ದ್ರಾವಿಡ ಜನ ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳ ಮೂಲದ ದ್ರಾವಿಡ ಭಾಷೆಗಳನ್ನು ಮಾತನಾಡುವ ಜನರು.

ಹಿಂದಿನ ತಿಳುವಳಿಕೆಸಂಪಾದಿಸಿ

ದ್ರಾವಿಡರು ಭಾರತದ ಮೂಲನಿವಾಸಿಗಳೆಂದೂ ಮಧ್ಯ ಏಷ್ಯಾದಿಂದ ಬಂದ ಆರ್ಯರು ಇವರನ್ನು ಸೋಲಿಸಿ, ದಕ್ಷಿಣಕ್ಕೆ ಅಟ್ಟಿದರೆಂದೂ ಆದ್ದರಿಂದ ಉತ್ತರ ಭಾರತದ ಸಂಸ್ಕøತಿ ಆರ್ಯರದಾಯಿತೆಂದೂ ದಕ್ಷಿಣದಲ್ಲಿ ದ್ರಾವಿಡ ಸಂಸ್ಕೃತಿ ಉಳಿಯಿತೆಂದೂ ಬಹುಕಾಲ ಇತಿಹಾಸದ ಅಭಿಪ್ರಾಯವಾಗಿತ್ತು. ಆರ್ಯರು ಉತ್ತಮರು, ದೃಢಕಾಯರು, ಸುಸಂಸ್ಕøತರು. ದ್ರಾವಿಡರಾದರೋ ಕಪ್ಪುಬಣ್ಣದವರು, ಕುಳ್ಳರು ಮತ್ತು ಕೆಳಮಟ್ಟದ ಸಂಸ್ಕೃತಿಯಿದ್ದವರು. ಆದ್ದರಿಂದಲೇ ಆರ್ಯರು ಅವರನ್ನು ಗೆಲ್ಲುವುದು ಸಾಧ್ಯವಾಯಿತು. ಅಲ್ಲದೆ ತಮ್ಮ ಸಂಸ್ಕೃತಿಯನ್ನು ಭಾರತದಲ್ಲಿ ಹರಡಲು ಸುಲಭವಾಯಿತು. ದ್ರಾವಿಡರು ಆರ್ಯರ ದಾಸರಾದರು, ದಸ್ಯುಗಳೆನಿಸಿಕೊಂಡರು. ಆರ್ಯ ಸಂಪರ್ಕದಿಂದ ದ್ರಾವಿಡರು ನಾಗರಿಕರಾದರು-ಹೀಗೆಂದು ಬಹುಕಾಲ ವಿದ್ವಾಂಸರು ತಿಳಿದಿದ್ದರು.

ಇತ್ತೀಚಿನ ಸಂಶೋಧನೆಗಳುಸಂಪಾದಿಸಿ

ಆದರೆ ಈ ವಾದಸರಣಿ ಸಮಂಜಸವಲ್ಲವೆಂದೂ ಆಧಾರರಹಿತವಾದುದೆಂದೂ ಸತ್ಯಕ್ಕೆ ದೂರವೆಂದೂ ಐತಿಹಾಸಿಕವಲ್ಲವೆಂದೂ ಇತ್ತೀಚಿನ ಸಂಶೋಧನಗಳಿಂದ ಖಚಿತವಾಗಿದೆ. ಮುಖ್ಯವಾಗಿ, ಭಾರತದ ಸಂಸ್ಕೃತಿ ಮತ್ತು ಭಾಷೆಗಳ ವಿಷಯವನ್ನು ಪ್ರಸ್ತಾಪಿಸದೆ, ಬರಿ ಭಾರತೀಯರ ಭೌತಿಕ ಲಕ್ಷಣಗಳ ಆಧಾರದ ಮೇಲೆ ಸಿದ್ಧಾಂತವನ್ನು ರೂಪಿಸಿದ್ದೇ ಈ ವಾದ ಸರಣಿ ದಾರಿ ತಪ್ಪಲು ಕಾರಣವಾಯಿತು. ಅಲ್ಲದೆ ಯಾವ ಖಚಿತವಾದ ಆಧಾರವೂ ಇಲ್ಲದೆ, ಶಾಸ್ತ್ರದ ಬೆಂಬಲವಿಲ್ಲದೆ ಭಾರತೀಯರನ್ನು ಏಳು ಗುಂಪುಗಳನ್ನಾಗಿ ವಿಂಗಡಿಸಿ, ಅದರಲ್ಲಿ ಇಂಡೊ - ಆರ್ಯರು ಮತ್ತು ಮಂಗೋಲ್ - ದ್ರಾವಿಡರು , ಆರ್ಯ - ದ್ರಾವಿಡರು ಮತ್ತು ಸಿಥಿಯ ದ್ರಾವಿಡರನ್ನು ಸೇರಿಸಲಾಯಿತು.

ಎಲ್ಲರೂ ಹೊರಗಿನಿಂದ ಬಂದವರೇ; ದ್ರವಿಡರು ಮೆಡಿಟರೇನಿಯನ್ ಬುಡಕಟ್ಟಿಗೆ ಸೇರಿದವರುಸಂಪಾದಿಸಿ

1933ರಲ್ಲಿ ಹಟನ್ ಎಂಬ ವಿದ್ವಾಂಸ ಈ ವಾದ ಮತ್ತು ವರ್ಗೀಕರಣಗಳನ್ನು ಅಲ್ಲಗೆಳೆದು, ಭಾರತದಲ್ಲಿ ಮೂಲವಾಸಿಗಳು ಯಾರೂ ಇರಲಿಲ್ಲವೆಂದೂ ಎಲ್ಲರೂ ಹೊರಗಿನಿಂದ ಬಂದ ಗುಂಪುಗಳೇ ಆಗಿವೆಯೆಂದೂ ಅವರನ್ನು ಎಂಟು ಗುಂಪುಗಳನ್ನಾಗಿ ವಿಂಗಡಿಸಬಹುದೆಂದೂ ಅಭಿಪ್ರಾಯಪಟ್ಟ. ಈ ಎಂಟು ಗುಂಪುಗಳು ಭಾರತಕ್ಕೆ ಬಂದು ವಿವಿಧ ಪ್ರದೇಶಗಳಲ್ಲಿ ನೆಲಸಿ ತಮ್ಮ ಸಂಸ್ಕೃತಿ ಮತ್ತು ಸಂಸ್ಥೆಗಳನ್ನು ಬೆಳೆಸಿಕೊಂಡರು; ಅವರಲ್ಲಿ ನಾರ್ಡಿಕ್ ಮೂಲಕ್ಕೆ ಸೇರಿದ ವೇದಕಾಲದ ಆರ್ಯರು ಮತ್ತು ಮೆಡಿಟರೇನಿಯನ್ ಬುಡಕಟ್ಟಿಗೆ ಸೇರಿದ ದ್ರಾವಿಡರು ಮುಖ್ಯರಾದವರು.

ಇತ್ತೀಚಿಗೆ ಈ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿದ ಆಂತ್ರೊಪಾಲಾಜಿಕಲ್ ಸರ್ವೆ ಸಂಸ್ಥೆಯ ಮುಖ್ಯಸ್ಥರಾದ ಗುಹ ಅವರು ತಮ್ಮ ರೇಷಿಯಲ್ ಎಲಿಮೆಂಟ್ಸ್ ಇನ್ ಪಾಪ್ಯುಲೇಷನ್ ಎಂಬ ಪುಸ್ತಕದಲ್ಲಿ ಶಾಸ್ತ್ರೀಯವಾದ ಮತ್ತು ವಿದ್ವಾಂಸರಿಂದ ಪುರಸ್ಕರಿಸಲ್ಪಟ್ಟ ವಾದವನ್ನು ಪ್ರತಿಪಾದಿಸಿದ್ದಾರೆ. ಅದರ ಪ್ರಕಾರ ಭಾರತದ ಜನ ಸಮುದಾಯವನ್ನು ಆರು ಮುಖ್ಯ ಜನಾಂಗಗಳಾಗಿ ಮತ್ತು ಒಂಬತ್ತು ಸಣ್ಣ ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ನಾಲ್ಕನೆಯ ಜನಾಂಗಕ್ಕೆ ಸೇರಿದ ಮೆಡಿಟರೇನಿಯನ್ ಜನರನ್ನು ಕನ್ನಡ, ತಮಿಳು ಮತ್ತು ಮಲೆಯಾಳ ಪ್ರದೇಶಗಳಲ್ಲಿ ಕಾಣಬಹುದಾಗಿದೆಯೆಂದು ಅವರ ಅಭಿಪ್ರಾಯ. ಈ ಬುಡಕಟ್ಟಿಗೆ ಸೇರಿದ ಜನ ಕುಳ್ಳರು. ಕಪ್ಪು ಬಣ್ಣದವರು. ನಿಜ ಮೆಡಿಟರೇನಿಯನ್ ಅಥವಾ ಯೂರೋಪಿಯನ್ ಜನಾಂಗಕ್ಕೆ ಸೇರಿದ ಮತ್ತು ಎತ್ತರದ ಮತ್ತು ದೃಢಕಾಯ ಜನ ಗಂಗಾ ಕಣಿವೆಯಲ್ಲಿ ನೆಲೆಸಿದರು. ಇವರೇ ಆರ್ಯರಿಗಿಂತ ಮುಂಚೆ ಉತ್ತರ ಭಾರತದಲ್ಲಿದ್ದ ದ್ರಾವಿಡರು. ಮುಂದೆ ಇವರೇ ಆರ್ಯರಾದರು. ಉತ್ತರ ಭಾರತದ ಸಂಸ್ಕೃತಿಯ ಬೆಳವಣಿಗೆಗೆ ಪೋಷಕರಾದರು. ಆರನೆಯ ಗುಂಪಾದ ನಾರ್ಡಿಕ್ ಆರ್ಯರು ಭಾರತಕ್ಕೆ ಭಾಷೆಯನ್ನು ಕೊಟ್ಟರು. ಅಲ್ಲದೆ ತಮ್ಮ ಪ್ರತಿಭೆಯಿಂದ ಭಾರತದ ವಿವಿಧ ಸಂಸ್ಕೃತಿಗಳನ್ನು ಒಂದುಗೂಡಿಸಿ, ಭಾರತೀಯ ನಾಗರಿಕತೆಯ ಅಡಿಪಾಯವನ್ನು ಹಾಕಿದರು. ಅಲ್ಲದೆ, ಭಾರತದ ಆರು ಗುಂಪುಗಳಲ್ಲಿ ಪ್ರತ್ಯೇಕತೆಯ ಮನೋಭಾವವಿರಲಿಲ್ಲವಲ್ಲದೆ ಅವು ಮಿಶ್ರಿತವಾದ ಗುಂಪುಗಳೇ ಆಗಿದ್ದವು. ಆದ್ದರಿಂದ ಭಾರತದ ಇತಿಹಾಸದ ಪ್ರಾರಂಭದಿಂದಲೂ ಇಂಥ ಜನಾಂಗದ ಮಿಶ್ರಣವನ್ನು ಕಾಣಬಹುದಾಗಿದೆ. ಭಾಷೆಯೇ, ಜನಾಂಗದ ಜೀವಾಳವಾದುದರಿಂದ, ಅದರಿಂದಲೇ ಒಂದು ಜನಾಂಗದ ಸಂಸ್ಕೃತಿಯನ್ನು ಅಳೆಯಬೇಕೇ ಹೊರತು, ಬುಡಕಟ್ಟಿನ ಆಧಾರದ ಮೇಲಲ್ಲ.

ಮೇಲೆ ಪಟ್ಟಿ ಮಾಡಿದ ಆರು ಗುಂಪುಗಳು ಒಂದು ಜನಾಂಗವಾಯಿತಲ್ಲದೆ ಅದು ನಾಲ್ಕು ಭಾಷೆಗಳನ್ನು ಹೊಂದಿತ್ತು. ಅದರಲ್ಲಿ ದ್ರಾವಿಡ ಮತ್ತು ಇಂಡೊ-ಯೂರೋಪಿಯನ್ (ಆರ್ಯ) ಭಾಷೆಗಳು ಸೇರಿವೆ. ದ್ರಾವಿಡ ಭಾಷೆಗಳು ವಿಶೇಷವಾಗಿ ದಕ್ಷಿಣದಲ್ಲಿ ಕೇಂದ್ರೀಕೃತವಾದರೂ ಉತ್ತರ ಭಾರತದ ಛೋಟನಾಗಪುರದಲ್ಲಿ, ದ್ರಾವಿಡ ಭಾಷೆಯನ್ನು ಬಳಸುವ ಓರಾಯನರಲ್ಲಿ ಮತ್ತು ಕೋಲ್ ಭಾಷೆಯನ್ನು ಬಳಸುವ ಮುಂಡರಲ್ಲಿ ಬಲೂಚಿಸ್ಥಾನದ ಬ್ರಾಹುಇ ಭಾಷೆಯಲ್ಲಿ ದ್ರಾವಿಡ ಭಾಷೆಗಳ ಪ್ರಭಾವವನ್ನು ಕಾಣಬಹುದಾಗಿದೆ. ಮುಖ್ಯವಾಗಿ ಭಾರತಕ್ಕೆ ಬಂದು ನೆಲಸಿದ ವಿವಿಧ ಜನಾಂಗಗಳು ತಮ್ಮ ಸಂಸ್ಕೃತಿಯನ್ನು ಬೆಳಸಿ, ಅವೆಲ್ಲವನ್ನೂ ಒಂದುಗೂಡಿಸಿ, ಭಾರತೀಯ ಸಂಸ್ಕøತಿಯನ್ನು ರೂಪಿಸಿಕೊಂಡಿದ್ದು ಇತಿಹಾಸದ ಮುಖ್ಯ ಘಟನೆಯಾಗಿದೆ. ಈ ಸಂಸ್ಕೃತಿಯ ಸಾಗರದಲ್ಲಿ ಗುಂಪುಗಳ ಕೊಡುಗೆಯನ್ನು ಬೇರ್ಪಡಿಸುವುದು ಸುಲಭದ ಕೆಲಸವಾಗದಿದ್ದರೂ ಅವುಗಳ ಮುಖ್ಯ ಲಕ್ಷಣಗಳು ತೋರಿಸುವುದು ಕಷ್ಟದ ಕೆಲಸವಾಗದು.

ದ್ರಾವಿಡರ ನಾಗರೀಕತೆಸಂಪಾದಿಸಿ

ದ್ರಾವಿಡರು ನಾಗರಿಕರಾಗಿದ್ದು ಭಾರತದಲ್ಲಿ ಪಟ್ಟಣಗಳನ್ನು ಕಟ್ಟಿ ನಗರ ನಾಗರಿಕತೆಯನ್ನು ರೂಪಿಸಿದರು. ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಬೆಳೆಸಿದರು. ಭಾರತದ ಎಲ್ಲ ಕಡೆಗಳಲ್ಲೂ ನೆಲೆಸಿದರು. ಬಲೂಚಿಸ್ತಾನದಲ್ಲಿ ಬಳಕೆಯಲ್ಲಿರುವ ಬ್ರಾಹುಇ ಭಾಷೆ ದ್ರಾವಿಡ ಭಾಷೆಯ ಛಾಯೆಯನ್ನು ಹೊಂದಿರುವುದರಿಂದ, ದ್ರಾವಿಡರು ಸಿಂಧ್, ರಜಪುಟಾಣ ಮತ್ತು ಮಾಳವದ ಮೂಲಕ ಈಗಿನ ಮಹಾರಾಷ್ಟ್ರ ಪ್ರದೇಶ ಮತ್ತು ದಕ್ಷಿಣ ಭಾರತದ ಇತರ ಪ್ರದೇಶಗಳಿಗು ಪ್ರಸರಿಸಿದರೆಂದು ಹೇಳಬಹುದಾಗಿದೆ. ಅಲ್ಲದೆ ಸುಪ್ರಸಿದ್ಧವಾದ ಸಿಂಧೂಕಣಿವೆ ನಾಗರಿಕತೆ ಪಟ್ಟಣದಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿನ ಭಾಷೆ ದ್ರಾವಿಡ ಭಾಷೆಯನ್ನು ಹೋಲುವುದರಿಂದ ಸಿಂಧೂಕಣಿವೆಯ ಜನ ದ್ರಾವಿಡ ಗುಂಪಿಗೆ ಸೇರಿದವರೆಂದು ಹೇಳುವುದು ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಹೀರಾಸ್ ಮತ್ತು ಎಸ್.ಆರ್.ರಾವ್ ಅವರು ಇದೇ ತೀರ್ಮಾನಕ್ಕೆ ಬಂದಿದ್ದಾರೆ.

ಆರ್ಯರು ಮತ್ತು ದ್ರಾವಿಡರುಸಂಪಾದಿಸಿ

ಆರ್ಯರು ಭಾರತಕ್ಕೆ ಬಂದಾಗ ಇಲ್ಲಿ ಎರಡು ಗುಂಪುಗಳನ್ನು ಕಂಡರು. ಅವರನ್ನು ದಾಸ ಅಥವಾ ದಸ್ಯು ಮತ್ತು ನಿಷಾದರೆಂದು ಕರೆದರು. ಶತ್ರುಗಳಾದ ಅವರು ಆರ್ಯರಿಗೆ ದಾಸರೆನಿಸಿಕೊಂಡರು, ಕಳ್ಳರೆನಿಸಿಕೊಂಡರು. ಆದರೆ ದಾಸ ಅಥವಾ ದಸ್ಯು ಎಂಬ ಪದಗಳು ಪ್ರಾಚೀನ ಇರಾನಿನಲ್ಲೇ ಬಳಕೆಯಲ್ಲಿದ್ದುವು. ಅದು ಗುಂಪಿನ ನಾಮವಾಗಿತ್ತೇ ಹೊರತು ಸೇವಕನೆಂಬ ಅರ್ಥದಲ್ಲಿರಲಿಲ್ಲ. ಅಲ್ಲದೆ ಭಾರತದ ತತ್ತ್ವಶಾಸ್ತ್ರ, ಸಾಹಿತ್ಯ, ಧರ್ಮ ಮತ್ತು ಸಂಸ್ಕøತಿಯಲ್ಲಿಯ ಉದಾತ್ತ ಮತ್ತು ಒಳ್ಳೆಯ ಭಾವನೆಗಳೆಲ್ಲ ಆರ್ಯರಿಂದಲೇ ರೂಪಿತವಾಯಿತೆಂದೂ ಇಲ್ಲಿನ ಕಂದಾಚಾರ ಪದ್ಧತಿ ಮತ್ತು ಹಿಂದೂ ಧರ್ಮದಲ್ಲಿ ಕಂಡು ಬರುವ ಮೂಢನಂಬಿಕೆಗಳು, ಕೆಟ್ಟ ಲಕ್ಷಣಗಳು ದ್ರಾವಿಡರಿಂದ ಬಂತೆಂದೂ ಹೇಳುವುದು ವಾಡಿಕೆ. ಆದರೆ ಈ ಅಭಿಪ್ರಾಯ ಈಗ ತಿರಸ್ಕರಿಸಲ್ಪಟ್ಟಿದೆ.

ಭಾರತದ ನಾಗರಿಕತೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ದ್ರಾವಿಡರ ಪಾತ್ರಸಂಪಾದಿಸಿ

ಆರ್ಯ ಮತ್ತು ದ್ರಾವಿಡ ಲಕ್ಷಣಗಳನ್ನು ಆಳವಾಗಿ ಪಾಂಡಿತ್ಯಪೂರ್ಣವಾಗಿ ವಿವೇಚಿಸಿರುವ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಭಾರತದ ನಾಗರಿಕತೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ದ್ರಾವಿಡರ ಪಾತ್ರ ಹಿರಿದಾದುದೆಂದೂ ಸಿಂಧೂ ಕಣಿವೆಯಸಂಸ್ಕೃತಿ ಆರ್ಯರಿಗಿಂತ ಉತ್ತಮವಾದುದೆಂದೂ ತಿಳಿದು ಬಂದಿದೆ. ಹಿಂದೂಧರ್ಮದ ಅನೇಕ ದೇವತೆಗಳು ದ್ರಾವಿಡರ ಕೊಡುಗೆಯೇ ಶಿವಾರಾಧನೆ, ಮಾತೃದೇವತೆಯ ಪೂಜೆ, ನಂದಿ, ಶಿವ ಉಮೆಯರ ಪೂಜೆ, ಯೋಗ - ಇವು ದ್ರಾವಿಡ ಲಕ್ಷಣಗಳು. ದೇವರನ್ನು ಪೂಜಿಸುವ ಪದ್ಧತಿ ದ್ರಾವಿಡರದೇ ಆಗಿದೆ. ಹಿಂದೂಧರ್ಮದಲ್ಲಿ ಶ್ರೇಷ್ಠಸ್ಥಾನ ಪಡೆದ ಶಿವ, ಉಮೆ, ವಿಷ್ಣು, ಹನುಮಂತ ಮತ್ತು ಗಣೇಶ ಈ ದ್ರಾವಿಡ ದೇವರುಗಳು ಹಿಂದೂ ಧರ್ಮದಲ್ಲಿ ಸೇರಿಹೋಗಿವೆ.

ಭಾರತೀಯರ ಸಂಸ್ಕೃತಿಯ ಮೇಲೆ ದ್ರಾವಿಡರ ಪ್ರಭಾವಸಂಪಾದಿಸಿ

ದ್ರಾವಿಡರ ಪ್ರಭಾವವನ್ನು ಭಾರತೀಯರ ಸಂಸ್ಕೃತಿಯ ನಾನಾ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಉತ್ತರ ಭಾರತದ ಊರುಗಳ ಹೆಸರಿನಲ್ಲಿ, ವೇದ ಮತ್ತು ಭಾರತದ ಸಾಹಿತ್ಯದಲ್ಲಿ, ಆರ್ಯರ ಭಾಷೆಗಳಲ್ಲಿ. ಮತಪದ್ಧತಿಯಲ್ಲಿ ಸಂಪ್ರದಾಯದಲ್ಲಿ ಪುರಾಣದಲ್ಲಿ, ಇತಿಹಾಸದಲ್ಲಿ, ದ್ರಾವಿಡ ಲಕ್ಷಣಗಳನ್ನು ಗುರುತಿಸಲಾಗಿದೆ. ಆರ್ಯ ಸಂಸ್ಕೃತಿಯ ಬಹುಭಾಗ ದ್ರಾವಿಡರದೇ ಆಗಿದೆ. ಭಾರತೀಯ ಆರ್ಥಿಕ ವ್ಯವಸ್ಥೆ, ಭಾರತೀಯ ಭಾಷೆಗಳು, ಸಮಾಜಿಕ ಸಂಸ್ಥೆಗಳು ಮತ್ತು ಸಂಪ್ರದಾಯ ಮದುವೆ ಮುಂತಾದ ಪದ್ಧತಿಗಳು - ಇವುಗಳಲ್ಲಿ ದ್ರಾವಿಡರ ಪ್ರಭಾವವಿದೆ. ನಡೆ ನುಡಿಗಳಲ್ಲಿ ದ್ರಾವಿಡ ಛಾಯೆಯಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದ್ರಾವಿಡ&oldid=939618" ಇಂದ ಪಡೆಯಲ್ಪಟ್ಟಿದೆ