ವೇದಗಳ (ಶ್ರುತಿ) ಮೌಖಿಕ ಸಂಪ್ರದಾಯವು ಹಲವು ಪಾಠಗಳು, ಪಠನಗಳು ಅಥವಾ ವೇದಮಂತ್ರಗಳನ್ನು ಪಠಿಸುವ ರೀತಿಗಳನ್ನು ಹೊಂದಿದೆ. ವೇದಪಾಠದ ಅಂತಹ ಸಂಪ್ರದಾಯಗಳನ್ನು ಹಲವುವೇಳೆ ಅಸ್ತಿತ್ತ್ವದಲ್ಲಿರುವ ಅತ್ಯಂತ ಹಳೆಯ, ಅವಿಚ್ಛಿನ್ನವಾದ ಮೌಖಿಕ ಸಂಪ್ರದಾಯವೆಂದು ಪರಿಗಣಿಸಲಾಗುತ್ತದೆ. ಸಂರಕ್ಷಿತವಾಗಿರುವ ವೈದಿಕ ಪಠ್ಯಗಳ (ಸಂಹಿತಾಗಳು) ಕಾಲವನ್ನು ಸರಿಸುಮಾರು ಹೋಮರ್‌ನ ಕಾಲವೆಂದು ನಿಶ್ಚಯಪಡಿಸಲಾಗಿದೆ (ಮುಂಚಿನ ಕಬ್ಬಿಣ ಯುಗ).[]

ಪಾಠಗಳು

ಬದಲಾಯಿಸಿ

ಪಠ್ಯದ ಸಂಪೂರ್ಣ ಹಾಗೂ ಪರಿಪೂರ್ಣ ಕಂಠಪಾಠ ಮತ್ತು ಅದರ ಉಚ್ಚಾರಕ್ಕೆ ಆಸ್ಪದನೀಡಲು, ವೈದಿಕ ಸ್ವರಘಾತ ಸೇರಿದಂತೆ, ವಿವಿಧ ಪಾಠಗಳು ಅಥವಾ ಪಠನ ಶೈಲಿಗಳನ್ನು ವಿನ್ಯಾಸಗೊಳಿಸಲಾಗಿದೆ. ವೇದಗಳನ್ನು ಪಠಿಸುವ ಅಂತಹ ಹನ್ನೊಂದು ರೀತಿಗಳನ್ನು ವಿನ್ಯಾಸಗೊಳಿಸಲಾಯಿತು – ಸಂಹಿತಾ, ಪದ, ಕ್ರಮ, ಜಟ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ, ಘನ. ಇವುಗಳಲ್ಲಿ ಘನಪಾಠವನ್ನು ಸಾಮಾನ್ಯವಾಗಿ ಅತ್ಯಂತ ಕಷ್ಟಕರವೆಂದು ಪರಿಗಣಿಸಲಾಗಿದೆ.[]

ಘನಪಾಠವು ವೇದಪಾಠದ ಅಷ್ಟ ವಿಕೃತಿಗಳಲ್ಲಿ 8ನೆಯದು.

ವೇದವಾಙ್ಮಯವನ್ನು ಕಾಂಡ-ಪ್ರಶ್ನ ಅಥವಾ ಮಂಡಲ-ವರ್ಗ-ಸೂಕ್ತ-ಅನುವಾಕ-ಮಂತ್ರ-ಪದ-ವರ್ಣ-ಸ್ವರ ಇವೆಲ್ಲದರಲ್ಲಿಯೂ ಸ್ವಲ್ಪ ಮಾತ್ರವೂ ಸ್ವರೂಪ ಭ್ರಂಶವಾಗದಂತೆ ರಕ್ಷಿಸಿಕೊಂಡು, ಶಬ್ದ ಮತ್ತು ಅರ್ಥದ ಮೂಲಕ ದೃಷ್ಟಾದೃಷ್ಟ ಫಲಗಳನ್ನು ಹೊಂದಿ ಪುಣ್ಯ ಪುರುಷಾರ್ಥಮಯವಾಗಿ ಜೀವಿ ಬಾಳಿ ಬದುಕುವಂತಾಗಬೇಕೆಂದು ಋಷಿಗಳು ಆಶಿಸಿ ಅದಕ್ಕಾಗಿ ಶಬ್ದ ಸ್ವರೂಪ ರಕ್ಷಣೆಯನ್ನುದ್ದೇಶಿಸಿ ಎಂಟು ವಿಕೃತಿಗಳನ್ನು ಹೇಳಿದ್ದಾರೆ (ವ್ಯಾಳಿ-ವ್ಯಾಸಾದಿ ಶಿಕ್ಷಾ ಗ್ರಂಥಗಳು).

