ರಣಹದ್ದು ಒಮ್ಮುಖವಾಗಿ ವಿಕಾಸಗೊಂಡ, ಸಾಮಾನ್ಯವಾಗಿ ಕೊಳೆತ ಮಾಂಸವನ್ನು ತಿನ್ನುವ ಹಿಂಸ್ರಪಕ್ಷಿಗಳ ಎರಡು ಗುಂಪುಗಳಿಗೆ ನೀಡಲಾದ ಹೆಸರು ಕ್ಯಾಲಿಫೋರ್ನಿಯಾದ ಹಾಗು ಆಂಡೀಸ್‍ನ ಕಾಂಡರ್‌ಗಳನ್ನು ಒಳಗೊಂಡಿರುವ ನವೀನ ಜಗತ್ತಿನ ರಣಹದ್ದುಗಳು; ಮತ್ತು ಆಫ್ರಿಕಾದ ಬಯಲುಗಳಲ್ಲಿ ಸತ್ತ ಪ್ರಾಣಿಗಳ ಶವವನ್ನು ತಿನ್ನುತ್ತಿರುವಾಗ ಕಾಣಲಾದ ಪಕ್ಷಿಗಳನ್ನು ಒಳಗೊಂಡಿರುವ ಪ್ರಾಚೀನ ಜಗತ್ತಿನ ರಣಹದ್ದುಗಳು.[][][] ಕೆಲವು ಸಾಂಪ್ರದಾಯಿಕ ಪ್ರಾಚೀನ ಜಗತ್ತಿನ ರಣಹದ್ದುಗಳು (ಗಡ್ಡವಿರುವ ರಣಹದ್ದನ್ನು ಒಳಗೊಂಡಂತೆ) ಇತರ ರಣಹದ್ದುಗಳಿಗೆ ನಿಕಟವಾಗಿ ಸಂಬಂಧಿಸಿಲ್ಲ ಎಂದು ಸಂಶೋಧನೆ ತೋರಿಸಿದೆ ಮತ್ತು ಹಾಗಾಗಿ ರಣಹದ್ದುಗಳನ್ನು ಎರಡರ ಬದಲು ಮೂರು ವರ್ಗಗಳಲ್ಲಿ ಉಪವಿಂಗಡಿಸಬೇಕು. ನವೀನ ಜಗತ್ತಿನ ರಣಹದ್ದುಗಳು ಉತ್ತರ ಹಾಗು ದಕ್ಷಿಣ ಅಮೇರಿಕಾದಲ್ಲಿ ಕಾಣುತ್ತವೆ. ಪ್ರಾಚೀನ ಜಗತ್ತಿನ ರಣಹದ್ದುಗಳು ಯೂರೋಪ್, ಆಫ್ರಿಕಾ ಹಾಗು ಏಷ್ಯಾದಲ್ಲಿ ಕಾಣುತ್ತವೆ, ಇದರರ್ಥ ಎರಡು ಗುಂಪುಗಳ ನಡುವೆ, ಆಸ್ಟ್ರೇಲಿಯಾ ಹಾಗು ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ರಣಹದ್ದುಗಳು ಎಲ್ಲ ಖಂಡಗಳಲ್ಲೂ ಕಾಣುತ್ತವೆ.[] ಹದ್ದು, ಗರುಡ, ಗಿಡುಗ ಮುಂತಾದ ಪಕ್ಷಿಗಳ ಹತ್ತಿರ ಸಂಬಂಧಿ. ಈ ಪಕ್ಷಿ ಭಯಂಕರವಾಗಿ ಕಂಡರೂ ಪರಿಸರದ ಆಹಾರ ಸರಪಣಿಯಲ್ಲಿ ಮುಖ್ಯಸ್ಥಾನ ಪಡೆದಿದೆ. ರಣಹದ್ದು ಎಂಬ ಸಾಮಾನ್ಯ ಹೆಸರಿನ ಇಪ್ಪತ್ತಕ್ಕೂ ಹೆಚ್ಚು ಪ್ರಭೇದಗಳಿವೆ. ಉಷ್ಣ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಕಂಡುಬರುವ ಈ ಪಕ್ಷಿಗಳು ಆಸ್ಟ್ರೇಲಿಯ ಹಾಗೂ ಹಿಂದೂಸಾಗರಗಳ ನಡುವೆ ಇರುವ ಕೆಲವು ದ್ವೀಪಗಳನ್ನು ಹೊರತುಪಡಿಸಿ ಎಲ್ಲ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ.

ರಣಹದ್ದು
Fossil range: Miocene – Recent
[]
Black vulture
Scientific classification

ಸಾಕು ಪ್ರಾಣಿ ಹಾಗೂ ವನ್ಯಜೀವಿಗಳ ಶವಗಳನ್ನು ತಿಂದು ಊರನ್ನು ದುರ್ವಾಸನೆಯಿಂದ ರಕ್ಷಿಸುತ್ತವೆ. ಹಿಂದೊಮ್ಮೆ ಭಾರತದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದ ಬೋಳು ತಲೆಯ ರಣಹದ್ದುಗಳು ಕಾಣಸಿಗುವುದೇ ಅಪರೂಪ.

ವಿವರಗಳು

ಬದಲಾಯಿಸಿ

ಲಕ್ಷಣಗಳು

ಬದಲಾಯಿಸಿ

ಬೋಳು ದಪ್ಪ ತಲೆ, ಉದ್ದನೆಯ ಕತ್ತು, ಚಿಕ್ಕ ಬಾಲ, ಕತ್ತಿನ ಸುತ್ತ ಬಿಳಿಯ ಗರಿ, ಕಂದು ಬಣ್ಣದ ಭಾರವಾದ ಮೈ, ಮಾಂಸ ಕತ್ತರಿಸುವ ಬಲಿಷ್ಠ ಕೊಕ್ಕು, ವಿಶಾಲವಾದ ರೆಕ್ಕೆ, ನೀಳ ಕಾಲು, ಭಯ ಹುಟ್ಟಿಸುವ ಕಣ್ಣು ಇಷ್ಟು ಬಿಳಿ ಹಿಂತಲೆಯ ರಣ ಹದ್ದಿನ ವಿಶೇಷತೆ. ಈ ಪಕ್ಷಿಯ ತಲೆ ಹಾಗೂ ಕುತ್ತಿಗೆಯ ಭಾಗದಲ್ಲಿ ಪುಕ್ಕಗಳಿಲ್ಲದಿರುವುದರಿಂದ ಬೋಳಾಗಿ ಕಾಣುತ್ತದೆ. ಬಲವಾದ ಉದ್ದನೆಯ ಕೊಕ್ಕು ಮುಂಭಾಗದಲ್ಲಿ ಕೆಳಕ್ಕೆ ಬಾಗಿಕೊಂಡಿರುತ್ತದೆ. ಕೊಕ್ಕು ಸಾಕಷ್ಟು ಗಟ್ಟಿಯಾಗಿಯೂ ಬಿರುಸಾಗಿಯೂ ಇದ್ದು ಸತ್ತಪ್ರಾಣಿಗಳ ಅಸ್ಥಿಪಂಜರದ ಒಳಭಾಗದಿಂದಲೂ ಮಾಂಸವನ್ನು ಕಚ್ಚಿ ಎಳೆಯಲು ಸಹಕಾರಿಯಾಗಿದೆ. ಕಾಲುಗಳು ನೀಳವಾಗಿದ್ದರೂ ಬಿರುಸಾದ ಉಗುರುಗಳಿರುವ ಬೆರಳುಗಳು ಸಾಕಷ್ಟು ಬಲವಾಗಿರುವುದರಿಂದ ಮಾಂಸವನ್ನು ಎಲುಬಿನಿಂದ ಬೇರ್ಪಡಿಸುವುದಕ್ಕೆ ಸಹಾಯಕವಾಗಿದೆ. ಆಫ್ರಿಕಾದಲ್ಲಿ ಕಂಡು ಬರುವ ಹದ್ದುಗಳಲ್ಲಿಯೇ ಅತ್ಯಂತ ದೊಡ್ಡ ಪಕ್ಷಿ. ಬಿಳಿ ಹಿಂತಲೆಯ ರಣಹದ್ದು ಇದನ್ನು ಹಳೆ ಜಗತ್ತಿನ ಹದ್ದು ಎಂದು ಗುರುತಿಸಲಾಗಿದೆ. ಈ ತಲೆಮಾರಿನ ಹದ್ದುಗಳ ತಲೆ ಗರಿಗಳಿಂದ ತುಂಬಿರುತ್ತದೆ. ಜತೆಗೆ ಗಾತ್ರದಲ್ಲಿಯೂ ಚಿಕ್ಕದು. ಆದರೆ, ಬೋಳು ತಲೆಯ ರಣಹದ್ದು 4 ರಿಂದ 7 ಕೆ.ಜಿ ಭಾರ ಮತ್ತು 94 ಸೆ. ಮೀ. ನಷ್ಟು ಉದ್ದ ಮತ್ತು 218 ಸೆ.ಮೀ ನಷ್ಟು ಅಗಲವಾದ ರೆಕ್ಕೆ ಹೊಂದಿದೆ. ಈ ಜಾತಿಯ ಹದ್ದುಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅವುಗಳ ಜಾತಿಗೆ ಸೇರಿದ ಬಿಳಿ ಪೃಷ್ಠದ ರಣಹದ್ದು ಭಾರತದಲ್ಲಿಯೂ ಕಂಡು ಬರುತ್ತದೆ. ಬೋಳು ತಲೆ ರಣಹದ್ದು ಕೇವಲ ಮಾಂಸವನ್ನು ಮಾತ್ರ ತಿನ್ನುತ್ತವೆ.

ನಡವಳಿಕೆ

ಬದಲಾಯಿಸಿ

ರಣಹದ್ದುಗಳು ವಿಶಾಲವಾದ ಕಲ್ಲುಬಂಡೆಗಳ ಮೇಲೆ ಇಲ್ಲವೆ ಬಯಲು ಪ್ರದೇಶಗಳಲ್ಲಿ ಅಥವಾ ಸಮುದ್ರತೀರದಲ್ಲಿ ಸಮುದ್ರದ ಕಡೆ ಚಾಚಿಕೊಂಡಿರುವ ಕಲ್ಲುಬಂಡೆಗಳ ಮೇಲೆ ಗುಂಪಾಗಿ ಕುಳಿತುಕೊಳ್ಳುತ್ತವೆ. ಆಗೊಮ್ಮೆ ಈಗೊಮ್ಮೆ ರೆಕ್ಕೆ ಬಡಿಯುತ್ತ ಚೀರಾಡುತ್ತ ಅಲ್ಲಿಯೇ ಜಿಗಿದಾಡುತ್ತವೆ. ಯಾವುದಾದರೂ ಒಂದು ರಣಹದ್ದು ದೂರದಲ್ಲೆಲ್ಲೊ ಸತ್ತ ಪ್ರಾಣಿಯನ್ನು ಕಂಡರೆ ಉಳಿದವುಗಳಿಗೂ ಸೂಚನೆ ನೀಡುತ್ತದೆ. ಆಗ ಇವು ಹಲವಾರು ಕಿ.ಮೀ. ದೂರವಿದ್ದರೂ ಅಲ್ಲಿಗೆ ಹಾರಿ ಆಹಾರವಿರುವ ಸ್ಥಳವನ್ನು ತಲುಪುತ್ತವೆ. ಆಹಾರ ಭಕ್ಷಣೆಯ ಸಮಯದಲ್ಲಿ ಸಾಮಾನ್ಯ ಸಮಾಜಜೀವನದ ನೀತಿಗಳನ್ನು ಪಾಲಿಸುತ್ತವೆ. ಆಹಾರವನ್ನು ಹಂಚಿಕೊಳ್ಳುವಾಗ ದೊಡ್ಡ ಹಾಗೂ ಬಲಶಾಲಿ ಹದ್ದುಗಳಿಗೆ ಸಿಂಹ ಪಾಲು ದೊರೆಯುತ್ತದೆ. ಕಾಗೆ, ತೋಳ, ಕತ್ತೆಕಿರುಬಗಳಂಥ ಸ್ತನಿಗಳಿಗೂ ಭೋಜನದ ಅವಕಾಶವಿರುತ್ತದೆ.

ಸಂತಾನೋತ್ಪತ್ತಿ

ಬದಲಾಯಿಸಿ

ಇವು ಪ್ರಾಣಿಗಳಿಗೆ ನಿಲುಕದ ಕಲ್ಲುಬಂಡೆ ಅಥವಾ ಎತ್ತರವಾದ ದೈತ್ಯವೃಕ್ಷಗಳ ತುದಿಯಲ್ಲಿ ಗೂಡು ನಿರ್ಮಿಸುತ್ತವೆ. ಒಂದೇ ಕಡೆ ಹಲವು ಗೂಡುಗಳೂ ಇರುವುದುಂಟು. ಒಂದು ಅಥವಾ ಎರಡು ಮೊಟ್ಟೆಯನ್ನಿಟ್ಟು ಏಳರಿಂದ ಎಂಟು ವಾರಗಳ ತನಕ ಕಾವುಕೊಟ್ಟು ಮರಿ ಮಾಡುತ್ತವೆ.

ಮಾನವನೇ ಶತ್ರು

ಬದಲಾಯಿಸಿ

ಮಾನವನನ್ನು ಬಿಟ್ಟರೆ ಹುಲಿಯಿಂದ ಮಾತ್ರ ಇವುಗಳನ್ನು ಬೇಟೆಯಾಡಲು ಸಾಧ್ಯ. ಉಳಿದಂತೆ ಇವಕ್ಕೆ ಯಾರೂ ವೈರಿಗಳಿಲ್ಲ. ವೈರಿಗಳಿಂದ ಪಾರಾಗುವ ಸಲುವಾಗಿ ಇವು ಈಗ ತಾನೇ ತಿಂದ ಆಹಾರವನ್ನು ಕೊಂಡೊಯ್ಯುತ್ತವೆ ಅಥವಾ ಆ ಜಾಗದಲ್ಲಿ ಕೆಲವು ದಿನಗಳ ಕಾಲ ಗಬ್ಬು ವಾಸನೆ ಸೂಸುವ ವಾಂತಿ ಮಾಡುತ್ತವೆ. ಹೀಗಾಗಿ ಇವುಗಳಿಂದ ಆಹಾರ ಕಸಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ.

ಮುಖ್ಯವಾದ ರಣಹದ್ದುಗಳು

ಬದಲಾಯಿಸಿ
 

1. ಅಮೇರಿಕ ರಾಜಹದ್ದು (ಕಿಂಗ್ ವಲ್ಚರ್- ಸಾರ್ಕೊರ‍್ಯಾಂಪಸ್ ಪಾಪ) ಎಂಬುದು ಮೆಕ್ಸಿಕೋ, ಮಧ್ಯ ಅಮೆರಿಕ ಹಾಗೂ ಅರ್ಜಂಟೈನಗಳ ನಡುವೆ ಕಾಣದೊರೆಯುವ ಒಂದು ಪ್ರಭೇದ. ವರ್ಣರಂಜಿತವಾಗಿರುವ ಇವುಗಳ ತಲೆ ಹಾಗೂ ಕುತ್ತಿಗೆಯ ಭಾಗಗಳು ಕೆಂಪು, ಹಳದಿ ಅಥವಾ ನೀಲಿ ಬಣ್ಣಗಳಿಂದ ಕೂಡಿರುತ್ತವೆ. ಕಣ್ಣಿನ ಸುತ್ತ ಕೆಂಪುಬಣ್ಣದ ಒಂದು ವೃತ್ತವಿರುತ್ತದೆ. ರೆಕ್ಕೆ ಬಿಚ್ಚಿದಾಗ ಇವು ಸು. 1.7ಮೀ ಅಗಲವಿರುತ್ತದೆ.

2. ಕಪ್ಪು ರಣಹದ್ದು (ಏಜಿಪ್ಷಿಯನ್ಸ್ ಮಾನಕಸ್) ಎಂಬುದು ರಣಹದ್ದುಗಳ ಪೈಕಿ ಅತಿ ದೊಡ್ಡದು. ಸು. 100 ಸೆಂಮೀ ಉದ್ದದ ಈ ಪಕ್ಷಿ ರೆಕ್ಕೆ ಬಿಚ್ಚಿದಾಗ 2.7 ಮೀ ಅಗಲವಿರುತ್ತದೆ.

 

3. ನಿಯೊಫ್ರೋನ್ ಎಂಬ ಈಜಿಫ್ಷಿಯನ್ ರಣಹದ್ದು ಹದ್ದುಗಳಲ್ಲೇ ಚಿಕ್ಕದು. ಇದರ ಉದ್ದ 60 ಸೆಂಮೀ.

 

4. ರಾಜ ರಣಹದ್ದು (ಸಾರ್ಕೊಜಿಪ್ಸ್ ಕ್ಯಾಲ್ವಸ್) ಎಂಬುದು ಭಾರತದಲ್ಲಿ ಕಾಣಸಿಕ್ಕುವ ರಣಹದ್ದು. ಈ ಪ್ರಭೇದ ಪಾಕಿಸ್ತಾನದಿಂದ ಭಾರತವೂ ಸೇರಿದಂತೆ ಮಲೇಷ್ಯದವರೆಗೂ ಹರಡಿವೆ. 75 ಸೆಂ.ಮೀ ಉದ್ದದ ಈ ರಣಹದ್ದು ರೆಕ್ಕೆ ಬಿಚ್ಚಿದಾಗ 2.7 ಮೀ ಅಗಲವಿರುತ್ತದೆ. ಮೇಲ್ಭಾಗದಲ್ಲಿ ಕಪ್ಪು ಬಣ್ಣವಿರುವ ಈ ಪಕ್ಷಿಗಳ ತಳಭಾಗ ಬೂದುಬಣ್ಣದ್ದು. ನಡತೆ ಹಾಗೂ ದೇಹದ ಅಂಗರಚನೆಯಲ್ಲಿ ಇವು ಉಳಿದ ಪ್ರಭೇದಗಳನ್ನು ಹೋಲುತ್ತವೆ.

ಭಾರತದಲ್ಲಿ ಒಟ್ಟು ಏಳು ಪ್ರಭೇದಗಳ ರಣಹದ್ದುಗಳು ಕಂಡುಬರುತ್ತವೆ. ಕೊಳೆತ ಮಾಂಸವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವ ಇವು, ನಮ್ಮ ಪರಿಸರದ ಸೂಕ್ಷ್ಮ ಕೊಂಡಿಗಳಲ್ಲೊಂದು.

ಆಕಾಶದಲ್ಲಿ ಗಸ್ತು

ಬದಲಾಯಿಸಿ

ಹದ್ದುಗಳು ಶ್ರಮವಿಲ್ಲದೇ ಹಾರಾಟ ನಡೆಸುತ್ತವೆ. ರೆಕ್ಕೆ ಬಡಿಯದೇ ಒಂದು ತಾಸುಗಳ ಕಾಲ ಆಕಾಶದಲ್ಲಿ ಸುತ್ತುಹೊಡೆಯಬಲ್ಲದು. ಈ ತಲೆಮಾರಿನ ಹದ್ದುಗಳು ವಾಸನೆಯ ಮೂಲಕ ಆಹಾರ ಹುಡುಕುವ ಸಾಮರ್ಥ್ಯ ಹೊಂದಿದ್ದರೆ, ಹಳೆ ಜಗತ್ತಿನ ಹದ್ದು ಎಂದು ಗುರುತಿಸಿಕೊಂಡಿರುವ ಬೋಳು ತಲೆಯ ರಣ ಹದ್ದು ಕಣ್ಣಿನ ಸಹಾಯದಿಂದ ಆಹಾರ ಹುಡುಕುತ್ತದೆ. ಇದರ ದೃಷ್ಟಿ ಮಾನವನಿಗಿಂತ 8 ಪಟ್ಟು ಸೂಕ್ಷ್ಮ. ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರುತಿಸಬಲ್ಲದು. ಆಕಾಶದಲ್ಲಿ ಇವು ಸುತ್ತು ಹೊಡೆಯುತ್ತಾ ಕ್ರಮೇಣ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತವೆ. ಗುಂಪಾಗಿಯೇ ದಾಳಿ ನಡೆಸುತ್ತವೆ. ಸತ್ತ ಪ್ರಾಣಿಗಳ ಮುಂದೆ ನೂರಕ್ಕೂ ಹೆಚ್ಚು ಹದ್ದು ಜಮಾವಣೆಗೊಂಡು ಹಂಚಿಕೊಂಡು ಆಹಾರ ತಿನ್ನುತ್ತವೆ.

ಹಾರಾಟಕ್ಕೆ ಕೊನೆಯೇ ಇಲ್ಲ

ಬದಲಾಯಿಸಿ

ಹದ್ದು ಹಾರುವ ಎತ್ತರಕ್ಕೆ ಕೊನೆಯೇ ಇಲ್ಲ. 12 ಕಿ.ಮೀ ಎತ್ತರಕ್ಕೂ ಹದ್ದು ತಲುಪಬಲ್ಲದು. ಅಲ್ಲದೇ ತಾಸಿಗೆ 60-80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮೀ ಸುತ್ತಳತೆಯಲ್ಲಿ ಗಸ್ತು ಹೊಡೆಯುತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ನೆಲಕ್ಕೆ ಇಳಿದು ಶವಗಳ ಮುಂದೆ ಪ್ರತ್ಯಕ್ಷವಾಗುತ್ತವೆ. ಎತ್ತರದ ಮರಗಳ ತುತ್ತತುದಿಯಲ್ಲಿ ಇವು ಗೂಡು ಕಟ್ಟುತ್ತದೆ. ಆದರೆ ಈ ದೊಡ್ಡ ಹದ್ದುಗಳ ಗೂಡು ಕಾಗೆ ಗೂಡಿನಷ್ಟೇ ಚಿಕ್ಕದು.

ಪರಿಸರ ಸ್ನೇಹಿ

ಬದಲಾಯಿಸಿ

ಹದ್ದು ಕೊಳೆತ ಪ್ರಾಣಿಗಳ ದೇಹವನ್ನು ತಿನ್ನುವುದರಿಂದ ಹರಡಬಹುದಾದ ರೋಗ-ರುಜಿನಗಳಿಂದ ಊರನ್ನು ರಕ್ಷಿಸುತ್ತಿದ್ದವು. ಪಾರ್ಸಿ ಜನಾಂಗದವರ ದೇಹ ತಿನ್ನಲೂ ರಣಹದ್ದುಗಳೇ ಬೇಕು. ಆದರೆ ಬೋಳು ತಲೆಯ ರಣಹದ್ದು ಕ್ರಮೇಣ ಅಳಿವಿನ ಅಂಚಿಗೆ ತಲುಪಿದೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಸಂಪೂರ್ಣ ಕಣ್ಮರೆಯಾದರೂ ಅಚ್ಚರಿಯಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. "Fossilworks:Aegypiinae". Fossilworks. Archived from the original on 4 ನವೆಂಬರ್ 2021. Retrieved 17 December 2021.
  2. Kiff, Lloyd. "vulture". Encyclopedia Britannica, 15 Sep. 2023, https://www.britannica.com/animal/vulture. Accessed 12 October 2023.
  3. "Vultures ." The Gale Encyclopedia of Science. . Encyclopedia.com. 19 Sep. 2023 <https://www.encyclopedia.com>.
  4. "Vulture." New World Encyclopedia, . 30 May 2008, 01:14 UTC. 12 Oct 2023, 12:55 <https://www.newworldencyclopedia.org/p/index.php?title=Vulture&oldid=722153>.
  5. "Vulture World". www.slate.com,17 May 2017.


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಣಹದ್ದು&oldid=1216378" ಇಂದ ಪಡೆಯಲ್ಪಟ್ಟಿದೆ