ಜಗದೀಶ್ಚಂದ್ರ ಬೋಸ್

(ಜಗದೀಶ್‌ಚಂದ್ರ ಬೋಸ್ ಇಂದ ಪುನರ್ನಿರ್ದೇಶಿತ)

ಸರ್ ಜಗದೀಶ್‌ಚಂದ್ರ ಬೋಸ್,[] ಸಿಎಸ್‌ಐ, ಸಿಐಈ, ಎಫ್‌ಆರ್‌ಎಸ್[][][] (ನವೆಂಬರ್ ೩೦, ೧೮೫೮ನವೆಂಬರ್ ೨೩, ೧೯೩೭)[] ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೊರಿಸಿದವರು. ಭಾರತ ಉಪಖಂಡದಲ್ಲಿ ಪ್ರಯೋಗವಿಜ್ಞಾನಕ್ಕೆ ಅಡಿಪಾಯ ಹಾಕಿದವರು ಇವರು. ರೇಡಿಯೋ ವಿಜ್ಞಾನದ ತಂದೆ ಎಂದೂ, ಬೆಂಗಾಲಿ ವಿಜ್ಞಾನಸಾಹಿತ್ಯದ ತಂದೆ ಎಂದೂ ಇವರನ್ನು ಪರಿಗಣಿಸಲಾಗುತ್ತದೆ. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಅಮೇರಿಕದ ಪೇಟೆಂಟ್ ತೆಗೆದುಕೊಂಡವರಲ್ಲಿ ಭಾರತೀಯ ಉಪಖಂಡದ ಮೊದಲಿಗರು. ಇದು ಆದದ್ದು ೧೯೦೪ರಲ್ಲಿ.

ಆಚಾರ್ಯ ಸರ್ ಜಗದೀಶ್ ಚಂದ್ರ ಬೋಸ್
জগদীশ চন্দ্র বসু
ಸಿ ಎಸ್ ಐ, ಸಿ ಐ ಇ, ಎಫ್ ಆರ್ ಎಸ್
ಜಗದೀಶ್ ಚಂದ್ರ ಬೋಸರು ಲಂಡನ್ನಿನ ರಾಯಲ್ ಇನ್‍ಸ್ಟಿಟ್ಯೂಶನ್ನಿನಲ್ಲಿ
ಜನನನವೆಂಬರ್ ೩೦, ೧೮೫೮
ಬ್ರಿಟಿಷ್ ಭಾರತದ ಆಡಳಿತದಲ್ಲಿದ್ದ ಬೆಂಗಾಲ್ ಪ್ರೆಸಿಡೆನ್ಸಿಯ .ಬಿಕ್ರಾಂಪುರ್, ಪ್ರಸಕ್ತದಲ್ಲಿ ಇದು ಬಾಂಗ್ಲಾ ದೇಶದಲ್ಲಿರುವ ಬಿಕ್ರಾಂಪುರ ಆಗಿದೆ.
ಮರಣನವೆಂಬರ್ ೨೩, ೧೯೩೭
ಬ್ರಿಟಿಷ್ ಭಾರತದಲ್ಲಿನ ಬೆಂಗಾಲ್ ಪ್ರೆಸಿಡೆನ್ಸಿಯ ಗಿರ್ಡಿಹ್
ವಾಸಸ್ಥಳಕಲ್ಕತ್ತಾ
ರಾಷ್ಟ್ರೀಯತೆಭಾರತೀಯರು
ಕಾರ್ಯಕ್ಷೇತ್ರಭೌತಶಾಸ್ತ್ರ, ಬಯೋಫಿಸಿಕ್ಸ್ , ಜೀವಶಾಸ್ತ್ರ, ಸಸ್ಯಶಾಸ್ತ್ರ, ಪುರಾತತ್ವಶಾಸ್ತ್ರ, ಬೆಂಗಾಲಿ ಸಾಹಿತ್ಯ , ಬೆಂಗಾಲಿ ಕಾಲ್ಪನಿಕ ವಿಜ್ಞಾನ ಸಾಹಿತ್ಯ
ಸಂಸ್ಥೆಗಳುಕಲ್ಕತ್ತಾ ವಿಶ್ವವಿದ್ಯಾಲಯ
ಕೆಂಬ್ರಿಡ್ಜ್ ವಿಶ್ವವಿದ್ಯಾಲಯ
ಲಂಡನ್ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಕಲ್ಕತ್ತದ ಸೈಂಟ್ ಗ್ಸೆವಿಯರ್ ಕಾಲೇಜು ಮತ್ತು ಕೆಂಬ್ರಿಡ್ಜ್ ವಿಶ್ವ ವಿದ್ಯಾಲಯ
ಶೈಕ್ಷಣಿಕ ಸಲಹೆಗಾರರುಜಾನ್ ಸ್ತ್ರುಟ್ notable_students = ಸತ್ಯೇಂದ್ರನಾಥ್ ಬೋಸ್, ಮೇಘನಾದ ಸಹಾ
ಪ್ರಸಿದ್ಧಿಗೆ ಕಾರಣಮಿಲಿಮೀಟರ್ ವೇವ್ಸ್
ರೇಡಿಯೋ
ಕ್ರೆಸ್ಕೋಗ್ರಾಫ್
ಸಸ್ಯ ವಿಜ್ಞಾನ
ಗಮನಾರ್ಹ ಪ್ರಶಸ್ತಿಗಳುಕಂಪಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ ೧೯೦೩
ಕಂಪಾನಿಯನ್ ಆಫ್ ದಿ ಸ್ಟಾರ್ ಆಫ್ ಇಂಡಿಯಾ ೧೯೧೧
ನೈಟ್ ಬ್ಯಾಚಲರ್ ೧೯೧೭
ಜಗದೀಶ್ಚಂದ್ರ ಬೋಸ್

ಅಂದಿನ ಲೀಗ್ ಆಫ್ ನೇಷನ್ಸ್ ಸಂಸ್ಥೆಯ ಬೌದ್ಧಿಕ ಸಹಕಾರ ಸಮಿತಿಯ ಸದಸ್ಯರಾಗಿದ್ದರು. ಜೀವಿ ಅಜೀವಿಗಳಲ್ಲಿಯೂ ಸಸ್ಯ ಪ್ರಾಣಿಗಳಲ್ಲಿಯೂ ಒಂದು ತೆರನಾದ ಭೌತ ಏಕತೆ ಇರುವುದನ್ನು ಗುರುತಿಸಿ ಇವರು ಮಾಡಿದ ಪ್ರಯೋಗಗಳು ಹಾಗೂ ಮೂಲಭೂತ ಸಂಶೋಧನೆಗಳು ಪ್ರಪಂಚದ ಗಮನವನ್ನು ಭಾರತದತ್ತ ಸೆಳೆದುವು. ಕಳೆದ ಶತಮಾನದ ಕೊನೆಗೆ ಜೀವಭೌತವಿಜ್ಞಾನದಲ್ಲಿ ಸಂಗೃಹೀತವಾಗಿದ್ದ ಜ್ಞಾನವನ್ನೇ ಪ್ರಶ್ನಿಸಿ ಆ ಕ್ಷೇತ್ರಕ್ಕೆ ಹೊಸ ತಿರುವುಕೊಟ್ಟರು. ಬೋಸ್ ಸಂಶೋಧನ ಸಂಸ್ಥೆ ಸ್ಥಾಪಿಸಿ ಭಾರತದಲ್ಲಿ ಉನ್ನತ ಸಂಶೋಧನೆಗಾಗಿ ಅನುವುಮಾಡಿಕೊಟ್ಟರು. ಸಕಾಲದಲ್ಲಿ ಮನಸ್ಸು ಮಾಡಿದ್ದರೆ ಬಾನುಲಿ ಪ್ರಸಾರ ಮತ್ತು ಅಭಿಗ್ರಹಣ ತಂತ್ರವನ್ನು ಶೋಧಿಸಿದ ಸಂಪೂರ್ಣ ಕೀರ್ತಿಗೆ ಮಾರ್ಕೊನಿಯ ಬದಲು ಇವರೇ ಪಾತ್ರರಾಗಬಹುದಿತ್ತು. ಜಗದೀಶಚಂದ್ರರು ಸದ್ಗೃಹಸ್ಥರು, ಸ್ಫೂರ್ತಿದಾಯಕ ಪ್ರಾಧ್ಯಾಪಕರು, ಸಮರ್ಥ ಸಂಶೋಧನ ನಿರ್ದೇಶಕರು, ಉತ್ತಮ ಉಪಕರಣಗಳ ಉಪಜ್ಞೆಕಾರರು, ಸಾಹಿತ್ಯ ಪ್ರೇಮಿ, ಸರಸವಾಗ್ಮಿ, ಪ್ರೌಢ ಪ್ರಬಂಧ ಪುಸ್ತಕಾದಿಗಳ ಲೇಖಕರು, ಭಾರತೀಯ ಸನಾತನ ಸಂಸ್ಕೃತಿಯ ಅಭಿಮಾನಿಗಳು. ಎಲ್ಲಕ್ಕೂ ಮಿಗಿಲಾಗಿ ಉಜ್ಜ್ವಲ ರಾಷ್ಟ್ರಪ್ರೇಮಿ.

ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಬೋಸ್ ಅವರು ಭಾರತದ ಬಂಗಾಳ ಪ್ರಾಂತ್ಯದಲ್ಲಿರುವ ಮೈಮನಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು. ತಂದೆ ಭಗವಾನಚಂದ್ರರು ಫರೀದಪುರದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದರು. ತಾಯಿ ಸಾಂಪ್ರದಾಯಿಕ ಗೃಹಿಣಿ, ವಿಶಾಲ ಮನೋಭಾವದ ಮಹಿಳೆ. ಜಗದೀಶಚಂದ್ರರೇ ಮುಂದೆ ಬರೆದಂತೆ ತಾವು ಶಾಲಾ ಬಾಲಕರಾಗಿದ್ದಾಗ ಅಸ್ಪೃಶ್ಯಕುಲದ ತಮ್ಮ ಗೆಳೆಯರನ್ನು ಮನೆಗೆ ಕರೆದುಕೊಂಡು ಹೋದಾಗ ಅವರ ತಾಯಿ ಯಾವ ಭೇದವನ್ನು ಮಾಡದೆ ಮಾತೆಯ ಮಮತೆ ತೋರುತ್ತಿದ್ದರಂತೆ. ಜಗದೀಶಚಂದ್ರರಿಗೆ ಒಬ್ಬ ಅಕ್ಕ ಮತ್ತು ನಾಲ್ಕು ತಂಗಿಯರು. ತಂದೆ ಭಗವಾನಚಂದ್ರರಿಗೆ ಭಾರತೀಯ ಸಂಪ್ರದಾಯ ಸಂಸ್ಕೃತಿಗಳಲ್ಲಿ ಅಪಾರ ಗೌರವ ಮತ್ತು ವಿಶ್ವಾಸ. ಆಗಿನ ವಾತಾವರಣದಲ್ಲಿ ಶ್ರೀಮಂತರು ಮತ್ತು ಅಧಿಕಾರಿಗಳು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವುದು ಪ್ರತಿಷ್ಠೆಯ ಕುರುಹಾಗಿತ್ತು. ಆದರೆ ಭಗವಾನಚಂದ್ರರು ಹೀಗಲ್ಲ. ಸ್ವತಃ ಶಿಕ್ಷಣತಜ್ಞರೂ ಆಗಿದ್ದು ಔದ್ಯಮಿಕ ಮತ್ತು ತಾಂತ್ರಿಕ ಶಾಲೆಗಳನ್ನು ಸ್ಥಾಪಿಸಿದ್ದ ಇವರು ತಮ್ಮ ಮಗ ಮಾತೃಭೂಮಿಯ ನಿಜವಾದ ಪರಿಚಯ ಮಾಡಿಕೊಳ್ಳಲೆಂಬ ಘನ ಉದ್ದೇಶದಿಂದ ಈತನನ್ನು ಸನಾತನ ಮಾದರಿಯ ಒಂದು ಪಾಠಶಾಲೆಗೆ ಸೇರಿಸಿದರು. ತಂದೆಯವರ ಈ ನಿರ್ಣಯ ಮುಂದೆ ತಮ್ಮಲ್ಲಿ ರಾಷ್ಟ್ರೀಯ ಭಾವನೆ ಬೆಳೆಯಲು ಕಾರಣವಾಯಿತೆಂದು ಜಗದೀಶಚಂದ್ರರು ಉದ್ಧರಿಸಿದ್ದಾರೆ. ಆ ಶಾಲೆಯಲ್ಲಿಯೇ ಅವರಿಗೆ ನಿಸರ್ಗದ ಆಕರ್ಷಣೆ ಹುಟ್ಟಿತು. ಜೀವ ಅಜೀವಿಗಳ ವ್ಯವಹಾರಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಹೀಗೆ ಬಾಲ್ಯದಲ್ಲಿಯೇ ಬೆಳೆಯಿತು. ಆಗ ಅವರ ಮೇಲೆ ವಿಶೇಷ ಬೀರಿದ ವ್ಯಕ್ತಿಯೆಂದರೆ ಅವರ ತಂದೆಯೇ. ಸೆರೆಮನೆಯಿಂದ ಬಿಡುಗಡೆಯಾಗಿ ಬಂದಿದ್ದ ಒಬ್ಬ ಭಾರೀ ಡಕಾಯಿತನನ್ನು ಮಗು ಜಗದೀಶನ ಯೋಗಕ್ಷೇಮ ನೋಡಿಕೊಳ್ಳಲು ನಿಯಮಿಸಿ ಆ ಡಕಾಯಿತನನ್ನು ಸುಧಾರಿಸಿದ ಅಸಾಧಾರಣ ವ್ಯಕ್ತಿ ಭಗವಾನಚಂದ್ರರು.

ಕಲಕತ್ತೆಯ ಸೇಂಟ್ ಝೇವಿಯರ್ ಕಾಲೇಜು ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಓದಿ ಪದವೀಧರರಾದರು. ಆಗಿನ ಇತರ ಪ್ರತಿಭಾಶಾಲಿ ತರುಣರಂತೆ ಇವರು ಕೂಡ ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್ ಪರೀಕ್ಷೆಗೆ ಕಟ್ಟಬೇಕೆಂದು ಯೋಚಿಸಿದರು. ತಂದೆ ಭಗವಾನಚಂದ್ರರಿಗೆ ಮಗ ತಮ್ಮಂತೆ ಸರಕಾರದ ಗುಲಾಮನಾಗುವುದು ಇಚ್ಛೆಯಿರಲಿಲ್ಲ.[] ಆತನಿಗೆ ವೈದ್ಯಕೀಯ ಅಥವಾ ಇನ್ನಾವುದೋ ವಿಜ್ಞಾನ ವೃತ್ತಿ ಆಯಲು ಸೂಚಿಸಿದರು. ಜಗದೀಶಚಂದ್ರರು 1880ರಲ್ಲಿ ಲಂಡನ್ನಿಗೆ ವೈದ್ಯಕೀಯವನ್ನು ಕಲಿಯಲು ತೆರಳಿ ಲಂಡನ್ನಿನ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿದರು. ಅಲ್ಲಿ ಮೊದಲನೆಯ ವರ್ಷವೇನೋ ಸುಗಮವಾಗಿ ಕಳೆಯಿತು. ಆದರೆ ಬಾಲಕವಾಗಿದ್ದಾಗ ಇವರಿಗೆ ಅಂಟಿಕೊಂಡಿದ್ದ ಕಾಲಾ ಅಜಾರ್ ಎಂಬ ಜ್ವರ ಇಂಗ್ಲೆಂಡಿನಲ್ಲಿ ಮತ್ತೆ ಮರುಕಳಿಸಿ ಇವರನ್ನು ಹಣ್ಣು ಮಾಡಿತು. ಇವರ ಗುರುಗಳು ಮತ್ತು ವೈದ್ಯರು ಇವರು ವೈದ್ಯಕೀಯ ಶಿಕ್ಷಣವನ್ನೇ ಬಿಡಬೇಕೆಂದು ಸಲಹೆ ಮಾಡಿದರು.[] ಹೀಗೆ ಇವರು ಅನಿವಾರ್ಯವಾಗಿ ಲಂಡನ್ ಬಿಟ್ಟು ಕೇಂಬ್ರಿಜಿಗೆ ಹೋಗಿ ವಿಜ್ಞಾನದ ವಿದ್ಯಾರ್ಥಿಯಾದರು. 1884ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಮರುವರ್ಷ ಲಂಡನ್ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ. ಪದವಿ ಪಡೆದರು.

