ಬ್ರಯೋಫೈಟ್‌ಗಳು ಅನೌಪಚಾರಿಕ ಗುಂಪಾಗಿದ್ದು, ವಾಹಕನಾಳಗಳಿಲ್ಲದ ಭೂ ಸಸ್ಯಗಳ (ಭ್ರೂಣಸಸ್ಯಗಳು) ಮೂರು ವಿಭಾಗಗಳನ್ನು ಒಳಗೊಂಡಿದೆ: ಲಿವರ್‌ವರ್ಟ್‌ಗಳು, ಹಾರ್ನ್‌ವರ್ಟ್‌ಗಳು ಮತ್ತು ಪಾಚಿಗಳು.[] ಇದು ಸಸ್ಯಸಾಮ್ರಾಜ್ಯದ ಶೈವಲಗಳಿಗೂ (ಆಲ್ಜೀ) ಜರೀಗಿಡಗಳಿಗೂ (ಫರ್ನ್) ನಡುವಣ ವಿಭಾಗ ಅಥವಾ ಎಂಬ್ರಿಯೋಫೈಟ ವಿಭಾಗದ ಮೊದಲನೆಯ ವರ್ಗ. ಅವು ವಿಶಿಷ್ಟವಾಗಿ ಗಾತ್ರದಲ್ಲಿ ಸೀಮಿತವಾಗಿವೆ ಮತ್ತು ತೇವವಾದ ಆವಾಸಸ್ಥಾನಗಳಿಗೆ (ಜೌಗುಭೂಮಿ, ನದೀದಡ, ಹಳ್ಳಗಳ ದಂಡೆ) ಆದ್ಯತೆ ನೀಡುತ್ತವೆ, ಆದರೂ ಅವು ಒಣ ಪರಿಸರದಲ್ಲಿ (ಶುಷ್ಕ ವಾತಾವರಣ) ಬದುಕಬಲ್ಲವು.[] ಅವುಗಳು ವೈವಿಧ್ಯಮಯ ಲಕ್ಷಣಗಳುಳ್ಳ ಸುಮಾರು 20,000 ಸಸ್ಯಪ್ರಭೇದಗಳನ್ನು ಒಳಗೊಂಡಿವೆ.[][] ಇದು ಮುಖ್ಯವಾಗಿ ಯಕೃತ್ತಿನಾಕಾರದ ಸಸ್ಯಗಳನ್ನು ಮತ್ತು ಹಾವಸೆಗಳನ್ನು ಒಳಗೊಂಡ ಸುಸ್ಪಷ್ಟ ವಿಭಾಗ. ಜರೀಗಿಡಗಳಂತೆ ಇವು ಕೂಡ ಉಭಯ ಜೀವಿಗಳು. ಬ್ರಯೋಫೈಟ್‌ಗಳು ಸುತ್ತುವರಿದ ಸಂತಾನೋತ್ಪತ್ತಿ ರಚನೆಗಳನ್ನು (ಗ್ಯಾಮೆಟಾಂಜಿಯಾ ಮತ್ತು ಸ್ಪ್ರಾಂಜಿಯಾ) ಉತ್ಪಾದಿಸುತ್ತವೆ, ಆದರೆ ಅವು ಹೂವುಗಳು ಅಥವಾ ಬೀಜಗಳನ್ನು ಉತ್ಪಾದಿಸುವುದಿಲ್ಲ. ಅವು ಬೀಜಕಗಳ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.[] ಬ್ರಯೋಫೈಟ್‌ಗಳನ್ನು ಸಾಮಾನ್ಯವಾಗಿ ಪ್ಯಾರಾಫೈಲೆಟಿಕ್ ಗುಂಪು ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಮೊನೊಫೈಲೆಟಿಕ್ ಗುಂಪು ಅಲ್ಲ, ಆದಾಗ್ಯೂ ಕೆಲವು ಅಧ್ಯಯನಗಳು ವ್ಯತಿರಿಕ್ತ ಫಲಿತಾಂಶಗಳನ್ನು ನೀಡಿವೆ. "ಬ್ರಯೋಫೈಟ್" ಎಂಬ ಪದವು ಗ್ರೀಕ್ ಭಾಷೆಯಿಂದ, (ಬ್ರಿಯಾನ್ ಎಂದರೆ "ಮರದ ಪಾಚಿ", ಮತ್ತು ಫೈಟನ್ ಎಂದರೆ "ಸಸ್ಯ") ಬಂದಿದೆ.

ಮಾರ್ಕ್ಯಾಂಶಿಯಾ, ಲಿವರ್‌ವರ್ಟ್‌ನ ಉದಾಹರಣೆ.

ಅನೇಕ ಬ್ರಯೋಫೈಟ್‌ಗಳ ಸಸ್ಯದೇಹಕ್ಕೆ ಥ್ಯಾಲಸ್ [ಎಲೆಯಂತಾಗಲಿ ಅಥವಾ ಕಾಂಡದಂತಾಗಲಿ ಇಲ್ಲದ್ದು] ಎಂದು ಹೆಸರು. ಇದು ಪಟ್ಟಿಯಂತಿದ್ದು ಆಧಾರಸ್ಥಳಕ್ಕೆ ಒತ್ತಿಕೊಂಡಿರುತ್ತದೆ. ಮತ್ತೆ ಕೆಲವು ಬ್ರಯೋಪೈಟ್‌ಗಳಲ್ಲಿ ಮುಖ್ಯವಾಗಿ-ಹಾವಸೆಗಳಲ್ಲಿ-ದೇಹ ಒಂದು ಪರ್ಣಾವೃತಕಾಂಡದಂತಿದೆ. ದೇಹ ಥ್ಯಾಲಸ್ ಆಗಿರಲಿ ಪರ್ಣಾವೃತವಾಗಿರಲಿ, ಅದು ಮೃದುವಾಗಿಯೂ ಹಸಿರಾಗಿಯೂ ಇರುವುದರಿಂದ ಸ್ವತಂತ್ರ ಜೀವಿ. ಬುಡದಲ್ಲಿ ಬೇರುರೋಮಗಳಂತಿರುವ ರೈಜ಼ಾಯಿಡ್‌ಗಳಿವೆ. ಸಸ್ಯವನ್ನು ಮಣ್ಣಿನಲ್ಲಿ ನೆಲೆಗೊಳಿಸುವುದಕ್ಕೂ ನೆಲದಿಂದ ನೀರು ಖನಿಜಗಳನ್ನು ಹೀರುವುದಕ್ಕೂ ಇದು ಸಹಾಯಕವಾಗಿದೆ. ದೇಹದ ಹೊರ ಆಕಾರ ಹಾಗೂ ಒಳರಚನೆ ಸರಳರೀತಿಯದು. ಇಡೀ ದೇಹದ ತುಂಬ ಒಂದೇ ರೀತಿಯ ಕೋಶಗಳಿವೆ. ಆದರೆ ಹಲವು ಪ್ರಭೇದಗಳಲ್ಲಿ ಸರಳ ಹೊರ ಆಕಾರವಿದ್ದು ಜಟಿಲ ಎನ್ನಬಹುದಾದ ಒಳರಚನೆಯಿದೆ. ತಳಭಾಗದಲ್ಲಿ ಆಹಾರ ಶೇಖರಣೆಯೇ ಮುಖ್ಯಕಾರ್ಯವಾಗಿರುವ ಮತ್ತು ಮೇಲ್ಭಾಗದಲ್ಲಿ ದ್ಯುತಿಸಂಶ್ಲೇಷಣೆಯೇ ಮುಖ್ಯ ಕಾರ್ಯವಾಗಿರುವ ಕೋಶಗಳುಂಟು. ಪರ್ಣಾವೃತ್ತ ಬ್ರಯೋಫೈಟ್‌ಗಳಲ್ಲಿ ಕಾಂಡದಂತಿರುವ ಅಕ್ಷದ ಮೇಲೆ ಎಲೆಗಳಂತಿರುವ ಭಾಗಗಳು ಸುರುಳಿಯಾಕಾರದಲ್ಲಿ ಹರಡಿರುತ್ತವೆ. ಯಾವ ಬ್ರಯೋಫೈಟ್‌ಗಳಲ್ಲಿ ಸಸ್ಯದಲ್ಲೂ ವಾಹಕ ಅಂಗಾಂಶಗಳಿಲ್ಲ.

ಸಂತಾನೋತ್ಪತ್ತಿ ರಚನೆಗಳು

ಬದಲಾಯಿಸಿ

ಬ್ರಯೋಫೈಟ್‌ಗಳಲ್ಲಿ ಲೈಂಗಿಕ ಸಂತಾನೋತ್ತಿಯೂ ನಡೆಯುತ್ತದೆ. ಗಂಡು ಜನನಾಂಗ ಆಂಥೆರಿಡಿಯಮ್. ಇದು ದೃಢವಾಗಿದ್ದು ಉದ್ದವಾದ ಗದೆಯಂತೆಯೋ ಗೋಳದಂತಯೋ ಇದೆ. ಇದರೊಳಗೆ ಸಾವಿರಾರು ಪುರುಷಾಣುಗಳು ಉತ್ಪತ್ತಿಯಾಗುವುವು. ಇವು ಆಂಥೆರಿಡಿಯಮ್ಮಿನ ತುದಿಯಲ್ಲಿರುವ ಸೂಕ್ಷ್ಮ ರಂಧ್ರದ ಮೂಲಕ ಹೊರಬಂದು ನೀರಿನಲ್ಲಿ ಸ್ವೇಚ್ಛೆಯಾಗಿ ಈಜುತ್ತ ಹೆಣ್ಣು ಜನನಾಂಗವನ್ನರಸುತ್ತ ಚಲಿಸುವುವು. ಹೆಣ್ಣು ಜನನಾಂಗಕ್ಕೆ ಆರ್ಕಿಗೋನಿಯಮ್ ಎಂದು ಹೆಸರು. ಇದರ ಆಕಾರ ಬುದ್ದಲಿಯಂತೆ. ಇದರಲ್ಲಿರುವ ದುಂಡನೆಯ ತಳಭಾಗವನ್ನು ವೆಂಟರ್ ಎಂದೂ ಕೊಳವೆಯಂತಿರುವ ಮೇಲ್ಭಾಗವನ್ನು ಕಂಠ ಎಂದೂ ಕರೆಯುತ್ತಾರೆ. ವೆಂಟರ್‌ನಲ್ಲಿ ಒಂದೇ ಒಂದು ಅಂಡಾಣು ಉಂಟು. ಕಂಠದಲ್ಲಿ ಕಂಠನಾಳ ಕೋಶಗಳೂ ಕಂಠದ ತುದಿಯಲ್ಲಿ ನಾಲ್ಕು ಕೋಶಗಳಿಂದಾದ ಮುಚ್ಚಳವೂ ಇವೆ. ಪ್ರಬುದ್ಧಾವಸ್ಥೆಗೆ ಬಂದ ಆರ್ಕಿಗೋನಿಯಮ್ಮಿನ ವೆಂಟ್ರಲ್ ನಾಳಕೋಶ ಮತ್ತು ಕಂಠನಾಳ ಕೋಶಗಳು ಛಿದ್ರವಾಗಿ ಲೋಳೆಯಂಥ ವಸ್ತು ಉಂಟಾಗುತ್ತದೆ. ಈ ಲೋಳೆವಸ್ತು ನೀರನ್ನು ಹೀರಿಕೊಂಡು ಉಬ್ಬಿ, ಕಂಠ ಅಗಲವಾಗಿ ತೆರೆದುಕೊಳ್ಳುವಂತೆ ಮಾಡುತ್ತದೆ. ಪುರುಷಾಣು ಹಾಗೂ ಅಂಡಾಣುಗಳ ಮಿಲನ, ಸಸ್ಯಗಳು ನೀರಿನಲ್ಲಿ ಮುಳುಗಿರುವಾಗ ಅಥವಾ ಸಾಕಷ್ಟು ನೀರಿರುವಾಗ ಮಾತ್ರ ಸಾಧ್ಯ. ಪುರುಷಾಣು ಆರ್ಕಿಗೋನಿಯಮ್‌ನ ಕಂಠನಾಳದಲ್ಲಿರುವ ಲೋಳೆಯ ಮೂಲಕ ಅಂಡಾಣುವಿನ ಬಳಿಗೆ ಹೋಗಿ ಅದರೊಡನೆ ಕೂಡುತ್ತದೆ. ಆರ್ಕಿಗೋನಿಯಮ್ ಮ್ಯಾಲಿಕ್ ಆಮ್ಲ ಎಂಬ ರಾಸಾಯನಿಕ ಚೋದಕವನ್ನು ಉತ್ಪಾದಿಸಿ ಪುರುಷಾಣುಗಳನ್ನು ಆಕರ್ಷಿಸುತ್ತದೆ.

ನಿಷೆ ಚಿತ ಅಂಡಾಣು ಸ್ಪೋರೊಫೈಟ್ ಎಂಬ ಪೀಳಿಗೆಯ ಮೊದಲನೆಯ ಕೋಶ. ಈ ಕೋಶ ಅನೇಕ ವಿಭಜನೆಗಳ ಮೂಲಕ ಅನೇಕ ಕೋಶಗಳಿಂದ ಕೂಡಿದ ಭ್ರೂಣವಾಗುತ್ತದೆ.

ಭ್ರೂಣ ಬೆಳೆದು ಸ್ಪೋರೊಫೈಟ್ ಆಗುತ್ತದೆ. ಬಹುಪಾಲು ಬ್ರಯೋಫೈಟ್‌ಗಳ ಸ್ಪೋರೊಫೈಟ್‌ಗಳಲ್ಲಿ ಮೂರು ಭಾಗಗಳುಂಟು. ಮೊದಲನೆಯದು ಪಾದದಂತಿರುವ ಬುಡ. ಇದರ ಕೆಲಸ ಗ್ಯಾಮಿಟೊಫೈಟ್‌ನಿಂದ ಆಹಾರ ಹೀರುವಿಕೆ. ಎರಡನೆಯದು ತೊಟ್ಟಿನಂತಿರುವ ಮಧ್ಯಭಾಗ. ಆಹಾರವನ್ನು ಬುಡದಿಂದ ತುದಿಯಲ್ಲಿರುವ ಬೀಜಕೋಶಕ್ಕೆ ಸಾಗಿಸುವುದು ಮತ್ತು ಬೀಜಕೋಶವನ್ನು ಸುತ್ತಲಿನ ರಕ್ಷಕ ಕವಚಗಳಿಂದ ಹೊರತಳ್ಳುವುದು ಇದರ ಕಾರ್ಯ. ಮೂರನೆಯ ಹಾಗೂ ಮೇಲ್ತುದಿಯ ಭಾಗ ಪೊರೆಚೀಲ ಅಥವಾ ಬೀಜಕೋಶ. ಕೆಲವು ಬ್ರಯೊಪೈಟ್‌ಗಳ ಇಡೀ ಸ್ಪೋರೋ ಕೇವಲ ಬೀಜಕೋಶದಿಂದಾಗಿರುತ್ತದೆ. ಬೀಜಕೋಶದ ಕೆಲವು ಕೋಶಗಳು ಮಯೋಸಿಸ್ ರೀತಿಯ ವಿಭಜನೆ ಹೊಂದಿ ಬೀಜಕಣ ಅಥವಾ ಬೀಜಾಣುಗಳಾಗುತ್ತವೆ. ಸ್ಪೋರೊಫೈಟ್ ತನ್ನ ಆಹಾರಕ್ಕೋಸ್ಕರ ಗ್ಯಾಮಿಟೊಫೈಟನ್ನು ಪೂರ್ಣವಾಗಿ ಅಥವಾ ಸ್ವಲ್ಪಮಟ್ಟಿಗೆ ಅವಲಂಬಿಸುತ್ತದೆ. ಬೀಜಾಣು ಗ್ಯಾಮಿಟೋಫೈಟ್ ಎಂಬ ತಲೆಮಾರಿನ ಮೊದಲ ಕೋಶ. ಇದು ಬಹುಪಾಲು ಬ್ರಯೋಪೈಟ್‌ಗಳಲ್ಲಿ ನೇರವಾಗಿ ಗ್ಯಾಮಿಟೊಫೈಟ್ ಆಗುತ್ತದೆ. ಕೆಲವು ಬ್ರಯೋಫೈಟ್‌ಗಳಲ್ಲಿ ಸರಳಾಕೃತಿಯ ಪ್ರೋಟೊನೀಮ ಎಂಬ ಘಟ್ಟದ ಮೂಲಕ ಗ್ಯಾಮಿಟೊಫೈಟ್ ಆಗುತ್ತದೆ.

ವೈಶಿಷ್ಟ್ಯಗಳು

ಬದಲಾಯಿಸಿ
  • ಅವುಗಳ ಜೀವನ ಚಕ್ರಗಳು ಗ್ಯಾಮೆಟೊಫೈಟ್ ಹಂತದಿಂದ ಪ್ರಾಬಲ್ಯ ಹೊಂದಿವೆ
  • ಅವುಗಳ ಸ್ಪೊರೊಫೈಟ್‌ಗಳು ಕವಲುರಹಿತವಾಗಿರುತ್ತವೆ.
  • ಅವುಗಳು ಲಿಗ್ನಿನ್ ಹೊಂದಿರುವ ನೈಜ ನಾಳೀಯ ಅಂಗಾಂಶವನ್ನು ಹೊಂದಿಲ್ಲ (ಆದರೂ ಕೆಲವು ಸಸ್ಯಗಳು ನೀರಿನ ಸಾಗಣೆಗೆ ವಿಶೇಷ ಅಂಗಾಂಶಗಳನ್ನು ಹೊಂದಿವೆ)[]

ಆವಾಸಸ್ಥಾನ

ಬದಲಾಯಿಸಿ

ಬ್ರಯೋಫೈಟ್‍ಗಳು ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ ಇರುತ್ತವೆ. ಅವು ಅನೇಕ ತಾಪಮಾನಗಳು (ಶೀತ ಉತ್ತರ ಧ್ರುವಗಳ ಭಾಗಗಳು ಮತ್ತು ಬಿಸಿ ಮರುಭೂಮಿಗಳಲ್ಲಿ), ಎತ್ತರ (ಸಮುದ್ರ ಮಟ್ಟದಿಂದ ಪರ್ವತಗಳ ಮೇಲೆ), ಮತ್ತು ತೇವಾಂಶವಿರುವಲ್ಲಿ (ಒಣ ಮರುಭೂಮಿಗಳಿಂದ ಹಿಡಿದು ಆರ್ದ್ರ ಮಳೆಕಾಡುಗಳವರೆಗೆ) ಬೆಳೆಯುತ್ತಿರುವುದನ್ನು ಕಾಣಬಹುದು.[][]

ವರ್ಗೀಕರಣ

ಬದಲಾಯಿಸಿ
 
ಬ್ರಯೋಫೈಟ್‌ಗಳಲ್ಲಿ ನಾಳೀಯ ಅಂಗಾಂಶ ಇರುವ ಸಸ್ಯಗಳಿಗೆ ಹತ್ತಿರದ ಜೀವಂತ ಸಂಬಂಧಿಗಳು ಎಂದು ನಂಬಲಾದ ಹಾರ್ನ್‌ವರ್ಟ್‌ಗಳು ಸೇರಿವೆ.
 
ಪಾಚಿಗಳು ಬ್ರಯೋಫೈಟ್‌ಗಳ ಒಂದು ಗುಂಪು.

ಬ್ರಯೋಫೈಟ್ ವಿಭಾಗವನ್ನು ಮೂರು ವರ್ಗಗಳನ್ನಾಗಿ ವರ್ಗೀಕರಿಸಲಾಗಿದೆ.

1 ಹೆಪ್ಯಾಟಿಕಾಪ್ಸಿಡ ಅಥವಾ ಹೆಪ್ಯಾಟಿಕ ಉದಾಹರಣೆಗೆ ರಿಕ್ಸಿಯ, ಮಾರ್ಕಾಂಷಿಯ ಇತ್ಯಾದಿ.

