ಕವಿಕಾಮ : - ಸು. ೧೨೦೦. ಕನ್ನಡದಲ್ಲಿ ಮೊದಲ ಬಾರಿಗೆ ರಸಪ್ರಕರಣ ವಿಷಯವನ್ನು ವಿಸ್ತಾರವಾಗಿ ಗ್ರಂಥರಚನೆ ಮಾಡಿದ ಖ್ಯಾತಿಗೆ ಸಂದ ಕವಿ. ಈತನನ್ನು ಪಾರ್ಶ್ವ ಕವಿ (ಸು. ೧೨೦೫) ಮತ್ತು ಸಾಳ್ವರು (೧೬ನೆಯ ಶತಮಾನ) ಸ್ತುತಿಸಿದ್ದಾರೆ.

ಈತ ಸ್ಮಾರ್ತಬ್ರಾಹ್ಮಣನೆಂಬ ವಿಷಯ ಈತನ ಗ್ರಂಥದ ಆಶ್ವಾಸಾಂತ್ಯ ಗದ್ಯದಿಂದ ತಿಳಿದುಬರುತ್ತದೆ. ಈತನಿಗೆ ಶೃಂಗಾರರತ್ನಾಕರ, ಕವಿಮುಖಮುಕುರ ಮೊದಲಾದ ಬಿರುದುಗಳಿದ್ದಂತೆ ತೋರುತ್ತದೆ. ತನ್ನ ಗ್ರಂಥದಲ್ಲಿ ಅಮರಸಿಂಹ, ಚಂದ್ರದತ್ತ ಮೊದಲಾದ ಸಂಸ್ಕೃತ ಕವಿಗಳನ್ನು ಈತ ಸ್ಮರಿಸಿದ್ದಾನೆ.

  • "ಶೃಂಗಾರರತ್ನಾಕರ" ಇವನ ಗ್ರಂಥ. ಇದಕ್ಕೆ ರಸವಿವೇಕವೆಂಬ ಇನ್ನೊಂದು ಹೆಸರೂ ಉಂಟು. ಈ ಗ್ರಂಥದಲ್ಲಿ ನಾಲ್ಕು ಪರಿಚ್ಛೇದಗಳಿವೆ. ಅವುಗಳು ಕ್ರಮವಾಗಿ ಹೀಗಿವೆ: - ೧. ನವರಸವ್ಯಾವರ್ಣನ ೨. ಭಾವಭೇದ ನಿರ್ಣಯ ೩. ನಾಯಕ ನಾಯಿಕಾ ವಿಕಲ್ಪವಿಸ್ತರ ೪. ಸಖಸಖೀ ಸಂಭೋಗ ವಿಪ್ರಲಂಭ ಪ್ರಮಾದಾವಸ್ಥಾದಿ ವಿಸ್ತರ. ಮೊದಲ ಅಧ್ಯಾಯದಲ್ಲಿ ಶೃಂಗಾರರಸೋತ್ಪತ್ತಿಕ್ರಮ, ಶೃಂಗಾರರಸಗಳ ವರ್ಣಗಳು, ಶೃಂಗಾರಾದಿ ನವರಸಗಳಿಗೆ ಅಧಿದೇವತೆಗಳು, ಶೃಂಗಾರರಸಭೇದ, ಅದರ ಲಕ್ಷಣಗಳು, ಹಾಸ್ಯ, ರೌದ್ರ, ಕರುಣ, ವೀರ, ಅದ್ಭುತ, ಬೀಭತ್ಸ, ಭಯಾನಕ ಮತ್ತು ಶಾಂತಿರಸಭೇದಗಳು ಮತ್ತು ಅವುಗಳ ಲಕ್ಷಣಗಳು ಮೂಡಿಬಂದಿವೆ. ಎರಡನೆಯ ಅಧ್ಯಾಯದಲ್ಲಿ ೪೯ ಬಗೆಬಗೆಯ ಭಾವಭೇದಗಳು, ಎಂಟು ಬಗೆಯ ಸ್ಥಾಯಿಭಾವಗಳು ವಿವರಿಸಲ್ಪಟ್ಟಿವೆ. ಮೂರನೆಯ ಅಧ್ಯಾಯದಲ್ಲಿ ನಾಯಿಕಾ ಭೇದ ಮತ್ತು ನಾಯಿಕಾ ಪ್ರಭೇದಗಳ ವಿವರಣೆ ಇದೆ. ಕೊನೆಯ ಅಧ್ಯಾಯದಲ್ಲಿ ಸಖ, ಸಖೀ ಸಂಭೋಗ, ವಿಪ್ರಲಂಭ_ಇವೇ ಮೊದಲಾದ ಅವಸ್ಥೆಗಳ ವರ್ಣನೆ ನಿರೂಪಿತವಾಗಿದೆ. ಕನ್ನಡದಲ್ಲಿ ರಸಪ್ರಕರಣವನ್ನು ವಿಸ್ತಾರವಾಗಿ ಪ್ರತಿಪಾದಿಸುವ ಗ್ರಂಥಗಳಲ್ಲಿ ಇದೇ ಮೊದಲನೆಯದು. ‘ರಸಮೇ ಮೊದಲ್ ಕವಿತೆಗೆ’ ಎಂದೀತ ಹೇಳಿದ್ದಾನೆ. ಸಂಸ್ಕೃತದ ಆಲಂಕಾರಿಕರು ರಸದ ಬಗ್ಗೆ ಹೇಳಿರುವುದಕ್ಕಿಂತ ಭಿನ್ನವಾದ ಒಂದೆರಡು ಅಂಶಗಳು ಇವನಲ್ಲುಂಟು. ಇವನಿಗೆ ಅದ್ಭುತವಾದ ಅವಧಾನ ಶಕ್ತಿಯಿತ್ತೆಂದು ಒಂದು ಪದ್ಯದಿಂದ ಊಹಿಸಬಹುದು:

ಎಸಕಂಬೆತ್ತ ಮತಿಪ್ರಕಾಶಮದನಿನ್ನೇನೆಂದಪೆಂ ಚೇಟಿ ನಾ |

ಲ್ದೆಸೆಯೊಳ್ ನಾಲ್ವರ ಕಂಠದೊಳ್ ಬರೆಯೆ ಕಬ್ಬಂ ಬೇೞ್ವನೊಲ್ದತ್ತಲಾ |

ಡಿಸುವಂ ನೆತ್ತಮನಿತ್ತಲೋದಿದೊಡೆ ತಪ್ಪಂ ಪೇೞ್ದದಂ ತಿರ್ದಿಯಾ |

ಲಿಸುವಂ ಗೀತಮನೆನ್ನುಮಂ ನಗಿಸುವಂ ಶೃಂಗಾರರತ್ನಾಕರಂ ||

ಕವಿಕಾಮನ ಗ್ರಂಥದಿಂದ ಸಾಳ್ವ ತನ್ನ ರಸರತ್ನಾಕರದಲ್ಲಿಯೂ "ತಿಮ್ಮರಸ" ತನ್ನ ನವರಸಾಲಂಕಾರದಲ್ಲಿಯೂ ಅನೇಕ ಲಕ್ಷಣಪದ್ಯಗಳನ್ನು ಉದ್ಧರಿಸಿದ್ದಾರೆ. ಮಲ್ಲಿಕಾರ್ಜುನ ಕವಿ ಈತನ ಗ್ರಂಥದಿಂದ ಹಲವಾರು ಪದ್ಯಗಳನ್ನು ತನ್ನ ಸೂಕ್ತಿಸುಧಾರ್ಣವದಲ್ಲಿ ಉದಾಹರಿಸಿದ್ದಾನೆ. ಪಾಶರ್ವ್‌ಕವಿ ತನ್ನ ಗ್ರಂಥದಲ್ಲಿ:

ಕಾಮನ ಬಾಣಕ್ಕಂ ಕವಿ

ಕಾಮನ ಬಾಣಕ್ಕಮಿಲ್ಲ ಭೇದಂ ಸುಮನೋ

ರಾಮತೆಯಿಂದ ಸ್ತನಶತಕೋ

ದ್ದಾಮತೆಯಿಂ ಭುವನಮಂ ವಶಂ ಮಾೞ್ಪದಱಿ


ಎಂದು ಹೇಳಿರುವುದರಿಂದ ಕವಿಕಾಮ ಸ್ತನಶತಕವೆಂಬ ಶತಕಗ್ರಂಥವನ್ನೂ ಬರೆದಿರಬಹುದೆಂದು ಊಹಿಸುವವರಿದ್ದಾರೆ. ಆದರೆ ಈ ಗ್ರಂಥ ಸಿಕ್ಕಿಲ್ಲ. ಇದಲ್ಲದೆ ಈತ ಇನ್ನೂ ಅನೇಕ ಗ್ರಂಥಗಳನ್ನು ರಚಿಸಿರಬಹುದೆಂದು ಕವಿಚರಿತೆಕಾರರು ಊಹಿಸಿದ್ದಾರೆ. (ಎಚ್.ಎಸ್.ಎಚ್.)

"https://kn.wikipedia.org/w/index.php?title=ಕವಿಕಾಮ&oldid=821055" ಇಂದ ಪಡೆಯಲ್ಪಟ್ಟಿದೆ