಂದ ನೋಡಿ "ಆಹಾ,ಎಂತಹ ವ್ಯಕ್ತಿ,ವಿಶ್ವಪ್ರೇಮದ ಸಾಕಾರ ಮೂರ್ತಿ.ಅನೇಕ ವರ್ಷಗಳ ಕಾಲ ತಪಸ್ಸುಮಾಡಿ ಗುರುವಿನ ಕಠಿಣ ಪರೀಕ್ಷೆಗಳಿಗೊಳಗಾಗಿ ನಾವು ಙ್ಞಾನದ ಪರಾಕಾಷ್ಟೆಯಲ್ಲಿದ್ದರೂ ಪ್ರೇಮವನ್ನು ಜಗತ್ಕಲ್ಯಾಣಕ್ಕಾಗಿ ಸಹಜಸಮರಸ ಮಾಡಿಕೊಂಡೆವು.ಈತನು ಸಹಜಪ್ರೇಮದಿಂದಲೇ ಯಾವ ಶ್ರಮವೂ ಇಲ್ಲದೆ ನಿರಾಯಾಸವಾಗಿ ನಿರ್ವಿಕಲ್ಪವನ್ನೂ ,ತುರೀಯವನ್ನೂ,ಬ್ರಹ್ಮಾನುಭವವನ್ನೂ ಹೊಂದಿದ್ದಾನೆ. ಸಹಸ್ರ ದೀವಿಗೆಗಳನ್ನು ಹಚ್ಚಿ ಹುಡುಕಿದರೂ ಈತನ ಒಳಗಾಗಲೀ,ಹೊರಗಾಗಲೀ ಅಹಂಕಾರದ ಲವಲೇಶವೂ ಇಲ್ಲ.ಇಂತಹ ಉತ್ತಮೋತ್ತಮ ಅಧಿಕಾರಿ,ಸಾಧಕ,ಸಿದ್ಧ ಪುರುಷನನ್ನು ಎಲ್ಲಿಯೂ ಕಂಡಿಲ್ಲ " ವೆಂ ದು ಹರ್ಷಿಸಿ ನಾನು ಇಸ್ಟುದಿನ ಹುಡುಕಿದ್ದು ಸಾರ್ಥಕವಾಯಿತು,ನನ್ನ ಕೆಲಸವಾಯ್ತು ಎಂದು ನುಡಿದರು. ದತ್ತರಾಜಯೋಗೀಂದ್ರರು ತಮ್ಮ ಗುರುಗಳ ಆರಾಧನಾ ಸಪ್ತಾಹ(೭ ದಿನ) ವನ್ನು ೧೯೩೧ ರ ಕಾರ್ತೀಕ ಮಾಸದಂದು ಏರ್ಪಡಿಸಿದ್ದರು.ಅವರ ಆಪ್ಪಣೆಯಂತೆ ರಂಗಪ್ಪನವರು ೭ದಿನಗಳು ನಿದ್ರಾಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಿ ಪ್ರತಿದಿನ ಬರೀ ಒಂದು ಹಿಡಿ ಕೋಸುಂಬರಿಯನ್ನು ಗುರುಪ್ರಸಾದವೆಂದು ತಿಂದು ಇಡೀ ಹಗಲು,ಇಡೀ ರಾತ್ರಿ ಅಖಂಡಭಜನೆಯನ್ನು ಮಾಡಿದರು.ಯೋಗೀಂದ್ರರು ತಮ್ಮ ಹಿರಿಯಮಗನ(ಗುರು ಶಿಶ್ಯಪರಂಪರೆಯಲ್ಲಿ ಗುರುವನ್ನು ಅಪ್ಪಎಂದು,ಅವರ ಗುರುಗಳನ್ನು ಅಜ್ಜ ಎನ್ನುವ ವಾಡಿಕೆಯಿದೆ) ಸ್ಥಿತಿಯನ್ನು ಕಂಡು ಸಂಪೂರ್ಣವಾಗಿ ಕೃಪೆಮಾಡಿ "ನೀವು ಲೋಕಸಂಗ್ರಹ ಮಾಡಬೇಕು" ಎಂದರು.ಸದ್ಗುರುವಾಗಿ ಲೋಕೋದ್ಧಾರ ಮಾಡುವ ಕಾಲ ಸನ್ನಿಹಿತವಾಗಿದೆ ಎಂದು ಅದಕ್ಕಾಗಿ ಮನೆಯಲ್ಲುಳಿದ ಜವಾಬ್ದಾರಿಗಳನ್ನು ಬೇಗನೆ ಮಾಡಬೇಕಾಗಿ ಅಪ್ಪಣೆಯಿತ್ತರು.

ಗುರುವಾಗಿ ಪ್ರಕಟವಾದದ್ದು

ಬದಲಾಯಿಸಿ
 
ತುರ್ಯಾವಸ್ಥೆಯಲ್ಲಿ ಶ್ರೀ ಶಂಕರಲಿಂಗ ಭಗವಾನರು

ಒಮ್ಮೆ ಲೋಕೀಕೆರೆ (ದಾವಣಗೆರೆ ಜಿಲ್ಲೆ) ಎಂಬ ಊರಿನಲ್ಲಿ 'ಕರೇಗೌಡಪ್ಪ' ಎಂಬಾತನಿಗೆ ಸಂಧಿವಾತ ರೋಗವು ಕಾಣಿಸಿಕೊಂಡು ಅದು ಯಾವ ಚಿಕಿತ್ಸೆ ಯಿಂದಲೂ ಗುಣವಾಗದೇ ಬಹಳವಾಗಿ ಉಲ್ಬಣಿಸಿತು. ಆಗ ಅವರು ದಾರಿಗಾಣದೇ ಹತಾಷರಾಗಿ ಆಂಜನೇಯಸ್ವಾಮಿಯ ಮೊರೆ ಹೊಕ್ಕರು. (ಲೋಕೀಕೆರೆಯಲ್ಲಿ ಪುರಾಣಪ್ರಸಿದ್ಧವಾದ ಆಂಜನೇಯನ ಗುಡಿಇದೆ. ಇದು ಅತ್ಯಂತ ಜಾಗ್ರತವಾದ ಸ್ಥಾನ) ಆಗ ಆಂಜನೇಯಸ್ವಾಮಿಯು ನುಲೇನೂರಿನಲ್ಲಿ ರಂಗಪ್ಪನೆಂಬುವರು ಇದ್ದಾರೆ.ಅವರನ್ನು ಇಲ್ಲಿಗೆ ಕರೆತರಬೇಕು. ಅವರ ಚಿಕಿತ್ಸೆಯಿಂದ ಗುಣವಾಗುತ್ತದೆ, ಎಂದು ಅಪ್ಪಣೆ ಕೊಟ್ಟನು.ಲೋಕೀಕೆರೆಯ ದೊಡ್ಡ ಜಮೀನ್ದಾರರೂ,ಪ್ರತಿಷ್ಟಿತರೂ ಆದ ಶ್ರೀನಿವಾಸರಾಯರು ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ದೇವರಧ್ಯಾನ,ಸತ್ಸಂಗ,ಅಥಿತಿಸೇವೆ ಗಳಲ್ಲಿ ಕಾಲಕಳೆಯುತ್ತಿದ್ದರು.ಅವರಿಗೆ ತಮ್ಮನ್ನು ಆಧ್ಯಾತ್ಮಿಕ ಸಾಧನೆಯಲ್ಲಿ ಮುನ್ನಡೆಸಿ ಮುಕ್ತಿಮಾರ್ಗ ತೋರಿಸುವ ಸದ್ಗುರುವಿನ ಹಂಬಲ ಬಹಳವಾಗಿತ್ತು.ರಂಗಪ್ಪನವರನ್ನು ಅವರು ಲೋಕೀಕೆರೆಗೆ ಕರೆದುಕೊಂಡು ಬಂದರು.ಅವರ ವಿಷಯ ಮೊದಲೇ ತಿಳಿದಿದ್ದರಿಂದ ಅವರಲ್ಲಿ ಶ್ರದ್ಧೆ, ಭಕ್ತಿಯನ್ನು ಹೊಂದಿದ್ದರು.ರಂಗಪ್ಪನವರು ಕರೇಗೌಡಪ್ಪನ ರೋಗವನ್ನು ಗುಣಪಡಿಸಿದರು. ಲೋಕೀಕೆರೆಗೆ ಬಂದಾಗ ರಂಗಪ್ಪನವರು ಅಖಂಡ ತುರ್ಯಾವಸ್ಥೆಯಲ್ಲಿದ್ದರು.

'ಷಟ್ಚಕ್ರಭೇಧನ'ದ ಬಗ್ಗೆ ವಿವರಣೆ

ಬದಲಾಯಿಸಿ

ಶ್ರೀನಿವಾಸರಾಯರು ಷಟ್ಚಕ್ರಭೇಧನೆ ಕುರಿತು ರಂಗಪ್ಪನವರನ್ನು ಪ್ರಶ್ನಿಸಲು, ಅದರ ಬಗ್ಗೆ ಸಂಪೂರ್ಣತಿಳುವಳಿಕೆ ನೀಡಿ "ಸಮರ್ಥನಾದ ಸದ್ಗುರುವಿನ ಮಾರ್ಗದರ್ಶನವಿಲ್ಲದೇ ಯೋಗಸಾಧನೆ ಮಾಡಬಾರದೆಂದು ಹೇಳಿದರು.ಮುಕ್ತಿಸಾಧನೆಗೆ ಭಕ್ತಿಮಾರ್ಗ,ಙ್ಞಾನಮಾರ್ಗಗಳು ಹೆಬ್ಬಾಗಿಲಿನಂತಿವೆ"ಎಂದರು.ಪುನಃ ಅದನ್ನೇ ಪ್ರಶ್ನಿಸಿದ ಶ್ರೀನಿವಾಸರಾಯರನ್ನು ಕುರಿತು ರಂಗಪ್ಪನವರು ಪುನಃ ಪ್ರಶ್ನಿಸುವ ಅಗತ್ಯವಿಲ್ಲ.ನಿನ್ನ ಕುಂಡಲಿನಿಯು ಈಗ ನನ್ನ ವಶದಲ್ಲಿದೆ ಎಂದು ಮೈದೂಗಲು ಶ್ರೀನಿವಾಸರಾಯರು ಕೆಳಕ್ಕೆ ಬಿದ್ದರು. ರಂಗಪ್ಪನವರೇ ನಂತರ ಅವರನ್ನು ಉಪಚರಿಸಿ ಎಬ್ಬಿಸಿದರು. ಶ್ರೀನಿವಾಸರಾಯರಿಗೆ ಇಂಥಹ ಅಲೌಕಿಕ ಆನಂದವನ್ನು ಸದ್ಗುರುಮಾತ್ರ ಕೊಡಬಲ್ಲನೆಂದು ಮನವರಿಕೆಯಾಗಿ ರಂಗಪ್ಪನವರ ಕಾಲಿಗೆ ಬಿದ್ದು ನನ್ನನ್ನುದ್ಧರಿಸಿರಿ ಎಂದು ಪ್ರಾರ್ಥಿಸಿ ಮನೆಗೆ ಕರೆದುಕೊಂಡುಬಂದು ಕರ್ಪೂರಗಳನ್ನು ಬರಿಗೈಯಲ್ಲಿ ಹೊತ್ತಿಸಿ ಆರತಿಮಾಡಿ ಭಕ್ತಿಯ ಅವೇಷದಲ್ಲಿ ಅವರಿಗೆ ಬಾಹ್ಯಪ್ರಙ್ಞೆ ತಪ್ಪಿತು."ಶಂಕರಲಿಂಗಭಗವಾನ್ ಮಹಾರಾಜ್ ಕಿ ಜೈ"ಎಂದು ಪಾದದ ಮೇಲೆ ಬಿದ್ದರು.ಹೀಗೆ ರಂಗಪ್ಪನವರು ಶಂಕರಲಿಂಗ ಭಗವಾನರಾಗಿ ಪ್ರಕಟವಾದರು.ಭಗವಾನರು

ಲೋಕೀಕೆರೆಯಲ್ಲಿ ಅಖಂಡ ಅಧ್ಯಾತ್ಮ ಬೋಧೆ

ಬದಲಾಯಿಸಿ

ಲೋಕೀಕೆರೆಯಲ್ಲಿ ಹಗಲುರಾತ್ರಿಗಳೆನ್ನದೇ ನಿರಂತರ ಏಳು ದಿನಗಳು ಅಖಂಡವಾಗಿ ಆಧ್ಯಾತ್ಮಬೋಧೆ ಮಾಡಿದರು.ಜನರೂ ಮನೆ ,ಊಟ,ತಿಂಡಿ ಎಲ್ಲವನ್ನೂ ಮರೆತು ಅವರೆದುರು ಕುಳಿತಿರುತ್ತಿದ್ದರು.ಅಲ್ಲಿಗೆ ಬಂದಜನರು ತಮ್ಮ ಸಂದೇಹವನ್ನು ಕೇಳುವ ಮೊದಲೇ ಅವರ ಸಂದೇಹಕ್ಕೆ ಉತ್ತರಕೊಡುತ್ತಿದ್ದರು. ಭಕ್ತಿಯಿಂದ ಬಂದ ಜನರ ಇಷ್ಟಾರ್ಥಗಳು ಲಭಿಸಿದವು.ಕುಹಕ ಮಾಡಲು ಬಂದವರು ಹೆದರಿ ಓಡಿಹೋದರು.ಪರಿಹಾಸ ಮಾಡಲು ಬಂದವರು ಅವರ ಬೊಧೆಗೆ ಶರಣಾಗತರಾದರು.ಬೇರೆಬೇರೆ ಊರುಗಳಿಂದ ಅನೇಕ ಜನತಂಡತಂಡವಾಗಿ ಬಂದು ಇಷ್ಟಾರ್ಥಪಡೆದರು. ಬಂದವರು ಸಾಮಾನ್ಯ ಮನುಷ್ಯರೊಡನೆ ಮಾತನಾಡುವಂತೆ ಮಾತನಾಡಿದರೆ ಅವರಿಗೆ ಭಗವಾನರ ಶರೀರವೇ ಕಾಣದಂತಾಗಿ ಅಲ್ಲಿ ದಿವ್ಯಪ್ರಭೆ ಕಾಣಿಸುತ್ತಿತ್ತು. ಆಗ ಆ ಜನರು ಸಾಕ್ಷಾತ್ ಪರಶಿವನೊಡನೆ ಮಾನವರೊಡನೆ ಮಾತನಾಡುವಂತೆ ಮಾತನಾಡಿದೆ ,ಕ್ಷಮಿಸಬೇಕೆಂದು ಬೇಡುತ್ತಿದ್ದರು.ಅವರ ಮೈದಡವಿ ಹತ್ತಿರ ಕುಳ್ಳಿರಿಸಿಕೊಂಡು ಅವರ ಸಂಕಷ್ಟ,ಸಂದೇಹ ಗಳನ್ನು ನಿವಾರಿಸುತ್ತಿದ್ದರು. ಆಹಾರ ತೆಗೆದುಕೊಳ್ಳದೇ ನಿರಂತರ ಬೊಧೆ ಮಾಡುತ್ತಿದ್ದ ಭಗವಾನರನ್ನು ನೋಡಿ ಜನರಿಗೆಲ್ಲಾ ಏನುಮಾಡಬೇಕೆಂದು ತಿಳಿಯದೇ ಅವರನ್ನೇ ಹೋಗಿ ಕೇಳಲು ಭಗವಾನರು ಎದ್ದು 'My Father is the greatest Datta' ಎಂದು ನರ್ತಿಸಲಾರಂಭಿಸಿ ಬಾವಿಯ ಹತ್ತಿರ ಬಂದು, ಓಂಕಾರವನ್ನು ಘರ್ಜಿಸುತ್ತಾ "ಶ್ರೀ ಗುರುನಾಥನಿಗೆ ಏಕಾದಶವಾರ ರುದ್ರಾಭಿಷೇಕವಾಗಬೇಕು" ಎಂದರು.ಕೊಡಗಳಲ್ಲಿ ಭಕ್ತರು ೧೦೧ ಕೊಡ ನೀರನ್ನು ಅಭಿಷೇಕ ಮಾಡಿದರು.ನಂತರ ಭಗವಾನರಿಗೆ ಶಿವಸಹಸ್ರನಾಮಪೂರ್ವಕ ಬಿಲ್ವಾರ್ಚನೆಯಾಯಿತು. ಭಗವಾನರು ಸರ್ವರಿಗೂ ಅಭಯಮುದ್ರೆ ತೋರಿಸಿದರು.

ಶಂಕರಲಿಂಗ ಭಗವಾನರು ತಮ್ಮ ಬೊಧೆಯಿಂದ ಭಕ್ತರ ಅಜ್ಞಾನವನ್ನು ಹೋಗಲಾಡಿಸುತ್ತಿದ್ದರು.ಹಗಲಿರುಳೆನ್ನದೆ ತಮ್ಮ ಭಕ್ತರಿಗೆ ನಿರಂತರ ಬೊಧೆ ಮಾಡುತ್ತಿದ್ದರು.ಅವರ ಸನ್ನಿಧಿಯಲ್ಲಿ ಕೇಳುತ್ತಿರುವವರಿಗೆ ಹಸಿವುಬಾಯಾರಿಕೆಗಳು ತೋರುತ್ತಲೇಇರಲಿಲ್ಲ.ಭಕ್ತರ ಮನಸ್ಸಿನ ಕೊಳೆಯು ರಭಸದಿಂದ ಹರಿದುಬರುತ್ತಿದ್ದ ಅವರ ಬೊಧಾಮೃತ ಗಂಗೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು.ಭಕ್ತಕುಟುಂಬಿಗಳಾದ ಅವರು ಸಹಜಪ್ರೇಮದಿಂದ ಭಕ್ತರ ಹೃದಯಗಳನ್ನು ಗೆದ್ದು ಅವರನ್ನು ಗುರುಪಂಥದ ದಿವ್ಯಮಾರ್ಗದಲ್ಲಿ ಕರೆದೊಯ್ಯುತ್ತಿದ್ದರು. ಲೋಕದಲ್ಲಿ ಐಹಿಕಸುಕಕ್ಕಾಗಿ ಅಳುವವರು ಬಹಳ.ಆತ್ಮಜ್ಞಾನಕ್ಕಾಗಿ ಅಳುವವರು ವಿರಳ.ಆತ್ಮಜ್ಞಾನಕ್ಕಾಗಿ ಗುರುಭಕ್ತಿಯೇ ಸುಲಭ ಮಾರ್ಗವೆಂದು ಹೇಳುತ್ತಿದ್ದರು.ಸಂಸಾರದ ಮೋಹನಿದ್ರೆಯಿಂದ ಜಾಗೃತರಾಗಿರಿ ,ನೀರಿನಲ್ಲಿಯೇ ನಿಂತು ಬಾಯಾರಿ ಸತ್ತಂತೆ ಆನಂದವೇ ತಾನಾಗಿ ತನಗೆ ಸುಖವಿಲ್ಲವೆಂದು ಭಾವಿಸಬೇಡಿರಿ ಎಂದು ಹೇಳುತ್ತಿದ್ದರು.ಯಾವ ಧರ್ಮದವರು ಅವರೆಡೆಗೆ ಬರುತ್ತಾರೋ ಅವರಿಗೆ ಅವರದೇ ಧರ್ಮದ ಸಾರವನ್ನು ಬೊಧಿಸುತ್ತಿದ್ದರು.ನಮಗೆ ಜಾತಿಯೆಂಬುದಿಲ್ಲ.ಜ್ಞಾನವನ್ನು ಕೊಡುವುದು ಯಾವುದೋ ಅದೇ ನಮ್ಮ ಜಾತಿ ಎನ್ನುತ್ತಿದ್ದರು. ಹಿಂದೂ, ಮುಸಲ್ಮಾನ, ಕ್ರೈಸ್ತಭಕ್ತರನೇಕರು, ಅವರ ಶಿಷ್ಯರಾಗಿದ್ದರು. ಅವರ ಬೊಧೆಗಳಲ್ಲಿ ಕೆಲವು ಅವರು ಹೇಳಿದಹಾಗೆ :

ಪ್ರೀತಿ

ಬದಲಾಯಿಸಿ

ಪ್ರೀತಿಯಿಂದ ಗೆಲ್ಲು. ಭಗವಂತನಾಗಲೀ ಗುರುವಾಗಲೀ ಭಕ್ತಿ,ಪ್ರೀತಿಗೆ ಸೋತು ಓಡಿಬರುತ್ತಾರೆ.ಭಗವಂತನು ಪ್ರೇಮಸ್ವರೂಪಿಯಾಗಿದ್ದಾನೆ.ಪ್ರೇಮದ ಬಲದಿಂದ ಜಗತ್ತಿನ ಸೃಷ್ಟಿ,ಸ್ಥಿತಿ,ಲಯ, ನಿಗ್ರಹ, ಅನುಗ್ರಹಗಳನ್ನು ಮಾಡುತ್ತಿದ್ದಾನೆ.ಪ್ರೇಮವು ತಾಯಿಯಲ್ಲಿ ವಾತ್ಸಲ್ಯವಾಗಿಯೂ,ಪತಿಪತ್ನಿಯಲ್ಲಿ ಮೋಹವಾಗಿಯೂ,ದೈವಗುರುಹಿರಿಯರ ವಿಶಯದಲ್ಲಿ ಗೌರವವಿಷ್ವಾಸಗಳಾಗಿಯೂ ಇದೆ.ಪ್ರೇಮವು ಬಂಧುವರ್ಗದಲ್ಲಿ ಆದರವಾಗಿಯೂ,ಪ್ರಾಣಿಮಾತ್ರಗಳ ವಿಷಯದಲ್ಲಿ ಭೂತದಯೆಯಾಗಿಯೂ ಪ್ರಕಟವಾಗುತ್ತದೆ.ಅಜ್ನಾನದಿಂದ ಆವೃತವಾದ ಮನಸ್ಸಿನಲ್ಲಿ ಕಾಮಕ್ರೋಧಗಳಾಗಿಯೂ,ಇಷ್ವರ್ಯವಿದ್ದಾಗ ಲೋಭ, ಗರ್ವ, ಮದಗಳಾಗಿಯೂ ಕಾಣುವುದು ಪ್ರೇಮವೇ.ಭಗವಂತನಲ್ಲಿ ಇಟ್ಟ ಪ್ರೀತಿಯು ಭಕ್ತಿಎನಿಸಿಕೊಳ್ಳುತ್ತದೆ.ಭಗವಂತನಲ್ಲಿ ಅಚಲವಾದ ಪ್ರೇಮವನ್ನಿಟ್ಟರೆ ಅವನು ಗುರುರೂಪದಲ್ಲಿ ಬಂದು ಉದ್ಧರಿಸುತ್ತಾನೆ.

ಗುರುಭಕ್ತಿ

ಬದಲಾಯಿಸಿ

ಶ್ರೀಗುರುವು ಸಚ್ಚಿದಾನಂದ ನಿತ್ಯಪರಿಪೂರ್ಣನು,ಕರುಣಾಮೂರ್ತಿಯು,ಭಕ್ತರಕ್ಷಕನು,ಪ್ರೇಮಳಾಂತಃಕರಣನೂ ಆಗಿರುತ್ತಾನೆ.ಮುಕ್ತಿಸುಖವನ್ನು ಬಯಸುವವರು ನಿಷ್ಕಾಮಕರ್ಮವನ್ನಾಚರಿಸುತ್ತಾ, ಆತ್ಮವಿಚಾರಮಾಡಿ,ಸದ್ಗುರುವಿನಿಂದ ಆತ್ಮಜ್ಞಾನಪಡೆದು ಘೋರಸಂಸಾರವನ್ನು ದಾಟಬೇಕು.ಗುರುವನ್ನು ತಂದೆಯೆಂದು ತಿಳಿದು ಅವನು ಹೇಳಿದಹಾಗೆ ಸಾಧನೆ ಮಾಡುತ್ತಾಬಂದಹಾಗೆ ಅವನು ಕೃಪೆಮಾಡಿ ಭವಸಾಗರವನ್ನು ದಾಟಿಸುತ್ತಾನೆ.ಒಮ್ಮೆ ಗುರುಪಾದಗಳಲ್ಲಿ ಭಕ್ತಿಯನ್ನಿತ್ತರೆ ಮತ್ತೆ ಅಭಕ್ತಿ ಮಾಡಬಾರದು.ಧರ್ಮಾಚರಣೆ,ಸಚ್ಚಾರಿತ್ರ ,ವೈರಾಗ್ಯಗಳ ಬೆಂಬಲವಿದ್ದರೆ ಗುರುಭಕ್ತಿಯು ಅರ್ಥಸಹಿತವಾಗಬಲ್ಲದು.ಸಮರ್ಥನಾದ ಸದ್ಗುರುವನ್ನು ಪಡೆದವರು ತನು,ಮನ,ಧನ ಗಳನ್ನು ಗುರುವಿಗರ್ಪಿಸಬೇಕು.ಧನವನ್ನರ್ಪಿಸಿದರೆ ಅದೇ ಪ್ರಸಾದವಾಗಿ ಹಿಂತಿರುಗುತ್ತದೆ.ಧನವನ್ನರ್ಪಿಸಲು ಸಾಧ್ಯವಾಗದಿದ್ದರೆ ದೇಹದಂಡಿಸಿ ಸೇವೆಮಾಡಬೇಕು .ದೇಹದಂಡಿಸಲು ಸಾಧ್ಯವಾಗದವರು ಕೇವಲ ಗುರುವನ್ನು ಸ್ಮರಿಸಿದರೆ ಅದೇ ಸೇವೆಯೆಂದು ತಿಳಿದು ಗುರುವು ಉದ್ಧರಿಸುತ್ತಾನೆ. ಗುರುಸ್ಮರಣೆ,ಗುರುವಾಕ್ಯಪರಿಪಾಲನೆ ಭಕ್ತರ ಆದ್ಯ ಕರ್ತವ್ಯ.

ನಾಮಸ್ಮರಣೆ

ಬದಲಾಯಿಸಿ

ಕಲಿಯುಗದಲ್ಲಿ ದೇಹಬಲಗಳು,ಮನೋಬಲಗಳು ಅತ್ಯಂತ ಕಡಿಮೆಯಿರುವುದರಿಂದ ನಾಮಸ್ಮರಣೆಯೇ ಮುಕ್ತಿಗೆ ಸುಲಭೋಪಾಯ.ನಿತ್ಯ ಭಜನೆ,ಪೂಜೆ,ಜಪತಪ ಅನುಷ್ಟಾನಗಳನ್ನು ಬಿಡಬಾರದು. ನಾಮಕ್ಕೂ ರೂಪಕ್ಕೂ ಭೇದವಿಲ್ಲ.ಗುರುನಾಮಸ್ಮರಣೆಯೇ ಧ್ಯಾನವಾಗುತ್ತದೆ.

ಗುರುಮೂರ್ತಿಧ್ಯಾನ

ಬದಲಾಯಿಸಿ

ಗುರುಪಾದಸೇವೆ, ಗುರುನಾಮಸ್ಮರಣೆ, ಗುರುವಾಕ್ಯಪರಿಪಾಲನೆ ಮಾಡುತ್ತಾಹೋದಹಾಗೆಲ್ಲಾ ಮನಸ್ಸಿನಸ್ಥಿತಿ ಪರಿಪಕ್ವವಾಗಿ ನಿಷ್ಕಾಮವಾಗುತ್ತದೆ. ವಾಸನಾಕ್ಷಯ, ಮನೋನಾಶ, ತತ್ವಜ್ಞಾನ, ಉದಯವಾಗಿ ಹೊರ ಒಳಗೆಂಬುದು ತೋರದೆ ಸಹಜಸಮರಸಯುಕ್ತವಾದ ಆನಂದಾನುಭವವು ವೃದ್ಧಿಯಾಗುತ್ತದೆ.

ಭಕ್ತರಿಗೆ ಅಭಯ

ಬದಲಾಯಿಸಿ

ಶಂಕರಲಿಂಗಭಗವಾನರು ಭಕ್ತಾಭಿಮಾನಿಗಳೂ, ಭಕ್ತಕಾರ್ಯಕಲ್ಪದೃಮರು.ಅವರ ಭಕ್ತಾಭಿಮಾನ ಹೇಗಿತ್ತೆಂದರೆ ಎಲ್ಲೋ ಇರುವ ಅವರ ಭಕ್ತರು ಸಂಕಟಪಟ್ಟಾಗ ನನಗೇನೋ ಸಂಕಟವಾಗುತ್ತಿದೆ ಎಂದು ಅದು ಪರಿಹಾರ ಮಾಡುವವರೆಗೂ ಹೇಳುತ್ತಿದ್ದರು.ಎಲ್ಲೊ ಇರುವ ಭಕ್ತರು ಭಕ್ತಿಯಿಂದ ಕಾಫಿ(ಭಗವಾನರಿಗೆ ಕಾಫಿ ಪ್ರಿಯವೆಂದು ಇಂದಿಗೂ ಅವರಆಶ್ರಮಗಳಲ್ಲಿ,ಅವರ ಭಕ್ತರ ಮನೆಗಳಲ್ಲಿ ಬೆಳಗ್ಗೆ ಭಜನೆ,ಕಾಕಡಾರತಿಗಳಾದಮೇಲೆ ಕಾಫಿಯನ್ನರ್ಪಿಸಿ ಆಮೇಲೆ ಭಕ್ತರು ಕುಡಿಯುವ ಪರಿಪಾಠವಿದೆ),ಫಲಾಹಾರವನ್ನೋ ಅವರ ಮನೆಯಿಂದ ಅರ್ಪಿಸಿದರೆ ಶಾಸ್ತ್ರಕ್ಕೂ ಭಗವಾನರು ಕಾಫಿ,ಆಹಾರ ತೆಗೆದುಕೊಳ್ಳುತ್ತಿರಲಿಲ್ಲ.ಭಕ್ತರ ಪಾದಧೂಳಿ ನನ್ನ ತಲೆಯಮೇಲಿರಲಿ ಎನ್ನುತ್ತಿದ್ದರು.ಭಕ್ತರ ಪಾದಧೂಳಿಯನ್ನು ಪೊಟ್ಟಣದಲ್ಲಿ ಕಟ್ಟಿಕೊಟ್ಟು ವೈದ್ಯೌಷಧಿಯಿಂದ ಗುಣಪಡಿಸಲಾಗದ ಅನೇಕ ರೋಗಗಳನ್ನು ಗುಣಹೊಂದುವಂತೆ ಮಾಡಿದ ಭವರೋಗವೈದ್ಯರು ಅವರು. ಅವರು ಭಕ್ತರಮೇಲಿಟ್ಟಿದ್ದ ಪ್ರೇಮ ಸಾವಿರತಾಯಿಯ ಪ್ರೇಮಕ್ಕೆ ಸಮವೆಂದು ಅದರ ಅನುಭವ ಪಡೆದ ಅನೇಕರು ಇಂದಿಗೂ ಹೇಳುತ್ತಾರೆ. ಅವರು ತಮ್ಮ ಭಕ್ತರಿಗೆ ಹೀಗೆ ಅಭಯವಿತ್ತಿದ್ದಾರೆ.

ಚಿತ್ರ:HPIM7148.JPG
'ಮಾಳೇನಹಳ್ಳಿ ರಂಗನಾಥಸ್ವಾಮಿ ದೇವಾಲಯದ ಪ್ರಮುಖ ಗೋಪುರ'
 • ಸಾಂಸಾರಿಕರಿಗೆ ತಾಪತ್ರಯದ ಕಾಟ ತಪ್ಪಿದ್ದಲ್ಲ.ತಮ್ಮ ಕಷ್ಟನೀಗುವುದು ಹೇಗೆಂಬ ಕಾರ್ಪಣ್ಯ ಅವರನ್ನ್ನು ಬಿಡುವುದಿಲ್ಲ.ಆದರೆ ಗುರುವಿನಲ್ಲಿ ನಂಬಿಕೆ ಇಟ್ಟು ಅವನ ಸೇವೆಮಾಡಿದರೆ ತಾಪತ್ರಯಗಳ ಸೊಲ್ಲು ಇರುವುದಿಲ್ಲ.
 • ನಾನು ಎಂದಿಗೂ ನನ್ನ ಭಕ್ತರನ್ನು ಮರೆಯುವುದಿಲ್ಲ. ಗುರುವೇ ಅರಿವಾದಾಗ ಮರೆಯುವುದೆಲ್ಲಿದೆ ?
 • ಗುರುಭಕ್ತರಿಗೆ ಎಂದಿಗೂ ಕೇಡಾಗುವುದಿಲ್ಲ,ಗುರುವು ಭಕ್ತರನ್ನು ಕಾಯುತ್ತಾನೆ.
 • ನೈಜ ಮತ್ತು ಪ್ರೇಮಲ ಗುರುಭಕ್ತರಿಗೆ ಬಂದಾಪತ್ತು ಆಗಿಂದಾಗ್ಗೆ ಪರಿಹರಿಸಲು ದತ್ತಮಹಾಗುರುವು ಸಮರ್ಥನಿದ್ದಾನೆ.
 • ಸಚ್ಚಿದಾನಂದವು ನಿಮ್ಮಲ್ಲಿಯೇ ಇದೆ,ನೀವು ಅದೇ ಅಗಿರುವಿರಿ.ಅದರ ಅನುಭವಕ್ಕೆ ಆತರ ಪಡಬೇಕಾಗಿಲ್ಲ.ಗುರುಸ್ಮರಣೆ,ಗುರುವಾಕ್ಯಪರಿಪಾಲನೆ ಮಾಡುವುದು ನಿಮ್ಮ ಕರ್ತವ್ಯ,ನಿಮ್ಮ ರಕ್ಷಣೆಯ ಭಾರ ಗುರುವಿಗಿರಲಿ.
 • ನನ್ನ ಭಕ್ತರು ಯಾವುದೇ ಸಾಧನೆಮಾಡಬೇಕಿಲ್ಲ.ಗುರುದೊಡ್ಡವನೆಂದು ತಿಳಿದು ಅವನ ವಾಕ್ಯಪರಿಪಾಲನೆ ಮಾಡಿದರೇ ಸಾಕು.
 • ನನ್ನ ಎಲ್ಲಾ ಭಕ್ತರನ್ನೂ ಏಳುಜನ್ಮಗಳೊಳಗಾಗಿ ಉದ್ಧಾರ ಮಾಡುತ್ತೇನೆ.ನನಗೆ ಶತ್ರುಗಳೇ ಇಲ್ಲ.ಕುಕಲ್ಪನೆಇಂದ ನನ್ನನ್ನು ದ್ವೇಷಿಸಿದವರೂ ಉದ್ಧಾರವಾಗುತ್ತಾರೆ.ಎಲ್ಲಿಗೋ ಹೋಗುತ್ತಾ ನನ್ನನ್ನು ನೋಡಿದವರನ್ನೂ ಉದ್ಧರಿಸುತ್ತೇನೆ.
 
ಕೊಮಾರನಹಳ್ಳಿಯ ರಂಗನಾಥಾಶ್ರಮದಲ್ಲಿರುವ ಶಂಕರಲಿಂಗ ಭಗವಾನರ ಸಮಾಧಿ'
 
ರಂಗನಾಥಾಶ್ರಮದಲ್ಲಿರುವ ಯೋಗಮಂದಿರದಲ್ಲಿ ಶಂಕರಲಿಂಗಭಗವನರು ಉಪಯೋಗಿಸುತ್ತಿದ್ದ ವಸ್ತುಗಳು

ಕೊಮಾರನಹಳ್ಳಿಯಲ್ಲಿ ಸಮಾಧಿ

ಬದಲಾಯಿಸಿ

ಭಗವಾನರು ೧೯೫೧ ರಲ್ಲಿ ಕೊಮಾರನಹಳ್ಳಿ ಎಂಬ ಪವಿತ್ರ ಕ್ಷೇತ್ರದಲ್ಲಿ, ಬೆಟ್ಟದ ಮೇಲೆ ಇರುವ 'ಹೆಳವನಕಟ್ಟೆ ಶ್ರೀಲಕ್ಷ್ಮೀರಂಗನಾಥ ದೇವಾಲಯ' ದ ಪಕ್ಕದಲ್ಲಿ 'ರಂಗನಾಥಾಶ್ರಮ' ವನ್ನು ಸ್ಥಾಪಿಸಿದರು. ಆಶ್ರಮದ ಮುಂದಿದ್ದ ಬಂಡೆಯಲ್ಲಿ ತಮ್ಮ ಸಮಾಧಿಗಾಗಿ ಒಂದು ಗುಹೆಯನ್ನು ತೋಡಿಸಿದರು. 'ಶ್ರೀರಂಗನಾಥನ ವಿಗ್ರಹ'ವಿರುವ ಎತ್ತರಕ್ಕಿಂತ ಕೆಳಭಾಗದಲ್ಲಿ, ಈ ಗುಹೆ ಇರುವಂತೆ ನೋಡಿಕೊಂಡರು. ಸ್ವಾಮಿಯ ಮುಂದೆ ಭಕ್ತನು, ಗುರುವಿನ ಮುಂದೆ ಶಿಷ್ಯನು ಮೆರೆಯಬಾರದೆಂದು ಯಾವಾಗಲೂ ಹೇಳುತ್ತಿದ್ದರು. ೧೬-೭-೧೯೫೩ ರಂದು ಸಮಾಧಿಸ್ತರಾದರು.

ಸಂಗ್ರಹದ ಮೂಲ

ಬದಲಾಯಿಸಿ

ಮೂಲ ಗ್ರಂಥ : ಶ್ರೀ ಶಂಕರಲಿಂಗ ಭಗವಾನರ ಸದ್ಭಕ್ತರಾದ ಕನ್ನಡ ಸಾಹಿತ್ಯಕಾರರಾದ ಶ್ರೀಯುತ ಆ.ರಾ.ಸೇ ಅವರ "ಶ್ರೀ ಗುರುಕಥಾಮೃಥ".ಪ್ರೊ. ಸಾಲಿಗ್ರಾಮ ಸುಬ್ಬರಾಮಯ್ಯ ಅವರಿಂದ ಆಂಗ್ಲ ಭಾಷೆಗೆ ಅನುವಾದಿತ ಹಾಗು ಶ್ರೀ ಶಂಕರಲಿಂಗ ಭಗವಾನರ ಕಾಲದಲ್ಲಿ ಉಪಸ್ತುತರಿದ್ದ ಅನೇಕ ಸದ್ಭಕ್ತರ ಅನುಭವ ಹಾಗು ಅಭಿಪ್ರಾಯಗಳು.

ಉಲ್ಲೇಖಗಳು

ಬದಲಾಯಿಸಿ
 1. "ಶ್ರೀ ಶಂಕರಲಿಂಗ ಭಗವಾನರ ವೆಬ್ ಸೈಟ್". Archived from the original on 2015-09-25. Retrieved 2014-06-02.
 2. ಶ್ರೀ ಶಂಕರಲಿಂಗ ಭಗವಾನರನ್ನು ಭಕ್ತರು ಅವಧೂತರೆಂದು ಭಾವಿಸಿ ಗೌರವ ಸಮರ್ಪಿಸುತ್ತಾರೆ
 3. "ಕೊಮಾರನಹಳ್ಳಿ ರಂಗನಾಥಾಶ್ರಮ". Archived from the original on 2013-12-27. Retrieved 2014-06-02.