ನಂತರದ ಜೀವನ

ಬದಲಾಯಿಸಿ

೧೮೮೪ರಲ್ಲಿ ಕಲ್ಕತ್ತೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಬ್ರಿಟೀಷರ ಜನಾಂಗಭೇದವಿತ್ತು. ಸರಿಸಮಾನ ಸ್ಥಾನಗಳಲ್ಲಿದ್ದ ಬಿಳಿಯ ಪ್ರಾಧ್ಯಾಪಕರ ಮೂರನೆಯ ಎರಡರಷ್ಟು (2/3) ಪಗಾರ ಮಾತ್ರ ಭಾರತೀಯ ಪ್ರಾಧ್ಯಾಪಕರಿಗೆ ಕೊಡಬೇಕೆಂಬ ದುರ್ನಿಯಮ ಜಾರಿಗೆ ಬಂದಿತ್ತು. ಜಗದೀಶಚಂದ್ರರು ಇದನ್ನು ಪ್ರತಿಭಟಿಸಿ ಸಂಬಳ ತೆಗೆದುಕೊಳ್ಳದೇ ಮೂರು ವರ್ಷ ಪರ್ಯಂತ ದುಡಿದರು. ಇದೇ ಅವಧಿಯಲ್ಲಿ ವಿಕ್ರಮಪುರದ ದುರ್ಗಾಮೋಹನದಾಸರ ಮಗಳಾದ ಅಬಲಾರವರೊಡನೆ ಬೋಸರ ವಿವಾಹವಾಯಿತು (1887).[] ಈಕೆ ವಿದ್ಯಾರ್ಹತೆಯಲ್ಲಿ ಗಂಡನಿಗೆ ಸರಿಜೋಡಿ. ಈಗ್ಗೆ ಒಂದು ಶತಮಾನದಷ್ಟು ಹಿಂದೆಯೇ ಅಬಲಾದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರೆಂಬ ಸಂಗತಿ ಇಂದು ಅಚ್ಚರಿ ಮೂಡಿಸುವಂತಿದೆ. ಪತಿಯ ಸ್ವಾಭಿಮಾನಕ್ಕೆ ಮೆಚ್ಚಿ ಈಕೆ ಅವರಿಗೆ ಯೋಗ್ಯ ಸಹಧರ್ಮಿಣಿ ಆದರು. ಬೋಸರ ವೈವಾಹಿಕ ಜೀವನ ಸುಖಮಯವಾಗಿ ಆದರ್ಶವಾಗಿತ್ತು. ಮೂರು ವರ್ಷಗಳ ಕಾಲ ಪ್ರೆಸಿಡೆನ್ಸಿ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ವಿದ್ಯಾ ಇಲಾಖೆಯ ನಿರ್ದೇಶಕ ಆಗಿದ್ದ ಬ್ರಿಟಿಷ್ ಅಧಿಕಾರಿ ಬೋಸರ ಪ್ರತಿಭೆ ಮತ್ತು ವ್ಯಕ್ತಿತ್ವ ಗಮನಿಸಿ ಅವರ ಆತ್ಮೀಯ ಮಿತ್ರನಾದ. ಹೀಗೆ ಬ್ರಿಟಿಷರಿಂದ ಭಾರತೀಯರಿಗೆ ಆಗುತ್ತಿದ್ದ ಅವಮಾನದ ವಿರುದ್ಧ ಗಳಿಸಿದ ನೈತಿಕ ಜಯದ ಕುರುಹಾಗಿ ಜಗದೀಶಚಂದ್ರ ಬೋಸರಿಗೆ ಹಿಂದಿನ ಮೂರು ವರ್ಷಗಳ ಸಂಪೂರ್ಣ ಪಗಾರ ಪಾವತಿಯಾಯಿತು.[]

ಸಂಶೋಧನೆಗೆ ಅಗತ್ಯವಾದ ಸಲಕರಣೆಗಳು ಮತ್ತು ಹಣದ ಸಹಾಯ ಇರಲಿಲ್ಲ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮೊದಲಿಗೆ ಪ್ರಯೋಗಾಲಯದ ಸೌಕರ್ಯವಿರಲಿಲ್ಲ. ಹಲವು ವರ್ಷಗಳ ಪ್ರಯತ್ನಾನಂತರ ಒಂದು ಸಣ್ಣ ಪ್ರಯೋಗಾಲಯ ಮಂಜೂರಾಯಿತು. ಅಲ್ಲಿ ಅವರು ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ಅವರ ಮೆಚ್ಚಿನ ಕ್ಷೇತ್ರ ವಿದ್ಯುತ್ ತರಂಗಗಳದಾಗಿತ್ತು. ಮ್ಯಾಕ್ಸ್‌ವಲ್ಲನ ವಿದ್ಯುತ್‌ಕಾಂತ ಕ್ಷೇತ್ರದ ತತ್ತ್ವ ಪ್ರಕಟವಾಗಿ ಆಗ ಕೇವಲ ಎರಡು ದಶಕಗಳು ಸಂದಿದ್ದುವು. ಹರ್ಟ್ಸ್ ಮೊದಲಾಗಿ ಅನೇಕ ಪ್ರಥಮ ದರ್ಜೆಯ ಭೌತವಿಜ್ಞಾನಿಗಳು ವಿದ್ಯುತ್‌ಕ್ರಾಂತೀಯ ಅಲೆಗಳ ಮೇಲೆ ಸಂಶೋಧನೆ ನಡೆಸಿದ ಕಾಲವದು. ಸ್ಫಟಿಕಗಳಿಂದ ವಿದ್ಯುತ್ ತರಂಗಗಳ ಧ್ರುವೀಕರಣ ಎಂಬ ಇವರ ಪ್ರಥಮ ಸಂಶೋಧನಾಪ್ರಬಂಧ 1895ರಲ್ಲಿ ಜರ್ನಲ್ ಆಫ್ ದಿ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಪ್ರತಿಕೆಯಲ್ಲಿ ಪ್ರಕಟವಾಯಿತು. ಅದೇ ವರ್ಷ ವಿದ್ಯುತ್ ವಕ್ರೀಭವನ ಸೂಚ್ಯಂಕಗಳ ನಿರ್ಣಯ ಎಂಬ ಎರಡನೆಯ ಸಂಶೋಧನಪ್ರಬಂಧ ಎಲೆಕ್ಟ್ರಿಶಿಯನ್ ಎಂಬ ಪ್ರತಿಕೆಯಲ್ಲಿ ಪ್ರಕಟವಾದಾಗ ಬೋಸರ ಸಂಶೋಧನೆಗೆ ಮಹತ್ತ್ವದ ತಿರುವು ದೊರೆಯಿತು. ಏಕೆಂದರೆ ಲಂಡನ್ನಿನ ರಾಯಲ್ ಸೊಸೈಟಿ ಇವರ ಸಂಶೋಧನೆಗೆ ಮನ್ನಣೆಕೊಟ್ಟು ಆ ಲೇಖನವನ್ನು ಪ್ರಕಟಿಸಿತಲ್ಲದೇ ಬೋಸರಿಗೆ ಸಂಶೋಧನೆ ಮುಂದುವರಿಸಲು ಸಹಾಯಧನವನ್ನು ಕೂಡ ಕೊಡಮಾಡಿತು. ಎರಡು ವರ್ಷಗಳ ತರುವಾಯ ಆಗಿನ ಬಂಗಾಲ ಸರಕಾರ ಸಹ ಬೋಸರಿಗೆ ಸಂಶೋಧನೆಗೆಂದು ಎಲ್ಲ ಅನುಕೂಲತೆಗಳನ್ನು ಒದಗಿಸಿಕೊಟ್ಟಿತು.

ಇಟಲಿಯ ಮಾರ್ಕೊನಿಯೂ ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ಟೆಲಿಗ್ರಾಫ್ ಸಂದೇಶಗಳನ್ನು ತಂತಿಯ ಸಹಾಯವಿಲ್ಲದೇ ಕಳಿಸುವ ವಿಧಾನಗಳ ಕುರಿತು ಸಂಶೋಧನೆ ನಡೆಸಿದ್ದರು. ಇದನ್ನು ಪ್ರಪ್ರಥಮವಾಗಿ ಮಾಡಿದ ಕೀರ್ತಿ ಭಾರತೀಯ ವಿಜ್ಞಾನಿ ಬೋಸರಿಗೆ ಸಲ್ಲಬೇಕು. 1895ರಲ್ಲಿಯೇ ಅವರು ತಾವು ಸಂಶೋಧಿಸಿ ನಿರ್ಮಿಸಿದ್ದ ನಿಸ್ತಂತು ಪ್ರೇಷಕವನ್ನು ಕಲಕತ್ತೆಯ ಪುರಭವನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದರು. ಯಾವ ತಂತಿಯ ಸಂಪರ್ಕವೂ ಇಲ್ಲದೇ ದೂರದಲ್ಲಿಟ್ಟಿದ್ದ ತಮ್ಮ ಉಪಕರಣದಿಂದ ವಿದ್ಯುತ್ ತರಂಗಗಳನ್ನು ಉತ್ಪಾದಿಸಿ ಒಂದು ಕೋಣೆಯಲ್ಲಿಟ್ಟಿದ್ದ ಭಾರವಾದ ವಸ್ತುವನ್ನು ಚಲಿಸುವಂತೆ ಮಾಡಲು ಮತ್ತು ಒಂದು ವಿಶೇಷ ವಿದ್ಯುತ್ ಗಂಟೆ ಬಾರಿಸುವಂತೆ ಮಾಡಲು ಅವನ್ನು ಉಪಯೋಗಿಸಿದರು. ಅವರ ಆ ಉಪಕರಣಕ್ಕೆ ಕೊಹಿಯರರ್ ಎಂದು ಹೆಸರು. ಇಂದಿನ ಬಾನುಲಿ ವ್ಯವಸ್ಥೆಯ ಆದಿಮರೂಪ ಇದಾಗಿದ್ದಿತೆಂದು ಗಮನಿಸಿದರೆ ಅವರ ಸಂಶೋಧನೆಯ ಮಹತ್ತ್ವ ಗೊತ್ತಾಗುತ್ತದೆ. ಈ ಶೋಧನೆಯ ವಿವರವನ್ನು 1896ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಗೆ ತಿಳಿಸಿದಾಗ ಅದು ಆಶ್ಚರ್ಯಚಕಿತವಾಯಿತು. ರಾಯಲ್ ಸೊಸೈಟಿ ಮುಂದೆ ಅವರನ್ನು ಉಪನ್ಯಾಸಗಳಿಗಾಗಿ ಮೂರು ಬಾರಿ ಆಹ್ವಾನಿಸಿ ಗೌರವಿಸುವುದಕ್ಕೆ ಇದು ನಾಂದಿಯಾಯಿತು. ಅದೇ ವರ್ಷ ಲಂಡನ್ ವಿಶ್ವವಿದ್ಯಾಲಯ ಬೋಸರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಕೊಟ್ಟು ಪುರಸ್ಕರಿಸಿತು.[೧೦] ಈ ಪದವಿ ಅವರಿಗೆ ಸಂದದ್ದು ಭೌತವಿಜ್ಞಾನದಲ್ಲಿಯ ಸಂಶೋಧನೆಗಳಿಗಾಗಿಯೇ ಎಂಬುದನ್ನು ಗಮನಿಸಬೇಕು.

ಅವರು ತಮ್ಮ ಸಂಶೋಧನೆಗಳಿಂದ ವಾಣಿಜ್ಯಿಕ ಲಾಭ ಮಾಡಿಕೊಳ್ಳುವುದರ ಬದಲು ತಾವು ಕಂಡುಹಿಡಿದುದನ್ನು ಉಳಿದವರು ಅಭಿವೃದ್ಧಿಪಡಿಸಲಿ ಎಂಬ ಮಹಾನ್ ಮನೋಧರ್ಮವನ್ನು ಬಹಿರಂಗಪಡಿಸಿದರು. ನಂತರದಲ್ಲಿ, ಅವರು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸ ದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಿದರು.

ಬೋಸರು ನವನವೀನ ಉಪಕರಣಗಳನ್ನು ಸಂಶೋಧಿಸಿ ಬಳಸುವುದರಲ್ಲಿ ಸಿದ್ಧಹಸ್ತರು. ಭೌತವಿಜ್ಞಾನದಲ್ಲಿಯ ಪ್ರಾರಂಭಿಕ ಪ್ರಯೋಗಗಳಿಗೆ ಅವರಿಗೆ ಬೇಕಾಗಿದ್ದ ವಿದ್ಯುತ್ ತರಂಗಗಳನ್ನು ಉತ್ಪಾದಿಸಲು ಎಲೆಕ್ಟ್ರಿಕ್ ರೇಡಿಯೇಟಿವ್ ಎಂಬ ಉಪಕರಣ ನಿರ್ಮಿಸಿದರು. ಅದು 25ರಿಂದ 5 ಮಿಲಿ ಮೀಟಿರುಗಳಷ್ಟು ಹ್ರಸ್ವತರಂಗಗಳನ್ನು ವಿಕಿರಣಗೊಳಿಸುತ್ತಿತ್ತು. ಈ ತರಂಗಗಳ ಪ್ರಕಾಶಸದೃಶ ಭೌತಗುಣಧರ್ಮಗಳನ್ನೆಲ್ಲ ಅವರು ಸಂಪೂರ್ಣವಾಗಿ ಅಭ್ಯಸಿಸಿದರು. ಲಂಡನ್ನಿನ ರಾಯಲ್ ಸೊಸೈಟಿಯಲ್ಲಿ ಉಪನ್ಯಾಸಮಾಡಲು ಮೊದಲನೆಯ ಸಲ ಅಹ್ವಾನಿತರಾದಾಗ (1897) ತಾವು ಕಲಕತ್ತೆಯಲ್ಲಿ ನಿರ್ಮಿಸಿದ್ದ ಪ್ರೇಷಕ ಅಭಿಗ್ರಾಹಕಗಳೆರಡೂ ಇದ್ದ ಒಂದು ಉಪಕರಣವನ್ನು ಅಲ್ಲಿ ಪ್ರದರ್ಶಿಸಿದರು. ಅವರ ವಿದ್ಯುತ್ ತರಂಗಗಳ ಉಪಕರಣಗಳು ಹ್ರಸ್ವತರಂಗಗಳ ರೋಹಿತ ಮಾಪಕಗಳನ್ನು ಒಳಗೊಂಡಿದ್ದುವು. ಆದೇ ಕಾಲಕ್ಕೆ ಅವರು ಯಾಂತ್ರಿಕ ಅಥವಾ ಸೂಕ್ಷ್ಮ ಪ್ರಚೋದನೆಗಳು ವಿದ್ಯುತ್ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಬಲ್ಲ ತಂತ್ರವನ್ನು ಶೋಧಿಸಿದರು. ಬಹುಶಃ ಅವುಗಳ ಸೂಕ್ಷ್ಮ ಸಂವೇದಿತ್ವವೇ ಬೋಸರನ್ನು ಜೀವಜಗತ್ತಿನಲ್ಲಿಯ ಸೂಕ್ಷ್ಮ ಪ್ರತಿಕ್ರಿಯೆಗಳನ್ನು ನಿಖರವಾಗಿ ಅಳೆಯುವಂತ ಪ್ರೇರಿಸಿರಬೇಕು. ಅವರು ರಚಿಸಿದ್ದ ಕ್ರಿಸ್ಕೊಗ್ರಾಫ್ ಎಂಬ ಉಪಕರಣ ಇದಕ್ಕೆ ಉದಾಹರಣೆ. ಸಸ್ಯಗಳಲ್ಲಿ ನಡೆಯುವ ಸಂಕೋಚನ ವಿಕಸನಗಳನ್ನು ಅಳೆಯುವ ಸ್ಪೈಗ್ಮೊಗ್ರಾಫ್ ಯಂತ್ರವನ್ನು ಕೂಡ ಇಲ್ಲಿ ಉದಾಹರಿಸಬಹುದು.

ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷ ಬೋಸರ ಸಂಶೋಧನ ಕ್ಷೇತ್ರವನ್ನು ಭೌತವಿಜ್ಞಾನದಿಂದ ಜೀವವಿಜ್ಞಾನಕ್ಕೆ ಬದಲಿಸಿತು. ಇವರಾಗ ವಿಶೇಷತಃ ಸಸ್ಯವಿಜ್ಞಾನದಲ್ಲಿ ಭೌತವೈಜ್ಞಾನಿಕಮಾಪನ ಪದ್ಧತಿಗಳನ್ನು ಪ್ರಯೋಗಿಸಲು ತೊಡಗಿದರು. ಭೌತವಿಜ್ಞಾನಿಯೊಬ್ಬ ಹೀಗೆ ಅನ್ಯಕ್ಷೇತ್ರದಲ್ಲಿ ಕಾಲಿಟ್ಟಾಗ ಅಲ್ಲಿಯ ವಿಜ್ಞಾನಿಗಳು ಇವರನ್ನು ಮುಕ್ತ ಹೃದಯದಿಂದ ಸ್ವಾಗತಿಸದೆ ಇದ್ದದ್ದು ಅಸಹಜವಲ್ಲ. ಇದನ್ನು ಪರಿಗಣಿಸದೆ ಅವರು ಸಸ್ಯ ಕ್ಷೇತ್ರದಲ್ಲಿಯೇ ದೃಢವಾಗಿ ಬೇರೂರಿ ತಮ್ಮ ಅಪ್ರತಿಮ ಸಂಶೋಧನಾ ಸಾಮರ್ಥ್ಯವನ್ನು ಅಲ್ಲಿಯೇ ಪ್ರದರ್ಶಿದರು.

ನಿರ್ಜೀವ ವಸ್ತುಗಳೂ ಜೀವಿಗಳೂ ವಿದ್ಯುತ್ ಪ್ರೇರಣೆಗೆ ಒಳಗಾದಾಗ ಒಂದೇ ರೀತೀಯ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತವೆ. ಚಿಂತೆ, ಬಳಲಿಕೆ, ನೆನಪು ಮೊದಲಾದ ವಿಷಯಗಳಲ್ಲಿ ಸತುವು ಕೂಡ ಜೀವವಿದ್ದಂತೆಯೇ ವರ್ತಿಸಿದ್ದನ್ನು ತೋರಿಸಿ ಅವರು ವಿಜ್ಞಾನಿಗಳನ್ನು ಬೆರಗುಗೊಳಿಸಿದರು. ಪ್ರಾಣಿ ಸಸ್ಯಗಳ ಜೈವಿಕ ಚಟುವಟಿಕೆಗಳಲ್ಲಿರುವ ಅಸಮತೆ ನಮಗೆ ಗೊತ್ತು. ಆಘಾತಕ್ಕೆ ಈಡಾದಾಗ ಪ್ರಾಣಿಗಳು ಚಲನೆಯಿಂದ ಪ್ರತಿಕ್ರಿಯೆ ತೋರಿಸುತ್ತವೆ. ಅವುಗಳಲ್ಲಿರುವ ನರಮಂಡಲಗಳು ಈ ಪ್ರತಿಕ್ರಿಯೆಗಳಿಗೆ ಕಾರಣ. ಇವನ್ನು ವಿದ್ಯುತ್ ಸ್ಪಂದನಗಳಾಗಿ ಪರಿವರ್ತಿಸಿ ಅಳೆಯಬಹುದು. ಸಸ್ಯ ಜಗತ್ತಿನಲ್ಲಿಯೂ ಇದೇ ರೀತಿ ಪ್ರತಿಕ್ರಿಯಾ ವ್ಯವಸ್ಥೆ ಇದೆಯೇ ಹೇಗೆಂದು ಪರೀಕ್ಷಿಸಲು ಬೋಸರು ನೂರಾರು ಪ್ರಯೋಗಗಳನ್ನು ಮಾಡಿದರು. ಪ್ರಾಣಿಗಳಿಗೆ ಮಾತ್ರ ಇರಬಹುದೆಂದು ತಿಳಿದಿರುವ ವಿಶೇಷ ಪ್ರತಿಕ್ರಿಯೆಗಳೆಲ್ಲ ಗಿಡಗಂಟಿಗಳಿಗೂ ಇವೆಯೆಂದು ಅವರು ಪ್ರಥಮ ಬಾರಿಗೆ ಸಾಧಿಸಿದರು. ಉದಾಹರಣೆಗೆ ಒಂದು ಗಿಡಕ್ಕೆ ಹೊಡೆದಾಗ ಅದು ಪ್ರತಿಕ್ರಿಯೆ ತೋರಿಸಲು ಎಷ್ಟು ಅವಧಿ ತೆಗೆದುಕೊಳ್ಳಬಹುದು? ಸಾಮಾನ್ಯ ಸ್ಥಿತಿಯಲ್ಲಿ ಈ ಅವಧಿ 1/600 ಸೆಕೆಂಡಿನಷ್ಟು ಅಲ್ಪವೆಂದು ಅಳೆದರು. ಅದೇ ರೀತಿ ಆ ಸಸ್ಯ ದಣಿದಾಗ ಈ ಕಾಲಾವಧಿ ಹೆಚ್ಚಾಗಬಹುದೆಂದು ಗೊತ್ತಾಯಿತು. ಬಲವಾದ ಆಘಾತ ಬಡಿದರೆ ಗಿಡಗಳು ಕೂಡ ಮಂಕಾದವರಂತೆ ವರ್ತಿಸುತ್ತವೆ. ಈ ಪ್ರತಿಕ್ರಿಯಾವಧಿ ಋತುಮಾನವನ್ನು ಅವಲಂಬಿಸಿರುವುದು. ಸಸ್ಯಗಳು ಕೂಡ ವಿಷ ಪದಾರ್ಥಗಳನ್ನು ಊಡಿದಾಗ ಕುಂದುತ್ತವೆ ಮತ್ತು ಅವನ್ನು ನಿವಾರಿಸಿದಾಗ ಚೇತರಿಸಿಕೊಳ್ಳುತ್ತವೆ: ಮತ್ತೇರಿಸುವ ಪದಾರ್ಥಗಳನ್ನು ಉಣಿಸಿದಾಗ ಅವು ಪ್ರಾಣಿಗಳಂತೆಯೇ ಅಮಲೇರಿ ವರ್ತಿಸುತ್ತವೆ; ಸಸ್ಯಗಳೂ ರಾತ್ರಿ ನಿದ್ರಿಸಿ ಮುಂಜಾನೆ ಎಚ್ಚರವಾಗುತ್ತದೆ ಎಂದು ಮುಂತಾಗಿ ಬೋಸರು ತೋರಿಸಿದರು.

ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು ಸಸ್ಯದ ಒಂದು ತುದಿ ಮುಟ್ಟಿದರೆ ಅದರ ಎಲ್ಲ ಎಲೆಗಳೂ ಮುದುಡಿಕೊಳ್ಳುವ ಪ್ರತಿಕ್ರಿಯೆ ಎಲ್ಲರಿಗೂ ಗೊತ್ತು. ಇದು ಉಳಿದ ಪ್ರತಿಕ್ರಿಯೆಗಳಿಂದ ಈ ಸಸ್ಯದಲ್ಲಿ  ತೀವ್ರವಾಗಿರುವುದರಿಂದ ಯಾವುದೇ ಉಪಕರಣದ ಸಹಾಯವಿಲ್ಲದೇ ಇಂಥ ಪ್ರತಿಕ್ರಿಯೆಯನ್ನು ಗುರುತಿಸಬಲ್ಲವು. ಉಳಿದ ಸಸ್ಯಗಳಲ್ಲಿ ಕೂಡ ಸಂಭವಿಸುವ ಈ ತೆರನಾದ ಪ್ರತಿಕ್ರಿಯೆಗಳನ್ನು ಗುರುತಿಸಲು ಬೋಸರು ನಿರ್ಮಿಸಿರುವ ವಿವಿಧ ಉಪಕರಣಗಳ ಸಹಾಯಬೇಕು. ಸಸ್ಯಗಳಲ್ಲಿಯೂ ಪ್ರತಿಕ್ರಿಯೆಗಳನ್ನು ಸಾಗಿಸಲು ವಿಶಿಷ್ಟ ನರಗಳಿವೆ. ಅವು ಕೂಡ ನೋವು ನಲಿವುಗಳನ್ನು ಪ್ರಾಣಿಗಳಂತೆಯೆ ಅನುಭವಿಸುತ್ತವೆ. ಹೀಗೆ ಸಸ್ಯಜಗತ್ತಿಗೂ ಪ್ರಾಣಿ ಜಗತ್ತಿಗೂ ಹೋಲಿಕೆ ಮತ್ತು ಏಕತೆ ಇರುವುದನ್ನು ಬೋಸರು ಸಿದ್ಧಪಡಿಸಿ ಜೀವ ಭೌತವಿಜ್ಞಾನದಲ್ಲಿ ಹೊಸ ಕ್ರಾಂತಿ ಉಂಟುಮಾಡಿದರು.

ಬೋಸರು ಭೌತವಿಜ್ಞಾನ ಕ್ಷೇತ್ರ ಬಿಟ್ಟು ಜೀವವಿಜ್ಞಾನ ಕ್ಷೇತ್ರ ಪ್ರವೇಶಿಸಿದಾಗ ಸಾಕಷ್ಟು ವಿರೋಧ ಎದುರಿಸಬೇಕಾಯಿತು. ಅವರ ಪ್ರಾರಂಭಿಕ ಹೋರಾಟ ಕೂಡ ರೋಮಾಂಚಕಾರಿಯಾಗಿದೆ. 1897ರಲ್ಲಿ ಅವರು ರಾಯಲ್ ಸೊಸೈಟಿಯಲ್ಲಿ ನೀಡಿದ ಶುಕ್ರವಾರ ಸಂಜೆ ಉಪನ್ಯಾಸ ಎಲ್ಲರಿಂದಲೂ ಮೆಚ್ಚುಗೆ ಪಡೆಯಿತು. ಆದರೆ ಸಸ್ಯ ಮತ್ತು ಪ್ರಾಣಿಗಳ ಪ್ರತಿಕ್ರಿಯೆಗಳ ಏಕರೂಪಕ್ಕೆ ಸಿದ್ಧಪಡಿಸಿದ ಅವರ ಎರಡನೆಯ ಉಪನ್ಯಾಸ (1901) ಮಿಶ್ರ ಪ್ರತಿಕ್ರಿಯೆಗೆ ಒಳಗಾಯಿತು. ಆಗ ವೈದ್ಯುತಶರೀರ ಕ್ರಿಯಾವಿಜ್ಞಾನದ ಅಧ್ಯಯನದಲ್ಲಿ ಜಾನ್ ಸ್ಯಾಂಡರ್‌ಸನ್ ಎಂಬ ವಿಜ್ಞಾನಿಯ ನಿರ್ಣಯವೇ ವೇದಾವಾಕ್ಯವೆನಿಸುತ್ತಿತ್ತು. ಬೋಸರ ಉಪನ್ಯಾಸ ಕೇಳಲೆಂದೇ ಈತ ಆಕ್ಸ್‌ಫರ್ಡಿನಿಂದ ಲಂಡನ್ನಿಗೆ ಬಂದಿದ್ದ. ಇವನೂ ಇವನ ಬೆಂಬಲಿಗರೂ ಪೂರ್ವಾಗ್ರಹಪೀಡಿತರಾಗಿ ಬೋಸರ ನಿರ್ಣಯಗಳ ಋಜುತ್ವವನ್ನು ಪ್ರಶ್ನಿಸಿದರು. ಇದರಿಂದಾಗಿ ರಾಯಲ್ ಸೊಸೈಟಿ ಕೂಡ ಬೋಸರ ನಿರ್ಣಯಗಳನ್ನೂ ಪ್ರಬಂಧ ಪ್ರಕಟಣೆಯನ್ನೂ ನಿರಾಕರಿಸಿತು. ಬೋಸರಿಗೇನೂ ನಿರಾಶೆಯಾಗಲಿಲ್ಲ. ಅದೊಂದು ವಿಜ್ಞಾನ ವರ್ಣಾಶ್ರಮದ ಹೇಯ ಪ್ರದರ್ಶನವೆಂದು ಅವರಿಗೆ ಗೊತ್ತಿತ್ತು. ರಾಯಲ್ ಸೊಸ್ಶೆಟಿಯಲ್ಲಿ ಈ ವಿವಾದಾತ್ಮಕ  ಉಪನ್ಯಾಸ ಕೇಳಿದ್ದ ಕೆಲವು ಪ್ರಮುಖ ಜೀವವಿಜ್ಞಾನಿಗಳು ಆಗ ಬೋಸರಿಗೆ ಬೆಂಬಲವಾಗಿ ನಿಂತರು. ಆಕ್ಸ್‌ಫರ್ಡಿನ ಪ್ರಾಧ್ಯಾಪಕ ವೈನ್ಸ್ ಎಂಬ ಸಸ್ಯವಿಜ್ಞಾನಿ ವಿಶೇಷ ಆಸ್ಥೆ ತೋರಿಸಿ ಈ ಪ್ರಬಂಧವನ್ನು ಪ್ರಕಟಿಸಲು ಮುಂದೆ ಬಂದ. ಇದೇ ಸುಮಾರಿಗೆ ಬೋಸರ ಸಂಶೋಧನೆಯ ಚೌರ್ಯ ಮಾಡಿ ಪ್ರಕಟಿಸುವ ಪ್ರಯತ್ನಗಳೂ ನಡೆದವು. ತಮ್ಮ ಸಂಶೋಧನ ನಿರ್ಣಯಗಳು ಬೇರಾರದೂ ಅಲ್ಲವೆಂದು ಸಿದ್ಧಪಡಿಸಲು ಅವರು ಒಂದು ವಿಚಾರಣಸಮಿತಿಯ ಮುಂದೆ ಬರಬೇಕಾಯಿತು. ಇವರ ಮನಸ್ಸಿಗೆ ಈ ಎಲ್ಲಾ ಘಟನೆಗಳು ನೋವು ಉಂಟುಮಾಡಿದವು. ಕೊನೆಗೆ ವಿಚಾರಣ ಸಮಿತಿಯು ಈ ಸಂಶೋಧನೆಗಳ ಮೂಲ ಕರ್ತೃ ಸಾಕ್ಷಾತ್ ಬೋಸರೇ ಎಂದು ನಿರ್ಣಯವಿತ್ತಿತ್ತು. ಅಂದಿನಿಂದ ಇವರಿಗೆ ಏಕಪ್ರಕಾರವಾಗಿ ವಿವಾದಾತೀತ ಮನ್ನಣೆ ದೊರಕಿ ಇವರ ವೈಜ್ಞಾನಿಕ ಪ್ರತಿಷ್ಠೆ ಜೀವವಿಜ್ಞಾನ ಕ್ಷೇತ್ರದಲ್ಲೂ ಭದ್ರವಾಯಿತು.

ತಮ್ಮ ಸಂಶೋಧನೆಗಳನ್ನು ಸಾದರಪಡಿಸಿ ಉಪನ್ಯಾಸಗಳನ್ನು ನೀಡಲು ಬೋಸರಿಗೆ ಮೂರು ಬಾರಿ ರಾಯಲ್ ಸೊಸೈಟಿ ಆಹ್ವಾನಿಸಿದ್ದನ್ನು  ಗಮನಿಸಿದರೆ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠತಮ ವಿಜ್ಞಾನಿಗಿರಬೇಕಾದ ಗೌರವ ಸ್ಥಾನವಿದ್ದಿತೆಂಬುದು ಸ್ಪಷ್ಟವಾಗುತ್ತದೆ. ಪ್ರಪಂಚದ ವಿವಿಧ ವಿಶ್ವವಿದ್ಯಾಲಯಗಳೂ ವಿಜ್ಞಾನ ಸಂಸ್ಥೆಗಳೂ ಅವರನ್ನೂ ಆಮಂತ್ರಿಸಿ ಗೌರವಿಸಲು ಪೈಪೋಟಿ ನಡೆಸುವಂಥ ಪರಿಸ್ಥಿತಿ ಏರ್ಪಟ್ಟಿತ್ತು. ಅವರು 1900ರಲ್ಲಿ ಪ್ಯಾರಿಸ್‌ಗೆ ಮತ್ತು 1915ರಲ್ಲಿ ಇಂಗ್ಲೆಂಡಿನ ಪ್ರವಾಸದೊಂದಿಗೆ ಅಮೆರಿಕೆಯನ್ನೂ ಒಳಗೊಂಡಂತೆ ಪ್ರಪಂಚದ ಬೇರೆ ಬೇರೆ ವಿಜ್ಞಾನಸಂಸ್ಥೆಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ಉಪನ್ಯಾಸಗಳನ್ನು ಮಾಡಿದರು. ಆಮೇಲೆ ಕೂಡ ಅವರು ಹಲವಾರು ಪ್ರಪಂಚ ಪರ್ಯಟನೆ ಕೈಗೊಂಡರು.

ಬೋಸರಿಗೆ ಪದವಿ ಪ್ರಶಸ್ತಿಗಳು ವಿಪುಲವಾಗಿ ದೊರೆತುವು. ಕಲಕತ್ತಾ ವಿಶ್ವ ವಿದ್ಯಾಲಯ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿತು. ಆಗಿನ ಭಾರತ ಸರ್ಕಾರ 1903ರಲ್ಲಿ ಸಿ.ಐ.ಇ. ಬಿರುದನ್ನೂ 1911ರಲ್ಲಿ ಸಿ.ಎಸ್.ಐ. ಬಿರುದನ್ನೂ ಪ್ರದಾನಿಸಿತು. 1916ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ ಬಿರುದನ್ನು (ಸರ್) ನೀಡಿ ಗೌರವಿಸಿತು. 1920ರಲ್ಲಿ ಇವರು ರಾಯಲ್ ಸೊಸ್ಶೆಟಿಯ ಸದಸ್ಯರಾಗಿ (ಎಫ್.ಆರ್.ಎಸ್.)  ಚುನಾಯಿತರಾದರು.

ಭಾರತದಲ್ಲಿ ಹಿಂದೊಮ್ಮೆ ನಲಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಿದ್ದಂತೆ ಪೂರ್ತಿ ವಿಜ್ಞಾನ ಸಂಶೋಧನೆಗೆ ಮೀಸಲಾದ ಒಂದು ಸಂಸ್ಥೆ ಕಟ್ಟಬೇಕೆಂದು ಬೋಸರು ಕನಸು ಕಾಣುತ್ತಿದ್ದರು. 1917 ನವೆಂಬರ್ 30ರಂದು ಕಲಕತ್ತೆಯಲ್ಲಿ ಬೋಸ್ ಸಂಶೋಧನಸಂಸ್ಥೆ ಪ್ರಾಂಭವಾದಾಗ ಇದು ನನಸಾಯಿತು. ಬೋಸ್ ಇದನ್ನು ದೇಶಕ್ಕೆ ಅರ್ಪಿಸಿ ಜಾತಿ, ಭಾಷೆ, ಲಿಂಗ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಸಂಶೋಧನಕಾರ್ಯ ನಡೆಸಲೆಂದು ಹಾರೈಸಿದರು. ಇವರು ಆಗಾಗ ತಮ್ಮ ಸಂಸ್ಥೆಯಲ್ಲಿ ಪ್ರಬುದ್ಧ ಉಪನ್ಯಾಸಗಳನ್ನು ಮಾಡುತ್ತಿದ್ದರು.

ಅವರು ಸಾರ್ವಜನಿಕವಾಗಿ ಮಾಡುತ್ತಿದ್ದ ಉಪನ್ಯಾಸಗಳಲ್ಲಿ ಅವರ ರಾಷ್ಟ್ರ ಪ್ರೇಮ, ಸಾಹಿತ್ಯಾಸಕ್ತಿ ಮತ್ತು ಸಾಂಸ್ಕೃತಿಕ ಅಭಿರುಚಿ ಗೋಚರವಾಗುತ್ತವೆ. ಅವರ 70ನೆಯ ವರ್ಧಂತ್ಯುತ್ಸವದಲ್ಲಿ ಪ್ರಪಂಚದ  ಮೂಲೆ ಮೂಲೆಗಳಿಂದ ಅಭಿನಂದನ ಸಂದೇಶಗಳು ಬಂದುವು. ವಿಜ್ಞಾನಿಗಳಷ್ಟೇ ಅಲ್ಲದೆ ರವೀಂದ್ರನಾಥ ಟಾಗೋರರೂ ಜಾರ್ಜ್ ಬರ್ನಾರ್ಡ್ ಷಾ ಮೊದಲಾದ  ಜಗತ್ಪ್ರಸಿದ್ಧ ಸಾಹಿತಿಗಳೂ ಅನೇಕ ರಾಜಕಾರಣಿಗಳೂ ಸಂದೇಶಗಳನ್ನು ಕಳಿಸಿದವರಲ್ಲಿ ಸೇರಿದ್ದರು. ಬೋಸರು ಪ್ರಥಮ ದರ್ಜೆಯ ಸಾಹಿತಿಯೂ ಆಗಿದ್ದರು. ಬಂಗಾಲಿ ಭಾಷೆಯಲ್ಲಿ ಲೇಖನಗಳನ್ನೂ ಪತ್ರಗಳನ್ನೂ ಬರೆಯುತ್ತಿದ್ದರು. 1911ರಲ್ಲಿ ವಂಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರದಾಯಿತು. ಅದು ಆ ನಾಡಿನ ಯಾವುದೇ ಸಾಹಿತಿಗೆ ದೊರಕಬಹುದಾದ ಅತ್ಯುಚ್ಚ ಮನ್ನಣೆಯಾಗಿತ್ತು. ಅಧ್ಯಕ್ಷ ಭಾಷಣಕ್ಕೆ ವಿಜ್ಞಾನದಲ್ಲಿ ಸಾಹಿತ್ಯ ಎಂಬ ವಿಷಯ ಆಯ್ದುಕೊಂಡು ಎರಡೂ ಕ್ಷೇತ್ರಗಳ ನಡುವಿನ ಸಂಬಂಧ ತಿಳಿಸಿದರು.

ಜಗದೀಶಚಂದ್ರ ಬೋಸರು ಖ್ಯಾತಿ ಶಿಖರದ ತುತ್ತ ತುದಿಗೇರಿದ ಐತಿಹಾಸಿಕ ಸೀಮಾಪುರುಷರಲ್ಲಿ ಒಬ್ಬರಾದರು. ಕೊನೆಯ ದಿನಗಳಲ್ಲಿ ಆರೋಗ್ಯ ಸುಧಾರಣೆಗಾಗಿ ಡಾರ್ಜಿಲಿಂಗಿಗೆ ಹೋಗಿದ್ದರು. 1937 ನವೆಂಬರ್ 30ರಂದು 80ನೆಯ ವರ್ಷದಲ್ಲಿ ಅಲ್ಲಿಯೇ ಅನಾರೋಗ್ಯದಿಂದ ತೀರಿಕೊಂಡರು.

ಹಿತೈಷಿಗಳ ಒತ್ತಡಕ್ಕೆ ಮಣಿದು ತಮ್ಮ ಸಂಶೋಧನೆಗಳಲ್ಲಿ ಒಂದಕ್ಕೆ ಅವರು ಪೇಟೇಂಟ್‍ಗಾಗಿ ಅರ್ಜಿ ಸಲ್ಲಿಸಿದರಾದರೂ ಯಾವುದೇ ಬಗೆಯ ಪೇಟೆಂಟ್ ಪಡೆಯುವುದರಲ್ಲಿ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ ಎಂಬುದನ್ನು ವಿಶ್ವವೇ ಬಲ್ಲಂತ ಸಂಗತಿಯಾಗಿದೆ. “ನಾನೇನೂ ಸೃಷ್ಟಿಕರ್ತನಲ್ಲ. ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು ವಸ್ತುವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು” ಎಂಬುದು ಅವರ ಹೃದಯ ವೈಶಾಲ್ಯ ವಿಚಾರಧಾರೆಯಾಗಿತ್ತು.

ಅವರು ತೀರಿಕೊಂಡ ಹಲವಾರು ವರುಷಗಳ ನಂತರ ಅವರು ಆಧುನಿಕ ವಿಜ್ಞಾನಕ್ಕೆ ಸಲ್ಲಿಸಿದ ಅನೇಕ ಕೊಡುಗೆಗಳಿಗಾಗಿ ಅವರನ್ನು ಗುರುತಿಸಲಾಗುತ್ತಿದೆ.

ಕೃತಿಗಳು

ಬದಲಾಯಿಸಿ
 

ಬೋಸ್ ಅವರು ಕೆಲವೊಂದು ಪ್ರಮುಖ ಕೃತಿಗಳು ಇಂತಿವೆ

  1. Response in the Living and Non-living(1902),
  2. Plant response as a means of physiological investigation(೧೯೦೬),
  3. Comparative Electro-physiology: A Physico-physiological Study(೧೯೦೭),
  4. Researches on Irritability of Plants(೧೯೧೩),
  5. Physiology of the Ascent of Sap(೧೯೨೩),
  6. The physiology of photosynthesis(೧೯೨೪),
  7. The Nervous Mechanisms of Plants(೧೯೨೬),
  8. Plant Autographs and Their Revelations(೧೯೨೭),
  9. Growth and tropic movements of plants(೧೯೨೮),
  10. Motor mechanism of plants(೧೯೨೮)

ಅಧ್ಯಾತ್ಮಿಕ - ವೈಜ್ಞಾನಿಕ ಮೇಳೈಕೆ

ಬದಲಾಯಿಸಿ

ಬೋಸ್ ಅವರಿಗೆ ರವೀಂದ್ರನಾಥ್ ಠಾಗೂರ್ ಅವರೊಂದಿಗೆ ಆಪ್ತ ಸ್ನೇಹವಿತ್ತು. ಐನ್‍ಸ್ಟೀನ್ ಅವರೊಂದಿಗೂ ಸಂಪರ್ಕವಿತ್ತು. ಜಗದೀಶ್ ಚಂದ್ರ ಬೋಸರಲ್ಲಿ ಆಧ್ಯಾತ್ಮಿಕ - ವೈಜ್ಞಾನಿಕ ಚಿಂತನೆಗಳೆರಡೂ ಒಂದಾಗಿ ಮೇಳೈಸಿದ್ದವು ಎಂಬುದು ಪ್ರಾಜ್ಞರ ಅಭಿಮತ.

ಪ್ರಶಸ್ತಿ ಗೌರವಗಳು

ಬದಲಾಯಿಸಿ
  1. ಬೋಸರಿಗೆ ೧೯೧೬ರಲ್ಲಿ ನೈಟ್‍ಹುಡ್ ಪ್ರಶಸ್ತಿ ಸಂದಿತು. ಬೋಸರು ೧೯೧೭ರಲ್ಲಿ ಬೋಸ್ ಅವರು ಬೋಸ್ ಇನ್ಸ್ಟಿಟ್ಯೂಟನ್ನು ಕಲ್ಕತ್ತದಲ್ಲಿ ಸ್ತಾಪಿಸಿದರು.
  2. ೧೯೨೦ರಲ್ಲಿ ಬೋಸರನ್ನು ಲಂಡನ್ನಿನ ಫೆಲೊ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
  3. ೧೯೨೭ರ ವರ್ಷದಲ್ಲಿ ಅವರು ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ೧೪ನೇ ಅಧಿವೇಶನದ ಅಧ್ಯಕ್ಷತೆಯ ಗೌರವವನ್ನು ಪಡೆದರು.
  4. ೧೯೨೮ರ ವರ್ಷದಲ್ಲಿ ಅವರಿಗೆ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ ಗೌರವ ಲಭಿಸಿತು.
  5. ೧೯೨೯ರಲ್ಲಿ ಅವರಿಗೆ ಫಿನ್ನಿಶ್ ಸೊಸೈಟಿ ಆಫ್ ಸೈನ್ಸನ್ ಅಂಡ್ ಲೆಟರ್ಸ್ ಸದಸ್ಯತ್ವ ಗೌರವ ಸಂದಿತು.
  6. ಅವರಿಗೆ ಲೀಗ್ ಆಫ್ ನೇಶನ್ಸ್ ಕಮಿಟಿ ಆಫ್ ಇಂಟಲೆಕ್ಚುಯಲ್ ಕೋಪರೇಶನ್ ಸದಸ್ಯತ್ವ ಗೌರವವವೂ ಸಂದಿತು.
  7. ಬೋಸ್ ಅವರನ್ನು ಪ್ರಸಕ್ತದಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಎಂದಾಗಿರುವ ಅಂದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಇಂಡಿಯಾದ ಸಂಸ್ಥಾಪಕ ಫೆಲೋ ಎಂದು ಗೌರವಿಸಲಾಗಿತ್ತು.
  8. ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು ಜೂನ್ ೨೫, ೨೦೦೯ರ ವರ್ಷದಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು.

ನವೆಂಬರ್ ೨೩, ೧೯೩೭ರಂದು ಜಗದೀಶ್ಚಂದ್ರ ಬೋಸರು ನಿಧನರಾದರು.

ಉಲ್ಲೇಖಗಳು

ಬದಲಾಯಿಸಿ
  1. Page 3597 of Issue 30022. The London Gazette. (17 April 1917). Retrieved 1 September 2010.
  2. Page 9359 of Issue 28559. The London Gazette. (8 December 1911). Retrieved 1 September 2010.
  3. Page 4 of Issue 27511. The London Gazette. (30 December 1902). Retrieved 1 September 2010.
  4. Saha, M. N. (1940). "Sir Jagadis Chunder Bose. 1858–1937". Obituary Notices of Fellows of the Royal Society. 3 (8): 2–12. doi:10.1098/rsbm.1940.0001. S2CID 176697911.
  5. Editorial Board (2013). Sir Jagdish Chandra Bose. Edinburgh, Scotland: Encyclopædia Britannica, Inc. ISBN 978-1-59339-292-5.
  6. "Pursuit and Promotion of Science : The Indian Experience" (PDF). Indian National Science Academy. Archived from the original (PDF) on 2 December 2012. Retrieved 1 October 2013.
  7. "Jagdish Chandra Bose". calcuttaweb.com. Archived from the original on 3 February 2007. Retrieved 10 March 2007.
  8. Sengupta, Subodh Chandra and Bose, Anjali (editors), 1976/1998, Sansad Bangali Charitabhidhan (Biographical dictionary) Vol I, (in Bengali), p23, ISBN 81-85626-65-0
  9. Geddes 1920, pp. 33–39.
  10. https://vigyanprasar.gov.in/bose-jagdish-chandra/ Archived 2023-06-04 ವೇಬ್ಯಾಕ್ ಮೆಷಿನ್ ನಲ್ಲಿ. Bose Jagdish Chandra, igyanprasar.gov.in

ಆಕರಗಳು

ಬದಲಾಯಿಸಿ

ಹೊರಗಿನ ಕೊಂಡಿಗಳು

ಬದಲಾಯಿಸಿ

ಈ ಲೇಖನಗಳನ್ನೂ ನೋಡಿ

ಬದಲಾಯಿಸಿ

ಭಾರತದ ವಿಜ್ಞಾನಿಗಳು

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: