ಬಿ. ವಿ. ಕಾರಂತ್

ಭಾರತೀಯ ರಂಗಕರ್ಮಿ, ಚಿತ್ರ ನಿರ್ದೇಶಕ

ಬಾಬುಕೋಡಿ ವೆಂಕಟರಮಣ ಕಾರಂತ್ (ಅಕ್ಟೋಬರ್ ೭, ೧೯೨೮ - ಸೆಪ್ಟಂಬರ್ ೧, ೨೦೦೨) ಕನ್ನಡ ನಾಟಕರಂಗದ ಪ್ರಸಿದ್ಧ ವ್ಯಕ್ತಿತ್ವಗಳಲ್ಲಿ ಒಬ್ಬರು; ಕನ್ನಡ ಮತ್ತು ಭಾರತದ ಇನ್ನಿತರ ಅನೇಕ ಭಾಷೆಗಳಲ್ಲಿ ನಾಟಕಗಳು ಮತ್ತು ಚಿತ್ರಗಳನ್ನು ನಿರ್ದೇಶಿಸಿದರು. ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಬಿ.ವಿ. ಕಾರಂತ

ಜೀವನ ಚರಿತ್ರೆ ಬದಲಾಯಿಸಿ

ದಕ್ಷಿಣ ಕನ್ನಡಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ ೧೯೨೮ ರಲ್ಲಿ ಹುಟ್ಟಿದರು.ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗನಾದ ವೆಂಕಟರಮಣನನ್ನು (ಬಿ.ವಿ.ಕಾರಂತ)ತಾಯಿ ಲಕ್ಷ್ಮಮ್ಮ ಕೊಂಡಾಟದಿಂದ'ಬೋಯಣ್ಣ'ಎಂದು ಕರೆಯುತ್ತಿದ್ದರು.ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು, ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, ಪಾತ್ರಿಯ ದರ್ಶನ, ವಾದ್ಯಗಳ ಧ್ವನಿ ವಿನ್ಯಾಸ ಇವುಗಳಿಂದ ಬೋಯಣ್ಣನ ಭಾವಕೋಶ ಸಮೃದ್ಧವಾಯಿತು.ಮುಂದೆ ಕುಕ್ಕಾಜೆ ಪ್ರಾಥಮಿಕ ಶಾಲೆಯ ನಾಟಕಗಳಲ್ಲಿ ಬೋಯಣ್ಣನಿಗೆ 'ಪಾರ್ಟು ಸಿಕ್ಕಿದವು.ಅಧ್ಯಾಪಕ ಕಳವಾರು ರಾಮರಾಯರು ನಿರ್ದೇಶಿಸಿದ 'ಸುಕ್ರುಂಡೆ ಐತಾಳರು - ಕುಂಬಳಕಾಯಿ ಭಾಗವತರು' ನಾಟಕದಲ್ಲಿ ಮೂರನೇ ಕ್ಲಾಸಿನ ಬೋಯಣ್ಣನದು ಪುರೋಹಿತನ ಐತಾಳನ ಪಾತ್ರ. ಪುರೋಹಿತ ಭಾಗವತನಾಗಬಯಸಿ ಸಂಗೀತವನ್ನು ಮಂತ್ರದ ಧಾಟಿಯಲ್ಲಿ ಹೇಳುತ್ತಿದ್ದರು. ಐದನೆಯ ಕ್ಲಾಸಿನಲ್ಲಿದ್ದಾಗ ಅಧ್ಯಾಪಕ ಪಿ.ಕೆ. ನಾರಾಯಣರು ನಿರ್ದೇಶಿಸಿದ 'ನನ್ನ ಗೋಪಾಲ'ದಲ್ಲಿ 'ಬೋಯಣ್ಣ' ಗೋಪಾಲನಾದ. ಬೋಯಣ್ಣನ ಹಾಡು ಕೇಳಿ ಮೆಚ್ಚಿದ ಊರಿನ ಪಟೇಲರು ಎರಡು ಊಪಾಯಿ ಬಹುಮಾನ ಕೊಟ್ಟು ಪ್ರೋತ್ಸಾಹಿಸಿದಾಗಲೇ ಅವರನ್ನು ರಂಗಭೂಮಿಯು ಎಳೆತನದಲ್ಲಿಯೆ ಸೆಳೆಯಿತು.ಎಂಟನೇ ಕ್ಲಾಸು ಮುಗಿಸಿದ ಬೋಯಣ್ಣ ಪುತ್ತೂರಿನ ಕುಕ್ರಬೈಲು ಕೃಷ್ಣಭಟ್ಟರ ಮನೆಯಲ್ಲಿ ಮನೆಪಾಠ ಹೇಳುವ ಮಾಸ್ಟ್ರಾದರು! ಮಹಾಬಲ ಭಟ್ಟರ 'ತ್ಯಾಗರಾಜ ಸಂಗೀತಶಾಲೆ'ಯಲ್ಲಿ ಸಂಗೀತಾಭ್ಯಾಸ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಗೀತ ಕಲಿಕೆ, ಆಗಾಗ ಶಿವರಾಮ ಕಾರಂತರ 'ಬಾಲವನ'ಕ್ಕೆ ಭೇಟಿ - ಗುಬ್ಬಿ ಕಂಪನಿಯ 'ಕೃಷ್ಣಲೀಲಾ' ನಾಟಕ ನೋಡಲು ಪಾಣೆಮಂಗಳೂರಿನಿಂದ ಮಂಗಳೂರಿಗೆ ಹೂಗುವಾಗ ಸೈಕಲಿನಿಂದ ಬಿದ್ದು ಹಲವು ದಿನ ನರಳಿದ್ದರು ಬೋಯಣ್ಣ. ಕಾರಂತರ 'ಬಾಲಪ್ರಪಂಚ' 'ಸಿರಿಗನ್ನಡ ಅರ್ಥಕೋಶ' - ಇಂಥ ಪುಸ್ತಕಗಳನ್ನು ತಗೊಳ್ಳಲಿಕ್ಕಾಗಿ ಬೋಯಣ್ಣ ಧನಿಗಳ ಮನೆಯಲ್ಲಿ ಕದಿಯತೊಡಗಿದಾಗ ಕದ್ದು ಸಿಕ್ಕಿದಾಗ ಕೃಷ್ಣಭಟ್ಟರು ಬುದ್ಧಿವಾದ ಹೇಳಿದರು.ಮುಂದೆ ಅವರು ಮನೆಯಿಂದ ಓಡಿ ಹೋಗಿ ಪ್ರಖ್ಯಾತ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯನ್ನು ಸೇರಿಕೊಂಡರು.ಅಲ್ಲಿ ಅವರು ಡಾ.ರಾಜ್‍ಕುಮಾರ್ ಜೊತೆಗೆ ಕೆಲಸಮಾಡಿದರು. ಬೋಯಣ್ಣ ಊರು ಬಿಟ್ಟು ಓಡಿಹೋದದ್ದು ೧೭-೧೧-೧೯೪೪ ರಂದು (ತನ್ನ ಮಗ ಶನಿವಾರ ಊರುಬಿಟ್ಟು ಹೋದದ್ದರಿಂದ ಊರೂರು ಅಲೆಯುವಂತಾಯಿತು ಎಂದು ತಾಯಿ ಲಕ್ಷ್ಮಮ್ಮ ಕೊರಗುತ್ತಿದ್ದರಂತೆ).'ನನ್ನ ಮಗ ಕಾಣೆಯಾಗಿದ್ದಾನೆ. ದಯವಿಟ್ಟು ಎಲ್ಲಿದ್ದಾನೆಂದು ಪತ್ತೆಮಾಡಿಸಿ' ಎಂದು ಬಿ.ವಿ. ಕಾರಂತರ ತಂದೆ ಕೇಂದ್ರ ಸರಕಾರದ ಗೃಹಮಂತ್ರಗಳಿಗೆ ಬರೆದ ಪತ್ರ ಬರೆದಿದ್ದರಂತೆ. ಊರು ಬಿಟ್ಟು ಓಡಿಹೋಗಿ ಸುಮಾರು ೨೫ ವರ್ಷಗಳ ಅನಂತರ ಬಿ.ವಿ. ಕಾರಂತರು ತನ್ನ ತಾಯಿ-ತಂದೆಯನ್ನು ಭೇಟಿಯಾದರು. ಈ ಭೇಟಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ 'ಏವಂ ಇಂದ್ರಜಿತು' ಪ್ರದರ್ಶನದ ದಿನ ನಡೆಯಿತು. ಗುಬ್ಬಿ ವೀರಣ್ಣನವರು ಕಾರಂತರನ್ನು ಬನಾರಸ್ ಗೆ ಕಲಾಪ್ರಕಾರದಲ್ಲಿ ಸ್ನಾತಕೋತ್ತರ ಪದವಿಗಾಗಿ ಕಳಿಸಿದರು. ಅಲ್ಲಿ ಅವರು ಗುರು ಓಂಕಾರನಾಥರ ಕೆಳಗೆ ಹಿಂದೂಸ್ತಾನಿ ಸಂಗೀತದ ತರಬೇತಿಯನ್ನೂ ಪಡೆದರು.೧೯೫೮ ರಲ್ಲಿ ಬಿ.ವಿ. ಕಾರಂತ-ಪ್ರೇಮಾ ದಂಪತಿಗಳಾದರು ,ಮೈಸೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈ ಮದುವೆ ನಡೆಯಿತು. ಶಿಕ್ಷಕಿಯಾಗಿದ್ದ ಪ್ರೇಮಾ ಮದುವೆಯಾದ ಮೇಲೆ ಕೆಲಸ ಕಳೆದುಕೊಂಡರು.ನಂತರ ಅವರು ತಮ್ಮ ಹೆಂಡತಿ ಪ್ರೇಮಾ ಕಾರಂತರ ಜತೆಗೂಡಿ ಬೆಂಗಳೂರಿನ ಅತ್ಯಂತ ಹಳೆಯ ತಂಡಗಳಲ್ಲೊಂದಾದ "ಬೆನಕ"ವನ್ನು ಕಟ್ಟಿದರು. ಅದು ಬೆಂಗಳೂರು ನಗರ ಕಲಾವಿದರು ಎಂಬುದರ ಸಂಕ್ಷಿಪ್ತ ರೂಪ. ಅವರು ೧೯೬೨ ರಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿ ಪಡೆದರು. ೧೯೬೯ ಮತ್ತು ೧೯೭೨ ರ ನಡುವೆ ದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ನಾಟಕಶಿಕ್ಷಕರಾಗಿ ಕೆಲಸಮಾಡಿದರು. ನಂತರ ಹೆಂಡತಿಯೊಡನೆ ಬೆಂಗಳೂರಿಗೆ ಮರಳಿದರು. ಅಲ್ಲಿ ಸಿನೇಮಾ ಮತ್ತು ಸಂಗೀತದಲ್ಲಿ ಕೆಲಸಮಯ ಕಳೆದರು. ಆಗ ಗಿರೀಶ್ ಕಾರ್ನಾಡ್ ಮತ್ತು ಯು. ಆರ್. ಅನಂತಮೂರ್ತಿಯಂತಹವರ ಒಡನಾಟ ಅವರಿಗೆ ದೊರಕಿತು. ೧೯೭೭ ರಲ್ಲಿ ಅವರು ರಾಷ್ಟ್ರೀಯ ನಾಟಕ ಶಾಲೆ ಮರಳಿದರು , ಆದರೆ ಈ ಬಾರಿ ಅವರು ಅದರ ನಿರ್ದೇಶಕರು. ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ರಂಗಭೂಮಿಯನ್ನು ದೇಶದ ಮೂಲೆಮೂಲೆಗೆ ಕೊಂಡೊಯ್ದರು. ತಮಿಳುನಾಡಿನ ಮದುರೈಯಂತಹ ದೂರದ ಸ್ಥಳಗಳಲ್ಲಿ ಅನೇಕ ಕಮ್ಮಟಗಳನ್ನು ನಡೆಸಿದರು.ನಂತರ ಮಧ್ಯಪ್ರದೇಶ ಸರಕಾರವು ಭಾರತಭಾವನದ ಆಶ್ರಯದಲ್ಲಿದ್ದ ರಂಗಮಂಡಲ ರೆಪರ್ಟರಿಯ ಮುಖ್ಯಸ್ಥರಾಗಿರಲು ಅವರನ್ನು ಆಹ್ವಾನಿಸಿತು. ಅಲ್ಲಿ ೧೯೮೧ ರಿಂದ ೧೯೮೬ ರ ವರೆಗೆ ಸೇವೆ ಸಲ್ಲಿಸಿ ಅವರು ಕರ್ನಾಟಕಕ್ಕೆ ಮರಳಿದರು.ಇವರ ನಿರ್ದೇಶನದ "ಚೋಮನದುಡಿ" ಚಿತ್ರ ಕೇಂದ್ರ ಸರ್ಕಾರದ "ಸ್ವರ್ಣಕಮಲ" ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡ ಚಿತ್ರವಾಯಿತು.."ನಮನ"

೧೯೮೯ ರಲ್ಲಿ ಕರ್ನಾಟಕ ಸರಕಾರವು ಮೈಸೂರಿನಲ್ಲಿ ರೆಪರ್ಟರಿ ಸ್ಥಾಪಿಸಲು ಅವರನ್ನು ಕರೆಯಿತು. ಅದಕ್ಕೆ ರಂಗಾಯಣ ಎಂದು ಹೆಸರಿಟ್ಟು ೧೯೯೫ ರವರೆಗೆ ಅದರ ಮುಖ್ಯಸ್ಥರಾಗಿದ್ದರು. ವೃತ್ತಿ ಜೀವನದಲ್ಲಿ ಮೂರು ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದರು:

 • ನಿರ್ದೇಶಕರು, ನ್ಯಾಷನಲ್ ಸ್ಕೂಲ್ ಅಫ್ ಡ್ರಾಮಾ (೧೯೭೭-೧೯೮೧)
 • ನಿರ್ದೇಶಕರು, ರಂಗಮಂಡಲ, ಮಧ್ಯಪ್ರದೇಶ (೧೯೮೧-೧೯೮೬)
 • ನಿರ್ದೇಶಕರು, ರಂಗಾಯಣ, ಮೈಸೂರು (೧೯೮೯-೧೯೯೫)

ನಾಟಕಗಳು ಬದಲಾಯಿಸಿ

ಬಿ ವಿ ಕಾರಂತರು ಅನೇಕ ನಾಟಕಗಳನ್ನು ನಿರ್ದೇಶಿಸಿರುವುದಲ್ಲದೆ ನಾಟಕಗಳಿಗೆ ಸಂಗೀತವನ್ನೂ ರಚಿಸುತ್ತಿದ್ದರು. ತಮ್ಮ ನಾಟಕಗಳಲ್ಲಿ ಯಕ್ಷಗಾನದಂಥ ಜಾನಪದ ಪದ್ಧತಿಗಳನ್ನೂ ಸೇರಿಸಿಕೊಂಡು ಕನ್ನಡ ನಾಟಕರಂಗದಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಬಿ ವಿ ಕಾರಂತರು ನಿರ್ದೇಶಿಸಿದ ಕೆಲವು ಪ್ರಸಿದ್ಧ ನಾಟಕಗಳೆಂದರೆ:

ಕನ್ನಡ ಬದಲಾಯಿಸಿ

 • ಈಡಿಪಸ್ (ಗ್ರೀಕ್ ರುದ್ರನಾಟಕ)
 • ಹಯವದನ (ಗಿರೀಶ್ ಕಾರ್ನಾಡ್ ಅವರ ನಾಟಕ)
 • ಪಂಜರ ಶಾಲೆ
 • ಗೊಕುಲ ನಿರ್ಗಮನ
 • ಸತ್ತವರ ನೆರಳು
 • ಜೊಕುಮಾರ ಸ್ವಾಮಿ

ಹಿಂದಿ ಬದಲಾಯಿಸಿ

 • ಅಂಧೇರ್ ನಾಗರಿ ಚೌಪಟ್ ರಾಜಾ
 • ಕಿಂಗ್ ಲಿಯರ್ (ಶೇಕ್ಸ್‍ಪಿಯರ್ ನ ನಾಟಕ)
 • ಸ್ಕಂದಗುಪ್ತ

ಚಿತ್ರಗಳು ಬದಲಾಯಿಸಿ

ಬಿ ವಿ ಕಾರಂತರು ಚಿತ್ರರಂಗದಲ್ಲಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿರುವುದಲ್ಲದೆ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಅವರ ಕೆಲವು ಚಿತ್ರಗಳು:

ಕನ್ನಡದಲ್ಲಿ ಅವರು ಸಂಗೀತ ನೀಡಿದ ಕೆಲ ಚಿತ್ರಗಳು:

 • ಫಣಿಯಮ್ಮ (೧೯೮೩)
 • ಘಟಶ್ರಾದ್ಧ (೧೯೭೭)
 • ಕನ್ನೇಶ್ವರ ರಾಮ (೧೯೭೭)
 • ಚೋಮನ ದುಡಿ (೧೯೭೫)
 • ಕಾಡು (೧೯೭೩)

ಪ್ರಶಸ್ತಿಗಳು ಬದಲಾಯಿಸಿ

ಬಿ ವಿ ಕಾರಂತರು ೨೦೦೨ ರಲ್ಲಿ ನಿಧನರಾದರು.