ತಿಮ್ಮ ಎಂದೇ ಪ್ರಸಿದ್ಧರಾದ ತಿಮ್ಮಣಾರ್ಯ ಸು. 1600ರಲ್ಲಿ ಕನ್ನಡ ಅಲಂಕಾರಿಕ ನವರಸಾಲಂಕಾರದ ಕರ್ತೃ. ಕಾವ್ಯಮೀಮಾಂಸೆಯಲ್ಲಿ ಅಲಂಕಾರ, ರೀತಿ, ಧ್ವನಿ- ಇವು ಪ್ರಸ್ಥನತ್ರಯ ಎಂದು ಪ್ರಸಿದ್ಧವಾಗಿವೆ. ರಸವಿಚಾರ ಭರತನಾಟ್ಯಶಾಸ್ತ್ರದಲ್ಲಿ ಮೊತ್ತಮೊದಲು ಪ್ರತಿಪಾದಿವಾಗಿದ್ದು. ಆನಂದವರ್ಧನನಿಂದ (9ನೆಯ ಶತಮಾನ) ಈಚೆಗೆ ಪ್ರಾಧಾನ್ಯ ಪಡೆಯಿತು. ಈ ಕಾರಣದಿಂದ, ಸಂಸ್ಕೃತ ಲಾಕ್ಷಣಿಕರಾದ ಭಾಮಹ, ದಂಡಿ, ವಾಮನ, ರುದ್ರಟ ಇವರನ್ನು ಅನುಸರಿಸಿ ಬರೆದಿರುವ ಕವಿರಾಜಮಾರ್ಗ, ಉದಯಾದಿತ್ಯಾಲಂಕಾರ, ಕಾವ್ಯಾವಲೋಕನ-ಈ ಕನ್ನಡ ಅಲಂಕಾರ ಶಾಸ್ತ್ರ ಗ್ರಂಥಗಳು ರಸವಿಚಾರವನ್ನು ಪ್ರಾಸಂಗಿಕವಾಗಿ ಪ್ರಸ್ತಾವಿಸಿವೆಯೇ ಹೊರತು ಅದನ್ನು ವಿಸ್ತಾರವಾಗಿ ಪ್ರತಿಪಾದಿಸುವ ಗೋಜಿಗೆ ಹೋಗಿಲ್ಲ. ಕವಿಕಾಮನ ಶೃಂಗಾರರತ್ನಾಕರ (ಸು. 1200) ರಸವಿಚಾರವನ್ನು ಪ್ರತಿಪಾದಿಸುವ ಮೊದಲ ಕನ್ನಡ ಲಕ್ಷಣ ಗ್ರಂಥ; ಇದರಲ್ಲಿ ಶೃಂಗಾರರಸಕ್ಕೆ ಪ್ರಾಧಾನ್ಯ. ಎರಡನೆಯದು ಸಾಳ್ವನ (ಸು. 1550) ರಸರತ್ನಾಕರ, ಮೂರನೆಯದೇ ತಿಮ್ಮನ ನವರಸಾಲಂಕಾರ. ಇದಕ್ಕೆ ಅಲಂಕಾರಸಾರಸಂಗ್ರಹ ಎಂಬ ಹೆಸರೂ ಇರುವಂತಿದೆ.

ಇತಿವೃತ್ತ

ಬದಲಾಯಿಸಿ

ಕವಿಯ ವಿಚಾರವಾಗಿ ಹೆಚ್ಚು ಸಂಗತಿಗಳು ತಿಳಿದು ಬಂದಿಲ್ಲ. ಆಂತರಿಕ ಪ್ರಮಾಣಗಳಿಂದ ಹೇಳುವುದಾದರೆ ಈತ ಬ್ರಾಹ್ಮಣ ಕವಿ; ರಾಯಣನ ಮಗ; ತಿಮ್ಮ (ತಿಮ್ಮಣಾರ್ಯ, ತಿಮ್ಮಣ್ಣ) ಎಂದು ಹೆಸರು; ಕವಿಕುಲಚಕ್ರವರ್ತಿ, ಕವಿಭಾಳಲೋಚನ, ರಸಿಕಬ್ರಹ್ಮ, ಉಭಯ ಕವಿಶರಭಭೇರುಂಡ, ಎಂಬಿವು ಬಿರುದುಗಳು. ಸಾಳ್ವನ ರತ್ನಾಕರದ ಹಲಕೆಲವು ಸೂತ್ರಗಳೂ ವಾಕ್ಯಗಳೂ ತಿಮ್ಮನ ಕೃತಿಯಲ್ಲಿ ಕಂಡುಬರುವುದರಿಂದ ಈತ ಅವನಿಗಿಂತ ಈಚಿನವ ಎಂಬುದು ಸ್ಪಷ್ಟ. ಸು. 1600ರಲ್ಲಿ ಇದ್ದಿರಬಹುದೆಂದು ಕವಿಚರಿತ್ರೆಕಾರರು ಊಹಿಸಿದ್ದಾರೆ.

ಸಾಳ್ವನ ರಸರತ್ನಾಕರದಂತೆ ಇವು ಗದ್ಯಪದ್ಯಗಳಿಂದ ಕೂಡಿದೆ. ಆದರೂ ಇದು ಕಾವ್ಯವಲ್ಲವಾದ್ದರಿಂದ ಚಂಪೂ ಎಂಬ ಹೆಸರು ಇದಕ್ಕೆ ಸಲ್ಲುವುದಿಲ್ಲ. ತನಗೆ ಹಿಂದಿನವರಾದ ಶೃಂಗಾರರತ್ನಾಕರದ ಕವಿಕಾಮ, ಕಾವ್ಯಾವಲೋಕನದ ಎರಡನೆಯ ನಾಗವರ್ಮ-ಈ ಕನ್ನಡ ಅಲಂಕಾರಿಕರನ್ನೂ ಹೇಮಚಂದ್ರ, ಅಮೃತಾನಂದ, ಸಿಂಗಭೂಪಾಲ ಎಂಬ ಸಂಸ್ಕೃತ ಅಲಂಕಾರಿಕರನ್ನೂ ತಾನು ಅನುಸರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಒಟ್ಟಿನ ಮೇಲೆ, ರಸಪ್ರಕ್ರಿಯೆಯ ವಿಚಾರದಲ್ಲಿ ಈತನ ಕೃತಿ ಪೂರ್ವ ಅಲಂಕಾರ ಗ್ರಂಥಗಳ ಸಾರಸಂಗ್ರಜವೇ ಸರಿ; ಇದರಲ್ಲಿ ಸ್ವಂತರಚನೆಯ ಪ್ರಮಾಣ ಬಹು ಕಡಿಮೆ. ಪಂಪ, ಪೊನ್ನ, ನಾಗಚಂದ್ರ, ನೇಮಿಚಂದ್ರ ಮುಂತಾದ ಪೂರ್ವಕವಿಗಳ ಪದ್ಯಗಳನ್ನು ಲಕ್ಷ್ಯಗಳಾಗಿ ಉದಾಹರಿಸಿದ್ದಾನೆ. ಇದೊಂದೇ ವಿಶೇಷ. ವಿಭಾವಾನುಭಾವ ಸಂಚಾರಿ ಸಾತ್ವಿಕಗಳಿಂ ಉತ್ಸಾಹಸ್ಥಾಯಿ ಪುಷ್ಟಮಾಗೆ ವೀರರಸಂ ಎಂಬ ವಾಕ್ಯವನ್ನು ನೋಡಿದರೆ ರಸ ನಿಷ್ಪತ್ತಿ ವಿಚಾರದಲ್ಲಿ ಭರತನ ರಸಸೂತ್ರವನ್ನೇ ಈತ ಅನುಸರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಎತ್ತ ನೋಡಿದರೂ ವೃತ್ತ ಕಂದಗಳೇ ತುಂಬಿಕೊಂಡಿರುವಾಗ ಇವುಗಳ ನಡುವೆ ಎರಡು ಷಟ್ಟದಿಗಳೂ ಒಂದು ತ್ರಿಪದಿಯೂ ಕಾಣಿಸಿಕೊಳ್ಳುವುದು ಗಮನಾರ್ಹವಾಗಿದೆ ಎಂದು ಹೇಳಿ, ಶಕುಂತಲೆ ಗಿಡಬಳ್ಳಿಗಳಿಗೆ ನೀರೆಯುತ್ತಿರುವಾಗ ದುಷ್ಯಂತ ಮರೆಯಿಂದ ಅವಳನ್ನು ನೋಡದ ಸನ್ನಿವೇಶವನ್ನು ಚಿತ್ರಿಸಿರುವ ಒಂದು ವಾರ್ಧಕ ಷಟ್ಟದಿಯ ಪದ್ಯವನ್ನು ತೀ.ನಂ.ಶ್ರೀಕಂಠಯ್ಯನವರು ತಮ್ಮ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಎತ್ತಿಕೊಟ್ಟಿದ್ದಾರೆ. ಕಾಳಿದಾಸಶಾಕುಂತಲ ನಾಟಕವನ್ನು ಅವಲಂಬಿಸಿ ಯಾರೋ ಬರೆದಿದ್ದ ಷಟ್ಟದಿ ಕಾವ್ಯದಿಂದ ತಿಮ್ಮ ಈ ವರ್ಣನೆಯ ಪದ್ಯವನ್ನು ಆರಿಸಿಕೊಂಡಿರಬೇಕು ಎಂದು ಊಹಿಸಿದ್ದಾರೆ. ವಿರಾಜತೇ ರಾಯಣ ತಿಮ್ಮಣಾರ್ಯೋ ಭಾಷಾದ್ವಯೀನಿರ್ಮಿತ ಕಾವ್ಯಶೇಷಃ ಎಂಬ ಕವಿಯ ಹೇಳಿಕೆಯನ್ನೂ ಮುಖ್ಯವಾಗಿ ಉಭಯಕವಿಭೇರುಂಡ ಎಂಬ ಬಿರುದು ಮತ್ತು ಇತರ ಬಿರುದುಗಳನ್ನೂ ಗಮನಿಸಿದರೆ ಈತ ಕನ್ನಡ ಸಂಸ್ಕøತಗಳೆರಡರಲ್ಲೂ ಕಾವ್ಯರಚನೆ ಮಾಡಿದ್ದನೆಂಬುದರಲ್ಲಿ ಸಂದೇಹವಿಲ್ಲ. ಆದರೆ ಈತನ ಯಾವ ಕಾವ್ಯವೂ ಸಿಕ್ಕಿಲ್ಲ. ಗ್ರಂಥದಲ್ಲಿ ಉದ್ಧøತವಾಗಿರುವ ಶಕುಂತಲಾದರ್ಶನ ಸನ್ನಿವೇಶವನ್ನು ವರ್ಣಿಸುವ ಪದ್ಯವನ್ನು ತಿಮ್ಮ ತನ್ನ ಸ್ವಂತ ಕಾವ್ಯದಿಂದಲೇ ತೆಗೆದುಕೊಂಡಿರಬಹುದು ಎಂದು ಊಹಿಸುವುದಕ್ಕೂ ಅವಕಾಶವಿದೆ. ತ್ರಿಪದಿ ಮಾತ್ರ ಜನ್ನಅನಂತನಾಥ ಪುರಾಣದಿಂದ ತೆಗೆದುಕೊಂಡಿದ್ದು.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: