ಆರ್ಯರು
ಶಬ್ದ ವ್ಯುತ್ಪತ್ತಿ
ಬದಲಾಯಿಸಿಆರ್ಯ ಎಂಬ ಪದದ ಅರ್ಥ ಪುಜ್ಯ ಎಂದೂ ಈ ಪದ ಉರ್ ಎಂಬ ಮೂಲದಿಂದ ಬಂದುದೆಂದೂ ವಿದ್ವಾಂಸರ ಅಭಿಪ್ರಾಯ. ೧೬ನೆಯ ಶತಮಾನದ ಕೊನೆಯಲ್ಲಿ ಭಾರತಕ್ಕೆ ಬಂದು ಗೋವದಲ್ಲಿ ಹಲವು ವರ್ಷಗಳ ಕಾಲ ತಂಗಿದ್ದ ಪಿಲಿಪೋ ಸಸೆಟ್ಟಿ ಎಂಬ ಫ್ಲಾರೆಂಟೈನಿನ ವ್ಯಾಪಾರಿ ಸಂಸ್ಕೃತ ಮತ್ತು ಯೂರೋಪಿನ ಕೆಲವು ಭಾಷೆಗಳಿಗೆ ನಿಕಟವಾದ ಸಂಬಂಧವಿದೆಯೆಂದು ಅಭಿಪ್ರಾಯಪಟ್ಟ. ೧೭೮೪ರಲ್ಲಿ ವಿಲಿಯಂ ಜೋನ್ಸ್ ಗ್ರೀಕ್ ಮತ್ತು ಲ್ಯಾಟಿನ್, ಗಾಥಿಕ್ ಮತ್ತು ಕೆಲ್ಟಿಕ್, ಸಂಸ್ಕೃತ ಮತ್ತು ಪುರಾತನ ಪಾರಸಿ ಭಾಷೆಗಳು ಒಂದೇ ಮೂಲದಿಂದ ಉತ್ಪನ್ನವಾದವುಗಳೆಂದು ಪ್ರತಿಪಾದಿಸಿದ. ಈ ತತ್ತ್ವದ ಆಧಾರದಮೇಲೆ ಒಂದೇ ಮೂಲಪ್ರದೇಶದಲ್ಲಿ ವಾಸವಾಗಿದ್ದು, ಕಾಲಕ್ರಮೇಣ ಯುರೋಪು ಮತ್ತು ಏಷ್ಯ ಖಂಡಗಳಲ್ಲಿ ಪ್ರಸರಿಸಿಕೊಂಡ ಕೆಲವು ಪಂಗಡಗಳಲ್ಲಿ ಒಂದರ ಭಾಷೆ ಇಂಡೋ-ಯುರೋಪಿಯನ್ ಭಾಷೆಯೆಂದೂ ಆ ಪಂಗಡದವರು ನೆಲೆ ನಿಂತ ಭಾಗಗಳಿಗನುಗುಣವಾಗಿ ಅವರ ಜೀವನ ಮತ್ತು ಭಾಷೆಯಲ್ಲಿ ವ್ಯತ್ಯಾಸಗಳಾದುವೆಂದೂ ವಿದ್ವಾಂಸರು ಅನುಮಾನಿಸಿದರು.
ಇತಿಹಾಸ
ಬದಲಾಯಿಸಿಮ್ಯಾಕ್ಸ್ ಮುಲರ್ ಮತ್ತು ಇನ್ನೂ ಅನೇಕ ವಿದ್ವಾಂಸರ ಪ್ರಕಾರ ಆರ್ಯರು ಮೂಲತಃ ಆಸ್ಟ್ರಿಯ, ಹಂಗರಿ ಮತ್ತು ಬೊಹೀಮಿಯ ಪ್ರದೇಶಗಳಲ್ಲಿ ವಾಸವಾಗಿದ್ದು ಕ್ರಮೇಣ ವಲಸೆ ಹೊರಟು, ಅವರಲ್ಲಿ ಒಂದು ಗುಂಪು ಜರ್ಮನಿ, ಇಟಲಿ ಮತ್ತು ಗ್ರೀಸ್ ದೇಶಗಳಲ್ಲಿ ಪ್ರಸರಿಸಿತು. ಮತ್ತೊಂದು ಗುಂಪು ಪುರ್ವಾಭಿಮುಖವಾಗಿ ಬಂದು ತುರ್ಕಿ, ಇರಾನ್ ಮತ್ತು ಭಾರತ ದೇಶಗಳಲ್ಲಿ ನೆಲೆಸಿತು. ಏಷ್ಯಮೈನರ್ ಪ್ರದೇಶದಲ್ಲಿ ಸಿಕ್ಕಿರುವ ಅತಿ ಪ್ರಾಚೀನವಾದ ಭೋಗಸ್ಕಾಯ್ ಶಾಸನದ ವಿವರಗಳು ಆರ್ಯರು ವಲಸೆ ಬಂದುದಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನೊದಗಿಸುತ್ತವೆ ಎಂದು ನಂಬಲಾಗಿದೆ. ಆರ್ಯರ ಮೂಲನಿವಾಸ ಕಪ್ಪು ಸಮುದ್ರ ತೀರಪ್ರದೇಶ ಮತ್ತು ಉಕ್ರೇನ್ ಪರ್ಯಾಯ ದ್ವೀಪವಾಗಿರಬೇಕೆಂದು ಹಲವು ವಿದ್ವಾಂಸರ ಅಭಿಪ್ರಾಯ. ಲೋಕಮಾನ್ಯ ಬಾಲಗಂಗಾಧರ ಟಿಳಕ್ ಮತ್ತು ಜಾಕೊಬಿ ಇವರು ಖಗೋಳಶಾಸ್ತ್ರಾಧ್ಯಯನದ ಆಧಾರದ ಮೇಲೆ ಆರ್ಯರು ಆರ್ಕ್ಟಿಕ್ ಪ್ರದೇಶದಲ್ಲಿ ವಾಸವಾಗಿದ್ದರೆಂದು ಹೇಳಿರುವರು. ಆದರೆ ಅನೇಕ ವಿದ್ವಾಂಸರು ಖಗೋಳಶಾಸ್ತ್ರಾಧಾರ ಮತ್ತು ಅದಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಒಪ್ಪುವುದಿಲ್ಲ. ಆರ್ಯರು ಹೊರಗಿನಿಂದ ಬಂದವರಲ್ಲ. ಅವರು ಭಾರತದ ಮೂಲನಿವಾಸಿಗಳಲ್ಲ, ಪ್ರಾರಂಭದಲ್ಲಿ ಸರಸ್ವತಿ ಮತ್ತು ಧೃಷದ್ವತೀ ನದಿಗಳ ಮಧ್ಯಪ್ರದೇಶವಾದ ಆರ್ಯಾವರ್ತದಲ್ಲಿ ವಾಸವಾಗಿದ್ದು ಕ್ರಮೇಣ ಭಾರತದ ಎಲ್ಲ ಭಾಗಗಳಲ್ಲೂ ಪ್ರಸರಿಸಿದುದಲ್ಲದೆ ಪಶ್ಚಿಮ ದೇಶಗಳಿಗೂ ಹೋಗಿ ನೆಲೆಸಿದರು ಎಂಬುದಾಗಿ ಹಲವು ವಿದ್ವಾಂಸರು ವಾದಿಸಿದ್ದಾರೆ. ವೇದವಾಙ್ಮಯದಲ್ಲಿ ಒಂದು ಸಾರಿಯಾದರೂ ಆರ್ಯರು ತಮ್ಮ ಪರಕೀಯ ಮೂಲವನ್ನು ಹೇಳಿಲ್ಲವೆಂಬುದು ಈ ವಿದ್ವಾಂಸರ ವಾದದ ಮುಖ್ಯ ಆಧಾರ. ಆದರೆ ಈ ವಾದವನ್ನು ಬಹುಮಂದಿ ವಿದ್ವಾಂಸರು ತಿರಸ್ಕರಿಸಿದ್ದಾರೆ. ವೇದಗಳ ರಚನೆಯ ಕಾಲವನ್ನು ಪ್ರ.ಶ.ಪು. ೨೦೦೦ ವರ್ಷಗಳ ಹಿಂದಕ್ಕೆ ಹಾಕಲು ಆಧಾರಗಳಿಲ್ಲ. ಅಲ್ಲದೆ ಸಿಂಧೂ ಸರಸ್ವತಿ ನಾಗರಿಕತೆ ಪ್ರ.ಶ.ಪು. ೨೫೦೦ ವರ್ಷಗಳಿಗಿಂತ ಹಿಂದೆಯೇ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬ ಅಂಶವನ್ನು ಎಲ್ಲ ವಿದ್ವಾಂಸರೂ ಒಪ್ಪುತ್ತಾರೆ. ಸೈಂಧವ ಮತ್ತು ಆರ್ಯರ ನಾಗರಿಕತೆಗಳು ಭಿನ್ನ ಎಂಬುದು ಸರ್ವವಿದಿತ. ಇವುಗಳಲ್ಲಿ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳೇ ಹೆಚ್ಚು. ಮೂರ್ತಿಪೂಜೆ, ಬರವಣಿಗೆ, ನಗರೀಕರಣ, ವೈವಿಧ್ಯಮಯ ಮಾತೃದೇವತಾ ಮತ್ತು ಪಶುಪತಿಯ ಆರಾಧನೆ, ಪರದೇಶಗಳೊಡನಿದ್ದ ನಿಕಟ ವಾಣಿಜ್ಯ ಸಂಪರ್ಕ, ಕೈಗಾರಿಕೆ ಮತ್ತು ಕಲಾಸಂಪನ್ನತೆ-ಇವುಗಳು ಸಿಂಧೂನದಿ ಬಯಲಿನ ಸಂಸ್ಕೃತಿಯ ಮುಖ್ಯ ಲಕ್ಷಣಗಳು. ವೈದಿಕ ನಾಗರಿಕತೆಯಲ್ಲಿ ಈ ಅಂಶಗಳು ಕಾಣಬರುವುದಿಲ್ಲ. ಅಲ್ಲದೆ ಇಲ್ಲಿನ ಮೂಲನಿವಾಸಿಗಳು ಚಪ್ಪಟೆಯಾದ ಮೂಗುಳ್ಳ ಕಪ್ಪು ಬಣ್ಣದ ದಸ್ಯುಗಳೆಂದೂ (ದ್ರಾವಿಡ) ಅವರನ್ನು ಸೋಲಿಸಿ ದಕ್ಷಿಣಾಪಥದ ಕಡೆಗೆ ಓಡಿಸಿದುದಾಗಿಯೂ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ವೇದಗಳ ಕಾಲ ನಿರ್ಣಯ ಕಷ್ಟಸಾಧ್ಯವಾದರೂ ವೇದಗಳಲ್ಲಿ ಸಾಕಷ್ಟು ಬಾರಿ ಸರಸ್ವತಿ ನದಿಯ ವರ್ಣನೆ ಇರುವ ಶ್ಲೋಕಗಳಿವೆ.ಸರಸ್ವತಿ ನದಿ ನಾಲ್ಕು ಸಾವಿರ ವರ್ಷಗಳ ಕೆಳಗೇ ಬತ್ತಿಹೋಗಿದೆ. ಆರ್ಯರ ವಲಸೆಯ ಕಾಲಕ್ಕೂ ವೇದಗಳ ರಚನೆಯ ಕಾಲಕ್ಕೂ ವ್ಯತ್ಯಾಸಗಳಿವೆ. ಅಲ್ಲದೇ ಸಿಂಧೂನದಿ ಬಯಲಿನ ಸಂಸ್ಕೃತಿಯ 'ಪಶುಪತಿ' ಒಂದು ಸಂಸ್ಕೃತ ಪದವಾಗಿದ್ದು ಆರ್ಯರು ಬರುವ ಮೊದಲೇ ಸಂಸ್ಕೃತ ಇಲ್ಲಿನ ಭಾಷೆಯಾಗಿತ್ತೇ?ಅಲ್ಲದೇ ಭಾರತೀಯ ಸಂಸ್ಕೃತಿಯ ಪವಿತ್ರ ನದಿಗಳಾದ ಗಂಗಾ ,ಯಮುನಾ,ಸರಸ್ವತಿ ಹಿಮಾಲಯ ಪರ್ವತ ಮಾನಸ ಗಂಗೋತ್ರಿ,ಹಾಗೂ ಮುಖ್ಯವಾಗಿ 'ಭಾರತ' ಇವೆಲ್ಲಾ ಆರ್ಯರು ವಲಸೆ ಬಂದ ನಂತರದ ಹೆಸರುಗಳೇ?. ಹಾಗಾದರೆ ಈ ನದಿ ಹಾಗೂ ಪ್ರದೇಶದ ಹೆಸರುಗಳು ಮೊದಲು ಏನಿದ್ದವು ಎಂಬ ಜಿಜ್ಞಾಸೆಯೂ ಮೂಡುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರೂ ಕೂಡ ಈ ಆರ್ಯರ ವಲಸೆ ಸಿದ್ದಾಂತವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಅವರು ತಮ್ಮ ಬರಹಗಳು ಮತ್ತು ಭಾಷಣಗಳು ಸಂಪುಟ 3 ಪುಟ 420 (ಇಂಗ್ಲಿಷ್ ಅವತರಣಿಕೆ)ಯಲ್ಲಿ ಆರ್ಯ ದಾಳಿಕೋರರು ಶೂದ್ರರನ್ನು ಪರಾಜಯಗೊಳಿಸಿದರೆಂದು ಭಾವಿಸುವುದು ಬಹುದೊಡ್ಡ ತಪ್ಪು. ವಾಸ್ತವವಾಗಿ ಆರ್ಯರು ಹೊರಗಿನಿಂದ ಬಂದು ಇಲ್ಲಿನ ಮೂಲನಿವಾಸಿಗಳ ಮೇಲೆ ದಾಳಿ ಮಾಡಿದರೆಂದು ಹೇಳುವುದಕ್ಕೆ ಯಾವುದೇ ಆಧಾರಗಳಿಲ್ಲ, ಆದರೆ ಭಾರತವೇ ಆರ್ಯರ ಮೂಲನಿವಾಸವೆಂದು ಹೇಳುವುದಕ್ಕೆ ಎಣೆಯಿಲ್ಲದಷ್ಟು ಆಧಾರಗಳಿವೆ. ಆರ್ಯರಿಗೆ ಮತ್ತು ದಸ್ಯಗಳಿಗೆ ಯುದ್ಧ ಜರುಗಿತೆಂದು ಹೇಳುವುದಕ್ಕೂ ಯಾವುದೇ ಸಾಕ್ಷಾಧಾರಗಳಿಲ್ಲ ಹಾಗೂ ದಸ್ಯಗಳಿಗೂ ಮತ್ತು ಶೂದ್ರರಿಗೂ ಯಾವುದೇ ವಿಧವಾದ ಸಂಬಂಧವೂ ಇಲ್ಲ. ಎಂದು ಅಭಿಪ್ರಾಯ ಪಡುತ್ತಾರೆ.
ಆರ್ಯ ಸಂಸ್ಕೃತಿ
ಬದಲಾಯಿಸಿಆರ್ಯರು ವಲಸೆ ಬಂದು ಸಿಂಧೂ ಮತ್ತು ಗಂಗಾ ನದಿಗಳ ಬಯಲಿನಲ್ಲಿ ನೆಲೆಸಿದ ಪ್ರಾರಂಭದಲ್ಲಿ ಅವರು ಬೆಳೆಸಿದ ಸಂಸ್ಕೃತಿಯನ್ನು ತಿಳಿಯಲು ವೇದಗಳೂ ಅದಕ್ಕೆ ಸಂಬಂಧಿಸಿದ ಬ್ರಾಹ್ಮಣಗಳೂ ಆರಣ್ಯಕಗಳೂ ಉಪನಿಷತ್ತುಗಳೂ ಮತ್ತು ವೇದಾಂಗಗಳೇ ಮುಂತಾದ ಸಂಸ್ಕೃತಕಾವ್ಯಗಳೂ ಆಧಾರಗಳು. ವೇದ ಎಂದರೆ ಜ್ಞಾನ. ವೇದಗಳಲ್ಲಿ ಆರ್ಯರ ರಾಜಕೀಯ, ಸಾಮಾಜಿಕ ಮತ್ತು ಮತೀಯ ಜೀವನದ ಮುಖ್ಯಾಂಶಗಳ ಚಿತ್ರ ಅಡಕವಾಗಿದೆ. ಕಂದುಮಿಶ್ರಿತ ಬಣ್ಣ, ದೃಢಕಾಯ ಹಾಗೂ ನೀಳವಾದ ಮೂಗು-ಇವು ಅವರ ಮುಖ್ಯ ಲಕ್ಷಣಗಳು. ಅವರು ಸಣ್ಣಪುಟ್ಟ ಹಳ್ಳಿಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಕುಟುಂಬ ವ್ಯವಸ್ಥೆ ಆರ್ಯರ ರಾಜಕೀಯ ಮತ್ತು ಸಾಮಾಜಿಕ ಜೀವನದ ಅಡಿಗಲ್ಲು. ರಕ್ತ ಸಂಬಂಧವನ್ನು ಹೊಂದಿದ್ದ ಅನೇಕ ಕುಟುಂಬಗಳ ಗುಂಪಿಗೆ ಒಬ್ಬ ಯಜಮಾನನಿರುತ್ತಿದ್ದ. ಅವರು ದಸ್ಯುಗಳೊಡನೆ ಹೋರಾಡಬೇಕಾಗಿತ್ತು. ಅನೇಕ ಸಲ ಅವರವರಲ್ಲೇ ಕಲಹಗಳಾಗುತ್ತಿದ್ದವು. ಯುದ್ಧದಲ್ಲಿ ಮುಖಂಡನ ಆವಶ್ಯಕತೆಯಿತ್ತು. ಆದ್ದರಿಂದ ಕೆಲವು ಹಳ್ಳಿಗಳ ಗುಂಪಿಗೆ ಒಬ್ಬೊಬ್ಬ ಮುಖಂಡನಿರುತ್ತಿದ್ದ. ಕಾಲಕ್ರಮೇಣ ಮುಖಂಡರ ಪ್ರಭಾವ ಬೆಳೆದು ಅವರು ರಾಜರಾದರು. ಪ್ರಾರಂಭದಲ್ಲಿ ರಾಜ ಅಥವಾ ಮುಖಂಡನನ್ನು ಚುನಾಯಿಸುತ್ತಿದ್ದರು. ಈ ಪದ್ಧತಿ ಕೊನೆಗೊಂಡ ಮೇಲೆ ರಾಜತ್ವ ವಂಶಪಾರಂಪರ್ಯ ಪದ್ಧತಿಯಾಯಿತು. ಸಿಂಧೂ ಮತ್ತು ಗಂಗಾನದಿಗಳ ಫಲವತ್ತಾದ ಬಯಲಿನಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳುದಯಿಸಿದವು. ರಾಜ್ಯದಲ್ಲಿ ಶಾಂತಿ ಸ್ಥಾಪಿಸುವುದು ಮತ್ತು ಹೊರಗಿನವರ ದಾಳಿಗಳಿಂದ ರಾಜ್ಯವನ್ನು ರಕ್ಷಿಸುವುದು ರಾಜನ ಮುಖ್ಯಕರ್ತವ್ಯಗಳಾದುವು. ಆಡಳಿತದಲ್ಲಿ ರಾಜನ ಸಹಾಯಕ್ಕೆ ಪುರೋಹಿತ, ಸೇನಾನಿ ಮತ್ತು ಗ್ರಾಮವೃದ್ಧರಿರುತ್ತಿದ್ದರು. ಯುದ್ಧಕಾಲದಲ್ಲಿ ಯೋಧರು ಕತ್ತಿ, ಗುರಾಣಿ, ಶಿರಸ್ತ್ರಾಣ ಮತ್ತು ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು. ಪ್ರಜೆಗಳು ತಮ್ಮ ಉತ್ಪತ್ತಿಯ ಒಂದು ಭಾಗವನ್ನು ರಾಜನಿಗೆ ಸಲ್ಲಿಸುತ್ತಿದ್ದರು. ರಾಜ ನಿರಂಕುಶ ಪ್ರಭುವಾಗಿರಲಿಲ್ಲ. ಸಭಾ ಮತ್ತು ಸಮಿತಿ ಎಂಬ ಪ್ರಜಾಮುಖ್ಯರ ಎರಡು ಸಭೆಗಳಿರುತ್ತಿದ್ದುವು. ರಾಜ್ಯದ ಮುಖ್ಯ ಸಮಸ್ಯೆಗಳನ್ನು ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತಿತ್ತು. ಪ್ರ.ಶ.ಪು. ೧೫೦೦ರ ಅನಂತರ ರಾಜರು ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳುತ್ತ ಬಂದರು. ಸಣ್ಣ ಪುಟ್ಟ ರಾಜ್ಯಗಳಿಗೆ ಬದಲಾಗಿ ಕ್ರಮೇಣ ಸಾಮ್ರಾಜ್ಯಗಳು ತಲೆಯೆತ್ತತೊಡಗಿದ್ದುವು. ರಾಜರು ಅಶ್ವಮೇಧ, ರಾಜಸೂಯ ಮುಂತಾದ ಯಾಗಗಳನ್ನು ಆಚರಿಸುತ್ತಿದ್ದರು.
ಆರ್ಯರ ಸಾಮಾಜಿಕ ವ್ಯವಸ್ಥೆ
ಬದಲಾಯಿಸಿಆರ್ಯಪಂಗಡ ಕುಟುಂಬಗಳಿಂದೊಡಗೂಡಿತ್ತು. ತಂದೆಗೆ ಕುಂಟುಂಬದ ಯಜಮಾನ ಸ್ಥಾನವೂ ತಾಯಿಗೆ ಗೌರವದ ಆದರೆ ಗೌಣಸ್ಥಾನವೂ ಇದ್ದುವು. ವ್ಯವಸಾಯ ಮತ್ತು ಪಶುಪಾಲನೆ ಮುಖ್ಯ ಕಸುಬಾಗಿತ್ತು. ಅವರಿಗೆ ನೇಗಿಲಿನ ಉಪಯೋಗ ತಿಳಿದಿತ್ತು. ಗೋಧಿ, ಬಾರ್ಲಿ, ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದರು. ದನಕರುಗಳೇ ಅವರ ಅತಿ ಮಹತ್ತ್ವದ ಪ್ರಾಣಿಗಳು. ಅವುಗಳೇ ಅವರ ಸಂಪತ್ತು. ಎಮ್ಮೆ, ಕುರಿ, ಮೇಕೆ, ಕುದುರೆ ಮತ್ತು ನಾಯಿ ಇವುಗಳು ಅವರ ಇತರ ಸಾಕುಪ್ರಾಣಿಗಳು. ಸಸ್ಯಾಹಾರ ಹಾಗೂ ಮಾಂಸಾಹಾರ ರೂಢಿಯಲ್ಲಿದ್ದುವು. ಅವರು ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನೂ ನಯ ಮಾಡಿದ ಚರ್ಮಗಳನ್ನೂ ತೊಡುತ್ತಿದ್ದರೆಂದು ತಿಳಿಯುತ್ತದೆ. ಚಿನ್ನ ಬೆಳ್ಳಿಯ ಒಡವೆಗಳನ್ನೂ ಧರಿಸುತ್ತಿದ್ದರು. ಸಂಭ್ರಮದ ದಿನಗಳಲ್ಲಿ ಸುರೆ ಹಾಗೂ ಸೋಮ ಎಂಬ ಮಾದಕ ಪಾನೀಯಗಳನ್ನು ಸೇವಿಸುತ್ತಿದ್ದರು. ನೂಲುವುದು, ನೇಯುವುದು, ನಗನಾಣ್ಯ ತಯಾರಿಕೆ, ಮನೆಕಟ್ಟುವುದು ಮತ್ತು ಲೋಹಗಳ ಕೆಲಸ-ಇವು ಇತರ ಉಪಕಸಬುಗಳಾಗಿದ್ದುವು. ಕ್ರಮೇಣ ವ್ಯಾಪಾರ ಬೆಳೆಯಿತು. ಪ್ರಾರಂಭದಲ್ಲಿ ಹಸು ವಸ್ತುವಿನಿಮಯದ ಮಾನದಂಡವಾಗಿತ್ತು. ಅನಂತರ ನಿಷ್ಕ, ಕಾರ್ಷಪಣ ಮುಂತಾದ ಚಿನ್ನ ಬೆಳ್ಳಿಯ ನಾಣ್ಯಗಳು ಬಳಕೆಗೆ ಬಂದುವು. ಕುದುರೆ ಜೂಜು, ರಥ ಪಂದ್ಯ ಮತ್ತು ಬೇಟೆಯಾಡುವುದು-ಇವು ಆರ್ಯರ ಮುಖ್ಯ ವಿನೋದ ಮತ್ತು ಜೂಜಾಟದ ಮಾರ್ಗಗಳಾಗಿದ್ದುವು. ವೈದಿಕಯುಗದ ಅಂತ್ಯದ ವೇಳೆಗೆ ಜಾತಿಪದ್ಧತಿ ಆಚರಣೆಗೆ ಬಂತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಾದುವು. ಕಸಬು ಜಾತಿಗೆ ಆಧಾರವಾಗಿತ್ತು. ಕ್ರಮೇಣ ಜಾತಿಪದ್ಧತಿ ವಂಶಪರಂಪರಾನುಗತವಾಗುತ್ತ ಬಂತು.
ಆರಾಧನೆ
ಬದಲಾಯಿಸಿಆರ್ಯರು ಸಚೇತನವೆಂದೆಣಿಸಿದ್ದ ಪ್ರಕೃತಿಯ ಅದ್ಭುತ ಶಕ್ತಿಗಳಾದ ಆಕಾಶ, ಸೂರ್ಯ, ಸಿಡಿಲು, ಮಿಂಚು, ಅಗ್ನಿ ಮುಂತಾದ ದೇವತೆಗಳನ್ನು ಆರಾಧಿಸುತ್ತಿದ್ದರು. ಆ ಶಕ್ತಿಗಳು ದಯಾಪುರ್ಣವೆಂಬ ಭಾವನೆಯಿದ್ದು, ಯಜ್ಞ ಯಾಗಾದಿಗಳಿಂದ ಅವುಗಳ ಕೃಪೆಯನ್ನು ಗಳಿಸಬಹುದೆಂಬ ನಂಬಿಕೆಯಿತ್ತು. ಮೂರ್ತಿಪೂಜೆ ಆಚರಣೆಯಲ್ಲಿರಲಿಲ್ಲ. ದೇವತೆಗಳಿಗೆ ಬಲಿಯನ್ನು ಅಗ್ನಿಯ ಮುಖಾಂತರ ಅರ್ಪಿಸುತ್ತಿದ್ದರು. ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ವಿಧಿಗಳು ವಿಶದವಾಗಿ ರೂಪಿತವಾಗಿದ್ದುವು. ಕಾಲಕ್ರಮೇಣ ಅನೇಕ ದೇವ ದೇವತೆಗಳನ್ನು ಪುಜಿಸುವ ಪದ್ಧತಿ ಪ್ರಾರಂಭವಾಯಿತು. ಆದರೂ ಸರ್ವಾಂತರ್ಯಾಮಿಯೂ ಸರ್ವಶಕ್ತನೂ ಆದ ಜಗನ್ನಿಯಾಮಕನೊಬ್ಬನೇ ಎಂಬ ಭಾವನೆ ಅವರಲ್ಲಿತ್ತು. ಶವಗಳನ್ನು ಸುಡುವ ಪದ್ಧತಿಯಿತ್ತು. ಸ್ವರ್ಗ ನರಕಗಳ ಕಲ್ಪನೆ ಪೂರ್ಣವಾಗಿ ಬೆಳೆದಿರಲಿಲ್ಲ. ವೇದಯುಗದಿಂದ ಇತಿಹಾಸಯುಗಕ್ಕೆ ಮುಂದುವರಿದಂತೆ ಅನೇಕ ಮಾರ್ಪಾಟುಗಳಾದುವು. ಆರ್ಯರು ದಕ್ಷಿಣದಲ್ಲೂ ನೆಲೆಸಿದರು. ವರ್ಣಾಶ್ರಮಧರ್ಮ ಪದ್ಧತಿ ಅನೂಚಾನವಾಗಿ ಬೇರೂರಿತು. ಜನಸಂಖ್ಯೆ ವೃದ್ಧಿಸಿತು. ಸಂಪದ್ಭರಿತವಾದ ಪಟ್ಟಣಗಳೂ ಸಾಮ್ರಾಜ್ಯಗಳೂ ಬೆಳೆದುವು. ಸಾಹಿತ್ಯ, ವಿಜ್ಞಾನ ಮತ್ತು ಧಾರ್ಮಿಕ ಗ್ರಂಥಗಳ ನಿರ್ಮಾಣ ಮುಂದುವರಿಯಿತು. ಮೂರ್ತಿಪುಜೆ ಆಚರಣೆಗೆ ಬಂತು. ಆರ್ಯ ದ್ರಾವಿಡ ಪದ್ಧತಿಗಳ ಸಮ್ಮಿಳನದಿಂದ ಹಿಂದೂ ಸಂಸ್ಕೃತಿ ಅಖಂಡವಾಗಿ ಬೆಳೆಯಲು ಪ್ರಾರಂಭಿಸಿತು.
ಆರ್ಯಧರ್ಮ
ಬದಲಾಯಿಸಿಆರ್ಯರ ಧರ್ಮ ಪ್ರಪಂಚದ ಅತಿ ಪ್ರಾಚೀನ ಧರ್ಮಗಳ ಪೈಕಿ ಒಂದು. ಆರ್ಯರ ಧರ್ಮವನ್ನು ತಿಳಿಯಲು ಋಗ್ವೇದ, ಜೆಂಡವೆಸ್ತ, ಜನಪದ ಸಾಹಿತ್ಯ, ಪೌರಾಣಿಕ ಪರಂಪರೆ, ಪ್ರಾಚೀನ ಸಂಪ್ರದಾಯಗಳು, ಪ್ರಾಚೀನ ಭಾಷೆಗಳು ಇತ್ಯಾದಿ ಮುಖ್ಯ ಸಾಧನಗಳಾಗಿವೆ. ಆರ್ಯರು ನಾಗರಿಕರೂ ಸುಸಂಸ್ಕೃತರೂ ಆದ ಜನಾಂಗವಾಗಿದ್ದರು. ಅವರಿಗೆ ಜೀವ-ಆತ್ಮ, ಜನ್ಮಾಂತರ, ಸ್ವರ್ಗ-ನರಕ, ಪುಣ್ಯ-ಪಾಪ, ಅದೃಷ್ಟ-ವಿಧಿ ಇವುಗಳ ಬಗೆಗೆ ನಿರ್ದಿಷ್ಟವಾದ ಕಲ್ಪನೆ ಮತ್ತು ನಂಬಿಕೆಗಳಿದ್ದುವು. ಸತ್ತವರನ್ನು ಹೂಳುವ ಇಲ್ಲವೇ ಸುಡುವ ಪದ್ಧತಿ ಇತ್ತು. ಆತ್ಮ ಅವಿನಾಶಿ ಎಂದು ನಂಬಿದ್ದರಿಂದ ಆತ್ಮನ ಮುಂದಿನ ಜೀವನಕ್ಕೆ ಸಹಾಯಕವಾಗಲಿ ಎಂಬ ನಂಬಿಕೆ ಅವರಿಗಿದ್ದಿರಬೇಕು. ಆದ್ದರಿಂದ ಸತ್ತವನನ್ನು ಹೂಳುವಾಗ ಆತನೊಂದಿಗೆ ಆತನಿಗೆ ಪ್ರಿಯವಾಗಿದ್ದ ವಸ್ತುಗಳನ್ನು ಇಡುತ್ತಿದ್ದರು. ದಹನ ಮಾಡಿದರೆ ಚಿತೆಯೊಂದಿಗೆ ಅವನ್ನು ಸೇರಿಸುತ್ತಿದ್ದರು; ಅಥವಾ ಚಿತಾಭಸ್ಮದೊಂದಿಗೆ ಇರಿಸುತ್ತಿದ್ದರು. ಅನೇಕ ಬಗೆಯ ವ್ರತ, ಹಬ್ಬಗಳನ್ನು ಆಚರಿಸುತ್ತಿದ್ದರು. ಸೂರ್ಯಚಂದ್ರರ ಆಧಾರದ ಮೇಲೆ ಕಾಲಗಣನೆ ಮಾಡುತ್ತಿದ್ದರು. ಅಗ್ನಿ ಮತ್ತು ವರುಣ ದೇವನ ಆರಾಧನೆಯನ್ನು ಮದುವೆ, ಅಗ್ನಿಷ್ಟೋಮಯಾಗ ಇತ್ಯಾದಿ ಅನೇಕ ಸಂದರ್ಭಗಳಲ್ಲಿ ಕಾಣಬಹುದಿತ್ತು. ಯಾವುದೇ ವ್ಯಕ್ತಿ ಅಪರಾಧಕ್ಕೆ ಸಮಾಜ ಹೊಣೆ ಹೊರುತ್ತಿರಲಿಲ್ಲ. ಅಕೃತ್ಯಕ್ಕೆ ಒಳಗಾದವನ ಕುಟುಂಬವೇ ಸೇಡು ತೀರಿಸುತ್ತಿತ್ತು. ಪಾಪಕೃತ್ಯ ಮಾಡಿದವರನ್ನು ಕಲ್ಲೇಟಿನಿಂದ ಶಿಕ್ಷಿಸುತ್ತಿದ್ದುದೂ ಉಂಟು. ಹಂದಿ, ಮೇಕೆ, ಹಸು, ಕುದುರೆ ಮೊದಲಾದ ಪ್ರಾಣಿಗಳ ಬಲಿಪುಜೆ ಬಳಕೆಯಲ್ಲಿತ್ತು. ಪ್ರಾಣಿಬಲಿಯ ಜೊತೆಗೆ ನರಬಲಿಯೂ ನಡೆಯುತ್ತಿದ್ದುದು ಉಂಟು. ಆಣೆ ಇಡುವ, ಶಪಥ ಮಾಡುವ, ಕಣಿ ಕೇಳುವ, ಕನಸು, ಶುಭ ಶಕುನ-ಅಪಶಕುನಗಳ ಬಗ್ಗೆ ಅವರದೇ ಆದ ಪದ್ಧತಿ-ಪರಂಪರೆಗಳಿದ್ದುವು. ಆರ್ಯರು ಪಿತೃವರ್ಗದ ಆರಾಧಕರೂ ಪ್ರಕೃತಿಯ ಆರಾಧಕರೂ ಆಗಿದ್ದರು. ಮಂತ್ರ-ಮಾಟ, ಆರಾಧನೆ-ಪುಜೆ, ಜಪ-ತಪ ಮೊದಲಾದ ಕಾರ್ಯಗಳಿಗೆ ಪ್ರತ್ಯೇಕ ಪುರೋಹಿತವರ್ಗವಿತ್ತು. ಮದ್ಯಪಾನ, ಮಾಂಸಾಹಾರ ಮೊದಲಾದ ಆಹಾರ ಪದ್ಧತಿಗಳೂ ಬಳಕೆಯಲ್ಲಿದ್ದುವು. ಆಕಾಶ, ಸೂರ್ಯ, ಚಂದ್ರ, ನಕ್ಷತ್ರಗಳ ಬಗ್ಗೆ ಪುರಾಣ ಕಲ್ಪನೆಗಳು ಬೆಳೆದಿದ್ದುವು. ಸಾಕಷ್ಟು ಲೈಂಗಿಕ ಸ್ವಾತಂತ್ರ್ಯ ಇರುತ್ತಿತ್ತು. ಸರ್ಪಪುಜೆ, ಅಗ್ನಿಪುಜೆ, ಆಕಾಶಪುಜೆ, ವೃಕ್ಷಪುಜೆಗಳೂ ಕಲ್ಲು, ಮರ, ಮಣ್ಣುಗಳಲ್ಲಿ ನಿರ್ಮಿಸಿದ ಮೂರ್ತಿಪುಜೆಯೂ ಆರ್ಯರಲ್ಲಿತ್ತು. ಪುಜಾಕಾಲದಲ್ಲಿ ನೃತ್ಯ ಸಂಗೀತಗಳು ಜರುಗುತ್ತಿ ದ್ದುವು. ಪ್ರಪಂಚದ ಅತಿ ಪ್ರಾಚೀನತಮ ಧರ್ಮಗಳಲ್ಲಿ ಒಂದಾದ ಆರ್ಯಧರ್ಮ ಶುದ್ಧರೂಪದಲ್ಲಿ ಅಲ್ಲವಾದರೂ ಮಿಶ್ರರೂಪದಲ್ಲಿ ಉಳಿದುಬಂದಿದೆ. ಆರ್ಯಧರ್ಮವನ್ನು ವಿಶೇಷವಾಗಿ ಹಿಂದೂ ಧರ್ಮದಲ್ಲಿ ಕಾಣಬಹುದು. ಇತ್ತೀಚೆಗೆ ಆರ್ಯ-ದ್ರಾವಿಡ ಸಂಸ್ಕೃತಿಯ ಬಗೆಗೆ ಸಾಕಷ್ಟು ಚರ್ಚೆ ನಡೆದಿದೆ ಆಸ್ಕೊಪಪೆರ್್ಪಲ ಎಂಬ ವಿದ್ವಾಂಸ ಈ ಕುರಿತು ಹೊಸ ಹೊಸ ವಿಚಾರಗಳನ್ನು ಹೊರಡಿಸಿದ್ದಾನೆ.[೧]
ಟಿಪ್ಪಣಿ
ಬದಲಾಯಿಸಿ??
- ಈ ಲೇಖನ ಊಹಿತ ಪುರಾತನ ಜನಾಂಗ ಆರ್ಯರ' (ಆಂಗ್ಲ: Aryan) ಬಗ್ಗೆ
ಹಿಂದೂ ಸಂಸ್ಕೃತಿಯಲ್ಲಿ 'ಸಾತ್ವಿಕ' ಅಥವ 'ಹಿರಿಯ' ಎಂಬ ಅರ್ಥದ ಉಪಯೋಗಕ್ಕೆ ಈ ಲೇಖನವನ್ನು ಓದಿ.
ಭಾರತದ ವೈದಿಕ ನಾಗರೀಕತೆ ಮತ್ತು ಇರಾನ್ ದೇಶದ ಫಾರ್ಸಿ ಸಾಮ್ರಾಜ್ಯಗಳ ಜನರು ಸುಮಾರು ಕ್ರಿ.ಪೂ. ೨೫೦೦ರ ಮುಂಚೆ ಒಂದೇ ಜನಾಂಗದವರಾಗಿದ್ದರೆಂದು ಊಹಿಸಲಾಗಿದೆ. ಈ ಊಹಿತ ಜನಾಂಗದವರ ಸ್ವನಾಮ ಆರ್ಯರು ಎಂದು ಊಹಿಸಲಾಗಿದೆ.