ಧೊಂಡಿಯ ವಾಘ್

(ಧೊಂಡಿಯಾ ವಾಘ್ ಇಂದ ಪುನರ್ನಿರ್ದೇಶಿತ)

೧೮ನೆಯ ಶತಮಾನದ ಅಂತ್ಯದ ವೇಳೆ ಆಗಿನ ಮೈಸೂರು ಪ್ರಾಂತ್ಯ ಮತ್ತು ಸುತ್ತಮುತ್ತ ಒಬ್ಬ ಸೈನಿಕನಾಗಿ, ಅಶ್ವದಳದ ನಾಯಕನಾಗಿ, ಕೆಲವು ಪ್ರದೇಶಗಳ ಒಡೆಯನಾಗಿ, ಬ್ರಿಟೀಶರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ ಹೋರಾಟ ಮಾಡಿದ ಒಬ್ಬ ಸಾಹಸಿ ಧೊಂಡಿಯ ವಾಘ್. ಕೆಳದಿಯ ಸಂಸ್ಥಾನದಲ್ಲಿ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ[]. ನಂತರ ಮೈಸೂರಿನ ಹೈದರಾಲಿ ಸೈನ್ಯದಲ್ಲಿ ಸೈನಿಕನಾಗಿ ಸೇರಿದ. ಮೂರನೇ ಮೈಸೂರು ಯುದ್ಧದ ನಂತರ ಈ ಸೈನ್ಯವನ್ನು ತೊರೆದು ಸ‍್ವತಂತ್ರವಾಗಿ ಸೈನ‍್ಯ ಕಟ್ಟಿ ಹರಿಹರ (ಊರು), ಸವಣೂರು ಮುಂತಾದ ಊರುಗಳನ್ನು ಗೆದ್ದು ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸಿದ.ಎಲ್ಲಾ ಮರಾಠಾರೊಂದಿಗೆ ಸೋತ ಕಾರಣ ಮತ್ತೆ ಟಿಪ್ಪುವನ್ನು ಆಶ್ರಯಿಸಲು ನಿಶ್ಚಯಿಸಿದ. ಮತಾಂತರ ಹೊಂದಲು ಹೇಳಿ ಮಲಿಕ ಜಹಾನ್ ಖಾನ ಎಂದು ಹೆಸರಿಸಿದರು. ಆದರೆ ಮತಾಂತರ ಹೊಂದದ ಕಾರಣದಿಂದ ಟಿಪ್ಪು ಈತನನ್ನು ೫ ವರ್ಷಗಳ ಕಾಲ ಬಂಧನದಲ್ಲಿ ಇರಿಸಿದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ನಂತರ ಧೊಂಡಿಯ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಮತ್ತೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿ ಉಭಯಲೋಕಾಧೀಶ್ವರ ಎನ್ನಿಸಿಕೊಂಡ. ಕಡೆಯಲ್ಲಿ ಬ್ರಿಟೀಷರೊಡನೆ ಹೋರಾಡುತ್ತಾ ೧೮೦೦ರಲ್ಲಿ ಮರಣ ಹೊಂದಿದ[]..

ಧೊಂಡಿಯ ವಾಘ್
ಜನನ
ಧೊಂಡಿಯ

ಚನ್ನಗಿರಿ ಶಿವಮೊಗ್ಗ, (ಈಗ ದಾವಣಗೆರೆ ಜಿಲ್ಲೆ, ಕರ್ನಾಟಕ, ಭಾರತ)
ಮರಣ೧೦ನೇ ಸೆಪ್ಟಂಬರ್ ೧೮೦೦
ಕೊತ್ನೆಕಲ್ಲು/ಕೊತ್ತನಕಲ್ಲು/ಕೊನೆಗಲ್ಲು, ಮಾನ್ವಿ ತಾಲೂಕು, ಈಗ ರಾಯಚೂರು ಜಿಲ್ಲೆ, ಕರ್ನಾಟಕ, ಭಾರತ
ರಾಷ್ಟ್ರೀಯತೆಕೆಳದಿ, ಮೈಸೂರು ಸಂಸ್ಥಾನ
ಇತರೆ ಹೆಸರುಧೊಂಡಿಯ ವಾಘ್, ಧೊಂಡಿಯ, ಧೊಂಡಿಜಿ ವಾಘ್, ಧುಂಡಿಯಾ, ಧುಂಡಿಯಾ ವಾಘ್, ಧೊಂಡಿ, ಮಲಿಕ್ ಜಹಾನ್ ಖಾನ್
ವೃತ್ತಿ(ಗಳು)ಸೈನಿಕ, ಅಶ್ವದಳ ನಾಯಕ, ಕೆಲವು ಪ್ರದೇಶಗಳ ಒಡೆಯ
ಸಕ್ರಿಯ ವರ್ಷಗಳು೧೮ನೇ ಶತಮಾನ
ಗಮನಾರ್ಹ ಕೆಲಸಗಳುಮೈಸೂರು ಸಂಸ್ಥಾನದ ಉತ್ತರದ ಭಾಗದಲ್ಲಿ ಬ್ರಿಟೀಶರ ವಿರುದ್ಧ ಹೋರಾಟ

ಪ್ರಾರಂಭದ ದಿನಗಳು

ಬದಲಾಯಿಸಿ

ಧೊಂಡಿಯ ಚೆನ್ನಗಿರಿಯಲ್ಲಿ ೧೮ನೇ ಶತಮಾನದ ಉತ್ತರ ಭಾಗದಲ್ಲಿ ಹುಟ್ಟಿದ. ಮರಾಠಿ ಪವಾರ್ ಪಂಗಡದ ಒಂದು ಸಾಮಾನ್ಯ ಪರಿವಾರದಲ್ಲಿ ಇವರ ಜನನ []. ಆ ಕಾಲಖಂಡದಲ್ಲಿ ಚೆನ್ನಗಿರಿಯು ಕೆಳದಿಯ ಸಂಸ್ಥಾನದ ಅಡಿಗೊಳಪಟ್ಟಿತ್ತು. ಧೊಂಡಿಯ ಕೆಳದಿಯ ಚೆನ್ನಮ್ಮನ ಕಥೆಗಳನ್ನು ಕೇಳುತ್ತಾ ಬೆಳದನು. ಗುರು ಸಿದ್ದಪ್ಪ ಶೆಟ್ಟರ ಗರಡಿಯಲ್ಲಿ ಅಶ್ವಾರೋಹಣ, ಕತ್ತಿ ವರಸೆ, ಮಲ್ಲಯುದ್ಧಗಳ ಅಭ್ಯಾಸವನ್ನು ಮಾಡಿ ಇಡೀ ಚೆನ್ನಗಿರಿ ಸೀಮೆಗೆ ಉದಯೋನ್ಮುಖ ಯೋಧನೆನಿಸಿಕೊಂಡಿದ್ದ. ಆ ಸಮಯದಲ್ಲಿ ಕೆಳದಿಯ ರಾಜಮನೆತನದಲ್ಲಿ ಅಂತಃಕಲಹಗಳು ಏರ್ಪಟ್ಟಿತ್ತು. ಇವೆಲ್ಲದರ ನಡುವೆ ಎತ್ತರದ ನಿಲುವಿನ, ಶಕ್ತಿಶಾಲಿ, ಯುವ ಪ್ರಭಾವಿ ವ್ಯಕ್ತಿತ್ವದ ಧೊಂಡಿಯನಿಗೆ ಕೆಳದಿಯ ಸಂಸ್ಥಾನದ ಸೈನ್ಯ ಸೇರಲು ಊರಿನ ಜನ ಹುರಿದುಂಬಿಸಿದರು[].

ಧೊಂಡಿಯ ಕೆಳದಿಯ ಸಂಸ್ಥಾನದ ಭಾಗವಾಗಿದ್ದ ಶಿಕಾರಿಪುರದಲ್ಲಿ ಒಬ್ಬ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ. ಈ ನಡುವೆ ಹೈದರಾಲಿ ಚಿತ್ರದುರ್ಗದ ರಾಜನಾದ ವೀರ ಮದಕರಿ ನಾಯಕರನ್ನು ಸೋಲಿಸಿದನು. ನಂತರ ಅವನ ದೃಷ್ಟಿ ಕೆಳದಿಯ ಮೇಲೆ ಬಿತ್ತು. ಆ ಸಂಸ್ಥಾನದಲ್ಲಿ ನಡೆಯುತ್ತಿದ್ದ ಒಳ ರಾಜಕೀಯ ಮೇಲಾಟಗಳ ಪ್ರಯೋಜನ ಪಡೆಯಲು ಹವಣಿಸುತ್ತಿದ್ದ. ಈ ವಿಚಾರವು ಸಂಸ್ಥಾನದಲ್ಲೆಲ್ಲಾ ತಿಳಿದು ಜನ ಮುಂದಿನ ಪರಿಸ್ಥಿತಿಯ ಬಗ್ಗೆ ಚಂತಿತರಾಗಿದ್ದರು. ಕೆಲ ಸಮಯದ ನಂತರ ಹೈದರಾಲಿ ಕೆಳದಿ ಸಂಸ್ಥಾನದ ರಾಜಧಾನಿಯಾದ ಬಿದನೂರಿನ ಮೇಲೆ ದಾಳಿ ಮಾಡಿದ. ರಾಣಿ ವೀರಮ್ಮಾಜಿ ವೀರಾವೇಶದಿಂದ ಹೋರಾಡಿದರು. ಆದರೆ ಅಲ್ಲಿ ನಡೆದ ಒಳಸಂಚಿನ ಕಾರಣ ಸೋತರು[].

ಧೊಂಡಿಯ ಹೈದರಾಲಿಯ ಸೈನ್ಯವನ್ನು ಸೇರಿದ. ಅಲ್ಲಿ ವಿಷ್ಣುಪಂಡಿತ ಎಂಬ ಅಶ್ವದಳಪತಿ ಕೆಳಗೆ ಕೆಲಸ ಪ್ರಾರಂಭಿಸಿದ. ತನ್ನ ಒಡನಾಡಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿಕೊಂಡ. ತನ್ನ ಸತತ ಪರಿಶ್ರಮದ ಕಾರಣದಿಂದ ಕೆಲವೇ ಸಮಯದಲ್ಲಿ ಅವನು ಅಶ್ವದಳದ ನಾಯಕ ಶಿಲ್ಲೆದಾರ್ ಪದವಿಗೆ ಏರಿದ. [].

ಮೂರನೆಯ ಮೈಸೂರು ಯುದ್ಧ ಮತ್ತು ತದನಂತರ

ಬದಲಾಯಿಸಿ
 
ಟಿಪ್ಪು ತನ್ನ ಇಬ್ಬರು ಪುತ್ರರನ್ನು ಒತ್ತೆಯಾಗಿ ನೀಡಿದ ನಿರೂಪಣೆ
 
ಧೊಂಡಿಯ ೫ ವರ್ಷ ಇದ್ದಂತಹ ಕಾರಾಗೃಹ

ಮೂರನೇ ಮೈಸೂರು ಯುದ್ಧದಲ್ಲಿ (೧೭೯೨) ಟಿಪ್ಪು ತಲ್ಲೀನನಾಗಿದ್ಡ. ಈ ಸಮಯವನ್ನು ಉಪಯೋಗಿಸಿ ಧೊಂಡಿಯ ಟಿಪ್ಪುವಿನ ಸೈನ್ಯ ತೊರೆದು ಹೋಗಲು ನಿಶ್ಚಯಿಸಿ, ಯೋಜನೆ ಮಾಡಿ ಸಫಲನಾದ. ತನ್ನೊಂದಿಗೆ ಇನ್ನು ಕೆಲವು ಸಹಚರರನ್ನು ಸೇರಿಸಿಕೊಂಡು ಈಗಿನ ಗದಗದಲ್ಲಿರುವ ಲಕ್ಷ್ಮೇಶ್ವರದೇಸಾಯಿಯನ್ನು (ಕಂದಾಯ ವಸೂಲಿ ಮಾಡುವ ಹಕ್ಕಿರುವ ಸ್ಥಾನ) ಸೇರಿದ. ದೇಸಾಯಿಯು ಟಿಪ್ಪುವಿಗೆ ಕಪ್ಪ ಕಾಣಿಕೆ ಕೊಡುವ ಬದಲು ತನಗೆ ಕೊಡಬೇಕು. ತಾನು ಅವನ ಸಹಾಯಕ್ಕೆ ಇರುವುದಾಗಿ ಒಪ್ಪಿಸಿದ. ಬ್ರಿಟೀಶರೊಂದಿಗೆ ಯುದ್ಧದಲ್ಲಿ (೧೭೯೨) ಟಿಪ್ಪುವಿನ ಸೋಲಾಯಿತು. ಆಂಗ‍್ಲರ ಬಳಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡುವ ಪರಿಸ್ಥಿತಿ ಬಂದಿತು. ಧೊಂಡಿಯ ಟಿಪ್ಪುವಿನ ಸಧ್ಯದ ದೌರ್ಬಲ್ಯದ ಲಾಭ ಪಡೆದು ಮೈಸೂರು ಮತ್ತು ಮರಾಠರ ಗಡಿ ಭಾಗದಲ್ಲಿ ಒಂದೊಂದಾಗಿ ಪ್ರದೇಶಗಳನ್ನು ಗೆಲ್ಲುತ್ತಾ ಹೋದ. ಧಾರವಾಡ ಸೀಮೆಯ ಪ್ರದೇಶದಲ್ಲಿ ಕಪ್ಪ ಕಾಣಿಕೆ ಪಡೆಯುತ್ತಾ ಹೋದ. ೧೭೯೩ ಜನವರಿಯಲ್ಲಿ ಹಾವೇರಿ ಮತ್ತು ಸವಣೂರನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಿದ. ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಟಿಪ್ಪು ಮರಾಠರಿಗೆ ಬಿಟ್ಟುಕೊಟ್ಟ ಊರುಗಳನ್ನು ಗೆಲ್ಲುತ್ತಾ ಹೋದ. ಇದರ ಪ್ರಭಾವ ಶಿವಮೊಗ್ಗ, ಬಿದನೂರು, ಶಿಕಾರಿಪುರ ಮುಂತಾದ ಪ್ರದೇಶಗಳ ಮೇಲೂ ಆಯಿತು.[][].

ಧೊಂಡಿಯನ ಬೆಳೆಯುತ್ತಿರುವ ಪ್ರಭಾವದಿಂದ ಮರಾಠರು ಚಿಂತಾಕ್ರಾಂತರಾದರು. ಅವನ ಪ್ರಭಾವವನ್ನು ಮೊಳಕೆಯಲ್ಲಿ ಚಿವುಟಿ ಮತ್ತು ಅವನನ್ನು ಮರಾಠರ ಸೀಮೆಯಿಂದ ಹೊರದೂಡಲು, ಮರಾಠರ ದಂಡನಾಯಕ ಪರಶುರಾಮ ಭಾವು ೧೭೯೪ರಲ್ಲಿ, ಮರಾಠಾ ಸೈನ್ಯವನ್ನು ದೊಂಡೋಪಂತ್ ಗೋಖಲೆ ನೇತೃತ್ವದಲ್ಲಿ ಕಳಿಸಿದ. ದೊಂಡೋಪಂತ್ ಗೋಖಲೆ ತನ್ನ ಸೈನ್ಯದೊಂದಿಗೆ ಸವಣೂರಿನ ಕೋಟೆಗೆ ಮುತ್ತಿಗೆ ಹಾಕಿದ. ಧೊಂಡಿಯ ಅವನೊಡನೆ ಸ್ನೇಹ ಬಯಸಿದ. ಆದರೆ ದೊಂಡೋಪಂತ್ ಒಪ್ಪಲಿಲ್ಲ. ಹಲವು ದಿನಗಳ ಕದನದ ನಂತರ ಧೊಂಡಿಯ ಅಲ್ಲಿಂದ ಕದಲಬೇಕಾಯಿತು. ಧೊಂಡಿಯ ಆಗ ಎಂದಾದರೊಂದು ದಿನ ದೊಂಡೋಪಂತ್ ಗೋಖಲೆಯನ್ನು ಕೊಂದು ಅವನ ರಕ್ತದಲ್ಲಿ ತನ್ನಿ ಮೀಸೆಯನ್ನು ತೋಯ್ದುಕೊಳ್ಳುವೆನೆಂದು ಶಪಥ ಮಾಡಿದ[][].

ಧೊಂಡಿಯ ಅಲ್ಲಿಂದ ಸೀದಾ ಟಿಪ್ಪುವಿನ ಸಹಾಯ ಕೇಳಲು ಶ್ರೀರಂಗಪಟ್ಟಣಕ್ಕೆ ತೆರಳಿದ. ಟಿಪ್ಪುವಿನ ಸಹಾಯ ಪಡೆಯಲು ಪ್ರಯತ್ನಿಸಿದ. ಆದರೆ ಇದು ಕೈಗೂಡದೆ ಟಿಪ್ಪುವಿನ ಸೈನ್ಯವನ್ನು ಮತ್ತೆ ಸೇರುವ ಪ್ರಸ್ತಾಪ ಬಂದಿತು. ಟಿಪ್ಪು ಅವನಿಗೆ ಇಸ್ಲಾಮಿಗೆ ಮತಾಂತರ ಹೊಂದಲು ಆಮಿಷ ಒಡ್ಡಿದ. ಆದರೆ ಸ್ವಲ್ಪ ಸಮಯದಲ್ಲಿ ಟಿಪ್ಪುವಿನೊಡನೆ ವೈಮನಸ್ಯದ ಕಾರಣ ಅವನನ್ನು ಬಂದೀಖಾನೆಗೆ ಹಾಕಲಾಯಿತು (ಇದಕ್ಕೆ ಮೀರ್ ಸಾದಿಕನೇ ಕಾರಣ ಎಂದು ನಂಬಲಾಗಿದೆ []). ಅವನು ಸೆರೆಮನೆಯಲ್ಲಿಯೇ ಸುಮಾರು ೫ ವರ್ಷಗಳ ಕಾಲ, ಬ್ರಿಟೀಶರ ವಿರುದ್ಧ ೧೭೯೯ರಲ್ಲಿ ನಾಲ್ಕನೆಯ ಮೈಸೂರು ಯುದ್ಧ ಟಿಪ್ಪು ಸೋಲುವವರೆಗೂ ಶಿಕ್ಷೆ ಅನುಭವಿಸುತ್ತಿದ್ದ.[೧೦].

ನಾಲ್ಕನೆಯ ಮೈಸೂರು ಯುದ್ಧದ ನಂತರ

ಬದಲಾಯಿಸಿ
 
ನಾಲ್ಕನೆಯ ಮೈಸೂರು ಯುದ್ಧದ ಕಡೆಯ ದಿನ

ನಾಲ್ಕನೆಯ ಮೈಸೂರು ಯುದ್ಧದಲ್ಲಿ (೧೭೯೯) ಟಿಪ್ಪು ಬ್ರಿಟೀಶರ ವಿರುದ್ಧ ಸೋಲುವುದರ ಜೊತೆಗೆ ಟಿಪ್ಪುವಿನ ಸಾವಾಯಿತು ಜೊತೆಗೆ ಅವನ ಸೈನ್ಯ ಛಿದ್ರಛಿದ್ರವಾಯಿತು. ಧೊಂಡಿಯ ಅಲ್ಲಿಯವರೆಗೂ ಶ್ರೀರಂಗಪಠ್ಠಣದಲ್ಲಿ ಐದು ವರ್ಷಗಳಿಂದ ಬಂಧನದಲ್ಲಿದ್ದರೂ ತಪ್ಪಿಸಿಕೊಳ್ಳಲು ಸಮಯ ಕಾಯುತ್ತಿದ್ದ. ತನ್ನ ಮತ್ತು ತನ್ನ ಸಹಚರರ ಮನ:ಶಕ್ತಿಯನ್ನು ಯಾವಾಗಲೂ ಮೇಲ್ಮಟ್ಟದಲ್ಲಿರುವ ಹಾಗೆ ನೋಡಿಕೊಳ್ಳುತ್ತಿದ್ದ. ಟಿಪ್ಪುವಿನ ಸಾವಿನಿಂದ ಸಿಕ್ಕ ಅವಕಾಶ ಉಪಯೋಗಿಸಿ ಹಲವು ಸಹಚರರೊಡನೆ ತಪ್ಪಿಸಿಕೊಂಡು ಹೋದನು. ಆ ಸಮಯದಲ್ಲಿ ಟಿಪ್ಪುವಿನ ಹಲವು ಸೈನಿಕರು ತಪ್ಪಿಸಿಕೊಳ್ಳುತ್ತಿದ್ದದ್ದು ಇವರಿಗೆಲ್ಲಾ ಒಳ್ಳೆಯದಾಯಿತು. [೧೧].

ಉಭಯಲೋಕಾಧೀಶ್ವರ

ಬದಲಾಯಿಸಿ

ಚೆನ್ನಗಿರಿಗೆ ಹಿಂದಿರುಗಿ ಸೈನಿಕರನ್ನು ಒಟ್ಟುಗೂಡಿಸಿ ಹುರಿದುಂಬಿಸಿ ಒಂದೊಂದಾಗಿ ಕೋಟೆಗಳನ್ನು ಗೆಲ್ಲಲು ಪ್ರಾರಂಭಿಸಿದ. ಶಿವಮೊಗ್ಗ, ಬಿದನೂರು, ಶಿಕಾರಿಪುರ, ತರೀಕೆರೆ, ಚಿತ್ರದುರ್ಗ, ಹರಪನಹಳ್ಳಿ, ರಾಣೇಬೆನ್ನೂರು, ಸವಣೂರು ಮುಂತಾದ ಕೋಟೆಗಳೆಲ್ಲಾ ಅವನ ವಶವಾಯಿತು. ಬ್ರಿಟೀಶರು ಇವನನ್ನು ಮಟ್ಟ ಹಾಕಲು ಶಿಕಾರಿಪುರದ ಕೋಟೆಗೆ ಮುತ್ತಿಗೆ ಹಾಕಿದರು. ಅಲ್ಲಿಂದ ತಪ್ಪಿಸಿಕೊಂಡ ಧೊಂಡಿಯನನ್ನು ಸ್ಟೀವನ್ಸಂನ್ ಮತ್ತು ಡಾಲ್ರಿಂಪಲ್ ಹಿಂಬಾಲಿಸಿ ಹಿಡಿಯಲು ಹೋದಾಗ ಅವನು ನದಿಗೆ ಹಾರಿ ತಪ್ಪಿಸಿಕೊಂಡ. ನಂತರ ಶಿಕಾರಿಪುರದ ಕಾಡಿನಲ್ಲಿ ತಪ್ಪಿಸಿಕೊಂಡ. ಅಲ್ಲಿಯ ಬಂಜಾರರು ಅವನ ಶೂಶ್ರೂಷೆ ಮಾಡಿದರು. ತನ್ನನ್ನು ಉಳಿಸಿದ್ದು ಶಿಕಾರಿಪುರದ ಆರಾಧ್ಯದೈವವಾದ ಹುಚ್ಚುರಾಯ ಸ್ವಾಮಿ ಎಂದು ಅಲ್ಲಿಗೆ ಹೋಗಿ ದರ್ಶನ ಪಡೆದು ತನ್ನ ಕತ್ತಿಯನ್ನು ಸ್ವಾಮಿಗೆ ಅರ್ಪಿಸಿದ. ಇಂದಿಗೂ ಕೂಡ ಶಿಕಾರಿಪುರವಿಜಯದಶಮಿಯ ದಿನ ಊರಿನ ಆರಾಧ್ಯ ದೈವ ಹುಚ್ಚುರಾಯ ಸ್ವಾಮಿಯನ್ನು ಒಳಗೊಂಡು ಹಲವು ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯುತ್ತದೆ. ಆ ದಿನ ತಾಲೂಕಿನ ತೆಹಸೀಲ್ದಾರರು ಹುಚ್ಚುರಾಯ ಸ್ವಾಮಿಗೆ ಧೊಂಡಿಯ ಅರ್ಪಿಸಿದ್ದ ಕತ್ತಿಯಲ್ಲಿ ದುಷ್ಟ ಸಂಹಾರದ ಸಂಕೇತವಾಗಿ ಬಾಳೆಯ ಕಂದನ್ನು ಕಡಿಯುತ್ತಾರೆ[೧೨].

ಈ ಮಧ್ಯೆ ಅವನು ತನ್ನನ್ನು ಉಭಯಲೋಕಾಧೀಶ್ವರನೆಂದು ಘೋಷಿಸಿಕೊಂಡ. ಒಂದು ಸಮಯದಲ್ಲಿ ಅವನ ಸೈನ್ಯದಲ್ಲಿ ೮೦,೦೦೦ ಕಾಲಾಳುಗಳು ಮತ್ತು ೯೦,೦೦೦ ಅಶ್ವಾರೋಹಿಗಳಿದ್ದರು. ಕೆಲವೇ ಸಮಯದಲ್ಲಿ ಅವನು ಬೇರೆ ಬೇರೆ ಪಾಳೆಯಗಾರರನ್ನು ತನ್ನೊಂದಿಗೆ ಸೇರಿಸಿಕೊಂಡಿದ್ದ. ಅವನಿಂದ ಸ್ಪೂರ್ತಿ ಪಡೆದ ದಕ್ಷಿಣ ಭಾರತದ ಹಲವು ಸಣ್ಣ ಪಾಳೆಯಗಾರರು ಅವನ ರೀತಿಯಲ್ಲೆ ಬ್ರಿಟೀಶರ ವಿರುದ್ಧ ಹೋರಾಡಲು ಶುರು ಮಾಡಿದರು[][೧೩].

ವೆಲ್ಲೆಸ್ಲಿಯ ದಂಡಯಾತ್ರೆ

ಬದಲಾಯಿಸಿ
 
ಅರ್ಥರ್ ವೆಲ್ಲೆಸ್ಲಿ

ಧೊಂಡಿಯನ ಶಕ್ತಿಯಿಂದ ಬ್ರಿಟೀಶ ಪ್ರಭುತ್ವ ಚಿಂತಿತವಾಯಿತು. ಹೀಗೇ ಬಿಟ್ಟರೆ ಮುಂದೆ ಅವನ ಪ್ರಭಾವದಿಂದ ಇತರ ಪಾಳೆಯಗಾರರು, ಸಣ್ಣ ತುಂಡರಸರು ಅವನನ್ನು ಅನುಕರಿಸಬಹುದು ಮತ್ತು ಇದರಿಂದ ಮೈಸೂರು ಸಂಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಶಾಂತಿ ಕದಡಬಹುದು ಎಂಬ ಅಂಜಿಕೆ. ಈ ವಿಚಾರವನ್ನು ವಿಷದವಾಗಿ ಆಗ ತಾನೆ ಮೈಸೂರಿನ ಬ್ರಿಟಿಷ್ ಗವರ್ನರ್ ಆಗಿ ಅಧಿಕಾರ ಸ್ವೇಕರಿಸಿದ್ದ ಅರ್ಥರ್ ವೆಲ್ಲೆಸ್ಲಿ ತನ್ನ ಗವರ್ನರ್ ಜೆನರಲ್ಮಾರ್ಕಸ್ ವೆಲ್ಲೆಸ್ಲಿಗೆ ಮೇ ೨೬, ೧೮೦೦ ರಂದು ತಿಳಿಸಿದ [೧೪].

ದೊಂಡೋಪಂತ್‍ ಗೋಖಲೆಯ ಅಂತ್ಯ

ಬದಲಾಯಿಸಿ

ಜೂನ್ ೧೮೦೦ರಲ್ಲಿ ಅರ್ಥರ್ ವೆಲ್ಲೆಸ್ಲಿ ತನ್ನ ೩ ಅಶ್ವಾರೋಹಿ ದಳ ಮತ್ತು ೨ ಕಾಲ್ದಳ ಜೊತೆಗೆ ಚಿತ್ರದುರ್ಗದ ಸೈನಿಕರನ್ನು ಒಟ್ಟುಗೂಡಿಸಿ ಧೊಂಡಿಯನನ್ನು ಹಿಡಿಯಲು ಹೋದ. ಇದನ್ನು ಅರಿತ ಧೊಂಡಿಯ ತನ್ನ ಸೈನ್ಯದ ಜೊತೆಗೆ ಮರಾಠಾ ಪ್ರದೇಶದಲ್ಲಿ ಹೋಗಿ ರಕ್ಷಣೆ ಪಡೆದ. ವೆಲ್ಲೆಸ್ಲಿ ಪೇಶ್ವಾ ಬಾಜಿ ರಾವ್ ೨ರ ಅನುಮತಿ ಪಡೆದು ಧೊಂಡಿಯನನ್ನು ಹಿಡಿಯಲು ಹೊರಟ. ಜೂನ್ ೧೬ ಅವನು ಹರಿಹರ ತಲುಪಿದ. ಧೊಂಡಿಯ ಹುಬ್ಬಳ್ಳಿ ಸೀಮೆಯನ್ನು ಜೂನ್ ೧೯ಕ್ಕೆ ತಲುಪಿದ. ವೆಲ್ಲೆಸ್ಲಿ ಈ ಅವಕಾಶವನ್ನು ಉಪಯೋಗಿಸಿ ಅವನು ಗೆದಿದ್ದ ಕೋಟೆಗಳನ್ನು ಒಂದೊಂದಾಗಿ ಗೆಲ್ಲಲು ಪ್ರಾರಂಭಿಸಿದ. ಐರಣಿ, ರಾಣಿಬೆನ್ನೂರು ಮತ್ತು ಬಿದನೂರು ಕೋಟೆಗಳನ್ನು ಗೆದ್ದರೂ ಧೊಂಡಿಯ ತಪ್ಪಿಸಿಕೊಂಡಿದ್ದ.
ಪೇಶ್ವೆಗೂ ಈಗ ಧೊಂಡಿಯನನ್ನು ಸೋಲಿಸುವ ಅವಶ್ಯಕತೆಯಿತ್ತು. ಆ ಕಾರಣಕ್ಕೆ ಚಿಂತಾಮಣಿರಾವ್ ಪಟ್ವರ್ಧನ್‍ನ ನೇತೃತ್ವದಲ್ಲಿ ಒಂದು ದೊಡ್ಡ ಸೈನ್ಯವನ್ನು ಕಳಿಸಿದ. ಅದರಲ್ಲಿ ಹಿಂದೆ ಧೊಂಡಿಯನನ್ನು ಸೋಲಿಸಿದ್ದ ದೊಂಡೋಪಂತ್ ಗೋಖಲೆ ಮತ್ತು ದೊಂಡೋಪಂತ್‍ನ ಸಹೋದರನ ಮಕ್ಕಳು ಅಪ್ಪಾಜಿ ಗಣೇಶ ಮತ್ತು ಬಾಪುಜಿ ಗಣೇಶ ಎಂಬಿಬ್ಬರು ಇದ್ದರು. ಕಿತ್ತೂರಿನ ಬಳಿ ಭೀಕರ ಕದನವೇರ್ಪಟ್ಟಿತು. ಧೊಂಡಿಯ, ದೊಂಡೋಪಂತ್‍ನ ಕೈಯಲ್ಲಿ ಆದಂತಹ ತನ್ನ ಹಿಂದಿನ ಸೋಲು ಮತ್ತು ಅಪಮಾನಗಳನ್ನು ಮರೆತಿರಲಿಲ್ಲ. ತದನಂತರ ಅವನು ಕೊಟ್ಟ ಸ್ನೇಹಹಸ್ತವನ್ನು ದೊಂಡೋಪಂತ್‍ ಒಪ್ಪಿರಲಿಲ್ಲ. ಧೊಂಡಿಯ ತನ್ನ ಸಹಚರರೊಡನೆ ಯೋಜಿಸಿ, ಹೊಂಚುಹಾಕಿ ದೊಂಡೋಪಂತ್‍ ಗೋಖಲೆಯನ್ನು ಯುದ್ಧದಲ್ಲಿ ಕೊಂದು ಅವನ ರಕ್ತದಲ್ಲಿ ತನ್ನ ಮೀಸೆಯನ್ನು ತೋಯ್ದು ತಾನು ವರ್ಷಗಳ ಹಿಂದೆ ಮಾಡಿದ್ದ ಶಪಥವನ್ನು ಪೂರ್ಣಗೊಳಿಸಿದ. ಈ ಯುದ್ಧದಲ್ಲಿ ಅಪ್ಪಾಜಿ ಗಣೇಶನ ಅಂತ್ಯವೂ ಆಯಿತು. ಚಿಂತಾಮಣಿರಾವ್ ಪಟ್ವರ್ಧನ್‍, ಧೊಂಡಿಯನ ವಿರುದ್ಧ ವೇರಾವೇಶದಿಂದ ಹೋರಾಡಿ ಬಾಪುಜಿ ಗಣೇಶನೊಂದಿಗೆ ತಪ್ಪಿಸಿಕೊಂಡು ಹಳಿಯಾಳ ಕೋಟೆ ತಲುಪಿದ. ಅಲ್ಲಿ ಅವನಿಗೆ ಬ್ರಿಟೀಶರಿಂದ ವೀರೋಚಿತ ಸ್ವಾಗತ ದೊರೆಯಿತು. ವೆಲ್ಲೆಸ್ಲಿ ಜುಲೈ ೦೪ನೇ ತಾರೀಖು ಮತ್ತು ಸ್ವತಃ ಪೇಶ್ವೆಯೂ ಕೂಡ ಅವನ ಸಾಹಸವನ್ನು ಕೊಂಡಾಡಿದರು. ಜೊತೆಗೆ ಗೆದ್ದ ಕೋಟೆಗಳನ್ನು ವೆಲ್ಲೆಸ್ಲಿ ಅವನಿಗೆ ಪುರಸ್ಕಾರವಾಗಿ ಕೊಟ್ಟರು[೧೫].

ಧೊಂಡಿಯನ ಅವಸಾನ

ಬದಲಾಯಿಸಿ

ಬ್ರಿಟೀಶರು ಧೊಂಡಿಯನನ್ನು ಹಿಡಿಯುವ ಪ್ರಯತ್ನವನ್ನು ಮುಂದುವರೆಸಿದರು. ಈ ಮಧ್ಯೆ ಧೊಂಡಿಯನ ಹೆಸರು ಇನ್ನೂ ಬೆಳೆಯುತ್ತಲಿತ್ತು. ಹಲವು ಕಡೆಗಳಲ್ಲಿ ಧೊಂಡಿಯನ ಸೈನ್ಯಕ್ಕೆ ಯುವಕರನ್ನು ಸೇರಿಸಲು ಕೆಲ ಯುವಕರು ಸ್ವಯಂಪ್ರೇರಿತರಾಗಿ ಕಾರ್ಯಮಾಡುತ್ತಿದ್ದರು. ಹೀಗೆ ಪ್ರೇರೇಪಿಸುವಾಗ ಸಿಕ್ಕಿ ಹಾಕಿಕೊಂಡ ಯುವಕನೊಬ್ಬನ್ನನ್ನು ಬ್ರಿಟೀಶರು ಗಲ್ಲಿಗೆ ಹಾಕಿದರು.[೧೬]. ೧೨ನೇ ಜುಲೈ ಸವಣೂರು ಗೆದ್ದರು. ಧೊಂಡಿಯ ಇವರಿಂದ ತಪ್ಪಿಸಿಕೊಂಡು ಕಿತ್ತೂರು, ಕುಂದಗೋಳ, ಅಣ್ಣಿಗೇರಿ, ಕಣವಿ, ಖಾನಾಪುರ, ಬಾದಾಮಿಗಳೆಲ್ಲಾ ಸುತ್ತಾಡಿದ. ಅವನ ತಲೆಯ ಮೇಲೆ ೩೦,೦೦೦ ರೂ ಬಹುಮಾನ ಘೋಷಿಸಲಾಯಿತು[೧೭]. ಬ್ರಿಟೀಶರು ಪಟ್ವರ್ಧನ್‍ನ ಜೊತೆಗೂಡಿ ದಂಬಳ ಕೋಟೆಯನ್ನು ಗೆದ್ದರು. ಈ ಸಮಯದಲ್ಲಿ ಧೊಂಡಿಯನನ್ನು ಅವನ ಹಲವಾರು ಸಿಪಾಯಿಗಳು ತ್ಯಜಿಸಿದರು. ಧೊಂಡಿಯ ಕೋಲ್ಹಾಪುರ ರಾಜನಾದ ಮೂರನೆಯ ಶಿವಾಜಿ ಸಹಾಯ ಪಡೆಯಬಹುದು ಎಂದು ವೆಲ್ಲೆಸ್ಲಿಗೆ ತಿಳಿಯಿತು. ಅವನು ಕೋಲ್ಹಾಪುರದ ರಾಜನ ಬಳಿ ಧೊಂಡಿಯನಿಗೆ ಯಾವ ಸಹಾಯ ಮಾಡಬಾರದೆಂದು ಮತ್ತು ಮಾಡಿದರೆ ಬ್ರಿಟೀಶ, ಮರಾಠ ಮತ್ತು ನಿಜಾಮನ ಸೈನ್ಯ ಅವನ ಮೇಲೆ ತಿರುಗುವುದೆಂದು ವಕೀಲರ ಮೂಲಕ ಹೇಳಿಕಳಿಸಿದನು [೧೮].

ಆಗ ಧೊಂಡಿಯ ಮಲಪ್ರಭಾ ನದಿ ದಾಟಿ, ನಿಜಾಮನ ರಾಜ್ಯಕ್ಕೆ ಹೋಗಲು ಯತ್ನಿಸಿದ. ಆದರೆ ವೆಲ್ಲೆಸ್ಲಿ, ಸ್ಟೀವೆನ್ಸಂನ್, ಪಟ್ವರ್ಧನ್‍ ಮತ್ತು ನಿಜಾಮನ ಸೈನ್ಯಗಳು ಎಲ್ಲಾ ಕಡೆಗಳಿಂದ ಸುತ್ತುವರೆದಿದ್ದವು. ಭೀಕರ ಕದನದಲ್ಲಿ ಧೊಂಡಿಯನ ೫,೦೦೦ದಷ್ಡು ಸಂಖ್ಯೆಯ ಅಶ್ವದಳ ನಾಶವಾಯಿತು. ೧೦ನೇ ಸೆಪ್ಟೆಂಬರ್ ಕೊಣಗಲ್‍ನಲ್ಲಿ (ಈಗಿನ ರಾಯಚೂರು ಜಿಲ್ಲೆಯಲ್ಲಿದೆ) ನಡೆದ ಈ ಕದನದಲ್ಲಿ ವೀರೋಚಿತ ಹೋರಾಟ ನೀಡಿದ ಧೊಂಡಿಯ, ಬ್ರಿಟೀಶರ ವಿರುದ್ಧ ಕಡೆಯವರೆಗೂ ಹೋರಾಡುತ್ತಲೆ ಮಡಿದ.

ವೆಲ್ಲೆಸ್ಲಿ ತನ್ನ ಕಂಪನಿಯ ಹಲವರಿಗೆ ಕಳಿಸಿದ ಪತ್ರಗಳಲ್ಲಿ ಹಲವು ಬಾರಿ ಧೊಂಡಿಯನ ಬಗ್ಗೆ ಪ್ರಸ್ತಾಪಿಸಿದ್ದಾನೆ. ಧೊಂಡಿಯನಿಗೆ ಕಡೆಯಲ್ಲಿ ಕೂಡ ಕೆಲವರಿಂದ ಸಹಾಯ ದೊರೆತ ಬಗ್ಗೆ ಯೋಗ್ಯವಾಗಿ ಪ್ರಸ್ತಾಪಿಸುತ್ತಾನೆ[೧೯]. ಸರ್ ಥೋಮಸ್ ಮುನ್ರೋರ ಪ್ರಕಾರ ವೆಲ್ಲೆಸ್ಲೆ ಧೊಂಡಿಯನನ್ನು ಮಣಿಸದೇ ಇದ್ದಿದ್ದರೆ, ಅವನು ಒಬ್ಬ ಸ್ವತಂತ್ರ ರಾಜನಾಗಿ, ಒಂದು ಹೊಸ ನಿರಂಕುಶ ರಾಜವಂಶಕ್ಕೆ ನಾಂದಿ ಹಾಡುತ್ತಿದ್ದ. ಪಟ್ವರ್ಧನ್‍ನ ಸಹಾಯ ದೊರಯದೇ ಇದ್ದಿದ್ದರೆ ಇಷ್ಟು ಬೇಗ ಗೆಲ್ಲಲೂ ಆಗುತ್ತಿರಲಿಲ್ಲ ಎಂದು ವೆಲ್ಲೆಸ್ಲಿ ಕೂಡ ಒಪ್ಪಿದ್ದಾನೆ [೨೦][೨೧].

ಯಾಪಲಪರ್ವಿ ಗ್ರಾಮದಲ್ಲಿ ಧೊಂಡಿಯನ ಸಮಾಧಿಯಿದೆ[೨೨].

ಉಲ್ಲೇಖಗಳು

ಬದಲಾಯಿಸಿ
  1. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಕೆಳದಿಯ ಬಂಟ: ರಾಷ್ಟ್ರೋತ್ಥಾನ ಸಾಹಿತ್ಯ. p. ೯. ISBN 81-7531-087-1.
  2. ೨.೦ ೨.೧ "ಧಾರವಾಡ ಗೆಜೆಟಿಯರ್" (PDF). karnataka.gov.in (in English). ಕರ್ನಾಟಕ ಸರ್ಕಾರ. pp. ೮೭-೮೮. Archived from the original (PDF) on 9 ಆಗಸ್ಟ್ 2017. Retrieved 5 May 2020.{{cite web}}: CS1 maint: unrecognized language (link)
  3. ೩.೦ ೩.೧ ೩.೨ ಹಸನ್, ಮೊಹಿಬ್ಬುಲ್. "ಧೊಂಡಿಯ ವಾಘ್". books.google.co.in (in English). google. pp. ೨೭೧. Retrieved 3 May 2020.{{cite web}}: CS1 maint: unrecognized language (link)
  4. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಚತುರ ವೀರ: ರಾಷ್ಟ್ರೋತ್ಥಾನ ಸಾಹಿತ್ಯ. pp. ೧-೭. ISBN 81-7531-087-1.
  5. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಕೆಳದಿಯ ಬಂಟ: ರಾಷ್ಟ್ರೋತ್ಥಾನ ಸಾಹಿತ್ಯ. pp. ೧೩-೧೫. ISBN 81-7531-087-1.
  6. ಪಾರಸ್ನಿಸ್, ದತ್ತಾತ್ರೇಯ ಬಲವಂತ. "ಸಾಂಗ್ಲಿ ರಾಜ್ಯ". archive.org (in English). Lakshmi Art. pp. ೩೬. Retrieved 3 May 2020.{{cite web}}: CS1 maint: unrecognized language (link)
  7. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಕನಸನ್ನು ನನಸಾಗಿಸುವತ್ತ: ರಾಷ್ಟ್ರೋತ್ಥಾನ ಸಾಹಿತ್ಯ. pp. ೩೪-೩೫. ISBN 81-7531-087-1.
  8. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಮರಾಠರ ಪ್ರಹಾರ: ರಾಷ್ಟ್ರೋತ್ಥಾನ ಸಾಹಿತ್ಯ. pp. ೩೭-೩೯. ISBN 81-7531-087-1.
  9. ಹಸನ್, ಮೊಹಿಬ್ಬುಲ್. "ಧೊಂಡಿಯ ವಾಘನ ಶಿಕ್ಷೆಯಲ್ಲಿ ಮೀರ್ ಸಾದಿಕನ ಪಾತ್ರ". books.google.co.in (in English). google. pp. ೨೭೨. Retrieved 3 May 2020.{{cite web}}: CS1 maint: unrecognized language (link)
  10. ವೆಲ್ಲೆಸ್ಲೆ, ಅರ್ಥರ್. "ಸಾಂಗ್ಲಿ ರಾಜ್ಯ". archive.org (in English). Lakshmi Art. pp. ೨೫. Retrieved 3 May 2020.{{cite web}}: CS1 maint: unrecognized language (link)
  11. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಟಿಪ್ಪುವಿನ ಪತನ - ಬಂಧಮುಕ್ತ ಧೊಂಡಿಯ: ರಾಷ್ಟ್ರೋತ್ಥಾನ ಸಾಹಿತ್ಯ. pp. ೬೩-೬೪. ISBN 81-7531-087-1.
  12. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಮನದಾಳದ ಮಾತು: ರಾಷ್ಟ್ರೋತ್ಥಾನ ಸಾಹಿತ್ಯ. p. X. ISBN 81-7531-087-1.
  13. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). 'ಉಭಯಲೋಕಾಧೀಶ್ವರ' ಸಂಘರ್ಷ ಯಾತ್ರೆ: ರಾಷ್ಟ್ರೋತ್ಥಾನ ಸಾಹಿತ್ಯ. pp. ೮೩-೮೪. ISBN 81-7531-087-1.
  14. ವೆಲ್ಲೆಸ್ಲಿ, ಅರ್ಥರ್. "The Dispatches of Field Marshal the Duke of Wellington, During His". books.google.co.in. pp. ೧೦೬. Retrieved 6 May 2020..
  15. ಪಾರಸ್ನಿಸ್, ದತ್ತಾತ್ರೇಯ ಬಲವಂತ. "ಸಾಂಗ್ಲಿ ರಾಜ್ಯ - ದೊಂಡೋಪಂತ್‍ ಗೋಖಲೆಯ ಅಂತ್ಯ". pp. ೨೬-೨೯. Retrieved 6 May 2020..
  16. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಭೀಮರಾಯನ ಬಲಿದಾನ: ರಾಷ್ಟ್ರೋತ್ಥಾನ ಸಾಹಿತ್ಯ. pp. ೧೦೦-೧೦೨. ISBN 81-7531-087-1.
  17. ವೆಲ್ಲೆಸ್ಲೆ, ಅರ್ಥರ್. "The Dispatches of Field Marshal the Duke of Wellington, During His". pp. ೧೩೭. Retrieved 8 May 2020..
  18. ವೆಲ್ಲೆಸ್ಲಿ, ಅರ್ಥರ್. "The Dispatches of Field Marshal the Duke of Wellington, During His". pp. ೧೪೯. Retrieved 8 May 2020..
  19. ವೆಲ್ಲೆಸ್ಲಿ, ಅರ್ಥರ್. "The Dispatches of Field Marshal the Duke of Wellington, During His". pp. ೧೮೪. Retrieved 8 May 2020..
  20. ಪಾರಸ್ನಿಸ್, ದತ್ತಾತ್ರೇಯ ಬಲವಂತ. "ಸಾಂಗ್ಲಿ ರಾಜ್ಯ - ಧೊಂಡಿಯ ಅವಸಾನ regiment". pp. ೨೮-೩೩. Retrieved 8 May 2020..
  21. "Story of Duke of Cambridge's own regiment". pp. ೪೫-೪೬. Retrieved 8 May 2020.
  22. ಕ.ವಂ, ನಾಗರಾಜ. ಕರುನಾಡ ಹುಲಿ ಧೊಂಡಿಯ (ಮೊದಲ ಮುದ್ರಣ ed.). ಅಂತಿಮ ಹಣಾಹಣಿ - ಹುಲಿಯ ಹೌತಾತ್ಮ್ಯ: ರಾಷ್ಟ್ರೋತ್ಥಾನ ಸಾಹಿತ್ಯ. p. ೧೨೦. ISBN 81-7531-087-1.

ಹೆಚ್ಚಿನ ಓದು

ಬದಲಾಯಿಸಿ

ಕರುನಾಡ ಹುಲಿ ಧೊಂಡಿಯ - ಲೇ-ನಾಗರಾಜ, ಕ.ವಂ, ರಾಷ್ಟ್ರೋತ್ಥಾನ ಸಾಹಿತ್ಯ, ಆಗಸ್ಟ ೨೦೧೯, ಮೊದಲ ಮುದ್ರಣ, ISBN:81-7531-087-1

ಮರಾಠ ಅಶ್ವದಳ ಸಿಪಾಯಿಯ ಚಿತ್ರಗಳು
 
ಧೊಂಡಿಯ ವಾಘ್‍ನ ಬಳಿ ಪ್ರಾರಂಭದಲ್ಲಿ ಒಂದು ಬಿಳಿ ಕುದುರೆ ಇತ್ತು ಎಂದು ಪ್ರತೀತಿ
ಧೊಂಡಿಯ ವಾಘ್‍ನ ಬಳಿ ಪ್ರಾರಂಭದಲ್ಲಿ ಒಂದು ಬಿಳಿ ಕುದುರೆ ಇತ್ತು ಎಂದು ಪ್ರತೀತಿ 
 
ಮರಾಠ ಅಶ್ವದಳ ಸಿಪಾಯಿಯ ಒಂದು ಪ್ರಾತಿನಿಧಿಕ ಚಿತ್ರ
ಮರಾಠ ಅಶ್ವದಳ ಸಿಪಾಯಿಯ ಒಂದು ಪ್ರಾತಿನಿಧಿಕ ಚಿತ್ರ