ತೀ.ನಂ.ಶ್ರೀಕಂಠಯ್ಯ
ಶ್ರೀಕಂಠಯ್ಯ, ತೀ.ನಂ: 1906-66. ಪ್ರಸಿದ್ಧ ವಿದ್ವಾಂಸರು, ಭಾಷಾವಿಜ್ಞಾನಿಗಳು. 1957ರ ವರೆಗೂ ಅಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದ ಇವರು, ಮತ್ತೆ ಮೈಸೂರು ವಿಶ್ವವಿದ್ಯಾಲಯಮೈಸೂರು ವಿಶ್ವವಿದ್ಯಾನಿಲಯ]]ಕ್ಕೆ ಹಿಂದಿರುಗಿ ಅಲ್ಲಿ 1962ರ ವರೆಗೂ ಪ್ರಾಧ್ಯಾಪಕರಾಗಿ ಕೆಲಸಮಾಡಿ ನಿವೃತ್ತರಾದರು. ಕನ್ನಡ ಸಾಹಿತ್ಯ ಪರಿಷತ್ ಸಿದ್ಧಪಡಿಸಿದ ಕನ್ನಡ-ಕನ್ನಡ ನಿಘಂಟು ಸಮಿತಿಯ ಅಧಕ್ಷರಾಗಿಯೂ ಕೆಲಸ ಮಾಡಿದ ಇವರು ಭಾಷಾವಿಜ್ಞಾನ ದೃಷ್ಟಿಯಿಂದ ನಿಘಂಟನ್ನು ನಿರ್ಮಿಸುವ ಪದ್ಧತಿಗೆ ಭದ್ರವಾದ ತಳಪಾಯ ಹಾಕಿದರು.
ಇತಿವೃತ್ತ
ಬದಲಾಯಿಸಿ1906 ನವೆಂಬರ್ 26ರಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ ಜನಿಸಿದರು. ತಂದೆ ಶಾನುಭೋಗ ನಂಜುಂಡಯ್ಯನವರು. ತೀರ್ಥಪುರ, ಚಿಕ್ಕನಾಯಕನಹಳ್ಳಿ ಮತ್ತು ತುಮಕೂರುಗಳಲ್ಲಿ ಆರಂಭದ ಶಿಕ್ಷಣ ಮುಗಿಸಿದ ಇವರು ಮೈಸೂರು ಮಹಾರಾಜ ಕಾಲೇಜು ಸೇರಿ ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳ ಜತೆಗೆ ಸಂಸ್ಕೃತ-ಕನ್ನಡಗಳನ್ನು ವಿಶೇಷವಾಗಿ ವ್ಯಾಸಂಗಮಾಡಿ 1926ರಲ್ಲಿ ಬಿ.ಎ. ಪದವಿಯನ್ನು ಆರು ಬಂಗಾರದ ಪದಕಗಳೊಡನೆ ಪಡೆದರು. ಅನಂತರ ಎಂ.ಎ. ತರಗತಿಗೆ ಸೇರಿದ ಇವರು ಎಂ.ಸಿ.ಎಸ್. ಪರೀಕ್ಷೆಗೂ ಸಿದ್ಧರಾಗಿ ಎಂ.ಎ. ಪರೀಕ್ಷೆಯನ್ನು ಮಧ್ಯೆ ಬಿಟ್ಟು ಎಂ.ಸಿ.ಎಸ್. ಪರೀಕ್ಷೆಯಲ್ಲಿ (1928) ತೇರ್ಗಡೆಯಾದರು. ಅನಂತರ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಶ್ರೀರಂಗಪಟ್ಟಣದಲ್ಲಿ ಸ್ವಲ್ಪ ಕಾಲ ಅಮಲ್ದಾರರಾಗಿ ಕೆಲಸ ಮಾಡಿದರಾದರೂ ಅದನ್ನು ಬಿಟ್ಟು ಮೈಸೂರು ಮಹಾರಾಜ ಕಾಲೇಜಿನಲ್ಲಿ 1928ರಿಂದ 1952ರ ವರೆಗೆ ಅಧ್ಯಾಪಕರಾಗಿದ್ದು, 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋದರು. ಇವರು 1966 ಸೆಪ್ಟೆಂಬರ್ 7 ರಂದು ನಿಧನರಾದರು.[೧]
ತೀನಂಶ್ರೀ ಸಾಹಿತ್ಯ ಕೃತಿಗಳು
ಬದಲಾಯಿಸಿಇವರು ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಶ್ರೇಷ್ಠ ವಿದ್ವಾಂಸರಾಗಿದ್ದರು. ವಿಮರ್ಶೆ, ಛಂದಸ್ಸು, ಭಾಷಾವಿಜ್ಞಾನ, ಕಾವ್ಯಮೀಮಾಂಸೆ ಇವರಿಗೆ ಪ್ರಿಯವಾದ ವಿಷಯಗಳು. ಇವುಗಳಲ್ಲಿ ಎಲ್ಲದರಲ್ಲೂ ಸಮಾನವಾದ ತಲಸ್ಪರ್ಶಿ ನೈಪುಣ್ಯಗಳಿಸಿದ್ದರು; ಜೊತೆಗೆ ಸಹಜ ಕವಿತ್ವ ಸಿದ್ಧಿಸಿತ್ತು. ಒಲುಮೆ (1932) ಹಾಗೂ ಬಿಡಿಮುತ್ತು (1970) ಎಂಬ ಸಂಕಲನಗಳು ಈ ಹೇಳಿಕೆಗೆ ಸಾಕ್ಷಿ. ಕಾವ್ಯಸಮೀಕ್ಷೆ (1947), ರಾಕ್ಷಸನ ಮುದ್ರಿಕೆ (1942), ನಂಟರು (1963), ಪಂಪ, ಸಮಾಲೋಕನ (1958), ನಂಬಿಯಣ್ಣನ ರಗಳೆ (1946), ಗದಾಯುದ್ಧ ಸಂಗ್ರಹ (1949), ಭಾರತೀಯ ಕಾವ್ಯಮೀಮಾಂಸೆ (1953), ಕಾವ್ಯಾನುಭವ (1970)-ಈ ಮುಂತಾದ ಕೃತಿಗಳು ಇವರ ಅಗಾಧ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
ತೀನಂಶ್ರೀ ಸಾಹಿತ್ಯಾಸಕ್ತಿ
ಬದಲಾಯಿಸಿಭಾಷಾವಿಜ್ಞಾನದಲ್ಲಿ ಇವರಿಗೆ ವಿಶೇಷವಾದ ಆಸಕ್ತಿ. ಧಾರವಾಡದಲ್ಲಿ ಪ್ರಾಧ್ಯಾಪಕರಾಗಿದ್ದಾಗ ಈ ಆಸಕ್ತಿ ಇಮ್ಮಡಿಯಾಯಿತು. ಅಲ್ಲಿಂದಲೇ ಪುಣೆಯ ಭಾಷಾವಿಜ್ಞಾನ ಮಹಾಸಂಸ್ಥೆಯಾದ ಡೆಕ್ಕನ್ ಕಾಲೇಜಿನ ವಿಚಾರಗೋಷ್ಠಿ (1953) ಹಾಗೂ ಬೇಸಗೆ ಶಾಲೆಗಳಿಗೆ ಹೋಗಿಬರುತ್ತಿದ್ದರು. ಇವರ ವಿದ್ವತ್ತನ್ನು ಮನಗಂಡ ಅಲ್ಲಿನ ವಿದ್ವಾಂಸ ಮಂಡಲಿ ಅಮೆರಿಕದ ರಾಕ್‍ಫೆಲರ್ ಪ್ರತಿಷ್ಠಾನದ ವಿಶೇಷ ಗೌರವವೇತನ ದೊರಕಿಸಿಕೊಟ್ಟಿತು. ಇವರು 1955ರಲ್ಲಿ ಅಮೆರಿಕಕ್ಕೆ ಹೋದರು. ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಯುರೋಪಿನ ನಾಲ್ಕೈದು ದೇಶಗಳಲ್ಲಿ ಪ್ರವಾಸ ಮಾಡಿದರು. ಒಟ್ಟು ಎಂಟು ತಿಂಗಳು ಕಾಲದ ಈ ವಿದೇಶ ಪ್ರವಾಸ ಕಾಲದಲ್ಲಿ ಅಮೆರಿಕದ ಮಿಶಿಗನ್, ಪೆನ್ಸಿಲ್ವೇನಿಯ, ಬಕ್ರ್ಲಿ, ಹಾರ್ವರ್ಡ್, ಏಲ್ ವಿಶ್ವವಿದ್ಯಾಲಯಗಳನ್ನು ಸಂದರ್ಶಿಸಿದರು. ಅಲ್ಲಿಂದ ಇಂಗ್ಲೆಂಡಿಗೆ ತೆರಳಿ ಲಂಡನ್, ಆಕ್ಸ್‍ಫರ್ಡ್, ಕೇಂಬ್ರಿಜ್, ಎಡಿನ್‍ಬರೊ ವಿಶ್ವವಿದ್ಯಾಲಯಗಳಿಗೆ ಭೇಟಿಯಿತ್ತರು. ಅಲ್ಲಿಂದ ಹಾಲೆಂಡ್, ಫ್ರಾನ್ಸ್, ಇಟಲಿ ದೇಶಗಳನ್ನು ಸುತ್ತಿ ಪ್ರವಾಸ ಮುಗಿಸಿ 1956ರಲ್ಲಿ ತಾಯ್ನಾಡಿಗೆ ಮರಳಿದರು. ಆಧುನಿಕ ಭಾಷಾವಿಜ್ಞಾನದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಭಾಷಾವಿಜ್ಞಾನದ ಅಧ್ಯಯನಕ್ಕೆ ಮತ್ತು ಬೆಳೆವಣಿಗೆಗೆ ಒಳ್ಳೆಯ ತಳಹದಿಯನ್ನು ಹಾಕಿದರು.
ಭಾಷಾವಿಜ್ಞಾನದ ಕೆಲಸ
ಬದಲಾಯಿಸಿವಿದ್ಯಾ ಇಲಾಖೆಗಾಗಿ ಇವರು ಸಿದ್ಧಪಡಿಸಿಕೊಟ್ಟ ಕನ್ನಡ ಮಾಧ್ಯಮ ವ್ಯಾಕರಣ (1939), ಭಾಷಾವಿಜ್ಞಾನ ದೃಷ್ಟಿಯಿಂದ ಬರೆದಿರುವ ಪುಸ್ತಕ: ಈ ಹೊತ್ತಿಗೂ ಒಂದು ಉತ್ತಮ ವ್ಯಾಕರಣ. ಭಾಷಾವಿಜ್ಞಾನ ವಿಷಯದಲ್ಲಿ ಇವರು ಇಂಗ್ಲಿಷಿನಲ್ಲೂ ಕೆಲವು ಲೇಖನಗಳನ್ನು ಪ್ರಕಟಿಸಿದ್ದಾರೆ.
ತೀನಂಶ್ರೀಯವರಿಗೆ ದೊರೆತ ಪ್ರಶಸ್ತಿಗಳು
ಬದಲಾಯಿಸಿಇವರಿಗೆ ಅನೇಕ ಗೌರವ ಪ್ರಶಸ್ತಿಗಳು ದೊರೆತಿದ್ದವು. ದೆಹಲಿಯಲ್ಲಿ 1957ರಲ್ಲಿ ನಡೆದ ಪ್ರಾಚ್ಯ ವಿದ್ವತ್ ಸಮ್ಮೇಳನದ ದ್ರಾವಿಡ ಸಂಸ್ಕೃತ ವಿಭಾಗಕ್ಕೆ ಅಧ್ಯಕ್ಷರಾಗಿದ್ದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ 1958ರಲ್ಲಿ ನಡೆದ ಭಾಷಾವಿಜ್ಞಾನ ಬೇಸಗೆ ಶಾಲೆಯ ವ್ಯವಸ್ಥೆ-ಯಶಸ್ಸು ಪೂರ್ಣ ಇವರದು. ಅಖಿಲ ಭಾರತ ಭಾಷಾವಿಜ್ಞಾನಗಳ ಸಂಘಕ್ಕೆ 1960ರಲ್ಲಿ ಅಧ್ಯಕ್ಷರಾಗಿದ್ದ ಇವರು 1961ರಲ್ಲಿ ಗದಗಿನಲ್ಲಿ ನಡೆದ 43ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಾಬಾಂಧವ್ಯ ಗೋಷ್ಠಿಗೆ ಅಧ್ಯಕ್ಷರಾಗಿದ್ದರು. ಇವರಿಗೆ ಮರಣೋತ್ತರ ಪಂಪ ಪ್ರಶಸ್ತಿ (ಭಾರತೀಯ ಕಾವ್ಯಮೀಮಾಂಸೆ) ನೀಡಲಾಗಿದೆ (1989). ಇವರ ಸ್ಮರಣೆಗಾಗಿ ಶ್ರೀಕಂಠತೀರ್ಥ ಎಂಬ ಸ್ಮರಣಗ್ರಂಥವನ್ನು ಪ್ರಕಟಿಸಲಾಯಿತು (1976).
ಉಲ್ಲೇಖ
ಬದಲಾಯಿಸಿ- ↑ ಕನ್ನಡ ಸಾಹಿತ್ಯ ಚರಿತ್ರೆ