ತಲಕಾಡಿನ ಗಂಗರ ವಾಸ್ತುಶಿಲ್ಪ

ತಲಕಾಡಿನ ಗಂಗರ ಕಾಲದ ವಾಸ್ತುಶಿಲ್ಪದ ಮಾದರಿಗಳು ಹೆಚ್ಚು ಉಳಿದುಬಂದಿಲ್ಲ. ಕೆಲವು ಸಂಪೂರ್ಣವಾಗಿ ನಾಶವಾಗಿದ್ದರೆ ಹಲವು ಮುಂದಿನ ತಲೆಮಾರುಗಳಲ್ಲಿ ಬಹುಮಟ್ಟಿಗೆ ಬದಲಾವಣೆ ಹೊಂದಿವೆ. ಗಂಗರು ಕಟ್ಟಿಸಿದ ಬಸದಿಗಳನ್ನೂ ದೇವಾಲಯಗಳನ್ನೂ ಶಾಸನಗಳೇನೋ ತಿಳಿಸುತ್ತವೆ. ಹರಿವರ್ಮನ ಕಾಲದಲ್ಲಿದ್ದ ಮೂಲಸ್ಥಾನೇಶ್ವರ, ಅವಿನೀತನ ಹೆಸರಿನಲ್ಲಿ ಕಟ್ಟಿಸಿದ್ದಿರಬಹುದಾದ ವಿನೀತೇಶ್ವರ, ಮಾಧವ ಅವಿನೀತರು ದತ್ತಿಬಿಟ್ಟ ಅರ್ಹತಾಯತನ, ಶ್ರೀಪುರುಷನ ಕಾಲದಲ್ಲಿ ಕಂದಚ್ಚಿ ಕಟ್ಟಿಸಿದ ಜಿನಬಸದಿ, ಇವಲ್ಲದೆ ನೀತಿಮಾರ್ಗೇಶ್ವರ, ಜಗಧರನಗರೇಶ್ವರ, ಶಿವಮಾರೇಶ್ವರ, ಶಿವಮಾರನ ಬಸದಿ ಮುಂತಾದ ಹೆಸರುಗಳು ಅವರ ಕಾಲದ ಶಾಸನಗಳಲ್ಲಿವೆ. ಈಗ ಉಳಿದು ಬಂದಿರುವ ಕಟ್ಟಡಗಳಲ್ಲಿ ಕೆಲವು ಅವುಗಳ ವಾಸ್ತು ಮತ್ತು ಶಿಲ್ಪಶೈಲಿಯಿಂದ ಗಂಗರ ಕಾಲಕ್ಕೆ ಸೇರಿದವೆಂದು ನಿರ್ದಿಷ್ಟವಾಗಿ ಹೇಳಬಹುದಾದರೂ ಅವು ಯಾರ ಕಾಲದಲ್ಲಿ ನಿರ್ಮಾಣವಾದುವೆಂದು ತಿಳಿಸಲು ಶಾಸನಾಧಾರಗಳಿಲ್ಲ. ಆದ್ದರಿಂದ ಗಂಗರ ವಾಸ್ತುಶಿಲ್ಪದ ಹುಟ್ಟು ಬೆಳವಣಿಗೆಗಳನ್ನು ಸ್ಪಷ್ಟವಾಗಿ ಚಿತ್ರಿಸಲು ಆಧಾರಗಳು ಸಾಲವು; ಈಗ ಅಳಿದುಳಿದಿರುವ ಕೆಲವು ಅವಶೇಷಗಳಿಂದ ಅವುಗಳ ಸ್ಥೂಲರೂಪರೇಖೆಗಳನ್ನು ಗುರುತಿಸಬಹುದು.

ಇಟ್ಟಿಗೆ, ಗಾರೆಯ ಕಟ್ಟಡಗಳು

ಬದಲಾಯಿಸಿ

ಗಂಗರ ಮೊದಲ ಕಟ್ಟಡಗಳು ಇಟ್ಟಿಗೆ, ಗಾರೆ, ಮರಗಳಿಂದ ನಿರ್ಮಿತವಾಗಿರಬೇಕು, ಮಂಡಲಿಯಲ್ಲಿ ದಡಿಗ-ಮಾಧವರು ಕಟ್ಟಿಸಿದ್ದ ಬಸದಿಯನ್ನು ಮುಂದೆ ಅವರ ವಂಶದವರು ಮರವೆಸನಾಗಿ ಮಾಡಿ ಪಟ್ಟಣದ ಬಸದಿಯೆಂದು ಹೆಸರಿಟ್ಟಿದ್ದುದಾಗಿ ಅಲ್ಲಿಯ ಶಾಸನ ತಿಳಿಸುತ್ತದೆ. ನೊಣಮಂಗಲದಲ್ಲಿ ಪಾಳುದಿಬ್ಬವೊಂದನ್ನಗೆಯುತ್ತಿದ್ದಾಗ ಬೆಳಕಿಗೆ ಬಂದ ಬಸದಿಯೊಂದರಲ್ಲಿ ದೊರೆತ ಎರಡು ತಾಮ್ರ ಶಾಸನಗಳು ಗಂಗರಾಜ ಮಾಧವನೂ ಅವನ ಮಗ ಅವಿನೀತನೂ ಅರ್ಹತಾಯತನಕ್ಕೆ ದತ್ತಿ ಬಿಟ್ಟ ವಿಷಯವನ್ನು ತಿಳಿಸುತ್ತವೆ. ಅಗಲವಾದ, ಆದರೆ ತೆಳುವಾದ ಇಟ್ಟಿಗೆಗಳಿಂದ ನಿರ್ಮಿತವಾಗಿದ್ದ ಈ ಬಸದಿಯನ್ನು ಊರಿನವರು ಈಚೆಗೆ ಅಗೆದುಹಾಕಿರುವುದರಿಂದ ಕಟ್ಟಡದ ವಿನ್ಯಾಸ ಹೇಗಿತ್ತೆಂಬುದು ತಿಳಿಯದು. ಗಂಗರ ಕಾಲದ ಇಟ್ಟಿಗೆಯ ಕಟ್ಟಡಗಳನ್ನು ಇವರ ಮುಖ್ಯಪಟ್ಟಣಗಳಲ್ಲೊಂದಾಗಿದ್ದ ಮಣ್ಣೆಯಲ್ಲಿ ನೋಡಬಹುದು. ಕಪಿಲೇಶ್ವರ, ಸೋಮೇಶ್ವರ ದೇವಾಲಯಗಳ ಜೊತೆಗೆ ಇರುವ, ಈಗ ಸೂಳೆಯರ ಗುಡಿ ಎಂದು ಕರೆಯುವ ದೇವಾಲಯ, ಮಾರಸಿಂಹನ ದಂಡನಾಯಕ ಶ್ರೀವಿಜಯ ಕಟ್ಟಿಸಿದ ತುಂಗಂ, ನಿರ್ಮಳಂ, ಸ್ವಮಹಸ್ಸಮಂ ಆದ ಜಿನಾಲಯವಾಗಿರಬೇಕು, ಈಗ ಎಲ್ಲ ದೇವಾಲಯಗಳೂ ಶಿಥಿಲವಾಗಿವೆ.

 
ರಾಮೇಶ್ವರ ದೇವಾಲಯ, ನರಸಮಂಗಲ

ಇವರ ಇಟ್ಟಿಗೆಯ ಕಟ್ಟಡಗಳಲ್ಲಿ ಪ್ರಾಚೀನವೂ ಶ್ರೇಷ್ಠವೂ ಆದ್ದು ನರಸಮಂಗಲದ ರಾಮೇಶ್ವರ ದೇವಾಲಯ. ಇದರ ಕಾಲ ನಿಖರವಾಗಿ ತಿಳಿಯದಾದರೂ ಕಟ್ಟಡದ ರೀತಿ, ಮೂರ್ತಿಗಳ ಕಂಡರಣೆ, ದೇವಾಲಯದ ಕಂಬಗಳು, ಚಾವಣಿ ಮುಂತಾದವನ್ನು ಪರಿಶೀಲಿಸಿದಾಗ ಇದು ಗಂಗರ ಕಾಲದಲ್ಲಿಯೆ ತಕ್ಕಷ್ಟು ಪ್ರಾಚೀನವಾದ್ದೆಂಬುದು ನಿರ್ವಿವಾದ.[] ತಳಹದಿ ಮಾತ್ರ ಕಗ್ಗಲ್ಲಿನಲ್ಲಿದ್ದು ಮೇಲಿನ ಕಟ್ಟಡ ಪೂರ್ತಿಯಾಗಿ ಇಟ್ಟಿಗೆ ಗಾರಿಗಳಿಂದ ನಿರ್ಮಿತವಾಗಿದ್ದರೂ ಇದರ ಗರ್ಭಗೃಹ ಮತ್ತು ಅದರ ಮೇಲಿನ ಗೋಪುರ 1200 ವರ್ಷಗಳಿಗೂ ಹೆಚ್ಚು ಕಾಲದಿಂದ ನಿಂತಿರುವುದಷ್ಟೆ ಅಲ್ಲ, ಅದರ ಮೇಲೆ ಗಚ್ಚಿನಲ್ಲಿ ನಿರ್ಮಿಸಿರುವ ಮೂರ್ತಿಗಳು, ನವುರಾದ ಅಲಂಕರಣ ಕೂಡ ಅಚ್ಚಳಿಯದಿರುವುದು ಸೋಜಿಗದ ಸಂಗತಿ. ಹೊರಗೋಡೆಗಳ ಮೇಲೆ ಜೋಡಿ ಅರೆಗಂಬಗಳು, ಮೂರು ಅಂತಸ್ತುಗಳಲ್ಲಿ ಮೇಲೆದ್ದಿರುವ ಗೋಪುರದಲ್ಲಿ ಪಿಂಜರ, ಕೂಡುಗಳ ನಡುವೆ ಹಲವು ವಿಧವಾದ ಅಪರೂಪ ಭಂಗಿಗಳಲ್ಲಿರುವ ಗಚ್ಚಿನ ಮೂರ್ತಿಗಳಿವೆ. ಇದರ ಒಟ್ಟು ರಚನೆ ಮಹಾಬಲಿಪುರದ ಧರ್ಮರಾಜ ರಥದ ಮಾದರಿಯಲ್ಲಿದೆ. ಗಂಟೆ ಮತ್ತು ಕಲಶದಾಕಾರದಲ್ಲಿರುವ ದಪ್ಪ ಕಂಬಗಳಿರುವ ನವರಂಗದ ಚಪ್ಪಟೆಯ ಒಳಚಾವಣಿಯಲ್ಲಿ ದೊಡ್ಡದಾದ ಮಧ್ಯದ ಅಂಕಣದಲ್ಲಿ ಸುತ್ತಲೂ ಅಷ್ಟದಿಕ್ಪಾಲಕರೂ ನಡುವೆ ನಟರಾಜನ ಮೂರ್ತಿಯೂ ಇವೆ. ಒಳಗೋಡೆಯ ಮೇಲ್ತುದಿಯ ಸುತ್ತಲೂ ಹಲವು ಭಂಗಿಗಳಲ್ಲಿರುವ ಕುಬ್ಜರ ಮೂರ್ತಿಗಳು, ಪಂಚತಂತ್ರದ ಕಥೆಗಳು, ರಾಮಾಯಣದ ಕಥೆಗಳು-ಇವನ್ನು ಸುಂದರವಾಗಿ ಕಡೆದಿದೆ. ದೇವಾಲಯದ ಒಳಗೂ ಸುತ್ತಲೂ ಚಂಡೀಕೇಶ್ವರ, ಸಪ್ತಮಾತೃಕೆಯರು, ಪಂಚಾಯತನ ಮೂರ್ತಿಗಳು ಮೊದಲಾದ ಶಿಲಾಮೂರ್ತಿಗಳಿವೆ.

ಇಟ್ಟಿಗೆಯಿಂದ ಕಲ್ಲಿನ ಕಟ್ಟಡಗಳಾಗಿ ಮಾರ್ಪಾಡು

ಬದಲಾಯಿಸಿ

ಚೋಳರು ಗಂಗವಾಡಿಯನ್ನಾಕ್ರಮಿಸಿಕೊಂಡಮೇಲೆ ಅಲ್ಲಿದ್ದ ಹಲವು ಇಟ್ಟಿಗೆಯ ಕಟ್ಟಡಗಳನ್ನು ಬದಲಾಯಿಸಿ ಕಲ್ಲಿನ ದೇವಾಲಯಗಳನ್ನು ನಿರ್ಮಿಸಿದರು. ಕೋಲಾರದ ಪಿಡಾರಿಯಾರ್ ಅಥವಾ ಕೋಲಾರಮ್ಮನ ದೇವಾಲಯ ಮೊದಲು ಇಟ್ಟಿಗೆಯದಾಗಿತ್ತು. ರಾಜೇಂದ್ರಚೋಳನ ಅಪ್ಪಣೆಯ ಮೇಲೆ ಉತ್ತಮಚೋಳ ಬ್ರಹ್ಮಮಾರಾಯ ಆ ಕಟ್ಟಡವನ್ನು ತೆಗೆದು ಕಲ್ಲಿನ ದೇವಾಲಯವನ್ನು ನಿರ್ಮಿಸಿದುದಾಗಿ ಶಾಸನವೊಂದು ತಿಳಿಸುತ್ತದೆ. ಕಿತ್ತೂರಿನ ರಾಮೇಶ್ವರ ದೇವಾಲಯ, ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯ, ಗರ್ಜಿಯ ಈಶ್ವರ ದೇವಾಲಯ, ನೊಣವಿನಕೆರೆಯ ಗಂಗೇಶ್ವರ ನೊಳಬೇಶ್ವರ ದೇವಾಲಯಗಳು ಮೊದಲು ಇಟ್ಟಿಗೆಯ ಗೋಡೆಗಳನ್ನು ಹೊಂದಿದ್ದಿರಬೇಕು. ಆ ಗೋಡೆಗಳು ಶಿಥಿಲವಾದ ಮೇಲೆ ಈಚೆಗೆ ಬೇರೆ ಗೋಡೆಗಳನ್ನು ನಿರ್ಮಿಸಿದ್ದು ಹೊರನೋಟಕ್ಕೆ ತೀರಸಾಮಾನ್ಯವಾದ ಕಟ್ಟಡಗಳಂತೆ ಕಾಣುತ್ತವೆ. ಆದರೆ ಅವುಗಳ ಒಳಹೊಕ್ಕಾಗ ಗಂಗರ ವಾಸ್ತುರೀತಿಯ ವೈಶಿಷ್ಟ್ಯ ಸ್ಪಷ್ಟವಾಗುತ್ತದೆ. ಸಣ್ಣ ಪ್ರಮಾಣದ ನವರಂಗ, ತೆರೆದ ಸುಕನಾಸಿ, ಚಿಕ್ಕ ಗರ್ಭಗೃಹ; ಚೌಕನಾದ ಬುಡದ ಮೇಲೆ ಗುಂಡಾಗಿ ಮೇಲೆದ್ದು ಅಷ್ಟು ಎತ್ತರವಲ್ಲದ ತೆಳುಗಂಬಗಳು, ಕಂಬಗಳ ಮೇಲುಬದಿಯಲ್ಲಿ ಕಲಶ ಅಥವಾ ಹೂಜಿಯ ಆಕೃತಿ, ನವರಂಗದ ಮಧ್ಯೆ ದೊಡ್ಡ ಅಂಕಣ ಮತ್ತು ಆ ಅಂಕಣದ ಚಾವಣಿಯಲ್ಲಿ ಮಾತ್ರ ಶಿಲ್ಪಕೃತಿ; ಸಾಮಾನ್ಯವಾಗಿ ಅಷ್ಟದಿಕ್ಪಾಲಕರು ಮತ್ತು ಅವರ ನಡುವೆ, ಶಿವದೇವಾಲಯವಾದರೆ ನಟರಾಜ, ಜಿನಬಸದಿಯಾದರೆ ಜಿನನ ಮೂರ್ತಿ. ಈ ಸಾಮಾನ್ಯ ಲಕ್ಷಣದಲ್ಲಿಯೂ ಒಂದೊಂದು ದೇವಾಲಯಕ್ಕೂ ಕೆಲಕೆಲವು ವಿಶಿಷ್ಟತೆಗಳನ್ನೂ ಕಾಣಬಹುದು. ಕಿತ್ತೂರಿನಲ್ಲಿ ಪಲ್ಲವ ರೀತಿಯನ್ನನುಕರಿಸುವ ಸಿಂಹಸ್ತಂಭಗಳು ಕೆಲವಿದ್ದ ಕುರುಹುಗಳಿವೆ. ಗರ್ಜಿಯಲ್ಲಿ ಕಂಬಗಳು ಅಷ್ಟಕೋನಾಕೃತಿಯಲ್ಲಿವೆ; ಚೌಕನಾದ ಬುಡದ ನಾಲ್ಕು ಮುಖಗಳ ಮೇಲೆ ತೆಳುವಾಗಿ ಬಿಡಿಸಿದ ಮೂರ್ತಿಶಿಲ್ಪಗಳಿವೆ. ಆಕರ್ಷಕವಾಗಿವೆ. ಅರಳಗುಪ್ಪೆಯ ದೇವಾಲಯದ ಒಳಚಾವಣಿಯನ್ನಂತೂ ರೂವಾರಿ ಅತ್ಯಂತ ಸುಂದರವಾಗಿ ಬಿಡಿಸಿದ್ದಾನೆ.

ಇಟ್ಟಿಗೆ ಕಟ್ಟಡಗಳ ಜೊತೆಗೆ ಮೊದಲು ಕೆಲವು ಸರಳವಾದ ಕಲ್ಲಿನ ಕಟ್ಟಡಗಳನ್ನು ಗಂಗರೂ ಕಟ್ಟಿಸಿದ್ದಾರೆ, ಅಗಲವಾದ ದೊಡ್ಡದೊಡ್ಡ ತೆಳು ಚಪ್ಪಡಿಗಳನ್ನೇ ಗೋಡೆಗೂ ಚಾವಣಿಗೂ ಉಪಯೋಗಿಸಿ ಕಟ್ಟಿರುವ ಈ ದೇವಾಲಯಗಳು ಶಿಲ್ಪ ದೃಷ್ಟಿಯಿಂದ ತೀರ ಸಾಮಾನ್ಯವಾದ ಕಟ್ಟಡಗಳು. ತೋಟಗೆರೆಯಲ್ಲಿರುವ ಕೇವಲ 5 ಅಡಿ ಚೌಕ, 5 ಅಡಿ ಎತ್ತರವಿರುವ ಒಂದೇ ಅಂಕಣದ ಅರ್ಜುನರಾಯನ ಗುಡಿ ಈ ರೀತಿಯಲ್ಲಿದೆ. ಇದು ಶ್ರೀಪುರುಷನ ಕಾಲಕ್ಕಿಂತ ಮುಂಚಿನದಾಗಿ ತೋರುತ್ತದೆ. ಸಂಪಿಗೆಪುರದಲ್ಲಿರುವ ಶಿವಾಲಯ ಇದೇ ಮಾದರಿಯದೆ. ದೇವಸ್ಥಾನಕ್ಕೆ ಗರ್ಭಗುಡಿ ಸುಕನಾಸಿ ನವರಂಗಗಳಿವೆ. ಇವುಗಳ ಗೋಡೆ ಚಾವಣಿಗಳೆಲ್ಲ ತೆಳುಹಾಸುಗಲ್ಲುಗಳಿಂದ ನಿರ್ಮಿತವಾಗಿವೆ. ಈ ದೇವಾಲಯಗಳಲ್ಲಿರುವ ಪಂಚಾಯತನ ಮೂರ್ತಿಗಳು ಸುಂದರವಾದ ಗಂಭೀರ ಮುಖ ಮುದ್ರೆಯುಳ್ಳವು; ಗಂಗರ ಕಾಲದವು. ಇವುಗಳಿಗೆ ಸೇರಿದಂತೆ ಗಂಗರ ಶಾಸನಗಳು ನಿಂತಿವೆ.

ಗುಹಾ ವಾಸ್ತುಶಿಲ್ಪ

ಬದಲಾಯಿಸಿ

ಗಂಗರ ಕಾಲದಲ್ಲಿ ಗವಿಗಳನ್ನು ಕೊರಿಸಿ ದೇವಾಲಯಗಳನ್ನು ಸ್ಥಾಪಿಸಿದ್ದಕ್ಕೆ ದಾಖಲೆಗಳಿಲ್ಲ. ಮೇಲುಕೋಟೆಯಲ್ಲಿ ಕಗ್ಗಲ್ಲಿನ ಮೊರಡಿಯಲ್ಲಿ ಅರ್ಧಮಾತ್ರ ಕೊರೆದಿರುವ ಗವಿ ಇವರ ಕಾಲಕ್ಕೆ ಸೇರಿರಬಹುದಾದರೂ ಗವಿ ಪೂರ್ತಿಯಾಗಿಲ್ಲದಿರುವುದರಿಂದಲೂ, ಮೂರ್ತಿಶಿಲ್ಪ ಇಲ್ಲದಿರುವುದರಿಂದಲೂ ಇದನ್ನು ಖಚಿತವಾಗಿ ಹೇಳಲುಬಾರದು. ಆದರೆ ಸ್ವಾಭಾವಿಕ ಗವಿಗಳಲ್ಲಿ ಬಂಡೆಗಳ ಮೇಲೆ ಮೂರ್ತಿಗಳನ್ನು ಬಿಡಿಸಿ ಬಸದಿಗಳನ್ನು ನಿರ್ಮಿಸಿದ ಉದಾಹರಣೆಗಳಿವೆ. ನಂದಿಯಲ್ಲಿ ಗೋಪಿನಾಥ ಗುಡ್ಡದಲ್ಲಿರುವ ಸ್ವಾಭಾವಿಕ ಗವಿಯ ಮೇಲಣ ಬಂಡೆ ಶಾಸನ 8ನೆಯ ಶತಮಾನಕ್ಕೆ ಸೇರಿದ್ದು. ಶ್ರೀರಾಮ ಅಲ್ಲಿ ಚೈತ್ಯಭವನವನ್ನು ನಿರ್ಮಿಸಿದಂತೆಯೂ, ಅನಂತರ ಕುಂತಿ ಅದನ್ನು ಪುನರ್ನವೀಕರಿಸಿದಂತೆಯೂ, ಜಿನೇಂದ್ರ ಚೈತ್ಯಸನ್ನಿಧಿಯಿಂದ ಆ ಪರ್ವತ ಪುನೀತವಾದುದಾಗಿಯೂ ಆ ಶಾಸನದಲ್ಲಿ ತಿಳಿಸುವುದರಿಂದ ಗಂಗರ ಕಾಲದಲ್ಲಿ ಅದು ಚೈತ್ಯಾಲಯವಾಗಿದ್ದಿರಬೇಕು. ಇದೇ ರೀತಿ ಚಿತ್ತೂರು ತಾಲ್ಲೂಕಿನ ವಳ್ಳಿಮಲೆಯಲ್ಲಿ ಒಂದನೆಯ ರಾಚಮಲ್ಲ ಸ್ವಾಭಾವಿಕ ಗುಹೆಯಲ್ಲಿ ಬಸದಿಯನ್ನು ಮಾಡಿಸಿದನೆಂದು ಅಲ್ಲಿಯ ಶಾಸನ ತಿಳಿಸುತ್ತದೆ. ಅಲ್ಲಿ ಬಂಡೆಯ ಮೇಲೆ ಕೆಲವು ಜಿನಬಿಂಬಗಳನ್ನು ಬಿಡಿಸಿದೆ. ಶ್ರವಣಬೆಳಗೊಳದ ದೊಡ್ಡ ಬೆಟ್ಟದ ಮೇಲೆ ಬಂಡೆಯನ್ನು ಕೊರೆದು ಅಖಂಡ ದ್ವಾರವೊಂದನ್ನು ಚಾವುಂಡರಾಯ ಮಾಡಿಸಿದ್ದಾನೆ.

ಗಂಗರ ವಾಸ್ತುಶಿಲ್ಪ ಶೈಲಿ

ಬದಲಾಯಿಸಿ

ಗಂಗರಿಗೇ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿ ಇಲ್ಲದಿದ್ದರೂ ಪಲ್ಲವರೂ, ದ್ರಾವಿಡ ಶಿಲ್ಪಶೈಲಿಯಿಂದ ಸ್ಫೂರ್ತಿಗೊಂಡು ಮುಂದೆ ಹಲವು ಸುಂದರವಾದ ದೇವಾಲಯಗಳನ್ನೂ, ಬಸದಿಗಳನ್ನೂ ಕಲ್ಲಿನಲ್ಲಿ ಕಟ್ಟಿಸಿರುವುದು ಕಂಡುಬರುತ್ತದೆ. ಈ ಗುಂಪಿಗೆ ಸೇರಿದ ಕಟ್ಟಡಗಳಲ್ಲಿ ಗಂಗಾವಾರದಲ್ಲಿರುವ ತಬ್ಲೇಶ್ವರ ಅಥವಾ ಸೋಮೇಶ್ವರ ದೇವಾಲಯ ಪ್ರಾಚೀನವಾದ್ದೆಂದು ಹೇಳಬಹುದು. ಗರ್ಭಗೃಹ, ಸುಕನಾಸಿ, ನವರಂಗ ಮತ್ತು ಮುಖಮಂಟಪಗಳಿರುವ ಈ ದೇವಾಲಯ ಸರಳವಾದ್ದು. ಗರ್ಭಗುಡಿಯ ಮೇಲೆ ಚಿಕ್ಕದಾಗಿ ಒಂದೇ ಅಂತಸ್ತುಳ್ಳ ಗೋಪುರ, ಚೌಕಾಕೃತಿ ತಲ ವಿನ್ಯಾಸ, ಹೊರಗೋಡೆಯಲ್ಲಿ ದೂರದೂರದಲ್ಲೊಂದೊಂದು ಅರೆಗಂಬ, ಬುಡದಲ್ಲಿ ಸರಳವಾದ ದಿಂಡುಗಲ್ಲು, ಮೇಲೆ ಕಿರಿದಾದ ಲೋವೆ, ಒಳಗೆ ಕಿರಿದಾದ ಕಂಬಗಳು ಇವುಗಳೊಂದಿಗೆ ಪ್ರಾಕಾರದ ಅಂಕಣವೊಂದರಲ್ಲಿ ನಿಂತಿರುವ ಪಲ್ಲವ ರೀತಿಯ ಸಿಂಹಸ್ತಂಭ-ಇವು ಅದರ ಪ್ರಾಚೀನತೆಯನ್ನು ಸೂಚಿಸುತ್ತವೆ. ಮಳೂರು ಪಟ್ಟಣದಲ್ಲಿರುವ ನಾರಾಯಣ ಸ್ವಾಮಿ ದೇವಾಲಯ, ಶ್ರವಣಬೆಳಗೊಳದ ಚಂದ್ರಗುಪ್ತ ಬಸದಿ-ಇವುಗಳ ಮೇಲೂ ಒಂದೇ ಅಂತಸ್ತಿನ ಗೋಪುರಗಳಿದ್ದರೂ ಗ್ರೀವ ಆಮಲಕಗಳ ಬೆಳವಣಿಗೆಗೆ ಸ್ಪಷ್ಟವಾಗಿದೆ. ಉಳಿದಂತೆ ಕಟ್ಟಡಗಳು ಸರಳವಾದವು. ಬನ್ನೂರಿನ ಹನುಮಂತೇಶ್ವರ ದೇವಾಲಯದ ಮೂಲಗುಡಿ, ವರುಣದ ಬೂತೇಶ್ವರ ದೇವಾಲಯ ಇವು ತಗ್ಗಾದ ಸರಳವಾದ ದೇವಾಲಯಗಳು. ವರುಣದ ದೇವಾಲಯದಲ್ಲಿ ಗೋಡೆಯ ಮೇಲೆ ಲೋವೆಯ ತಳಭಾಗದಲ್ಲಿ ಅತಿ ತೆಳುವಾಗಿ ಬಿಡಿಸಿರುವ ರಾಮಾಯಣದ ಚಿತ್ರಗಳು ಇರುವುದೊಂದು ವಿಶೇಷ.

 
ಭೋಗನಂದೀಶ್ವರ ದೇವಾಲಯ, ನಂದಿ

ನಂದಿಯ ಭೋಗನಂದೀಶ್ವರ ದೇವಾಲಯದ ಮೂಲ ಗುಡಿ, ಬೇಗೂರಿನ ನಾಗೇಶ್ವರ ದೇವಾಲಯ, ಕಂಬದಹಳ್ಳಿಯ ಪಂಚಕೂಟ ಬಸದಿಯಲ್ಲಿನ ಆದೀಶ್ವರ ಬಸದಿ ಮತ್ತು ಶ್ರವಣಬೆಳಗೊಳದ ಚಾವುಂಡರಾಯ ಬಸದಿ-ಇವುಗಳಲ್ಲಿ ಗಂಗರ ಕಾಲದ ವಾಸ್ತುಶಿಲ್ಪದ ಪೂರ್ಣವಿಕಾಸವನ್ನು ನೋಡಬಹುದು. ಬಹುಶಃ ಗಂಗ ಜಯತೇಜನ ಕಾಲದಲ್ಲಿ ರತ್ನಾವಳಿ ಕಟ್ಟಿಸಿದ ಭೋಗನಂದಿಯ ಮೂಲದೇವಾಲಯ ಚೌಕವಿನ್ಯಾಸುವುಳ್ಳದ್ದಾಗಿತ್ತು. ಇದರಲ್ಲಿ ಗರ್ಭಗೃಹ, ಸುಕನಾಸಿ, ನವರಂಗಗಳು ಮಾತ್ರ ಇದ್ದುವು. ಹೊರ ಗೋಡೆಯ ಮೇಲೆ ಮಕರ, ಆನೆ, ಸಿಂಹ ಮತ್ತು ಕುಬ್ಜರ ಮೂರ್ತಿಗಳು, ಗೋಡೆಯ ಮೇಲೆ ಅರೆಗಂಬಗಳು, ನಡುವೆ ಹೆಚ್ಚು ಅಲಂಕೃತವಾದ ಬಳ್ಳಿಯ ಸುರುಳಿಯಂತೆ ಕೊರೆದ ಜಾಲರಂಧ್ರಗಳು, ಒಂದೊಂದು ಸುರುಳಿಯಲ್ಲೂ ನೃತ್ಯಗೀತವಾದ್ಯಗಳಲ್ಲಿ ನಿರತರಾದ ಕುಬ್ಜರು, ಲೋವೆಯ ಮೇಲೆ ಅಲ್ಲಲ್ಲಿ ಕೀರ್ತಿಮುಖಗಳು, ಕುಬ್ಜರ ಸಾಲು, ಕೈಪಿಡಿಯ ಸುತ್ತಲೂ ಪಿಂಜರ, ಗಜ ಪೃಷ್ಠಾಕೃತಿಗಳು, ಅವುಗಳ ಮುಂಭಾಗದ ಲಾಳದಾಕೃತಿಯ ಕಮಾನುಗಳ ಕೆಳಗೆ ಶಿವಲೀಲೆಗಳು ಮತ್ತು ಇತರ ಮೂರ್ತಿಗಳು, ಮೂರು ಅಂತಸ್ತುಗಳಲ್ಲಿ ಮೇಲೆದ್ದಿರುವ ಗೋಪುರ ಸುಂದರವಾಗಿದೆ. ನವರಂಗದ ಕಂಬಗಳ ಮೇಲೂ ತೆಳುವಾಗಿ ಮೂರ್ತಿಗಳನ್ನು ಬಿಡಿಸಿದೆ. ಚಾವಣಿಯಲ್ಲಿ ಪಲ್ಲವಶಿಲ್ಪವನ್ನುನುಕರಿಸುವ ಅಷ್ಟದಿಕ್ಬಾಲಕರು ಮತ್ತು ನಡುವೆ ಉಮಾಮಹೇಶ್ವರನ ಮೂರ್ತಿಗಳು ಪ್ರಸನ್ನ ಗಂಭೀರ ಭಾವವನ್ನು ವ್ಯಕ್ತಪಡಿಸುತ್ತವೆ. ಪಲ್ಲವರ ಕೊನೆಯ ವರ್ಷಗಳಲ್ಲಿ ಬೆಳೆದು ಬಂದ ವಾಸ್ತುರೀತಿಯನ್ನೇ ಹೋಲುವ ಈ ದೇವಾಲಯದ ಪ್ರತಿರೂಪ ಬೇಗೂರಿನ ನಾಗೇಶ್ವರ ದೇವಾಲಯವೆನ್ನಬಹುದು. ಗಂಗ ಎರೆಯಪ್ಪನ ಸಾಮಂತ ನಾಗತ್ತರ ಕಟ್ಟಿಸಿರಬಹುದಾದ ಈ ನಾಗೇಶ್ವರ ದೇವಾಲಯ ಗಾತ್ರದಲ್ಲಿ ಸ್ವಲ್ಪ ಚಿಕ್ಕದು. ಇದರ ಗೋಪುರ ಒಂದೊಂದು ಅಂತಸ್ತಿನಲ್ಲೂ ಮಧ್ಯದ ಗೂಡುಗಳಲ್ಲಿ ಇರುವ ದಕ್ಷಿಣಾಮೂರ್ತಿ, ವಿಷ್ಣು, ನರಸಿಂಹ, ಸರಸ್ವತಿ ಮೊದಲಾದ ಮೂರ್ತಿಗಳು ಆಕರ್ಷಕವಾಗಿವೆ.

 
ಪಂಚಕೂಟ ಬಸದಿ, ಕಂಬದಹಳ್ಳಿ

ಕಂಬದಹಳ್ಳಿಯ ಆದಿನಾಥಬಸದಿ ಮೂರು ಗರ್ಭಗುಡಿಗಳಿರುವ ಒಂದು ತ್ರಿಕೂಟಾಚಲ, ಹೊರಗೋಡೆಗಳ ನಡುವೆ ಒಂದೊಂದು ಆಳವಿಲ್ಲದ ಗೂಡು, ಅದರ ಎರಡು ಕಡೆಯೂ ಅರೆಗಂಬಗಳು ಇವೆ. ಲೋವೆಯ ಕೆಳಗೆ ಒಂದು ಸಾಲು ಹಂಸಪಕ್ಷಿಗಳೂ, ಮೇಲೆ ನೀರ್ಗುದುರೆಗಳ ಸಾಲೂ ಇರುವುದರೊಂದಿಗೆ ಎರಡನೆಯ ಅಂತಸ್ತಿನ ನಾಲ್ಕು ಮೂಲೆಗಳಲ್ಲಿಯೂ ಸಿಂಹಗಳು ಪಂಜವನ್ನೆತ್ತಿ ಮಲಗಿವೆ. ತುದಿಯ ಆಮಲಕಗಳಲ್ಲಿ ಒಂದು ಗುಂಡಗೂ, ಎರಡನೆಯದು ಚೌಕಾಕಾರವಾಗಿಯೂ ಮೂರನೆಯದು ಅಷ್ಟಮುಖವುಳ್ಳದ್ದಾಗಿಯೂ ಇವೆ. ನವರಂಗದ ಕಂಬಗಳು ತುದಿಯಲ್ಲಿ ಕಲಶವುಳ್ಳ ಅಷ್ಟಕೋನಾಕೃತಿಯವು. ಚಾವಣಿಯ ನಡುವಣ ಅಂಕಣದಲ್ಲಿ ಅಷ್ಟದಿಕ್ಪಾಲಕರ ನಡುವೆ ಧರಣೇಂದ್ರ ಯಕ್ಷನ ಮೂರ್ತಿಯಿದೆ.[][] ಈ ನಡುವಣ ಅಂಕಣದ ಸುತ್ತಲೂ ಚಾವಣಿಗೆ ಹಾಕಿರುವ ಹಾಸಗಲ್ಲುಗಳು ಹೊರ ಭಾಗಕ್ಕೆ ಚಾಚುವಾಗ ಅಗಲವಾಗುತ್ತ ಹೋಗುವುದರಿಂದ ಸುತ್ತಲೂ ಕಿರಣಗಳು ಹರಡುವಂತೆ ತೋರುತ್ತವೆ.

 
ಚಾವುಂಡರಾಯ ಬಸದಿ

ಗಂಗರ ಕಾಲದ ಕಟ್ಟಡಗಳಲ್ಲಿ ಬಹುಶಃ ಕೊನೆಯದೂ ದೊಡ್ಡದು ಸುಂದರವಾದ್ದು ಆದ ಕಟ್ಟಡವೆಂದರೆ ಶ್ರವಣಬೆಳಗೊಳದ ಚಿಕ್ಕ ಬೆಟ್ಟದ ಮೇಲಿರುವ, ಚಾವುಂಡರಾಯನ ಬಸದಿ. ಕ್ರಿ.ಶ. ಸು. 983ರಲ್ಲಿ ಗೊಮ್ಮಟೇಶ್ವರನ ಪ್ರತಿಮೆಯನ್ನು ಮಾಡಿದಾಗಲೇ ಚಾವುಂಡರಾಯ ಈ ಬಸದಿಯನ್ನೂ ಕಟ್ಟಿಸಿರಬೇಕು. ಎತ್ತರವಾದ ತಳಹದಿಯ ಮೇಲೆ ಗರ್ಭಗೃಹ, ಸುಕನಾಸಿ, ದೊಡ್ಡದಾದ ನವರಂಗ ಇವೆ. ಹೊರ ಗೋಡೆಗಳು ಸರಳವಾದ ಅರೆಗಂಬಗಳು, ಗೂಡುಗಳಿಂದಲಂಕೃತವಾಗಿದ್ದರೂ ಮೇಲ್ಭಾಗದಲ್ಲಿ ಲೋವೆಯ ಕೆಳಗಿನ ಹಂಸದ ಸಾಲು, ಲೋವೆಯ ಮುಂಭಾಗದಲ್ಲಿ ಅಲ್ಲಲ್ಲಿ ಅಲಂಕೃತ ಕೀರ್ತಿಮುಖಗಳು, ಮೇಲೆ ನೀರ್ಗುದುರೆಗಳ ಸಾಲು, ಆ ಸಾಲಿನ ಮೇಲೆ ಕೈಪಿಡಿಯ ಪಿಂಜರ, ಗೂಡು, ಗಜಪೃಷ್ಟಗಳ ಅಲಂಕೃತ ಕಮಾನುಗಳ ಕಡೆಗೆ ಇರುವ ಜಿನರ ಮತ್ತು ಇತರರ ಭಾವಯುಕ್ತವಾದ ಮೂರ್ತಿಗಳು, ಇವು ಸರಳವೂ ಸುಂದರವೂ ಆಗಿವೆ. ಗೋಪುರದಲ್ಲಿ ಚೌಕಾಕಾರದ ಇನ್ನೊಂದು ಗುಡಿಯಿದೆ. ಪಾರ್ಶ್ವನಾಥನ ಮೂರ್ತಿಯನ್ನು ಚಾವುಂಡರಾಯನ ಮಗ ಬೊಪ್ಪಣ ಇಲ್ಲಿ ಪ್ರತಿಷ್ಠಿಸಿದ್ದಾನೆ.[] ಗಂಗರ ಕಾಲದ ಕಟ್ಟಡಗಳಲ್ಲೆಲ್ಲ ತನ್ನ ಮೊದಲಿನ ಸ್ಥಿತಿಯಲ್ಲೇ ಉಳಿದುಬಂದಿರುವ ಕಟ್ಟಡವೆಂದರೆ ಇದೊಂದೇ.

ಬಹುಕಾಲ ಗಂಗರ ರಾಜಧಾನಿಯಾಗಿದ್ದ ತಲಕಾಡಿನಲ್ಲಿ ಅವರ ಕಾಲದ ಅನೇಕ ಕಟ್ಟಡಗಳು ಇದ್ದಿರಬೇಕು. ಆದರೆ ಅದರ ಬಹುಭಾಗ ಮರಳಿನಲ್ಲಿ ಹೂತುಹೋಗಿರುವುದರಿಂದಲೂ ಉಳಿದುಬಂದಿರುವ ಕೆಲವು ದೇವಾಲಯಗಳು ಹಳೆಯ ಕಾಲದ ಶಿಲ್ಪವನ್ನು ಉಪಯೋಗಿಸಿ ಪುನರ್ನಿರ್ಮಿತವಾದವಾಗಿರುವುದರಿಂದಲೂ ಆ ಕಟ್ಟಡಗಳ ವಾಸ್ತು ರೀತಿಯನ್ನು ಈಗ ಅರಿಯಲು ಸಾಧ್ಯವಿಲ್ಲ. ತಲಕಾಡು, ಹೆಮ್ಮಿಗೆ, ಟಿ. ನರಸೀಪುರ, ಕಿತ್ತೂರು, ಅವನಿ, ಹೆಬ್ಬಟ ಮೊದಲಾದ ಕಡೆ ಗಂಗರ ಕಾಲದವೆಂದು ಖಚಿತವಾಗಿ ಹೇಳಬಹುದಾದ ಶಿಲ್ಪಗಳು, ಕಂಬಗಳು ಮತ್ತು ಇತರ ಅವಶೇಷಗಳು ಚಿಲ್ಲಾಡಿರುವುದರಿಂದ ಅವರ ಕಾಲದ ಅನೇಕ ಕಟ್ಟಡಗಳು ನಾಶವಾಗಿರುವುದು ಸ್ಪಷ್ಟ.

ಉಲ್ಲೇಖಗಳು

ಬದಲಾಯಿಸಿ
  1. "Ramesvara temple". Archaeological Survey of India, Bengaluru Circle. Archaeological Survey of India. Archived from the original on 14 ಏಪ್ರಿಲ್ 2013. Retrieved 7 July 2012.
  2. Archaeological Survey of India, Bangalore circle, Mandya district
  3. Khajane, Muralidhara (2006-02-03). "An ancient site connected with Jainism". The Hindu. Archived from the original on 2008-08-21. Retrieved 2012-12-26.
  4. Chugh 2016, pp. 282–283.

ಗ್ರಂಥಸೂಚಿ

ಬದಲಾಯಿಸಿ