ವಿಭೀಷಣ ಪೌರಾಣಿಕ ಮಹಾಕಾವ್ಯ ರಾಮಾಯಣದಲ್ಲಿ ಲಂಕೆಯ ರಾಜನಾಗಿದ್ದನು. ಅವನು ಲಂಕೆಯ ರಾಕ್ಷಸ ರಾಜ ರಾವಣನ ಕಿರಿಯ ಸಹೋದರ. ರಾಕ್ಷಸನಾದರೂ, ವಿಭೀಷಣನು ಉದಾತ್ತ ಗುಣದವನಾಗಿದ್ದನು ಮತ್ತು ಸೀತೆಯನ್ನು ಅಪಹರಿಸಿದ್ದ ರಾವಣನಿಗೆ ಅವಳನ್ನು ಅವಳ ಪತಿ ರಾಮನಿಗೆ ಕ್ರಮಬದ್ಧ ರೀತಿಯಲ್ಲಿ ಮತ್ತು ಕೂಡಲೇ ಹಿಂತಿರುಗಿಸುವಂತೆ ಸಲಹೆ ನೀಡಿದನು. ಅವನ ಸಹೋದರ ಅವನ ಸಲಹೆಯನ್ನು ಕೇಳದಿದ್ದಾಗ, ವಿಭೀಷಣನು ರಾಮನ ಸೈನ್ಯವನ್ನು ಸೇರಿದನು. ನಂತರ, ರಾಮನು ರಾವಣನನ್ನು ಪರಾಭವಗೊಳಿಸಿದ ಮೇಲೆ, ರಾಮನು ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಮಾಡಿದನು.

ವಿಭೀಷಣನು ಸಾತ್ವಿಕ ಮನಸ್ಸು ಮತ್ತು ಹೃದಯ ಹೊಂದಿದ್ದನು. ಬಾಲ್ಯದಿಂದಲೇ, ಅವನು ತನ್ನ ಎಲ್ಲ ಸಮಯವನ್ನು ದೇವರ ಧ್ಯಾನದಲ್ಲಿ ತೊಡಗಿಸುತ್ತಿದ್ದನು. ಅಂತಿಮವಾಗಿ, ಬ್ರಹ್ಮನು ಪ್ರತ್ಯಕ್ಷವಾಗಿ ಅವನಿಗೆ ಬೇಕಾದ ಯಾವುದೇ ವರವನ್ನು ನೀಡಲು ಒಪ್ಪಿದನು. ತನಗೆ ಕೇವಲ ಭಗವಂತನ ಚರಣಕಮಲದಲ್ಲಿ ಮನಸ್ಸು ಸ್ಥಿರವಾಗಬೇಕು ಎಂದು ವಿಭೀಷಣನು ಹೇಳಿದನು. ತನಗೆ ಎಲ್ಲ ಕಾಲದಲ್ಲೂ ಭಗವಂತನ ಚರಣದಲ್ಲಿ ಇರುವಂಥ ಶಕ್ತಿ ನೀಡಬೇಕು ಮತ್ತು ವಿಷ್ಣುವಿನ ದರ್ಶನ ಸಿಗಬೇಕು ಎಂದು ಅವನು ಪ್ರಾರ್ಥಿಸಿದನು. ಈ ಪ್ರಾರ್ಥನೆ ನೆರವೇರಿತು ಮತ್ತು ಅವನು ತನ್ನ ಎಲ್ಲ ಸಂಪತ್ತು ಮತ್ತು ಕುಟುಂಬವನ್ನು ತ್ಯಜಿಸಲು ಸಮರ್ಥನಾದನು ಮತ್ತು ಅವತಾರನಾದ ರಾಮನನ್ನು ಸೇರಿದನು.

"https://kn.wikipedia.org/w/index.php?title=ವಿಭೀಷಣ&oldid=1091590" ಇಂದ ಪಡೆಯಲ್ಪಟ್ಟಿದೆ