ಪ್ರಗತಿಶೀಲ ಸಾಹಿತ್ಯ

ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ - ಹೊಸಗನ್ನಡ ಸಾಹಿತ್ಯಯಲ್ಲಿ ಮುಖ್ಯವಾಗಿ ಎರಡು ಘಟ್ಟಗಳನ್ನು ಕಾಣುತ್ತೇವೆ : ನವೋದಯ ಮತ್ತು ನವ್ಯ ಸಾಹಿತ್ಯ. ಇವುಗಳ, ನಡುವೆ ಪ್ರಗತಿಶೀಲ ಎಂಬುದೊಂದುಂಟು. ಆದರೆ ಇದನ್ನು ಸ್ವತಂತ್ರ ಪ್ರಸ್ಥಾನವೆಂದು ಪರಿಗಣಿಸದೆ, ಕೇವಲ ಸಂಧಿ ಸ್ಥಿತಿ ಎಂದು ಭಾವಿಸುವವರೂ ಇದ್ದಾರೆ. ಸು. 1940 ರಿಂದ ಸು. 1950 ರ ವರೆಗೆ ಪ್ರಗತಿಶೀಲ ಸಾಹಿತ್ಯದ ಹರವು ಕಂಡು ಬರುತ್ತದೆ. ಇದು ನವೋದಯ ಸಾಹಿತ್ಯದ ಮುಂದಿನ ಮಜಲು ; ನವೋದಯಕ್ಕೆ ಪ್ರತಿಭಟನೆಯಾಗಿ ತಲೆಯೆತ್ತಿದ್ದು. ಮುಂದೆ ಪ್ರಗತಿಶೀಲ ಸಾಹಿತ್ಯ ಎರಡು ಕವಲುಗಳಾಗಿ ಒಡೆದು, ಒಂದು ಮತ್ತೆ ನವೋದಯದಲ್ಲೂ ಇನ್ನೊಂದು ನವ್ಯದಲ್ಲೂ ವಿಲೀನವಾದುವು. ನವೋದಯ ಪಂಥ ಬಹುಮಟ್ಟಿಗೆ ಕಾವ್ಯ ಪ್ರಕಾರಕ್ಕೆ ಸಂಬಂಧಿಸಿದ್ದರೆ, ಪ್ರಗತಿಶೀಲ ಪಂಥಕತೆ, ಕಾದಂಬರಿಗಳಿಗೆ ಸೀಮಿತವಾಯಿತು ಎಂಬುದು ಗಮನಾರ್ಹ.

ಹಿನ್ನೆಲೆ

ಬದಲಾಯಿಸಿ

ಚಳುವಳಿ ಹಿನ್ನೆಲೆ

ಬದಲಾಯಿಸಿ

ಪ್ರಗತಿಶೀಲ ಸಾಹಿತ್ಯ ಕನ್ನಡದಲ್ಲೇ ಉದ್ಭವಿಸಿದ್ದಲ್ಲ ; ಅಖಿಲ ಭಾರತ ಮಟ್ಟದಲ್ಲಿ ಹುಟ್ಟಿಕೊಂಡ ಚಳವಳಿಯೊಂದರ ಅಲೆಯಾಗಿ ಇದು ಕನ್ನಡಕ್ಕೆ ಬಂತು. ಆ ಚಳವಳಿ ಸು. 1928 ರಲ್ಲೆ ಮೊದಲಾಯಿತೆಂದೂ ಅದಕ್ಕೊಂದು ಸುಸಂಘಟಿತ ರೂಪ ಬಂದದ್ದು 1943 ರಲ್ಲೆ ಎಂದೂ ಹೇಳಲಾಗಿದೆ. ಆ ವರ್ಷ ಅಖಿಲ ಭಾರತ ಪ್ರಗತಿಶೀಲ ಬರಹಗಾರರ ಸಮ್ಮೇಳನ ಮುಂಬಯಿಯಲ್ಲಿ ನಡೆಯಿತು. ಪ್ರಗತಿಶೀಲ ಲೇಖಕರ ಸಂಘ ತನ್ನ ಪ್ರಣಾಳಿಕೆಯಲ್ಲಿ ಮುಂದಿಟ್ಟ ಕೆಲವು ಧ್ಯೇಯಗಳನ್ನು ಲಕ್ಷಿಸಿದರೆ, ಈ ಸಾಹಿತ್ಯದ ಪ್ರೇರಣೆ, ಸ್ವರೂಪಗಳು ವಿಷದವಾಗಬಹುದು.

  1. ಸಾಮ್ರಾಜ್ಯಶಾಹಿ ಸಂಕಲೆಗಳಿಂದ ಸ್ವತಂತ್ರರಾಗಲು ಐಕ್ಯತೆಯನ್ನು ಸಾಧಿಸುವಂತೆ, ಜಪಾನೀ ಫ್ಯಾಸಿಸ್ಟರ ಆಕ್ರಮಣದಿಂದ ಭಾರತವನ್ನು ರಕ್ಷಿಸುವಂತೆ ಜನತೆಯನ್ನು ಹುರಿದುಂಬಿಸಿ ಮುನ್ನಡೆಸಲು ಸಾಧಕವಾದ ನಾಟಕ ಕತೆ ಕವನ, ಕಥನಕವನ ಲಾವಣಿ ಮೊದಲಾದವುಗಳನ್ನು ಬರೆಯುವುದು.
  2. ಪರರಾಷ್ಟ್ರಗಳ ಹಾಗೂ ಮುಖ್ಯವಾಗಿ ಇತ್ತೀಚೆಗಿನ ಚೀನಾ ಮತ್ತು ರಷ್ಯಗಳ ಸಾಹಿತ್ಯವನ್ನು ಅನುವಾದಿಸುವುದು ಮತ್ತು ಪ್ರಕಟಿಸುವುದು.
  3. ಕೂಲಿಕಾರರ ಮತ್ತು ರೈತರ ನಡುವೆ ಲಾವಣಿ ಹಾಡುಗಾರಿಕೆ ಯಕ್ಷಗಾನ ಕವಿತಾ ಗೋಷ್ಠಿ ಮುಂತಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೂಟಗಳನ್ನು ನಡೆಸಿ ಜನಪದ ಸಾಹಿತ್ಯ ಮತ್ತು ಕಲೆಗಳೊಡನೆ ಪ್ರಗತಿಶೀಲ ಬರಹಗಾರರ ಸಂಘವನ್ನು ಹೊಂದಿಸುವುದು.

ರಾಜಕೀಯ ಹಿನ್ನೆಲೆ

ಬದಲಾಯಿಸಿ

ಪ್ರಗತಿಶೀಲ ಸಾಹಿತ್ಯಕ್ಕೆ ಸಾಕಷ್ಟು ರಾಜಕೀಯ ಹಿನ್ನೆಲೆಯಿದೆ. ಕಮ್ಯೂನಿಸಂ ಮಾರ್ಕ್ಸ್‌ವಾದ, ಲೆನಿನ್ ವಿಚಾರಧಾರೆ ಮತ್ತು ರಷ್ಯನ್ ಸಾಹಿತ್ಯ ಅದರ ಮೇಲೆ ಪ್ರಭಾವ ಬೀರಿವೆ. ವರ್ಗ ಸಂಘರ್ಷದಿಂದ ಅದು ಪ್ರಚೋದಿತ. 1942 ರ ಭಾರತ ಸ್ವಾತಂತ್ರ್ಯ ಚಳವಳಿ, ಕ್ಷಾಮ ಪರಿಸ್ಥಿತಿಯ ದಾರುಣತೆ, ದ್ವಿತೀಯ ಮಹಾಯುದ್ಧ ಮುಂತಾದುವೂ ಪ್ರಗತಿಶೀಲ ಆಂದೋಲನದ ಪ್ರೇರಕ ಶಕ್ತಿಗಳು. ಸಮಗ್ರ ಭಾರತದ ಜೀವನವನ್ನು ಪ್ರತಿಬಿಂಬಿಸಬೇಕೆಂಬ ಹಂಬಲ ಮತ್ತು ಭಾರತೀಯ ಸಾಹಿತ್ಯ ಅಂತರ ರಾಷ್ಟ್ರೀಯ ಮಹತ್ವವನ್ನು ಗಳಿಸಬೇಕೆಂಬ ನಿರೀಕ್ಷೆ ಕೂಡ ಅದರ ಹುಟ್ಟಿಗೆ ಕಾರಣಗಳು.

