ಚನ್ನಗಿರಿ


ಇದು ಕರ್ನಾಟಕ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಗೆ ಸೇರಿದ ಪಟ್ಟಣ ಮತ್ತು ತಾಲೂಕು ಕೇಂದ್ರ.ಚನ್ನಗಿರಿ ಬಯಲುಸೀಮೆ ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ . ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಯನ್ನೂ ಯಥೇಚ್ಛವಾಗಿ ಬೆಳೆಯುತ್ತಾರೆ ಅದಕ್ಕೆ,ಚನ್ನಗಿರಿ ಯನ್ನು ಅಡಿಕೆ ನಾಡು ಎಂದು ಕರೆಯುತ್ತಾರೆ.ಮುಖ್ಯ ಆಹಾರ ಬೆಳೆಗಳಾಗಿ ಭತ್ತ ಮತ್ತು ರಾಗಿಯನ್ನು ಬೆಳೆಗಳಾಗಿ ಬೆಳೆಯಲಾಗುತ್ತದೆ.

ದಾವಣಗೆರೆ ಜಿಲ್ಲಾ ಕೇಂದ್ರವಾದರು ,ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳು ತುಂಬ ಹತ್ತಿರವಾದ್ದರಿಂದ, ಜನರ ಸಂಪರ್ಕ ಹೆಚ್ಚಾಗಿ ಈ ಎರಡು ಪಟ್ಟಣಗಳಿಗೆ ಇರುತ್ತದೆ.

ಚನ್ನಗಿರಿ ಭಾರತದ ಕರ್ನಾಟಕ ರಾಜ್ಯದ ದಾವನಗರೆ ಜಿಲ್ಲೆಯ ಒಂದು ಪಟ್ಟಣ. ಇದು ದಾವಣಗೆರೆ ಜಿಲ್ಲೆಯ ತಾಲ್ಲೂಕು ಕೇಂದ್ರ ಕಚೇರಿಯಾಗಿದೆ. 1997 ರವರೆಗೆ ಈ ನಗರವು ಶಿವಮೊಗ್ಗ ಜಿಲ್ಲೆಯ ಭಾಗವಾಗಿತ್ತು, ಇದು ಹೊಸದಾಗಿ ರೂಪುಗೊಂಡ ದಾವನಾಗರೆ ಜಿಲ್ಲೆಯ ಭಾಗವಾಗುವವರೆಗೆ, ಈ ಬದಲಾವಣೆಯನ್ನು ನಿವಾಸಿಗಳು ವಿರೋಧಿಸಿದರು. ಶಿವಮೊಗ್ಗ ಪಟ್ಟಣದಿಂದ ಕೇವಲ 40 ಕಿ.ಮೀ ದೂರದಲ್ಲಿದೆ ಆದರೆ ದಾವಣಗೆರೆ 60 ಕಿ.ಮೀ. ಭದ್ರಾವತಿ, ಕೈಗಾರಿಕಾ ಪಟ್ಟಣವು ಚನ್ನಗಿರಿಯಿಂದ ಕೇವಲ 32 ಕಿ.ಮೀ ದೂರದಲ್ಲಿದೆ.

ಹೆಸರಿನ ವ್ಯುತ್ಪತ್ತಿ ಬದಲಾಯಿಸಿ

ಕೆಳದಿಯ ರಾಣಿ ಚೆನ್ನಮ್ಮ(೧೬೭೨-೧೬೯೭) ಈ ಪ್ರಾಂತ್ಯಕ್ಕೆ ರಾಣಿಯಾಗಿದ್ದರು.ಈ ಊರಿಗೆ ಅವರ ಹೆಸರು ನೀಡಲಾಗಿದೆ.[೧]

ಪ್ರಾದೇಶಿಕ ಭೂಗೋಳ ಬದಲಾಯಿಸಿ

ಚನ್ನಗಿರಿಯ ಭೌಗೋಳಿಕವಾಗಿ ೧೪.೦೩'ಉ, ಹಾಗೂ೭೫.೯೩'ಪೂ.ಅಕ್ಷಾಂಶದಲ್ಲಿದೆ [೨] .ಚನ್ನಗಿರಿ ನಗರ ಸಮುದ್ರ ಮಟ್ಟದಿಂದ 662 ಮೀಟರುಗಳ(2171 ಅಡಿ) ಎತ್ತರದಲ್ಲಿದೆ.

ಚನ್ನಗಿರಿ- ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಮುಖ್ಯ ಸ್ಥಳ, ಜಿಲ್ಲೆಯ ಪೂರ್ವಭಾಗದಲ್ಲಿದೆ. ಚನ್ನಗಿರಿ ತಾಲ್ಲೂಕಿನ ಪಶ್ಚಿಮದಲ್ಲಿ ಹೊನ್ನಾಳಿ ಮತ್ತು ಭದ್ರಾವತಿ ತಾಲ್ಲೂಕುಗಳು, ಉತ್ತರ ಮತ್ತು ಪೂರ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು, ದಕ್ಷಿಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು-ಇವು ತಾಲ್ಲೂಕಿನ ಮೇರೆಗಳು. ತಾಲ್ಲೂಕಿನ ವಿಸ್ತಿರ್ಣ 1197.7 ಚ.ಕಿಮೀ. ಇದರಲ್ಲಿ 4 ಹೋಬಳಿಗಳೂ 246 ಹಳ್ಳಿಗಳೂ ಇವೆ. ಜನಸಂಖ್ಯೆ 2,92,362 (2001). 1961ರಲ್ಲಿ 1,45,811; 1971 ರಲ್ಲಿ 1,66,560. ಜನಸಾಂದ್ರತೆ ಚ.ಮೈ.ಗೆ 315.

ತಾಲ್ಲೂಕಿನ ದಕ್ಷಿಣ ಹಾಗೂ ಪಶ್ಚಿಮಭಾಗದಲ್ಲಿ ಬೆಟ್ಟಗಳ ಸಾಲುಗಳಿವೆ. ಇವುಗಳಿಂದ ಹರಿದುಬರುವ ತೊರೆಗಳು ಶಾಂತಿಸಾಗರ (ಸೂಳೆಕೆರೆ) ಎನ್ನುವ 40 ಮೈ. ಸುತ್ತಳತೆಯುಳ್ಳ, ಕೆರೆಯನ್ನು ಸೇರುತ್ತದೆ. ಇಲ್ಲಿಂದ ಹರಿದು ಹರಿಹರದ ಬಳಿಯಲ್ಲಿ ತುಂಗಭದ್ರಾ ನದಿಯನ್ನು ಸೇರುವ ಹೊಳೆಗೆ ಹರಿದ್ರಾ ಎಂದು ಹೆಸರು. ಈ ತಾಲ್ಲೂಕಿನ ಉಳಿದ ಪ್ರದೇಶ ಮೈದಾನ. ಇಲ್ಲಿ ವಿಸ್ತಾರವಾದ ಹುಲ್ಲುಗಾವಲುಗಳುಂಟು. ಆದುದರಿಂದ ಶಿವಮೊಗ್ಗ ಜಿಲ್ಲೆಯ ಇತರ ಕಡೆಗಳಿಗಿಂತ ಈ ತಾಲ್ಲೂಕಿನ ದನಕರುಗಳು ಉತ್ತಮವಾದವು. ಈ ತಾಲ್ಲೂಕಿನ ಉತ್ತರದಲ್ಲಿ ತೋಟಗಳೂ ಕಬ್ಬಿನ ಗದೆಗಳೂ ಇವೆ. ಶಾಂತಿಸಾಗರದ ಸುತ್ತಮುತ್ತಲ ಪ್ರದೇಶವನ್ನು ಬಹಳ ವರ್ಷಗಳವರೆಗೆ ನಿರ್ಲಕ್ಷಿಸಲಾಗಿತ್ತು. ಆದರೆ ಇತ್ತೀಚೆಗೆ ಕಪ್ಪು ಮತ್ತು ಕೆಂಪು ಮಣ್ಣು ಇರುವ ಪ್ರದೇಶಗಳನ್ನು ವ್ಯವಸಾಯಕ್ಕಾಗಿ ಉತ್ತಮಗೊಳಿಸಲಾಗಿದೆ. ಹತ್ತಿರದಲ್ಲಿರುವ ಭದ್ರಾ ಜಲಾಶಯಕ್ಕೂ ಶಾಂತಿಸಾಗರಕ್ಕೂ ಸಂಬಂಧವೇರ್ಪಡಿಸಿರುವುದರಿಂದ ನೀರಾವರಿ ಸೌಲಭ್ಯ ಅಧಿಕವಾಗಿ ಲಭ್ಯವಾಗಿ, ವ್ಯವಸಾಯ ವಾಣಿಜ್ಯಗಳಲ್ಲಿ ಈ ತಾಲ್ಲೂಕಿನ ಪ್ರಾಮುಖ್ಯ ಹೆಚ್ಚಾಗತೊಡಗಿದೆ.

ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ ಪಶ್ಚಿಮಕ್ಕೆ 14 ಮೈ. ಮತ್ತು ಶಿವಮೊಗ್ಗದ ಈಶಾನ್ಯಕ್ಕೆ ಭದ್ರಾವತಿ-ಚಿತ್ರದುರ್ಗ ರಸ್ತೆಯಲ್ಲಿ 33 ಮೈ. ದೂರದಲ್ಲಿ ಉ.ಅ. 140 1' ಮತ್ತು ಪೂರೇ. 75059' ಮೇಲಿರುವ ಚನ್ನಗಿರಿ ಪಟ್ಟಣದ ವಿಸ್ತೀರ್ಣ 2.02 ಚ.ಮೈ. (5.23 ಚ.ಕಿ.ಮೀ.) ಜನಸಂಖ್ಯೆ 18,517 (2001). ಇಲ್ಲಿ ಪುರಸಭೆಯಿದೆ. ಟೀಪುವಿನ ಸೈನ್ಯದಲ್ಲಿದ್ದು, 1857 ರ ಬಂಡಾಯಕ್ಕೆ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರಲ್ಲೊಬ್ಬನಾದ ಧೋಂಡಿಯ ವಾಫ್ ಚನ್ನಗಿರಿಯವನು.

ಈಗಿನ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಸುಂಡಿಯಿಂದ ಇದರ ಆಡಳಿತ ನಡೆಯುತ್ತಿತ್ತು. ಈ ಪ್ರದೇಶವೆಲ್ಲ ಗಂಗರ ಆಳ್ವಿಕೆಗೆ ಒಳಪಟ್ಟಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. 12ನೆಯ ಶತಮಾನದಲ್ಲಿ ಇದು ಚಾಳುಕ್ಯ ಚಕ್ರಾಧಿಪತ್ಯದ ಒಂದು ಭಾಗವಾಗಿ ನೊಣಂಬವಾಡಿ 32 ಸಾಸಿರ ಪ್ರಾಂತ್ಯದಲ್ಲಿತ್ತು. ಇದನ್ನು ಆಳುತ್ತಿದ್ದವನು ಉಚ್ಚಂಗಿಯ ಪಾಂಡ್ಯ. 16ನೆಯ ಶತಮಾನದಲ್ಲೂ ಈ ಪ್ರದೇಶ ಉಚ್ಚಂಗಿಯ ಜಿಲ್ಲೆಯ ಭಾಗವಾಗಿತ್ತು.; ಸಂತೆಬೆನ್ನೂರಿಗೆ ಸೇರಿತ್ತು. ಚನ್ನಗಿರಿ ಪಟ್ಟಣ 17ನೆಯ ಶತಮಾನದ ಅಂತ್ಯದಲ್ಲಿ ಬಿದನೂರು ರಾಜ್ಯದ ವಶಕ್ಕೆ ಬಂತು. ಅದರ ರಾಣಿ ಚೆನ್ನಮ್ಮಾಜಿ ಇಲ್ಲೊಂದು ಕೋಟೆಯನ್ನು ಕಟ್ಟಿಸಿ ಈ ಪಟ್ಟಣಕ್ಕೆ ತನ್ನ ಹೆಸರನ್ನಿಟ್ಟು ಇದನ್ನು ತನ್ನ ತಂಗಿಗೆ ಜಹಗೀರಿಯಾಗಿ ಕೊಟ್ಟಳು.

ಇಲ್ಲಿಯ ಕಲ್ಲೇಶ್ವರ ದೇವಾಲಯ ಹೊಯ್ಸಳ ಶೈಲಿಯ ಹಳೆಯ ಕಟ್ಟಡವೆಂದು ಕಾಣುತ್ತದೆ. ಈ ದೇವಾಲಯ ದಕ್ಷಿಣಾಭಿಮುಖವಾಗಿದೆ. ಇದರ ಎರಡು ಗರ್ಭಗೃಹಗಳ ಪೈಕಿ ಒಂದು ದಕ್ಷಿಣಾಭಿಮುಖವಾಗಿದೆ. ಇದರಲ್ಲಿ 5' ಎತ್ತರದ ಕೇಶವ ವಿಗ್ರಹವಿದೆ. ಇನ್ನೊಂದು ಪೂರ್ವಾಭಿಮುಖವಾಗಿದೆ. ಅಲ್ಲಿ ಲಿಂಗವಿದೆ.

ನಗರದ ನೈಋತ್ಯ ಮೂಲೆಯಲ್ಲಿ ಇರುವ ಸಣ್ಣಬೆಟ್ಟದ ಮೇಲೆ ಕೋಟೆಯೊಂದುಂಟು. ಇದೇ ಚೆನ್ನಮ್ಮಾಜಿ ಕಟ್ಟಿಸಿದ್ದು. ಬೆಟ್ಟದ ತುದಿಯಲ್ಲಿರುವ ದೇವಸ್ಥಾನ ಬೇಟೆ ರಂಗನಾಥಸ್ವಾಮಿಯದು. ಈ ಸ್ಥಳದಿಂದ ಕಾಣುವ ಸುತ್ತಲಿನ ದೃಶ್ಯಸುಂದರವಾದ್ದು. ಉತ್ತರದ ಕಡೆಗೆ 12 ಮೈಲಿ ದೂರದಲ್ಲಿರುವ ಸೂಳೆಕೆರೆ ರಮ್ಯವಾಗಿ ಕಾಣಿಸುತ್ತದೆ. ಬೇಟೆ ರಂಗನಾಥ ಸ್ವಾಮಿಯ ದೇವಾಲಯದ ಮೂಲವಿಗ್ರಹದ ಎತ್ತರ 3'. ಶಂಖ, ಚಕ್ರ, ಬಿಲ್ಲು ಬಾಣಗಳಿಂದ ಅಲಂಕೃತವಾಗಿರುವ ಈ ಮೂರ್ತಿ ಬೇಟೆಗಾರನ ಉಡುಪು ತೊಡವುಗಳಿಂದ ಕೂಡಿದೆ.

ಕಲ್ಲುಮಠ ಎನ್ನುವ ಒಂದು ವೀರಶೈವ ಮಠವೂ ಇಲ್ಲುಂಟು. ಇಲ್ಲಿರುವ ಶಾಸನಗಳ ಅಕ್ಷರಗಳು ಮಾಸಿದೆ. ಇಲ್ಲಿಯ ದೊಡ್ಡ ಮಸೀದಿಯಲ್ಲಿ ಮೊಹಬ್ಬತ್-ಷಾ-ಮಸ್ತಾನ್ ಖಾದ್ರಿ ಎನ್ನುವವರ ಗೋರಿಯಿಂಟು. ಇದು 1636ರಂದು ಟೀಪು, ದಿವಾನ್ ಪೂರ್ಣಯ್ಯ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು ಈ ಮಸೀದಿಗೆ ಸನ್ನದಗಳನ್ನು ನೀಡಿದ್ದರೆಂದು ತಿಳಿದುಬರುತ್ತದೆ. ಚನ್ನಗಿರಿಯಿಂದ ಭದ್ರಾವತಿ, ಹೊಳಲ್ಕೆರೆಗಳಿಗೂ, ಶಿವನಿ, ಹೊಳಹೊನ್ನೂರು, ನಲ್ಲೂರು, ಬಸವಾಪಟ್ಟಣ, ಕಕನೂರು, ಸಂತೆಬೆನ್ನೂರು, ತ್ಯಾವಣಗಿ, ಬಾಡಗಳ ಕಡೆಗೂ ರಸ್ತೆಗಳುಂಟು. ಬಸ್ಸು ಸೌಕರ್ಯವಿದೆ. ಭದ್ರಾವತಿ-ಚಿತ್ರದುರ್ಗ ರಸ್ತೆ ಈ ಪಟ್ಟಣದ ಮೂಲಕ ಸಾಗುತ್ತದೆ. ಬೆಂಗಳೂರು-ಪುಣೆ ರೈಲುಮಾರ್ಗ ಚನ್ನಗಿರಿ ತಾಲ್ಲೂಕಿನ ಪೂರ್ವದ ಅಂಚಿನಲ್ಲಿ ಹಾದುಹೋಗುತ್ತದೆ.

ಜನಾಂಗಸ್ಥಿತಿ ಅಧ್ಯಯನ ಬದಲಾಯಿಸಿ

2001 ಸಂವತ್ಸರದ ಭಾರತದೇಶ ಜನಗಣನೆ ಪ್ರಕಾರ ಚನ್ನಗಿರಿಯಜನಸಂಖ್ಯೆ 18,517 .ಇದರಲ್ಲಿ ಗಂಡುಜನ 52% ಮತು ಹೆಣ್ಣುಜನಗಳು 48% ಇದ್ದಾರೆ.ಜನರಲ್ಲಿ ಅಕ್ಷರಸ್ಥರು 71% ಇದ್ದಾರೆ.ಗಂಡು ಸಾಕ್ಷರಿಗಳು 74% ಹಾಗೂ ಹೆಣ್ಣು ಸಾಕ್ಷರಿಗಳು67% ಆಗಿದ್ದಾರೆ.ಜನಸ್ಂಖ್ಯೆಯಲ್ಲಿ ೧೩% ಜನರು ೬ವರ್ಷಕ್ಕಿಂತೆ ಕಡಿಮೆ ವಯಸ್ಸಿನವರು.ಭೌಗೋಳಿಕವಾಗಿ ಇದು ಅರ್ಧ ಮಲ್ನಾಡು ಪ್ರಾಂತವಾಗಿರುತ್ತದೆ. [೩]

ಕೋಟೆ ಬದಲಾಯಿಸಿ

ಚನ್ನಗಿರಿಯ ಬೆಟ್ಟದ ಮೇಲಿನ ಕೋಟೆಯು ಸುಮಾರು ಕ್ರಿ.ಶ.೧೭೭೦ರಲ್ಲಿ ಕಟ್ಟಲಾಗಿದೆ. ಕೋಟೆಯ ಒಳಗೆ ಶ್ರೀರಂಗನಾಥ ಸ್ವಾಮಿಯ ದೇವಾಲಯವಿದೆ.

ಪ್ರಮುಖ ವ್ಯಕ್ತಿಗಳು ಬದಲಾಯಿಸಿ

ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. Annual Report of the Mysore Archaeological department for the year 1937 Archived 2014-11-06 ವೇಬ್ಯಾಕ್ ಮೆಷಿನ್ ನಲ್ಲಿ. Archeological Survey of India, Government Of India
  2. Falling Rain Genomics, Inc - Channagiri.
  3. Census 2011 Official website of Office of The Registrar General & Census