ಶಿಕಾರಿಪುರವು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಕೇಂದ್ರ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಇದು ಕರ್ನಾಟಕದ ಮಲೆನಾಡು ಭಾಗದಲ್ಲಿ ಇರುವ ಊರು.

Shikaripur
ಶಿಕಾರಿಪುರ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಶಿವಮೊಗ್ಗ
ಮಲೆನಾಡು Subdivisionಸಾಗರ
Elevation
೬೦೩ m (೧,೯೭೮ ft)
Population
 (2001)
 • Total೩೧,೫೦೮
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)

ಇತಿಹಾಸ

ಬದಲಾಯಿಸಿ

ಶಿವಮೊಗ್ಗದ ವಾಯುವ್ಯಕ್ಕೆ ೫೨ಕಿಮೀ ದೂರದಲ್ಲಿ ಕುಮದ್ವತಿ ನದಿಯ ಬಲದಂಡೆಯ ಮೇಲಿದೆ.

ಈ ಊರಿನ ಸಮೀಪ ಕುಮದ್ವತಿ ನದಿ ಹರಿಯುತ್ತದೆ,ಸ್ಥಳೀಯರು ಈ ನದಿಯನ್ನು ಗೌರಿಹಳ್ಳ ಎಂದೂ ಕರೆಯುವರು.

ಈ ತಾಲ್ಲೂಕನ್ನು ಪೂರ್ವ ಮತ್ತು ಆಗ್ನೇಯಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು, ಉತ್ತರ ಈಶಾನ್ಯಕ್ಕೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕು, ಪಶ್ಚಿಮ ಮತ್ತು ವಾಯವ್ಯಕ್ಕೆ ಸೊರಬ ತಾಲ್ಲೂಕು, ನೈಋತ್ಯ ಮತ್ತು ಪಶ್ಚಿಮಕ್ಕೆ ಸಾಗರ ತಾಲ್ಲೂಕು, ದಕ್ಷಿಣಕ್ಕೆ ಶಿವಮೊಗ್ಗ ತಾಲ್ಲೂಕು ಸುತ್ತುವರಿದಿವೆ. ಅಂಜನಪುರ, ಶಿಕಾರಿಪುರ, ಹೊಸೂರು, ಉಡುತಡಿ ಮತ್ತು ತಾಳಗುಂದ ಹೋಬಳಿಗಳಿದ್ದು ೨ ಪಟ್ಟಣಗಳೂ ೧೭೫ಗ್ರಾಮಗಳೂ ಇವೆ. ಸಾಗರ ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕಿನ ವಿಸ್ತೀರ್ಣ ೯೮೬.೪ ಚ. ಕಿಮೀ. ಜನಸಂಖ್ಯೆ ೨,೧೩,೧೧೫.

ಈ ತಾಲ್ಲೂಕು ಮಲೆನಾಡು ಮತ್ತು ಸ್ವಲ್ಪ ಪ್ರಮಾಣದ ಮೈದಾನ ಪ್ರದೇಶ ದಲ್ಲಿ ಇರುವುದರಿಂದ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ದಟ್ಟ ಕಾಡುಗಳೂ ಪೂರ್ವದ ಕಡೆ ತೆಳುವಾದ ಕುರುಚಲು ಕಾಡೂ ಕಾಡು ಬರುತ್ತದೆ. ಇಲ್ಲಿನ ಕಾಡುಗಳಲ್ಲಿ ಮತ್ತಿ, ಹೊನ್ನೆ, ನಂದಿ, ಬಿಲ್ವಾರ, ತಾರೆ, ಕಣಿಗಲು, ಶ್ರೀಗಂಧ, ಬೇವು, ದಿಂಡಿಗ, ಅಳಲೆ, ಹೊಂಗೆ, ಜಾಲಿ, ಕಾರೆ ಇತ್ಯಾದಿ ಮರಗಿಡಗಳಿವೆ. ತಾಲ್ಲೂಕಿನ ಅರಣ್ಯ ಪ್ರದೇಶ ೧೭,೪೧೭ಹೆಕ್ಟೇರ್. ಈ ತಾಲ್ಲೂಕಿನಲ್ಲಿ ವಾರ್ಷಿಕ ಮಳೆ ೧,೧೧೭.೫೧ ಮಿಮೀ. ಜೂನ್‍ನಿಂದ ಅಕ್ಟೋಬರ್ ಹೆಚ್ಚು ಮಳೆ ಬೀಳುವ ಕಾಲ.

ಕುಮುದ್ವತಿ ಈ ತಾಲ್ಲೂಕಿನ ಮುಖ್ಯ ನದಿ. ಹುಮಚದ ಹತ್ತಿರ ಅಗಸ್ತ್ಯ ಪರ್ವತದಲ್ಲಿ (ಬಿಲೇಶ್ವರಬೆಟ್ಟ) ಹುಟ್ಟಿ ಉತ್ತರಾಭಿಮುಖವಾಗಿ ಹೊಸನಗರ ತಾಲ್ಲೂಕಿನ ಈಶಾನ್ಯ ಭಾಗದಲ್ಲಿ ಹರಿದು, ಮುಂದೆ ಶಿವಮೊಗ್ಗ ತಾಲ್ಲೂಕಿನ ಕುಂಸಿ ಮೂಲಕ ಶಿಕಾರಿಪುರ ತಾಲ್ಲೂಕನ್ನು ದಕ್ಷಿಣದಲ್ಲಿ ಪ್ರವೇಶಿಸಿ, ಅಂಜನಪುರ ಜಲಾಶಯಕ್ಕೆ ನೀರೊದಗಿಸಿ, ಮುಂದೆ ಶಿಕಾರಿಪುರ ವನ್ನು ಬಳಸಿಕೊಂಡು ತಾಲ್ಲೂಕು ಮತ್ತು ಜಿಲ್ಲೆಯ ಎಲ್ಲೆಯಲ್ಲಿರುವ ಮದಗದ ಕೆರೆಗೆ ಜಲಾಶ್ರಯ ನೀಡಿ ಮುಂದುವರಿದು ತುಂಗಭದ್ರಾ ನದಿಯನ್ನು ಸೇರುತ್ತದೆ. ಈ ನದಿಗೆ ಚೊರಾಡಿ ನದಿ ಎಂದೂ ಹೆಸರಿದೆ. ತಾಲ್ಲೂಕಿನಲ್ಲಿ ಇದರ ಒಟ್ಟು ಹರಿವಿನ ಉದ್ದ ೧೭.೭ ಕಿಮೀ.

ತಾಲ್ಲೂಕಿನಲ್ಲಿ ಅಂಜನಪುರ ಜಲಾಶಯದಿಂದ ಕುಮುದ್ವತಿ ನದಿಯ ಉಪನದಿ ಸಾಲೂರು ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಅಂಬ್ಲಿಗೋಳ ಜಲಾಶಯದಿಂದಲೂ ತಾಲ್ಲೂಕಿನ ಅಂಚಿನಲ್ಲಿರುವ ಮದಗದ ಕೆರೆಯಿಂದಲೂ ನೀರಾವರಿಗೆ ನೀರೊದಗುವುದು.

ಈ ತಾಲ್ಲೂಕಿನಲ್ಲಿ ಬತ್ತ, ರಾಗಿ, ಕಬ್ಬು, ಹತ್ತಿ, ನೆಲಗಡಲೆ ಬೆಳೆಯುವರು. ಅಡಕೆ ಮತ್ತು ತೆಂಗು ತೋಟದ ಬೆಳೆಗಳು. ಇತ್ತೀಚೆಗೆ ವೆನಿಲಾ ಬೆಳೆಸುತ್ತಿದ್ದಾರೆ. ಗೇರುಬೀಜ, ಮೆಣಸಿನಕಾಯಿ, ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಜೊತೆಗೆ ಅವರೆ, ಹೆಸರು, ತೊಗರಿ ಮುಂತಾದ ದ್ವಿದಳಧಾನ್ಯಗಳನ್ನೂ ಬೆಳೆಯುವುದುಂಟು.

ಸಸ್ಯ ಸಮೃದ್ಧಿಯೊಂದಿಗೆ ಈ ತಾಲ್ಲೂಕಿನಲ್ಲಿ ಪಶುಸಂಪತ್ತೂ ಸಾಕಷ್ಟು ಇದೆ. ಸ್ವಲ್ಪಮಟ್ಟಿಗೆ ಮತ್ಸ್ಯೋದ್ಯಮವಿದೆ. ಮರಕೊಯ್ಯುವುದು, ಹೆಂಚಿನ ತಯಾರಿಕೆ, ಎಣ್ಣೆ ತೆಗೆಯುವುದು ಇವು ಈ ತಾಲ್ಲೂಕಿನ ಮುಖ್ಯ ಉದ್ಯಮಗಳು. ಬಿದಿರು, ಚರ್ಮ, ಕಬ್ಬಿಣ ಕೈಗಾರಿಕೆಗಳೂ ಉಂಟು.

ಶಿಕಾರಿಪುರದ ಬಳಿ ಇರುವ ಮತ್ತೊಂದು ಗ್ರಾಮ ಕಾಗಿನಲೆ, ಇದು ಶಿಕಾರಿಪುರ-ಹೊನ್ನಾಳಿ ರಸ್ತೆಯಲ್ಲಿ ೧೫ ಕಿ.ಮೀ. ದೊರದಲ್ಲಿದೆ.

‍ಈ ತಾಲ್ಲೂಕಿನ ಅಂಜನಪುರದ ಬಳಿ ಕಟ್ಟಿರುವ ಜಲಾಶಯ ಶಿಕಾರಿಪುರದ ದಕ್ಷಿಣಕ್ಕೆ ೧೮ ಕಿಮೀ ದೂರದಲ್ಲೂ ಶಿವಮೊಗ್ಗಕ್ಕೆ ವಾಯವ್ಯದಲ್ಲಿ ೪೪ ಕಿಮೀ ದೂರದಲ್ಲಿ ಇದೆ. ಇಲ್ಲಿ ಮಾರಮ್ಮ ಮತ್ತು ಆಂಜನೇಯ ದೇವಾಲಯಗಳಿವೆ. ಪ್ರಕೃತಿಸೌಂದರ್ಯಕ್ಕೆ ಈ ಸ್ಥಳ ಪ್ರಸಿದ್ಧ.

ಶಿಕಾರಿಪುರದ ವಾಯವ್ಯದಲ್ಲಿ ೧೯ ಕಿಮೀ ದೂರದಲ್ಲಿರುವ ಶಿರಾಳಕೊಪ್ಪ ಒಂದು ಪಟ್ಟಣ. ಸಾಗರ, ಸೊರಬ ಮತ್ತು ಸುತ್ತಲ ಬಳ್ಳಾರಿ, ಧಾರವಾಡ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರದೇಶಗಳಿಗೆ ಇದೊಂದು ಮುಖ್ಯ ಸಂಪರ್ಕ ಮಾರ್ಗ ಮತ್ತು ವ್ಯಾಪಾರಕೇಂದ್ರ

ಶಿಕಾರಿಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಜನಸಂಖ್ಯೆ ೪೬,೦0೯.

ಪ್ರಮುಖ ದೇವಸ್ಠಾನಗಳು

ಬದಲಾಯಿಸಿ

ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನ-ಶಿಕಾರಿಪುರ

ಇದೊಂದು ಪ್ರಾಚೀನ ದೇಗುಲ. ಶ್ರೀ ರಾಮದೂತ ಹನುಮಂತ ಹುಚ್ಚುರಾಯನೆಂದು (ಸಂಸ್ಕೃತದಲ್ಲಿ ಭ್ರಾಂತೇಶ) ಇಲ್ಲಿ ಕರೆಯಲ್ಪಡುವನು. ಈತನೇ ಶಿಕಾರಿಪುರದ ಗ್ರಾಮದೇವತೆ, ದೇಗುಲದ ಮುಖ್ಯದೇವ. ಇಲ್ಲಿ ಸೀತಾ-ಲಕ್ಷ್ಮಣರ ಸಹಿತ ಶ್ರೀರಾಮನ ವಿಗ್ರಹಗಳೂ ಇವೆ. ದೇಗುಲ ಸಮೀಪವೇ ಇರುವ ಕೆರೆಯಲ್ಲಿ ಈಗ ಪೂಜಿಸಲ್ಪಡುತ್ತಿರುವ ಮೂರ್ತಿ ಮುಳುಗಿತ್ತೆಂದೂ, ಭಕ್ತನೋರ್ವನ ಕನಸಿನಲ್ಲಿ ಶ್ರೀ ದೇವರು ಕಾಣಿಸಿಕೊಂಡು ತನ್ನ ಇರುವಿಕೆಯನ್ನು ತಿಳಿಸಿದ ನಂತರ ದೇಗುಲದಲ್ಲಿ ಸ್ಥಾಪಿಸಲಾಯಿತೆಂದೂ ಪ್ರತೀತಿಯಿದೆ. ಮೈಸೂರಿನ ಆಡಳಿತಗಾರ ಟೀಪು ಸುಲ್ತಾನನು ಶ್ರೀ ಹುಚ್ಚೂರಾಯನಿಗೆ ಬಂಗಾರದ ಬಾಸಿಂಗವೇ ಮೊದಲಾದ ಆಭರಣಗಳನ್ನು ನೀಡಿದನೆಂಬ ಇತಿಹಾಸವಿದೆ. ಪ್ರತಿವರ್ಷವೂ ಜರುಗುವ ಜಾತ್ರೆಯು ಬಹುಪ್ರಸಿದ್ಧವಾಗಿದ್ದು, ಸಾವಿರಾರು ಜನ ಆಗ ದೇವರ ದರ್ಶನ ಪಡೆಯುತ್ತಾರೆ. ದೇಗುಲದ ಮುಂದೆ ಹಾದು ಹೋಗುವ ಬೀದಿಯಲ್ಲಿ ಶ್ರೀ ದೇವರನ್ನು ರಥದಲ್ಲಿ ಕೊಂಡು ಹೋಗುವರು. ಈ ರಸ್ತೆಗೆ ಈ ಕಾರಣದಿಂದ ರಥಬೀದಿ ಎಂಬ ಹೆಸರಿದೆ. ಇತ್ತೀಚೆಗಷ್ಟೆ ದೇಗುಲದ ಜೀರ್ಣೋದ್ಧಾರ ನಡೆಯುತ್ತಿದ್ದು, ಪ್ರವೇಶದ್ವಾರದ ಮೇಲೆ ಗದೆ ಹಿಡಿದು ಮೊಣಕಾಲೂರಿ ಕುಳಿತಿರುವ ಮಾರುತಿಯ ಸುಂದರ ವಿಗ್ರಹವನ್ನು ನಿರ್ಮಿಸಲಾಗಿದೆ. ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಒಂದು ಅಭಿವೃದ್ಧಿಯಾದ ತಾಲ್ಲುಕು ಹಾಗು ಇದನ್ನು ಈ ಜಿಲ್ಲೆಯ ಭತ್ತದ ಕಣಜ ಎಂದೆ ಕರೆಯಲಾಗುತ್ತದೆ ಅತಿ ಹೆಚ್ಚು ಭತ್ತ ಬೆಳೆಯುವ ತಾಲ್ಲುಕು.

ಮುಖ್ಯವಾಗಿ ಶಿಕಾರಿಪುರದಿಂದ ೨೩ ಕಿಲೊಮೀಟರ್ ದೂರದಲ್ಲಿ ಬಳ್ಳಿಗಾವಿ ಎನ್ನುವ ಸ್ಥಳವಿದ್ದು ಗತಕಾಲದ ವೈಭವವನ್ನು ಸಾರುತ್ತದೆ.ಈ ಪ್ರದೇಶವು ಹೊಯ್ಸಳರ ಆಳ್ವಿಕೆಯನ್ನು ಕಂಡಿದ್ದು ಕೆಲ ದೇವಸ್ಥಾನಗಳು ಹೊಯ್ಸಳ ಶೈಲಿಯ ಕಟ್ಟಡವನ್ನು ಹೊಂದಿರುತ್ತವೆ ಹಾಗು ಈ ಸ್ಥಳ ನಾಟ್ಯರಾಣಿ ಶಾಂತಲೆಯ ತವರೂರಾಗಿದೆ. ಇಲ್ಲಿ ಕೇದಾರೇಶ್ವರ,ಅಮರನಾಥೇಶ್ವರ ಹಾಗು ಇನ್ನಿತರ ಪ್ರಸಿದ್ಧ ದೇವಸ್ಥಾನಗಳು ಇವೆ.

ಶ್ರೀ ದತ್ತಮಂದಿರ

ಬದಲಾಯಿಸಿ

ಇದನ್ನು ಶ್ರೀ ಕೇವಲಾನಂದರೆಂಬ ಸಂನ್ಯಾಸಿಗಳು ೭೦ರ ದಶಕದಲ್ಲಿ ಸ್ಥಾಪಿಸಿದರು. ಹುಚ್ಚುರಾಯನ ಕೆರೆಯ ದಂಡೆಯಲ್ಲಿದೆ. ಇದೊಂದು ದತ್ತ ಪರಂಪರೆಗೆ ಸೇರಿದ ಆಶ್ರಮ. ಇಲ್ಲಿ ಶ್ರೀ ಶಾರದೆ, ಶ್ರೀ ಶಂಕರಾಚಾರ್ಯ ಹಾಗು ಶ್ರೀ ದತ್ತಾತ್ರೇಯನ ಬಿಳಿಶಿಲೆಯ ವಿಗ್ರಹಗಳಿವೆ ಮತ್ತು ಸ್ವಾಮಿಗಳ ಸಮಾಧಿ ಮಂದಿರವಿದೆ.