ಜಟಾ ಮಾಲಾ ದಂಡ ರೇಖಾ ರಥ ಧ್ವಜ ಶಿಖಾ ಘನಾಃ |
ಕ್ರಮಮಾಶ್ರಿತ್ಯ ನಿವೃತ್ತಾಃ ವಿಕಾರಾಃ ಅಷ್ಟವಿಶ್ರುತಾಃ ||

ಪಾಣಿನೀಯ ಶಿಕ್ಷೆಯಲ್ಲಿ-ಈ ಸ್ವರವರ್ಣಾದಿಗಳ ರಕ್ಷಣೆಯ ಮುಖ್ಯೋದ್ದೇಶ ಅದರಿಂದಾಗುವ ವಾಸ್ತವವಾದ ಅರ್ಥಾಭಿವ್ಯಕ್ತಿಯ ಸಂರಕ್ಷಣೆಯೇ ಹೊರತು ಮತ್ತಾವುದೂ ಅಲ್ಲವೆಂದೂ, ಅಲ್ಲಿ ವಾಚಿತವಾದ ಅಪಚಾರದಿಂದ ಪ್ರಯೋಜನ ಭಂಗವಷ್ಟೇ ಅಲ್ಲದೇ ಅನಿಷ್ಟವೂ ತೀವ್ರವಾಗಿದೆಯೆಂದೂ ಹೇಳಿ ಎಚ್ಚರಿಸಿದೆ.

ಮಂತ್ರೋಹಿನಃ ಸ್ವರತೋ ವರ್ಣತೋ ವಾ ಮಿಥ್ಯಾಪ್ರಯುಕ್ತೋ ನ ತಮರ್ಧ ಮಾಹ |
ಸವಾಗ್ವಜ್ರೋ ಯಜಮಾನಂ ಹಿನಸ್ತಿ ಯಥೇನ್ದ್ರಶತ್ರುಃ ಸ್ವರತೋಪರಾಧಾತ್ ||

- ಎಂದು. ಈ ಎಂಟು ಬಗೆಯ ವಿಕೃತಿಗಳೂ ಕ್ರಮಪಾಠವನ್ನೇ ಆಶ್ರಯಿಸಿ ರೂಪಗೊಂಡಿವೆ.

ಘನಪಾಠದ ಲಕ್ಷಣ ಈ ರೀತಿ ಇದೆ-

ಶಿಖಾ ಮುಕ್ತ್ವಾವಿಪರ್ಯಸ್ಯ ತತ್ಪದಾನಿ ಪುನಃ ಪಠೇತ್ |
ಅಯಂ ಘನಃ ಇತಿ ಪ್ರೋಕ್ತಃ . . . . . . . . .| (ವ್ಯಾಳಿಶಿಕ್ಷಾ)

ಉದಾಹರಣೆಗೆ-

ಅಗ್ನಿಮೀಳೇಂ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ |
ಹೋತಾರಂ ರತ್ನಧಾತಮಮ್ ||

ಇದರಲ್ಲಿ ಶಿಖಾ ಪಾಠ-ಅಗ್ನಿಮೀಳಈಳೇಗ್ನಿಮಗ್ನಿಮೀಳೇಪುರೋಹಿತಮ್- ಇಷ್ಟು ಹೇಳಿ ಅದನ್ನು ವಿಲೋಮವಾಗಿ ಒಮ್ಮೆ ಹೇಳಿ ಮತ್ತೆ ಅನುಲೋಮವಾಗಿ ಹೇಳುವುದು ಘನಪಾಠ. ಹೀಗೆ-

1. ಅಗ್ನಿಮೀಳ ಈಳೇಗ್ನಿಮಗ್ನಿಮೀಳೇ ಪುರೋಹಿತಂ ಪುರೋಹಿತಮೀಳೇ ಗ್ನಿಮಗ್ನಿಮೀಳೇ ಪುರೋಹಿತಮ್ |

2. ಈಳೇ ಪುರೋಹಿತಂ ಪುರೋಹಿತಮೀಳ ಈಳೇ ಪುರೋಹಿತಂ ಯಜ್ಞಸ್ಯ ಯಜ್ಞಸ್ಯ ಪುರೋಹಿತಮೀಳ ಈಳೇ ಪುರೋಹಿತಂ ಯಜ್ಞಸ್ಯ |

3. ಪುರೋಹಿತಂ ಯಜ್ಞಸ್ಯ ಯಜ್ಞಸ್ಯ ಪುರೋಹಿತಂ ಪುರೋಹಿತಂ ಯಜ್ಞಸ್ಯ ದೇವಂ ದೇವಂ ಯಜ್ಞಸ್ಯ ಪುರೋಹಿತಂ ಪುರೋಹಿತಂ ಯಜ್ಞಸ್ಯ ದೇವಮ್ | ಪುರೋಹಿತಮಿತಿ ಪುರಃ ಹಿತಮ್ |

4. ಯಜ್ಞಸ್ಯ ದೇವಂ ದೇವಂ ಯಜ್ಞಸ್ಯ ಯಜ್ಞಸ್ಯ ದೇವಮೃತ್ವಿಜ ಮೃತ್ವಿಜಂ ದೇವಂ ಯಜ್ಞಸ್ಯ ಯಜ್ಞಸ್ಯ ದೇವಮೃತ್ವಿಜಮ್ |

5. ದೇವಮೃತ್ವಿಜಮೃತ್ವಿಜಂ ದೇವಂ ದೇವಮೃತ್ವಿಜಮ್ | ಋತ್ವಿಜಮಿತ್ಯೃ ತ್ವಿಜಮ್ |

6. ಹೋತಾರಂ ರತ್ನಧಾತಮಂ ರತ್ನಧಾತಮಂ ಹೋತಾರಂ ರತ್ನಧಾತಮಮ್ ರತ್ನಧಾತಮಮಿತಿ ರತ್ನಧಾsತಮಮ್.

ಇದು ಈಗ ಬಳಕೆಯಲ್ಲಿರುವ ಘನಪಾಠದ ಪ್ರಕಾರವೆಂಬುದಾಗಿಯೂ, ಮತ್ತೊಂದು ಪ್ರಕಾರ ಇರುವುದೆಂಬುದಾಗಿಯೂ ವ್ಯಾಳಿಶಿಕ್ಷಾ ವ್ಯಾಖ್ಯಾನಕಾರರು ಹೇಳಿ ಅದರ ಲಕ್ಷಣವನ್ನು ಹೀಗೆ ವಿವರಿಸಿದ್ದಾರೆ-

ಅನ್ತಾತ್ ಕ್ರಮಂ ಪಠೇತ್ ಪೂರ್ವಂ ಆದಿಪರ್ಯನ್ತಮಾನಯೇತ್ |
ಆದಿಕ್ರಮಂ ನಯೇದಂತಂ ಘನಮಾಹುರ್ಮನೀಷಿಣಃ ||

ಅದರಂತೆ-

1. ಋತ್ವಿಜಮಿತ್ಯೃತ್ವಿಜಮ್ | ದೇವಮೃತ್ವಿಜಮ್ | ಯಜ್ಞಸ್ಯ ದೇವಮ್ |

ಪುರೋಹಿತಂ ಯಜ್ಞಸ್ಯ | ಪುರೋಹಿತಮಿತಿ ಪುರಃ ಹಿತಮ್ |

2. ಈಳೇ ಪುರೋಹಿತಮ್ | ಅಗ್ನಿಮೀಳೇ |

ಈಳೇ ಪುರೋಹಿತಮ್ | ಪುರೋಹಿತಂ ಯಜ್ಞಸ್ಯ | ಪುರೋಹಿತಮಿತಿ

ಪುರಃ ಹಿತಮ್ | ಯಜ್ಞಸ್ಯ ದೇವಮ್ | ದೇವಮೃತ್ವಿಜಮ್ |

ಋತ್ವಿಜಮಿತ್ಯೃತ್ವಿಜಮ್ |

3. ರತ್ನಧಾತಮಮಿತಿ ರತ್ನsಧಾತಮಮ್ | ಹೋತಾರಂ ರತ್ನಧಾತಮಮ್ | ರತ್ನಧಾತಮಮಿತಿ ರತ್ನsಧಾತಮಮ್ |

ಎಂದು ಆಗುವುದು.

ಈ ಬಗೆಯ ಅಭ್ಯಾಸಗಳಿಂದ ಪ್ರಕೃತಿ ಪ್ರತ್ಯಯ ವಿಭಾಗ, ಅವುಗಳಲ್ಲಿಯ ವ್ಯಾಕರಣ ವಿಶೇಷ, ಪ್ರತ್ಯೇಕಪದ-ಸಂಹಿತೆಗಳ ಸ್ವರ ನಿರ್ಣಯ, ಧಾತು-ಉಪವರ್ಗ ವಿವೇಕ, ಅದರ ಸ್ವರ ವಿಶೇಷ, ಸಮಾಸ ಜ್ಞಾನ, ಅದರ ಸ್ವರ, ಇತ್ಯಾದಿಯಾಗಿ ವೇದಾಕ್ಷರಗಳಲ್ಲಿ ಬಂದು ಮಾತ್ರಾಕಾಲದಲ್ಲೂ ಹೆಚ್ಚು ಕಡಿಮೆಯಾಗದ ಸಂರಕ್ಷಣೆ, ಇದರಿಂದ ಶಿಕ್ಷಾ ನಿರುಕ್ತಾದಿಗಳಿಂದ ಒದಗಿದ ಅರ್ಥಪರಿಜ್ಞಾನ, ಧ್ಯಾನ ಸ್ಥಾನಗಳ ಜವಾಬ್ದಾರಿ, ಕರ್ಮಗಳಲ್ಲಿ ಉಪಯೋಗಿಸುವಾಗ ವರ್ಣ ಪದಾದಿ ದೇವತೆಗಳ ಪ್ರಕೋಪಕ್ಕೆ ಈಡಾಗದೇ ಅವರ ಪ್ರಸನ್ನತೆ ಹೊಂದುವುದು. ಅದರ ಮೂಲಕ ಧಾತು ಪ್ರಸನ್ನತೆಯಿಂದ ಪರಮ ಶಾಂತಿ-ಇವೆಲ್ಲ ಪ್ರಯೋಜನಗಳೂ ಸಿದ್ಧಿಸುವುವೆಂಬುದು ವೇದ ರಹಸ್ಯವನ್ನು ಅಂಗೈನೆಲ್ಲಿಯಂತೆ ಅರಿತ ಮಹರ್ಷಿಗಳ ನಿರ್ಣಯ, ಸಂಹಿತಾಪಾಠತಃ ಪುಣ್ಯಂ, ದ್ವಿಗುಣಂ ಪದಪಾಠತಃ ಎಂಬುದೂ

ಜಟಾದಿ ವಿಕೃತೀನಾಂ ಯೇ ಪರಾಯಣ ಪಾರಾಯಣಾಃ |
ಮಹಾತ್ಮಾನೋ ದ್ವಿಜಶ್ರೇಷ್ಠಾಃ ತೇ ಜ್ಞೇಯಾಃ ಪಙ್ಕ್ತೆಪಾವನಾಃ ||

-ಎಂಬ ಮಾತೂ ಪಾಠಕ್ರಮದ ಉಪಯೋಗಗಳನ್ನು ಎತ್ತಿ ತೋರುತ್ತವೆ. ಅಧ್ಯಯನದ ಅವಧಿಯನ್ನು ಸಲಕ್ಷಣ-ಘನಾಂತ ಎಂಬುದಾಗಿಯೂ, ಹಾಗೆ ಅಧ್ಯಯನ ಮಾಡಿದವರನ್ನು ಘನಪಾಠಿ ಎಂಬುದಾಗಿಯೂ ಗೌರವಿಸುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. Scharfe, Ch. 13: "Memorising the Veda", p. 240 ff.
  2. Krishnananda, p. 112.

ಗ್ರಂಥಸೂಚಿ

ಬದಲಾಯಿಸಿ
  • Scharfe, Hartmut. Education in Ancient India", 2002, BRILL; ISBN 90-04-12556-6, ISBN 978-90-04-12556-8
  • Krishnananda (Swami.), S. Bhagyalakshmi. Facets of Spirituality: Dialogues and Discourses of Swami Krishnananda. Motilal Banarsidass, 1st edition (June 1, 1986). ISBN 978-81-208-0093-9

ಹೊರಗಿನ ಕೊಂಡಿಗಳು

ಬದಲಾಯಿಸಿ



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ವೇದಪಾಠ&oldid=1264873" ಇಂದ ಪಡೆಯಲ್ಪಟ್ಟಿದೆ