ಕನ್ನಡ ಚಳುವಳಿ

ಬದಲಾಯಿಸಿ

ಮುಖ್ಯವಾಗಿ ಹಿಂದಿ ಸಾಹಿತ್ಯದಿಂದ ಹಾಗೂ ಭಾರತೀಯ ಲೇಖಕರ ಇಂಗ್ಲಿಷ್ ಸಾಹಿತ್ಯದಿಂದ ಕನ್ನಡ ಪ್ರಗತಿಶೀಲ ಸಾಹಿತ್ಯಕ್ಕೆ ಸ್ಫೂರ್ತಿಯೊದಗಿತು. ಅ.ನ.ಕೃ. ಕನ್ನಡದಲ್ಲಿ ಈ ಚಳವಳಿಯ ಮುಂದಾಳಾದರು. ತ.ರಾ.ಸು., ಬಸವರಾಜ ಕಟ್ಟೀಮನಿ, ನಿರಂಜನ, ಚದುರಂಗ, ಅರ್ಚಕ ವೆಂಕಟೇಶ, ಕುಮಾರ ವೆಂಕಣ್ಣ, ಎಸ್.ಅನಂತನಾರಾಯಣ ಮುಂತಾದವರು ಈ ಪಂಥದ ಇತರ ಲೇಖಕರು. ಇದರ ಮೇಲೆ ಮಾಯಾಕೊವಸ್ಕಿ, ಮಾಕ್ಸಿಂಗಾರ್ಕಿ ಮುಂತಾದ ರಷ್ಯನ್ ಸಾಹಿತಿಗಳ ಮತ್ತು ವಾಲ್ಟೇರ್. ಎಮಿಲಿ ಜೋಲಾ, ಸಿಂಕ್ಲೇರ್, ಮೊಪಾಸಾ, ಕುಪ್ರಿನ್, ಇಪ್ಸನ್, ಬರ್ನಾಡ್ ಷಾ ಇತ್ಯಾದಿ ಪಾಶ್ಚಾತ್ಯ ಲೇಖಕರ ಪ್ರಭಾವವಿದೆ. ಪ್ರಗತಿಶೀಲ ಸಾಹಿತ್ಯ ತನ್ನ ಕಾಲದಲ್ಲಿ ತುಂಬ ವಾದವಿವಾದಗಳಿಗೆ ಎಡೆಗೊಟ್ಟಿತು. ಅದರ ಮೇಲಿನ ಮೂರು ಪ್ರಮುಖವಾದ ಆರೋಪಗಳಿವು :

  1. ಪ್ರಗತಿಶೀಲರು ನಾಸ್ತಿಕರು
  2. ಕಮ್ಯೂನಿಸ್ಟರು
  3. ಅಶ್ಲೀಲದ ಪುರಸ್ಕರ್ತರು. ಪ್ರಗತಿಶೀಲ ಪಂಥದ ಸಾಧನೆಗಳನ್ನೂ ಪರಿಮಿತಿಗಳನ್ನೂ ಇಂದು ವಸ್ತುನಿಷ್ಠವಾಗಿ ಗುರುತಿಸುವುದು ಸಾಧ್ಯ.

ಪ್ರೇರಣೆ

ಬದಲಾಯಿಸಿ
  1. ಪ್ರಗತಿಶೀಲ ಸಾಹಿತ್ಯದ ಕೆಲವು ಬೀಜಗಳು ನವೋದಯ ಸಾಹಿತ್ಯದಲ್ಲಿ ಇದ್ದವು. ನವೋದಯ ಲೇಖಕರಿಗೂ ಪ್ರಗತಿಶೀಲರಿಗೂ ಕೆಲವಂಶಗಳಲ್ಲಿ ಸಾಮ್ಯವಿದೆ. ಇಬ್ಬರಿಗೂ ಬದುಕಿನಲ್ಲಿ ಶ್ರದ್ಧೆ, ಬದುಕು, ಅರ್ಥಪೂರ್ಣವೆಂಬ ನಂಬಿಕೆ ಮತ್ತು ಅದನ್ನು ಉತ್ತಮಗೊಳಿಸಬೇಕೆಂಬ ಆಕಾಂಕ್ಷೆ. ಇಬ್ಬರೂ ಆದರ್ಶವಾದಿಗಳು. ಪ್ರಗತಿಶೀಲರು ದೇವರನ್ನು ನಂಬದಿದ್ದರೂ ಮಾನವೀಯತೆಯನ್ನು ನಂಬಿದವರು. ಭಾರತೀಯ ಸಂಸ್ಕೃತಿ ಪರಂಪರೆಗಳನ್ನು ಅವರ ಮೊತ್ತದಲ್ಲಿ ತಿರಸ್ಕರಿಸಲಿಲ್ಲ. (ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದವರು ನವ್ಯರು).
  2. ಪ್ರಗತಿಶೀಲ ಲೇಖಕರು ಸಾಹಿತ್ಯಕ್ಕೆ ಹೆಚ್ಚಿನ ವಸ್ತುವೈವಿಧ್ಯ, ವಿಸ್ತಾರಗಳನ್ನು ತಂದರು. ಮಡಿವಂತಿಕೆಯನ್ನು ದೂರ ಮಾಡಿ ಜೀವನದ ಎಲ್ಲ ಮುಖಗಳನ್ನೂ ಧೈರ್ಯದಿಂದ ವಾಸ್ತವಿಕವಾಗಿ ಚಿತ್ರಿಸಲು ಯತ್ನಿಸಿದರು. ಸಮಾಜದ ಅದರಲ್ಲೂ ಮಠಮಾನ್ಯಗಳ ಡಾಂಭಿಕತೆಯನ್ನು ಬಯಲು ಮಾಡುವುದು ಅವರ ಉದ್ದೇಶವಾಗಿತ್ತು. ಸಮಾಜದ ಹಲಬಗೆಯ ದೋಷ, ಶೋಷಣೆಗಳಿಗೆ ಲೈಂಗಿಕ ಸಮಸ್ಯೆಗಳೆ ಮೂಲವೆಂದು ತಿಳಿದು ಅವರು ಅವುಗಳನ್ನು ಒಂದು ಮುಖ್ಯ ವಸ್ತುವನ್ನಾಗಿ ಸ್ವೀಕರಿಸಿದರು. ನವೋದಯ ಸಾಹಿತ್ಯ ವಿಶೇಷವಾಗಿ ನಾಗರಿಕ ಮಧ್ಯಮವರ್ಗದ ಜೀವನದ ನಿರೂಪಣೆಯಲ್ಲಿ ತೊಡಗಿತ್ತು, ಕೆಳವರ್ಗದ ಜನತೆಯ ಬಾಳನ್ನು ಅಷ್ಟಾಗಿ ಲೆಕ್ಕಿಸಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣವೂ ಅದರಲ್ಲಿ ಹೆಚ್ಚಾಗಿ ಮೂಡಿರಲಿಲ್ಲ. ಪ್ರಗತಿಶೀಲ ಸಾಹಿತ್ಯ ಅದನ್ನೆಲ್ಲ ಒಳಗುಮಾಡಿಕೊಂಡಿತು. ಬಡವರು, ಕಾರ್ಮಿಕರು, ಕೂಲಿಕಾರರು ಮೊದಲಾದವರ ಬದುಕಿನ ನೋವು ನಲಿವುಗಳಿಗೆ ಅಭಿವ್ಯಕ್ತಿ ನೀಡಿ ಪ್ರಗತಿಶೀಲರು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮಗಳನ್ನಿತ್ತರು. ಭಾಷೆಯ ಬಳಕೆಯಲ್ಲಿ - ಶಬ್ದಕೋಶಕ್ಕೆ ಸಂಬಂಧಿಸಿದಂತೆ - ಅವರು ನಿಸ್ಸಂಕೋಚ ಪ್ರವೃತ್ತಿಯನ್ನು ತೋರಿದರು. ನವೋದಯ ಸಾಹಿತಿಗಳು ಮುಖ್ಯವಾಗಿ ವಿಕ್ಟೋರಿಯನ್ ಯುಗದ ಇಂಗ್ಲೆಂಡಿನಿಂದ ತಮ್ಮ ಪ್ರೇರಣೆಯನ್ನು ಪಡೆದರು. ಪ್ರಗತಿಶೀಲ ಬರಹಗಾರರು ವಿಶಾಲತರ ದೃಷ್ಟಿಯಿಂದ ಇಂಗ್ಲೀಷೇತರ ಯೂರೋಪಿಯನ್ ಸಾಹಿತ್ಯದ ಪ್ರಭಾವಕ್ಕೆ ತಮ್ಮ ಬುದ್ಧಿಭಾವಗಳನ್ನು ತೆರೆದುಕೊಂಡರು. ಒಟ್ಟಿನ ಮೇಲೆ, ಹೊಸ ಸಮಸ್ಯೆಗಳ ಪ್ರಜ್ಞೆ, ಸಾಮಾಜಿಕ ಸಂವೇದನೆ, ಇಂಗ್ಲೆಂಡೇತರ ದೇಶಗಳ ಸಾಹಿತ್ಯ, ಜೀವನಗಳ ಪರಿಚಯ ಪ್ರಗತಿಶೀಲ ಸಾಹಿತ್ಯದಲ್ಲಿ ಗೋಚರಿಸುತ್ತವೆ.
  3. ಇವಿಷ್ಟು ಪ್ರಗತಿಶೀಲ ಸಾಹಿತ್ಯದ ಒಳ್ಳೆಯ ಮುಖ. ಅದಕ್ಕೆ ಇನ್ನೊಂದು ಮುಖವೂ ಇದೆ. ಈ ಚಳವಳಿಗೆ ಸೇರಿದ ಲೇಖಕರ ಜೀವನ ಚಿತ್ರಣದಲ್ಲಿ ಉದ್ವೇಗ ರೊಚ್ಚು, ರಭಸಮತಿ ಎದ್ದು ಕಾಣುತ್ತವೆ. ಅದರಲ್ಲಿ ಸಂಕೀರ್ಣತೆಗಿಂತ ಸರಳತೆಯೇ ಹೆಚ್ಚು. ಪ್ರಗತಿಶೀಲರು ಪಡಿಯಚ್ಚುಗಳಂತಹ ಪ್ರಾತಿನಿಧಿಕ ಪ್ರಾತ್ರಗಳನ್ನು ಸೃಜಿಸಿದರು : ವಿಷಯದ ಆಳಕ್ಕಿಳಿಯದೆ ಮೇಲೆ ಮೇಲೆ ತೇಲಾಡುವುದರಲ್ಲೇ ತೃಪ್ತರಾದರು. ಅವರ ಸಾಮಾಜಿಕ ಕಳಕಳಿಯೇನೊ ತೀವ್ರವಾದದ್ದೆ ; ಆದರೆ ಅದಕ್ಕೆ ಕಲೆಯ ಮೆರುಗು ಕಡಿಮೆ. ಸಂಯಮ, ವಸ್ತುನಿಷ್ಠತೆ, ವೈಚಾರಿಕತೆಗಳಿಗಿಂತ ಭಾವಾತಿರೇಖಕ್ಕೆ ಅವರು ಪ್ರಾಶಸ್ತ್ಯ ಕೊಟ್ಟರು ; ಪಾತ್ರಗಳ ಪರ ಅಥವಾ ವಿರೋಧ ಪಕ್ಷವನ್ನು ವಹಿಸಿದರು. ದುಂದುಗಾರಿಕೆಯಿಂದ ಕೂಡಿದ ಅವರ ಭಾಷೆ ಅನುಭವದ ಅನಿವಾರ್ಯ ಶರೀರವೆನಿಸುವುದಿಲ್ಲ ; ಅದರ ಸಾಧ್ಯತೆಗಳೆಲ್ಲ ಅವರಿಂದ ಬಳಕೆಗೊಂಡಿಲ್ಲ. ಅನುಭವದ ಬದಲು ಹೇಳಿಕೆಗಳನ್ನೂ ಘೋಷಣೆಗಳನ್ನೂ ಪ್ರಗತಿಶೀಲ ಲೇಖಕರು ಕೊಟ್ಟರು. ಯಥಾರ್ಥತೆಯ ಹೆಸರಿನಲ್ಲಿ ಕಾಮದ ಹಸಿಹಸಿಯಾದ ನಿರೂಪಣೆ ಅವರಲ್ಲಿ ಕಾಣುತ್ತದೆ. ಅವರು ಸಮಸ್ಯೆಗಳನ್ನು ಸಮಸ್ಯೆಗಳನ್ನಾಗಿ ಪ್ರತಿಪಾದಿಸಿದರೇ ಹೊರತು ಅನುಭವಗಳನ್ನಾಗಿ ಅಲ್ಲ. ಮನೋವಿಶ್ಲೇಷಣೆಯನ್ನಾಗಿ ಅಲ್ಲ. ಹೀಗಾಗಿ, ಪ್ರಗತಿಶೀಲ ಸಾಹಿತ್ಯದ ಬಹುಭಾಗ ಸ್ಥೂಲವಾಗಿ, ಸರಳವಾಗಿ ಪರಿಣಮಿಸಿತು (ಹಾಗೆ ನೋಡಿದರೆ ಪ್ರಗತಿಶೀಲರು ಹೇಳಿಕೊಂಡು ಸಾಧಿಸಿದ್ದನ್ನು ನವೋದಯ ಲೇಖಕರು, ಭಾಗಶಃ ಆದರೂ ಹೇಳಿಕೊಳ್ಳದೆ ಕಲಾತ್ಮಕವಾಗಿ ಸಾಧಿಸಿದರು).

ಹೀಗಿದ್ದೂ ಪ್ರಗತಿಶೀಲ ಸಾಹಿತ್ಯಕ್ಕೆ ಚಾರಿತ್ರಿಕವಾಗಿ ಒಂದು ಗಣ್ಯವಾದ ಸ್ಥಾನವಿದೆ. ವಸ್ತು ವಲಯವನ್ನು ವಿಸ್ತರಿಸಿದ್ದು ಮಾತ್ರವಲ್ಲದೆ ವಾಚಕರ ವಲಯವನ್ನೂ ವಿಸ್ತರಿಸಿದ್ದು, ಓದುವ ಅಭಿರುಚಿಯನ್ನು ಬೆಳೆಸಿದ್ದು ಅದರ ದೊಡ್ಡ ಸಾಧನೆ. " ಪ್ರಗತಿಶೀಲರು ಸಾಹಿತ್ಯದ ಮೂಲಭೂತ ತತ್ತ್ವಗಳಿಗೆ ಸವಾಲು ಹಾಕಿದರು. ಅವುಗಳನ್ನು ಬದಲಿಸುವಲ್ಲಿ ಅವರು ಯಶಸ್ವಿಯಾಗದಿದ್ದರೂ ಅವುಗಳ ಪುನರ್ವಿಮರ್ಶೆ ಅನಿವಾರ್ಯವಾಗುವಂತೆ ಮಾಡಿದರು" ಎಂಬ ಹೇಳಿಕೆಯನ್ನೂ ನೆನೆಯಬಹುದು.