ಮುಖ್ಯ ಸ್ಥಳಗಳು

ಬದಲಾಯಿಸಿ

ಉಡುಗಣಿ-ಅಕ್ಕಮಹಾದೇವಿಯ ಜನ್ಮಸ್ಥಳ-ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಇದೆ.ಹಾಗೂ ತೋಗರ್ಸಿ ಮಲ್ಲಿಕಾರ್ಜುನ ದೇವಸ್ಥಾನಗಳು ಇವೆ.

ಈ ಭಾಗದ ಪ್ರಮುಖ ವ್ಯಕ್ತಿಗಳು

ಬದಲಾಯಿಸಿ

ಮಯೂರ ಶರ್ಮ

 • ಅನುಭಾವಿ ಅಲ್ಲಮಪ್ರಭು
 • ಶರಣೆ ಅಕ್ಕಮಹಾದೇವಿ
 • ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ-ಜನ್ಮಸ್ಥಳ
 • ಬಿ.ಎಸ್. ಯಡಿಯೂರಪ್ಪ, ಸನ್ಮಾನ್ಯ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ- ಇವರ ವಿಧಾನ ಸಭಾಕ್ಷೇತ್ರ
 • ಎಸ್.ಆರ್. ರಾವ್, ಹರಪ್ಪಾ-ಮೊಹಂಜೊದಾರೊ ಖ್ಯಾತಿಯ ಪುರಾತತ್ವ ಶಾಸ್ತ್ರ ತಜ್ಞರು
 • ದಿವಂಗತ ಶ್ರೀ ಶಿಕಾರಿಪುರ ಹರಿಹರೇಶ್ವರ, ಅಮೆರಿಕದಲ್ಲಿ ೩೭ ವರ್ಷದುಡಿದು, ಅಲ್ಲಿನ ಕನ್ನಡಜನರ ಮನಸ್ಸನ್ನು ಒಂದುಗೂಡಿಸಿ, ಕನ್ನಡಪರ ಚಟುವಟಿಕೆಗಳನ್ನು ಪ್ರಾರಂಭಿಸಿದರು. ತಮ್ಮ ನಿವೃತ್ತಿಯ ಬಳಿಕ, ಮೈಸೂರಿನಲ್ಲಿ ವಾಸ್ತವ್ಯಹೂಡಿ ಅನವರತ ಕನ್ನಡಕ್ಕಾಗಿ ದುಡಿದ ಕನ್ನಡದ ಪರಿಚಾರಕ.
 • ಅನುಭಾವ ಮಂಟಪದ ವಚನಕಾರರಾದ ಸತ್ಯಕ್ಕ, ಮುಕ್ತಾಯಕ್ಕ, ಅಜಗಣ್ಣ, ಇಕ್ಕದ ಮಾರಯ್ಯ, ಅಂಕದ ಮಾರಯ್ಯ ಇವರೆಲ್ಲಾ ಈ ತಾಲ್ಲೂಕಿನವರೆ
 • ಹೆಚ್.ಎಸ್ ಶಾಂತವೀರಪ್ಪಗೌಡ , ಮಾಜಿ ವಿಧಾನಪರಿ‍‍‍ಷತ್ ಸದಸ್ಯರು.

ರಾಜಕೀಯ

ಬದಲಾಯಿಸಿ
 • ೧೯೫೨-೧೯೫೭ ರ ಚುನಾವಣೆಯಲ್ಲಿ ಶಿಕಾರಿಪುರ ತಾಲ್ಲೂಕು ಸೊರಬ ತಾಲ್ಲೂಕಿನಲ್ಲಿ ಸೇರಿತ್ತು.
 • ೧೯೬೨- ರ ಚುನಾವಣೆಯಲ್ಲಿ ವೀರಪ್ಪ ಕಾಂಗ್ರೆಸನಿಂದ ಗೆಲವು-ಮೀಸಲು ಕ್ಷೇತ್ರ.
 • ೧೯೬೭- ರಲ್ಲಿ ಜಿ.ಬಸವಣ್ಯಪ್ಪ ಸಂಯುಕ್ತ ಸೋಸಿಯಲಿಸ್ಟ ಪಾರ್ಟಿ,೨೧೨೪೧ಅಂತರದಿಂದ ಗೆಲುವು.
 • ೧೯೭೨,೧೯೭೮ರಲ್ಲಿ ಎರಡೂ ಬಾರಿ ಕೆ.ವೆಂಕಟಪ್ಪಗೆಲವು.
 • ೧೯೮೩ - ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಗೆಲುವು.
 • ೧೯೮೫ - ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಗೆಲುವು.
 • ೧೯೮೯ - ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಗೆಲುವು.
 • ೧೯೯೪- ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಗೆಲುವು.
 • ೧೯೯೯ - ಬ.ಎನ್.ಮಹಾಲಿಂಗಪ್ಪ ಕಾಂಗ್ರೆಸಿನಿಂದ ಗೆಲುವು.
 • ೨೦೦೪- ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಗೆಲುವು.
 • ೨೦೦೮- ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಗೆಲುವು.
 • ೨೦೧೩ - ಬಿ.ಎಸ್.ಯಡಿಯೂರಪ್ಪ ಕೆಜೆಪಿಯಿಂದ ಗೆಲವು.
 • ೨೦೧೪- ಬಿ.ವೈ.ರಾಘವೇಂದ್ರ ಬಿಜೆಪಿಯಿಂದ ಗೆಲವು.
 • ೨೦೧೮ - ಬಿ.ಎಸ್.ಯಡಿಯೂರಪ್ಪ ಬಿಜೆಪಿಯಿಂದ ಗೆಲವು.
 • ೨೦೨೩- ಬಿ.ವೈ.ವಿಜಯೇಂದ್ರ ಬಿಜೆಪಿಯಿಂದ ಗೆಲುವು.

ಚರಿತ್ರೆ

ಬದಲಾಯಿಸಿ

ಶಿಕಾರಿಪುರದ ಉತ್ತರಕ್ಕೆ 35 ಕಿಮೀ ದೂರದಲ್ಲಿರುವ ಬಂದಳಿಕೆ ಕದಂಬ ರಾಜರ ಆಳಿಕೆಯಲ್ಲಿ ಒಂದು ಮುಖ್ಯಪಟ್ಟಣವಾಗಿತ್ತು. ಇಲ್ಲಿ ರಾಷ್ಟ್ರಕೂಟ, ಚಳುಕ್ಯ, ಕಳಚುರಿ, ಹೊಯ್ಸಳ, ಸೇವುಣ ಮತ್ತು ವಿಜಯನಗರ ರಾಜರ 30ಕ್ಕೂ ಮಿಕ್ಕು ಶಾಸನಗಳಿವೆ. ಶಾಂತಿನಾಥ ಬಸದಿ, ವೀರಭದ್ರ, ಸೋಮೇಶ್ವರ, ತ್ರಿಮೂರ್ತಿ ಮತ್ತು ಬನಶಂಕರಿ ಮುಂತಾದ ದೇವಾಲಯಗಳಿವೆ.

ಶಿಕಾರಿಪುರಕ್ಕೆ ಈಶಾನ್ಯದಲ್ಲಿ 8 ಕಿಮೀ ದೂರದಲ್ಲಿರುವ ಬೇಗೂರಿನಲ್ಲಿ ಅನೇಕ ಶಾಸನಗಳು ದೊರಕಿವೆ. ಶಿಕಾರಿಪುರಕ್ಕೆ ವಾಯವ್ಯದಲ್ಲಿ 21 ಕಿಮೀ ದೂರದಲ್ಲಿರುವ ಬೆಳಗಾವಿಯನ್ನು ಹಿಂದೆ ಬಳ್ಳಿಗಾವೆ, ಬಳ್ಳಿಗಾಮೆ, ಬಳ್ಳಿಗ್ರಾಮ, ಬಳ್ಳಿಪುರ ಎಂಬುದಾಗಿ ಕರೆಯುತ್ತಿದ್ದರೆಂದು ತಿಳಿದುಬಂದಿದೆ. ಬೆಳಗಾವಿ ಹಿಂದೆ ಧರ್ಮ ಮತ್ತು ವಿದ್ಯಾಕೇಂದ್ರವಾಗಿತ್ತು; ದಕ್ಷಿಣದ ಕೇದಾರ ಎಂದು ಪ್ರಸಿದ್ಧವಾಗಿತ್ತು. ವೀರಶೈವ ಧರ್ಮದ ಕೇಂದ್ರವಾಗಿದ್ದ ಇಲ್ಲಿ ಅನೇಕ ದೇವಾಲಯಗಳಿವೆ.

ಶಿಕಾರಿಪುರಕ್ಕೆ ವಾಯವ್ಯದಲ್ಲಿ ಸು.26 ಕಿಮೀ ದೂರದಲ್ಲಿರುವ ಹೀರೇಜಂಬೂರು ಅನೇಕ ಶಿವಶರಣರ ಸ್ಥಳವೆಂದು ಪ್ರಸಿದ್ಧ. ಶಿಕಾರಿಪುರದ ದಕ್ಷಿಣಕ್ಕೆ 10 ಕಿಮೀ ದೂರದಲ್ಲಿರುವ ಈಸೂರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇತಿಹಾಸ ಸೃಷ್ಟಿಸಿದ ಊರು.

ಶಿಕಾರಿಪುರಕ್ಕೆ ವಾಯವ್ಯದಲ್ಲಿ 37 ಕಿಮೀ ದೂರದಲ್ಲಿರುವ ಮಳವಳ್ಳಿಯಲ್ಲಿ ಎರಡು ಪ್ರಾಕೃತ ಶಾಸನಗಳಿವೆ. ಇಲ್ಲಿನ ರಾಮೇಶ್ವರ ದೇವಾಲಯದ ಮುಂಭಾಗದಲ್ಲಿ ಕೆಲವು ಚಾಳುಕ್ಯ ಶಾಸನಗಳಿವೆ.

ಶಿಕಾರಿಪುರದ ವಾಯವ್ಯಕ್ಕೆ ಸುಮಾರು 26 ಕಿಮೀ ದೂರದಲ್ಲಿರುವ ಮುತ್ತಿಗೆ ಗ್ರಾಮದಲ್ಲಿ ಅಜಗಣ್ಣ ಮತ್ತು ಮುಕ್ತಾಯಕ್ಕ ಈ ಶಿವಶರಣ-ಶರಣೆಯರ ಸಮಾಧಿಗಳೂ ಸಿದ್ಧರಾಮೇಶ್ವರ ದೇವಾಲಯವೂ ಅನೇಕ ವೀರಗಲ್ಲುಗಳೂ ಇವೆ.

ಶಿಕಾರಿಪುರದ ವಾಯವ್ಯದಲ್ಲಿ ಸು. 22 ಕಿಮೀ ದೂರದಲ್ಲಿರುವ ಶಿವಪುರದಲ್ಲಿ ಸಂತ ಬಂಕಯ್ಯನ ಸಮಾಧಿಯಿದೆ. ಶಿಕಾರಿಪುರದ ವಾಯವ್ಯಕ್ಕೆ ಸು. 19 ಕಿಮೀ ದೂರದಲ್ಲಿರುವ ತಡಗಣಿಯಲ್ಲಿ ಕೇದಾರೇಶ್ವರ ದೇವಾಲಯವಿದೆ. ತಡಗಣಿ ಮತ್ತು ಉಡುತಡಿ ಗ್ರಾಮಗಳ ಮಧ್ಯೆ ಮಲ್ಲಿಕಾರ್ಜುನ ದೇವಾಲಯವಿದೆ.

ಶಿಕಾರಿಪುರಕ್ಕೆ ವಾಯವ್ಯದಲ್ಲಿ 24 ಕಿಮೀ ದೂರದಲ್ಲಿರುವ ತಾಳಗುಂದದಲ್ಲಿ ಗಂಗಾಧರೇಶ್ವರ ದೇವಾಲಯ ಮತ್ತು ಪ್ರಭುದೇವರ ಗದ್ದುಗೆ ಇದೆ. ಶಿಕಾರಿಪುರಕ್ಕೆ ವಾಯವ್ಯದಲ್ಲಿ ಸು. 29 ಕಿಮೀ ದೂರದಲ್ಲಿರುವ ತೊಗರ್ಸಿಯಲ್ಲಿ ಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯವಿದೆ. ಈ ದೇವಾಲಯ ಕೆಳದಿ ನಾಯಕರ ಕಾಲಕ್ಕೆ ಸೇರಿದ್ದೆಂದು ಹೇಳುವರು.

ಶಿಕಾರಿಪುರದ ವಾಯವ್ಯದಲ್ಲಿ 14 ಕಿಮೀ ದೂರದಲ್ಲಿ ಉಡುತಡಿ ಗ್ರಾಮವಿದೆ. ಇದು ಅಕ್ಕಮಹಾದೇವಿಯ ಜನ್ಮಸ್ಥಳ ವೆಂದು ಪ್ರಸಿದ್ಧ. ಇಲ್ಲಿ ಗುರುಲಿಂಗ ಚನ್ನಮಲ್ಲಿಕಾರ್ಜುನ ಮಠ, ಚನ್ನಮಲ್ಲಿ ಕಾರ್ಜುನ ದೇವಾಲಯ, 1973ರಲ್ಲಿ ಕಟ್ಟಿರುವ ಅಕ್ಕಮಹಾದೇವಿ ದೇವಾಲಯ ಇವೆ. ಮದಗದ ಕೆರೆ ಮತ್ತು ಅಂಜನಪುರ ಜಲಾಶಯ ಪ್ರದೇಶಗಳು ರಮಣೀಯ ದೃಶ್ಯಗಳಿಂದ ಕೂಡಿವೆ.

ಈ ಪಟ್ಟಣವನ್ನು ಮಳೆಯ ಎಂಬವನು ಸ್ಥಾಪಿಸಿದುದರಿಂದ ಇದನ್ನು ಮಳಿಯನ್ ಹಳ್ಳಿ ಅಥವಾ ಮಳೇನಹಳ್ಳಿ ಎಂದು ಕರೆಯಲಾಗುತ್ತಿತ್ತು. ಅನಂತರ ಕೆಳದಿ ಅರಸರ ಕಾಲದಲ್ಲಿ ಈ ಊರಿಗೆ ಮಹಾದಾನಪುರವೆಂಬ ಹೆಸರು ಬಂತೆಂದೂ ಕಾಡುಪ್ರಾಣಿಗಳ ಶಿಕಾರಿಗೆ ಉತ್ತಮ ಸ್ಥಳವಾಗಿದ್ದು ದರಿಂದ ಹೈದರ್ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲಿ ಇದಕ್ಕೆ ಶಿಕಾರಿಪುರ ವೆಂಬ ಹೆಸರು ಬಂದಿತೆಂದೂ ಪ್ರತೀತಿ. ಇಲ್ಲಿ ಒಂದು ಹಳೆಯ ಕೋಟೆ ಮತ್ತು ವೀರಾಂಜನೇಯನ ಭವ್ಯಮೂರ್ತಿ ಇರುವ ಹುಚ್ಚರಾಯಸ್ವಾಮಿ ದೇವಾಲಯವಿದೆ. ಈ ದೇವಾಲಯದ ಕಂಬಗಳು ದ್ರಾವಿಡ ಮತ್ತು ಹೊಯ್ಸಳ ಶೈಲಿಯಲ್ಲಿವೆ. ಕೈಸಾಲೆಯಲ್ಲಿರುವ ದೇವಾಲಯದ ಹಳೆಯ ವಿಗ್ರಹಕ್ಕೆ ಬೆಳ್ಳಿ ಕಿರೀಟವಿದ್ದು ಅದರಲ್ಲಿ ಕಂಠೀರವ ನರಸರಾಜ ಒಡೆಯರ್ (1638-59) ಎಂಬ ನಾಮಾಂಕಿತವಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಧೋಂಡಿಯ ವಾಘನದೆಂದು ಹೇಳುವ ಇಬ್ಬಾಯ ಕತ್ತಿ ಈ ದೇವಾಲಯ ದಲ್ಲಿದೆ. ಇಲ್ಲಿ ಅನೇಕ ಶಾಸನಗಳೂ ವೀರಗಲ್ಲುಗಳೂ ಇವೆ. ಪುರುಷ ರಂತೆ ಸ್ತ್ರೀಯರೂ ಶತ್ರುಗಳೊಡನೆ ಹೋರಾಡಿದ ವಿಷಯವನ್ನು ಕುರಿತಂತೆ ಹರಿಯಕ್ಕ ಎಂಬವಳಿಗೆ ಸಂಬಂಧಿಸಿದ ಶಾಸನವೊಂದು ಇದೆ. ವ್ಯಾಪಾರ ಕೇಂದ್ರವಾಗಿರುವ ಈ ಪಟ್ಟಣ ಪುರಸಭಾ ಆಡಳಿತಕ್ಕೆ ಸೇರಿದೆ.

ಶಿಕಾರಿಪುರದ ಬಳಿ ಇರುವ ಈಸೂರು ಗ್ರಾಮ ಸ್ವಾತಂತ್ರ ಹೊರಾಟಕ್ಕೆ ಪ್ರಸಿದ್ದಿ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: