ವೆಂಕಟರಮಣ ದೇವಸ್ಥಾನ, ಕಾರ್ಕಳ

ಕರ್ನಾಟಕ, ಭಾರತದಲ್ಲಿರುವ ಒಂದು ದೇವಸ್ಥಾನ

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನವು ಸುಮಾರು ೫೫೦ ವರ್ಷಗಳ ಇತಿಹಾಸವುಳ್ಳದ್ದಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ದೇವಳವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಕಾರ್ಕಳದಲ್ಲಿ ಇದೆ. ಜಿಲ್ಲಾ ಕೇಂದ್ರದಿಂದ ೩೮ ಕಿಲೋಮೀಟರ್ ಆಗ್ನೇಯದಲ್ಲಿದೆ.

ಶ್ರೀ ವೆಂಕಟರಮಣ ದೇವಸ್ಥಾನ
ದೇವಾಲಯದ ಮುಂಭಾಗ
ದೇವಾಲಯದ ಮುಂಭಾಗ
ಭೂಗೋಳ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಉಡುಪಿ ಜಿಲ್ಲೆ
ಸ್ಥಳಕಾರ್ಕಳ
ಇತಿಹಾಸ ಮತ್ತು ಆಡಳಿತ
ಸೃಷ್ಟಿಕರ್ತಗೌಡ ಸಾರಸ್ವತ ಬ್ರಾಹ್ಮಣರು
ಅಧೀಕೃತ ಜಾಲತಾಣwww.svtkarkala.com

ತಿರುಪತಿಯಲ್ಲಿರುವ ತಿರುಮಲ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಇರುವುದರಿಂದ ಕಾರ್ಕಳದ ವೆಂಕಟರಮಣ ದೇವಸ್ಥಾನವನ್ನು ಪಡುತಿರುಪತಿ ಎಂದೂ ಕರೆಯಲಾಗುತ್ತದೆ.

ಐತಿಹ್ಯ ಹಾಗೂ ಇತಿಹಾಸ ಬದಲಾಯಿಸಿ

ಗೌಡ ಸಾರಸ್ವತ ಬ್ರಾಹ್ಮಣ ಸಮಯದಾಯ ಕ್ರಿಸ್ತಪೂರ್ವ ೩ನೇ ಶತಮಾನದಲ್ಲಿ ಉತ್ತರದಿಂದ ಗೋವಾ ಪ್ರದೇಶಕ್ಕೆ ವಲಸೆ ಬಂದು ಕೃಷಿ ಹಾಗೂ ವ್ಯಾಪಾರದಂತಹ ಜೀವನೋಪಾಯ ವೃತ್ತಿಗಳಲ್ಲಿ ನೆಲೆಗೊಂಡಿತು. ಹೀಗೆ ವಲಸೆ ಬಂದವರಲ್ಲಿ ಕೆಲವು ಕುಟುಂಬಗಳು ಉದ್ಯೋಗ ಅರಸಿ ಗೋವಾದಿಂದ ದಕ್ಷಿಣಕ್ಕೆ ಸಾಗಿದರು. ಈ ರೀತಿ ವಲಸೆ ಬಂದವರಲ್ಲಿ ಕಾರ್ಕಳದಲ್ಲಿ ನೆಲೆಗೊಂಡ ಸೋಹಿರೇ ಪ್ರಭು ಅವರ ಕುಟುಂಬವೂ ಒಂದು. ಕಾರ್ಕಳದಲ್ಲಿ ಅವರು ಯಾವ ವೃತ್ತಿ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿಯದಿದ್ದರೂ, ಅವರ ಮುಂದಿನ ಪೀಳಿಗೆಯವರು ನಿರ್ವಹಿಸುತ್ತಿದ್ದ ಆಯುರ್ವೇದ ವೈದ್ಯಕೀಯದ ವೃತ್ತಿಯನ್ನು ಗಮನಿಸಿ ಸೋಹಿರೇ ಪ್ರಭುಗಳೂ ಕೂಡ ಅಯುರ್ವೇದ ಪಂಡಿತರಾಗಿದ್ದರು ಎಂಬ ಊಹೆ ಇದೆ. ಇನ್ನೊಂದು ಐತಿಹ್ಯದ ಪ್ರಕಾರ, ಸೋಹಿರೆ ಪ್ರಭು ಭಟ್ಕಳದವರಾಗಿದ್ದು, ಭಟ್ಕಳಕ್ಕೆ ಭೇಟಿ ನೀಡಿದ್ದ ಆಗ ಕಾರ್ಕಳವನ್ನು ಆಳುತ್ತಿದ್ದ ಜೈನ ಮತಾವಲಂಬಿ ಬೈರವರಸರು, ಅಲ್ಲಿನ ಗೌಡ ಸಾರಸ್ವತ ಬ್ರಾಹ್ಮಣರ ಪಾಂಡಿತ್ಯಕ್ಕೆ ಮುದಗೊಂಡು, ಸೋಹಿರೇ ಪ್ರಭು ಹಾಗೂ ಇತರ ಮೂರು ಕುಟುಂಬಗಳನ್ನು ಕಾರ್ಕಳಕ್ಕೆ ಕರೆತಂದು ಅವರಿಗೆ ರಾಜಾಶ್ರಯ ನೀಡಿದರು ಎನ್ನಲಾಗುತ್ತದೆ. ಹೀಗೆ ಸೋಹಿರೆ ಪ್ರಭು ಹಾಗೂ ಇತರ ಮೂರು ಕುಟುಂಬದವರು ಕಾರ್ಕಳದಲ್ಲಿ ನೆಲೆಗೊಂಡರು. ಒಮ್ಮೆ ಗೋವಾದಿಂದ ತಿರುಪತಿಗೆ ತೆರಳಿದ್ದ ಸೋಮ ಶರ್ಮ ಎಂಬ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಗೃಹಸ್ಥರು ಮರಳಿ ಗೋವಾದತ್ತ ಹೋಗುತ್ತಿರುವಾಗ, ತನ್ನ ಪತ್ನಿ ಗರ್ಭಿಣಿಯಾದುದರಿಂದ ಕಾರ್ಕಳದಲ್ಲಿ ಸೋಹಿರೆ ಪ್ರಭು ಅವರ ಆಶ್ರಯದದಲ್ಲಿ ಉಳಿಯಬೇಕಾಗುತ್ತದೆ. ಮುಂದೆ ಸೋಹಿರೆ ಪ್ರಭುರವರ ಸಲಹೆಯಂತೆ ಕಾರ್ಕಳದಲ್ಲೇ ನೆಲೆಸುತ್ತಾರೆ. ವೇದ ಹಾಗು ಜ್ಯೋತಿಷ್ಯ ಶಾಸ್ತ್ರದ ಜ್ಞಾನಹೊಂದಿದ್ದ ಸೋಮ ಶರ್ಮರು, ಜ್ಯೋತಿಷ್ಯ ಶಾಸ್ತ್ರವನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದರು. ಕಾರ್ಕಳದಲ್ಲಿ ಅದಾಗಲೇ ನೆಲೆಗೊಂಡಿದ್ದ ಗೌಡ ಸಾರಸ್ವತ ಬ್ರಾಹ್ಮಣರು ಬಹುತೇಕ ಸಾಸಷ್ಟಿಯ ವೈಷ್ಣವರಾಗಿದ್ದರು. ಆ ಕಾಲದಲ್ಲಿ ಕಾರ್ಕಳದಲ್ಲಿ ಶಿವಾಲಯಗಳಿದ್ದರೂ ವೈಷ್ಣವ ದೇವಾಲಯವಿರಲಿಲ್ಲ. ಆಗ ಸೋಮ ಶರ್ಮ ಮತ್ತು ಸೋಹಿರೆ ಪ್ರಭು ಕಾರ್ಕಳದಲ್ಲಿ ವೈಷ್ಣವ ದೇವಾಲಯವೊಂದನ್ನು ನಿರ್ಮಿಸುವ ನಿರ್ಧಾರ ಕೈಗೊಂಡರು. ಸೋಮ ಶರ್ಮರು ತಿರುಪತಿಯಿಂದ ಬರುವಾಗ ವೆಂಕಟರಮಣನ ವಿಗ್ರಹವೊಂದನ್ನು ತಂದಿದ್ದರು. ಅದನ್ನೇ ಪ್ರತಿಷ್ಠಾಪಿಸುವ ಉದ್ದೇಶ ಹೊಂದಿದರು. ಬಳಿಕ ಬೈರವರಸನಲ್ಲಿ ದೇವಳ ನಿರ್ಮಾಣಕ್ಕೆ ಅನುಮತಿ ಕೇಳಿದರು. ಕಾರ್ಕಳದಿಂದ ವರಂಗಕ್ಕೆ ಹೋಗುವ ದಾರಿಯಲ್ಲಿ ಕಾಡಿನಿಂದ ಆವೃತ್ತವಾದ ಪ್ರದೇಶವೊಂದನ್ನು ದೇವಾಲಯ ಹಾಗೂ ಮನೆಗಳನ್ನು ನಿರ್ಮಿಸುವ ಸಲುವಾಗಿ ಸೋಮ ಶರ್ಮ ಹಾಗೂ ಸೋಹಿರೇ ಪ್ರಭುಗಳಿಗೆ ಬೈರವರಸರು ನೀಡಿದರು. ಈ ಎಲ್ಲಾ ವಿಷಯಗಳಿಗೆ ಯಾವುದೇ ದಾಖಲೆಗಳಿಲ್ಲ. ಆದರೆ ಇಂದಿಗೂ ಸೋಹೀರೇ ಪ್ರಭುರವರ ವಂಶಸ್ಥರೇ ದೇವಸ್ಥಾನದ ಒಂದನೇ ಮೊಕ್ತೇಸರರಾಗಿರುತ್ತಾರೆ ಹಾಗೂ ಸೋಮಶರ್ಮರ ವಂಶಸ್ಥರೇ ಅರ್ಚಕ ವರ್ಗದವರಾಗಿತ್ತಾರೆ. ಅವರ ಮೌಖಿಕ ಹೇಳಿಕೆಗಳನ್ನು ಹಾಗೂ ಕ್ರಿಸ್ತಶಕ ೧೪೩೨ರಲ್ಲಿ ನಡೆದ ಕಾರ್ಕಳ ಗೊಮ್ಮಟೆಶ್ವರನ ಪ್ರತಿಷ್ಠೆಯಂದು ಗೌಡ ಸಾರಸ್ವತ ಬ್ರಾಹ್ಮಣರಿಗೆ ಅವರ ಗುಡಿಯಲ್ಲೇ ಅನ್ನ ಸಂತರ್ಪಣೆ ನಡೆದ ಬಗ್ಗೆ ಉಲ್ಲೇಖವಿರುವುದನ್ನೇ ದಾಖಲೆಯಾಗಿ ಪರಿಗಣಿಸಲಾಗಿದೆ.[೧]