2 ಆಂಥೋಸಿರೋಟಾಪ್ಸಿಡ ಅಥವಾ ಆಂಥೋಸಿರೋಟೀ ಉದಾಹರಣೆಗೆ ಆಂಥೋಸಿರಾಸ್.

3 ಬ್ರಯಾಪಿಡ ಅಥವಾ ಮಸ್ಸೈ ಉದಾಹರಣೆಗೆ ಜೌಗುಹಾವಸೆ, ಹಾವಸೆ ಮುಂತಾದವು.

ಬ್ರಯೋಫೈಟ್‍ಗಳ ಮೂರು ಏಕಮೂಲ ವರ್ಗಗಳಿವೆ, ಮಾರ್ಕ್ಯಾಂಶಿಯೊಫೈಟಾ (ಲಿವರ್‌ವರ್ಟ್ಸ್), ಪಾಚಿಗಳು ಮತ್ತು ಆಂಥೋಸೆರೊಟೊಫೈಟಾ (ಹಾರ್ನ್‌ವರ್ಟ್‌ಗಳು).[] ನಾಳೀಯ ಸಸ್ಯಗಳು ಅಥವಾ ಟ್ರಾಕಿಯೋಫೈಟ್‌ಗಳು " ಪಾಲಿಸ್ಪೊರಾಂಗಿಯೋಫೈಟಾ " ಎಂದು ಕರೆಯಲ್ಪಡುವ ಭೂ ಸಸ್ಯಗಳ ನಾಲ್ಕನೆಯ, ಗುರುತಿಸದ ಏಕಮೂಲ ವರ್ಗವನ್ನು ರೂಪಿಸುತ್ತವೆ. ಈ ವಿಶ್ಲೇಷಣೆಯಲ್ಲಿ, ಹಾರ್ನ್‌ವರ್ಟ್‌ಗಳು ನಾಳೀಯ ಅಂಗಾಂಶವಿರುವ ಸಸ್ಯಗಳಿಗೆ ಸಹೋದರಿ ಮತ್ತು ಲಿವರ್‌ವರ್ಟ್‌ಗಳು ಹಾರ್ನ್‌ವರ್ಟ್‌ಗಳು ಮತ್ತು ಪಾಚಿಗಳು ಸೇರಿದಂತೆ ಎಲ್ಲಾ ಇತರ ಭೂ ಸಸ್ಯಗಳಿಗೆ ಸಹೋದರ ಸಸ್ಯಗಳಾಗಿವೆ.[೧೦][೧೧] ಫೈಲೋಜೆನೆಟಿಕ್ ಅಧ್ಯಯನಗಳು ಸಂಘರ್ಷದ ಫಲಿತಾಂಶಗಳನ್ನು ನೀಡುತ್ತಲೇ ಇರುತ್ತವೆ. ನಿರ್ದಿಷ್ಟವಾಗಿ ಜೀನ್ ಅನುಕ್ರಮಗಳನ್ನು ಆಧರಿಸಿದವರು ಬ್ರಯೋಫೈಟ್‌ಗಳು ಪ್ಯಾರಾಫೈಲೆಟಿಕ್ ಎಂದು ಸೂಚಿಸುತ್ತಾರೆ, ಆದರೆ ಅದೇ ಜೀನ್‌ಗಳ ಅಮೈನೊ ಆಸಿಡ್ ಅನುವಾದಗಳನ್ನು ಆಧರಿಸಿದವುಗಳು ಅವು ಮೊನೊಫೈಲೆಟಿಕ್ ಎಂದು ಸೂಚಿಸುತ್ತವೆ. ಸಂಯೋಜನೆಯ ಪಕ್ಷಪಾತಗಳು ಈ ವ್ಯತ್ಯಾಸಗಳಿಗೆ ಕಾರಣವಾಗಿವೆ ಮತ್ತು ಬ್ರಯೋಫೈಟ್‌ಗಳು ಮೊನೊಫೈಲೆಟಿಕ್ ಎಂದು 2014 ರ ಅಧ್ಯಯನವು ತೀರ್ಮಾನಿಸಿದೆ.[೧೨] ಸಮಸ್ಯೆ ಬಗೆಹರಿಯದೆ ಉಳಿದಿದೆ.

ಸಸ್ಯವಿಕಾಸ

ಬದಲಾಯಿಸಿ

ಸಸ್ಯವಿಕಾಸ ದೃಷ್ಟಿಯಿಂದ ನೋಡಿದರೆ, ಬ್ರಯೋಫೈಟ್ ಶೈವಲಗಳು ಮತ್ತು ಜರೀಗಿಡಗಳ ಮಧ್ಯೆ ಬರುವ ವಿಭಾಗ ಎನ್ನಬಹುದು. ಆದರೆ ಬ್ರಯೋಫೈಟ ವಿಭಾಗದ ಯಾವ ಪ್ರಭೇದವೂ ಶೈವಲಗಳಲ್ಲಿ ಯಾವ ನಿರ್ದಿಷ್ಟ ಸಸ್ಯದೊಂದಿಗೂ ನೇರಸಂಪರ್ಕ ಪಡೆದಿಲ್ಲ. ಹಾಗೆಯೇ ಬ್ರಯೋಫೈಟ ಮತ್ತು ಜರೀಗಿಡಗಳ ಮಧ್ಯದ ಸಂಪರ್ಕವೂ ಬಹು ಕಷ್ಟಸಾಧ್ಯ. ಏಕೆಂದರೆ ಈ ವಿಭಾಗಗಳ ನಡುವೆ ಮಧ್ಯವರ್ತಿಗಳಾಗಬಲ್ಲ ಸಸ್ಯಗಳಾಗಲೀ ಅವುಗಳ ಪಳೆಯುಳಿಕೆಗಳಾಗಲೀ ಸಿಕ್ಕಿಲ್ಲ. ಬ್ರಯೋಫೈಟ್‌ಗಳ ಮೂಲ ಚರ್ಚಾಸ್ಪದ ವಿಷಯ. ಒಂದು ವಾದದ ಪ್ರಕಾರ ಜರೀಗಿಡಗಳ ಗುಂಪಿನ ಸಸ್ಯಗಳು ಕ್ಷೀಣಿಸಿ, ಇಳಿಮುಖ ವಿಕಾಸದ ಮೂಲಕ ಬ್ರಯೋಫೈಟ್‌ಗಳಾಗಿವೆ. ಮತ್ತೊಂದು ವಾದದ ಪ್ರಕಾರ ಕೆಲ ಶೈವಲಗಳು ವೃದ್ಧಿಸಿ ಏರುಮುಖ ವಿಕಾಸದ ಮೂಲಕ ಬ್ರಯೋಫೈಟ್‌ಗಳಾಗಿವೆ.

ಉಪಯೋಗಗಳು

ಬದಲಾಯಿಸಿ

ಬ್ರಯೋಪೈಟ್‌ಗಳು ಕಲ್ಲುಬಂಡೆಗಳ ಮೇಲ್ಮೈಯನ್ನು ಸಸ್ಯಗಳಿಗೆ ವಾಸಯೋಗ್ಯವಾಗಿಸುವಿಕೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ ಮತ್ತು ಕಲ್ಲುಬಂಡೆಗಳ ಶಿಥಿಲೀಕರಣದಲ್ಲೂ ಸಹಾಯಮಾಡುತ್ತವೆ. ಅಂತೆಯೇ ಕೊಚ್ಚಿಹೋದ ಮಣ್ಣಿನಲ್ಲಿ ಬೆಳೆದು ಭೂ ಸವೆತವನ್ನು ಗಮನಾರ್ಹವಾಗಿ ತಡೆಯುತ್ತವೆ. ಜೌಗುಹಾವಸೆಗಳಿಂದ ದೊರೆಯುವ ಸಸ್ಯಾಂಗಾರ ಒಂದು ಅಮೂಲ್ಯ ಉರುವಲು. ಅಲ್ಲದೆ ಇದನ್ನು ಹುಲ್ಲುಹಾಸಿನಂತೆ ಬಳಸಿ ಕುದುರೆ ಲಾಯಗಳಲ್ಲಿ ನಾತ ಹೊರಡುವುದನ್ನು ತಡೆಯಬಹುದು. ಜೀವಂತ ಗಿಡಗಳನ್ನು ದೂರದೇಶಗಳಿಗೆ ಸಾಗಿಸುವಾಗ, ಕೆಡದಂತೆ ಪಿಂಡಿಕಟ್ಟಲು ಸಸ್ಯಾಂಗಾರ ತುಂಬ ಉಪಯುಕ್ತವಸ್ತು. ಕೆಲ ಹಾವಸೆಗಳನ್ನು ಯೂರೊಪಿನಲ್ಲಿ ಪೊರಕೆಗಳು, ದೂಳ್ತೊಡಪಗಳು (ಬ್ರಷ್‌ಗಳು) ಮತ್ತು ಮೆತ್ತೆಗಳನ್ನು ತಯಾರಿಸಲು ಉಪಯೋಗಿಸುವುದಿದೆ.

ಉಲ್ಲೇಖಗಳು

ಬದಲಾಯಿಸಿ
  1. "Reviews glossary". Nature.com. Archived from the original on 2016-03-05. Retrieved 2009-03-26.
  2. Levetin, Estelle; McMahon, Karen (2012). Plants and Society. New York, NY: McGraw-Hill. p. 139. ISBN 978-0-07-352422-1.
  3. "Bryophytes (Mosses and liverworts) — The Plant List". www.theplantlist.org (in ಇಂಗ್ಲಿಷ್). Archived from the original on 2019-04-12. Retrieved 2017-04-11.
  4. "What are Bryophytes". bryophytes.plant.siu.edu (in ಇಂಗ್ಲಿಷ್). Archived from the original on 2018-10-19. Retrieved 2017-04-11.
  5. Vanderpoorten, Alain; Goffinet, Bernard (2009). Introduction to Bryophytes. Cambridge: Cambridge University Press. p. 3. ISBN 978-0-511-54013-4.
  6. Lucas, William J.; Groover, Andrew; Lichtenberger, Raffael; Furuta, Kaori; Yadav, Shri-Ram; Helariutta, Ykä; He, Xin-Qiang; Fukuda, Hiroo; Kang, Julie (April 2013). "The Plant Vascular System: Evolution, Development and Functions F". Journal of Integrative Plant Biology (in ಇಂಗ್ಲಿಷ್). 55 (4): 294–388. doi:10.1111/jipb.12041. PMID 23462277.
  7. "Habitats - ecology - bryophyte". www.anbg.gov.au (in ಇಂಗ್ಲಿಷ್). Retrieved 2017-04-12.
  8. Glime, J.M.; Bisang, I. (2014). "Sexuality: Its Determination (Ch. 3-1)" (PDF). In Glime, J.M. (ed.). Bryophyte Ecology. Vol. Volume 1 Physiological Ecology. Michigan Technological University and the International Association of Bryologists. Retrieved 2014-11-09. {{cite book}}: |volume= has extra text (help); Unknown parameter |last-author-amp= ignored (help)
  9. "GLOSSARY B". Archived from the original on 2009-04-02. Retrieved 2009-03-26.
  10. Knoop, Volker (2010). "Looking for sense in the nonsense: a short review of non-coding organellar DNA elucidating the phylogeny of bryophytes". Tropical Bryology. 31: 51–60.
  11. Qiu, Y.L.; Li, L.; Wang, B.; et al. (October 2006). "The deepest divergences in land plants inferred from phylogenomic evidence". Proceedings of the National Academy of Sciences. 103 (42): 15511–15516. Bibcode:2006PNAS..10315511Q. doi:10.1073/pnas.0603335103. PMC 1622854. PMID 17030812.
  12. Cox, Cymon J.; Li, Blaise; Foster, Peter G.; Embley, T. Martin; Civáň, Peter (2014). "Conflicting Phylogenies for Early Land Plants are Caused by Composition Biases among Synonymous Substitutions". Systematic Biology. 63 (2): 272–279. doi:10.1093/sysbio/syt109. PMC 3926305. PMID 24399481. {{cite journal}}: Invalid |ref=harv (help); Unknown parameter |lastauthoramp= ignored (help)

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: