ಮದಕರಿ ನಾಯಕ

ಚಿತ್ರದುರ್ಗದ ರಾಜ


ದುರ್ಗದ ಹುಲಿ ಮದಕರಿ ನಾಯಕ , ಭಾರತ ದೇಶದಲ್ಲಿದ್ದ ಹಲವು ಸಂಸ್ಥಾನಗಳಲ್ಲಿ ಒಂದಾದ ಚಿತ್ರದುರ್ಗದ ಕೊನೆಯ ಆರಸನಾಗಿದ್ದ.[೧] ಹೈದರ್ ಅಲಿಯ ಮೈಸೂರಿನ ಸೇನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕನನ್ನು ಮಾತುಕತೆಗೆಂದು ರಾಜಿಸಂಧಾನವೆಂದು ಕರೆಸಿ ಮೋಸದಿಂದ ಹೈದರ್ ಅಲಿ ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿಟ್ಟು ಮತಾಂತರವಾದರೆ ರಾಜ್ಯವನ್ನು ವಾಪಸ್ಸು ನೀಡಿ ಬಿಡುಗಡೆ ಮಾಡುವುದಾಗಿ ಹೇಳಲು ಮದಕರಿ ಜೀವ ನೀಡುತ್ತಾನೆ ಹೊರತು ಧರ್ಮದ್ರೋಹ ಮಾಡುವುದಿಲ್ಲ ಎಂದು ಕೆಚ್ಚೆದೆಯಿಂದ ಹೇಳುತ್ತಾನೆ. ನಂತರ ಹೈದರ್ ಅಲಿಯ ಪುತ್ರ ಟಿಪ್ಪುಸುಲ್ತಾನ್ ಮೈಸೂರಿನ ಮತ್ತು ಚಿತ್ರದುರ್ಗದ ಬೇಡರ ಪಡೆಗಳು ಒಂದಾಗಿ ದಾಳಿ ಮಾಡಬಹುದೆಂಬ ಹೆದರಿ ಸೈನಿಕ ದಂಗೆಯಾದರೆ ನಮಗೆ ಸೋಲು ಖಚಿತವೆಂದು ಭಾವಿಸಿ ಯುದ್ಧಭಯದಿಂದ ಮದಕರಿ ಊಟದಲ್ಲಿ ವಿಷವಿಟ್ಟು ಕೊಲೆ ಮಾಡುತ್ತಾನೆ.

ಮದಕರಿ ನಾಯಕ
ಜನನಅಕ್ಟೋಬರ್ 13 1742
ಚಿತ್ರದುರಾಗ
ಇತರೆ ಹೆಸರುರಾಜ ವೀರ ಮದಕರಿ ನಾಯಕ ಅಥವಾ ಮದಕರಿ ನಾಯಕ V
ಗಮನಾರ್ಹ ಕೆಲಸಗಳುಚಿತ್ರದುರ್ಗದ ರಾಜ
Predecessorಎರಡನೇ ಕಸ್ತೂರಿ ರಂಗಪ್ಪ ನಾಯಕ

ಮದಕರಿಯ ಆಳ್ವಿಕೆಯಲ್ಲಿದ್ದ ಚಿತ್ರದುರ್ಗದ ಕೋಟೆಯನ್ನು ಹೈದರ್‌ ಅಲಿಯ ಸೇನೆ ಮುತ್ತಿಗೆ ಹಾಕುತ್ತದೆ. ಹೀಗೆ ಹೈದರ್ ಅಲಿ ಚಿತ್ರದುರ್ಗದ ಕೋಟೆಯನ್ನು ಸುತ್ತುವರಿದಾಗ ಒನಕೆ ಓಬವ್ವ ಬಂಡೆಗಳ ನಡುವಿನ ಕಿಂಡಿಯ ಮೂಲಕ ಪ್ರವೇಶಿಸಿದ್ದನ್ನು ಗುರುತಿಸಿ, ತನ್ನ ಸೈನಿಕರನ್ನು ಆ ಮಾರ್ಗದ ಮೂಲಕ ಕಳುಹಿಸಿರುತ್ತಾನೆ. ಆ ಕಿಂಡಿಯ ಸಮೀಪ ಕಾವಲು ಕಾಯುತ್ತಿದ್ದ ಕೋಟೆಯ ಸೈನಿಕ ಊಟಮಾಡಲು ಮನೆಗೆ ಹೋಗಿರುತ್ತಾನೆ. ಆಕೆ, ಆ ಕಿಂಡಿಯ ಮೂಲಕ ಬರುತ್ತಿದ್ದ ಸೈನಿಕರನ್ನು ಗಮನಿಸುತ್ತಾಳೆ. ಕೂಡಲೇ ಜಾಗೃತಳಾಗಿ ತನ್ನ ಒನಕೆ ಯನ್ನು(ಭತ್ತ ಕುಟ್ಟಲು ಬಳಸುವ ಒಕ್ಕುಗೋಲು) ಬಳಸಿ ಅವರನ್ನು ಕೊಲ್ಲುತ್ತಾಳೆ. ಊಟ ಮುಗಿಸಿ ಹಿಂದಿರುಗಿದ ಬಳಿಕ, ಓಬವ್ವನ ರಕ್ತಸಿಕ್ತಗೊಂಡಿದ್ದ ಒನಕೆಯನ್ನು ನೋಡಿ ಆಕೆಯ ಪತಿಗೆ ಆಘಾತವಾಗುತ್ತದೆ. ಜೊತೆಗೆ ಅವಳಿಂದ ಹತರಾದ ನೂರಾರು ಸೈನಿಕರು ಅವಳೆದುರು ಶವವಾಗಿದ್ದನ್ನು ನೋಡುತ್ತಾನೆ. ತಣ್ಣೀರು ದೋಣಿಯ ಪಕ್ಕದಲ್ಲಿರುವ ಈ ಕಿಂಡಿಯು ಈ ಕಥೆಯ ಹೆಗ್ಗುರುತಾಗಿ ಈಗಲೂ ಉಳಿದುಕೊಂಡಿದೆ. ತಣ್ಣೀರು ದೋಣಿಯು ಒಂದು ಸಣ್ಣ ನೀರಿನ ಮೂಲವಾಗಿದ್ದು ವರ್ಷಪೂರ್ತಿ ಇಲ್ಲಿನ ನೀರು ತಂಪಾಗಿರುತ್ತದೆ. ಹೈದರ್ ಅಲಿ ೧೭೯೯ರಲ್ಲಿ ಮತ್ತೊಮ್ಮೆ ಆಕ್ರಮಣ ನಡೆಸಿ, ಕೋಟೆಯನ್ನು ತನ್ನ ವಶ ಮಾಡಿಕೊಳ್ಳುತ್ತಾನೆ. ಈ ಸ್ಥಳವು ತನ್ನ ಸುತ್ತಲಿನ ಕಲ್ಲಿನ ಕೋಟೆಗೆ ಪ್ರಸಿದ್ಧವಾಗಿದೆ.("ಕಲ್ಲಿನ ಕೋಟೆ ಇರುವ ಸ್ಥಳ") ಹಾಗು ಇದು ಏಳು ಸುತ್ತಿನ ಕೋಟೆ ಇರುವ ಸ್ಥಳವಾಗಿದೆ, ಇದು ದೊಡ್ಡ ದೊಡ್ಡ ಬಂಡೆಗಳಿಂದ ನಿರ್ಮಿತವಾಗಿದೆ. ತರಾಸು ಮತ್ತು ಬಿ.ಎಲ್.ವೇಣುರವರ ಕೃತಿಗಳು ಕೇವಲ ಅವರ ಕವಿಕಲ್ಪನೆಯಾಗಿದ್ದು ನೈಜ ಇತಿಹಾಸದ ಬದಲು ಕಲ್ಪನೆ ಮಾತ್ರ.

ಚಿತ್ರದುರ್ಗದ ಪಾಳೆಗಾರ ಕುಟುಂಬದ ಇತಿಹಾಸ

ಬದಲಾಯಿಸಿ

ಚಿತ್ರದುರ್ಗದ ಪಾಳೆಗಾರ ಕುಟುಂಬದವರು ವಾಲ್ಮೀಕಿ ಸಮುದಾಯದ ಜಾತಿಗೆ ಸೇರಿದವರಾಗಿದ್ದರು. ಇವರಗಳನ್ನು ವಾಲ್ಮೀಕಿ ನಾಯಕರು ಹಾಗೂ ಬೇಡ ಎಂದೂ ಕರೆಯುತ್ತಾರೆ ಬೆಟ್ಟದ ಮೇಲೆ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರಾಗಿದ್ದ ಇವರು ಬೇಟೆ ಹಾಗು ದನ ಕಾಯುವ ಮೂಲಕ ಜೀವನ ಸಾಗಿಸುತ್ತಿದ್ದರು. ಇವರ ಮೂಲದ ಬಗೆಗಿರುವ ವಿವರಣೆಯು ಅಸ್ಪಷ್ಟವಾಗಿದೆ. ಒಂದು ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮೂರು ಬೇಡ ಸಮುದಾಯದ ಕುಟುಂಬಗಳು, ತಿರುಪತಿಯ ಜಡಿಕಲ್-ದುರ್ಗದಿಂದ ವಲಸೆ ಬಂದು ಭರಮಸಾಗರದ ಸಮೀಪದ ನೀರ್ಥಡಿಯಲ್ಲಿ ಸುಮಾರು ೧೪೭೫ರಲ್ಲಿ ನೆಲೆಗೊಳ್ಳುತ್ತವೆ. ಇವರನ್ನು ಕಮಗೆತಿ ಕುಟುಂಬ ಹಾಗು ವಾಲ್ಮೀಕಿ ಗೋತ್ರ ಕ್ಕೆ ಸೇರಿದವರೆಂದು ಹೇಳಲಾಗುತ್ತದೆ. ಇವರಲ್ಲಿ ಮಗ ಹಾಗು ಮೊಮ್ಮಗ, ಹಿರೇ ಹನುಮಪ್ಪ ನಾಯಕ ಹಾಗು ತಿಮ್ಮಣ್ಣ ನಾಯಕ, ದಾವಣಗೆರೆ ತಾಲ್ಲೂಕಿನ ಮತ್ತಿಯಲ್ಲಿ ನೆಲೆಯಾಗುತ್ತಾರೆ. ಇವರಲ್ಲಿ ಕಮಗೇತಿ ತಿಮ್ಮಣ್ಣ ನಾಯಕನೆಂದು ಕರೆಯಲ್ಪಡುವ ಎರಡನೇಯವನನ್ನು ವಿಜಯನಗರದ ರಾಜನು ಮೊದಲು ಹೊಳಲ್ಕೆರೆಗೆ, ನಂತರ ಹಿರಿಯೂರಿಗೆ, ಹಾಗು ಅಂತಿಮವಾಗಿ ಚಿತ್ರದುರ್ಗದ ನಾಯಕನನ್ನಾಗಿ ನೇಮಿಸಿಕೊಳ್ಳುತ್ತಾನೆ. ಈತ ಚಿತ್ರದುರ್ಗದ ಬೆಟ್ಟವನ್ನು ಬಲಪಡಿಸಿ, ಅದನ್ನು ಯಾವ ರೀತಿ ನಿಭಾಯಿಸುತ್ತಾನೆಂದರೆ ಆತನ ವಿರುದ್ಧ ಸೆಣಸಲು ರಾಜನು ಸೈನ್ಯವನ್ನು ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೊಂದು ನಂಬಿಕೆ ಪ್ರಕಾರ, ತಿಮ್ಮಣ್ಣ ನಾಯಕನು ತಿರುಪತಿ ಸಮೀಪದ ಬೆಟ್ಟಗಳ ಕೆಳಗಿನ ಮದಕೇರಿ ಎಂಬ ಸ್ಥಳದಿಂದ ಒಂದು ಸಣ್ಣ ಸೈನ್ಯದೊಂದಿಗೆ ಇಲ್ಲಿಗೆ ಬಂದು ಬಸವಾಪಟ್ಟಣದ ಪಾಳೆಯಗಾರರಿಂದ ನೇಮಕಗೊಳ್ಳುತ್ತಾನೆ. ನಂತರದಲ್ಲಿ, ಆತ ಮತ್ತಿಯಲ್ಲಿ ಹೊಂದಿದ್ದ ಉಪಪತ್ನಿಗೆ ಸಂಬಂಧಿಸಿದ ಕೆಲ ಕಲಹಗಳು ಉಂಟಾಗುತ್ತವೆ. ಇದರಿಂದ ಆತ ಆ ಸ್ಥಳವನ್ನು ತೊರೆದು ಮಾಯಕೊಂಡದಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಂದಲೂ ಸ್ಥಳಾಂತರಗೊಂಡು, ಗುಂಟೂರಿನ ಸಮೀಪದ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ಅದಲ್ಲದೇ ತನ್ನದೇ ಆದ ತಂಡ ಕಟ್ಟಿಕೊಂಡ ನಂತರ, ಆ ಪ್ರದೇಶವನ್ನು ಲೂಟಿ ಮಾಡಲು ಆರಂಭಿಸಿದ. ಅಲ್ಲದೇ ಹಳೆಯೂರು ಸಮೀಪ ರಂಗಾಪಟ್ನವೆಂಬ ಒಂದು ಸಣ್ಣ ಕೋಟೆಯನ್ನು ನಿರ್ಮಿಸಿದ. ಈತ ಮಾಡುತ್ತಿದ್ದ ಲೂಟಿಯಿಂದ ಕೋಪಗೊಂಡ ಹರಪನಹಳ್ಳಿ, ನಿಡುಗಲ್, ಹಾಗು ಬಸವಾಪಟ್ಟಣದ ಪಾಳೆಯಗಾರರು, ಅವನ ವಿರುದ್ಧ ಒಂದಾಗಿ, ವಿಜಯನಗರದ ಕೆಲವು ಸೈನಿಕರೊಂದಿಗೆ, ರಂಗಾಪಟ್ನದೆಡೆಗೆ ಕ್ರಮಣ ಮಾಡುತ್ತಾರೆ. ತಿಮ್ಮಣ್ಣ ನಾಯಕನ ಸೈನ್ಯವು ಬಲವಂತದಿಂದ ಚಿತ್ರದುರ್ಗಕ್ಕೆ ಹಿಂದಿರುಗಬೇಕಾಗುತ್ತದೆ, ಅಲ್ಲಿ ಈತನ ಮೇಲೆ ಆಕ್ರಮಣ ಮಾಡಲಾಗುತ್ತದೆ. ಈ ಘಟನೆ ನಡೆದ ಸಂದರ್ಭದಲ್ಲೇ, ವಿಜಯನಗರದ ಅರಸರನ್ನು ಅವಲಂಬಿಸಿದ ನಾಯಕರುಗಳಲ್ಲಿ ಒಬ್ಬ ಎಂದು ಆತನನ್ನು ಪರಿಗಣಿಸಲಾಯಿತು. ಈ ಎಲ್ಲಾ ಘಟನೆಗಳು ನಡೆದದ್ದು ಸುಮಾರು ೧೫೬೨ ರ ಅವಧಿಯಲ್ಲಿ.

ತಿಮ್ಮಣ್ಣ ನಾಯಕ

ಬದಲಾಯಿಸಿ

ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ ವಿಜಯನಗರದ ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ಕಗ್ಗತ್ತಲ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗುವ ವಿಲಕ್ಷಣ ಸಾಹಸವೊಂದಕ್ಕೆ ಕೈ ಹಾಕುತ್ತಾನೆ. ರಾಜಕುಮಾರನು ಎಚ್ಚರಗೊಳ್ಳುತ್ತಾನೆ, ಹಾಗು ತಿಮ್ಮಣ್ಣ ಅವನ ಕಣ್ಣಿಗೆ ಬೀಳದಂತೆ ಒಣ ಹುಲ್ಲಿನಲ್ಲಿ ಅಡಗಿಕೊಳ್ಳುತ್ತಾನೆ. ರಾಜಕುಮಾರನು ನೆಲಕ್ಕೆ ಹಗ್ಗದ ಸಹಾಯದಿಂದ ಸಡಿಲುಗೊಂಡ ಕುದುರೆಯ ಗೂಟವನ್ನು ಮತ್ತೆ ಸರಿಮಾಡುತ್ತಾನೆ, ಹಾಗು ತಿಳಿಯದೆ ತಿಮ್ಮಣ್ಣನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿದಂತೆ ಬಂಧಿಸುತ್ತಾನೆ. ತಿಮ್ಮಣ್ಣ ನಿಶಬ್ದವಾಗಿ ಕೆಲಹೊತ್ತು ಹಾಗೇ ಅಡಗಿ ಕುಳಿತುಕೊಳ್ಳುತ್ತಾನೆ. ಅಲ್ಲದೇ ಮತ್ತೆ ಎಲ್ಲವೂ ಮತ್ತೆ ಮೊದಲಿನಂತಾದಾಗ, ಹಗ್ಗದ ಆಣಿಯಿಂದ ಬಂಧಿತನಾದ ಆತ ತನ್ನನ್ನು ತಾನು ಬಿಡುಗಡೆ ಮಾಡಿಕೊಂಡು ಕುದುರೆಯನ್ನು ಅಪಹರಿಸುತ್ತಾನೆ. ತಿಮ್ಮಣ್ಣನನ್ನು ಬೆದರಿಸಿ ಮುತ್ತಿಗೆ ಹಾಕಲು ಬಂದ ಸೈನ್ಯಕ್ಕೆ ಈ ಉದ್ದೇಶ ಸಫಲವಾಗುವುದಿಲ್ಲವೆಂಬುದು ಈ ಘಟನೆಯಿಂದ ತಿಳಿದುಬರುತ್ತದೆ. ಇದಾದ ನಂತರ, ಶಾಂತಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಲಾಗುತ್ತದೆ. ವಿಜಯನಗರದ ಅರಸನು ತಿಮ್ಮಣ್ಣನನ್ನು ರಾಜಧಾನಿಗೆ ಆಹ್ವಾನಿಸುತ್ತಾನೆ. ಅಲ್ಲದೇ ಆತನ ಸಾಹಸಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾನೆ. ರಾಜನ ಕೋರಿಕೆಯ ಮೇರೆಗೆ, ತಿಮ್ಮಣ್ಣ ನಾಯಕ ಗುಲ್ಬರ್ಗದ ಮೇಲೆ ಆಕ್ರಮಣ ನಡೆಸುತ್ತಾನೆ. ವಿಜಯನಗರ ಸೈನ್ಯವು ಗುಲ್ಬರ್ಗಕ್ಕೆ ಮುತ್ತಿಗೆ ಹಾಕಿದ ಆರು ತಿಂಗಳ ನಂತರವೂ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದರಿಂದ ಸಂತುಷ್ಟನಾದ ಅರಸನು, ತಿಮ್ಮಣ್ಣನ್ನು ಆಸ್ಥಾನಕ್ಕೆ ಆಹ್ವಾನಿಸುತ್ತಾನೆ. ನಂತರದಲ್ಲಿ ತಿಮ್ಮಣ್ಣ, ಅರಸನ ಅಸಮಾಧಾನಕ್ಕೆ ಗುರಿಯಾಗುತ್ತಾನೆ. ಅಲ್ಲದೇ ವಿಜಯನಗರದ ಸೆರೆಮನೆಯಲ್ಲಿ ಬಂಧಿಯಾಗಿ ಅಲ್ಲಿಯೇ ಮರಣಹೊಂದುತ್ತಾನೆ.

ತಿಮ್ಮಣ್ಣ ನಾಯಕನ ನಂತರ ಆತನ ಪುತ್ರ ಓಬಣ್ಣಾ ನಾಯಕ ಪಾಳೆಯಗಾರನಾಗುತ್ತಾನೆ. ಈತ ತನ್ನ ಹೆಸರನ್ನು ಮದಕರಿ ನಾಯಕನೆಂದು ಬದಲಿಸಿಕೊಂಡು ಪಟ್ಟಕ್ಕೆ ಬಂದ ಕೆಲವೇ ವರ್ಷಗಳಲ್ಲಿ, ವಿಜಯನಗರ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಾನೆ.

ಸುಮಾರು ೧೬೦೨ರಲ್ಲಿ, ಓಬಣ್ಣಾ ನಾಯಕನ ನಂತರ ಆತನ ಪುತ್ರ ಕಸ್ತೂರಿ ರಂಗಪ್ಪ ನಾಯಕ ಸಿಂಹಾಸನವನ್ನು ಅಲಂಕರಿಸುತ್ತಾನೆ. ಅವನ ಆಳ್ವಿಕೆಯು ಸಂಪೂರ್ಣವಾಗಿ ಘರ್ಷಣೆಗಳಿಂದ ಕೂಡಿದ್ದು, ತನ್ನ ನೆರೆಹೊರೆಯ ಮುಖ್ಯ ನಾಯಕರುಗಳೊಂದಿಗೆ ಸಂಘರ್ಷಕ್ಕಿಳಿಯುತ್ತಾನೆ. ಬಸವಾಪಟ್ಟಣದ ಪಾಳೆಯಗಾರರೊಂದಿಗೆ ಹಲವಾರು ಕದನಗಳು ಸಾಮಾನ್ಯವಾಗಿ ಮಾಯಕೊಂಡ, ಸಂತೇಬೆನ್ನೂರು, ಹೊಳಲ್ಕೆರೆ, ಅಣಜಿ, ಹಾಗು ಜಗಳೂರಿನಂತಹ ಸ್ಥಳಗಳಲ್ಲಿ ನಡೆಯುತ್ತವೆ. ಇವೆಲ್ಲವೂ ಅಂತಿಮವಾಗಿ ಚಿತ್ರದುರ್ಗ ಪ್ರದೇಶದ ಭಾಗಗಳಾಗುತ್ತವೆ. ೧೬೫೨ರಲ್ಲಿ, ಆತನ ಮರಣದ ಸಮಯದಲ್ಲಿ, ಓಬಣ್ಣನ ಸ್ವಾಮ್ಯದಲ್ಲಿ ೬೫,೦೦೦ ದುರ್ಗಿ ಪಗೋಡಗಳು ರಾಜ್ಯದ ಹುಟ್ಟುವಳಿಯಾಗಿರುತ್ತವೆ.

ರಂಗಪ್ಪ ನಾಯಕನ ನಂತರ ಆತನ ಪುತ್ರ ಮದಕರಿ ನಾಯಕನು,೧೬೫೨ರಲ್ಲಿ ಅರಸನಾಗುತ್ತಾನೆ. ಈತನೂ ಸಹ ಹಲವಾರು ಕದನಗಳಲ್ಲಿ ಜಯಗಳಿಸಿರುತ್ತಾನೆ. ಅದರಲ್ಲೂ ವಿಶೇಷವಾಗಿ ಪೂರ್ವದ ರಾಜ್ಯಗಳ ಮೇಲೆ ಗೆಲುವು ಸಾಧಿಸುತ್ತಾನೆ. ಈ ಅವಧಿಯಲ್ಲಿ, ರಾಜ್ಯವು ನಾಲ್ಕು ಪ್ರದೇಶಗಳಾಗಿ ವಿಂಗಡಣೆಯಾಗುತ್ತದೆ. ಇವುಗಳ ಉಸ್ತುವಾರಿ ವಹಿಸಿದ್ದ ಸ್ಥಳೀಯ ಅಧಿಕಾರಿಗಳೆಂದರೆ ಹೊಟ್ಟೆ ಗುರುಕಣ್ಣ, ಕರಣಿಕ ಭುನಪ್ಪ, ಅಬ್ಬಿಗೆರೆ ಮಲ್ಲಣ್ಣ, ಹಾಗು ಕರಣಿಕ ಅಪ್ಪಣ್ಣ. ರಂಗಪ್ಪ ನಾಯಕ ೧೬೭೪ರಲ್ಲಿ ಮರಣಹೊಂದುವುದರ ಜೊತೆಗೆ ೧೦೦,೦೦೦ ದುರ್ಗಿ ಪಗೋಡಗಳನ್ನು ರಾಜ್ಯದ ಅಧಿಪತ್ಯದ ಹುಟ್ಟುವಳಿಯಾಗಿ ಬಿಟ್ಟು ಹೋಗಿರುತ್ತಾನೆ.

ಚಿಕ್ಕಣ್ಣ ನಾಯಕ

ಬದಲಾಯಿಸಿ

ಮದಕರಿ ನಾಯಕನಿಗೆ ಮಕ್ಕಳಿಲ್ಲದ ಕಾರಣ, ಆತನ ದತ್ತುಪುತ್ರ ಓಬಣ್ಣಾ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಏರುತ್ತಾನೆ. ಓಬಣ್ಣಾ ನಾಯಕ ದಳವಾಯಿಗಳಿಂದ ಹತನಾಗುತ್ತಾನೆ. ಬಹುಶಃ ಅವರಿಗೆ ಕಪ್ಪ ಕಾಣಿಕೆಗಳನ್ನು ಸಲ್ಲಿಸದಿರುವುದು ಇದಕ್ಕೆ ಮುಖ್ಯ ಕಾರಣವಿರಬಹುದು. ಚಿಕ್ಕಣ್ಣ ನಾಯಕ, ಮದಕರಿ ನಾಯಕನ ಕಿರಿಯ ಸಹೋದರ ೧೬೭೬ರಲ್ಲಿ ಸಿಂಹಾಸನಾರೂಢನಾಗುತ್ತಾನೆ. ಈ ಸಮಯದಲ್ಲಿ, ಹರಪನಹಳ್ಳಿಯ ನಾಯಕ ಅಣಜಿಗೆ ಮುತ್ತಿಗೆ ಹಾಕಿ ಸ್ಥಳೀಯ ಅಧಿಕಾರಿ ಭುನಪ್ಪನನ್ನು ಹತ್ಯೆ ಮಾಡುತ್ತಾನೆ. ಚಿಕ್ಕಣ್ಣ ನಾಯಕ ಅಣಜಿಗೆ ಹೋಗಿ, ಶತ್ರುಗಳು ಮುತ್ತಿಗೆ ಹಾಕುವುದನ್ನು ತಡೆಯುತ್ತಾನೆ. ಇದಾದ ಸ್ವಲ್ಪ ಸಮಯದಲ್ಲೇ, ಇವನು ಹರಿಹರಕ್ಕೆ ಹೋಗಿ ಅದು ಮುಸಲ್ಮಾನರಿಂದ ಆಕ್ರಮಿತವಾಗುವುದನ್ನು ತಪ್ಪಿಸಬೇಕಾಗುತ್ತದೆ. ಮುಸಲ್ಮಾನರು ಈ ಸ್ಥಳವನ್ನು ಶಂಷೇರ್ ಖಾನ್ ನ ಆಣತಿಯ ಮೇರೆಗೆ ಆಕ್ರಮಣ ಮಾಡಿರುತ್ತಾರೆ. ಆಗಿನ ದಾಳಿಯಿಂದ ರಕ್ಷಣೆಯು, ಈ ಕೆಳಕಂಡ ಯುದ್ಧತಂತ್ರದ ಮೂಲಕ ನಡೆಯುತ್ತಿರುತ್ತಿತ್ತು: ರಾತ್ರಿಯಾಗುತ್ತಿದ್ದಂತೆ ಹಲವಾರು ಲಾಂದ್ರಗಳನ್ನು ಹಚ್ಚಿ,ಮರದ ಕೊಂಬೆಗಳಿಗೆ ನೇತುಹಾಕಲಾಗುತ್ತಿತ್ತು. ಅಲ್ಲದೇ ಬರೆಗುಡ್ಡ ಬೆಟ್ಟದ ಮೇಲೆ ಬೀಡುಬಿಟ್ಟಿದ್ದ ಚಿಕ್ಕಣ್ಣನ ಸೈನ್ಯಕ್ಕಾಗಿ ಸಂಗೀತಗಾರರು ಎಂದಿನಂತೆ ತಮ್ಮ ವಾದ್ಯಗಳನ್ನು ನುಡಿಸುವಂತೆ ಹೇಳಲಾಗುತ್ತಿತ್ತು. ಶತ್ರುಗಳಿಗೆ ಸೈನ್ಯವು ಅಲ್ಲಿಂದ ಕಾಲ್ತೆಗೆದಿಲ್ಲವೆಂಬುದನ್ನು ತಿಳಿಯಪಡಿಸುವುದೇ ಈ ತಂತ್ರದ ಉದ್ದೇಶವಾಗಿತ್ತು. ನಾಯಕನು ತನ್ನ ಸಂಪೂರ್ಣ ಸೈನ್ಯವನ್ನು ಬಳಸು ಮಾರ್ಗಗಳ ಮೂಲಕ ಮುನ್ನಡೆಸಿ, ಕೋಟೆಯನ್ನು ಪಶ್ಚಿಮ ದಿಕ್ಕಿನಿಂದ ಆಕ್ರಮಿಸಿ, ಶತ್ರುಗಳನ್ನು ಹಿಮ್ಮೆಟ್ಟಿಸುತ್ತಾನೆ. ಚಿಕ್ಕಣ್ಣ, ರಾಯದುರ್ಗ ಹಾಗು ಬಸವಾಪಟ್ಟಣದ ನಾಯಕರುಗಳೊಂದಿಗೆ ವಿವಾಹದ ಮೂಲಕ ನೆಂಟಸ್ತಿಕೆ ಬೆಳಸಿಕೊಳ್ಳುತ್ತಾನೆ. ಚಿತ್ರದುರ್ಗದ ಕುಟುಂಬವು ಈ ನಾಯಕನ ಆಳ್ವಿಕೆಯಲ್ಲಿ ಎರಡು ಬಾರಿ ತಮ್ಮ ಧರ್ಮವನ್ನು ಬದಲಾವಣೆ ಮಾಡಿಕೊಂಡಿತೆಂದು ಹೇಳಲಾಗುತ್ತದೆ. ಮೊದಲಿಗೆ, ಸಂಪೂರ್ಣವಾಗಿ ಕುಟುಂಬವು ವೀರಶೈವ ಧರ್ಮವನ್ನು ಸ್ವೀಕರಿಸುತ್ತದೆ. ಅಲ್ಲದೇ ನಾಯಕರು ಕೋಟೆಯಲ್ಲಿ ಒಂದು ಮಠ ವನ್ನು ಸ್ಥಾಪಿಸುವ ಉದ್ದೇಶದ ಜೊತೆಗೆ ಉಗ್ರಚನ್ನವೀರದೇವ ಎಂಬ ವಿರಕ್ತ ಜಂಗಮರು ತಮ್ಮೆಲ್ಲರಿಗೂ ಗುರುವಾಗಬೇಕೆಂದೂ ಈ ಕುಟುಂಬ ಇಚ್ಛಿಸುತ್ತಿತ್ತೂ, ಎಂದು ಹೇಳಲಾಗುತ್ತದೆ. ನಂತರ, ಬಹುತೇಕ ಎಲ್ಲರೂ ತಮ್ಮ ಮೂಲ ಧರ್ಮಕ್ಕೇ ಹಿಂದಿರುಗಿದರೆಂದು ಹೇಳಲಾಗುತ್ತದೆ. ಈ ನಡುವೆ ಚಿಕ್ಕಣ್ಣ ನಾಯಕ ೧೬೮೬ರಲ್ಲಿ ವಿಧಿವಶನಾಗುತ್ತಾನೆ.

ಚಿಕ್ಕಣ್ಣ ನಾಯಕನ ನಂತರ ಆತನ ಹಿರಿಯ ಸಹೋದರ ಲಿಂಗಣ್ಣ ನಾಯಕ ರಾಜನಾಗುತ್ತಾನೆ. ಈತನೂ ಸಹ ಮದಕೇರಿ ನಾಯಕ III ಎಂಬ ಹೆಸರಿನಿಂದ ಪರಿಚಿತನಾಗುತ್ತಾನೆ. ಈ ಸಮಯದಲ್ಲಿ ದಳವಾಯಿಗಳ ನಡುವೆ ಸಿಂಹಾಸನಕ್ಕೆ ನ್ಯಾಯಸಮ್ಮತವಾದ ಉತ್ತರಾಧಿಕಾರಿಯನ್ನು ನೇಮಿಸುವ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಪಂಚಮಾರ ಮುದ್ದಣ್ಣ ನೇತೃತ್ವ ವಹಿಸಿದ ಒಂದು ಗುಂಪು ಲಿಂಗಣ್ಣ ನಾಯಕನನ್ನು ಬಂಧಿಸಿ ನಂತರ ಆತನನ್ನು ಹತ್ಯೆಗೈಯ್ಯುತ್ತದೆ. ಅಲ್ಲದೇ ದೊಣ್ಣೆ ರಂಗಪ್ಪ ನಾಯಕನನ್ನು ರಾಜನನ್ನಾಗಿ ಮಾಡುತ್ತದೆ. ದಳವಾಯಿ ಭರಮಪ್ಪ ನೇತೃತ್ವ ವಹಿಸಿದ ಮತ್ತೊಂದು ಒಳಗುಂಪು ಅಧಿಕಾರ ವಹಿಸಿಕೊಳ್ಳುವವರೆಗೂ, ಮುದ್ದಣ್ಣ ಚಿತ್ರದುರ್ಗದ ಅತ್ಯಂತ ಪ್ರಬಲ ನಾಯಕನಾಗಿ ಉಳಿಯುತ್ತಾನೆ. ಮುದ್ದಣ್ಣ ಹಾಗು ಆತನ ಸಹೋದರರ ಅಸ್ತಿತ್ವವನ್ನು ಶೀಘ್ರದಲ್ಲೇ ಕೊನೆಗೊಳಿಸಿ, ದೊಣ್ಣೆ ರಂಗಪ್ಪನನ್ನು ಸೆರೆಮನೆಯಲ್ಲಿಡಲಾಗುತ್ತದೆ.

ಭರಮಪ್ಪ ನಾಯಕ

ಬದಲಾಯಿಸಿ

ದಳವಾಯಿ ಭರಮಪ್ಪ ರಾಜ್ಯದ ಒಗ್ಗೂಡಿಕೆಯಲ್ಲಿನ ಸಮಗ್ರತೆಯಲ್ಲಿ ತನ್ನ ಆಸಕ್ತಿ ತೋರುತ್ತಾನೆ. ಸಿಂಹಾಸನಕ್ಕೆ ನೇರವಾದ ಉತ್ತಾರಾಧಿಕಾರಿ ಇರದ ಕಾರಣ, ಆತನು ಸಂಸ್ಥಾನದ ಇತರ ಹಿರಿಯರೊಂದಿಗೆ ಸಮಾಲೋಚಿಸಿ, ದೂರದ ಸಂಬಂಧಿ ಭರಮಪ್ಪ ನಾಯಕನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಳ್ಳುತ್ತಾನೆ. ಈ ಹೊಸ ನಾಯಕನು ಸುಮಾರು ೧೬೮೯ರಲ್ಲಿ ಸಿಂಹಾಸನವನ್ನು ಏರುತ್ತಾನೆ. ಈ ಅವಧಿಯಲ್ಲಿ ರಾಜ್ಯವು ಸಾಕಷ್ಟು ಕಷ್ಟ-ಕೋಟಲೆ,ಸಮಸ್ಯೆಗಳನ್ನು ಎದುರಿಸಿತ್ತು. ಈ ಅವಧಿಯಲ್ಲಿ ಮುಘಲರು ಬಿಜಾಪುರದ ಸಂಪತ್ತನ್ನು ಅತಿಕ್ರಮಿಸಿ ಕೈವಶ ಮಾಡಿ, ಸಿರಾದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸುತ್ತಾರೆ. ಇದಕ್ಕೆ ಬಸವಾಪಟ್ಟಣ ಹಾಗು ಬೂದಿಹಾಳಗಳನ್ನು ತಮ್ಮ ಪರಗಣಗಳನ್ನಾಗಿ ಮಾಡಿಕೊಂಡರಲ್ಲದೇ ಜೊತೆಗೆ ಚಿತ್ರದುರ್ಗ ಹಾಗು ಪಾಳೆಯಗಾರರ ಇತರ ನೆರೆಯ ರಾಜ್ಯಗಳನ್ನು ಅದರ ಅಧೀನರಾಜ್ಯಗಳನ್ನಾಗಿ ಮಾಡಿಕೊಂಡರು. ಈ ನಾಯಕನ ಆಳ್ವಿಕೆಯಲ್ಲಿ ಹಲವಾರು ಕದನಗಳು ಈ ಎರಡರ ಮಧ್ಯೆ ಅಂದರೆ ಚಿತ್ರದುರ್ಗ ಹಾಗು ಹರಪನಹಳ್ಳಿ ನಡುವೆ, ಅಲ್ಲದೇ ರಾಯದುರ್ಗ ಹಾಗು ಬಿಜಾಪುರಗಳ ನಡುವೆ ನಡೆಯುತ್ತವೆ. ನಾಯಕನು ಈ ಎಲ್ಲ ಕದನಗಳಲ್ಲಿ ಯಶಸ್ವಿಯಾಗಿ ಜಯಶಾಲಿಯಾಗುತ್ತಾನೆ. ಆತನ ೩೩ ವರ್ಷಗಳ(೧೬೮೯–೧೭೨೧) ಸುದೀರ್ಘ ಆಳ್ವಿಕೆಯಲ್ಲಿ ತನ್ನ ದಾನಧರ್ಮಗಳಿಂದಲೂ ಸಮಾನವಾಗಿ ಜನೋಪಕಾರಿಯಾಗಿ, ಭರಮಪ್ಪ ನಾಯಕ ಗಮನ ಸೆಳೆದಿದ್ದಾನೆ. ಈತ ತನ್ನ ಪ್ರಾದೇಶಿಕ ಆಡಳಿತದಲ್ಲಿ ತನ್ನ ರಾಜ್ಯದುದ್ದಕ್ಕೂ ಸುಮಾರು ೩೦ ದೇವಾಲಯಗಳು, ಮೂರು ಅಥವಾ ನಾಲ್ಕು ಅರಮನೆಗಳು, ಐದು ಪ್ರಬಲವಾದ ಕೋಟೆಗಳು, ಕಡಿಮೆಯೆಂದರೆ ೨೦ ಕೆರೆಗಳನ್ನು ನಿರ್ಮಿಸಿದ್ದನೆಂದು ಹೇಳಲಾಗುತ್ತದೆ. ಚಿತ್ರದುರ್ಗ ಕೋಟೆಯ ಒಂದು ಭಾಗ ಹಾಗು ಹಲವಾರು ಗೋಪುರ ಮಹಾದ್ವಾರಗಳು ಹಾಗು ಕಾಯುವ ಬುರುಜು ಕೋಟೆಗಳ ನಿರ್ಮಾಣಕ್ಕೂ ಸಹ ಈತ ಕಾರಣನಾಗಿದ್ದಾನೆ. ಈತನ ಆಳ್ವಿಕೆಯಲ್ಲಿ ಜನರು ಅನುಭವಿಸಿದ ಏಕೈಕ ತೊಂದರೆಯೆಂದರೆ ೧೭೦೩ರಲ್ಲಿ ಕಾಡಿದ ಪ್ಲೇಗು ಮಹಾಮಾರಿ; ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಲಿಯಾಗುವುದರ ಜೊತೆಗೆ ಬಹುತೇಕ ಸಂಪೂರ್ಣವಾಗಿ ಕೆಲವು ದಿನಗಳ ಕಾಲ ರಾಜಧಾನಿಯೇ ಬರಿದಾಗಿತ್ತು.

ಆ ವೇಳೆಗೆ ೧೭೨೧ರಲ್ಲಿ ಈತನ ಮರಣದ ನಂತರ, ಭರಮಪ್ಪ ನಾಯಕನ ಪುತ್ರ ಹಿರಿ ಮದಕೆರಿ ನಾಯಕ ಗದ್ದುಗೆಯೇರುತ್ತಾನೆ. ಪಟ್ಟಕ್ಕೆ ಬಂದ ಎರಡು ಅಥವಾ ಮೂರು ವರ್ಷಗಳಲ್ಲೇ, ಯುವರಾಜನು, ಬರಗಾಲ ಹಾಗು ಪಿರಾಜಿ ನೇತೃತ್ವದ ಮರಾಠ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಆತನ ಆಳ್ವಿಕೆಯನ್ನು ಹರಪನಹಳ್ಳಿ, ಸವಣೂರು, ಬಿದನೂರು ಹಾಗು ಮರಾಠಾದ ಆತನ ವೈರಿಗಳು ಅಸಂಖ್ಯಾತ ಬಾರಿ ತಡೆಗಟ್ಟಿ ಅಡ್ಡಿಮಾಡುತ್ತಾರೆ. ಈತ ಸಾಮಾನ್ಯವಾಗಿ ಯುದ್ಧದಲ್ಲಿ ಜಯಶಾಲಿಯಾಗುತ್ತಾನೆ. ಅಲ್ಲದೇ ಈಶಾನ್ಯದಲ್ಲಿ ಮೊಳಕಾಲ್ಮೂರು ಪ್ರದೇಶವನ್ನೂ ದಾಟಿ ಅದರಾಚೆಗೆ ವಿಸ್ತರಿಸಿ ಒಂದು ದೊಡ್ಡ ಪ್ರದೇಶದ ಭಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಾನೆ. ಆಗ ೧೭೪೭–೪೮ರ ನಡುವೆ ಮಾಯಕೊಂಡದಲ್ಲಿ ಚಿತ್ರದುರ್ಗ ಹಾಗು ಬಿದನೂರು, ರಾಯದುರ್ಗ, ಹರಪನಹಳ್ಳಿ, ಹಾಗು ಸವಣೂರು ಇವುಗಳ ಒಕ್ಕೂಟದ(ಮೈತ್ರಿಕೂಟದ) ಸೈನ್ಯಗಳ ನಡುವೆ ಭಾರೀ ಕದನ ನಡೆಯುತ್ತದೆ. ಚಿತ್ರದುರ್ಗ ಸೈನ್ಯವು ದುರಂತದೊಂದಿಗೆ ಪರಾಜಯಗೊಳ್ಳುತ್ತದೆ. ಅದಲ್ಲದೇ ನಾಯಕನನ್ನು ಹರಪನಹಳ್ಳಿಯ ಸೋಮಶೇಖರ ನಾಯಕ ಹತ್ಯೆಮಾಡುತ್ತಾನೆ. ಈ ನಾಯಕನ ಆಳ್ವಿಕೆಯಲ್ಲಿ, ಚಿತ್ರದುರ್ಗ ಅಭಿವೃದ್ಧಿ ಹೊಂದುತ್ತದೆ; ರಾಜ್ಯದ ಆದಾಯವು ೩೦೦,೦೦೦ ದುರ್ಗಿ ಪಗೋಡಗಳ ವರೆಗೆ ತಲುಪುತ್ತದೆ. ನಾಯಕನು ಹಲವಾರು ದೇವಾಲಯಗಳನ್ನು ನಿರ್ಮಿಸಿ ಖ್ಯಾತಿಯನ್ನು ಪಡೆದಿರುವುದರ ಜೊತೆಗೆ ಹಲವಾರು ಪೂಜಾ ಕೈಂಕರ್ಯಗಳನ್ನೂ ಹಾಗು ವಿವಿಧ ದೇವಾಲಗಳಲ್ಲಿ ಹಬ್ಬಗಳ ಆಚರಣೆಗೆ ವ್ಯವಸ್ಥೆ ಮಾಡಿದ್ದನು.

ಕಸ್ತೂರಿ ರಂಗಪ್ಪ ನಾಯಕ II

ಬದಲಾಯಿಸಿ

ಈತನ ನಂತರ ಆತನ ಪುತ್ರ ಕಸ್ತೂರಿ ರಂಗಪ್ಪ ನಾಯಕ II, ರಾಜನಾಗಿ, ಮಾಯಕೊಂಡವನ್ನು ಮರುಸ್ವಾಧೀನಪಡಿಸಿಕೊಳ್ಳುತ್ತಾನೆ. ಮರಾಠ ಸರದಾರ ಮುರಾರಿ ರಾವ್ ಹಾಗು ಅದ್ವಾನಿಯ ಸುಬೇದಾರ ಇವರುಗಳ ಸಹಾಯದಿಂದ ಈತನು ಮಾಯಕೊಂಡವನ್ನು ಮರುವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಕಸ್ತೂರಿ ರಂಗಪ್ಪ ನಾಯಕ ಉತ್ತರ ಹಾಗು ದಕ್ಷಿಣದಲ್ಲಿ ಹಲವಾರು ದಂಡಯಾತ್ರೆಗಳನ್ನು ಮಾಡಿದ್ದನೆಂದು ಹೇಳಲಾಗುತ್ತದೆ. ಅದಲ್ಲದೇ ನಂತರದ ಅದೇ ದಿಶೆಗಳಲ್ಲಿನ ಆತನ ದಂಡಯಾತ್ರೆಗಳಲ್ಲಿ ಬೂದಿಹಾಳ್ ಪ್ರದೇಶದಲ್ಲಿನ ಕೆಲವನ್ನು ಸ್ವಾಧೀನ ಪಡೆಯುವಲ್ಲಿ ಯಶಸ್ಸು ಗಳಿಸುತ್ತಾನೆ. ಸಿರಾದ ಸುಬೇದಾರನೊಂದಿಗೆ ಈತ ಸ್ನೇಹ ಸಂಬಂಧವನ್ನೂ ಸಹ ಹೊಂದಿದ್ದನೆಂದು ಹೇಳಲಾಗುತ್ತದೆ. ಈತ ತನ್ನ ಬದಲಿಗೆ ಯಾವುದೇ ಉತ್ತರಾಧಿಕಾರಿಯನ್ನು ನೇಮಿಸದೇ ೧೭೫೪ರಲ್ಲಿ ಮರಣ ಹೊಂದುತ್ತಾನೆ. ಅಲ್ಲದೇ ಜನಕಲ್-ದುರ್ಗದ ಒಂದನೇ ಭರಮಪ್ಪ ನಾಯಕನ ಪುತ್ರ, ಕಡೆಯ ಮದಕೆರಿ ನಾಯಕನೆಂದು ಕರೆಯಲ್ಪಡುವ ಮದಕರಿ ನಾಯಕನು ಆತನ ಉತ್ತರಾಧಿಕಾರಿಯಾಗುತ್ತಾನೆ.

ರಾಜಾ ವೀರ ಮದಕರಿ ನಾಯಕ

ಬದಲಾಯಿಸಿ

ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕನಾದ, ಮದಕರಿ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಅಲಂಕರಿಸಿದಾಗ ಹನ್ನೆರಡು ವರ್ಷ ವಯಸ್ಸಿನವನಾಗಿದ್ದನು. ಚಿತ್ರದುರ್ಗದ ವೈರಿಗಳು ಮತ್ತೊಮ್ಮೆ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಬೇಡರ ಸಮುದಾಯ ತಮ್ಮ ನಾಯಕನಿಗೆ ನಿಷ್ಠಾವಂತರಾಗಿ ಉಳಿದು ಆತನನ್ನು ರಕ್ಷಿಸುತ್ತಾರೆ. ಕಲ್ಯದುರ್ಗ ಒಬ್ಬನೇ ಅದನ್ನು ಆಕ್ರಮಿಸಲು ಮತ್ತೊಮ್ಮೆ ಪ್ರಯತ್ನಿಸಿ ಸೋಲುತ್ತಾನೆ. ನಂತರ ೧೭೫೯–೬೦ರಲ್ಲಿ, ರಾಯದುರ್ಗ, ಹರಪನಹಳ್ಳಿ, ಹಾಗು ಸವಣೂರಿನ ಏಕೀಕೃತ ಮೈತ್ರಿಕೂಟ ಶತ್ರುಸೈನ್ಯವು ಆಕ್ರಮಣ ನಡೆಸಿತು. ಐಹೊಸ್ಕೆರೆ ಸಮೀಪ ಈ ಕದನ ನಡೆಯುತ್ತದೆ. ಇದರಲ್ಲಿ ಕೆಲವನ್ನು ಕಳೆದುಕೊಂಡರೂ, ಈ ಹಾನಿಯೊಂದಿಗೆಯೇ ಚಿತ್ರದುರ್ಗ ಸೈನ್ಯ ಜಯ ಗಳಿಸುತ್ತದೆ. ಇದರ ನಂತರ ರಾಜ್ಯದ ಗಡಿ ಪ್ರದೇಶಗಳಾದ ತರಿಕೆರೆ ಹಾಗು ಜರಿಮಲೆಯ ನಾಯಕರುಗಳು ಉಂಟುಮಾಡಿದ ಕುಕೃತ್ಯಗಳಿಂದಾಗಿ ಕೆಲವು ಸಣ್ಣಪುಟ್ಟ ಗಲಾಟೆಗಳು ಸಂಭವಿಸುತ್ತವೆ.

ತದನಂತರ ಚಿತ್ರದುರ್ಗವು, ದಕ್ಷಿಣದಲ್ಲಿ ಒಂದು ಬಲಶಾಲಿ ಸೈನ್ಯವಾಗುತ್ತದೆ. ಪರಿಣಾಮವಾಗಿ ಪ್ರಬಲವಾಗಿದ್ದ ಹೈದರ್ ಅಲಿ ಹಾಗು ಪೇಶ್ವೆಗಳು ಪರಸ್ಪರ ಕದನಕ್ಕೆ ಇದರ ಸಹಾಯ ಯಾಚಿಸುತ್ತಾರೆ. ನಾಯಕನು, ಬಂಕಾಪುರ, ನಿಜಗಲ್, ಬಿದನೂರು, ಹಾಗು ಮರಾಠರ ವಿರುದ್ಧದ ಕದನಗಳಲ್ಲಿ ಮೊದಲ ಬಾರಿಗೆ ಹೈದರ್ ಅಲಿಗೆ ಸಹಾಯ ಮಾಡಿರುತ್ತಾನೆ. ಇದರ ಹೊರತಾಗಿಯೂ, ನವಾಬನು ಚಿತ್ರದುರ್ಗವನ್ನು ಆಕ್ರಮಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತಾನೆ. ೧೭೭೭ರಲ್ಲಿ, ಮರಾಠ ಹಾಗು ನಿಜಾಮರ ಮಿತ್ರಕೂಟ ಸೈನ್ಯದಿಂದ ಹೈದರ್, ಭಯಾನಕ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಈ ನಡುವೆ ಚಿತ್ರದುರ್ಗದ ನಾಯಕನು ತನ್ನ ಸ್ವಾಮಿನಿಷ್ಠೆಯನ್ನು ಬದಲಿಸುತ್ತಾನೆ. ಅಲ್ಲದೇ ನಾಯಕನು ದೊಡ್ಡ ಮೊತ್ತದ ಕಪ್ಪವನ್ನು ಸಲ್ಲಿಸುವ ಪ್ರಸ್ತಾಪದ ಹೊರತಾಗಿಯೂ, ಹೈದರ್ ಅದನ್ನು ನಿರಾಕರಿಸಿ ಚಿತ್ರದುರ್ಗದೆಡೆಗೆ ದಾಳಿಗಾಗಿ ಕ್ರಮಣ ಮಾಡುತ್ತಾನೆ. ಕೋಟೆಯನ್ನು ಪ್ರವೇಶಿಸಲು ಸೂಕ್ತ ತಯಾರಿಯನ್ನು ಮಾಡಿಕೊಳ್ಳುವವರೆಗೂ ಕೆಲವು ತಿಂಗಳುಗಳ ಕಾಲ ಮುತ್ತಿಗೆ ನಿಷ್ಫಲವಾಗುತ್ತದೆ. ಅಲ್ಲದೇ ಹದಿಮೂರು ಲಕ್ಷಗಳ ಪಗೋಡಗಳನ್ನು ಮುಖ್ಯಸ್ಥ, ನಾಯಕನಿಂದ ಕಪ್ಪವಾಗಿ ಪಡೆಯಲಾಗುತ್ತದೆ. ಮರಾಠ ಸೈನ್ಯದ ಕಾರ್ಯಾಚರಣೆ ಮುಗಿದ ನಂತರ, ಹೈದರ್ ಮತ್ತೊಮ್ಮೆ ಚಿತ್ರದುರ್ಗದ ನಾಯಕನೊಂದಿಗೆ ಪ್ರಸ್ತಾಪ ಮಾಡುತ್ತಾನೆ. ಆದರೆ ಈ ಸಂದರ್ಭದಲ್ಲಿ ಹೈದರ್ ನ ವಿರುದ್ಧ ಸೈನ್ಯವು ತಿಂಗಳುಗಟ್ಟಲೇ ತನ್ನ ಪ್ರತಿರೋಧವನ್ನು ಮುಂದುವರೆಸುತ್ತದೆ. ಪಾಳೆಯಗಾರರ ಸೇವೆಯಲ್ಲಿದ್ದ ವಿಶ್ವಾಸಘಾತುಕ ಮುಸಲ್ಮಾನ ಅಧಿಕಾರಿಗಳ ಸಹಾಯದೊಂದಿಗೆ, ಚಿತ್ರದುರ್ಗವನ್ನು ೧೭೭೯ರಲ್ಲಿ ವಶಪಡಿಸಿಕೊಳ್ಳಲಾಯಿತು. ಮದಕೆರಿ ನಾಯಕ ಹಾಗು ಆತನ ಕುಟುಂಬವನ್ನು ಶ್ರೀರಂಗಪಟ್ಟಣಕ್ಕೆ ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. ಚಿತ್ರದುರ್ಗದ ೨೦,೦೦೦ ಬೇಡ ಸಮುದಾಯದ ಸೈನಿಕರನ್ನು ಶ್ರೀರಂಗಪಟ್ಟಣ ದ್ವೀಪಕ್ಕೆ(ಮೈಸೂರು)ಕಳುಹಿಸಲಾಯಿತು. ಇದರ ಏಕೈಕ ಉದ್ದೇಶವೆಂದರೆ ಅವರ ಬಲವನ್ನು ಮುರಿಯುವುದೇ ಆಗಿತ್ತು. ನಾಯಕನ ಮರಣಾನಂತರ, ಚಿತ್ರದುರ್ಗದ ಬೊಕ್ಕಸವು ಹೈದರಾಲಿಯ ವಶಕ್ಕೆ ಬಂದಿತೆಂದು ಹೇಳಲಾಗುತ್ತದೆ. ಇತರ ಸಂಪತ್ತಿನೊಂದಿಗೆ , ಈ ಕೆಳಕಂಡ ಪ್ರಮಾಣದಲ್ಲಿ ನಾಣ್ಯಗಳು ದೊರಕಿತೆಂದು ಹೇಳಲಾಗುತ್ತದೆ: ೪೦೦,೦೦೦ ರಜತ; ೧೦೦,೦೦೦ ರಾಜನಾಣ್ಯ; ೧,೭೦,೦೦೦ ಅಶ್ರಾಫಿ; ೨,೫೦೦,೦೦ ದಬೋಲಿಕದಲಿ; ಹಾಗು ೧,೦೦೦,೦೦೦ ಚವುರಿ ಇತ್ಯಾದಿ.

  ಇವರು ಹಲವಾರು ದೇವಾಲಯಗಳನ್ನು ಕಟ್ಟಿಸಿದರು. ಭರಮಸಾಗರ ಮತ್ತು ಭಿಮಸಾಗರ ಜಲಾಶಯಗಳು ಇವರ ಕೊಡುಗೆಗಳಾಗಿವೆ.

ಮೂಲಗಳು

ಬದಲಾಯಿಸಿ
  • ಭಾರತದ ಭೂವಿವರ ನಿಘಂಟು, ಚಿತ್ರದುರ್ಗ ಜಿಲ್ಲೆ, ೧೯೬೭.
  • ಮೈಸೂರಿನ ಭೂವಿವರ ನಿಘಂಟು B. L. ರೈಸ್ ರಿಂದ

ಉಲ್ಲೇಖಗಳು

ಬದಲಾಯಿಸಿ
  1. https://netfiles.uiuc.edu/blewis/www/chitradurga.htm