ಘಾಘ್ರಾ ಗಂಗಾನದಿಯ ಮುಖ್ಯ ಉಪನದಿಗಳಲ್ಲೊಂದು. ಟಿಬೆಟಿನಲ್ಲಿ ಮಾನಸ ಸರೋವರದ ಬಳಿ ರಾಕಸ್ ತಾಲ್ ಎಂಬಲ್ಲಿ (ಉ.ಅ. 30º 40' ಮತ್ತು ಪೂ.ರೇ. 88º 48') ಹುಟ್ಟಿ ಉತ್ತರ ಪ್ರದೇಶದ ಮೂಲಕ ಹರಿದು, ಬಿಹಾರದಲ್ಲಿ ಛಪ್ರಾ ಬಳಿ ಗಂಗೆಯೊಂದಿಗೆ ಸಂಗಮಿಸುತ್ತದೆ. ಕೈಲಾಸ, ಕಾಮೆಟ್ ಮತ್ತು ಮಾಂಧಾತ ಶಿಖರಗಳಿಂದಾದ ತ್ರಿಕೋಣದ ನಡುವೆ ಇದರ ಉಗಮ ಸ್ಥಳವಿದೆ. ಪರ್ವತ ಪ್ರದೇಶದಲ್ಲಿ ಇದಕ್ಕೆ ಕನಿಯಾಲ ಎಂಬ ಹೆಸರುಂಟು. ಕೌರಿಯಾಲ ಎಂಬುದು ಇದರ ನೇಪಾಳಿ ಹೆಸರು. ಹಿಮಾಲಯ ಮತ್ತು ಶಿವಾಲಿಕ್ ಶ್ರೇಣಿಗಳನ್ನು ಭೇದಿಸಿಕೊಂಡು ಆಳವಾದ ಕಣಿವೆಗಳನ್ನು ಕೊರೆದು, ಖೇರಿ ಮತ್ತು ಬಹ್ರಾಯಿಚ್ ಜಿಲ್ಲೆಗಳ ಮೂಲಕ ಮಧ್ಯ ಗಂಗಾ ಬಯಲನ್ನು ತಲುಪಿದಾಗ ಇದಕ್ಕೆ ಘಾಘ್ರಾ ಎಂಬ ಹೆಸರು ಪ್ರಾಪ್ತವಾಗುತ್ತದೆ. ಘಾಘ್ರಾ ಎಂಬುದೇ ಹೆಚ್ಚು ಪ್ರಚಾರದಲ್ಲಿರುವ ಹೆಸರು. ಮುಂದೆ ಇದಕ್ಕೆ ದೇವೊಹಾ ಎಂಬ ಹೆಸರೂ ಉಂಟು. ಹಿಮಾಲಯದ ವಿಶಾಲವಾದ ಜಲಾನಯನ ಪ್ರದೇಶದಲ್ಲಿ ಇದು ಹಲವು ಚಿಕ್ಕ ದೊಡ್ಡ ಉಪನದಿಗಳೊಂದಿಗೆ ಕೂಡಿಕೊಳ್ಳುತ್ತದೆ. ಶಾರ್ದಾ, ಭೇರಿ, ಸರಯೂ, ರಾಪ್ತಿ, ಛೋಟಿ ಗಂಡಕ್ ಇವು ಇದರ ಮುಖ್ಯ ಉಪನದಿಗಳು. ಅಯೋಧ್ಯೆಯಲ್ಲಿ ಇದನ್ನು ಸ್ಥಳೀಯವಾಗಿ ಸರಯೂ ಎಂದು ಕರೆಯಲಾಗುತ್ತದೆ.[] ಬಿಹಾರದ ರೇವಲ್‍ಗಂಜ್‍ನಲ್ಲಿ ಗಂಗಾ ನದಿಯೊಂದಿಗೆ ಸೇರುವವರೆಗೆ ಘಾಘ್ರಾ ನದಿಯ ಒಟ್ಟು ಉದ್ದ ೧,೦೮೦ ಕಿ.ಮಿ.[]

ನೇಪಾಳದಲ್ಲಿ ಕರ್ನಾಲಿ (ಘಾಘ್ರಾ) ನದಿ.

ಘಾಘ್ರಾ ನದಿ ಸ್ಟೀಮರ್ ಸಂಚಾರಕ್ಕೆ ಉಪಯುಕ್ತವಾಗಿವೆ. ಟಾಂಡಾ ಬರಹಜ್, ರಿಬಿಲ್ ಗಂಜ್ ಇವು ಈ ನದಿಯ ದಂಡೆಯ ಮೇಲಿರುವ ಪ್ರಮುಖ ವ್ಯಾಪಾರ ಸ್ಥಳಗಳು. ಮಳೆಗಾಲದಲ್ಲಿ ಈ ನದಿ ಮೈದಾನದಲ್ಲಿ ತಂದು ತುಂಬುವ ಮೆಕ್ಕಲು ಮಣ್ಣಿನಿಂದಾಗಿ ಇದರ ನೆರೆನಾಡು ಫಲವತ್ತಾಗಿದೆ.

ಈ ನದಿಯ ಸೇತುವೆಗಳ ಪೈಕಿ ಬರ್ಹಾಮ್ ಘಾಟ್ ಬಳಿಯಲ್ಲೂ (3,695'), ಅಯೋಧ್ಯೆಯ ಬಳಿಯಲ್ಲೂ (3,912') ಇರುವವು ಪ್ರಮುಖವಾದವು. ಘಾಘ್ರಾ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದಿರುವ ಜಮೀನಿನ ವಿಸ್ತೀರ್ಣ 24,474 ಎಕರೆಗಳು.

ಉಲ್ಲೇಖಗಳು

ಬದಲಾಯಿಸಿ
  1. Pathak, S. (2016). "Himalaya: Highest, Holy and Hijacked". In Raghubir Chand; Walter Leimgruber (eds.). Globalization and Marginalization in Mountain Regions. Perspectives on Geographical Marginality. Vol. 1. pp. 89–110. doi:10.1007/978-3-319-32649-8_7. ISBN 978-3-319-32648-1.
  2. Jain, S.K.; Agarwal, P.K.; Singh, V.P. (2007). Hydrology and Water Resources of India. The Netherlands: Springer. ISBN 978-1-4020-5179-1.


ಹೊರಗಿನ ಕೊಂಡಿಗಳು

ಬದಲಾಯಿಸಿ



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಘಾಘ್ರಾ&oldid=1278727" ಇಂದ ಪಡೆಯಲ್ಪಟ್ಟಿದೆ