೧೬ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸರು ಗೋವಾದಲ್ಲಿ ತಮ್ಮ ರಾಜಕೀಯ ಆಧಿಪತ್ಯವನ್ನು ಸ್ಥಾಪಿಸಿದರು. ಆ ಸಂದರ್ಭದಲ್ಲಿ ಪೋರ್ಚುಗೀಸರು ಸ್ಥಳೀಯರನ್ನು ಒತ್ತಾಯದಿಂದ ಕ್ರೈಸ್ತಧರ್ಮಕ್ಕೆ ಮತಾಂತರಗೊಳಿಸತೊಡಗಿದರು[೨]. ಈ ಮತತಾಂತರಕ್ಕೆ ಒಲ್ಲದೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಹಲವರು ಗೋವಾದಿಂದ ದಕ್ಷಿಣ ದಿಕ್ಕಿಗೆ ವಲಸೆ ಬಂದರು. ವಲಸೆ ಬಂದವರು ದಕ್ಷಿಣ ಕರಾವಳಿಯುದ್ದಕ್ಕೂ ಅಂದರೆ ಈಗ ಕರ್ನಾಟದಲ್ಲಿರುವ ಕಾರವಾರ, ಅಂಕೋಲಾ, ಶಿರಾಲಿ, ಭಟ್ಕಳ, ಗಂಗೊಳ್ಳಿ, ಮುಂತಾದ ಸ್ಥಳಗಳು ಹಾಗೂ ಕೇರಳದ ಮಂಜೇಶ್ವರ, ಕುಂಬ್ಳೆ, ಕೊಚ್ಛಿಯವರೆಗೂ ನೆಲೆ ಕಂಡುಕೊಳ್ಳುತ್ತಾ ಬಂದರು[೩]ಹೀಗೆ ಆಶ್ರಯ ಹುಡುಕುತ್ತಾ ಬಂದ ಈ ಸಮುದಾಯದವರು ಕೆಲವರು ಆ ಸಮಯದಲ್ಲಾಗಲೇ ಗೌಡ ಸಾರಸ್ವತ ಬ್ರಾಹ್ಮಣರಿದ್ದ ಕಾರ್ಕಳದಲ್ಲಿ ನೆಲೆಸಿದರು. ಈ ಸಮುದಾಯದವರು ವೆಂಕಟರಮಣ ದೇವಸ್ಥಾನದ ಆಸುಪಾಸಿನಲ್ಲೆ ಮನೆಗಳನ್ನು ಕಟ್ಟಿಕೊಂಡರು. ಹೀಗೆ ಹೊಸ ಪೇಟೆಯೊಂದು ದೇವಸ್ಥಾನದಿಂದ ಈಗ ಸಾಲ್ಮರವೆಂದು ಕರೆಯಲ್ಪಡುವ ಪ್ರದೇಶದವರೆಗೂ ವಿಸ್ತರಿಸಿತು.

ಪುನರ್‌ಪ್ರತಿಷ್ಠೆ ಬದಲಾಯಿಸಿ

ಕ್ರಿಸ್ತಶಕ ೧೫೧೧ರಲ್ಲಿ ಇಮ್ಮಡಿ ಬೈರವರಸನು ಕಾರ್ಕಳವನ್ನು ಆಳಿತ್ತಿದ್ದನು. ವಿಜಯನಗರದಲ್ಲಿ ಕೃಷ್ಣದೇವರಾಯನು ಪಟ್ಟಕ್ಕೇರಿದ ಸಮಯ. (ಕ್ರಿಸ್ತಶಕ ೧೫೦೯). ವಿಜಯ ನಗರದ ಸಾಮಂತರಾದ ಬಂಗರಸರು ಹಾಗೂ ಬೈರವಸರು ಸ್ವತಂತ್ರರಾಗಲು ಬಂಡಾಯವೆದ್ದರು. ಬಂಡಾಯವನ್ನು ಅಡಗಿಸಲು ಕೃಷ್ಣದೇವರಾಯನ ಸೈನ್ಯವು ಮಂಗಳೂರಿನ ಭುವನಸಾಲೆ ಎಂಬಲ್ಲಿ ಬೀಡು ಬಿಟ್ಟಿತು. ಬಂಡಾಯವೆದ್ದಿದ್ದ ಬೈರವರಸ ವಿಜಯನಗರದ ಸೈನ್ಯಕ್ಕೆ ಬೆದರಿ ರಾಜ್ಯ ಭ್ರಷ್ಟನಾಗಿ ಕಳಸವನ್ನು ಸೇರಿದನು. ನಂತರ ಕ್ರಿಸ್ತಶಕ ೧೫೧೬ರಲ್ಲಿ ವಿಜಯನಗರದ ಸಾಮಂತತನವನ್ನು ಒಪ್ಪಿಕೊಂಡು ಮರಳಿ ಕಾರ್ಕಳದ ಆಡಳಿತವನ್ನು ಕೈಗೊಳ್ಳುವನು. ಕ್ರಿಸ್ತಶಕ ೧೫೧೧ರಿಂದ ಕ್ರಿಸ್ತಶಕ ೧೫೧೬ರ ಅವಧಿಯಲ್ಲಿ ಕಾರ್ಕಳ ಪ್ರದೇಶವು ಸ್ಥಳಿಯ ರಾಜನಿಲ್ಲದೆ ಅರಾಜಕತೆಗೆ ಈಡಾಗಿತ್ತು. ಇಂಥಹ ಅರಾಜಕ ಬೀಡಿನಲ್ಲಿ ಕಳ್ಳತನ, ದರೋಡೆಗಳೆಲ್ಲ ಸಹಜ ಪ್ರಕ್ರಿಯಗಳಾದವು. ದೇವಸ್ಥಾನದ ಈಗಿನ ಅರ್ಚಕರು, ಅಂದರೆ ಸೋಮಶರ್ಮರ ವಂಶಸ್ಥರ ಮೌಖಿಕ ಹೇಳಿಕೆಯ ಪ್ರಕಾರ, ಆಗ ಕಂದಹಾರ ಮೂಲದ ಅಲೆಮಾರಿ ಜನಾಂಗವೊಂದು ಲುಟಿ ಮಾಡುವ ಉದ್ದೇಸದಿಂದ ಕಾರ್ಕಳವನ್ನು ಮುತ್ತಿತು. ಈ ಆಕ್ರಮಣದಿಂದ ಆತಂಕಗೊಂಡ ಕಾರ್ಕಳದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ದೇವರ ವಿಗ್ರಹ ಹಾಗೂ ಇತರ ಸೊತ್ತುಗಳನ್ನು ತೆಗೆದುಕೊಂಡು ಮೂಲ್ಕಿಯತ್ತ ಹೋಗುವರು. ಅಲ್ಲಿ ಭಾವಿಯೊಂದರಲ್ಲಿ ಎಲ್ಲವನ್ನೂ ಅಡಗಿಸಿಟ್ಟರು. ಅಲೆಮಾರಿಗಲೂ ನಿರ್ಗಮಿಸಿದ ಬಳಿಕ ಕಾರ್ಕಳಕ್ಕೆ ಹಿಂದಿರುಗಿದರೂ ಆ ಸೊತ್ತುಗಳನ್ನು ತರುವ ದೈರ್ಯ ಮಾಡಲಿಲ್ಲ. ಬಳಿಕ ಕ್ರಿಸ್ತಶಕ ೧೫೧೬ರಲ್ಲಿ ಬೈರವರಸನು ಹಿಂತಿರುಗಿದ ನಂತರ ಆ ಸೊತ್ತುಗಳನ್ನು ಮೂಲ್ಕಿಯಿಂದ ಮರಳಿ ತರಲು ನಿರ್ಧರಿಸಿದರು. ಸೊತ್ತುಗಳನ್ನು ಅಡಗಿಸಿಟ್ಟ ಜಾಗದಲ್ಲಿ ಸೋಮ ಶರ್ಮರ ಪ್ರತಿಷ್ಠೆ ಮಾಡಿದ್ದ ವೆಂಕಟರಮಣ ಮೂರ್ತಿ ಇರಲಿಲ್ಲ. ಎಷ್ಟು ಹುಡುಕಿದರೂ ಸಿಗಲಲಿಲ್ಲ. ಕಾರ್ಕಳದ ಮಹಾಜನರು ನಿರಾಶರಾಗಿ ಹಿಂದಿರುಗಿದರು. ಆ ಮೂರ್ತಿಯು ಮುಲ್ಕಿಯ ವ್ಯಕ್ತಿಗೆ ದೊರಕಿ ಅದನ್ನು ಮುಲ್ಕಿಯಲ್ಲಿಯೇ ಪ್ರತಿಷ್ಠಾಪಿಸಲಾಯಿತು. ಈ ವಿಚಾರ ತಿಳಿದ ಕಾರ್ಕಳದ ಗೌಡ ಸಾರಸ್ವತ ಬ್ರಾಹ್ಮಣರು ಮುಲ್ಕಿಗೆ ಧಾವಿಸಿ ಪ್ರತಿಮೆಗಳನ್ನು ಕೇಳುವರು. ಆದರೆ ಅದಾಗಲೇ ಪ್ರತಿಷ್ಠಿತವಾಗಿದ್ದ ಮೂರ್ತಿಯನ್ನು ನೀಡಲು ಮುಲ್ಕಿಯವರು ನಿರಾಕರಿಸುತ್ತಾರೆ. ಮುಲ್ಕಿಯಲ್ಲಿ ಈ ವೆಂಕಟರಮಣ ದೇವರ ಪ್ರತಿಮೆ ಪ್ರತಿಷ್ಠಾಪಿಸಲ್ಟಟ್ಟಿದ್ದು ೧೫೨೦ರಲ್ಲಿ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ.[೪]

ಕಾರ್ಕಳದ ದೇವಳದಲ್ಲಿ ಹೊಸ ಮೂರ್ತಿಯ ಪ್ರತಿಷ್ಠೆಗಾಗಿ, ದೇವರ ಪ್ರತಿಮೆ ತರಲು ತಿರುಪತಿಗೆ ಒಂದು ತಂಡವು ತೆರಳುವುದು. ಹೀಗೆ ಹೋದ ತಂಡ ಬಹಳ ಸಮಯದವರೆಗೂ ಮರಳಿ ಬರುವುದಿಲ್ಲ. ಅದೇ ಸಂದರ್ಭದಲ್ಲಿ ಕಾರ್ಕಳಕ್ಕೆ ತಿರುಪತಿಯಿಂದ ಗೋಸಾವಿಯಬ್ಬರ ಆಗಮನವಾಗುತ್ತದೆ.ಆ ದಿನಗಳಲ್ಲಿ ತಿರುಪತಿಯ ತಿರುಮಲ ದೇವಸ್ಥಾನದ ಆದಾಯದ ಶೇಕಡಾ ೬೬ ರಷ್ಟು ಆದಾಯ ಗೋಸಾವಿಗಳು ಎಂದು ಕರೆಯಲಾಗುವ ಧಾರ್ಮಿಕ ಮನೋವೃತ್ತಿಯ ವ್ಯಕ್ತಿಗಳ ತಂಡ ಊರಿಂದೂದೂರಿಗೆ ಹೋಗಿ ಸಂಗ್ರಹಿಸುವ ಕಾಣಿಕೆಗಳಿಂದಾಗಿತ್ತಿತ್ತು. ದೇವಾಲಯದಿಂದ ನೇಮಕವಾಗುವ ಈ ಗೋಸಾವಿಗಳು ದೇವರ ಪ್ರತಿಮೆಗಳನ್ನು ತಲೆಯ ಮೇಲೆ ಹೊತ್ತು ಊರಿಂದೂರಿಗೆ ಹೋಗಿ ಜನರಿಂದ ಕಾಣಿಕೆಗಳನ್ನು ಸಂಗ್ರಹಿಸಿ ಬ್ರಹ್ಮೋತ್ಸವದ ಸಮಯದಲ್ಲಿ ತಿರುಪತಿಗೆ ಮರಳುತ್ತಿದ್ದರು. ಅಂಥಹ ಒಬ್ಬ ಗೋಸಾಯಿ ಕಾಣಿಕೆ ಸಂಗ್ರಹಿಸಲು ಕಾರ್ಕಳಕ್ಕೆ ಬರುವನು. ಕಾರ್ಕಳದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಜನರು ಆ ಗೋಸಾವಿ ತಂದ ವಿಗ್ರಹಗಳನ್ನು ತಮಗೆ ನೀಡುವಂತೆ ಆಗ್ರಹಿಸುವರರು. ಪ್ರತೀ ವರ್ಷವೂ ದೇವರನ್ನು ತಿರುಪತಿಗೆ ಕೊಂಡೊಯ್ದು ಕಾರ್ಕಳದಲ್ಲಿ ಸಂಗ್ರಹಿಸಿದ ಕಾಣಿಕೆಯನ್ನು ತಿರುಪತಿಗೆ ಒಪ್ಪಿಸಬೇಕು ಎಂಬ ಶರತ್ತಿನ ಮೇರೆಗೆ ಆ ಗೋಸಾವಿ ವಿಗ್ರಹಗಳನ್ನು ಕಾರ್ಕಳದವರ ಸುಪರ್ದಿಗೆ ಒಪ್ಪಿಸುವನು. ತನ್ನ ಬಳಬಳಿಯಿರುವ ಶ್ರೀನಿವಾಸ ದೇವರ ಪ್ರತಿಮೆಯನ್ನು ಕಾರ್ಕಳದ ಗೌಡ ಸಾರಸ್ವತ ಸಮುದಾಯದವರಿಗೆ ಒಪ್ಪಸಿದ ಗೋಸಾವಿ ತಿರುಪತಿಗೆ ಮರಳದೇ ಕಾರ್ಕದಲ್ಲಿಯೆ ಉಳಿದರು. ಆತ ಕಾರ್ಕಳದಲ್ಲಿ ಕೊನೆಯುಸಿರೆಳೆದನು ಎಂದು ತಿಳಿದು ಬರುತ್ತದೆ. ಆ ಗೋಸಾವಿಯ ವೃಂದಾವನವು ದೇವಸ್ಥಾನದ ಹೊರಗಿನ ಸುತ್ತಿನ ಪಶ್ಚಿಮ ದಿಕ್ಕಿನಲ್ಲಿದೆ. ಆತ ಕಾಲವಾದ ದಿನವೆಂದು ಪ್ರತಿವರ್ಷ ಮಾಘ ಶುದ್ದ ಸಪ್ತಮಿಯ ದಿನ ಅಂದರೆ ರಥಸಪ್ತಮಿಯಂದು ಆ ವೃಂದವನದ ಮೇಲೆ ಸಾಲಿಗ್ರಾಮ ಸಹಿತ ಸಂಪುಟ ಹಾಗೂ ಮಾರುತಿ ವಿಗ್ರಹಗಳನ್ನಿಟ್ಟು ಪೂಜೆ ಸಲ್ಲಿಸಾಲಾಗುತ್ತದೆ. ಆ ಗೋಸಾವಿಗೆ ಕೊಟ್ಟ ವಚನದಂತೆ ಪ್ರತಿ ವರ್ಷ ದೇವರನ್ನು ತಿರುಪತಿಗೆ ಕೊಂಡೊಯ್ಯುವ ಬದಲು ಕಾರ್ಕಳದ ಪೂರ್ವ ದಿಕ್ಕಿಗೆ ಉತ್ಸವದಲ್ಲಿ ಕೊಂಡೊಯ್ದು ವನ ಭೊಜನ ಮಾಡುವ ಪದ್ದತಿಯನ್ನು ಈಗ ಅನುಸರಿಸುತ್ತಿದ್ಧಾರೆ. ಗೋಸಾವಿಯು ಆ ಶ್ರೀನಿವಾಸನ ಪ್ರತಿಮೆಯನ್ನು ಚಪ್ಪರದಲ್ಲಿಟ್ಟು ಪೂಜಿಸುತ್ತಿದ್ದರಿಂದ "ಚಪ್ಪರ ಶ್ರೀನಿವಾಸ" ಎಂದು ಕರೆಯುವುದು ವಾಡಿಕೆಯಾಗಿದೆ.[೫]

ಶ್ರೀನಿವಾಸ ದೇವರ ಪ್ರತಿಮೆ ಪ್ರತಿಷ್ಠೆಯಾದ ಕೆಲವೇ ದಿನಗಳಲ್ಲಿ ತಿರುಪತಿಗೆ ತೆರಳಿದ್ದ ತಂಡ ಶ್ರೀದೇವಿ-ಭೂದೇವಿ ಸಹಿತವಾದ ವೆಂಕಟರಮಣ ದೇವರ ಹೊಸ ಪ್ರತಿಮೆಯೊಂದಿಗೆ ಮರಳಿ ಬರುತ್ತದೆ. ಅಂದಿನಿಂದ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಎರಡು ವಿಗ್ರಹಗಳಾದವು. ಮೊದಲು ಗುಡಿಯಿದ್ದ ಸ್ಥಳದಲ್ಲೇ ಕಲ್ಲಿನ ಗುಡಿಯನ್ನು ಕಟ್ಟಿ ಶ್ರೀನಿವಾಸ ದೇವರು ಹಾಗೂ ಶ್ರೀದೇವಿ-ಭೂದೇವಿ ಸಹಿತ ವೆಂಕಟರಮಣ ದೇವರ ಪ್ರತಿಮೆಯನ್ನು ಪ್ರತಿಷ್ಠೆ ಮಾಡಿದರು. ಲಭ್ಯವಿರುವ ಶಾಸನ ಪ್ರಕಾರ ಈ ಪುನರ್ ಪ್ರತಿಷ್ಠೆಯು ಶಾಲಿವಾಹನ ಶಕ ವರುಷ ೧೪೫೯ನೇ ಹೇವಿಳಂಬಿ ಸಂವತ್ಸರದ ವೈಶಾಖ ಶುದ್ದ ಹುಣ್ಣಿಮೆಯಂದು ಅಂದರೆ ಕ್ರಿಸ್ತಶಕ ೧೫೩೭ನೇ ಏಪ್ರಿಲ್ ೨೫ರಂದು ನಡೆಯಿತೆಂದು ತಿಳಿದು ಬರುತ್ತದೆ.

ದೇವಸ್ಥಾನದ ಚಟುವಟಿಕೆ ಹಾಗೂ ಆದಾಯ ಹೆಚ್ಚುತ್ತಿದ್ದಂತೆ ದೇವಸ್ಥಾನದ ಜೀರ್ಣೋದ್ದಾರದ ಯೋಜನೆ ಮಾಡಲಾಯಿತು. ಕ್ರಿಸ್ತಶಕ ೧೭೭೬ ನವೆಂಬರ್ ನಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆ ಆರು ತಿಂಗಳಲ್ಲಿ ಪೂರ್ಣಗೊಂಡಿತು. ಕ್ರಿಸ್ತಶಕ ೧೭೭೭ರ ಏಪ್ರಿಲ್ ದೇವಾಲಯದ ಪುನರ್ ಪ್ರತಿಷ್ಠೆ ನಡೆಯಿತು. ಇದಾದ ಮೇಲೆ ನವೀಕರಣದ ಕೆಲಸಗಳು, ದೇವರ ಆಭರಣಗಳು, ಪರಿವಾರ ದೇವರ ಪ್ರತಿಷ್ಠೆ, ನೂತ ಚಂದ್ರಸಾಲೆಯ ನಿರ್ಮಾಣ ಇತ್ಯಾದಿಗಳು ಕ್ರಿಸ್ತಶಕ ೧೯೨೦ರವರೆಗೆ ನಡೆದವು. ಈ ದೇವಸ್ಥಾನದ ಮರು ಜೀರ್ಣೋದ್ದಾರವು ಕ್ರಿಸ್ತಶಕ ೨೦೧೫ರಲ್ಲಿ ಕೈಗೊಂಡು ಕ್ರಿಸ್ತಶಕ ೨೦೧೬ರ ಮೇ ೧ರಂದು ಪೂರ್ಣಗೊಳಿಸಲಾಯಿತು.[೬]

ಉತ್ಸವ ಹಾಗೂ ಆಚರಣೆಗಳು ಬದಲಾಯಿಸಿ

ದಿನ ನಿತ್ಯದ ಪೂಜೆಗಳೊಂದಿಗೆ ಕೆಲವು ವಾರ್ಷಿಕ ಉತ್ಸವಗಳು ಹಾಗೂ ವಿಶೇಷ ಆಚರಣೆಗಳು ನಡೆಯುತ್ತವೆ

ರಾಮದಂಡು ಬದಲಾಯಿಸಿ

ಗೋಸಾವಿಗೆ ನೀಡಿದ ವಚನದಂತೆ ತಿರುಪತಿ ದೇವರಿಗೆ ಎಂದು ಬರುವ ಕಾಣಿಕೆಯನ್ನು ಪ್ರತ್ಯೇಕವಾಗಿ ತೆಗೆದಿಟ್ಟು ಕೆಲವು ವರ್ಷಗೊಳಿಗೊಮ್ಮ ತಿರುಪತಿಗೆ ತೆರಳಿ ಪಾವತಿಸುತ್ತಾರೆ. ಕಾಣಿಕೆ ಪಾವತಿಸುವ ಈ ಯಾತ್ರೆಗೆ ---ರಾಮದಂಡು--- ಎನ್ನುತ್ತಾರೆ.

ಕ್ರಿಸ್ತಶಕ ೧೫೩೭ರಿಂದ ಹಲವು ಸಾರಿ ರಾಮದಂಡು ತಿರುಪತಿಗೆ ಹೊಗಿರಬಹುದಾದರು ಕ್ರಿಸ್ತಶಕ ೧೮೧೩ರವರೆಗೆ ಅವುಗಳ ದಾಖಲೆ ಲಭ್ಯವಿಲ್ಲ. ಕ್ರಿಸ್ತಶಕ ೧೮೧೩, ೧೮೪೫, ೧೯೦೧, ೧೯೭೦ರಲ್ಲಿ ರಾಮದಂಡು ತಿರುಪತಿಗೆ ಹೋಗಿರುವ ದಾಖಲೆಗಳಿವೆ. ಕ್ರಿಸ್ತಶಕ ೧೮೪೫ರಲ್ಲಿ ತಿರುಪತಿ ಧೇವರ ಮುಡಿಪನ್ನು ತೆಗೆದುಕೊಂಡು ೩೦೦ ಜನರ ರಾಮದಂಡು ತಿರುಪತಿಗೆ ಹೊರಟಾಗ, ಚದ್ಮ ಎಂಬ ಊರಿನಲ್ಲಿ ವಾಂತಿ ಭೇದಿ ಪ್ರಾರಂಭವಾಗಿ ಗೋವಿಂದರಾಜ ಪಟ್ಟಣ ಸೇರುವಾಗ ೭೫ ಜನ ಮರಣ ಹೊಂದಿರುವ ವಿಷಯ ಧಾಖಲೆಗಳಲ್ಲಿದೆ. ಉಳಿದವರು ದೇವರ ದರ್ಶನ ಪಡೆದು, ಕಾಣಿಕೆ ಸಲ್ಲಿಸಿ ಕಾರ್ಕಳಕ್ಕೆ ಮರಳಿದರೆನ್ನಲಾಗಿದೆ. ಈ ಯಾತ್ರೆಗೆ ತಗುಲಿದ ಸಮಯ ಎರಡು ತಿಂಗಳು ಇಪ್ಪತ್ತು ದಿನಗಳು.[೭]

ರಥೋತ್ಸವ ಬದಲಾಯಿಸಿ

ಕಾರ್ಕಳ ದೇವಸ್ಥಾನದಲ್ಲಿ ರಥೋತ್ಸವ ಆಚರಣೆಯು ಯಾವಾಗ ಪ್ರಾರಂಭವಾಯ್ತು ಎಂಬ ಬಗ್ಗೆ ದೃಢವಾದ ದಾಖಲೆಗಳಿಲ್ಲ. ಪುರಾತನ ಕಡತಗಳನ್ನು ಅವಲೋಕಿಸಿದಾಗ ಕ್ರಿಸ್ತಶಕ ೧೭೭೭ರ ಜೀರ್ಣೋದ್ಧಾರದ ನಂತರ ೧೭೮೫ರಲ್ಲಿ ಬಣ್ಣದ ರಥ ಹಾಗೂ ಕ್ರಿಸ್ತಶಕ ೧೮೨೭ರಲ್ಲಿ ಬ್ರಹ್ಮ ರಥದ ನಿರ್ಮಾಣವಾಯಿತೆಂದು ತಿಳಿದು ಬರುತ್ತದೆ. ಕಡತದಲ್ಲಿ ಸಿಕ್ಕಿದ ದಾಖಲೆಯೊಂದರಲ್ಲಿ ಕ್ರಿಸ್ತಶಕ ೧೮೧೬ರಲ್ಲಿ ನಡೆದ ರಥೋತ್ಸವದ ಖರ್ಚಿನ ವಿವರಗಳಿವೆ. ಇದರಿಂದ ೧೭೮೫ರಲ್ಲಿ ಬಣ್ಣದ ರಥ ನಿರ್ಮಾಣವಾದ ಮೇಲೆ ರಥೋತ್ವದ ಆಚರಣೆಯು ಆರಂಭವಾಯಿತು ಎಂಬ ಊಹೆ ಇದೆ. [೮]

ಈ ರಥೊತ್ಸವವನ್ನು ಹಿಂದೂ ಪಂಚಾಂಗಶಾಲಿವಾಹನ ಶಕೆಯ ಅನುಸಾರ ಪ್ರತಿವರ್ಷ ವೈ‍ಶಾಖ ಶುದ್ಧ ಪ್ರತಿಪದೆಯಿಂದ ವೈಶಾಖ ಶುದ್ಧ ಷಷ್ಠಿಯವರೆಗ ಆರು ದಿನಗಳ ಕಾಲ ಆಚರಿಸುವರು.

ದೀಪೋತ್ಸವ ಬದಲಾಯಿಸಿ

ಕಾರ್ತಿಕ ಮಾಸದ ಪಂಚಮಿಯಂದು ದೀಪೋತ್ಸವದ ಆಚರಿಸಲಾಗುತ್ತದೆ. ಅದೇ ದಿನ ಶ್ರೀ ಭುವನೇಂದ್ರ ಕಾಲೇಜಿನ ಬಳಿಯಿರುವ ವನದಲ್ಲಿ ವನ ಭೋಜನವು ನಡೆಯುವುದು.

ವಿಶ್ವರೂಪ ದರ್ಶನ ಬದಲಾಯಿಸಿ

ಕಾರ್ತೀಕ ಮಾಸದ ಕೊನೆಯ ಆದಿತ್ಯವಾರದಂದು ವಿಶ್ವರೂಪ ದರ್ಶನವನ್ನು ಆಚರಿಸಲಾಗುತ್ತದೆ.ದೇವಸ್ಥಾನದ ಪರಿಸರದಲ್ಲೇಲ್ಲಾ ದೀಪಗಳನ್ನು ಬೆಳಗಿ ಬ್ರಾಹ್ಮೀ ಮಹೂರ್ತದಲ್ಲಿ ವಿಷ್ವರೂಪ ದರ್ಶನ ಪುಜೆ ಮಾಡಲಾಗುವುದು. ಸುಮಾರು ಏಳೆಂಟು ಸಾವಿರ ಜನ ಸಾಲಾಗಿ ಬಂದು ದೇವರ ದರ್ಶನ ಮಾಡುವುದು ಈ ದಿನದ ವಿಶೇಷ.

ಉಲ್ಲೇಖಗಳು ಬದಲಾಯಿಸಿ

  1. ಕೆ. ಪದ್ಮನಾಭ ಪುರಾಣಿಕರು ಸಂಪಾದಿಸಿದ "ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಸಂಕ್ಷಿಪ್ತ ಚರಿತ್ರೆ"
  2. "ಗೋವಾ 'ಇನ್ಕ್ವಿಸಿಷನ್' ಅತ್ಯಂತ ನಿರ್ದಯ ಮತ್ತು ಕ್ರೂರವಾಗಿತ್ತು - Goa Inquisition was most merciless and cruel". www.rediff.com (in English). 14 September 2004. Archived from the original on 22 April 2020. Retrieved 3 June 2020.{{cite web}}: CS1 maint: unrecognized language (link)
  3. ನಾಯಕ್, ಜ್ಯೋತಿ ಜಿ. "ಗೌಡ ಸಾರಸ್ವತ ಬ್ರಾಹ್ಮಣರ ಸಂಸ್ಕೃತಿಯ ಅಧ್ಯಯನ - ಉತ್ತರ ಕನ್ನಡ ಜಿಲ್ಲೆಯ ಮೇಲೆ ವಿಶೇಷ ಗಮನ - A Study on Culture of GoudSaraswat Brahmins-Special Reference on Uttar Kannada District" (PDF). International Journal of History and Cultural Studies (IJHCS) (in English): 36. ISSN 2454-7654. Retrieved 3 June 2020.{{cite journal}}: CS1 maint: unrecognized language (link)
  4. "ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ" ರಚನೆ: ಯಚ್. ಶಿವರಾಯ ಭಟ್
  5. "ಕಾರ್ಕಳ ಮತ್ತು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ (ಇತಿಹಾಸ)(ಮೊದಲ ಮುದ್ರಣ, ಪುಟ ೨೪) ಲೇ: ಮಾಳ ದೇವದಾಸ ಶೆಣೈ, ಕಾರ್ಕಳ ರವೀಂದ್ರ ಭಟ್
  6. "ಉನ್ನಯನ" ಲೇ: ಮಾಳ ದೇವದಾಸ ಶೆಣೈ, ಪ್ರ: ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಕಳ
  7. "ಕಾರ್ಕಳ ಮತ್ತು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ (ಇತಿಹಾಸ)(ಮೊದಲ ಮುದ್ರಣ, ಪುಟ ೧೨೪ರಿಂದ ಪುಟ ೧೩೦) ಲೇ: ಮಾಳ ದೇವದಾಸ ಶೆಣೈ, ಕಾರ್ಕಳ ರವೀಂದ್ರ ಭಟ್
  8. "ಕಾರ್ಕಳ ಮತ್ತು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ (ಇತಿಹಾಸ)(ಮೊದಲ ಮುದ್ರಣ, ಪುಟ ೮೬) ಲೇ: ಮಾಳ ದೇವದಾಸ ಶೆಣೈ, ಕಾರ್ಕಳ ರವೀಂದ್ರ ಭಟ್