ಇಂದು ಕನ್ನಡದಲ್ಲಿ ಮತ್ತೆ ಪ್ರಗತಿಶೀಲ ಸಾಹಿತ್ಯವನ್ನು ನೆನಪಿಗೆ ತರುವಂಥ ಕೃತಿಗಳ ರಚನೆಯಾಗುತ್ತಿರುವುದು ಗಮನಾರ್ಹ. ನವ್ಯ ಪಂಥಕ್ಕೆ ಪ್ರತಿಭಟನೆಯಾಗಿ ಅನೇಕ ಲೇಖಕರು ಉತ್ಕಟವಾದ ಸಾಮಾಜಿಕ ನಿಷ್ಠೆಯಿಂದ ಬರೆಯುತ್ತಿದ್ದಾರೆ. ಆದರೆ ಇವರು ಕಲೆಯ ಮೇಲೂ ಒಂದು ಕಣ್ಣಿಟ್ಟಿರುವುದರಿಂದ, ಪ್ರಗತಿಶೀಲ ಲೇಖಕರಿಗಿಂತ ಬೇರೆಯಾಗಿ ನಿಲ್ಲುತ್ತಾರೆ. ಈ ಹೊಸ ಬೆಳವಣಿಗೆಯನ್ನು ನಾವಿನ್ನೂ ಕಾದು ನೋಡಬೇಕಾಗಿದೆ.[][]

ಉಲ್ಲೇಖ

ಬದಲಾಯಿಸಿ
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಗತಿಶೀಲ ಸಾಹಿತ್ಯ-(ಸಿ.ಪಿ.ಕೆ.)
  2. Zaheer, Sajjad (2006). The Light: The History of the Movement for Progressive Literature in the Indo-Pakistan Subcontinent. Oxford University Press. ISBN 0-19-547155-5.
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: